ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ -ಉಪ ­ಕಸುಬಿನ ಜುಗಲ್ ಬಂದಿ

Last Updated 7 ಮಾರ್ಚ್ 2016, 19:59 IST
ಅಕ್ಷರ ಗಾತ್ರ

‘ಇಲ್ಲಿ ಬನ್ನಿ, ಇದೇ ನೋಡಿ, ಮೆಣಸಿನ ಗದ್ದೆ. ಹಾಗೆ ಮುಂದಕ್ಕೆ ಬನ್ನಿ, ಪಕ್ಕದಲ್ಲಿ ಜೇನಿನ ಪೆಟ್ಟಿಗೆಗಳಿವೆ. ನುಗ್ಗೆ ಮರಗಳ ಕೆಳಗೆ, ಸೀಬೆ ಮರದ ಹಿಂಭಾಗದ ತೊಟ್ಟಿಯಲ್ಲೇ ಆಲಂಕಾರಿಕ ಮೀನುಗಳಿವೆ. ತೆಂಗಿನ ಮರದ ಕೆಳಗೆ ಎರೆಹುಳು ಘಟಕ ಇದೆ. ಅಲ್ಲೇ ಗೋಬರ್ ಗ್ಯಾಸ್ ಸ್ಲರಿ ಸಿಗುತ್ತೆ. ಆ ಕಡೆಯಲ್ಲೇ ನಾಲ್ಕೈದು ಎಮ್ಮೆ, ಹಸು, ಎತ್ತು, ಕರು ಕಟ್ಟುತ್ತೇವೆ. ಈ ಪಕ್ಕದಲ್ಲಿರುವುದೇ ಮನೆ... ಎದುರುಗಡೆ ಕಾಣುತ್ತಲ್ಲಾ ಅದೇ ನಮ್ಮ ಹೊಲ... !

ಹಿರಿಯೂರು ತಾಲ್ಲೂಕು ವದ್ದೀಕರೆಯ ನಾಗವೇಣಿ, ಹೀಗೆ ಪಟ್ಟಿ ಓದಿದವರಂತೆ ತಮ್ಮ ಮನೆಯ ಸುತ್ತಲಿನ ಕೃಷಿ ಚಟುವಟಿಕೆಗಳನ್ನು ಪರಿಚಯಿಸಿದರು. ಕೃಷಿ ಬದುಕಿಗೆ ಒಂದಕ್ಕೊಂದು ಪೂರಕವಾಗಿರುವ ಕೃಷಿ ಚಟುವಟಿಕೆಗಳು, ನಾಗವೇಣಿ ಮತ್ತು ಲೋಕನಾಥ್ ದಂಪತಿಯ 5 ವರ್ಷಗಳ ಕೃಷಿ ನಂಟಿನ ಎಳೆಗಳನ್ನು ಬಿಡಿಸಿಡುತ್ತಿದ್ದವು.

ಐದು ವರ್ಷಗಳ ಹಿಂದೆ, 5.22 ಎಕರೆ ಜಮೀನಿನೊಂದಿಗೆ ಕೃಷಿ ಬದುಕು ಆರಂಭಿಸಿದ ನಾಗವೇಣಿ - ಲೋಕನಾಥ್‌ಗೆ ಆರಂಭದ ಕೃಷಿ ಸವಾಲಾಗಿತ್ತು. ನೀರಿನ ಕೊರತೆ, ಕಡಿಮೆ ಆದಾಯ, ಹೆಚ್ಚು ಖರ್ಚು. ಒಂದು ಹಂತದಲ್ಲಿ ಜಮೀನು ಮಾರಿ, ಪಟ್ಟಣಕ್ಕೆ ಹೋಗಿ ಕೆಲಸ ಮಾಡಲು ನಿರ್ಧರಿಸಿದ್ದರು. ಆದರೆ, ಕೃಷಿ ಕುಟುಂಬದ ನಂಟು, ಮಣ್ಣಿನ ಸೆಳೆತ, ಉದ್ಯೋಗ ‘ಬೇಡ’ ಎಂದಿತು. ಪತಿಯ ಸಹಕಾರ ಬಯಸಿ, ಕೃಷಿಯ ಸಂಪೂರ್ಣ ಜವಾಬ್ದಾರಿ ತೆಗೆದುಕೊಂಡು ವ್ಯವಸಾಯದತ್ತ ಹೆಜ್ಜೆ ಹಾಕಿದರು.

‘ಕೈಮರ’ವಾದ ತರಬೇತಿಗಳು : ನಷ್ಟದೊಂದಿಗೆ ಕೃಷಿ ಚಟುವಟಿಕೆ ಆರಂಭವಾಯಿತು. ‘ನಷ್ಟ ಎಲ್ಲಿದೆ’ ಎಂದು ಪತ್ತೆ ಹಚ್ಚುತ್ತಿದ್ದಾಗ ನಾಗವೇಣಿಯವರಿಗೆ ಕೃಷಿ ವಿಜ್ಞಾನ ಕೇಂದ್ರ, ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದ ತರಬೇತಿಗಳು ಕೈಬೀಸಿ ಕರೆದವು. ತಂತ್ರಜ್ಞಾನ, ಮೌಲ್ಯವರ್ಧನೆ, ಎರೆಹುಳು ಸಾಕಾಣಿಕೆ, ಜೇನುಕೃಷಿ, ಮೀನುಸಾಕಾಣಿಕೆ ಸೇರಿದಂತೆ ಸಮಗ್ರ ಕೃಷಿಗೆ ಬೇಕಾದ ಕೃಷಿ ಚಟುವಟಿಕೆಗಳು, ವೈಜ್ಞಾನಿಕ ಕೃಷಿಯ ಪಾಠ ಹೇಳಿದವು.

ಮೈರಾಡ ಸಂಸ್ಥೆ, ಬಬ್ಬೂರು ಕೆವಿಕೆಯಂಥ ಕೇಂದ್ರಗಳು ಇವರ ಆಸಕ್ತಿಗೆ ನೀರೆರೆದವು. ತರಬೇತಿ ನಂತರ ನಾಗವೇಣಿ, ಮೊದಲು ಜಮೀನಿನ ಮಣ್ಣು ಪರೀಕ್ಷೆ, ನೀರಿನ ಪರೀಕ್ಷೆ ಮಾಡಿಸಿದರು. ಮಣ್ಣಿನಲ್ಲಿನ ಲಘು ಪೋಷಕಾಂಶಗಳ ಕೊರತೆ ಅರಿತರು. ತಜ್ಞರ ಸಲಹೆ ಪಡೆದು ಅಗತ್ಯ ಅಂಶಗಳನ್ನು ಮಣ್ಣಿಗೆ ಸೇರಿಸಿದರು. 

ಹೊಲದಲ್ಲಿ ಬೆಳೆ ವೈವಿಧ್ಯ: ತರಬೇತಿ, ಕೃಷಿ ಪ್ರವಾಸ, ತಜ್ಞರ ಭೇಟಿಯ ಅನುಭವ. ಇವೆಲ್ಲ ನಾಗವೇಣಿ ಅವರಿಗೆ ಐದು ಎಕರೆಯಲ್ಲಿ ವೈವಿಧ್ಯಮಯ ಬೆಳೆ ಬೆಳೆಯಲು ಪ್ರೋತ್ಸಾಹಿಸಿದವು. ಐದು ವರ್ಷಗಳ ಪಕ್ಕಾ ಲೆಕ್ಕಾಚಾರದೊಂದಿಗೆ ಎರಡು ಎಕರೆಯಲ್ಲಿ ವಾಣಿಜ್ಯ ಬೆಳೆ ಹತ್ತಿ. ಉಳಿದ ಮೂರು ಎಕರೆಯಲ್ಲಿ ರಾಗಿ, ಈರುಳ್ಳಿ, ಸೂರ್ಯಕಾಂತಿ, ಜೋಳ, ತೊಗರಿ... ಹೀಗೆ ಆಹಾರ, ವಾಣಿಜ್ಯ ಎಲ್ಲ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಜತೆಯಲ್ಲಿ ಬೆಳೆ ಪರಿವರ್ತನೆಯನ್ನೂ ಬಿಟ್ಟಿಲ್ಲ.

‘ಬಿತ್ತನೆ ಬೀಜಗಳನ್ನು ಮನೆಯಲ್ಲೇ ತಯಾರಿಸುತ್ತೇವೆ. ಈರುಳ್ಳಿ ಬೀಜ ಹೊರಗಿನಿಂದ ಖರೀದಿಸುತ್ತೇವೆ. ಪತಿ ಲೋಕನಾಥ್ ಬೇಸಾಯದಂತಹ ಕೆಲಸಗಳಿಗೆ ನೆರವಾಗುತ್ತಾರೆ. ಮೂವರು ಮಕ್ಕಳು ಓದಿನ ಬಿಡುವಿನ ವೇಳೆ ಕೃಷಿಗೆ ನೆರವಾಗುತ್ತಾರೆ. ಕೃಷಿ ಚಟುವಟಿಕೆಗೆ ಕೊಳವೆಬಾವಿ ನೀರಿನ ಆಶ್ರಯವಿದೆ. ನೀರಿನಲ್ಲಿ ಫ್ಲೋರೈಡ್ ಇದ್ದರೂ ಅದನ್ನೇ ಬಳಸುತ್ತಿದ್ದೇವೆ’ ಎನ್ನುತ್ತಾರೆ ನಾಗವೇಣಿ.

ಉಪಕಸುಬುಗಳೇ ಆಧಾರ: ‘ಕೃಷಿ ಬದುಕಿಗೆ, ವ್ಯವಸಾಯವೊಂದೇ ಸಾಲದು. ಪೂರಕ ಆದಾಯ ನೀಡುವ ಉಪ ಚಟುವಟಿಕೆಗಳಿರಬೇಕು’ ಎಂಬುದು ನಾಗವೇಣಿ ಅನುಭವದ ಮಾತು. ಅದಕ್ಕಾಗಿಯೇ, ಕೃಷಿ ಜತೆ ಜತೆಗೆ ರಾಗಿ ಮಾಲ್ಟ್, ಕೊಬ್ಬರಿ ಎಣ್ಣೆ ತಯಾರಿಕೆ, ಎರೆಗೊಬ್ಬರ ತಯಾರಿಕೆ, ಜೇನುಸಾಕಾಣಿಕೆ, ಹೈನುಗಾರಿಕೆ ಅಳವಡಿಸಿಕೊಂಡಿದ್ದಾರೆ. ಇವೆಲ್ಲ ಸಮಗ್ರ ಕೃಷಿ ಚಟುವಟಿಕೆ ಭಾಗಗಳಾಗಿವೆ. ಕೃಷಿಯಲ್ಲಿ ಬೆಳೆ ಕೈಕೊಟ್ಟರೂ, ಉಪಕಸುಬುಗಳು ಕೈ ಹಿಡಿದಿವೆ ಎನ್ನುತ್ತಾ ಅವುಗಳ ಮಹತ್ವ ವಿವರಿಸುತ್ತಾರೆ.

ಮನೆ ಆಸುಪಾಸಿನಲ್ಲಿ ಉಪಕಸುಬುಗಳಿವೆ. ಅಂಗಳದಲ್ಲಿ ಕೊಟ್ಟಿಗೆ ಇದೆ. ಎರಡು ಹಸು, ಎತ್ತು, ಎಮ್ಮೆ, ಕರುಗಳಿವೆ. ಹಾಲು, ಮೊಸರು, ಬೆಣ್ಣೆ ಮನೆಗೆ ಬಳಸುತ್ತಾರೆ. ಸೆಗಣಿಯನ್ನು ಗೋಬರ್ ಅನಿಲಕ್ಕೆ ಬಳಸುತ್ತಾರೆ. ಗೋಬರ್ ಸ್ಲರಿಯನ್ನು ತೊಟ್ಟಿಯಲ್ಲಿ ಸಂಗ್ರಹಿಸಿ, ಅದರಲ್ಲಿ ಎರೆಹುಳು ಬಿಟ್ಟು, ಗೊಬ್ಬರ ತಯಾರಿಸುತ್ತಾರೆ.

ಅಂಗಳದಲ್ಲಿ ಟೊಮೆಟೊ, ನುಗ್ಗೆ, ಹೊಂಗೆ, ಸೀಬೆ ಮರಗಳಿವೆ. ಅವುಗಳ ನೆರಳಲ್ಲಿ ಜೇನು ಸಾಕಾಣಿಕೆ ಮಾಡುತ್ತಾರೆ. ತೊಟ್ಟಿಗಳಲ್ಲಿ ಆಲಂಕಾರಿಕ ಮೀನು ಸಾಕುತ್ತಾರೆ. ‘ಜೇನುಕೃಷಿ ತಜ್ಞ ಶಾಂತವೀರಪ್ಪ ಅವರು ಜೇನುಸಾಕಾಣಿಕಾ ತರಬೇತಿ ನೀಡಿದ್ದರು. ಅದು ನಮ್ಮ ಆದಾಯದ ಒಂದು ಭಾಗವಾಗಿದೆ. ಜೇನ್ನೊಣಗಳ ಪರಾಗಸ್ಪರ್ಶಕ್ಕಾಗಿ ಮೆಣಸಿನಗಿಡದ ಹೂವು, ನುಗ್ಗೆ, ಹೊಂಗೆ ಜತೆಗೆ, ಸೂರ್ಯಕಾಂತಿ ಬೆಳೆಯೂ ಇದೆ. ಹಾಗಾಗಿ ತುಪ್ಪ ಉತ್ಪಾದನೆಗೆ ಸಮಸ್ಯೆ ಇಲ್ಲ’ ಎನ್ನುತ್ತಾರೆ  ನಾಗವೇಣಿ.

‘ನಾಗವೇಣಿಯವರಂತೆ ಮೈರಾಡ ಸಂಸ್ಥೆಯಿಂದ ಸಾಕಷ್ಟು ಮಹಿಳೆಯರು ತರಬೇತಿ ಪಡೆದಿದ್ದಾರೆ. ಆದರೆ ಇವರು ಕಲಿತಿದ್ದನ್ನು ಸಮರ್ಪಕವಾಗಿ ಅನುಷ್ಠಾನ ಮಾಡಿಕೊಳ್ಳುತ್ತಾರೆ. ಇಂಥ ರಿಸಲ್ಟ್ ಓರಿಯಂಟೆಡ್ ಫಲಾನುಭವಿಗಳು ಇತರರಿಗೆ ಮಾದರಿಯಾಗುತ್ತಾರೆ’ ಎನ್ನುತ್ತಾ ನಾಗವೇಣಿಯವರ ಕ್ರಿಯಾಶೀಲತೆಯನ್ನು ಐಮಂಗಲದ ಮೈರಾಡ ಸಂಸ್ಥೆಯ ಹಿರಿಯ ವ್ಯವಸ್ಥಾಪಕ ಎಸ್.ಎಂ.ವೇದಮೂರ್ತಿ ಪ್ರಶಂಸಿಸುತ್ತಾರೆ.

ನಾಗವೇಣಿಯವರಿಗೆ ತರಬೇತಿಗಳು, ಆದಾಯದ ಜತೆಗೆ, ಮಾಹಿತಿ ಹಂಚಿಕೆಗೂ ಅವಕಾಶ ಕಲ್ಪಿಸಿವೆ. ಈ ಹಿನ್ನೆಲೆಯಲ್ಲಿ ಅವರು ಅನೇಕ ತರಬೇತಿಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿದ್ದಾರೆ. ಇವರ ಯಶಸ್ವಿ ಕೃಷಿ ಚಟುವಟಿಕೆಗಳನ್ನು ಗುರುತಿಸಿರುವ ಸರ್ಕಾರ ಮತ್ತು ಸರ್ಕಾರೇತರ ಸಂಘ ಸಂಸ್ಥೆಗಳು ಹಲವು ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ.

ಕೃಷಿ ಹೊಂಡದಲ್ಲಿ ನೀರಿನ ಸೆಲೆ
ಕೃಷಿ ಚಟುವಟಿಕೆಗೆ ನೀರಿನ ಸಮಸ್ಯೆ ಎದುರಾದಾಗ, ನಾಗವೇಣಿಯವರು, ತೋಟಗಾರಿಕಾ ಇಲಾಖೆಯ ಯೋಜನೆಯಡಿ 20 ಮೀಟರ್‌ ಅಗಲ, 20 ಮೀಟರ್‌ ಉದ್ದ, ಮೂರು ಮೀಟರ್ ಆಳ ಬೃಹತ್ ಅಳತೆಯ ಕೃಷಿಹೊಂಡ ಮಾಡಿಸಿದ್ದಾರೆ.  ಹೊಂಡ ತೆಗೆದು, ಪ್ಲಾಸ್ಟಿಕ್ ಹೊದಿಸಬೇಕು ಎನ್ನುವಾಗಲೇ, ಹೊಂಡದ ತುದಿಯಿಂದ ನೀರಿನ ಒರತೆ ಕಾಣಿಸಿಕೊಂಡಿದೆ.

ಒಂದೆರಡು ವಾರಗಳಲ್ಲಿ ಹೊಂಡದಲ್ಲಿ ಎರಡೂವರೆ ಅಡಿಯಷ್ಟು ನೀರು ಸಂಗ್ರಹವಾಗಿ, ಅಚ್ಚರಿ ಮೂಡಿಸಿದೆ. ನಂತರ ಜಲತಜ್ಞ ಎನ್.ದೇವರಾಜರೆಡ್ಡಿ ಮಾರ್ಗದರ್ಶನದಲ್ಲಿ  ಹೊಂಡದ ಪಕ್ಕದ ಕೊಳವೆಬಾವಿಗೆ ಜಲಮರುಪೂರಣ ವಿಧಾನ ಅಳವಡಿಸಿದ್ದಾರೆ. ಹೊಂಡ ತುಂಬಿ ಹೆಚ್ಚಾದ ನೀರು ಕೊಳವೆಬಾವಿಯಲ್ಲಿ ಇಂಗುತ್ತದೆ. ‘ಸದ್ಯ ಹೊಂಡದಲ್ಲಿರುವ ಒರತೆ ನೀರಿನಲ್ಲಿ ಲವಣಾಂಶದ ಪ್ರಮಾಣ ಕಡಿಮೆಯಿದ್ದು, ಕುಡಿಯಲು ಯೋಗ್ಯವಾಗಿದೆ’ ಎನ್ನುತ್ತಾರೆ ಜಲತಜ್ಞ ರೆಡ್ಡಿ.

‘ಹೊಂಡ ತೆಗೆಸಿರುವುದು ಕೃಷಿಗಾಗಿಯಾದರೂ ಈ ಹೊಂಡದಲ್ಲಿ ಪ್ರತಿ ಮಳೆಗೆ ಸಂಗ್ರಹವಾಗುವ 12 ಲಕ್ಷ ಲೀಟರ್ ನೀರು ಸುತ್ತಲಿನ ಕೊಳವೆ ಬಾವಿಗಳಲ್ಲಿರುವ ಲವಣಾಂಶವನ್ನು ಕಡಿಮೆ ಮಾಡುತ್ತದೆ. ಸಿದ್ದಪ್ಪನ ಭಕ್ತರಿಗೂ ಈ ಹೊಂಡದ ನೀರು ಬಳಕೆಯಾಗಬಹುದು’ ಎಂಬ ಆಶಯ ವ್ಯಕ್ತಪಡಿಸುತ್ತಾರೆ ನಾಗವೇಣಿ.

ನಾಗವೇಣಿ ಅವರ ಸಂಪರ್ಕ ಸಂಖ್ಯೆ: 9740580070.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT