ಗುರುವಾರ , ಅಕ್ಟೋಬರ್ 22, 2020
24 °C

ಗಿಡ ಸೊಂಪಾಗಿ ಬೆಳೆಯಲು ಅಕ್ಕಿ ತೊಳೆದ ನೀರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಕ್ಷಿಣ ಭಾರತದಲ್ಲಿ ಬಹುತೇಕ ಜನರು ನಿತ್ಯ ಊಟಕ್ಕೆ ಬಳಸುವುದು ಅನ್ನವೇ. ಅಕ್ಕಿಯನ್ನು ಬೇಯಿಸುವ ಮುನ್ನ 2–3 ಸಲ ನೀರಿನಲ್ಲಿ ತೊಳೆದು ಶುದ್ಧಗೊಳಿಸುವುದು ರೂಢಿ. ಆದರೆ ಈ ನೀರನ್ನು ಬಳಸದೇ ಚೆಲ್ಲುವುದು ಕೂಡ
ಸಾಮಾನ್ಯ ಎಂಬಂತಾಗಿಬಿಟ್ಟಿದೆ. ಕೆಲವರು ಮಾತ್ರ ತಲೆಗೂದಲಿಗೆ, ತ್ವಚೆಯ ಅಂದಕ್ಕೆ ಈ ನೀರನ್ನು ಬಳಸುವುದಿದೆ. ಆದರೆ ಅಕ್ಕಿ ತೊಳೆದ ನೀರು ಅಥವಾ ಅಕ್ಕಚ್ಚನ್ನು ಗಿಡಗಳಿಗೆ ಹಾಕಿದರೆ ಅವು ಸೊಂಪಾಗಿ ಬೆಳೆಯುತ್ತವೆ ಗೊತ್ತೇ? ಜೊತೆಗೆ ಇದರಿಂದ ಕೀಟನಾಶಕ ಮತ್ತು ಗೊಬ್ಬರವನ್ನು ಕೂಡ ತಯಾರಿಸಬಹುದು.

ಅಕ್ಕಿ ತೊಳೆದ ನಂತರ ಬಸಿಯುವ ನೀರು ಮಾತ್ರವಲ್ಲ, ಕೆಲವೊಮ್ಮೆ ನೆನೆ ಹಾಕಿದ ಅಕ್ಕಿಯನ್ನಷ್ಟೇ ಬಳಸಿ ಚೆಲ್ಲುವ ನೀರನ್ನು ಕೂಡ ಗಿಡಗಳಿಗೆ ಹಾಕಬಹುದು.

ಅಕ್ಕಿ ತೊಳೆದ ನೀರಿನಲ್ಲಿ ವಿವಿಧ ಬಗೆಯ ಪೋಷಕಾಂಶಗಳಿವೆ. ಗಿಡಗಳ ಬೆಳವಣಿಗೆಗೆ ಇವು ಪೂರಕ. ಇದರಲ್ಲಿರುವ ಪ್ರೋಟಿನ್‌, ನಾರಿನಾಂಶ, ಅಮಿನೊ ಆಮ್ಲಗಳು, ಕ್ಯಾಲ್ಸಿಯಂ, ಫಾಸ್ಪರಸ್‌, ಕಬ್ಬಿಣ, ಸತು ಮೊದಲಾದ ಅಂಶಗಳು ತರಕಾರಿ ಗಿಡಗಳಿಗೆ, ಔಷಧಿ ಗಿಡಗಳಿಗೆ, ಹಾಗೆಯೇ ಮನೆಯ ಆಲಂಕಾರಿಕ ಗಿಡಗಳಿಗೆ ಬಳಸಬಹುದು. ಇದರಲ್ಲಿ ಹಲವು ಬಗೆಯ ವಿಟಮಿನ್‌ಗಳು, ಖನಿಜಾಂಶಗಳಿದ್ದು, ಇವು ಬೇರಿಗೆ ಸಾಕಷ್ಟು ಪೌಷ್ಟಿಕಾಂಶ ಒದಗಿಸುತ್ತವೆ. ಬೇರಿನಲ್ಲಿರುವ ಲ್ಯಾಕ್ಟೊ ಬೆಸಿಲೈ ಎಂಬ ಬ್ಯಾಕ್ಟೀರಿಯಾ ಬೆಳೆಯಲೂ ಇದು ಪೋಷಕಾಂಶ ಒದಗಿಸುತ್ತದೆ.

ಈ ನೀರನ್ನು ಹಾಗೆಯೇ ಬಳಸಬೇಕೆ ಎಂಬ ಪ್ರಶ್ನೆ ಏಳುವುದು ಸಹಜ. ಇದನ್ನು ಗಿಡಗಳಿಗೆ ನೇರವಾಗಿ ಹಾಕಬಹುದು. ಇದರಿಂದ ಅಗತ್ಯ ಪೋಷಕಾಂಶಗಳು ಲಭ್ಯ. ಆದರೆ ಕೀಟನಾಶಕದಂತೆ ಬಳಸುವುದಾದರೆ ನೈಸರ್ಗಿಕ ಪ್ರಕ್ರಿಯೆ ಅವಶ್ಯಕ. ಇದಕ್ಕಾಗಿ ಅಕ್ಕಿ ತೊಳೆದ ನೀರನ್ನು ಒಂದು ಬಕೆಟ್‌ನಲ್ಲಿ ಶೇಖರಿಸಿಡಿ. ನೆರಳಿರುವ ಜಾಗದಲ್ಲಿ ಇರಿಸುವುದನ್ನು ಮರೆಯಬೇಡಿ. ಆದರೆ ಸಾಕಷ್ಟು ಗಾಳಿಯಾಡುವಂತಿರಬೇಕು. 10–15 ದಿನಗಳ ನಂತರ ಇದರಲ್ಲಿ ಯೀಸ್ಟ್‌ ಬೆಳೆದು ನೀರಿನ ಮೇಲೆ ಬರುತ್ತದೆ. ಇದು ಗಿಡಗಳಿಗೆ ಒಳ್ಳೆಯ ಕೀಟನಾಶಕ ಕೂಡ. ಇದನ್ನು ತರಕಾರಿ, ಹೂವಿನ ಗಿಡಗಳ ಮೇಲೆ ಎರಚಬಹುದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು