ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಯ ತಾರಸಿಯಲ್ಲಿ ಮಿನಿ ಸಸ್ಯಲೋಕ

Last Updated 6 ಡಿಸೆಂಬರ್ 2019, 20:15 IST
ಅಕ್ಷರ ಗಾತ್ರ

ನಿವೃತ್ತಿಯ ನಂತರ ಗಾರ್ಡನಿಂಗ್‌ ಹವ್ಯಾಸ ಬೆಳೆಸಿಕೊಂಡಕೋರಮಂಗಲದ ನಿವಾಸಿ ಅಪ್ಪಯ್ಯ ರೆಡ್ಡಿ ಅವರು ಮನೆಯಲ್ಲೇ ಅದ್ಭುತವಾದ ಟೆರೆಸ್‌ ಗಾರ್ಡನ್‌ ಸೃಷ್ಟಿಸಿದ್ದಾರೆ.

ವೃತ್ತಿಯಲ್ಲಿಎಲೆಕ್ಟ್ರಿಕಲ್‌ ಇಂಜಿನಿಯರ್‌ ಆಗಿದ್ದ ರೆಡ್ಡಿ ಅವರಿಗೆ ಮೊದಲಿನಿಂದಲೂ ಕೃಷಿಯತ್ತ ಒಲವು. ಭಾರತ್‌ ಅರ್ತ್‌ ಮೂವರ್ಸ್‌ನಲ್ಲಿ ಸಿನಿಯರ್‌ ಮ್ಯಾನೆಜರ್‌ ಹುದ್ದೆಯಿಂದ ಸ್ವಯಂ ನಿವೃತ್ತಿ ಪಡೆದು ಗಾರ್ಡನಿಂಗ್‌ನಲ್ಲಿ ತೊಡಗಿಸಿಕೊಂಡರು.

ದಶಕಗಳ ಹಿಂದೆ ವಾಟರ್‌ ಬಾಟಲ್‌ ಗಾರ್ಡನಿಂಗ್‌ನಿಂದ ಆರಂಭವಾದ ಅವರ ಪಯಣ ಇದೀಗ ಟೆರೆಸ್‌ ಗಾರ್ಡನಿಂಗ್‌, ಕಿಚನ್ ಗಾರ್ಡನಿಂಗ್‌ ರೂಪ‍ಪಡೆದಿದೆ.ಟೆರೆಸ್ ಗಾರ್ಡನಿಂಗ್‌ ಕುರಿತು ಆರ್‌ಡಬ್ಲ್ಯುಎಲ್‌ ನಡೆಸಿದ ವರ್ಕ್‌ಶಾಪ್‌ ಅವರ ಹವ್ಯಾಸಕ್ಕೆ ನೀರೆರೆಯಿತು. 78ರ ಇಳಿವಯಸ್ಸಿನಲ್ಲಿಯೂ ರೆಡ್ಡಿ ಅವರು ತಮ್ಮ ಮನೆಯ ಮೇಲಿನ ತಾರಸಿ ತೋಟ ಹೊಕ್ಕರೆ ಮಗುವಾಗಿಬಿಡುತ್ತಾರೆ.

ಅಪ್ಪಯ್ಯ ರೆಡ್ಡಿ ಅವರ ನಿವಾಸದೊಳಕ್ಕೆ ಕಾಲಿಟ್ಟರೆ ಮಿನಿ ಪಾರ್ಕ್‌ನಂತೆ ಭಾಸವಾಗುತ್ತದೆ. ಮನೆಯ ತಾರಸಿ, ಆವರಣದಲ್ಲಿ ಅರಳಿ ನಿಂತ ಬಣ್ಣ, ಬಣ್ಣದ ಹೂವುಗಳು ನಿಮ್ಮನ್ನು ಸಸ್ಯಲೋಕಕ್ಕೆ ಸ್ವಾಗತಿಸುತ್ತವೆ. ಗೇಟ್‌ ತೆರೆದು ಒಳಗೆ ಕಾಲಿಟ್ಟರೆ ಹೊಸದೊಂದು ಸಸ್ಯಲೋಕ ತೆರೆದುಕೊಳ್ಳುತ್ತದೆ.ಮನೆಯ ಆವರಣದಲ್ಲಿ ಸೊಂಪಾಗಿ ಬೆಳೆದು ನಿಂತ ಆಳೆತ್ತರದ ಗಿಡ, ಮರಗಳು ಶುದ್ಧ ಗಾಳಿ, ನೆರಳು ನೀಡುತ್ತಿವೆ. ಬಳಸಿ ಬಿಸಾಡಿದ ಕುಡಿಯುವ ನೀರಿನ ಬಾಟಲಿಗಳಲ್ಲಿ 70ಕ್ಕೂ ಹೆಚ್ಚು ಸಸ್ಯಗಳು ನೆಲೆ ಕಂಡುಕೊಂಡಿವೆ.

ತಾರಸಿ ತೋಟದಲ್ಲಿ 20ಕ್ಕೂ ಹೆಚ್ಚು ವೈವಿಧ್ಯಮಯ ತರಕಾರಿಗಳಿವೆ. ಟೊಮ್ಯಾಟೊ, ಅವರೆಕಾಯಿ, ಡಬಲ್‌ ಬೀನ್ಸ್‌, ಪಡವಲ, ಹಾಗಲ, ಬದನೆ, ಬೀನ್ಸ್‌, ಕೋಸು, ಹೀರೆ, ಅಲಸಂದೆ, ಮೆಣಸಿನಕಾಯಿ, ನುಗ್ಗೆ, ಮೆಕ್ಕ ಜೋಳದಿಂದ ಹಿಡಿದು ಸೊಪ್ಪುಗಳಾದ ಪುದೀನಾ, ಪಾಲಕ್‌, ಮೆಂತೆ, ಸಬ್ಬಸಿಗೆ, ಕೊತ್ತಂಬರಿ ಸೇರಿದಂತೆ ಹಲವು ಬಗೆಯ ಸೊಪ್ಪುಗಳನ್ನ ಬೆಳೆಸಲಾಗಿದೆ.

ಗಿಡಗಳಿಗೆ ನೈಸರ್ಗಿಕ ಗೊಬ್ಬರ ಬಳಸಲಾಗಿದೆ. ಬಿಬಿಎಂಪಿ ನೀಡಿರೋ ಡ್ರೈ ಲೀವ್ಸ್‌ ಬಿನ್‌ ಮೂಲಕ ತಯಾರಿಸಿದ ನೈಸರ್ಗಿಕ ಗೊಬ್ಬರ,ತರಕಾರಿ ಸಿಪ್ಪೆಗಳು, ಬಾಡಿದ ಹೂವುಗಳ ಮೂಲಕ ಗೊಬ್ಬರವನ್ನು ತಯಾರಿಸಿ ಗಿಡಗಳ ಪೋಷಣೆ ಮಾಡಲಾಗಿದೆ.

ಜೊತೆಗೆ ಕ್ರಿಮಿ, ಕೀಟಗಳನ್ನು ಸಸಿಗಳಿಂದ ದೂರವಿಡಲು ಸಮಯಕ್ಕೆ ಬೇಕಾದಂತೆ ಹೊಂಗೆ ಹಾಗೂ ಬೇವಿನ ಹಿಂಡಿಗಳನ್ನು ನೀರಿನಲ್ಲಿ ಮಿಶ್ರಣ ಮಾಡಿ, ಗಿಡಗಳಿಗೆ ಸಿಂಪಡಿಸಲಾಗುತ್ತದೆ.

ವಿಶೇಷವೆಂದರೆ, ವಾಟರ್‌ ಬಾಟಲ್‌ ಗಾರ್ಡನ್‌ಗೆ ದೇವರಿಗಿಟ್ಟ ಹೂವುಗಳನ್ನೇ ಗೊಬ್ಬರ ವಾಗಿ ಬಳಸಲಾಗಿದೆ. ಬಣ್ಣದ ದೊಡ್ಡ ಖಾಲಿ ಡಬ್ಬಿಗಳು, ಗೋಣಿ ಚೀಲಗಳು ಹಾಗೂ ಇಝೀ ಗ್ರೀನ್‌ ಬ್ಯಾಗ್‌ ಸಹಾಯದಿಂದ ಟೆರೆಸ್‌ ಗಾರ್ಡನ್‌ ನಿರ್ಮಿಸಲಾಗಿದೆ. ಮನೆಯಲ್ಲಿ ಮಳೆನೀರು ಕೊಯ್ಲು ವ್ಯವಸ್ಥೆ ಮಾಡಿಕೊಂಡು ಆ ನೀರನ್ನೇ ಗಾರ್ಡನ್‌ಗೆ ಬಳಸುತ್ತಿದ್ದಾರೆ.

ಅಪ್ಪಯ್ಯ ರೆಡ್ಡಿ, ತಮ್ಮ ಬಿಡುವಿನ ಸಮಯವನ್ನು ಗಿಡ, ಮರಗಳ ಆರೈಕೆಯಲ್ಲೇ ಹೆಚ್ಚು ಕಳೆಯುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT