ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪನ್ನೀರು ಪತ್ರೆಯಲ್ಲಿ ಝಣಝಣ ಹಣ

Last Updated 13 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

ಅನೇಕ ರೈತರು ಇಂದಿಗೂ ಕೆಲ ನಿರ್ದಿಷ್ಟ ಸಾಂಪ್ರದಾಯಿಕ ಬೆಳೆಗಳಿಗೆ ಮಾತ್ರ ತಮ್ಮ ವ್ಯವಸಾಯ ಮಿತಿಗೊಳಿಸಿಕೊಂಡಿದ್ದಾರೆ. ಆದರೆ ತುಮಕೂರು ಜಿಲ್ಲೆ ಮರಳೇನಹಳ್ಳಿ ಗ್ರಾಮದ ಎಂ.ಸಿ. ರಾಜೇಂದ್ರ ಈ ರೈತರಿಗಿಂತ ಭಿನ್ನ. ಅವರು ಅಪರೂಪದ ಬೆಳೆಗಳಲ್ಲಿ ಒಂದಾಗಿರುವ `ಪನ್ನಿರು ಪತ್ರೆ~ ಕೃಷಿಯಲ್ಲಿ ಯಶಸ್ಸು ಕಾಣುತ್ತಿದ್ದಾರೆ.

1995ರಲ್ಲಿ ಪದವಿ ಪೂರೈಸಿ ಉದ್ಯೋಗದ ಹುಡುಕಾಟದಲ್ಲಿದ್ದಾಗ ಸಿಕ್ಕಿದ್ದು ಪೆಟ್ರೊಲ್ ಬಂಕ್‌ನಲ್ಲಿ ಕ್ಯಾಷಿಯರ್ ಹುದ್ದೆ. ಕೆಲ ವರ್ಷದ ನಂತರ ಅದನ್ನು ಬಿಟ್ಟು ಕೃಷಿಗೆ ಮರಳಿದರು. ಏಕೆಂದರೆ ಅವರ ತಂದೆ ಚಿಕ್ಕಣ್ಣ ಅಪ್ಪಟ ಕೃಷಿಕರು. ಅವರೂ ಸಹ ಎಲ್ಲ ರೈತರಂತೆ ಭತ್ತ, ರಾಗಿ, ಮುಸುಕಿನ ಜೋಳ, ಆಲೂಗೆಡ್ಡೆ, ಕ್ಯಾರೆಟ್, ವಿವಿಧ ಹೂ ಹಾಗೂ ಇತರೆ ಬೆಳೆಗಳನ್ನು ಬೆಳೆಯುತ್ತಿದ್ದರು.
 
ಆರಂಭದಲ್ಲಿ ಅಪ್ಪನನ್ನೇ ಅನುಸರಿಸಿದ ರಾಜೇಂದ್ರ, ತದ ನಂತರದಲ್ಲಿ ಕೃಷಿಕ ರಂಗಸ್ವಾಮಯ್ಯ ಅವರ ಪ್ರೇರಣೆಯಿಂದಾಗಿ `ಪನ್ನೀರು ಪತ್ರೆ~ ಬೆಳೆಯಲು ಮುಂದಾದರು. ಈಗ 2.10 ಎಕರೆ ಪೈಕಿ ಅರ್ಧ ಎಕರೆಯಲ್ಲಿ ಇದನ್ನು ಬೆಳೆಯುತ್ತಿದ್ದಾರೆ.

ಬೆಳೆ ವಿಧಾನ : ತುಮಕೂರು, ಕೋಲಾರ ಹಾಗೂ ಇತರೆ ಭಾಗಗಳಲ್ಲಿಯೂ ಬೆಳೆಯುವ ಪನ್ನೀರು ಪತ್ರೆ ರೈತರಿಗೆ ನಿತ್ಯ ಹಣ ತಂದುಕೊಡುವ ಬೆಳೆ. ಇದರ ವ್ಯವಸಾಯ ತುಂಬ ಸರಳ.

ಚೆನ್ನಾಗಿ ಬಲಿತಿರುವ ಪನ್ನೀರು ಪತ್ರೆ ಕಡ್ಡಿಯನ್ನು ಗುಣಮಟ್ಟ ನೋಡಿ ಅರ್ಧ ಅಡಿಗೊಂದರಂತೆ ಕತ್ತರಿಸಬೇಕು. ಭೂಮಿಯನ್ನು ಸಮತಟ್ಟು ಮಾಡಿಕೊಳ್ಳಬೇಕು.

ನಂತರದಲ್ಲಿ ಕೊಟ್ಟಿಗೆ ಗೊಬ್ಬರವನ್ನು ಭೂಮಿಗೆ ತಕ್ಕಂತೆ ಕೊಟ್ಟು, ಬದುಗಳನ್ನು ನಿರ್ಮಿಸಿ ಒಂದು ಅಡಿ ಅಂತರದಲ್ಲಿ ಕಡ್ಡಿಯನ್ನು ನಾಟಿ ಮಾಡಬೇಕು. ಬದುಗಳ ನಡುವೆ ನೀರು ಸರಾಗವಾಗಿ ಹರಿಯುವಂತೆ ನೋಡಿಕೊಳ್ಳಬೇಕು.

ನಂತರದಲ್ಲಿ ನೆಟ್ಟ ಕಡ್ಡಿಗೆ ಹೆಚ್ಚು ತೇವ ಹಿಡಿಯದಂತೆ ಹದ ನೋಡಿ ನೀರು ಕೊಡುವುದು ಸೂಕ್ತ. ಕಡ್ಡಿ ಚಿಗುರಿದ ಮೇಲೆ ಬುಡಕ್ಕೆ ಮಣ್ಣು ಏರಿಸಬೇಕು. ನಾಟಿ ಮಾಡಿದ ನಂತರದ 4 ತಿಂಗಳು ಪನ್ನೀರು ಪತ್ರೆಯನ್ನು ಕೊಯ್ಲು ಮಾಡಬಹುದು.

ಇಳುವರಿ ಚೆನ್ನಾಗಿ ಬರಲು ಹಾಗೂ ಹಸಿರಿನಿಂದ ಸೊಂಪಾಗಿ ಕೂಡಿರಲು ಪ್ರಮುಖವಾಗಿ 20:20, ಹೊಂಗೆ ಹಿಂಡಿ, ಬೇವಿನ ಹಿಂಡಿ, ಕೊಟ್ಟಿಗೆ ಗೊಬ್ಬರ, ಕಾಂಪೋಸ್ಟ್, ಎರೆ ಗೊಬ್ಬರಗಳನ್ನು ಕೊಡಬೇಕು. ಬುಡಕ್ಕೆ ಗೆದ್ದಲು ಹುಳು ಹತ್ತುವುದನ್ನು ತಡೆಗಟ್ಟಲು ಪ್ಲೋರೇಟ್ ಎಂಬ ರಾಸಾಯನಿಕ ಬಳಸಬಹುದು.

ಬೇಸಿಗೆ ಸಮಯದಲ್ಲಿ ಪತ್ರೆಯನ್ನು ತ್ವರಿತವಾಗಿ ಕೊಯ್ಲು ಮಾಡಬಹುದು. ಮಳೆಯಾಶ್ರಿತ ಪ್ರದೇಶಗಳಲ್ಲಿ ಬೆಳೆದರೂ ನೀರು ಹರಿದುಹೋಗುವಂತೆ ಕಾಳಜಿ ವಹಿಸಬೇಕು.

ಮಳೆಗಾಲದಲ್ಲಿ ಬಿದ್ದ ಮಳೆ ನೀರು ಸರಾಗವಾಗಿ ಹರಿಯಲು ವ್ಯವಸ್ಥೆ ಮಾಡುವುದು ಅತ್ಯಂತ ಮುಖ್ಯ.

`ಬಿಡಿಸಿದ ಪನ್ನೀರು ಪತ್ರೆಯನ್ನು ನಿತ್ಯವೂ ನೀರಿರುವ ತೊಟ್ಟಿಯಲ್ಲಿ ನೆನೆ ಹಾಕುವುದರಿಂದ ಮಾರುಕಟ್ಟೆಗೆ ಕೊಂಡೊಯ್ಯುವ ತನಕವೂ ಹಸಿರಾಗಿ ತಾಜಾತನ ಉಳಿಯುತ್ತದೆ. ಪತ್ರೆಗೆ ಮಣ್ಣು ಮೆತ್ತಿದ್ದರೆ ಎಲ್ಲವೂ ಸ್ವಚ್ಛವಾಗುತ್ತದೆ. ಪ್ರತಿ ದಿನ ಬಿಡಿಸಿದ ಪತ್ರೆಯನ್ನು 11 ರಿಂದ ಮಧ್ಯಾಹ್ನ 3ರೊಳಗೆ ಮಂಡಿಗೆ ಸಾಗಿಸುವುದರಿಂದ ಉತ್ತಮ ಬೆಲೆ ಸಿಗುತ್ತದೆ~ ಎನ್ನುತ್ತಾರೆ ರಾಜೇಂದ್ರ. 

ಅವರು ಪನ್ನೀರು ಪತ್ರೆಯನ್ನು ನಿತ್ಯ ತಮ್ಮ ಮೋಟಾರ್ ಸೈಕಲ್‌ನಲ್ಲಿಯೇ ಪಕ್ಕದಲ್ಲಿನ ತುಮಕೂರಿನ ಹೂವಿನ ಮಂಡಿಗೆ ಒಯ್ದು ಮಾರುತ್ತಾರೆ.  ದಿನವೊಂದಕ್ಕೆ 35 ರಿಂದ 45 ಕಿಲೊ ಪತ್ರೆ ಸಿಗುತ್ತದೆ. ಮಂಡಿಯಲ್ಲಿ ಬೇಡಿಕೆಗೆ ಅನುಗುಣವಾಗಿ ದರ ಕಿಲೋಗೆ 20 ರಿಂದ 35 ರೂ ವರೆಗೂ ಇರುತ್ತದೆ. ಇದರಿಂದಲೇ ತಿಂಗಳಿಗೆ 9- 10 ಸಾವಿರ ರೂಪಾಯಿ ಆದಾಯ ಗಳಿಸುತ್ತಿದ್ದಾರೆ.

ಈ ಹಣವನ್ನು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಪ್ರಗತಿ ಬಂಧು ಸ್ವಸಹಾಯ ಗುಂಪಿನಲ್ಲಿ ಉಳಿತಾಯ ಮಾಡಿ, ತಮ್ಮ ಕೃಷಿ ಚಟುವಟಿಕೆಗೆ ಸಲಹೆಯನ್ನು ಪಡೆದುಕೊಳ್ಳುತ್ತಿದ್ದಾರೆ.

`ಯಾವುದೇ ರೀತಿಯ ಅಧಿಕ ಬಂಡವಾಳವಿಲ್ಲದೇ, ಕೂಲಿಕಾರರಿಲ್ಲದೇ ಒಬ್ಬನೇ ಪತ್ರೆ ಬೆಳೆಸುತ್ತ ಉತ್ತಮ ಆದಾಯ ಗಳಿಸುತ್ತಿದ್ದೇನೆ. ನೆಮ್ಮದಿಯಿಂದ ಬದುಕುತ್ತಿದ್ದೇನೆ~ ಎನ್ನುವುದು  ರಾಜೇಂದ್ರರ ಮನದ ಮಾತು.

ಬಳಕೆ
ಹೂವಿನ ಹಾರಗಳಲ್ಲಿಯೂ ಪತ್ರೆಯ ಬಳಕೆ ಹೆಚ್ಚು. ಸುಗಂಧರಾಜ ಹಾರದ್ಲ್ಲಲಂತೂ ಮುಖ್ಯವಾಗಿ ಬಳಸುತ್ತಾರೆ. ದೇವರಿಗೆ ಹಾಕುವ ತೋಮಾಲೆಯಲ್ಲಿ ಇದು ಇರಲೇಬೇಕು.

ಕಾಕಡ, ದುಂಡು ಮಲ್ಲಿಗೆ ಹಾರದಲ್ಲಿ ಬಳಸುವುದರಿಂದ ಅಂದ ಹೆಚ್ಚಿಸುತ್ತದೆ. ಗುಲಾಬಿ ಹೂವಿನ ಜೊತೆಯಲ್ಲಿ ಬಳಸುತ್ತಾರೆ. 

ಪ್ರಸಕ್ತ ದಿನಗಳಲ್ಲಿ ಪತ್ರೆಯನ್ನು ಸುಗಂಧ ದ್ರವ್ಯಗಳಲ್ಲೂ ಬಳಸುತ್ತಿರುವುದರಿಂದ ಮಂಡಿಯಲ್ಲಿ  ಖರೀದಿಸುವವರ ಸಂಖ್ಯೆ ಹೆಚ್ಚುತ್ತಾ ಸಾಗಿದೆ. ಹೀಗೆ ಎಲ್ಲಾ ರೀತಿಯಲ್ಲೂ ಬಳಸುವ ಪನ್ನೀರು ಪತ್ರೆಗೆ ಶ್ರಾವಣ ಮಾಸ, ಹಬ್ಬ ಹರಿದಿನಗಳು, ರಾಷ್ಟ್ರೀಯ ಹಬ್ಬಗಳ್ಲ್ಲಲಿ ಬೇಡಿಕೆ ಜಾಸ್ತಿ.

ಗುಡ್ ಫ್ರೈಡೆ ಹಾಗೂ ಇತರೆ ಸಂದರ್ಭಗಳಲ್ಲೂ ಪನ್ನೀರು ಪತ್ರೆಗೆ ಬೇಡಿಕೆ ಇದೆ ಎನ್ನುತ್ತಾರೆ ರಾಜೇಂದ್ರ. ಮಾಹಿತಿಗೆ 98442 23360.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT