ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ತೋಟಗಾರಿಕೆ ಮೇಳ: ಪ್ರಾಣಿಗಳ ಮೂಳೆಯಿಂದ ಗೊಬ್ಬರ ತಯಾರಿಕೆ

Last Updated 25 ಫೆಬ್ರುವರಿ 2023, 22:00 IST
ಅಕ್ಷರ ಗಾತ್ರ

ಬೆಂಗಳೂರು: ಸಾಮಾನ್ಯವಾಗಿ ಬೆಳೆಗಳಿಗೆ ಸಾವಯವ ಮತ್ತು ರಾಸಾಯನಿಕ ಗೊಬ್ಬರ ಬಳಸಲಾಗುತ್ತದೆ. ಆದರೆ, ಈಗ ಮಾರುಕಟ್ಟೆಗೆ ಪ್ರಾಣಿಗಳ ಮೂಳೆಯಿಂದ (ಬೋನ್‌ ಮೀಲ್‌) ತಯಾರಿಸಿದ ಗೊಬ್ಬರ ಬಂದಿದೆ.

ಮೈಸೂರಿನ ಫ್ಯಾಮ್ಕೊ ಕಂಪನಿ ಈ ಗೊಬ್ಬರನ್ನು ತಯಾರಿಸಿ ಮಾರಾಟ ಮಾಡುತ್ತಿದೆ. ಬೆಂಗಳೂರಿನ ಹೆಸರಘಟ್ಟದಲ್ಲಿರುವ ಭಾರತೀಯ ಸಂಶೋಧನಾ ಸಂಸ್ಥೆ (ಐಐಎಚ್‌ಆರ್) ಆಯೋಜಿಸಿದ್ದ ನಾಲ್ಕು ದಿನಗಳ ರಾಷ್ಟ್ರೀಯ ತೋಟಗಾರಿಕೆ ಮೇಳದಲ್ಲಿ ಬೋನ್‌ ಮೀಲ್‌ ರೈತರ ಗಮನ ಸೆಳೆಯಿತು.

‘ಅಡಿಕೆ, ತೆಂಗು, ರಬ್ಬರ್, ಶುಂಠಿ ಬೆಳೆಗಳಿಗೆ ಈ ಬೋನ್‌ ಮೀಲ್‌ (ಮೂಳೆಗೊಬ್ಬರ) ಹೆಚ್ಚಿನ ರಂಜಕ ಅಂಶವನ್ನು ಒದಗಿಸುವುದರಿಂದ ವೇಗವಾಗಿ ಬೆಳವಣಿಗೆ ಹೊಂದುತ್ತವೆ. ಇದು ಸಾವಯವ
ಗೊಬ್ಬರವಾಗಿದ್ದು, ಸಸ್ಯಗಳ ನಿರಂತರ ಬೆಳವಣಿಗೆಗೆ ಪೂರಕವಾಗಿದೆ. ಸಸ್ಯಗಳ ಜೀವಕೋಶದ ಗೋಡೆಗಳನ್ನು ಬಲಪಡಿಸುವುದರ ಜೊತೆಗೆ ಆರೋಗ್ಯಕರ ಬೆಳೆವಣಿಗೆಗೂ ಉತ್ತೇಜನ ನೀಡುತ್ತದೆ’ ಎಂದು ಕಂಪನಿಯ ಮಾರಾಟಗಾರ ಅಬ್ದುಲ್‌ ಅಲೀಮ ಮಾಹಿತಿ ನೀಡಿದರು.

‘ದ್ಯುತಿ ಸಂಶ್ಲೇಷಣೆ, ಬೀಜ ಉತ್ಪಾದನೆ ಮತ್ತು ಸಸ್ಯದೊಳಗಿನ ಶಕ್ತಿಯ ವರ್ಗಾವಣೆ ಮಾಡುವಲ್ಲಿ ಬೋನ್‌ ಮೀಲ್‌ ಪ್ರಮುಖ ಪಾತ್ರ ವಹಿಸುತ್ತದೆ. ನೈಸರ್ಗಿಕ ವಿಘಟನೆಯ ಪ್ರಕ್ರಿಯೆಯು ಮಣ್ಣಿನಲ್ಲಿರುವ ಸೂಕ್ಷ್ಮ ಜೀವಿಗಳಿಗೆ ಆಹಾರವನ್ನು ನೀಡುತ್ತದೆ. ಈ ಗೊಬ್ಬರದಲ್ಲಿ ಹೆಚ್ಚಿನ ಮ್ಯಾಗ್ನೀಶಿಯಂ, ಕಬ್ಬಿಣದಂತಹ ಪೋಷಕಾಂಶಗಳಿದ್ದು, ಒಂದು ವರ್ಷದವರೆಗೆ ಬಾಳಿಕೆ ಬರುತ್ತದೆ’ ಎಂದರು.

‘ತೆಂಗಿನಕಾಯಿ ಗಿಡವೊಂದಕ್ಕೆ 3–4 ಕೆ.ಜಿ., ಅಡಿಕೆ ಗಿಡಕ್ಕೆ 600 ಗ್ರಾಂನಂತೆ ವರ್ಷದಲ್ಲಿ ಎರಡು ಬಾರಿ ನೀಡಬೇಕು. ಒಂದು ಎಕರೆ ಪ್ರದೇಶದಲ್ಲಿ ಬೆಳೆದ ಶುಂಠಿಗೆ ಮೊದಲ ಹಂತದಲ್ಲಿ 600 ಕೆ.ಜಿ. ಮತ್ತು ಎರಡನೇ ಹಂತದಲ್ಲಿ 750 ಕೆ.ಜಿ. ಹಾಕಬೇಕು. ರಬ್ಬರ್‌ನ ಗಿಡವೊಂದಕ್ಕೆ 1 ಕೆ.ಜಿ., ಒಂದು ಎಕರೆ ಪ್ರದೇಶದಲ್ಲಿ ಬೆಳೆದ ಗುಲಾಬಿ ಮತ್ತು ಇತರೆ ಹೂವಿನ ಗಿಡಗಳಿಗೆ 700 ಕೆ.ಜಿ. ನೀಡಬೇಕು. ದೇಶದಲ್ಲಿರುವ ಕಸಾಯಿಖಾನೆಗಳಿಂದ ಮೂಳೆಗಳನ್ನು ಆಮದು ಮಾಡಿಕೊಂಡು ಈ ಗೊಬ್ಬರವನ್ನು ತಯಾರಿಸಲಾಗುತ್ತಿದೆ. ಕೇರಳ ಮತ್ತು ತಮಿಳುನಾಡಿನಲ್ಲಿ ಇದಕ್ಕೆ ಭಾರಿ ಬೇಡಿಕೆ’ ಇದೆ ಎಂದು ಅವರು ತಿಳಿಸಿದರು.

ಒಂದು ಟನ್‌ ಮೂಳೆ ಗೊಬ್ಬರಕ್ಕೆ ₹29 ಸಾವಿರ ದರ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT