ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಬ್ಬಿನ ನಡುವೆ ಹಲವು ಬೆಳೆ

Last Updated 29 ಜೂನ್ 2011, 19:30 IST
ಅಕ್ಷರ ಗಾತ್ರ

ಮೈಸೂರು ತಾಲ್ಲೂಕಿನ ಬನ್ನೂರಿನ ರೈತ ಕಿರಣ್ ಎರಡು ಎಕರೆಯಲ್ಲಿ ಕಬ್ಬು ಹಾಗೂ ಇತರ ಹಲವು ಬೆಳೆಗಳನ್ನು ಸಾವಯವ ಪದ್ಧತಿಯಲ್ಲಿ ಬೆಳೆದು ಅನೇಕ ರೈತರಿಗೆ ಅವರು ಮಾದರಿಯಾಗಿದ್ದಾರೆ.

ಕೆಲ ವರ್ಷಗಳ ಹಿಂದೆ ಅವರು ರಾಸಾಯನಿಕ ಗೊಬ್ಬರ, ಕೀಟನಾಶಕಗಳನ್ನು ಬಳಸಿ ಬೇಸಾಯ ಮಾಡುತ್ತಿದ್ದರು. ಆಗ ಅವರಿಗೆ ಹೆಚ್ಚಿನ ಆದಾಯ ಇರಲಿಲ್ಲ. ಬೇಸಾಯದ ಖರ್ಚು, ಗೊಬ್ಬರ, ಕೀಟನಾಶಕ ಇತ್ಯಾದಿಗಳಿಗೆ ಹೆಚ್ಚು ಹಣ ಖರ್ಚು ಮಾಡುತ್ತಿದ್ದರು.

ಅವರು ಒಮ್ಮೆ ರಾಜ್ಯ ರೈತ ಸಂಘದ ಆಶ್ರಯದಲ್ಲಿ ಹುಬ್ಬಳ್ಳಿಯಲ್ಲಿ ನಡೆದ ಸುಭಾಷ ಪಾಳೇಕರ್ ಅವರ `ಶೂನ್ಯ ಬಂಡವಾಳದ ಬೇಸಾಯ~ ಶಿಬಿರದಲ್ಲಿ ಭಾಗವಹಿಸಿದರು. ಶಿಬಿರದಿಂದ ಅವರಿಗೆ ಲಾಭವಾಯಿತು. ಜೀವಾಮೃತ ಬಳಸಿ ಬೇಸಾಯ ಮಾಡುವುದರಿಂದ ರಾಸಾಯನಿಕ ಗೊಬ್ಬರ ಬಳಸುವ ಅಗತ್ಯ ಇಲ್ಲ ಎನ್ನುವುದನ್ನು ಅರಿತುಕೊಂಡರು.

ಶೂನ್ಯ ಬಂಡವಾಳದ ಬೇಸಾಯ ಪದ್ಧತಿ ಅಳವಡಿಸಿಕೊಂಡ ರೈತರ ಆದಾಯ ಹೆಚ್ಚಾಗಿರುವುದು ಅವರ ಗಮನಕ್ಕೆ ಬಂದಿತ್ತು. ಈ ಪದ್ಧತಿಯನ್ನೂ ಅವರೂ ಅನುಸರಿಸಿದರು. ಬಿತ್ತನೆ ಕಬ್ಬನ್ನೂ ಬೆಳೆದುಕೊಳ್ಳಲು ನಿರ್ಧರಿಸಿದರು.

ಕಬ್ಬಿನ ನಡುವೆ ಈರುಳ್ಳಿ, ಅಲಸಂದೆ, ಮೆಣಸಿನಕಾಯಿ, ಅವರೆ, ಬೆಳ್ಳುಳ್ಳಿ ಇತ್ಯಾದಿಗಳನ್ನು ಮಿಶ್ರ ಬೆಳೆಯಾಗಿ ಬೆಳೆದಿದ್ದಾರೆ. ಎಲ್ಲ ಬೆಳೆಗಳಿಗೂ ಜೀವಾಮೃತ ಹಾಕಿದ್ದಾರೆ.
 
ಮೊದಲ ಮೂರು ತಿಂಗಳು ಕಬ್ಬಿನ ಸಾಲು ಸೇರಿದಂತೆ ಉಳಿದ ಎಲ್ಲ ಮಿಶ್ರ ಬೆಳೆಗಳಿಗೂ ನೀರು ಹರಿಸಿದರು. ಹದಿನೈದು ದಿನಕ್ಕೊಮ್ಮೆ ಜೀವಾಮೃತ ಕೊಟ್ಟರು. ಮೂರು ತಿಂಗಳಲ್ಲಿ ಈರುಳ್ಳಿ, ಬೆಳ್ಳುಳ್ಳಿ, ಅಲಸಂದೆ ಫಸಲು ಪಡೆದರು.

ಆನಂತರ ಕಬ್ಬಿನ ಜತೆಯಲ್ಲಿ ಉಳಿದ ಮೆಣಸಿನ ಗಿಡಗಳಿಗೆ ಮಾತ್ರ ನೀರುಣಿಸಬೇಕು. ಅವರ ಹೊಲದ ಕಬ್ಬು ಹನ್ನೆರಡು ಅಡಿಗಿಂತ ಎತ್ತರಕ್ಕೆ ಬೆಳೆದಿದ್ದವು. ಒಂದೊಂದು ಕಬ್ಬಿನ ಜಲ್ಲೆ ತೂಕ 5ರಿಂದ 6 ಕೆ.ಜಿ. ತೂಗುತ್ತಿದ್ದವು.

ಕಬ್ಬನ್ನು ದಕ್ಷಿಣೋತ್ತರವಾಗಿ ನಾಟಿ ಮಾಡಿದ್ದಾರೆ. ಸಾಲುಗಳಲ್ಲಿ 2 ಅಡಿಗೊಂದರಂತೆ ನಾಟಿ ಮಾಡಿದ್ದರು. ದಕ್ಷಿಣೋತ್ತರವಾಗಿ 8 ಅಡಿಗಳ ಅಂತರದ ನಡುವೆ 5 ಸಾಲುಗಳನ್ನು ಮಾಡಿ, ಆ ಸಾಲುಗಳಲ್ಲಿ ಈರುಳ್ಳಿ, ಅಲಸಂದೆ, ಮೆಣಸಿನಕಾಯಿ, ಬೆಳ್ಳುಳ್ಳಿ ಬೆಳೆದರು.

ಇವೆಲ್ಲ ಅಲ್ಪಾವಧಿಯ ಬೆಳೆಗಳು. ಈ 5 ಸಾಲುಗಳ ಪೈಕಿ ನಿರ್ದಿಷ್ಟಪಡಿಸಿದ ಎರಡು ಸಾಲುಗಳಲ್ಲಿ ದ್ವಿದಳ ಧಾನ್ಯದ ಬೆಳೆಗಳು ಇರುವಂತೆ ನೋಡಿಕೊಂಡರು. ಅಲಸಂದೆ, ಅವರೆ, ಹುರುಳಿ, ಉದ್ದು, ಹೆಸರು, ಕಡಲೆ, ನೆಲಗಡಲೆ, ಬೀನ್ಸ್ ಮತ್ತಿತರ ದ್ವಿದಳ ಧಾನ್ಯಗಳನ್ನು ಬೆಳೆಯಬಹುದು.

ಈರುಳ್ಳಿ, ಬೆಳ್ಳುಳ್ಳಿ, ಮೆಣಸಿನಕಾಯಿ ಬೆಳೆಗಳಿಗೆ ಬದಲಾಗಿ ಬೇರೆ ಯಾವುದೇ ತರಕಾರಿ, ಸೊಪ್ಪು, ಗೆಡ್ಡೆ,ಗೆಣಸನ್ನೂ ಬೆಳೆಯಬಹುದು. ಕಬ್ಬಿಗೆ ಅನುಸರಿಸುವ ನೀರಾವರಿ ಕ್ರಮವನ್ನೇ ಯಾವ ಬೆಳೆಗೆ ಬೇಕಾದರೂ ಬಳಸಬಹುದು~ ಎನ್ನುತ್ತಾರೆ ಕಿರಣ್.

ಮೈಸೂರು ಸುತ್ತಮುತ್ತ ರೈತರು ರಾಸಾಯನಿಕ ಗೊಬ್ಬರ ಬಳಸುತ್ತಾರೆ. ಕಿರಣ್ ರಾಸಾಯನಿಕ ಗೊಬ್ಬರಕ್ಕೆ ಖರ್ಚು ಮಾಡುತ್ತಿದ್ದ ಹಣ ಉಳಿತಾಯವಾಗಿದೆ.

ಅಲ್ಪಾವಧಿಯ ಮಿಶ್ರ ಬೆಳೆಗಳಿಂದ ಸುಮಾರು ಮೂವತ್ತು ಸಾವಿರ ರೂಪಾಯಿ ಆದಾಯ ಗಳಿಸಿದ್ದಾರೆ. ಸುಮಾರು 60 ಟನ್‌ಗಳಷ್ಟು ಕಬ್ಬು ಬೆಳೆದಿದ್ದಾರೆ. ಈ ಬೇಸಾಯ ವಿಧಾನದಿಂದ ತಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸಿದೆ ಎನ್ನುತ್ತಾರೆ ಕಿರಣ್.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT