ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳೆದವರೇ ಮೌಲ್ಯ ವರ್ಧಿಸಿದಾಗ

Last Updated 2 ಡಿಸೆಂಬರ್ 2019, 19:30 IST
ಅಕ್ಷರ ಗಾತ್ರ

ಬೆಳೆ ಬೆಳೆದವರೇ ಮೌಲ್ಯ ವರ್ಧಿಸಿದರೆ, ಉತ್ಪನ್ನಗಳಿಗೆ ಅವರೇ ಬೆಲೆಯನ್ನೂ ನಿಗದಿಪಡಿಸಬಹುದು. ಈಗ ಈಶ್ವರ ಮುಳೆ ದಂಪತಿ ಮೂರು ಎಕರೆ ಜಮೀನಿನಲ್ಲಿ ಅದೇ ಕೆಲಸ ಮಾಡುತ್ತಿದ್ದಾರೆ. ಉತ್ಪನ್ನಗಳ ಮಾರಾಟಕ್ಕೆ ಮಳಿಗೆಯನ್ನೇ ತೆರೆದಿದ್ದಾರೆ.

‘ನಾನೀಗ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಮಾಡುತ್ತಿರುವೆ. ಒಂದು ಬಾರಿ ನೀವು ಬರಲೇಬೇಕು’ ಎಂದು ಆಗ್ರಹಿಸುತ್ತಿದ್ದರು ಬೆಳಗಾವಿ ಜಿಲ್ಲೆ ರಾಯಬಾಗ ತಾಲ್ಲೂಕಿನ ಯಬರಟ್ಟಿ ಗ್ರಾಮದ ಈಶ್ವರ ಉಮ್ಮಣ್ಣ ಮುಳೆ. ಒಂದು ದಿನ ಅವರಲ್ಲಿಗೆ ಭೇಟಿ ನೀಡುವ ಸಂದರ್ಭ ಒದಗಿ ಬಂತು.

ಅವರದ್ದು ಒಂದು ಪುಟ್ಟ ಮಳಿಗೆ ಇತ್ತು. ಅಲ್ಲಿಗೆ ನನ್ನನ್ನು ಬರಮಾಡಿಕೊಂಡು ಉಭಯ ಕುಶಲೋಪರಿಯ ನಂತರ ಹಿಟ್ಟಿನ ಪ್ಯಾಕೆಟ್ ಕೈಗಿಟ್ಟು ನೋಡಿ ಎಂದರು. ‘ಅರೇ ಎಷ್ಟು ಹಗುರವಿದೆ. ಇದು ಶುದ್ಧ ಕಡಲೆಹಿಟ್ಟು’ ಎಂದು ಉದ್ಘರಿಸಿದೆ.

ನಂತರ ಬೆಲ್ಲದ ಚೂರೊಂದು ಕೈಗಿಟ್ಟು, ‘ರುಚಿ ನೋಡಿ’ ಎಂದರು. ‘ವಾವ್‌, ಶುಂಠಿ ಬೆರೆತ ಇದರ ಸವಿ ವಿಶೇಷ. ಇದು ಮಸಾಲೆ ಬೆಲ್ಲ’ – ಮತ್ತೆ ಖುಷಿಯಿಂದ ಹೇಳಿದೆ. ‘ಕಷಾಯ ಮಾಡಿ ಕುಡಿದರೆ, ಶೀತ ಮಾರುದ್ದ ದೂರ’ ಎಂದು ಈಶ್ವರ ವಿವರಣೆ ಮುಂದುವರಿಸಿದರು.

ಮಳಿಗೆಯಲ್ಲಿ ಗಾಜಿನ ಕಪಾಟಿನಲ್ಲಿ ಶಿಸ್ತಿನಿಂದ ಜೋಡಿಸಿದ್ದ ಬಳಕೆಗೆ ಸಿದ್ಧವಾಗಿರುವ ರಾಗಿಹಿಟ್ಟು, ಸದಕದ ರವೆ, ಮಸಾಲೆಪುಡಿ, ಕಷಾಯಪುಡಿ, ಅರಿಸಿನಪುಡಿ, ಕಡಲೆ, ತೊಗರಿಬೇಳೆ, ವಿವಿಧ ಕಾಳುಗಳು, ಬೆಲ್ಲ, ಕಾಕಂಬಿ, ಜೇನು, ನವಣೆ ಅಕ್ಕಿ, ಸಾವೆ ಅಕ್ಕಿ, ಬರಗು.. ಅಚ್ಚುಕಟ್ಟಾಗಿ ಜೋಡಿಸಿದ್ದರು. ಜೊತೆಗೆ ತಾಜಾ ಕಬ್ಬಿನ ಹಾಲು ಮಾರಾಟಕ್ಕೆ ಸಿದ್ಧಗೊಳ್ಳುತ್ತಿತ್ತು.

ಹನ್ನೆರಡು ವರ್ಷಗಳಿಂದ ವಿಷಮುಕ್ತ ಕೃಷಿ ಮಾಡುತ್ತಿದ್ದಾರೆ ಈಶ್ವರ ಮುಳೆ. ಮೂರೂವರೆ ಎಕರೆ ಜಮೀನಿನಲ್ಲಿ ಬೆಳೆ ವೈವಿಧ್ಯವಿದೆ. ಕೊಳವೆ ಬಾವಿಯಿಂದ ಸಿಗುವ ಒಂದಿಂಚು ನೀರು ಸವಳು. ಹೊಳೆನೀರು ಹರಿಯುವ ಕಾಲುವೆಯ ಕೊನೆಯ ಭಾಗದಲ್ಲಿ ಜಮೀನು ಇರುವುದರಿಂದ ಹೊಳೆ ನೀರು ಸಿಕ್ಕರೆ ಪುಣ್ಯ. ಹೀಗಾಗಿ, ಕೊಳವೆಬಾವಿ ನೀರು ಮತ್ತು ಸಿಗುವ ಹೊಳೆ ನೀರನ್ನು ಪ್ಲಾಸ್ಟಿಕ್ ಹೊದಿಕೆಯ (45 ಅಡಿ ಉದ್ದ 12ಅಡಿ ಅಗಲ 15ಅಡಿ ಆಳ ಅಳತೆ) ಹೊಂಡದಲ್ಲಿ ಶೇಖರಿಸುತ್ತಾರೆ. ಹನಿ ನೀರಿನ ಮೂಲಕ ಜೀವಸಾರ ದ್ರವ ಬೆರೆಸಿ ಬೆಳೆಗೆ ಒದಗಿಸುತ್ತಾರೆ.

ಬೆಳೆ ಹಂಚಿಕೆ, ವಿನ್ಯಾಸ

ಮೂರು ಎಕರೆ ಜಮೀನಿನಲ್ಲಿ ಎರಡು ಎಕರೆ ಕಬ್ಬು, ಅರ್ಧ ಎಕರೆ ಅರಿಸಿನ, 10 ಗುಂಟೆ ಬಾಳೆ(ಸ್ಥಳೀಯ) ಅರ್ಧ ಎಕರೆಯಲ್ಲಿ ನವಣೆ, ಸಾವೆ, ಬರಗು ಹೀಗೆ ವಿಭಿನ್ನ ಬೆಳೆ ಸಂಯೋಜನೆ ಇದೆ. ಲಭ್ಯ ನೀರಿನಲ್ಲಿ ಬೆಳೆ ಬೆಳೆದು, ಅವುಗಳನ್ನು ಮೌಲ್ಯವರ್ಧಿಸಿ ಮಾರಾಟ ಮಾಡುವ ವ್ಯವಸ್ಥೆ ಮಾಡಿಕೊಂಡಿದ್ದಾರೆ.

‘ಮಿತ ನೀರು ಬಳಸಿ ಕೃಷಿ ಮಾಡಬೇಕು ’– ಈ ಪಾಠವನ್ನು ನಾನು ಕಲಿತಷ್ಟು ಬೇರಾರು ತಿಳಿಯಲು ಸಾಧ್ಯವಿಲ್ಲ. ‘ನೀಗದ (ಕೈಲಾಗದ) ಬೆಳೆ ಬೆಳೆಯಲು ಹೋಗಿ ಆಳು, ಮಾರ್ಕೆಟ್‌, ಸೂಕ್ತ ಬೆಲೆ ಸಿಗದೇ ಸಮಸ್ಯೆ ಎದುರಿಸಿ ಕೃಷಿಯಲ್ಲಿ ನೆಲಕಚ್ಚುವುದಕ್ಕಿಂತ, ಕಡಿಮೆ ಬೆಳೆದು, ಆ ಬೆಳೆಗೆ ಉತ್ತಮ ಬೆಲೆ ಪಡೆದು ಜೀವನಪಥ ರೂಪಿಸುವ ಸುಸ್ಥಿರತೆಯತ್ತ ನನ್ನ ಹೆಜ್ಜೆ’ ಎನ್ನುತ್ತಾರೆ ಈಶ್ವರ.

ಅಂತರಬೆಳೆಯ ವೈಶಿಷ್ಟ್ಯ

ಬೆಲ್ಲ, ಕಾಕಂಬಿ ತಯಾರಿಕೆಗೆ ಸಿಓ-671 ಹಾಗೂ ಸಿಓ-86032 ತಳಿ ಹಾಗೂ ತಾಜಾ ಕಬ್ಬಿನ ಹಾಲು ತೆಗೆಯಲು ಸಿಓ-91010,ಸಿಓ-10001 ಸೂಕ್ತ ತಳಿಗಳು. ಅರ್ಧ ಎಕರೆಗೆ ಒಂದೊಂದು ತಳಿಯಂತೆ ವಿಭಿನ್ನ ಅವಧಿಯಲ್ಲಿ ನಾಟಿ ಮಾಡಿದ್ದಾರೆ. ಮರಿಗಳನ್ನು ಬಿಟ್ಟು ಬಳಕೆಗೆ ಯೋಗ್ಯ ಪಕ್ವ ಗಣಿಕೆಗಳನ್ನು(ಗೆಣ್ಣುಗಳು) ಉತ್ಪನ್ನ ತಯಾರಿಕೆಗೆ ಬಳಸುತ್ತಾರೆ. 5, 6 ಹಾಗೂ 9 ಅಡಿ ಸಾಲುಗಳ ವಿವಿಧ ಅಂತರದಲ್ಲಿ ಕಬ್ಬು ನಾಟಿ ಮಾಡಿದ್ದಾರೆ.

ಕಬ್ಬಿನಲ್ಲಿ ಅಂತರ ಬೆಳೆಯಾಗಿ ಅಲಸಂದೆ, ಮಡಿಕೆ, ಅಗಸೆ, ಹೆಸರು, ಉದ್ದು ಹಾಗೂ ತರಕಾರಿ ಬೆಳೆಯುತ್ತಾರೆ. ಇವುಗಳ ಕಟಾವಿನ ನಂತರ ಸಾಲುಗಳ ನಡುವೆ ರವದೆ ಹರಡಿ ತೇವಾಂಶ ಕಾಯುವುದರೊಂದಿಗೆ ಕಳೆ ನಿರ್ವಹಣೆ ಮಾಡುತ್ತಾರೆ. ಕಬ್ಬಿನ ಹಾಲು ತಯಾರಿಕೆಗೆ ಒಂದು ಬದಿಯಿಂದ ಗಣಿಕೆ ಕಟಾವು ಮಾಡುತ್ತ ಬರುತ್ತಾರೆ.

ಸಂಸ್ಕರಣೆ ಹಾಗೂ ಮೌಲ್ಯವರ್ಧನೆ

‘12 ರಿಂದ 14 ಗಣಿಕೆ ಹೊಂದಿರುವ ಒಂದು ಕಬ್ಬು ಗಳದಿಂದ 1.5 ಲೀಟರ್ ಹಾಲು ಲಭ್ಯ’ ಎನ್ನುತ್ತಾರೆ ಈಶ್ವರ ಮುಳೆ. 1 ಲೋಟ (250ಮಿಲಿ) ಕಬ್ಬಿನ ಹಾಲಿಗೆ ₹15 ದರ. ಬೇಸಿಗೆಯಲ್ಲಿ ಒಂದು ದಿನಕ್ಕೆ 350 ರಿಂದ 400 ಲೀಟರ್ ತಾಜಾ ಹಾಲು ಮಾರಾಟವಾದರೆ, ಉಳಿದ ಅವಧಿಯಲ್ಲಿ 80 ರಿಂದ 100ಲೀ. ಮಾರಾಟವಾಗುತ್ತದೆ.

80 ರಿಂದ 100ಲೀ ಸಾಮರ್ಥ್ಯದ ಕಬ್ಬಿನ ಹಾಲು ಕುದಿಸುವ ಸಣ್ಣ ಕಡಾಯಿ ಇದ್ದು, ಬೆಲ್ಲ ತಯಾರಿಕೆಗೆ ಬಳಸುತ್ತಾರೆ. ಪೌಡರ್ ಬೆಲ್ಲ, 1 ಕೆಜಿ ತೂಕದ ಅಚ್ಚು ಬೆಲ್ಲ ಹಾಗೂ ಕಾಕಂಬಿ ಇಲ್ಲಿ ಉತ್ಪಾದನೆಯಾಗುತ್ತದೆ.

ಹಿಟ್ಟು, ನುಚ್ಚು, ರವೆ ಒಡೆಯಲು 2ಎಚ್.ಪಿ ಸಾಮರ್ಥ್ಯದ ಗಿರಣಿ ಇದೆ. ಮಸಾಲೆ ಚಟ್ನಿಪುಡಿ, ಮೆಣಸಿನಕಾಯಿ ಪುಡಿ, ರಾಗಿಹಿಟ್ಟು ತಯಾರಿಕೆಗೆ ಹಾಗೂ ಸಿರಿಧಾನ್ಯಗಳನ್ನು ಪಾಲಿಶ್ ಮಾಡಲು ಬಳಸುತ್ತಾರೆ. ಪಾಲಿಶ್ ಮಾಡಿದ ಸಿರಿಧಾನ್ಯ ಅಕ್ಕಿ ಕೆಜಿಗೆ ₹120 ರಿಂದ ₹180 ದರ. ಪ್ರತಿ ಕೆಜಿಗೆ ಪೆಂಟಿಬೆಲ್ಲಕ್ಕೆ ₹ 60 ಹಾಗೂ ಪುಡಿಬೆಲ್ಲಕ್ಕೆ ₹130. ತಮ್ಮಲ್ಲಿ ಬೆಳೆದ ಬೆಳೆ ಮೌಲ್ಯವರ್ಧನೆಗೊಂಡು ಮಾರಾಟವಾಗುತ್ತದೆ. ಇನ್ನೂ ಕಡಿಮೆ ಬಿದ್ದಲ್ಲಿ ಇತರ ರೈತರಿಂದ ಖರೀದಿಸಿ ಮೌಲ್ಯವರ್ಧನೆಗೆ ಬಳಸುತ್ತಾರೆ. ನಿತ್ಯ ಸರಾಸರಿ ₹ 900ರಿಂದ₹1000 ಆದಾಯ.

ಕುಟುಂಬದ ಸಹಕಾರ..

ಪತ್ನಿ ಚಿನ್ನಮ್ಮ, ಸದಾ ಈಶ್ವರ ಅವರ ಕೃಷಿಕಾರ್ಯಗಳಿಗೆ ನೆರಳಾಗಿರುತ್ತಾರೆ. ಜತೆಗೆ ಕೃಷಿ ಉತ್ಪನ್ನಗಳ ತಯಾರಿಕೆಯಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ. ಸುತ್ತಲಿನ ಹಳ್ಳಿಗಳಿಂದ ಮೌಲ್ಯವರ್ಧಿತ ಉತ್ಪನ್ನಗಳಿಗೆ ಅಪಾರ ಬೇಡಿಕೆ ಇದೆ. ಕೆಲವರು ಕರೆ ಮಾಡಿ ದರ ವಿಚಾರಿಸಿ, ಲಭ್ಯತೆ ಬಗ್ಗೆ ಖಚಿತಪಡಿಸಿಕೊಂಡು ಒಂದೊಂದು ಊರಿನಿಂದ ಐದಾರು ಕುಟುಂಬದ ಬೇಡಿಕೆಯನ್ನು ಸಂಗ್ರಹಿಸಿಕೊಂಡು ಬಂದು ಖರೀದಿಸಿ ಒಯ್ಯತ್ತಾರೆ.

ಉದ್ಯೋಗದಲ್ಲಿದ್ದವರಿಗೆ ನಿವೃತ್ತಿಯಾದರೆ, ಪಿಂಚಣಿ ಸಿಗುತ್ತದೆ. ದುಡಿಮೆಯೇ ಜೀವನವಾಗಿ ಬದುಕು ಸವೆಸುವ ಕೃಷಿಕನಿಗೆ ಎಲ್ಲಿದೆ ನಿವೃತ್ತಿ? ಎಲ್ಲಿದೆ ಪಿಂಚಣಿ? – ಈ ಪ್ರಶ್ನೆಗೆ ಉತ್ತರ ಕಂಡುಕೊಂಡಿದ್ದಾರೆ ಈಶ್ವರ ಮುಳೆ. ದಶಕಗಳಿಂದ ಹತ್ತು ಹಲವು ಏರಿಳಿತದ ನಡುವೆ ಕೃಷಿ ನನ್ನ ಕೈಬಿಡದೆ ಕಾಪಾಡಿದೆ. ‘ನನ್ನ ಬೆಳೆಸಿದ ಕೃಷಿ ನಾನುಳಿಸುವೆ. ಕೃಷಿ ಬೆಳೆಗಳ ಸಂಸ್ಕರಿಸಿ ಮಾಡಿದ ಉತ್ಪನ್ನಗಳ ಮಾರಾಟದಿಂದ ನೆಮ್ಮದಿ ಕಾಣುತ್ತಿರುವೆ’ ಎಂದು ಆಶಾದಾಯಕ ನುಡಿಯನ್ನಾಡುತ್ತಾರೆ.

ಸಂತೃಪ್ತ ಜೀವನ..

ಎಂ.ಫಾರ್ಮಾ ಓದಿರುವ ಹಿರಿಯ ಮಗ ಫಾರ್ಮಾಸಿಸ್ಟ್‌ ಉದ್ಯೋಗ ನಿಮಿತ್ತ ಕೆನಡಾ ದೇಶದಲ್ಲಿದ್ದಾರೆ. ಎಂ.ಬಿ.ಎ ಓದಿರುವ ಕಿರಿಯ ಮಗ ಮಾರ್ಕೆಟಿಂಗ್ ಅಧಿಕಾರಿಯಾಗಿ ಮೈಸೂರಿನಲ್ಲಿದ್ದಾರೆ. ಇನ್ನೊಬ್ಬ ಮಗ ಜೊತೆಯಲ್ಲಿದ್ದರೂ ಖಾಸಗಿ ಉದ್ಯೋಗದಲ್ಲಿದ್ದಾರೆ. ಕೃಷಿ ಒಡನಾಟದಲ್ಲಿ ಸಂಗಾತಿ ಚಿನ್ನಮ್ಮ ಅವರೊಂದಿಗೆ ಸಂತೃಪ್ತ ಜೀವನ ಮುಂದುವರೆದಿದೆ.

ಪ್ರೌಢಶಿಕ್ಷಣದ ಆರಂಭದಲ್ಲೇ ವಿದ್ಯೆಗೆ ತಿಲಾಂಜಲಿ ಹೇಳಿದ ಇವರದು ಕೃಷಿಯಲ್ಲಿ ಅನುಭವದ ಮೇರು ಜ್ಞಾನ. 62ರ ವಯಸ್ಸಿನಲ್ಲೂ ಬತ್ತದ ಉತ್ಸಾಹ, ಶ್ರಮದ ದುಡಿಮೆ, ತಗ್ಗದ ಉಮೇದು. ಕೃಷಿ ಲಾಭ ಇಲ್ಲ ಎಂದು ಉದ್ಯೋಗ ಅರಸಿ ಪಟ್ಟಣ ಸೇರಲಿಚ್ಛಿಸುವವರಿಗೆ ಮಾದರಿಯಾಗುತ್ತಾರೆ ಈ ದಂಪತಿ.

ಬಿಡುವಿನಲ್ಲಿ ಜಾಲಿ ರೈಡ್..

ಮನೆ ಮುಂದೆ ನಿಂತ ಸ್ವಿಫ್ಟ್ ಕಾರು ತೋರಿಸುತ್ತ ನುಡಿದ ಈಶ್ವರ ಇವರ ಮಾತು ಹೀಗಿತ್ತು: ‘ದುಡಿಮೆ ಖುಷಿ ನೀಡಿದ ವೃತ್ತಿ ಹೌದು. ದಿನನಿತ್ಯದ ದುಡಿಮೆ ಏಕತಾನತೆಯಿಂದ ಬೇಸರವೆನಿಸಿದಾಗ, ಅಲ್ನೋಡಿ ಕಾರ್.. .. ಅದರಲ್ಲಿ ಜಮ್ ಅಂತ ಸುತ್ತಾಡುತ್ತೇವೆ. ಬೇಕೆನಿಸಿದಲ್ಲಿ ಹೋಗಿಬರುತ್ತೇವೆ. ಆಳಾಗಿ ದುಡಿದು, ಅರಸನಾಗಿ ಉಣ್ಣುವ ಭಾಗ್ಯ ಈ ಮಣ್ಣು ನೀಡಿದೆ’ ಮಣ್ಣಿನಲ್ಲಿ ಅನ್ನ, ಚಿನ್ನ ಕಂಡ ವ್ಯಕ್ತಿ ಸದಾ ಸ್ಮರಣೀಯ ಅನುಕರಣೀಯ. ಮಾತು ಸತ್ಯ.

ಉತ್ಪನ್ನಗಳ ಮಾರಾಟ ಶೈಲಿ

ಕಬ್ಬಿನ ಹಾಲು ಕುಡಿದು, ಮೌಲ್ಯವರ್ಧಿತ ಪದಾರ್ಥ ಖರೀದಿಸುವವರಿಗೆ 1ಸಿವುಡು ಕರಿಬೇವು ಉಚಿತ! ಚಟ್ನಿ, ಬೆಲ್ಲ, ಕಾಕಂಬಿ ರುಚಿ ಸವಿಯ ಬಯಸುವವರಿಗೆ ಮಾದರಿಯೂ(ಸ್ಯಾಂಪಲ್) ಲಭ್ಯ. ಕಬ್ಬಿನ ಹಾಲು ಹಾಕಲು ಬಳಸುವ ಗ್ಲಾಸ್ ಪರಿಸರ ಸ್ನೇಹಿ. ಹಾಲು ಕುಡಿದ ನಂತರ ಆ ಗ್ಲಾಸ್‌ ಮತ್ತೆ ಕಾಂಪೂಸ್ಟ್‌ ಗುಂಡಿ ಸೇರಿ ಗೊಬ್ಬರ ಆಗುತ್ತದೆ. ತಮ್ಮದೇ ತೋಟದ ಪೇರಲ, ಬಾಳೆ, ದಾಳಿಂಬೆ, ಸೀತಾಫಲ, ಲಿಂಬೆ ಹಾಗೂ ಮಾವು ಹಂಗಾಮಿಗನುಗುಣವಾಗಿ ಮಾರಾಟವಾಗುತ್ತದೆ. ಕಬ್ಬಿನ ಹಾಲು ಮಾರಾಟಕ್ಕೆ ಜೊತೆ ನೀಡುವ ಇವುಗಳಿಗೆ ಮನೆ ಮುಂದಿನ ಪುಟ್ಟ ಮಳಿಗೆಯೇ ಆಶ್ರಯ.

ಈಶ್ವರ ಅವರ ಸಂಪರ್ಕ ಸಂಖ್ಯೆ 9632609640 (ಸಮಯ ಸಂಜೆ 6 ರಿಂದ 8ರವರೆಗೆ) ಚಿತ್ರಗಳು: ಲೇಖಕರವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT