ಗುರುವಾರ , ಫೆಬ್ರವರಿ 27, 2020
19 °C

ಪೆನ್ಸಿಲ್‌ ಸಿಪ್ಪೆಯಿಂದ ಸಾವಯವ ಗೊಬ್ಬರ!

ಪೃಥ್ವಿರಾಜ್ Updated:

ಅಕ್ಷರ ಗಾತ್ರ : | |

Prajavani

ಈಚೆಗೆ ದೆಹಲಿಯಲ್ಲಿ ನಡೆದ ರಾಷ್ಟ್ರಮಟ್ಟದ ಆವಿಷ್ಕಾರ್ ಮೇಕಥಾನ್ ಸ್ಪರ್ಧೆಯಲ್ಲಿ ನೂರಾರು ಶಾಲೆಗಳ ವಿದ್ಯಾರ್ಥಿಗಳು ಹೊಸ ಹೊಸ ಆಲೋಚನೆಗಳೊಂದಿಗೆ, ವಿಶೇಷ ವಸ್ತು–ಉಪಕರಣಗಳ ಮಾದರಿಗಳನ್ನು ಪ್ರದರ್ಶಿಸಿ ಗಮನ ಸೆಳೆದರು.

ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದ, ನಗರದ ಟ್ರೈಯೊ ವರ್ಲ್ಡ್‌ ಶಾಲೆಯಲ್ಲಿ 4ನೇ ತರಗತಿಯಲ್ಲಿ ಓದುತ್ತಿರುವ ಶರಣವ್ಯ, ಪರಿಸರ ಸ್ನೇಹಿ ಹಾಗೂ ನೀರಿನ ಬಿಕ್ಕಟ್ಟನ್ನು ನಿವಾರಿಸುವ ವಿಶೇಷ ಆವಿಷ್ಕಾರದೊಂದಿಗೆ ಆಕರ್ಷಿಸಿದ್ದಾನೆ.

ಮರುಬಳಕೆ ಮಾಡಬಹುದಾದ ‘ಕ್ಲೇ ವುಡ್‌’ ಪೆನ್‌ ತಯಾರಿಸಿರುವ ಬಾಲಕ, ಇದಕ್ಕಾಗಿ ಪೆನ್ಸಿಲ್ ಸಿಪ್ಪೆಗಳಿಂದ ಪೆನ್ನಿನ ಹೊದಿಕೆಯನ್ನು ತಯಾರಿಸಿದ್ದಾನೆ. ಈ ಪೆನ್‌ ನೀರಿನಲ್ಲಿ ಕರಗುವ ಗುಣ ಹೊಂದಿರುವುದು ವಿಶೇಷವಾದರೆ, ಹೀಗೆ ಕರಗಿದ ವಸ್ತುವನ್ನು ಗಿಡದ ಬುಡದಲ್ಲಿ ಹಾಕಿದರೆ, ಅದು ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಿ ಗಿಡದ ಆರೈಕೆಗೆ ನೆರವಾಗುವಂತೆ ಮಾಡುವುದು ಮತ್ತೊಂದು ವಿಶೇಷ.

ಪೆನ್ಸಿಲ್‌ ಸಿಪ್ಪೆಗಳನ್ನು ಸಂಗ್ರಹಿಸುವುದಕ್ಕಾಗಿ ಹಾಗೂ ಪ್ಲಾಸ್ಟಿಕ್ ಶಾರ್ಪನರ್‌ ಬಳಕೆ ತಗ್ಗಿಸಲು ಮರದ ಹಲಗೆಗಳನ್ನು ಬಳಸಿ ಶಾರ್ಪನರ್ ಡಬ್ಬಿಗಳನ್ನು ತಯಾರಿಸಿದ್ದಾನೆ. ಚೂಪು ಮಾಡಿದಾಗ ಉದುರುವ ಸಿಪ್ಪೆ ಇದರಲ್ಲಿ ಸಂಗ್ರಹವಾಗುತ್ತದೆ.

ಹೀಗೆ ಸಂಗ್ರಹವಾಗುವ ಪೆನ್ಸಿಲ್‌ ಸಿಪ್ಪೆಯಿಂದಲೇ ಸಾವಯವ ಗೊಬ್ಬರವನ್ನೂ ತಯಾರಿಸಿರುವ ಶರಣವ್ಯ, ‘ಇದು ಕಳೆಯನ್ನು ನಿಯಂತ್ರಿಸಿ ಗಿಡದ ಬೆಳವಣಿಗೆಗೆ ನೆರವಾಗುತ್ತದೆ. ಇದರಿಂದ ಗಿಡ ನೀರು ಹೀರಿಕೊಳ್ಳುವ ಬಳಕೆಯೂ ಕಡಿಮೆ ಆಗಲಿದೆ’ ಎಂದು ವಿವರಿಸಿದ್ದಾನೆ.

ಹೀಗೆ ಪರಸ್ಪರ ಒಂದಕ್ಕೊಂದು ಪೂರಕವಾಗಿರುವಂತೆ ಒಟ್ಟು ನಾಲ್ಕು ಪರಿಕರಗಳನ್ನು ಬಾಲಕ ತಯಾರಿಸಿದ್ದಾನೆ.

ಜನಸ್ನೇಹಿ, ಲಾಭ ಹಾಗೂ ಪರಿಸರಸ್ನೇಹಿ ಎಂಬ ಮೂರು ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಈ ಮಾದರಿಯನ್ನು ತಯಾರಿಸಿದ್ದು, ಇದು ಉದ್ಯೋಗ ಸೃಷ್ಟಿಗೂ ನೆರವಾಗುತ್ತದೆ ಎಂಬುದು ಬಾಲಕನ ಆಶಯ. ತಾನು ಓದುತ್ತಿರುವ ಶಾಲೆಯ ಆವರಣದಲ್ಲಿ ಪೆನ್ಸಿಲ್‌ ಸಿಪ್ಪೆ ಸಂಗ್ರಹಿಸುವ ಡಬ್ಬಿಗಳನ್ನು ಅಳವಡಿಸಿದ್ದಾನೆ.

ಶರಣವ್ಯ ಸಿದ್ಧಪಡಿಸಿರುವ ಮಾದರಿ

ಮಕ್ಕಳಲ್ಲಿನ ಪ್ರತಿಭೆ ಮತ್ತು ಸೃಜನಾತ್ಮಕ ಕಲೆಯನ್ನು ಪ್ರದರ್ಶಿಸಲು ವೇದಿಕೆ ಕಲ್ಪಿಸುವುದಕ್ಕಾಗಿ ಆವಿಷ್ಕಾರ್‌ ಮೇಕಥಾನ್‌ ಈ ಸ್ಪರ್ಧೆಯನ್ನು ಆಯೋಜಿಸುತ್ತಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು