ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಡಿ | ಕಲ್ಲಂಗಡಿ ಕೃಷಿಯಲ್ಲಿ ಖುಷಿ ಕಂಡ ರೈತ

‘ಸುಗರ್ ಕ್ವಿನ್’ ತಳಿ ಬಳಕೆ, ಉತ್ತಮ ಆದಾಯ ನಿರೀಕ್ಷೆಯಲ್ಲಿ ಕಮರವಾಡಿಯ ದೇವೀಂದ್ರಪ್ಪ ಪೊಲೀಸ್ ಪಾಟೀಲ
Last Updated 11 ಮಾರ್ಚ್ 2020, 19:34 IST
ಅಕ್ಷರ ಗಾತ್ರ

ವಾಡಿ (ಚಿತ್ತಾಪುರ): ಆಧುನಿಕ ಕೃಷಿ ಪದ್ದತಿ ಅಳವಡಿಸಿಕೊಂಡು ಕೈ ತುಂಬಾ ಆದಾಯ ಗಳಿಸಿ ಕೃಷಿ ಕೂಡ ಲಾಭದಾಯಕ ಉದ್ಯೋಗ ಎಂದು ಸಾಬೀತು ಪಡಿಸುತ್ತಿದ್ದಾರೆ ಚಿತ್ತಾಪುರ ತಾಲ್ಲೂಕಿನ ಕಮರವಾಡಿ ರೈತ ದೇವಿಂದ್ರಪ್ಪಗೌಡ ಪೊಲೀಸ್ ಪಾಟೀಲ.

ತನ್ನ 2.5 ಎಕರೆಯಲ್ಲಿ ಕಲ್ಲಂಗಡಿ ಕೃಷಿ ಕೈಗೊಳ್ಳುವುದರ ಮೂಲಕ ರೈತರಿಗೆ ಪ್ರೇರಣೆಯಾಗಿದ್ದಾರೆ.

ಹೆಸರು ಬೆಳೆಯ ಫಸಲು ಕೈಗೆ ಬರುತ್ತಿದ್ದಂತೆ ಜನವರಿ ಮೊದಲ ವಾರದಲ್ಲಿ ಕಲ್ಲಂಗಡಿ ನಾಟಿ ಮಾಡಿದ್ದ ದೇವಿಂದ್ರಪ್ಪಗೌಡ ಅವರ ಜಮೀನಿನಲ್ಲಿ ಈಗ ಕಲ್ಲಂಗಡಿ ಬೆಳೆ ಮೈದಳೆದು ನಿಂತಿದೆ. ಕೇವಲ 65 ದಿನದ ಕಾಲಾವಧಿಯ 'ಸುಗರ್ ಕ್ವಿನ್' ಎಂಬ ತಳಿಯನ್ನು ನಾಟಿ ಮಾಡಿ ಹನಿ ನೀರಾವರಿ ಮೂಲಕ ಫಸಲು ಬೆಳೆದಿದ್ದು, ಒಂದೊಂದು ಕಲ್ಲಂಗಡಿ 2 ರಿಂದ 7 ಕೆ.ಜಿ ತೂಗುತ್ತಿವೆ. ಇಡೀ ಹೊಲದ ತುಂಬೆಲ್ಲಾ ಕಲ್ಲಂಗಡಿ ಬೆಳೆ ಸಮೃದ್ಧವಾಗಿ ಬೆಳೆದು ನಿಂತಿದ್ದು, ಉತ್ತಮ ಲಾಭದ ಭರವಸೆ ಮೂಡಿಸಿದೆ.

'ಕಟಾವಿಗೆ ಬಂದ ಬೆಳೆಯನ್ನು ಮಾರುಕಟ್ಟೆಗೆ ಸಾಗಿಸಿ ಪುನಃ ನಾಟಿ ಮಾಡಬೇಕು ಎಂದುಕೊಂಡಿದ್ದೇನೆ. ನಾಲ್ಕುವರೆ ತಿಂಗಳಲ್ಲಿ ಎರಡು ಬಾರಿ ನಾಟಿ ಮಾಡಿ ಫಸಲು ತೆಗೆಯಬಹುದು. ಫೆಬ್ರುವರಿ ತಿಂಗಳಲ್ಲಿ ಉತ್ತಮ ಧಾರಣೆ ಇತ್ತು. ಈಗ ಧಾರಣೆ ಸ್ವಲ್ಪ ಕುಸಿತ ಕಂಡಿದೆ. ಈಗ ಮತ್ತೆ ಸಸಿ ನಾಟಿ ಮಾಡಿದರೆ ಮೇ ತಿಂಗಳಿನಲ್ಲಿ ಇಳುವರಿ ಕೈಗೆ ಸಿಕ್ಕು ಒಳ್ಳೆಯ ದರ ಸಿಗಬಹುದು ಎಂಬ ಆಶಾಭಾವನೆ ಹೊಂದಿದ್ದೇನೆ. ಬೇರೆ ಬೆಳೆಗಳಿಗೆ ಹೋಲಿಸಿದರೆ ಅಲ್ಪ ಕಾಲಾವಧಿಯ ಕಲ್ಲಂಗಡಿ ಉತ್ತಮ ಲಾಭ ತಂದು ಕೊಡುತ್ತದೆ' ಎನ್ನುತ್ತಾರೆ ರೈತ ದೇವಿಂದ್ರಪ್ಪಗೌಡ.

‘ಹೊಸದಾಗಿ ಕಲ್ಲಂಗಡಿ ಬೇಸಾಯಕ್ಕೆ ಕಾಲಿಟ್ಟಿದ್ದು, ಅನುಭವದ ಕೊರತೆಯಿಂದ ಕೆಲವು ಖರ್ಚು ಸ್ವಲ್ಪ ಜಾಸ್ತಿಯಾಗಿದೆ. ಒಟ್ಟಾರೆ ₹1.50 ಲಕ್ಷ ಖರ್ಷು ತಗುಲಿದೆ. ಖರ್ಚು ಕಳೆದು 1 ಲಕ್ಷ ಆದಾಯ ಬರುವ ನಿರೀಕ್ಷೆಯಿದೆ. ಈಗ ಮಾಡುವ ನಾಟಿಗೆ ಅರ್ಧದಷ್ಟು ಕಡಿಮೆ ಖರ್ಚು ತಗುಲಲಿದ್ದು, ಅದರಲ್ಲಿ ಲಾಭ ಸಿಗುವ ನಿರೀಕ್ಷೆ ಇದೆ’ ಎಂದರು.

ದೇವೀಂದ್ರಪ್ಪ ಅವರು ತೊಟಗಾರಿಕೆ ಅಧಿಕಾರಿಗಳಿಂದ ಕಾಲ ಕಾಲಕ್ಕೆ ಮಾಹಿತಿ ಮಾರ್ಗದರ್ಶನ ಪಡೆಯುತ್ತಿದ್ದಾರೆ. ಹೊಸ ತಂತ್ರಜ್ಞಾನಗಳಾದ ಏರುಮಡಿ, ಹನಿ ನೀರಾವರಿ, ಪ್ಲಾಸ್ಟಿಕ್ ಹೊದಿಕೆಗಳ ಬಳಕೆ ಮಾಡಿಕೊಂಡು ಸಮಗ್ರ ಕೀಟ ಹತೋಟಿ ಮಾಡಿ ಕಾಲಕಾಲಕ್ಕೆ ನೀರು ಒಗಿಸಿದರೆ ಅತ್ಯಂತ ಕಡಿಮೆ ಅವಧಿ ಹಾಗೂ ಕಡಿಮೆ ಖರ್ಚಿನಲ್ಲಿ ಉತ್ತಮ ಲಾಭ ಪಡೆಯಬಹುದು ಎನ್ನುವುದಕ್ಕೆ ಕಲ್ಲಂಗಡಿ ಬೆಳೆದ ರೈತ ಉತ್ತಮ ಉದಾಹರಣೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT