ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಕಲ ಕಾಯಿಲೆಗೂ ಸಲ್ಲುವ ಗೋಧಿಹುಲ್ಲು

Last Updated 25 ಮಾರ್ಚ್ 2013, 19:59 IST
ಅಕ್ಷರ ಗಾತ್ರ

ಸಾಮಾನ್ಯವಾಗಿ ಎಲ್ಲರನ್ನೂ ಕಾಡುವ ನೆಗಡಿ, ಜ್ವರದಿಂದ ಹಿಡಿದು ಸಕ್ಕರೆ ಕಾಯಿಲೆ, ಮಂಡಿನೋವು, ಕೀಲುನೋವು, ಅಸ್ತಮಾ, ಮಲಬದ್ಧತೆ, ಗ್ಯಾಸ್ಟ್ರಿಕ್, ಚರ್ಮರೋಗ, ಹೃದಯದ ಕಾಯಿಲೆ, ಕ್ಯಾನ್ಸರ್‌ನಂತಹ ಮಾರಕ ರೋಗಕ್ಕೂ ಪರಿಹಾರವನ್ನು ಒದಗಿಸಬಲ್ಲ, ಮನೆಯಲ್ಲಿಯೇ ದೊರಕಿಸಿಕೊಳ್ಳಬಹುದಾದ ಔಷಧ ಎಂದರೆ ಗೋಧಿ ಹುಲ್ಲು.

ಇದರ ರಸ ಅನ್ನಾಂಗಗಳು, ಖನಿಜಾಂಶಗಳು, ವಿಟಮಿನ್‌ಗಳು, `ಸಿ' ಜೀವಸತ್ವ, ಕ್ಯಾಲ್ಸಿಯಂ, ಕಬ್ಬಿಣಾಂಶವನ್ನು ಹೊಂದಿದ್ದು, ಸಂಪೂರ್ಣ ಆಹಾರ ಎಂದೇ ಬಿಂಬಿತ. ಈ ರಸವು ಹಾಲು. ಮೊಸರು, ಮಾಂಸ, ಮೊಳಕೆ ಕಾಳುಗಳಿಗಿಂತಲೂ ಸತ್ವಯುತ. ಒಂದು ಕೆ.ಜಿ.ಯಷ್ಟು ಗೋಧಿಹುಲ್ಲು ಇರುವ ಜೀವಸತ್ವವು ಸುಮಾರು 20-22 ಕೆ.ಜಿ.ಯಷ್ಟು ಹಸಿರು ತರಕಾರಿಯಲ್ಲಿನ ಜೀವಸತ್ವಕ್ಕೆ ಸಮ.

ಬೇರೆಲ್ಲ ಸೊಪ್ಪುಗಳಿಗಿಂತಲೂ ಅಧಿಕವಾದ ಪತ್ರ ಹರಿತ್ತು (ಕ್ಲೊರೋಫಿಲ್) ಈ ಹುಲ್ಲಿನಲ್ಲಿದೆ. ಈ ಹುಲ್ಲಿನ ರಸವು ಮಾನವ ರಕ್ತದ ಹಿಮೊಗ್ಲೋಬಿನ್ ಆಗಿ ಬಹು ಬೇಗ ಪರಿವರ್ತಿತವಾಗುತ್ತದೆ. ರಕ್ತದಲ್ಲಿನ ವಿಷವಸ್ತುಗಳನ್ನು ಹೊರಹಾಕಿ ರಕ್ತವನ್ನು ಶುದ್ಧೀಕರಿಸಿ ರಕ್ತಪರಿಚಲನೆಯು ಸುಗಮವಾಗುವಂತೆ ಮಾಡುತ್ತದೆ. ಹೃದಯ, ಶ್ವಾಸಕೋಶ, ಮೂತ್ರಪಿಂಡಗಳು ಸರಾಗವಾಗಿ ಕೆಲಸ ಮಾಡಲು ಈ ರಸದ ಸೇವನೆ ಬಹಳ ಉಪಯುಕ್ತ.

ಬಿಟಾ ಕ್ಯಾರೊಟಿನ್ ಅಧಿಕ ಪ್ರಮಾಣದಲ್ಲಿರುವ ಈ ಗೋಧಿಹುಲ್ಲಿನ ರಸವು ವಿಟಮಿನ್ `ಎ' ಕೊರತೆಯನ್ನು ನೀಗುತ್ತದೆ. ಕೊಬ್ಬು ಅಥವಾ ಕೊಲೆಸ್ಟ್ರಾಲ್ ಇಲ್ಲದ ಈ ರಸದಲ್ಲಿ ಅಧಿಕ ನಾರಿನಂಶವಿದೆ. ಇದು ದೇಹದಲ್ಲಿ ಬೊಜ್ಜು ಸೇರದಂತೆ ನೋಡಿಕೊಳ್ಳುತ್ತದೆ. ಬೊಜ್ಜು ಸಂಬಂಧಿ ರೋಗಗಳನ್ನು ದೂರವಿಡುತ್ತದೆ. ಇಂಥ ಒಂದು ಅದ್ಭುತ ಶಕ್ತಿಯುಳ್ಳ ಗೋಧಿಹುಲ್ಲನ್ನು ಮನೆಯಲ್ಲಿಯೇ ಅತಿ ಸರಳ ವಿಧಾನದಲ್ಲಿ ಬೆಳೆಯಬಹುದು.

ಹೀಗೆ ಬೆಳೆಯಿರಿ
ಮನೆಯಂಗಳದಲ್ಲಿ ಜಾಗವಿದ್ದವರು ಮಣ್ಣಿನಲ್ಲಿ 7-8 ಮಡಿಗಳನ್ನು ಮಾಡಿಕೊಳ್ಳಿ. ಅದಿಲ್ಲವಾದರೆ ಅಗಲವಾದ ಬಾಯಿಯುಳ್ಳ 7-8 ಕುಂಡಗಳನ್ನುಇದಕ್ಕಾಗಿ ಬಳಸಬಹುದು. ಮೊಳಕೆ ಬರಿಸಿದ ಗೋಧಿಕಾಳುಗಳನ್ನು ಮೊದಲು ಒಂದು ಮಡಿ ಅಥವಾ ಕುಂಡಕ್ಕೆ ಹಾಕಿ. ದಿನ ಬಿಟ್ಟು ದಿನ ಬೇರೆ ಬೇರೆ ಕುಂಡಗಳಿಗೆ ಇದೇ ರೀತಿಯಲ್ಲಿ ಬಿತ್ತನೆ ಮಾಡಿ. ಹೀಗೆ ಏಳೆಂಟು ದಿನಗಳಾದ ಮೇಲೆ ಮೊದಲು ಬಿತ್ತನೆ ಮಾಡಿದ ಮಡಿ/ಕುಂಡದಿಂದ ಹುಲ್ಲನ್ನು ಕಿತ್ತು ಸ್ವಲ್ಪ ನೀರು ಸೇರಿಸಿ ಮಿಕ್ಸಿಗೆ ಹಾಕಿ ಚೆನ್ನಾಗಿ ಅರೆದು, ಸೋಸಿ ರಸವನ್ನು ತಯಾರಿಸಿಕೊಳ್ಳಿ. ಆ ರಸವನ್ನು ತಕ್ಷಣವೇ ಕುಡಿಯಬೇಕು. ಹುಲ್ಲನ್ನು ತೆಗೆದ ಅದೇ ಜಾಗದಲ್ಲಿ ಮಣ್ಣನ್ನು ಸ್ವಲ್ಪ ಕೆದರಿ ಮತ್ತೆ ಗೋಧಿಕಾಳುಗಳನ್ನು ಬಿತ್ತಿ.

ಮರುದಿನ ಎರಡನೆಯ ಮಡಿ/ ಕುಂಡದ ಹುಲ್ಲನ್ನು ತೆಗೆದು ರಸವನ್ನು ತಯಾರಿಸಿ. ಈ ರೀತಿಯಲ್ಲಿ ಒಂದು ನಿಯಮಿತ ಅವಧಿಯವರೆಗೂ ಅಂದರೆ 30, 45 ಅಥವಾ ನಿಮಗೆ ಬೇಕೆನಿಸಿದಷ್ಟು ದಿನಗಳವರೆಗೂ ಗೋಧಿಯ ರಸ ನಿಮಗೆ ಲಭ್ಯ.

ಆರೋಗ್ಯವಂತರು ತಮ್ಮ ಆರೋಗ್ಯವರ್ಧನೆಗೆ 30ರಿಂದ 50 ಎಂ.ಎಲ್‌ನಷ್ಟು ಈ ಹುಲ್ಲಿನ ರಸವನ್ನು ದಿನಾಲೂ ಖಾಲಿ ಹೊಟ್ಟೆಗೆ ಒಂದು ಬಾರಿ ತೆಗೆದುಕೊಳ್ಳಬಹುದಾಗಿದೆ. ಕಾಯಿಲೆಯಿದ್ದವರು ವೈದ್ಯರ ಸಲಹೆಯ ಮೇರೆಗೆ ಇಂತಿಷ್ಟು ದಿನ ಎಂದು ಕ್ರಮಬದ್ಧವಾಗಿ ತೆಗೆದುಕೊಳ್ಳಬೇಕಾಗುತ್ತದೆ.

ಆರು ಇಂಚಿಗಿಂತ ಎತ್ತರ ಬೆಳೆದ ಹುಲ್ಲಿನ ರಸ ಅಥವಾ ಹುಲ್ಲನ್ನು ಅರೆದು ತೆಗೆದ ಅರ್ಧಗಂಟೆಯ ನಂತರದ ರಸ ಸತ್ವಹೀನವಾಗಿಬಿಡುತ್ತದೆ. ಸ್ವಾಭಾವಿಕವಾಗಿಯೇ ಸ್ವಲ್ಪ ಸಿಹಿಯುಳ್ಳ ಈ ರಸಕ್ಕೆ ಸಕ್ಕರೆ, ಬೆಲ್ಲ, ನಿಂಬೆರಸ ಹೀಗೆ ಏನನ್ನೂ ಬೆರೆಸದೆ ಸೇವಿಸಿದರೆ ಹೆಚ್ಚು ಪರಿಣಾಮಕಾರಿ ಫಲಿತಾಂಶವನ್ನು ನೀಡುತ್ತದೆ. ನಿರೋಗಿಗಳಿಂದ ರೋಗಿಗಳವರೆಗೆ, ಮಕ್ಕಳಿಂದ ಮುದುಕರವರೆಗೆ ಎಲ್ಲರೂ ಸೇವಿಸಲೇಬೇಕಾದಂತಹದ್ದು ಈ ಗೋಧಿಹುಲ್ಲು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT