ಗುರುವಾರ , ಏಪ್ರಿಲ್ 2, 2020
19 °C

‘ಶಿರಪುರ ಮಾದರಿ’ಭರಪೂರ ಜಲ

ಸಂತೋಷ ಈ. ಚಿನಗುಡಿ Updated:

ಅಕ್ಷರ ಗಾತ್ರ : | |

Prajavani

‘ನಾಕ್‌ ವರ್ಸ್‌ ಆಗಿತ್ರಿ. ಬಗಸ್ಯಾಗ್‌ ಸುದಾ ನೀರ್‌ ಸಿಗ್ತಿರ್ಕಿಲ್ಲ. ಬಾವಿ ಬೀ ಬತ್ಯಾವು, ಬೋರ್‌ ಬೀ ಬತ್ಯಾವು. ಹೊಲದ್‌ ದೆಸಿಂದ ಲಕ್ಸ್‌ಗಂಟ್ಲೆ ರೊಕ್ಕಾ ಸುರದೇವ್ರಿ. ಏನ್‌ ಬೀ ಕೈಗೆ ಬರ್ಲಿಲ್ಲ. ಹ್ವಾದ್‌ ಬರ್ಗೆ ಅಂತೂ ಟ್ಯಾಂಕರ್‌ಲಿದ್ದ ನೀರ್‌ ತಂದ್‌ ಹಾಕೇವ್ರಿ ಸರಾ. ಯಾರೂ ನಂ ಸಂಕಟ ಕೇಳೂತ್ಲೆ ಇಲ್ಲ. ಬಾಳ್‌ ಮುಷ್ಕಿಲ್‌ ಆಗಿತ್ತನ್ರಿಲಾ. ಈ ಬರ್ಗಿ ಚೆಕ್‌ಡ್ಯಾಂ ಕಟ್ಟಿಸ್ಯಾರ್‌. ಅಟೊಮೆಟಿಕಲ್ಲಿ ನಮ್ಮ ಬೋರು, ಬಾವಿಗೆ ಭರಪೂರ್‌ ನೀರ್‌ ಬಂದೈತಿ. ಈ ವರ್ಷ ಬಿಲ್ಕುಲ್‌ ಚಿಂತಿ ಇಲ್ರಿ...’

ಪ್ರಗತಿಪರ ರೈತ ರಾಜಶೇಖರ ಗಡ್ಡಿ ಅವರ ಆತ್ಮವಿಶ್ವಾಸದ ಮಾತಿವು. ರಾಜಶೇಖರ ಮಾತ್ರವಲ್ಲ, ಈ ಭಾಗದ ಬಹುಪಾಲು ರೈತರ ಮುಖದಲ್ಲಿ ಈಗ ಮಂದಹಾಸ. ಇದಕ್ಕೆ ಕಾರಣ ಇವರ ಊರು ಹಾಗೂ ಹೊಲಗಳ ಸುತ್ತ ಮುತ್ತ ಅಂತರ್ಜಲಮಟ್ಟ ಸಮೃದ್ಧವಾಗಿದೆ. ನಿರಂತರ ಬರದ ಬವಣೆಗೆ ತತ್ತರಿಸಿದ ಬದುಕಿನಲ್ಲಿ ಚೈತನ್ಯದ ಜಲಪಾತ. ಬಿಸಿಲ ನಾಡು– ಬರಡು ಭೂಮಿ ಎಂಬ ಹಣೆಪಟ್ಟಿ ಕಟ್ಟಿಕೊಂಡ ಊರಲ್ಲಿ ನಿರಂತರ ಜಲಲ ಜಲಲ ಜಲಧಾರ.

ಆಳಂದ ತಾಲ್ಲೂಕಿನ ವಿವಿಧೆಡೆ ಅಂತರ್ಜಲ ಹೆಚ್ಚಿಸುವ ‘ಶಿರಪುರ ಮಾದರಿ ಜಲಸಂಗ್ರಹ’ ಯೋಜನೆಯನ್ನು ಕೈಗೆತ್ತಿಕೊಂಡ ಮೇಲೆ ಗಡ್ಡಿ ಅಂತಹವರ ಮಾತುಗಳಲ್ಲಿ ಆತ್ಮವಿಶ್ವಾಸ ಕಾಣುತ್ತಿದೆ. ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಮಾಡಿದ ಈ ಯೋಜನೆಯ ಪ್ರಾಯೋಗಿಕ ಕಾಮಗಾರಿಗೆ ಉತ್ತಮ ಯಶಸ್ಸು ಸಿಕ್ಕಿದೆ. ಯೋಜನೆ ಕೈಗೊಂಡಿರುವ ಜಾಗದಲ್ಲಿ ಜುಲೈ ಮೊದಲ ವಾರದಲ್ಲಿ ಸುರಿದ ಒಂದೇ ಮಳೆಯಿಂದ ಕೆರೆ, ಕಟ್ಟೆ, ಬಾವಿಗಳಲ್ಲಿ ನೀರು ತುಂಬಿದ್ದು, ಜೀವಕಳೆ ಮರಳಿದೆ. ಹೀಗಾಗಿ ಮುಂಗಾರು ನಿರೀಕ್ಷಿತ ಮಟ್ಟದಲ್ಲಿ ಬೀಳದಿದ್ದರೂ ಇಲ್ಲಿನ ರೈತರ ಮುಖದಲ್ಲಿ ಭಯದ ಗೆರೆಗಳಿಲ್ಲ. ಒಂದು ಬಿಂದಿಗೆ ಕುಡಿಯುವ ನೀರಿಗಾಗಿ ಐದು ಕಿಲೋಮೀಟರ್‌ ಅಲೆಯುತ್ತಿದ್ದ ಜನರ ಬವಣೆ ನೀಗಿದೆ.

ಇಷ್ಟೆಲ್ಲ ಆಗಿದ್ದು ಕೇವಲ ಒಂದು ಮಳೆಗೆ. ಜುಲೈ ಮೊದಲ ವಾರದಲ್ಲಿ ಈ ಭಾಗದಲ್ಲಿ ಸುರಿದ 80 ಮಿ.ಮೀ ಮಳೆ (ಜುಲೈ 13ರವರೆಗೆ). ಬಿದ್ದ ಪ್ರತಿಯೊಂದು ಹನಿಯನ್ನೂ ಚೆಕ್‌ಡ್ಯಾಂಗಳಲ್ಲಿ ಹಿಡಿದಿಡಲಾಗಿದೆ. ತೊರೆಯ ಮೂಲಕ ಸರಸರನೇ ಹರಿದು ಹೋಗುತ್ತಿದ್ದ ಮಳೆ ಹನಿಗಳು ಒಂದೆಡೆ ಸೇರಿ ಜಲರಾಶಿ ನಿರ್ಮಾಣವಾಗಿದೆ. ಅಲ್ಲೀಗ ಹಕ್ಕಿಗಳ ಕಲರವ, ಜಲಚರಗಳ ನಲಿದಾಟ, ಇಡೀ ಪರಿಸರದಲ್ಲಿ ಲವಲವಿಕೆ ಮನೆಮಾಡಿದೆ. 

ಏನಿದು ಶಿರಪುರ ಮಾದರಿ?

ನೈಸರ್ಗಿಕ ಕಾಲುವೆ, ತೊರೆ, ಝರಿಗಳನ್ನೇ ತುಸು ಅಭಿವೃದ್ಧಿಪಡಿಸಿ, ಅಲ್ಲಲ್ಲಿ ಚೆಕ್‌ಡ್ಯಾಂ ನಿರ್ಮಿಸುವುದು ಈ ಯೋಜನೆ ಮೂಲ ಉದ್ದೇಶ. ಈ ಮಾದರಿಯಿಂದ ಮಳೆ ನೀರು ನೆಲದಲ್ಲಿ ಇಂಗಿ ಅಂತರ್ಜಲ ಹೆಚ್ಚುತ್ತದೆ. ಇದೇ ನೀರು ಬಾವಿ, ಬೋರ್‌ವೆಲ್‌ಗಳ ಮೂಲಕ ಜನೋಪಯೋಗಕ್ಕೆ ಸಿಗುತ್ತದೆ. ಮಹಾರಾಷ್ಟ್ರದ ಲಾತೂರ್‌ ಜಿಲ್ಲೆಯ ಶಿರಪುರ ಎಂಬಲ್ಲಿ ಮೊದಲು ಈ ಪ್ರಯೋಗ ಮಾಡಲಾಯಿತು. ಆ ಹಳ್ಳಿಯ ಸುತ್ತಲೂ ಅಂತರ್ಜಲ ಭರಪೂರ ಆಯಿತು. ಇದರಿಂದ ಉತ್ತೇಜನಗೊಂಡ ಅಲ್ಲಿನ ಸರ್ಕಾರ ₹ 1,700 ಕೋಟಿ ಅನುದಾನ ನೀಡಿ, ರಾಜ್ಯದಾದ್ಯಂತ ಯೋಜನೆ ಜಾರಿ ಮಾಡಿದೆ.

ಕಳೆದ ಅವಧಿಯಲ್ಲಿ ಆಳಂದ ಶಾಸಕರಾಗಿದ್ದ ಬಿ.ಆರ್‌.ಪಾಟೀಲ ಇದನ್ನು ರಾಜ್ಯಕ್ಕೆ ಪರಿಚಯಿಸಿದವರು. ಪ್ರಯೋಗಾರ್ಥವಾಗಿ ಆರು ಕಡೆಗಳಲ್ಲಿ ಒಟ್ಟು 56 ಕಿ.ಮೀ. ಉದ್ದದ ನಾಲೆ ನಿರ್ಮಿಸಲಾಗಿದ್ದು, ಇದರಲ್ಲಿ 50 ಚೆಕ್‌ಡ್ಯಾಂ ನಿರ್ಮಾಣ ಕೈಗೆತ್ತಿಕೊಳ್ಳಲಾಗಿದೆ. ಸಣ್ಣ ನೀರಾವರಿ ಇಲಾಖೆಯ ಮೂಲಕ ಅನುಷ್ಠಾನಗೊಳಿಸಲಾಗುತ್ತಿದ್ದು, ಇದಕ್ಕೆ ₹ 22.59 ಕೋಟಿ ವೆಚ್ಚ ಅಂದಾಜಿಸಲಾಗಿದೆ.

ಆಳಂದ ತಾಲ್ಲೂಕಿನ ಮಾದನ ಹಿಪ್ಪರಗಾ, ಸರಸಂಬಾ, ಕಿಣ್ಣಿ ಸುಲ್ತಾನ್‌ಪುರ, ರುದ್ರವಾಡಿ, ಜಂಬಗಾ, ಬಸವನ ಸಂಗೊಳಗಿ, ಧುತ್ತರಗಾಂವ, ಪಡಸಾವಳಗಿ, ಸಕ್ಕರಗಿ, ಬಸವನ ಸಂಗೊಳ್ಳಿಯಲ್ಲಿ ಕಾಮಗಾರಿ ಮುಗಿದಿದೆ. ಈ ಗ್ರಾಮಗಳ ಬಹುಪಾಲು ರೈತರು ಆತ್ಮವಿಶ್ವಾಸದಿಂದ ಬೀಗುತ್ತಿದ್ದಾರೆ. ಮುಂಗಾರು ಕಳೆಗುಂದಿದ್ದರೂ ಚೆಕ್‌ಡ್ಯಾಂಗಳು ಮೈದುಂಬಿವೆ. ಬಾವಿಗಳಲ್ಲಿ 12 ಅಡಿಗೂ ಹೆಚ್ಚು ಆಳ ನೀರು ಸಂಗ್ರಹವಾಗಿದೆ. ಚೆಕ್‌ಡ್ಯಾಂನಲ್ಲಿ ನಿಂತ ನೀರನ್ನು ಕೃಷಿ ಹೊಂಡಗಳಿಗೂ ತುಂಬಿಸಿಕೊಂಡಿದ್ದಾರೆ. ಜನ, ಜಾನುವಾರುಗಳ ಕುಡಿಯಲು ಇದನ್ನು ಬಳಸುತ್ತಿದ್ದಾರೆ. ಹೆಚ್ಚೆಂದರೆ 150 ಮಿ.ಮೀ ಮಳೆ ಬಿದ್ದರೆ ಸಾಕು. ಬೇಸಿಗೆಗೂ ಸಾಲುವಷ್ಟು ನೀರು ಇಲ್ಲಿ ಸಂಗ್ರಹವಾಗುತ್ತದೆ ಎಂಬುದು ರೈತರ ಲೆಕ್ಕಾಚಾರ.

ಈ ಯೋಜನೆಯ ಯಶಸ್ಸಿನಿಂದ  ಉತ್ತೇಜಿತರಾದ ಮಾದನ ಹಿಪ್ಪರಗಾ ರೈತ ರಾಜಶೇಖರ ಗಡ್ಡದ ಅವರು ಒಂದು ಕೋಟಿ ಲೀಟರ್‌ ನೀರು ಸಂಗ್ರಹ ಸಾಮರ್ಥ್ಯದ ಕೃಷಿ ಹೊಂಡ ನಿರ್ಮಿಸಿಕೊಂಡಿದ್ದಾರೆ! ಇದಕ್ಕೆ ₹ 6 ಲಕ್ಷ ವೆಚ್ಚವಾಗಿದೆ. ಚೆಕ್‌ಡ್ಯಾಂನ ನೀರು ಬಾವಿಗೆ ಸೇರುತ್ತದೆ. ಅಲ್ಲಿಂದ ಶುದ್ಧ ನೀರನ್ನು ಕೃಷಿ ಹೊಂಡಕ್ಕೆ ತುಂಬಿಸಿದ್ದಾರೆ. ಮುಂದೆ ಈ ನೀರು ಬೇಸಿಗೆಯಲ್ಲಿ ದ್ರಾಕ್ಷಿ, ಕಲ್ಲಂಗಡಿ, ನುಗ್ಗೆ ಬೆಳೆಯಲು ಸಹಕಾರಿಯಾಗುತ್ತದೆ ಎಂಬುದು ಅವರ ಅಂದಾಜು.

ಶಿರವಾರ ಯೋಜನೆಯಲ್ಲಿ ಮಾದನಹಿಪ್ಪರಗಾ ರೈತ ಅರ್ಜುನ ಸಿದ್ರಾಮಪ್ಪ ಜಮಾದಾರ ಅವರ ಹೊಲಕ್ಕೆ ಹೊಂದಿಕೊಂಡೇ ನಾಲೆ ಕೊರೆದಿದ್ದಾರೆ. ಅಕ್ಕಪಕ್ಕದ ಹೊಲಗಳು ತುಸು ತುಂಡು ತುಂಡಾಗಿವೆ. ‘ಜಮೀನು ಹೋದರೂ ಪರವಾಗಿಲ್ಲ. ನೀರು ಸಿಕ್ಕಿದ ಖುಷಿ ಇದೆ. ಬರಗಾಲದಿಂದ ಬೇಸತ್ತಿದ್ದ ನಮಗೆ, ಈ ನೀರು ಸಿಕ್ಕಿದ್ದು ಖುಷಿ ತಂದಿದೆ’ ಎನ್ನುತ್ತಾರೆ ಅವರು.

28 ಎಕರೆ ಜಮೀನಿನ ಒಡೆಯ ಸಾವಳೇಶ್ವರದ ರೈತ ಸಿದ್ಧಲಿಂಗ ಕಲ್ಲಶೆಟ್ಟಿ ಅರ್ಧದಷ್ಟು ನೀರಾವರಿ ಮಾಡಿದ್ದಾರೆ. ಮೂರು ಬೋರ್‌ವೆಲ್‌, ಎರಡು ಬಾವಿ ತೋಡಿಸಿದರೂ ನೀರು ಸಿಕ್ಕಿರಲಿಲ್ಲ. ಈಗ ಚೆಕ್‌ಡ್ಯಾಂನಲ್ಲಿ ಕಿಲೋಮೀಟರ್‌ ದೂರದಷ್ಟು ನೀರು ಸಂಗ್ರಹವಾಗಿದೆ. ಬರಡಾಗಿದ್ದ ನಮ್ಮ ಬೋರ್‌ವೆಲ್‌, ಬಾವಿಗಳಲ್ಲಿ ಬೇಜಾನ್‌ ನೀರು ಬಂದಿದೆ. ಸೋಯಾಬಿನ್‌, ದಾಳಿಂಬೆ, ಉದ್ದು, ತೊಗರಿ ಬೆಳೆದಿದ್ದೇನೆ ಈ ವರ್ಷ ಕಬ್ಬು ಹಾಕಬಹುದು ಎಂಬ ಹುರುಪು ಅವರದು.

ಚೆಕ್‌ ಡ್ಯಾಂಗಳಲ್ಲಿ ನೀರು ತುಂಬಿಕೊಂಡ ಮೇಲೆ, ಬಹಳ ವರ್ಷಗಳ ಕಾಲ ಬತ್ತಿ ಹೋಗಿದ್ದ ಮಾದನಹಿಪ್ಪರಗಾದ ಊರ ಮುಂದಿನ ಹಳ್ಳಕ್ಕೆ ಜೀವ ಬಂದಿದೆ. ಚೆಕ್‌ಡ್ಯಾಂನಲ್ಲಿ ಮೊದಲ ಮಳೆಗೇ ನಾಲ್ಕಡಿ ನೀರು ತುಂಬಿಕೊಂಡಿದೆ. ಇನ್ನೊಂದು ಮಳೆಯಾದರೆ ಸಾಕು, ಊರಿನ ಬಾವಿ, ಬೋರ್‌ವೆಲ್‌ಗಳೂ ತುಂಬುತ್ತವೆ. ದನಗಳ ಕುಡಿಯುವ ನೀರಿನ ಚಿಂತೆ ಇರುವುದಿಲ್ಲ ಎನ್ನುವುದು ಊರಿನ ಹಿರಿಯ ವಿಠಲ ಜಿಡ್ಡಿಮನಿ ಅವರ ಅಭಿಪ್ರಾಯ.

ಬರಗಾಲದಿಂದಾಗಿ ಮೂರು ವರ್ಷಗಳಿಂದ ಏನನ್ನೂ ಬೆಳೆಯಲು ಸಾಧ್ಯವಾಗಲಿಲ್ಲ ಎನ್ನುತ್ತಿದ್ದ ರಾಜಶೇಖರ ಗಡ್ಡದ ಅವರಿಗೆ, ಈ ಯೋಜನೆ ಫಲ ನೀಡಿದೆ. ಅಂತರ್ಜಲಕ್ಕಾಗಿ ಕೊರೆ ನಾಲಾದಲ್ಲಿ ನೀರು ನಿಂತಿದ್ದರಿಂದ ಇವರ ಬಾವಿಗೂ ನೀರು ಬಂದಿದೆ. ಅಂದಾಜು ಎಂಟು ಎಕರೆ ಕೃಷಿಗೆ ಸಾಲುತ್ತದೆ ಎನ್ನುತ್ತಾರೆ ಅವರು. ಮುಂದೆ ಬೇಸಿಗೆ ಬೆಳೆಯಾಗಿ ದ್ರಾಕ್ಷಿ, ಕಲ್ಲಂಗಡಿ, ನುಗ್ಗೆ ಬೆಳೆಯಲು ಉಪಾಯ ಮಾಡಿಕೊಂಡಿದ್ದಾರೆ.

ಬಿಸಿಲುನಾಡಿನಲ್ಲಿ ಅನುಷ್ಠಾನಗೊಂಡಿರುವ ಒಂದು ಜಲಸಂರಕ್ಷಣೆ ಯೋಜನೆ, ಅನೇಕ ಗ್ರಾಮಗಳಿಗೆ ‘ನೀರಾಸರೆ’ಯಾಗುತ್ತಿದೆ 

‘ಮಹಾರಾಷ್ಟ್ರ ಸರ್ಕಾರ ಪ್ರಸಕ್ತ ಸಾಲಿನಲ್ಲಿ ಈ ಯೋಜನೆಗೆ ‘ಜಲಯುಕ್ತ ಶೀವಾರ (ಜಲಯುಕ್ತ ಪ್ರದೇಶ)’ ಎಂದು ಹೆಸರಿಟ್ಟಿದ್ದು, ಬಜೆಟ್‌ನಲ್ಲಿ ಅನುದಾನ ಮೀಸಲಿಟ್ಟಿದೆ. ಅಷ್ಟರಮಟ್ಟಿಗೆ ಅಲ್ಲಿನ ರೈತರು ಈ ಯೋಜನೆಯಿಂದ ಪ್ರೇರೇಪಿತರಾಗಿದ್ದಾರೆ. ಇದು ನೂರಕ್ಕೆ ನೂರರಷ್ಟು ಫಲ ನೀಡುತ್ತದೆ. ನೂರಾರು ಕೋಟಿ ಹಣ ಸುರಿದು ಜಲಮೂಲಗಳನ್ನು ಸೃಷ್ಟಿಸುವುದರಲ್ಲಿ ಅರ್ಥವಿಲ್ಲ. ಸಣ್ಣ ಪ್ರಮಾಣದ ಅನುದಾನ ಬಳಸಿಕೊಂಡು, ನೈಸರ್ಗಿಕವಾಗಿ ಇರುವ ತೊರೆ– ಹಳ್ಳ– ಕೊಳ್ಳಗಳನ್ನು ಬಳಸಿಕೊಂಡರೆ ಅಂತರ್ಜಲ ಹೆಚ್ಚಿಸಬಹುದು ಎಂದು ಸಾಧಿಸಿ ತೋರಿಸಿದ್ದಾರೆ. ಈ ಪ್ರಯೋಗ ನಮ್ಮ ರಾಜ್ಯದ ಎಲ್ಲೆಡೆ ಮಾಡಬೇಕು’

 ಬಿ.ಆರ್‌.ಪಾಟೀಲ, ಮಾಜಿ ಶಾಸಕರು, ಆಳಂದ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು