ಭಾನುವಾರ, ಮಾರ್ಚ್ 26, 2023
31 °C
ಹುಲಗಡ್ಡಿ ಗ್ರಾಮದ ಯುವ ರೈತ ಚಂದ್ರಪ್ಪ ಪಂಚಪ್ಪ ತಲ್ಲೂರ

ತಿಳವಳ್ಳಿ: ಮಿಶ್ರ ಕೃಷಿಯಲ್ಲಿ ಯಶ ಕಂಡ ಪದವೀಧರ, ಅಧಿಕ ಲಾಭ

ಮಾಲತೇಶ ಆರ್‌. Updated:

ಅಕ್ಷರ ಗಾತ್ರ : | |

Prajavani

ತಿಳವಳ್ಳಿ: ಸಮೀಪದ ಹುಲಗಡ್ಡಿ ಗ್ರಾಮದ ಚಂದ್ರಪ್ಪ ಪಂಚಪ್ಪ ತಲ್ಲೂರ ಅಡಿಕೆ ತೋಟದಲ್ಲಿ ಮಿಶ್ರ ಬೆಳೆಯಾಗಿ ಶುಂಠಿ ಮತ್ತು ಮೆಣಸು ಬೆಳೆದು ಯಶಸ್ವಿಯಾಗಿದ್ದಾರೆ.

ಸ್ನಾತಕೋತ್ತರ ಪದವೀಧರರಾದ ಚಂದ್ರಪ್ಪ ತಲ್ಲೂರ ಅವರು, ಅತಿಥಿ ಉಪನ್ಯಾಸಕರಾಗಿ ಸೊರಬಾ ತಾಲ್ಲೂಕಿನ ಆನವಟ್ಟಿ ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಒಂದು ವರ್ಷ ಸೇವೆ ಸಲ್ಲಿಸಿದರು. ನಂತರ ಶಿಕ್ಷಕ ವೃತ್ತಿಗೆ ಗುಡ್ ಬೈ ಹೇಳಿದ ಅವರು ತಮ್ಮ ಸ್ವಂತ ಜಮೀನಿನಲ್ಲಿ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡರು.

6 ಎಕರೆ 20 ಗುಂಟೆ ಜಮೀನಿನಲ್ಲಿ 6 ಕೊಳವೆ ಬಾವಿಗಳನ್ನು ಕೊರೆಯಿಸಿದರು. ಆದರೆ 4ರಲ್ಲಿ ಮಾತ್ರ ಸಣ್ಣ ಪ್ರಮಾಣದ ನೀರು ಬಿದ್ದಿತು.ಈ ನೀರಿನ ಸಹಾಯದಿಂದ 4 ಎಕರೆ ಪ್ರದೇಶಕ್ಕೆ ಅಡಿಕೆ ಮತ್ತು 2 ಎಕರೆ 20 ಗುಂಟೆ ಪ್ರದೇಶದಲ್ಲಿ ಮಾವು, ಚಿಕ್ಕು ಗಿಡಗಳನ್ನು ಬೆಳೆಸಿದ್ದಾರೆ.

‘ಅಡಿಕೆ ಗಿಡಗಳ ಮಧ್ಯೆ ಶುಂಠಿ, ಮೆಣಸು ಹಾಗೂ ತರಕಾರಿಯನ್ನು ಬೆಳೆಯಲಾಗಿದೆ. ಮೆಣಸು ಹಾಗೂ ತರಕಾರಿಯನ್ನು ಶುಂಠಿ ಬೆಳೆ ನಡುವೆ ಬೆಳೆಯುವುದರಿಂದ ಹೆಚ್ಚು ಖರ್ಚು ಬರುವುದಿಲ್ಲ. ಶುಂಠಿಗೆ ಹಾಕಿದ ನೀರು, ಗೊಬ್ಬರವೇ ಸಾಕಾಗುತ್ತದೆ. ಮೆಣಸಿನ ಸಸಿ ಹಚ್ಚಿದಾಗ ಮುರುಟು ರೋಗ ಬಾಧೆಗಾಗಿ ಔಷಧ ಸಿಂಪಡಿಸಿದ್ದನ್ನು ಬಿಟ್ಟರೆ ಬೇರೆನೂ ಖರ್ಚು ಮಾಡಿಲ್ಲ. ಅದರಿಂದ ₹25 ಸಾವಿರ ಲಾಭ ಗಳಿಸಿರುವೆ’ ಎನ್ನುತ್ತಾರೆ ಚಂದ್ರಪ್ಪ ತಲ್ಲೂರ.

ಈ ತೋಟ ಮಾಡಿ 6 ವರ್ಷಗಳಾಗಿದ್ದು, ಅತಿ ಕಡಿಮೆ ನೀರಿನಾಶ್ರಯ ಇರುವ 6.20 ಎಕರೆ ಪ್ರದೇಶದಲ್ಲಿ ಫಸಲು ಬರುವ 80 ಮಾವಿನ ಗಿಡಗಳು, 50 ಚಿಕ್ಕು ಗಿಡಗಳು, 60 ತೆಂಗಿನ ಗಿಡಗಳು ಹಾಗೂ ತೋಟದ ಸುತ್ತಲು 150 ತೇಗದ ಗಿಡಗಳಿವೆ. ಅಲ್ಲದೇ ಹೊಸ ಅಡಿಕೆ ತೋಟದ ಮಧ್ಯೆ ಶುಂಠಿ ಮೆಣಸನ್ನು ಬೆಳೆಯಲಾಗಿದೆ. 2 ಹಸುಗಳಿವೆ. ಹೈನಿಗೆ ಬೇಕಾದ ಹೈಬ್ರಿಡ್ ಹುಲ್ಲನ್ನು ತೋಟದಲ್ಲೇ ಬೆಳೆಯಲಾಗಿದೆ.

‘ಅಡಿಕೆ, ಚಿಕ್ಕು ಗಿಡಗಳಿಗೆ ವರ್ಷಕ್ಕೆ ಒಮ್ಮೆ ರಾಸಾಯನಿಕ ಹಾಗೂ ಸಗಣಿ ಗೊಬ್ಬರ ಹಾಕುತ್ತೇವೆ. ಹನಿ ನೀರಾವರಿ ಹಾಗೂ ತುಂತುರು ನೀರಾವರಿ ಪದ್ಧತಿ ಅನುಸರಿಸಲಾಗಿದೆ. ಅಡಿಕೆ ಬೆಳೆಯಿಂದ ₹2 ಲಕ್ಷ, ಮಾವು ಹಾಗೂ ಚಿಕ್ಕು ಬೆಳೆಯಿಂದ ₹1 ಲಕ್ಷ ಲಾಭ ಗಳಿಸಿದ್ದೇವೆ. ಶುಂಠಿ ಬೆಳೆಯಿಂದ ಸುಮಾರು ₹2.50 ಲಕ್ಷ ಲಾಭ ಬರುವ ಸಾಧ್ಯತೆ ಇದೆ’ ಎನ್ನುತ್ತಾರೆ ಚಂದ್ರಪ್ಪ ಅವರ ತಂದೆ ಪಂಚಪ್ಪ.

‘ಬೆಲೆ ಕುಸಿತ, ಹವಮಾನ ವೈಪರೀತ್ಯ, ರೋಗಗಳಿಂದ ನಷ್ಟಕ್ಕೆ ಒಳಗಾದ ರೈತರು ಮಿಶ್ರ ಕೃಷಿಯಿಂದ ನಷ್ಟ ಸರಿದೂಗಿಸಬಹುದು. ಈ ಹಿನ್ನೆಲೆಯಲ್ಲಿ ಸರ್ಕಾರ ಮಿಶ್ರ ಬೆಳೆಗೆ ಸರಿಯಾದ ಪ್ರೋತ್ಸಾಹ ನೀಡಿದಲ್ಲಿ ರೈತ ನೆಮ್ಮದಿ ಜೀವನ ಸಾಗಿಸುವುದರಲ್ಲಿ ಎರಡು ಮಾತಿಲ್ಲ’ ಎನ್ನುತ್ತಾರೆ ರೈತ ಚಂದ್ರಪ್ಪ ತಲ್ಲೂರ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು