ಸೋಮವಾರ, ಮೇ 17, 2021
31 °C

ಪಪ್ಪಾಯ ವೈರಸ್‌ಗೆ ‘ಪವರ್‌ ಪ್ಲಸ್‌’

ಬಾಲಚಂದ್ರ Updated:

ಅಕ್ಷರ ಗಾತ್ರ : | |

Prajavani

ಪಪ್ಪಾಯ ಕೃಷಿ ಮಾಡುವವರಿಗೆ ಪ್ರಮುಖ ಶತೃಗಳೆಂದರೆ ರೋಗಗಳು ಮತ್ತು ಕೀಟಬಾಧೆ. ಅದರಲ್ಲೂ ಪಪ್ಪಾಯ ಗಿಡಕ್ಕೆ ತಗಲುವ ‘ರಿಂಗ್ಸ್‌ ಸ್ಪಾಟ್‌ ವೈರಸ್‌’ ಸೋಂಕು ಅತಿದೊಡ್ಡ ಶತ್ರು. ಈ ವೈರಸ್‌ ಬಾಧೆ ನಿಯಂತ್ರಣಕ್ಕೆ ಸೂಕ್ತ ಮದ್ದಿಲ್ಲ. ಆದರೆ ರೋಗ ಬಾರದಂತೆ ತಡೆಗಟ್ಟಲು ಸಾಧ್ಯತೆ ಇದೆ.

ಮೈಸೂರಿನ ಹಿರಿಯ ಕೃಷಿ ವಿಜ್ಞಾನಿ ಡಾ. ವಸಂತ್ ಕುಮಾರ್ ತಿಮಕಾಪುರ ಅವರು ರಿಂಗ್‌ಸ್ಪಾಟ್‌ ವೈರಸ್‌ ನಿಯಂತ್ರಣಕ್ಕೆ ‘ಪವರ್‌ ಪ್ಲಸ್‌’ ಎಂಬ ಔಷಧವನ್ನು ಕಂಡು ಹಿಡಿದಿದ್ದಾರೆ. ಈ ಮೂಲಕ ಈ ವೈರಸ್‌ ನಿಯಂತ್ರಣಕ್ಕಿರುವ ಹೊಸ ಸಾಧ್ಯತೆಯನ್ನು ಪರಿಚಯಿಸಿದ್ದಾರೆ. ಈ ಔಷಧವನ್ನು ಹತ್ತು ವರ್ಷಗಳ ಕಾಲ ಮೈಸೂರಿನ ಕುಕ್ಕರಹಳ್ಳಿ ಬಳಿಯ ನರ್ಸರಿಯಲ್ಲಿ ಪಪ್ಪಾಯ ಗಿಡಗಳ ಮೇಲೆ ಪ್ರಯೋಗಿಸಿ ನೋಡಿದ್ದಾರೆ. ಜತೆಗೆ ಫಲಿತಾಂಶಗಳನ್ನೂ ದಾಖಲಿಸಿದ್ದಾರೆ. ಕೆಲ ರೈತರೂ ಜಮೀನಿನ ಗಿಡಗಳಿಗೂ ಇದನ್ನು ಬಳಸಿ ನೋಡಿದ್ದಾರಂತೆ. ‘ಈ ಔಷಧ ನೀಡುವುದರಿಂದ ವೈರಸ್‌ಗೆ ತುತ್ತಾದ ಪಪ್ಪಾಯ ಗಿಡವನ್ನು ಗುಣಪಡಿಸಬಹುದು. ಜತೆಗೆ, ಆ ಗಿಡಗಳಿಂದ ಉತ್ತಮ ಇಳುವರಿ ಪಡೆಯಬಹುದು’ ಎನ್ನುತ್ತಾರೆ ವಸಂತ್‌.

ಕುಕ್ಕಹರಳ್ಳಿ ಬಳಿ ನರ್ಸರಿಯಲ್ಲಿ ಒಟ್ಟು 106 ಪಪ್ಪಾಯ ಗಿಡಗಳಿವೆ. ಅದರಲ್ಲಿ ನೂರು ಗಿಡಗಳಿಗೆ ಪವರ್‌ಪ್ಲಸ್‌ ಔಷಧ ಕೊಟ್ಟು ಬೆಳೆಸಲಾಗಿತ್ತು. ಇಂಥ ಆರೋಗ್ಯ ಪೂರ್ಣ ಗಿಡಗಳ ನಡುವೆ ರೋಗಕ್ಕೆ ತುತ್ತಾದ ಆರು ಪಪ್ಪಾಯ ಗಿಡಗಳನ್ನು ಇಟ್ಟು ನೋಡಲಾಯಿತು. ಆದರೆ, ಆರೋಗ್ಯವಂತ ಗಿಡಗಳಿಗೆ ವೈರಸ್‌ ಸೋಂಕು ತಗುಲಿಲ್ಲ. ಬದಲಾಗಿ ಅವುಗಳಲ್ಲಿ ಗೊಂಚಲು, ಗೊಂಚಲು ಕಾಯಿಗಳು ಬಿಟ್ಟವು. ನಂತರದಲ್ಲಿ ಕಾಯಿಲೆಗೆ ತುತ್ತಾದ ಆರು ಗಿಡಗಳಿಗೂ ಈ ಔಷಧ ನೀಡಿದ ಮೇಲೆ, ಅವೂ ಚೆನ್ನಾಗಿ ಬೆಳೆದವು. ಈಗ ಉತ್ತಮ ಫಲ ಕೊಡುತ್ತಿವೆ. ‘ಇದೇ ಪವರ್‌ಪ್ಲಸ್’ನ ವಿಶೇಷ ಎನ್ನುತ್ತಾರೆ ವಸಂತ್‌.

ರೈತರ ತಾಕುಗಳಲ್ಲೂ ಪ್ರಯೋಗ

ಈ ಔಷಧವನ್ನು ಅಭಿವೃದ್ಧಿ ಪಡಿಸಿದ ನಂತರ ಮೂರು ವರ್ಷಗಳ ರೈತರ ತೋಟಗಳಲ್ಲಿ ಪ್ರಯೋಗ ನಡೆಸಿ, ನಂತರ ಮಾರುಕಟ್ಟೆಗೆ ಬಿಡಲಾಗಿದೆ.

‘ಹಲವು ವರ್ಷಗಳಿಂದ ಪಪ್ಪಾಯ ಬೆಳೆಯುತ್ತಿದ್ದೇನೆ. ಗಿಡ ಬೆಳೆಯುವ ಹಂತದಲ್ಲಿ ವೈರಸ್‌ ದಾಳಿಯಿಂದ ಗಿಡವೇ ಬಾಡಿ
ಹೋಗುತ್ತಿತ್ತು. ಈ ಔಷಧ ಸಿಂಪಡಣೆ ಬಳಿಕ ರೋಗ ನಿಯಂತ್ರಣದ ಜೊತೆಗೆ ಉತ್ತಮ ಇಳುವರಿ ಪಡೆಯುತ್ತಿದ್ದೇನೆ’ ಎನ್ನುತ್ತಾರೆ ಬೆಟ್ಟದಪುರದ ಪಪ್ಪಾಯ ಬೆಳೆಗಾರ ಪಾಪೇಗೌಡ.

ದ್ರವರೂಪದಲ್ಲಿರುವ ಸಸ್ಯಾಧಾರಿತವಾಗಿ ತಯಾರಿಸಿರುವ ಈ ಔಷಧವನ್ನು ಪಪ್ಪಾಯ ಗಿಡಗಳಿಗೆ ಮಾತ್ರವಲ್ಲದೇ, ಬೇರೆ ಗಿಡಗಳಿಗೂ ಬಳಸಿಕೊಳ್ಳಬಹುದು. ಈ ಔಷಧವು ಗಿಡಗಳಲ್ಲಿನ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಆ ಕಾರಣಕ್ಕೆ ಇದಕ್ಕೆ ಪವರ್‌ಪ್ಲಸ್‌ ಎಂದು ಹೆಸರಿಡಲಾಗಿದೆ.

‘ಮಿತ ದರದ ಈ ಔಷಧ, ವಿಷಕಾರಿಯಲ್ಲ. ಕಾಯಿಲೆಗೆ ತುತ್ತಾದ ಗಿಡಗಳಿಗೆ ಶಕ್ತಿ ತುಂಬುತ್ತದೆ. ಕಾಯಿಲೆ ಬರುವ ಮುನ್ನವೇ, ಈ ಔಷಧಿಯನ್ನು ಬಳಸಬಹುದು. ಒಂದೊಮ್ಮೆ ಕಾಯಿಲೆಗೆ ಬಂದರೂ, ಅದನ್ನು ತಡೆಗಟ್ಟಲು ಈ ಔಷಧಿಯಿಂದ ಸಾಧ್ಯವಿದೆ’ ಎಂಬುದು ವಸಂತ್ ಅವರ ಅಭಿಪ್ರಾಯ.

ಬಳಕೆ ಹೇಗೆ ?

ಒಂದು ಲೀಟರ್‌ ‘ಪವರ್‌ ಪ್ಲಸ್‌’ ಔಷಧಕ್ಕೆ ₹850 ದರವಿದೆ. ಒಂದು ಲೀಟರ್‌ ನೀರಿಗೆ 5 ಎಂ.ಎಲ್‌ ಪವರ್‌ಪ್ಲಸ್‌ ಮಿಶ್ರಣ ಮಾಡಿ, ನಂತರ ಪಪ್ಪಾಯ ಗಿಡಗಳ ಮೇಲೆ ಸಿಂಪಡಣೆ ಮಾಡಬೇಕು. 1 ಎಕರೆ ಭೂಮಿಗೆ 200 ಲೀಟರ್‌ ಮಿಶ್ರಣ ಮಾಡಿದ ಔಷಧ ಸಾಕಾಗುತ್ತದೆ. 

ನರ್ಸರಿಯಲ್ಲಿ ಸಸಿಯಾಗಿದ್ದಾಗ ಒಮ್ಮೆ ಸಿಂಪಡಣೆ ಮಾಡಬೇಕು. 30 ದಿವಸದ ನಂತರ ಪ್ರತಿ ತಿಂಗಳಿಗೊಮ್ಮೆ 11 ತಿಂಗಳವರೆಗೆ ನಿರಂತರವಾಗಿ ಔಷಧ ನೀಡಬೇಕು. ಇದಾದ ನಂತರ ಯಾವುದೇ ತೊಂದರೆ ಕಾಣಿಸಿಕೊಳ್ಳುವುದಿಲ್ಲ’ ಎಂದು ವಸಂತ್‌ ಅವರು ವಿವರಿಸುತ್ತಾರೆ.

ಯಾವುದೇ ಗಿಡಗಳಿಗೂ ಕಾಯಿಲೆ ಕಾಣಿಸಿಕೊಂಡ ಕೂಡಲೇ, ಅದನ್ನು ಬುಡಸಮೇತ ಕಿತ್ತು, ಸುಟ್ಟು ಹಾಕಲು ವಿಜ್ಞಾನಿಗಳು ಸಲಹೆ ನೀಡುತ್ತಾರೆ. ಇದರಿಂದ ಹೆಚ್ಚೆಂದರೆ, ಆರು ತಿಂಗಳ ಕಾಲ ವೈರಸ್‌ನಿಂದ ಪಾರು ಮಾಡಬಹುದು. ಆದಾದ ಬಳಿಕ, ಗಾಳಿ, ಕೀಟಗಳ ಮುಖಾಂತರ ವೈರಸ್‌ ಹರಡುವ ಸಾಧ್ಯತೆಗಳು ಇದ್ದೇ ಇರುತ್ತವೆ. ‘ಆದರೆ, ಈ ಔಷಧ, ಬೆಳಗಳಲ್ಲಿ ರೋಗ ನಿರೋಧಕತೆ ಹೆಚ್ಚಿಸುವ ಮೂಲಕ ಹೊಸ ಸಾಧ್ಯತೆಯನ್ನು ಅನಾವರಣಗೊಳಿಸಿದೆ’ ಎಂದು ಅವರು ಸ್ಪಷ್ಟಪಡಿಸುತ್ತಾರೆ.

ಸರ್ವಋತು ಸ್ವಾದಿಷ್ಟ ಫಲ

ಪಪ್ಪಾಯ ಪ್ರಮುಖ ಹಣ್ಣಿನ ಬೆಳೆಗಳಲ್ಲಿ ಒಂದಾಗಿದೆ. ವರ್ಷಪೂರ್ತಿ ಅತ್ಯಂತ ಕಡಿಮೆ ಬೆಲೆಯಲ್ಲಿ ಸಿಗುವ ಅತ್ಯಂತ ಉತ್ಕೃಷ್ಟವಾದ ಹಣ್ಣುಗಳಲ್ಲಿ ಇದಕ್ಕೆ ಮೊದಲ ಪ್ರಾಶಸ್ತ್ಯ.

ಪಪ್ಪಾಯಿ ಹಣ್ಣಿನಲ್ಲಿರುವ ಸುವಾಸನೆಯ ರುಚಿ, ಮೃದು ಬೆಣ್ಣೆಯಂತಿರುವ ಸಾಂದ್ರತೆಯನ್ನು ಕಂಡುಕೊಂಡು ಕ್ರಿಸ್ಟೋಫರ್‌ ಕೊಲಂಬಸ್‌ ‘ಫ್ರೂಟ್ಸ್‌ ಆಫ್‌ ಏಂಜೆಲ್ಸ್‌’ ಎಂದು ಹೆಸರಿಟ್ಟನು. ದಕ್ಷಿಣ ಅಮೆರಿಕದ ಈ ಹಣ್ಣು, ಡಚ್ಚರು, ಪೋರ್ಚುಗೀಸರ ಮುಖಾಂತರ ಭಾರತಕ್ಕೆ ಬಂದಿತು ಎನ್ನಲಾಗಿದೆ. ಇದರಲ್ಲಿ ‘ವಿಟಮಿನ್‌ ಸಿ’ ಹೇರಳವಾಗಿದ್ದು, ‘ವಿಟಮಿನ್‌ ಸಿ’ ಕೂಡ ಇದೆ. ಕಾಯಿಯಲ್ಲಿ ‘ಪೆಫಿನ್‌’ ಪ್ರೊಟೀನ್‌ ಅಂಶವನ್ನು ಹೊಂದಿದ್ದು, ಮಾಂಸಾಹಾರವನ್ನು ಸರಾಗವಾಗಿ ಜೀರ್ಣಿಸಲು ನೆರವಾಗುತ್ತದೆ.

ಔಷಧ ಬಳಸಿ ಬೆಳೆಸಿದ ಸಸಿಗಳನ್ನು ನೋಡಬೇಕೆಂದರೆ, ಮೈಸೂರಿನಲ್ಲಿರುವ ಈ ನರ್ಸರಿಗೆ ಖುದ್ದು ಭೇಟಿ ನೀಡಬಹುದು. ಹೆಚ್ಚಿನ ಮಾಹಿತಿಗಾಗಿ ವಿಜ್ಞಾನಿ ವಸಂತ್‌ ಕುಮಾರ್‌ ತಿಮಕಾಪುರ ಅವರ ಸಂಪರ್ಕ ಸಂಖ್ಯೆ 9845347884ಗೆ ಸಂಪರ್ಕಿಸಬಹುದು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು