ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಉಳುಮೆ ನಿಲ್ಲಿಸಿದೆ; ಖರ್ಚು ಉಳಿಯಿತು, ಇಳುವರಿ ಹೆಚ್ಚಿತು’

Last Updated 27 ಡಿಸೆಂಬರ್ 2019, 3:05 IST
ಅಕ್ಷರ ಗಾತ್ರ

ಭದ್ರಾವತಿ ತಾಲ್ಲೂಕು ಹೊಸಹಳ್ಳಿ ಗ್ರಾಮದ ರವಿಕುಮಾರ್ ಕಳೆದ 18 ವರ್ಷಗಳಿಂದ ಉಳುಮೆ ರಹಿತ ಕೃಷಿ ವಿಧಾನವನ್ನು ಕಂಡುಕೊಂಡಿದ್ದಾರೆ. ಇವರಿಗೆ ಒಟ್ಟು 2 ಎಕರೆ 14 ಗುಂಟೆ ಜಮೀನಿದೆ. ಅದರಲ್ಲಿ 20 ಗುಂಟೆಯನ್ನು ಹದಿನೆಂಟು ವರ್ಷಗಳ ಹಿಂದೆಯೇ ನೈಸರ್ಗಿಕ ಕೃಷಿಗೆ ಪರಿವರ್ತಿಸಿದರು. ಅದರಲ್ಲಿ ಯಶಸ್ಸು ಸಿಕ್ಕ ಬಳಿಕ ಉಳಿದ 1 ಎಕರೆ 20 ಗುಂಟೆ ಜಮೀನಲ್ಲಿಯೂ 9 ವರ್ಷಗಳಿಂದ ನೈಸರ್ಗಿಕ ಕೃಷಿ ಮಾಡುತ್ತಿದ್ದಾರೆ. ಇವರದ್ದು ಅಡಿಕೆ ಮುಖ್ಯ ಬೆಳೆ. ಅಂತರಬೆಳೆಯಾಗಿ ಬಾಳೆ, ಕಾಳು ಮೆಣಸು ಇತ್ಯಾದಿಗಳಿವೆ.

ಉಳುಮೆ ನಿಲ್ಲಿಸಿದ ಕಾರಣ

ನೇಗಿಲು ಅಥವಾ ಟ್ರ್ಯಾಕ್ಟರ್ ಮೂಲಕ ಉಳುಮೆ ಮಾಡಿಸಿದಾಗ ಅಡಿಕೆ ಮರದ ಬೇರುಗಳು ಹರಿದು ಹೋಗುತ್ತವೆ, ಜೊತೆಗೆ ಮಣ್ಣಿನಿಂದ ಮೇಲೆ ಬಂದು ತೋಟಕ್ಕೆ ನೀರು ಹಾಯಿಸಿದಾಗ ಹರಿದ ಬೇರುಗಳ ತುದಿಗಳು ಕೊಳೆಯುತ್ತವೆ. ಇದರಿಂದ ಗೊಬ್ಬರ ಮತ್ತು ನೀರು ನಷ್ಟವಾಗುತ್ತದೆ. ಆದ್ದರಿಂದ, ಉಳುಮೆ ಮಾಡಿಸದಿದ್ದರೆ, ಬೇರುಗಳು ಗಟ್ಟಿಯಾಗಿರುತ್ತವೆ. ಮಳೆಗಾಳಿಗೆ ಮರಗಳು ಬೀಳುವುದಿಲ್ಲ. ಇದು ಅವರು ನೀಡುವ ಕಾರಣ.

ರವಿಕುಮಾರ್, ಜಮೀನಿನಲ್ಲಿ ಉಳುಮೆಯಷ್ಟೇ ನಿಲ್ಲಿಸಿಲ್ಲ, ಜತೆಗೆ ಅಡಿಕೆ ಮರಗಳ ಬುಡದ ಸುತ್ತ ಗುಣಿಯನ್ನೂ ಮಾಡಿಸುತ್ತಿಲ್ಲ. ಇದರಿಂದ ಅವರಿಗೆ ಪ್ರತಿ ವರ್ಷ ಉಳುಮೆಗಾಗಿ ವ್ಯಯಿಸುವ ₹5 ಸಾವಿರ, ಗುಣಿಮಾಡಿಸಲು ತಗಲುವ ₹20 ಸಾವಿರದಷ್ಟು ಖರ್ಚು ಉಳಿಯುತ್ತಿದೆ. ಅಲ್ಲದೆ ತೋಟದ ನಿರ್ವಹಣೆ ಕೆಲಸವನ್ನು ಮನೆಯ ಸದಸ್ಯರೇ ನಿರ್ವಹಿಸುವುದರಿಂದ, ಅದರ ಬಾಬ್ತು ₹ 2 ಸಾವಿರ ಉಳಿತಾಯವಾಗುತ್ತಿದೆ.

ನೀರು ಕೊಡುವ ವಿಧಾನ

ಪ್ರತಿ ವರ್ಷ ಡಿಸೆಂಬರ್‌ನಿಂದ ಫೆಬ್ರುವರಿವರೆಗೆ 40 ರಿಂದ 45 ದಿನಕೊಮ್ಮೆ ಮತ್ತು ಮಾರ್ಚ್‌ನಿಂದ ಮಳೆಗಾಲ ಜೂನ್‍ವರೆಗೂ 30 ರಿಂದ 35 ದಿನಗಳಿಗೊಮ್ಮೆ ಹನಿ ನೀರಾವರಿ ಮೂಲಕ ನೀರು ಕೊಡುತ್ತಿದ್ದಾರೆ. ಅಡಿಕೆ ಮರಗಳು ಫೆಬ್ರವರಿ ತಿಂಗಳವರೆಗೆ ವಾತಾವರಣದಲ್ಲಿರುವ ತೇವಾಂಶವನ್ನು ಹೀರಿಕೊಳ್ಳುತ್ತವೆ. ಮಾರ್ಚ್‌ನಿಂದ ಮರದ ಬೇರುಗಳಿಂದ ನೀರನ್ನು ಹೀರಿಕೊ ಳ್ಳುತ್ತವೆ. ಜೂನ್ ತಿಂಗಳಿ ನಿಂದ ನವೆಂಬರ್‌ವರೆಗೆ ಮಳೆಗಾಲ ವಾದ್ದರಿಂದ ನೀರು ಹಾಯಿಸುವುದಿಲ್ಲ. ‘ಎಷ್ಟೇ ನೀರಿದ್ದರೂ, ಅಡಿಕೆ ಮರದ ಬುಡಕ್ಕೆ ನೀರು ಬಿಡುವುದರಿಂದ ಉಪ ಯೋಗವಿಲ್ಲ. ಅಷ್ಟೇ ಅಲ್ಲ, ಅಗತ್ಯಕ್ಕಿಂತ ಹೆಚ್ಚಾಗಿ ನೀರು ಕೊಡುವುದನ್ನೂ ನಿಯಂ ತ್ರಿಸಬೇಕು’ ಎಂಬುದು ರವಿಕುಮಾರ್ ಅನುಭವದ ನುಡಿ.

ತೋಟಕ್ಕೆ ನೀರು ಹರಿಸಿ ನಾಲ್ಕೈದು ದಿನಗಳವರೆಗೂ, ತಾಕುಗಳಲ್ಲಿ ಓಡಾಡುವುದಿಲ್ಲ. ಹಸಿಯಾಗಿದ್ದಾಗ ಓಡಾಡಿ ದರೆ, ನೆಲ ಗಟ್ಟಿಯಾಗುತ್ತದೆ. ಹಾಗಾಗಿ ಒಣಗಿದ ನಂತರವೇ ಓಡಾಡುತ್ತಾರೆ.

ತೇವ ನಿಯಂತ್ರಣಕ್ಕೆ ಬಸಿಗಾಲುವೆ

ರವಿಕುಮಾರ್ ಅವರ ತೋಟದಲ್ಲಿ ಮರಳು ಮಿಶ್ರಿತ ಮಣ್ಣು ಜಾಸ್ತಿ ಇದೆ. ಇದು ಹೆಚ್ಚು ನೀರನ್ನು ಹೀರಿಕೊಳ್ಳುತ್ತದೆ. ಇದರ ನಿಯಂತ್ರಣಕ್ಕಾಗಿ ತೋಟದ ಎಲ್ಲಾ ಕಡೆ ಅಗತ್ಯಕ್ಕೆ ತಕ್ಕಂತೆ ಬಸಿಗಾಲುವೆಗಳನ್ನು ತೆಗೆಸಿದ್ದಾರೆ. ಜಮೀನಿನಲ್ಲಿ ತೇವಾಂಶ ಹೆಚ್ಚಾಗದಂತೆ ಈ ಕಾಲುವೆಗಳು ತಡೆಗಟ್ಟುತ್ತವೆ.

‘ಅಡಿಕೆ ತೋಟಕ್ಕೆ ಹೊರಗಡೆಯಿಂದ ಮಣ್ಣನ್ನು ಹೊಡೆಸುವುದು ಒಳ್ಳೆಯದಲ್ಲ. ಏಕೆಂದರೆ ಹೊಸ ಮಣ್ಣು ಏರಿಸಿದ ನಾಲ್ಕು ವರ್ಷಗಳ ತನಕ ಉತ್ತಮ ಇಳುವರಿ ಕೊಡುತ್ತದೆ. ನಂತರದಲ್ಲಿ ಇಳುವರಿ ಕಡಿಮೆಯಾಗಿ ತೋಟ ಹಾಳಾಗುತ್ತದೆ’ ಎನ್ನುವುದು ಇವರ ಅನುಭವದ ಮಾತು.

ಎರಡು ವರ್ಷಗಳಿಗೆ ಒಂದು ಬಾರಿ ಪ್ರತಿ ಗಿಡಕ್ಕೆ ಒಂದು ಕೆ.ಜಿಯಷ್ಟು ಮೀನಿನ ಗೊಬ್ಬರ, 10 ಕೆ.ಜಿಯಷ್ಟು ಕುರಿ ಗೊಬ್ಬರವನ್ನು ಹಾಕುತ್ತಾರೆ. ಗೊಬ್ಬರವನ್ನು ಗಿಡಗಳ ಬುಡದ ಹತ್ತಿರ ಹಾಕುವುದಿಲ್ಲ. ಬದಲಿಗೆ ಬುಡದಿಂದ 9 ರಿಂದ 12 ಇಂಚು ದೂರಕ್ಕೆ ಹಾಕುತ್ತಾರೆ.

ಸಾವಯವ ಗೊಬ್ಬರದ ಮಹತ್ವ

ಇವರ ತೋಟದಲ್ಲಿ ಹಸಿ ಅಡಿಕೆ ಇಳುವರಿ ವಾರ್ಷಿಕ 82 ರಿಂದ 85 ಕ್ವಿಂಟಲ್ ಬರುತ್ತದೆ. ರಾಸಾಯನಿಕ ಪದ್ಧತಿ ಅಳವಡಿಸಿರುವ ಪಕ್ಕದ ತೋಟದಲ್ಲಿ 60 ರಿಂದ 65 ಕ್ವಿಂಟಲ್ ಬರುತ್ತದೆ. ರವಿಕುಮಾರ್ ಅವರ ತೋಟದ ಒಂದು ಕ್ವಿಂಟಲ್‌ನಷ್ಟು ಹಸಿ ಅಡಿಕೆಯನ್ನು ಒಣಗಿಸಿದಾಗ 16 ರಿಂದ 17 ಕೆ.ಜಿ ಒಣ ಅಡಿಕೆ ಸಿಕ್ಕಿದೆ. ಅದೇ ರಾಸಾಯನಿಕ ತೋಟದ ಅಡಿಕೆ 14 ರಿಂದ15 ಕೆ.ಜಿ ಬರುತ್ತದೆ. ಅಂದರೆ ಒಣ ಅಡಿಕೆಯಲ್ಲಿ ಒಂದೂವರೆ ಕೆಜಿಯಿಂದ ಎರಡು ಕೆ.ಜಿ ವ್ಯತ್ಯಾಸವನ್ನು ಕಾಣಬಹುದು.

ಈ ವ್ಯತ್ಯಾಸವನ್ನು ರವಿಕುಮಾರ್ ಅವರು ಹೀಗೆ ಗುರುತಿಸಿದ್ದಾರೆ; ಅಡಿಕೆಗೆ ರಾಸಾಯನಿಕ ಗೊಬ್ಬರ ಮತ್ತು ಅಗತ್ಯಕ್ಕಿಂತ ಹೆಚ್ಚು ನೀರು ಕೊಟ್ಟರೆ ಸಿಪ್ಪೆಯು ದಪ್ಪವಾಗಿ ಒಳಗಿನ ಅಡಿಕೆಯು ಸಣ್ಣದಾಗಿರುತ್ತದೆ. ಬೇಯಿಸಿದ ಮೇಲೆ ಅದು ಇನ್ನೂ ಸಣ್ಣದಾಗುತ್ತದೆ. ಅದೇ ಕಡಿಮೆ ನೀರು ಹಾಗೂ ಸಾವಯವ ಗೊಬ್ಬರವನ್ನು ಕೊಡುವುದರಿಂದ ಅಡಿಕೆ ಸಿಪ್ಪೆಯು ತೆಳುವಾಗುತ್ತದೆ ಹಾಗೂ ಒಳಗಡೆ ಅಡಿಕೆ ದಪ್ಪವಾಗಿರುತ್ತದೆ ಮತ್ತು ಬೇಯಿಸಿದ ಮೇಲೆ ಅಷ್ಟೇ ಗಾತ್ರದಲ್ಲಿರುತ್ತದೆ.

ರವಿಕುಮಾರ್ ಅವರು, ಪ್ರತಿ ವರ್ಷ ಬೆಂಗಳೂರು, ಧಾರವಾಡ, ಶಿವಮೊಗ್ಗ, ರಾಯಚೂರು, ಗುಲ್ಬರ್ಗ, ಬೀದರ್ ಕೃಷಿ ಮೇಳಗಳಲ್ಲಿ ಭಾಗವಹಿಸಿ ಈ ವಿಧಾನದ ಬಗ್ಗೆ ಮಾಹಿತಿ ಪಡೆದಿದ್ದಾರೆ.

ಇವರ ಅಣ್ಣನ ಮಕ್ಕಳು ಬಿ.ಎಸ್ಸಿ–ಕೃಷಿ ಮತ್ತು ತೋಟಗಾರಿಕೆಯನ್ನು ಓದುತ್ತಿದ್ದು, ಅವರಿಂದಲೂ ಪೂರಕ ಮಾಹಿತಿ ಪಡೆದಿದ್ದಾರೆ. ಅಲ್ಲದೆ ಯಾವುದೇ ಹೊಸ ಪದ್ಧತಿ ಅಳವಡಿಸಿಕೊಳ್ಳುವಾಗ ಪ್ರಾಯೋಗಿಕವಾಗಿ ಸ್ವಲ್ಪ ಜಾಗದಲ್ಲಿ ಮಾಡಿ ಅದರ ಸಾಧ್ಯಾಸಾಧ್ಯತೆಗಳನ್ನು ಗಮನಿಸಿ ವಿಸ್ತರಿಸುವುದು ಇವರ ರೂಢಿ. ಎಲ್ಲ ಕೃಷಿಕರಿಗೂ ಈ ಮನೋಭಾವ ಅಗತ್ಯ.

ಸಂಪರ್ಕ: 97436 67611

ಅಡಿಕೆ ಒಣಗಿಸುವುದು
ಅಡಿಕೆ ಒಣಗಿಸುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT