ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಸ್ಥಿರ ಮೇವಿನ ಮಾದರಿ ತೋಟ

Last Updated 29 ಜುಲೈ 2019, 19:30 IST
ಅಕ್ಷರ ಗಾತ್ರ

ಬೆಂಗಳೂರು ಸಮೀಪದ ಆನೇಕಲ್ ವ್ಯಾಪ್ತಿಯಲ್ಲಿ ಕರ್ಪೂರು ಗ್ರಾಮ ಇದೆ. ಆ ಪಂಚಾಯ್ತಿಗೆ ಸೇರಿರುವ ಅರವಂಟಿಕೆಪುರದವರು ಕೃಷಿಕ ಎಸ್‌. ನಾರಾಯಣ. ಅವರದ್ದು ಒಟ್ಟು ನಾಲ್ಕು ಎಕರೆ ಜಮೀನು. ಎರಡೂವರೆ ಎಕರೆ ಇವರ ಪಾಲಿನದ್ದು. ಒಂದೂವರೆ ಎಕರೆ ತಂದೆಯವರದ್ದು.

ಎರಡೂವರೆ ಎಕರೆಯಲ್ಲಿ ಆಹಾರ ಬೆಳೆ, ತೋಟಗಾರಿಕಾ ಬೆಳೆ, ಕಾಡು ಮರಗಳು, ಮೇವಿನ ಬೆಳೆ, ಹೈನುಗಾರಿಕೆ, ಜಲಸಂರಕ್ಷಣಾ ರಚನೆಗಳನ್ನು ಸಂಯೋಜಿಸಿ ಸಮಗ್ರ ಕೃಷಿ ಪದ್ಧತಿ ಅಳವಡಿಸಿದ್ದಾರೆ. ವಿಶೇಷವೆಂದರೆ ಇಡೀ ಕೃಷಿ ಚಟುವಟಿಕೆ ನಡೆಯುವುದು ಮಳೆಯಾಶ್ರಿತವಾಗಿ!

ಹಾಗಂತ ಇವರಲ್ಲಿ ಕೊಳವೆ ಬಾವಿಗಳಿಲ್ಲ ಎಂದುಕೊಳ್ಳಬೇಡಿ. ಒಟ್ಟು ಎಂಟು ಕೊಳವೆ ಬಾವಿ ಕೊರೆಸಿದ್ದರು. ಎಲ್ಲವೂ ಬತ್ತಿವೆ. ಇಷ್ಟಾದರೂ ಹೊಸ ಕೊಳವೆಬಾವಿ ಕೊರೆಸುವ ಯೋಚನೆ ಮಾತ್ರ ಅವರಲ್ಲಿ ಬತ್ತಿರಲಿಲ್ಲ. ಆದರೆ, ಅಂತರ್ಜಲ ಸಾವಿರ ಅಡಿ ದಾಟಿದ್ದರಿಂದ, ಹೊಸ ಕೊಳವೆಬಾವಿ ಕೊರೆದರೂ ನೀರು ಸಿಗುವ ಖಾತರಿ ಇರಲಿಲ್ಲ. ಹೀಗಾಗಿ, ಆ ವಿಷಯವನ್ನು ತಲೆಯಿಂದ ಹೊರಕ್ಕೆ ಹಾಕಿ, ಮಳೆ ನೀರು ಹಿಡಿದು ಬಳಸುವುದನ್ನು ಮನದೊಳಗೆ ಇಳಿಸಿಕೊಂಡರು.

ಪರಿಣಾಮವಾಗಿ ತೋಟದ ಸುತ್ತ ಹುದಿ–ಬದುಗಳನ್ನು ಮಾಡಿಸಿ, ಬಿದ್ದ ಹನಿ ಹನಿ ಮಳೆ ನೀರು ತೋಟದಿಂದ ಹೊರಗೆ ಹೋಗದಂತೆ ತಡೆಯೊಡ್ಡಿದ್ದಾರೆ. ಜತೆಗೆ, ಸುತ್ತಳತೆ 65 ಅಡಿ*65 ಅಡಿ, 10 ಅಡಿ ಆಳದ ದೊಡ್ಡ ಕೃಷಿ ಹೊಂಡ ಮಾಡಿಸಿದ್ದಾರೆ. ವರ್ಷದಲ್ಲಿ ಏಳೆಂಟು ತಿಂಗಳು ಕೃಷಿ ಹೊಂಡ ತುಂಬಿರುತ್ತದೆ. ಪಕ್ಕದಲ್ಲೇ ಹರಿಯುವ ಕಾಲುವೆಗೆ ಚೆಕ್ ಡ್ಯಾಂ ಮಾಡಿಸಿದ್ದಾರೆ. ಅಲ್ಲೂ ಮಳೆ ನೀರು ನಿಂತು ಇಂಗುತ್ತದೆ. ಇದೇ ನೀರನ್ನೇ ಡ್ರಿಪ್ ಮೂಲಕ ಬೆಳೆಗಳಿಗೆ ಎಚ್ಚರಿಕೆಯಿಂದ ಉಪಯೋಗಿಸುತ್ತಾರೆ.

ಸುಸ್ಥಿರ ಮೇವಿನ ಬೆಳೆ ವಿಶೇಷ

ನಾರಾಯಣ ಅವರ ಸಮಗ್ರ ಕೃಷಿ ಪದ್ಧತಿ ತೋಟದ ವಿಶೇಷವಿರುವುದೇ, ವರ್ಷಪೂರ್ತಿ ಬೆಳೆಯುವ ಮೇವಿನ ಬೆಳೆಗಳಲ್ಲಿ. ಅವರ ತೋಟ ಪ್ರವೇಶಿಸಿದರೆ, ಥಟ್ ಅಂತ ಗಮನ ಸೆಳೆಯುವುದು ಒಂದೂಕಾಲು ಎಕರೆಯ ಮೇವು ಬೆಳೆ ವೈವಿಧ್ಯದ ತಾಕು. ಜತೆಗೆ ಅವರು ಅದನ್ನು ಬೆಳೆಯಲು ಅನುಸರಿಸಿರುವ ವಿನ್ಯಾಸ.

ಒಂದೂಕಾಲು ಎಕರೆ ಜಮೀನನ್ನು ವಿಭಾಗಗಳನ್ನಾಗಿ ಮಾಡಿದ್ದಾರೆ. ಒಂದೊಂದು ಭಾಗದಲ್ಲಿ ಒಂದೊಂದು ರೀತಿಯ ಮೇವು ಬೆಳೆದಿದ್ದಾರೆ. ಸದ್ಯಕ್ಕೆ ಅವರ ಜಮೀನಿನಲ್ಲಿ ಗಿನಿ ಹುಲ್ಲು, ರೋಡ್ಸ್‌ ಹುಲ್ಲು, ಲೂರ್ಸನ್‌ (ಕುದರೆ ಮಸಾಲೆ), ಹೆಡ್‌ ಲೂರ್ಸನ್ (ಬೇಲಿ ಮೆಂತ್ಯ), ನೇಪಿಯರ್, ಮುಸುಕಿನ ಜೋಳ, ಏಳುಕೊಯ್ಲು ಜೋಳದಂತಹ ಮೇವಿನ ಬೆಳಗಳಿವೆ. ಇದರ ಜತೆಗೆ ಕುರಿ ಶೆಡ್ ಪಕ್ಕದಲ್ಲೇ ತೊಟ್ಟಿಗಳನ್ನು ಮಾಡಿ, ಅದರಲ್ಲಿ ಅಜೋಲವನ್ನು ಬೆಳೆಸಿದ್ದಾರೆ.

‘ವರ್ಷಕ್ಕೆ ಹತ್ತು ಟ್ರ್ಯಾಕ್ಟರ್ ಲೋಡ್‌ನಷ್ಟು ಮೇವು ಸಿಗುತ್ತದೆ. ಇದರ ಜತೆಗೆ ರಾಗಿ, ಜೋಳ ಬೆಳೆದುಕೊಳ್ಳುತ್ತೇವೆ. ಅದರ ಸೆಪ್ಪೆ, ಹುಲ್ಲನ್ನು ಸೈಲೇಜ್ (ರಸಮೇವು) ಮಾಡಿಟ್ಟುಕೊಳ್ಳುತ್ತೇವೆ. ಬೇಸಿಗೆಯಲ್ಲಿ ಹಸಿ ಮೇವು ಸಿಗದಿದ್ದಾಗ ಸೈಲೇಜ್ ಮೇವು ಬಳಸುತ್ತೇವೆ’ ಎನ್ನುತ್ತಾರೆ ನಾರಾಯಣ.

ಬೇಸಿಗೆಗೆ ಮೇವು ಮರದ ಆಸರೆ

ಮೇವಿನ ಬೆಳೆ ಬೆಳೆದಿರುವ ತಾಕಿನ ಸುತ್ತ ನುಗ್ಗೆ, ಸುಬಾಬುಲ್‌, ಬಸವನಪಾದ, ಅಗಸೆ, ಹಿಪ್ಪು ನೇರಳೆ, ಹೆಬ್ಬೇವು ನಾಟಿ ಮಾಡಿದ್ದಾರೆ. ಇದರಲ್ಲಿ ಎರಡು ಮೂರು ಮರಗಳು ಸಾಕಷ್ಟು ಮೇವು ಕೊಡುತ್ತಿವೆ. ಐನೂರು ನುಗ್ಗೆ ಗಿಡಗಳಿಂದ ಸೊಪ್ಪನ್ನು ಮೇವಿಗೆ ಬಳಸುತ್ತಾರೆ. ಕಾಯಿಯನ್ನು ತರಕಾರಿಯಾಗಿ ಮಾರಾಟ ಮಾಡುತ್ತಾರೆ. ‘ಕೃಷಿ ಹೊಂಡದಲ್ಲಿ ನೀರು ಇರುವವರೆಗೂ ಮೇವು ಬೆಳೆಸುತ್ತೇವೆ. ಬೇಸಿಗೆ ಶುರುವಾದಾಗ ಮೇವು ಕೊರತೆಯಾಗುತ್ತದೆ. ಆಗ, ಈ ಮರಗಳೇ ನಮ್ಮ ಹೈನುಗಾರಿಕೆಯನ್ನು ಕಾಪಾಡೋದು’ ಎಂದು ವಿವರಿಸುತ್ತಾರೆ ನಾರಾಯಣ.

ಮೇವಿನ ಮರಗಳ ಜತೆ ದೀರ್ಘಾವಧಿ ಆದಾಯಕ್ಕಾಗಿ ಐನೂರು ಶ್ರೀಗಂಧ ಬೆಳೆಸಿದ್ದಾರೆ. ನೂರು ಹೆಬ್ಬೇವಿನ ಮರಗಳಿವೆ. ಐವತ್ತು ರಕ್ತಚಂದನದ ಗಿಡಗಳಿವೆ. ಇಪ್ಪತ್ತು ತೆಂಗಿನ ಮರಗಳಿವೆ. ಜತೆಗೆ ಬೇರೆ ಬೇರೆ ಕಾಡು ಮರಗಳು ಬೆಳೆದುಕೊಂಡಿವೆ.

ಮೇವು ಮರ ಮತ್ತು ಮೇವಿನ ಬೆಳೆಗಳ ಸಂಯೋಜನೆ ಬಗ್ಗೆ ನಾರಾಯಣ ಹೇಳುತ್ತಾರೆ ‘ಶ್ರೀಗಂಧ, ರಕ್ತಚಂದನ ಫಿಕ್ಸೆಡ್‌ ಡೆಪಾಸಿಟ್‌ ಇದ್ದಂತೆ. ಹದಿನೈದು ವರ್ಷಗಳ ನಂತರ ಹಣ ಕೊಡುವ ಬೆಳೆಗಳು ಇವು. ಹುಲ್ಲಿನ ಬೆಳೆಗಳು ಉಳಿತಾಯ ಖಾತೆಯಿದ್ದಂತೆ(ಎಸ್‌ಬಿ ಅಕೌಂಟ್). ರೈತರಿಗೆ ದಿನನಿತ್ಯದ ವ್ಯವಹಾರಗಳಿಗೆ ಸಹಕಾರಿಯಾಗುವ ಬೆಳೆಗಳು’.

ಇಷ್ಟೆಲ್ಲ ಮೇವು ಯಾತಕ್ಕಾಗಿ?

ಕೃಷಿಯಲ್ಲಿ ಹಲವು ಸೋಲುಗಳನ್ನು ಕಂಡ ಮೇಲೆ ನಾರಾಯಣ ಅವರು ಪರ್ಯಾಯ ಮಾರ್ಗವಾಗಿ ಹೈನುಗಾರಿಕೆಯತ್ತ ಹೊರಳಿದರು. ಬ್ಯಾಂಕ್ ಸಾಲ, ಕುರಿ ಮಂಡಳಿಯಿಂದ ಸಬ್ಸಿಡಿ.. ಹೀಗೆ ವಿವಿಧ ಕಡೆಗಳಿಂದ ಹಣಕಾಸಿನ ನೆರವು ಪಡೆದು, ಆರಂಭದಲ್ಲಿ ಏಳೆಂಟು ಆಕಳುಗಳನ್ನು ಸಾಕಿದರು. ನಂತರ ಕುರಿ-ಮೇಕೆ ಸಾಕಣೆಯತ್ತ ಹೆಜ್ಜೆ ಹಾಕಿದರು. ಜತೆಗೆ ನಾಟಿ ಕೋಳಿಯನ್ನು ಸಾಕಲಾರಂಭಿಸಿದರು. ವೈಜ್ಞಾನಿಕ ವಿಧಾನದಲ್ಲಿ ಸಾಕಣೆ ಮಾಡಬೇಕೆಂಬ ಕಾರಣಕ್ಕೆ ವಿಶೇಷ ಶೆಡ್ ನಿರ್ಮಿಸಿದ್ದಾರೆ. ಶೆಡ್ ಅನ್ನು ಎರಡು ಭಾಗ ಮಾಡಿ, ಮೇಲ್ಭಾಗದಲ್ಲಿ ಕುರಿ–ಮೇಕೆ ಸಾಕಣೆ ಮಾಡುತ್ತಿದ್ದಾರೆ. ಅವುಗಳಿಗೆ ಮೇವು ಹಾಕಲು ವಿಶಿಷ್ಟ ಖಾನಿಗಳನ್ನು ಮಾಡಿಸಿದ್ದಾರೆ. ಕೆಳಭಾಗದಲ್ಲಿ ನಾಟಿ ಕೋಳಿಗಳನ್ನು ಸಾಕುತ್ತಿದ್ದಾರೆ. ಜತೆಗೆ, ರಸಮೇವು (ಸೇಲೇಜ್‌) ಉತ್ಪಾದನೆ ಮಾಡಿಕೊಳ್ಳುತ್ತಿದ್ದಾರೆ.

ಸದ್ಯ ಇವರಲ್ಲಿ 200 ಬಾಗಲಕೋಟೆ, ಬಿಜಾಪುರ ಭಾಗದ ಕುರಿ ತಳಿಗಳಿವೆ. 100 ಜಮ್ನಾಫಾರಿ ಮೇಕೆಗಳಿವೆ. ನಾಟಿ ಕೋಳಿಗಳಿವೆ. ಕೋಳಿ ಮೊಟ್ಟೆ, ಮಾಂಸಕ್ಕಾಗಿ ಕೋಳಿಗಳನ್ನು ಮಾರಾಟ ಮಾಡುತ್ತಾರೆ. ಇವುಗಳ ಜತೆಗೆ 10 ಹಸುಗಳಿವೆ. ಅದರಲ್ಲಿ ಎರಡು ದೇಸಿ ಆಕಳುಗಳಿವೆ. ‘ಇವೆಲ್ಲಕ್ಕೂ ವರ್ಷ ಪೂರ್ತಿ ಮೇವು ಕೊಡುವುದಕ್ಕಾಗಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಮೇವಿನ ಬೆಳೆಗಳನ್ನು ಬೆಳೆಸಿದ್ದೇನೆ’ ಎನ್ನುತ್ತಾರೆ ನಾರಾಯಣ.

ಮೇವಿನ ಬೆಳೆ ಬೆಳೆಯಲು, ತೋಟದಲ್ಲಿ ಉತ್ಪಾದನೆಯಾಗುವ ಕುರಿ, ಮೇಕೆ, ಕೋಳಿ ಗೊಬ್ಬರ ಬಳಸುತ್ತಾರೆ. ಜತೆಗೆ ಕೃಷಿ ತ್ಯಾಜ್ಯಗಳನ್ನು ಬಳಸಿ ತಯಾರಿಸಿದ ಕಾಂಪೋಸ್ಟ್ ಉಪಯೋಗಿಸುತ್ತಾರೆ. ಹಾಗಾಗಿ ಇದೊಂದು ರೀತಿ ಸಾವಯವ ಮೇವು. ‌ಕೃಷಿ ಹೊಂಡದಿಂದ ಡ್ರಿಪ್ ಮೂಲಕ ನೀರು ಪೂರೈಸುತ್ತಾರೆ. ಹೀಗಾಗಿ ಉತ್ಕೃಷ್ಟ ಮೇವು ಲಭ್ಯವಾಗುತ್ತಿದೆ. ‘ಇದರಿಂದ ಖರ್ಚು ಕಡಿಮೆಯಾಗಿದೆ. ಹೈನುಗಳು ಆರೋಗ್ಯಪೂರ್ಣವಾಗಿವೆ’ ಎನ್ನುವುದು ನಾರಾಯಣ ಅಭಿಪ್ರಾಯ. ನಾರಾಯಣ್ ಅವರ ಸಂಪರ್ಕ ಸಂಖ್ಯೆ 9481412196.‌‌

ಚಿತ್ರಗಳು: ಲೇಖಕರವು

ಸೋಲಿನಿಂದ ಗೆಲುವಿನತ್ತ…

ನಾರಾಯಣ-ಕನಕಮ್ಮ ದಂಪತಿ ಆರಂಭದಲ್ಲಿ ರಾಗಿ, ರೇಷ್ಮೆ ಬೆಳೆ ಬೆಳೆಯುತ್ತಿದ್ದರು. ಇದಕ್ಕಾಗಿ ಕೊಳವೆ ಬಾವಿಗಳನ್ನು ಕೊರೆಸಿದ್ದರು. ಹಂತ ಹಂತವಾಗಿ ಕೊಳವೆ ಬಾವಿಗಳು ಬರಿದಾದವು. ಅರವಂಟಿಕೆಪುರ ಭಾಗದಲ್ಲಿ ಅಂತರ್ಜಲ ಕುಸಿಯಿತು. ಕೊಳವೆ ಬಾವಿಗಳನ್ನೇ ನಂಬಿ ಕೃಷಿ, ತೋಟಗಾರಿಕೆ ಮಾಡುತ್ತಿದ್ದ ಕುಟುಂಬಕ್ಕೆ ದಿಕ್ಕು ತೋಚದಂತಾಯಿತು. ಆಗ ಜಮೀನಿನಲ್ಲಿ ನೀಲಗಿರಿ ಬೆಳೆಸುತ್ತಾ ವ್ಯಾಪಾರ ಶುರು ಮಾಡಿದರು. ನಡುವೆ ರಾಜಕೀಯಕ್ಕೂ ಹೋದರು. ಎಲ್ಲೂ ಕೈ ಹತ್ತಲಿಲ್ಲ. ‘ಎಲ್ಲಿ ಕಳೆದುಕೊಂಡೆವೋ ಅಲ್ಲೇ ಹುಡುಕಬೇಕು’ ಎಂದು ತೀರ್ಮಾನಿಸಿ ಕೃಷಿಗೆ ಮರಳಿದರು.

ಮೊದಲು ನೀಲಗಿರಿ ಬೆಳೆ ತೆಗಿಸಿದರು. ಕೃಷಿಯ ಹೊಸ ಸಾಧ್ಯತೆಗಳ ಹುಡುಕಾಟಕ್ಕೆ ನಿಂತರು. ಆಗ ದಾರಿದೀಪವಾಗಿ ಕಂಡಿದ್ದೇ ಪಶು ಸಂಗೋಪನೆ. ಮೊದಲು ಮೇಕೆ-ಕುರಿ ಸಾಕಣೆ. ನಂತರ ಆಕಳು, ನಾಟಿ ಕೋಳಿ ಸಾಕಣೆ. ಇದಕ್ಕೆ ಪೂರಕವಾಗಿ ಮೇವು ಬೆಳೆದುಕೊಂಡರು. ಪತಿ-ಪತ್ನಿಯರೇ ಕೃಷಿ ಕೆಲಸಕ್ಕೆ ನಿಂತರು. ಬಿಡುವಿನ ವೇಳೆಯಲ್ಲಿ ಎಂಜಿನಿಯರಿಂಗ್ ಓದುತ್ತಿರುವ ಮಗಳು ಪ್ರಿಯಾಂಕ, ಪಿಯುಸಿ ಓದುತ್ತಿರುವ ಮಗ ದಿಲೀಪ್ ಗೌಡ ಕೂಡ ಕೃಷಿಗೆ ಕೈ ಜೋಡಿಸಿದರು. ವರ್ಷಗಳು ಕಳೆಯುವುದರಲ್ಲಿ ಹೈನುಗಾರಿಕೆ ಒಂದು ಹಂತಕ್ಕೆ ಬಂದಿತು. ಹಂತ ಹಂತವಾಗಿ ತೋಟದಲ್ಲಿ ತೋಟಗಾರಿಕೆ, ಕಾಡು ಮರಗಳು, ಮೇವಿನ ಬೆಳೆಗಳು ವಿಸ್ತಾರವಾಗುತ್ತಾ ಹೋದವು. ಈಗ ಕುರಿ, ಮೇಕೆ ಸಾಕಾಣಿಕೆಯಿಂದ ಆದಾಯ ಬರಲಾರಂಭಿಸಿದೆ.

ತೋಟದಲ್ಲಿ ಹಲಸು, ಮಾವು, ಸಪೋಟ, ಸೀಬೆ, ನೇರಳೆ, ಪನ್ನೇರಳೆ, ಸೀತಾಫಲ, ಚಕೋತ, ನಿಂಬೆ, ನೆಲ್ಲಿ, ಸೇಬು, ಲಿಚ್ಚಿ, ಬಾರೆಹಣ್ಣು ಸೇರಿದಂತೆ 25ಕ್ಕೂ ಹೆಚ್ಚು ಜಾತಿಯ ಹಣ್ಣಿನ ಗಿಡಗಳನ್ನು ಹಾಕಿದ್ದಾರೆ. ಜೇನು ಸಾಕಾಣಿಕೆಗೂ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಕೃಷಿ ಹೊಂಡದಲ್ಲಿ ಮೀನು ಸಾಕಾಣೆ ಮಾಡುತ್ತಿದ್ದಾರೆ. ಜೇನು ಮತ್ತು ಮೀನು ಮಾರಾಟಕ್ಕಿಲ್ಲ. ಮನೆಯ ಮಟ್ಟಿಗೆ ಬಳಕೆಯಾಗುತ್ತದೆ ಎನ್ನುತ್ತಾರೆ ನಾರಾಯಣ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT