ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಔಷಧಿ ಸಸ್ಯಗಳಿಗೆ ಅಂತರ್ಜಲದ ಹೂರಣ

ನೆಲದ ನಂಟು-15
Last Updated 12 ಮೇ 2014, 19:30 IST
ಅಕ್ಷರ ಗಾತ್ರ

ಮಳೆ ನೀರನ್ನು ಸಂರಕ್ಷಿಸಿಕೊಳ್ಳದಿದ್ದರೆ ಕೊಡಗಿಗೆ ಉಳಿಗಾಲವಿಲ್ಲ.   ವರ್ಷಕಳೆದಂತೆ ಮಳೆಯ ಪ್ರಮಾಣ ಕಡಿಮೆಯಾಗುತ್ತಾ ಬರುತ್ತಿದೆ. ನೀರಿನ ಕೊರತೆ ಎದುರಾದರೆ ಕೊಡಗು ಕೆಲವೇ ವರ್ಷಗಳಲ್ಲಿ ಬಯಲು ಸೀಮೆಯಾಗುವುದರಲ್ಲಿ ಅನುಮಾನವಿಲ್ಲ. ಆದರೆ ಇಲ್ಲೊಬ್ಬ ಕೃಷಿಕರಿಗೆ ಬೇಸಿಗೆಯಲ್ಲೂ ಮಳೆನೀರೇ ಜೀವನಾಧಾರ!

ಇದು ಮಳೆನೀರು ಸಂಗ್ರಹದ ಮೂಲಕ ಜಲಯೋಧನೆಂದೇ ಕರೆಸಿಕೊಳ್ಳುತ್ತಿರುವ ವಿರಾಜ ಪೇಟೆ ತಾಲ್ಲೂಕು ಸುಳುಗೋಡು ಗ್ರಾಮದ ಯುವಕ ಅಜ್ಜಿಕುಟ್ಟೀರ ಸೂರಜ್‌ ಅವರ ಯಶಸ್ಸಿನ ಕಥೆ.

ಸೂರಜ್‌ ಅವರ ಮನೆ ನಾಗರಹೊಳೆ ಅರಣ್ಯದ  ಅಂಚಿನಲ್ಲಿದೆ. ಆದರೂ ಇಲ್ಲಿಗೆ ಬೀಳುವ ಮಳೆ ಪ್ರಮಾಣ ತುಂಬ ಕಡಿಮೆ. ವಾರ್ಷಿಕವಾಗಿ ಸರಾಸರಿ 700ಮಿ.ಮೀ ಮಳೆ ಬೀಳುತ್ತಿದೆ. ಇದರಿಂದ ಬೇಸಿಗೆಯಲ್ಲಿ ನೀರಿನ ಸಮಸ್ಯೆ ತೀವ್ರಗೊಳ್ಳುತ್ತಿದೆ. ಹೀಗಾಗಿ ಸೂರಜ್‌ ಮಳೆ ನೀರನ್ನು ವ್ಯವಸ್ಥಿತವಾಗಿ ಸಂಗ್ರಹಿಸಿ ನೀರಿನ ಕೊರತೆ ನೀಗಿಸಿಕೊಂಡಿದ್ದಾರೆ. ಇವರ ಮಳೆ ನೀರಿನ ಸಂಗ್ರಹಕ್ಕೆ 10 ವರ್ಷ ಕಳೆದಿದೆ.

ಸಂಗ್ರಹಿಸಿದ ನೀರನ್ನು ಸಮರ್ಥವಾಗಿ ಬಳಸಿಕೊಂಡು ತಮ್ಮ ಮನೆಯ ಸುತ್ತ ಹತ್ತಾರು ಬಗೆಯ ಔಷಧಿ ಸಸ್ಯಗಳನ್ನು ಬೆಳೆಸಿದ್ದಾರೆ. ನೂರಾರು ಬಗೆಯ ಹಣ್ಣುಗಳನ್ನು ಬೆಳೆದಿದ್ದಾರೆ.  ಪಾರ್ಶ್ವವಾಯು ಔಷಧಿ ಬಳ್ಳಿ, ಇಂಗು ತಯಾರಿಕಾ ಸಸ್ಯ, ಆಡುಸೋಗೆ, ದೊಡ್ಡಪತ್ರೆ, ಲೋಳೆಸರ, ನಿಂಬೆ ಹುಲ್ಲು, ಜಾಯಿಕಾಯಿ, ಒಂದೆಲಗ, ಕೃಷ್ಣತುಳಸಿ, ಬೇವು, ನೆಲನೆಲ್ಲಿ, ಅಮೃತ ಬಳ್ಳಿ, ಚಕ್ರಮುನಿ ಮುಂತಾದ ಹಲವು ಬಗೆಯ ಸಸ್ಯಗಳು ಮನೆಯ ಸುತ್ತ ಬೆಳೆದಿವೆ.

ಅಲ್ಲದೆ ನಕ್ಷತ್ರಹಣ್ಣು, ಸೀತಾಫಲ, ಊಟಿಸೇಬು, ಪುಣೆ ಸೇಬು, ವೆಲ್‌ವೆಟ್‌ ಸೇಬು, ಮೊಟ್ಟೆಹಣ್ಣು, ಬೆಣ್ಣೆಹಣ್ಣು, ಸಪೋಟ, ರಾಂಪಾಲ, ಸಿಹಿಅಂಬಟೆ, ಕೆಂಪು ನೆಲ್ಲಿ, ನಕ್ಷತ್ರ ನೆಲ್ಲಿ, ಸೀಬೆ, ಜಮ್ಮುನೇರಳೆ, ಕಿತ್ತಳೆ, ಬೇಕರಿ ಚೆರ್ರಿ, ಮೂಸಂಬಿ, ದೂರಿಹಣ್ಣು, ಪಪ್ಪಾಯಿ. 12 ಬಗೆಯ ಮಾವಿನ ಹಣ್ಣು, 6ಬಗೆಯ ಬಾಳೆ ಹೀಗೆ
50ಕ್ಕೂ ಹೆಚ್ಚಿನ ವಿಧದ ಹಾಗೂ 365 ದಿನಗಳಲ್ಲೂ ಸಿಗುವ ಹಣ್ಣಿನ ಗಿಡಗಳಿವೆ. ಇಷ್ಟೇ ಅಲ್ಲದೆ ಸೂರಜ್‌ ಕಾಫಿ, ಭತ್ತ, ಅಡಿಕೆ, ಮೆಣಸು, ಏಲಕ್ಕಿ ಬೆಳೆದಿರುವ ಒಬ್ಬ ಪ್ರಗತಿಶೀಲ ಕೃಷಿಕರು ಕೂಡ.
  
ಈ ಎಲ್ಲ ಸಸ್ಯಗಳಿಗೆ ಮಳೆ ನೀರಿನಿಂದ ಸಂಗ್ರಹಿಸಿದ ಅಂತರ್ಜಲವೇ ತೇವಾಂಶ. ಸೂರಜ್‌ ತಮ್ಮ ಮನೆಯ ಮತ್ತು ಕೊಟ್ಟಿಗೆ ಮೇಲ್ಛಾವಣಿಯಿಂದ ಬೀಳುವ ನೀರಿಗೆ ಪೈಪ್‌ ಅಳವಡಿಸಿದ್ದಾರೆ. ಒಂದು ಹನಿಯೂ ಪೋಲಾಗದಂತೆ ತಂತ್ರಜ್ಞಾನವನ್ನು ತಾವೇ ರೂಪಿಸಿಕೊಂಡಿದ್ದಾರೆ.  ಕಸಕಡ್ಡಿ ಹೋಗದಂತೆ ಮೊದಲೇ ಫಿಲ್ಟರ್‌ ಮಾಡಲಾಗುತ್ತದೆ.

ಹೆಚ್ಚಾದ ನೀರನ್ನು ಮನೆಯ ಮತ್ತೊಂದು ಕಡೆ ಸುಮಾರು 20 ಅಡಿ ಆಳ 3 ಅಡಿ ಸುತ್ತಳತೆಯ ಬಾವಿ ತೋಡಿ ಇಂಗಿಸುತ್ತಿದ್ದಾರೆ, ಬಾವಿಗೆ ಸಿಮೆಂಟ್‌ ರಿಂಗ್‌ ಅಳವಡಿಸಿರುವುದರಿಂದ ಕುಸಿಯುವ ಭೀತಿ ಇಲ್ಲ. ಭೂಮಿಯಲ್ಲಿ ಇಂಗಿದ ನೀರು ಮತ್ತೆ ಅಂತರ್ಜಲವಾಗಿ ಪಕ್ಕದಲ್ಲೇ ಇರುವ ಕೊಳವೆ ಬಾವಿ ಮತ್ತು ತೆರೆದ ಬಾವಿ ಸೇರುತ್ತಿದೆ. 

ಮತ್ತೊಂದು ಕಡೆ ದುರಸ್ತಿಗೀಡಾಗಿರುವ ಕೊಳೆವೆ ಬಾವಿ ಸುತ್ತ 15 ಅಡಿ ಆಳದ ಹೊಂಡ ತೋಡಿಸಿ ಆದಕ್ಕೆ ಮನೆಯ ಮುಂದಿನ ರಸ್ತೆ ಹಾಗೂ ತೋಟದಿಂದ  ಹರಿದು ಬರುವ ನೀರನ್ನು ತುಂಬಿಸಿ ಇಂಗಿಸಲಾಗುತ್ತಿದೆ. ಹೊಂಡದ ಮೇಲೆ ಸಿಮೆಂಟ್‌ ಹಾಸಿಗೆ ಹಾಕಿದ್ದಾರೆ. ಈ ನೀರು ಅಂತರ ಜಲವಾಗಿ ಹರಿದು ಪಕ್ಕದ ಕೆರೆ ಸೇರುತ್ತಿದೆ. ಇದರಿಂದ ಬೇಸಿಗೆಯಲ್ಲಿಯೂ ತೋಟದ ಕೆರೆಯಲ್ಲಿ ನೀರು ಬತ್ತುತ್ತಿಲ್ಲ.
   ‌
ಸೂರಜ್‌ ಅವರ ಮನೆಯ ಸುತ್ತ ಕಣ್ಣುಹಾಯಿಸಿದ ಕಡೆಯಲೆಲ್ಲ ವೈಜ್ಞಾನಿಕವಾಗಿ ಅಳವಡಿಸಿರುವ ಮಳೆ ನೀರು ಸಂಗ್ರಹದ ಪೈಪ್‌ ಮತ್ತು ಡ್ರಮ್‌ಗಳೇ ಕಂಡು ಬರುತ್ತವೆ.   ಇದಕ್ಕೆ ತಂದೆ ಮೊಣ್ಣಪ್ಪ, ತಾಯಿ ಗೌರಮ್ಮ ಅವರ ನೆರವಿದೆ. ಸೂರಜ್‌, ಮಂಗಳೂರು ವಿಶ್ವವಿದ್ಯಾಲಯದ ಎಂಎಸ್‌ಡಬ್ಲ್ಯು ಪದವೀಧರ.

ಸರ್ಕಾರಿ ಇಲಾಖೆಯಲ್ಲಿ ಉನ್ನತ ಹುದ್ದೆ ಪಡೆಯುವ ಸಾಧ್ಯತೆ ಇದ್ದರೂ ಅತ್ತ ಗಮನಹರಿಸದೆ ಕೃಷಿಯತ್ತ ಮುಖಮಾಡಿ ಅದರಲ್ಲಿಯೇ ಸಫಲತೆ ಪಡೆದುಕೊಂಡಿದ್ದಾರೆ. ಜತೆಗೆ ಸ್ವತಃ ಆಸಕ್ತಿಯಿಂದ ಮಳೆ ನೀರು ಸಂಗ್ರಹದ ತಂತ್ರಜ್ಞಾನವನ್ನು ಕಂಡುಕೊಂಡವರು. ಇದೀಗ ಜಿಲ್ಲಾಡಳಿತದ ಸ್ವಚ್ಛತಾ ಅಭಿಯಾನದಲ್ಲಿ ತೊಡಗಿಸಿಕೊಂಡು ಕಾರ್ಯನಿರ್ವಹಿಸುತ್ತಿದ್ದಾರೆ. ಅತ್ಯಂತ ಸುಲಭ ವೆಚ್ಚದಲ್ಲಿ ಮಳೆ ನೀರು ಸಂಗ್ರಹ ಮತ್ತು ಶೌಚಾಲಯ ನಿರ್ಮಾಣದ ಬಗ್ಗೆ ಜನತೆಯಲ್ಲಿ ಪ್ರಾಯೋಗಿಕವಾಗಿ ಅರಿವು ಮೂಡಿಸುತ್ತಿದ್ದಾರೆ.

ತಮ್ಮ ಕೆಲಸಕ್ಕೆ ತಂದೆ ಮೊಣ್ಣಪ್ಪ ಹಾಗೂ ತಾಯಿ ಗೌರಮ್ಮ ಅವರ ನೆರವಿದೆ ಎಂದು ಹೇಳುವ ಸೂರಜ್‌ ಕೃಷಿಯ ಮೂಲಕ ನೆಮ್ಮದಿಯ ಬದಕು ಕಂಡುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT