ಸೋಮವಾರ, ಆಗಸ್ಟ್ 3, 2020
23 °C

ಕೇರಳದಲ್ಲಿ ಜನಪ್ರಿಯ ಹಲಸಿನಹಣ್ಣಿನ ಗರಿಗರಿ ಚಿಪ್ಸ್ !

ಶ್ರೀ ಪಡ್ರೆ Updated:

ಅಕ್ಷರ ಗಾತ್ರ : | |

Prajavani

ವಿಯೆಟ್ನಾಮಿನಲ್ಲಿ ತಿಂದ ಚಿಪ್ಸಿಗೆ ಮಾರುಹೋದ ಈ ಕೇರಳಿಗರು ತಮ್ಮೂರಿನಲ್ಲಿ ಅದರದೇ ಉದ್ದಿಮೆ ತೆರೆದಿದ್ದಾರೆ.

ಎರಡು ವರ್ಷದ ಹಿಂದೆ ಸದ್ದುಗದ್ದಲವಿಲ್ಲದೆ ಕೇರಳದ ನಿಲಂಬೂರಿನಲ್ಲಿ ಉದ್ದಿಮೆಯೊಂದು ಆರಂಭವಾಯಿತು. ಇದು ತಯಾರಿಸುವ ಉತ್ಪನ್ನ ಕೇರಳಕ್ಕೇ ಹೊಸತು. ಅದು ಹಲಸಿನಹಣ್ಣಿನ ವ್ಯಾಕ್ಯೂಮ್ ಫ್ರೈ ಚಿಪ್ಸ್. ಈ ಉದ್ದಿಮೆಯ ಮಾಲಿಕ ಟೋಮಿ ಕಾವಲಕಲ್ ಪಿಡಬ್ಲ್ಯುಡಿ ಗುತ್ತಿಗೆದಾರರು. ಇವರ ಉತ್ಪನ್ನದ ವ್ಯಾಪಾರಿನಾಮ ‘ಜಾಕ್ಮೆ’. ಇವರದು ರಾಜ್ಯದ ಪ್ರಥಮ ವ್ಯಾಕ್ಯೂಮ್ ಫ್ರೈ ಉದ್ದಿಮೆ.

ವ್ಯಾಕ್ಯೂಮ್ ಫ್ರೈ ಯಂತ್ರಗಳಿದ್ದರೆ ಸ್ವಲ್ಪ ‘ಆರ್‌ಆಂಡ್‌ಡಿ’ ಮಾಡಿ ಬೇರೆಬೇರೆ ಹಣ್ಣು – ತರಕಾರಿಗಳ ಗರಿಗರಿ ಚಿಪ್ಸ್ ತಯಾರಿಸಬಹುದು. ಆದರೆ ಟೋಮಿ ತನ್ನ ಉದ್ದಿಮೆಯನ್ನು ಪೂರ್ತಿ ಹಲಸಿನ ಹಣ್ಣಿನ ಚಿಪ್ಸ್‌ಗಾಗಿ ಮೀಸಲಿಟ್ಟಿದ್ದಾರೆ.

ಪಿಡಬ್ಲ್ಯುಡಿ ಗುತ್ತಿಗೆದಾರರು ಹಲಸಿನ ಉದ್ಯಮಿಯಾದದ್ದರ ಹಿಂದೆ ಸ್ವಾರಸ್ಯವಿದೆ. ಐದು ವರ್ಷ ಹಿಂದೆ ಟೋಮಿ ವಿಯೆಟ್ನಾಂಗೆ ಹೋಗಿದ್ದರು. ಆಗ ಯಾರೋ ಅವರಿಗೆ ತಿನ್ನಲು ಹಲಸಿನಹಣ್ಣಿನ ವ್ಯಾಕ್ಯೂಮ್ ಫ್ರೈ ಚಿಪ್ಸ್ ಕೊಟ್ಟರು. ಹಲಸಿನ ತವರು ದೇಶದವರಾದರೂ ಟೋಮಿ ಈ ತರಹದ ಚಿಪ್ಸ್ ತಿಂದದ್ದು ಅದೇ ಮೊದಲು! ಅವರಿಗೆ ಆ ವ್ಯಾಕ್ಯೂಮ್ ಫ್ರೈ ಚಿಪ್ಸ್ ತುಂಬ ಇಷ್ಟವಾಯಿತು. ಮತ್ತೆಮತ್ತೆ ಅದನ್ನು ತಿಂದರು. ಹಾಗೆ ತಿನ್ನುತ್ತಾ ಇರುವಾಗ ಭಾರೀ ಪ್ರಮಾಣದಲ್ಲಿ ಹಲಸು ಬೆಳೆಯುವ ತಮ್ಮ ರಾಜ್ಯದಲ್ಲೇ ಏಕೆ ಇದನ್ನು ಉತ್ಪಾದಿಸಬಾರದು ಅನಿಸಿತು. ತಲೆಗೆ ಹತ್ತಿದ ಗುಂಗು ಇಳಿಯಲೇ ಇಲ್ಲ!

ವಿಯೆಟ್ನಾಂನಲ್ಲೇ ಸುತ್ತಾಡಿ ವ್ಯಾಕ್ಯೂಮ್ ಫ್ರೈ ಉದ್ದಿಮೆ, ಅದರ ಯಂತ್ರಗಳನ್ನು ನೋಡಿದರು. ಅಲ್ಲಿನವರೊಡನೆ ಮಾತಾಡಿದರು. ದೇಶಕ್ಕೆ ಮರಳಿದವರೇ, ಬಹುಪ್ರಯತ್ನ ಪಟ್ಟು ಆ ಚಿಪ್ಸಿನದೇ ದೊಡ್ದ ಉದ್ದಿಮೆ ಆರಂಭಿಸಿದ್ದಾರೆ. 2017ರಲ್ಲಿ ಆರಂಭವಾದ ಅವರ ಕಂಪೆನಿಯ ಹೆಸರು ‘ಪ್ರಿಸ್ಟೈನ್ ಟ್ರಾಪಿಕಲ್ ಫ್ರುಟ್ಸ್ ಆಂಡ್ ಅಗ್ರೋ ಪ್ರಾಡಕ್ಟ್ಸ್’.

ಟೋಮಿ ಅವರಿಗೆ ಉದ್ದಿಮೆಯ ಹಿನ್ನೆಲೆ ಇಲ್ಲ. ಆದರೆ ಒಂದೊಂದಾಗಿ ಕಲಿತುಕೊಂಡು ಮುನ್ನಡೆಯುತ್ತಿದ್ದಾರೆ. ವ್ಯಾಕ್ಯೂಮ್ ಫ್ರೈ ಯಂತ್ರ ಖರೀದಿಸಿದ್ದು ಇಂಡೋನೇಷ್ಯಾದಿಂದ. ‘ಜಾಕ್ಮೆ’ಯದು ನೂರು ಗ್ರಾಂ ಪ್ಯಾಕೆಟ್. ಇದರ ಬೆಲೆ ₹150. ಪ್ಯಾಕೆಟ್‌ ಆಗಿ, ಆರು ತಿಂಗಳ ತಾಳಿಕೆ ಗುಣ ಹೊಂದಿದೆ.

ವೃತ್ತಿಯ ಉದ್ದೇಶದಿಂದ ಟೋಮಿ ಆಗಾಗ ಕಾಂಬೋಡಿಯಾ, ವಿಯೆಟ್ನಾಂಗೆ ಹೋಗುತ್ತಿರುತ್ತಾರೆ. ವಿಯೆಟ್ನಾಂ ಖ್ಯಾತ ವ್ಯಾಕ್ಯೂಮ್ ಫ್ರೈ ಚಿಪ್ಸ್ ಕಂಪೆನಿ ವಿನಾಮಿಟ್ ಉತ್ಪನ್ನ ಹಲವು ಬಾರಿ ಸವಿದಿದ್ದಾರೆ. ‘ಆದರೆ ನಮ್ಮ ಚಿಪ್ಸ್ ಅವರದಕ್ಕಿಂತಲೂ ಚೆನ್ನಾಗಿರುತ್ತದೆ’ ಎನ್ನುವುದು ಇವರ ಅಭಿಪ್ರಾಯ. ‘ಇದಕ್ಕೆ ಕೇರಳದ ಹಲಸಿನ ಶ್ರೇಷ್ಠತೆಯೇ ಕಾರಣ’ ಎನ್ನುವುದು ಅವರ ಅನಿಸಿಕೆ.

ಜಾಕ್ಮೆ ಹಲಸಿನಹಣ್ಣಿನ ಚಿಪ್ಸನ್ನು ಇವರೀಗ ಕೇರಳ – ಕರ್ನಾಟಕದಲ್ಲಿ ಅಲ್ಲಿಲ್ಲಿ ಮಾರುಕಟ್ಟೆ ಮಾಡತೊಡಗಿದ್ದಾರೆ. ಬೆಂಗಳೂರಲ್ಲೂ ಕೆಲವೆಡೆ ಲಭ್ಯ. ಆದರೆ ಹೆಚ್ಚಾಗಿ ಇದು ಅಮೆರಿಕ, ಕೆನಡಾ, ಐರ್ಲೆಂಡ್‌, ದುಬೈ ಮತ್ತು ಕುವೈತ್‌ಗೆ ರಫ್ತು ಆಗುತ್ತಿದೆ. ‘ವಿದೇಶಗಳಲ್ಲಿರುವ ತರಹದ ಬೇಡಿಕೆ ನಮ್ಮ ದೇಶದಲ್ಲಿಲ್ಲ. ಹಲಸಿನ ಉತ್ಪನ್ನದ ಬೆಲೆ ₹150 ಎಂದಾಗ ಹಲವರು ಹಿಂದೆಮುಂದೆ ನೋಡುತ್ತಾರೆ’ ಎನ್ನುತ್ತಾರೆ ಟೋಮಿ.

ಜಾಕ್ಮೆಯ ಶೇ 90ರಷ್ಟು ಉತ್ಪನ್ನವೂ ಹಲಸಿನ ಹಣ್ಣಿನ ಗರಿಗರಿ ಚಿಪ್ಸೇ. ಈ ಉದ್ದಿಮೆಯನ್ನು ಗಂಭೀರವಾಗಿ ನಡೆಸಲು ಉದ್ದೇಶಿಸಿದ ಇವರು ಕೊಲ್ಲಿಯಲ್ಲಿ ಒಳ್ಳೆ ಸಂಬಳದ ಉದ್ಯೋಗದಲ್ಲಿದ್ದ ಮಗ ರೋಮಿಯನ್ನು ಕರೆಸಿ ಅವರಿಗೇ ನೇತೃತ್ವ ಕೊಟ್ಟಿದ್ದಾರೆ. ಈಗ ಉದ್ದಿಮೆಗೆ ರೋಮಿಯ ಸಾರಥ್ಯ. ಅಪ್ಪ ಟೋಮಿಯ ಸಲಹೆ, ಬೆಂಬಲ, ಸಮಸ್ಯೆ ಬಂದಾಗ ಪರಿಹರಿಸಲು ಮುಂಗೈ. ಇಬ್ಬರೂ ಉದ್ದಿಮೆಗೆ ಆದ್ಯತೆ ಕೊಟ್ಟು ಬಹು ಯತ್ನಪಟ್ಟು ಇದನ್ನು ಯಶಸ್ಸಾಗಿಸಲು ಪಣ ತೊಟ್ಟಿದ್ದಾರೆ.

ಈಗ ಇರುವ ಬ್ಯಾಚ್‌ಗೆ 25 ಕೆ.ಜಿ ಚಿಪ್ಸ್ ಉತ್ಪಾದಿಸುವ ಯಂತ್ರ ಸಾಲದು ಅನಿಸಿದೆ. ಸುತ್ತಮುತ್ತಲಿನ ಊರುಗಳಿಂದ ಕೆ.ಜಿಗೆ ₹8 ರಿಂದ ₹12 ವರೆಗೆ ಹಣ ಕೊಟ್ಟು ಬಕ್ಕೆ ಹಲಸಿನಹಣ್ಣು ಕೊಳ್ಳುತ್ತಿದ್ದಾರೆ. ಸೀಸನ್‌ಲ್ಲಿ ಹದಿನೈದು ಮಂದಿ ಮಹಿಳಾ ಉದ್ಯೋಗಿಗಳು ಕಂಪನಿಯಲ್ಲೇ ಹಣ್ಣು ತೊಳೆದು ಶುಚಿಗೊಳಿಸಿ ಸೊಳೆ ಬಿಡಿಸಿಕೊಡುತ್ತಾರೆ. ಸೊಳೆ ಸಿದ್ಧವಾದಗ ತಮಗೆ ಕಿಲೋ ಒಂದರ ಕನಿಷ್ಠ ನೂರು ರೂಪಾಯಿ ಅಸಲಾಗುತ್ತದೆ ಎನ್ನುತ್ತಾರೆ.

ಹಿಂದಿನ ವರ್ಷ ‘ಪ್ರಿಸ್ಟೈನ್ ಫ್ರುಟ್ಸ್’ ಕೋಟಯಂ ಜಿಲ್ಲೆಯ ಪಾಲಾ ನಗರದ ಒಂದು ಸೊಸೈಟಿಯ ಮೂಲಕ ಹಲಸಿನ ಹಣ್ಣಿನ ಸೊಳೆ ಸಿದ್ಧಪಡಿಸಿಕೊಳ್ಳುತ್ತಿತ್ತು. ಈ ವರ್ಷ ತನ್ನೂರಾದ ನಿಲಂಬೂರಿನಲ್ಲೇ ಈ ಕೆಲಸ ಮಾಡಿಸ ಹತ್ತಿದೆ. ‘ಹಲಸಿನ ದೊಡ್ಡ ಉದ್ದಿಮೆ ಮಾಡುವವರು ಹಲಸನ್ನು ಕತ್ತರಿಸಿ ಸೊಳೆ ಬಿಡಿಸುವುದರಿಂದಾರಂಭಿಸಿ ಎಲ್ಲವನ್ನೂ ತಾವೇ ಮಾಡುತ್ತೇವೆ’ ಎಂದರೆ ನಡೆಯದು. ಸೊಳೆ ತಯಾರು ಮಾಡುವ ಈ ಆರಂಭಿಕ ಕೆಲಸ – ಮಿನಿಮಲ್ ಪ್ರೊಸಸಿಂಗ್‌ ಅನ್ನು ಹೊರಗುತ್ತಿಗೆ ಮೂಲಕ ಮಾಡಿಸಿಕೊಳ್ಳುವುದು ಉತ್ತಮ’ ಎನ್ನುತ್ತಾರೆ ಟೋಮಿ.

‘ಹಲಸಿನಹಣ್ಣಿನ ಸೀಸನ್ ಇರುವುದು ನಾಲ್ಕು ತಿಂಗಳು. ಮುಂದಿನ ಎಂಟು ತಿಂಗಳಿಗೆ ಅಂತ ಭಾರೀ ದೊಡ್ಡ ಪ್ರಮಾಣದಲ್ಲಿ ಕೊಂಡುಕೊಳ್ಳುವುದು ರಿಸ್ಕ್. ಆದರೆ ಗ್ರಾಹಕರು ಕೇಳಿದಾಗ ‘ಇಲ್ಲ’ ಎಂದರೆ ವರ್ಚಸ್ಸಿಗೆ ಕಡಿಮೆ. ಈ ಸಮಸ್ಯೆಗಳ ನಡುವೆ ಸಮತೋಲನ ಮಾಡುವುದೇ ದೊಡ್ಡ ಸವಾಲು’ ಎನ್ನುತ್ತಾರೆ ರೋಮಿ.

ಮೊದಲ ವರ್ಷದಿಂದಲೇ ವರ್ಷಪೂರ್ತಿ ಹಲಸಿನಹಣ್ಣಿನ ವ್ಯಾಕ್ಯೂಮ್ ಫ್ರೈ ಚಿಪ್ಸ್ ಪೂರೈಸಬೇಕೆಂಬ ಹಟ ಇವರಲ್ಲಿತ್ತು. ಅದಕ್ಕಾಗಿ ಸಾಕಷ್ಟು ಸಿದ್ಧತೆಯನ್ನೂ ನಡೆಸಿದ್ದರು. ಆದರೆ ಕಳೆದ ವರ್ಷದ ಪ್ರವಾಹ ಇವರ ಲೆಕ್ಕಾಚಾರವನ್ನು ತಲೆ ಕೆಳಗಾಗಿಸಿತು. ‘ಈ ವರ್ಷ ಎಡಬಿಡದೆ ನಮ್ಮ ಉತ್ಪನ್ನ ಮಾರುಕಟ್ಟೆಯಲ್ಲಿರುವ ಹಾಗೆ ಮಾಡಲು ಯತ್ನಿಸುತ್ತಿದ್ದೇವೆ’ ಎನ್ನುತ್ತಾರೆ ಟೋಮಿ ಕಾವಲಕಲ್.

ಒಂದು ಬ್ಯಾಚ್ ವ್ಯಾಕ್ಯೂಮ್ ಫ್ರೈ ಚಿಪ್ಸ್ ತಯಾರಾಗಲು ಎರಡು ಗಂಟೆ ಬೇಕು. ಈಗ ದಿನಕ್ಕೆ ನೂರು ಕೆ.ಜಿಗೂ ಹೆಚ್ಚು ಚಿಪ್ಸ್ ತಯಾರಾಗುತ್ತಿದೆ. ವರ್ಷವಿಡೀ ಉತ್ಪಾದನೆ. ಈ ಉತ್ಪನ್ನದ ಉತ್ಪಾದನಾ ವೆಚ್ಚವೇ ಹೆಚ್ಚು ಇರುವ ಕಾರಣ ರಫ್ತಿನ ಕಡೆಗೆ ಟೋಮ್ ಗಮನ ಹರಿಸುತ್ತಿದ್ದಾರೆ.

ಇಂಡೋನೇಷ್ಯಾ, ವಿಯೆಟ್ನಾಂ, ಥಾಯ್ಲೆಂಡ್, ಮಲೇಷ್ಯಾಗಳಲ್ಲಿ ಜನಪ್ರಿಯವಾಗಿರುವ ಹಲಸಿನಹಣ್ಣಿನ ವ್ಯಾಕ್ಯೂಮ್ ಫ್ರೈ ಚಿಪ್ಸ್ ನಮ್ಮಲ್ಲಿ ಇನ್ನೂ ಬಹುಪಾಲು ಅಪರಿಚಿತವೇ. ಕುಂದಾಪುರದ ಗೋಕುಲ್ ಫ್ರೂಟ್ಸ್ ಈ ಚಿಪ್ಸ್ ತಯಾರಿಯಲ್ಲಿ ದೇಶಕ್ಕೇ ಮೊದಲಿಗರು. ಆದರೆ ಅವರಿಗೆ ವರ್ಷವಿಡೀ ಇದನ್ನು ಮಾಡಲು ಆಗುತ್ತಿಲ್ಲ.

ಒಂದಂತೂ ನಿಜ, ಹಲಸಿನಹಣ್ಣಿನ ವ್ಯಾಕ್ಯೂಮ್ ಫ್ರೈ ಚಿಪ್ಸ್ ತಿಂದವರು ಅದರ ಬೆಲೆಯ ಬಗ್ಗೆ ಮಾತ್ರ ಗುರ‍್ರೆನ್ನುತ್ತಾರೆ. ಆದರೆ ರುಚಿಗೆ ಮನಸೋತು ಮತ್ತೆ ಮತ್ತೆ ಕೈ ಚಾಚುತ್ತಿರುತ್ತಾರೆ! ದೇಶದಲ್ಲೇ ಗರಿಷ್ಠ ಪ್ರಮಾಣದ ಹಲಸು ಬೆಳೆಯುತ್ತಿರುವ ಕರ್ನಾಟಕಕ್ಕೆ ದೊಡ್ಡ ರೀತಿಯಲ್ಲಿ ಹಲಸಿನ ಹಣ್ಣಿನ ವ್ಯಾಕ್ಯೂಮ್ ಫ್ರೈ ಉದ್ದಿಮೆಗೆ ಕಾಲಿಡಲು ಇದು ಸಕಾಲ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕ ಸಂಖ್ಯೆ – 9074431829 (ಇಂಗ್ಲಿಷ್ ಮತ್ತು ಮಲಯಾಳಂ ಭಾಷೆಯಲ್ಲಿ ಮಾಹಿತಿ ಲಭ್ಯ). ಇಮೇಲ್‌: info@pristineagro.com

ಇಲ್ಲೂ ಸಾಧ್ಯ

ಕರ್ನಾಟಕದ ಕಡಿಮೆ ಮಳೆಯ ಹಲಸು ಬೆಳೆಯುವ ಪ್ರದೇಶಗಳಾದ ತುಮಕೂರು, ತೂಬುಗೆರೆ, ಹಾಸನದಂಥ ಊರುಗಳು ಹಲಸಿನ ಹಣ್ಣಿನ ವ್ಯಾಕ್ಯೂಮ್‌ ಫ್ರೈ ಚಿಪ್ಸ್ ತಯಾರಿಗೆ ಸೂಕ್ತ ಸ್ಥಳ. ಹತ್ತಿರದಲ್ಲಿಯೇ ಉತ್ತಮ ಗುಣಮಟ್ಟದ ಬಕ್ಕೆ ಹಣ್ಣು ಧಾರಾಳ ಸಿಗುತ್ತಿದೆ. ಸಾಕಷ್ಟು ಅಗ್ರೆಸಿವ್ ಆಗಿ ಮಾರುಕಟ್ಟೆ ಶುರು ಮಾಡಿ ಮಹಾನಗರಗಳನ್ನೇ ಗುರಿಯಾಗಿಟ್ಟುಕೊಂಡರೆ ಮಾತ್ರ ಇದಕ್ಕೆ ಬೇಡಿಕೆ ಕುದುರಿಸಬಹುದು. ಅದಕ್ಕೂ ಮೊದಲು ಉತ್ಪನ್ನವನ್ನು ಮೇಲುಸ್ತರದ ಗ್ರಾಹಕರಿಗೆ ಪರಿಚಯಿಸುವ ಕೆಲಸ ಒಂದು ಆಂದೋಲನದ ರೀತಿ ನಡೆಯಬೇಕು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು