ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗದ್ದೆಯಲಿ ರಂಗೋಲಿ

Last Updated 1 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಮಲೆನಾಡಿನಲ್ಲಿ ಇತ್ತೀಚೆಗೆ ಭತ್ತದ ಕ್ಷೇತ್ರಗಳು ಕಡಿಮೆಯಾಗುತ್ತಿವೆ. ಇರುವ ನೀರಾವರಿ ಭೂಮಿಗಳಲ್ಲಿ ಸಾಂಪ್ರದಾಯಿಕ ಭತ್ತ ಬೆಳೆಯುವ ಬದಲು ಅಡಿಕೆಯಂತಹ ವಾಣಿಜ್ಯ ಬೆಳೆ ಬೆಳೆಯುವ ಬಗೆಗೆ ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ಆ ಮೂಲಕ ಭತ್ತದ ದೇಸಿ ತಳಿಗಳು ಸಾಂಪ್ರದಾಯಿಕ ಪದ್ಧತಿಗಳು ಕಣ್ಮರೆಯಾಗುತ್ತಿವೆ.

ಇಂತಹ ಆತಂಕದ ನಡುವೆ ದೇಸಿ ಭತ್ತದ ತಳಿಯ ಬಗೆಗೆ ಆಸಕ್ತಿ ಇರಿಸಿಕೊಂಡಿದ್ದಾರೆ ಸುಬ್ರಾಯ ಈರಾ ನಾಯ್ಕ. ಇವರ ಹೊಲದಲ್ಲಿ ಇನ್ನು ಕೆಲವೇ ದಿನಗಳಲ್ಲಿ ರಂಗೋಲಿ ಕೊಯಿಲಿನ ಸಂತಸ. ವರದಾ ನದಿಯ ಅಂಚಿನ ಬನವಾಸಿ ಮೂಲದಲ್ಲಿ ಬೆಳೆಯುತ್ತಿದ್ದ ಅಪರೂಪದ ರಂಗೋಲಿ ತಳಿಯನ್ನು ಉಳಿಸಿಕೊಂಡು ಉತ್ತರ ಕನ್ನಡದ ಯಲ್ಲಾಪುರದ ತಮ್ಮ ಕೃಷಿ ಜಮೀನಿನಲ್ಲಿ ಬೆಳೆಯುವುದರೊಂದಿಗೆ ದೇಸಿ ತಳಿಯ ರಕ್ಷಣೆಯ ಕಾಯಕದಲ್ಲಿ ತೊಡಗಿಕೊಂಡಿದ್ದಾರೆ.

ತಮ್ಮ ನಾಲ್ಕು ಎಕರೆ ಭತ್ತದ ಕ್ಷೇತ್ರದಲ್ಲಿ ರಂಗೋಲಿ ತಳಿ ಭತ್ತವನ್ನು ಸಾಂಪ್ರದಾಯಿಕ ಪದ್ಧತಿಯಲ್ಲಿ ನಾಟಿ ಮಾಡಿ ಯಶಸ್ವಿಯಾಗಿದ್ದಾರೆ. ಇದು 135 ದಿನಗಳ ಬೆಳೆಯಾಗಿದ್ದು ಕಡಿಮೆ ಮಳೆ ಬೀಳುವ ಪ್ರದೇಶದಲ್ಲೂ ಬೆಳೆಯುವ ಭತ್ತದ ಅಪರೂಪದ ತಳಿಯಾಗಿದೆ. ಜುಲೈ ಕೊನೆಯ ವಾರದೊಳಗೆ ಈ ಭತ್ತವನ್ನು ನಾಟಿ ಮಾಡಿದರೆ ಡಿಸೆಂಬರ್ 2ನೇ ವಾರದಲ್ಲಿ ಕೊಯ್ಲಿಗೆ ಬರುತ್ತದೆ. ಮಾಗಿಯ ಚಳಿಗೆ ಚೆನ್ನಾಗಿ ಬಲಿಯುವ ಈ ಭತ್ತದ ತಳಿಯು ಇಳುವರಿಯಲ್ಲಿ ಇತ್ತೀಚಿನ ಹೊಸ ತಳಿಗಳನ್ನು ಮೀರಿಸುವಂತಿದೆ. ಈ ಭತ್ತದ ತಳಿಗೆ ರೋಗದ ಬಾಧೆಯೂ ಕಡಿಮೆಯಿದ್ದು ಹೆಚ್ಚಿನ ಇಳುವರಿಯನ್ನು ಪಡೆಯಬಹುದು.

4 ಅಡಿ ಎತ್ತರ ಬೆಳೆಯುವ ಪೈರಿನ ಬುಡದಲ್ಲಿ ಸರಾಸರಿ 30 ರಿಂದ 40 ಮರಿ ಸಸಿ ಅಥವಾ ಹಿಳ್ಳುಗಳು ಒಡೆದು ಹೆಚ್ಚಿನ ಇಳುವರಿಗೆ ಸಹಾಯಕವಾಗಿದೆ. ಉಳಿದ ಸಾಮಾನ್ಯ ತಳಿಗಳಲ್ಲಿ 20ರವರೆಗಿನ ಮರಿ ಸಸಿಗಳನ್ನು ಮಾತ್ರ ಎಣಿಸಬಹುದು. ಸಣ್ಣಕ್ಕಿ ಅಥವಾ ಸೋನಾ ಮಸೂರಿಯ ಅಕ್ಕಿಯಂತೆ ಊಟಕ್ಕೂ ರುಚಿಯಾಗಿರುವ ರಂಗೋಲಿ ತಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಧಾರಣೆ ಇದೆ. ಈ ರಂಗೋಲಿ ತಳಿ ಭತ್ತಕ್ಕೆ ಮಾತ್ರ ಯೋಗ್ಯವಲ್ಲದೆ ಒಣ ಹುಲ್ಲಿನ ಇಳುವರಿಯೂ ಅಧಿಕವಾಗಿರುವ ಕಾರಣ ಮೇವಿನ ಪೂರೈಕೆಯಲ್ಲೂ ಯಥೇಚ್ಛವಾಗಿರುತ್ತದೆ.

ಸುಬ್ರಾಯ ನಾಯ್ಕರವರು ಸಾಂಪ್ರದಾಯಿಕ ಪದ್ಧತಿಯಲ್ಲಿ ಬೆಳೆದ ಈ ರಂಗೋಲಿ ತಳಿಯ ಭತ್ತದಿಂದ ಪ್ರತಿ ಎಕರೆಗೆ 27 ಚೀಲ ಭತ್ತವನ್ನು ಇಳುವರಿಯಾಗಿ ಪಡೆಯುತ್ತಾರೆ. ಪ್ರತಿ ಚೀಲವೂ 85 ಕೆ.ಜಿ. ತೂಗುವುದಲ್ಲದೆ ಸರಾಸರಿ ಒಂದು ಎಕರೆಗೆ 23 ಕ್ವಿಂಟಾಲ್ ಭತ್ತದ ಆದಾಯವನ್ನು ಪ್ರಸಕ್ತ ಸಾಲಿನಲ್ಲಿ ಗಳಿಸಿರುತ್ತಾರೆ.

ಮೊದಲಿನಿಂದಲೂ ತನ್ನ ಜಮೀನಿನಲ್ಲಿ ಸ್ಥಳೀಯವಾಗಿ ಸಿಗುವ ಭತ್ತದ ದೇಸಿ ತಳಿಗಳನ್ನು ಆಯ್ಕೆ ಮಾಡುತ್ತಿದ್ದು ಇತ್ತೀಚೆಗೆ ರಂಗೋಲಿ ತಳಿಯನ್ನು ಬೆಳೆಯುವುದರೊಂದಿಗೆ ಅಪರೂಪದ ದೇಸಿ ತಳಿಯ ಬಗ್ಗೆ ಕಾಳಜಿ ತೋರಿದ್ದಾರೆ. ಇಂತಹ ರಂಗೋಲಿ ತಳಿಯು ಈ ಭಾಗದಲ್ಲಿ ಅಪರೂಪವಾಗಿದ್ದು ಇದನ್ನು ಉಳಿಸುವತ್ತ ರೈತರು ಕಾಳಜಿ ವಹಿಸಬೇಕೆನ್ನುವುದು ಸುಬ್ರಾಯ ನಾಯ್ಕ ಅವರ ಅನಿಸಿಕೆಯಾಗಿದೆ.

ಶ್ರೀ ಪದ್ಧತಿಯಲ್ಲಿ ನಾಟಿ ಮಾಡಿದರೆ ಸಮಾನಾಂತರ ಕಾಯ್ದುಕೊಂಡು ಗೊಬ್ಬರ ಮತ್ತು ನೀರಿನ ಹಂಚಿಕೆಯೂ ಸಮರ್ಪಕವಾಗಿ ಉತ್ತಮ ಇಳುವರಿಯನ್ನು ಪಡೆಯಬಹುದು ಎಂದು ಯಲ್ಲಾಪುರ ಕೃಷಿ ಅಧಿಕಾರಿ ಬಸವನಗೌಡರ ಈ ರೈತರ ಕ್ಷೇತ್ರದ ಕುರಿತು ಅಭಿಪ್ರಾಯ ಪಡುತ್ತಾರೆ. ಇಂತಹ ಸುಧಾರಿತ ದೇಸಿ ತಳಿಯ ಬೀಜ ಸಂಗ್ರಹಿಸಿ ಬೆಳೆ ಬೆಳೆಯುವ ಸುಬ್ರಾಯ ನಾಯ್ಕರಂತಹ ರೈತರು ಎಲ್ಲರಿಗೂ ಮಾದರಿಯಾಗಬಲ್ಲರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT