ಚಾಲಕನಿಲ್ಲದೆ ಚಲಿಸಿದ ರಿಕ್ಷಾ: ಇಬ್ಬರು ಮಹಿಳೆಯರಿಗೆ ಗಾಯ, 2 ರಿಕ್ಷಾಗಳಿಗೆ ಹಾನಿ

ಪುತ್ತೂರು: ನಗರದ ಪುರಭವನದ ಬಳಿ ಮಂಗಳವಾರ ಇಳಿಜಾರು ರಸ್ತೆಯಲ್ಲಿ ನಿಲ್ಲಿಸಿದ್ದ ಆಟೊ ರಿಕ್ಷಾವೊಂದು ಏಕಾಏಕಿ ಚಲಿಸಿ ಇಬ್ಬರು ಮಹಿಳೆಯರನ್ನು ಗಾಯಗೊಳಿಸಿ, ಬಳಿಕ  ಎರಡು ರಿಕ್ಷಾಗಳನ್ನೂ ಹಾನಿಗೊಳಿಸಿದೆ.

ತಲೆಯ ಭಾಗಕ್ಕೆ ಗಾಯವಾದ  ಬಲ್ನಾಡು ಗ್ರಾಮದ ಬುಳೇರಿಕಟ್ಟೆ ಅಂಗನವಾಡಿ ಶಿಕ್ಷಕಿ ಪರಮೇಶ್ವರಿ ಮತ್ತು ಸೊಂಟದ ಭಾಗಕ್ಕೆ ಗಾಯವಾದ ಅಡ್ಯನಡ್ಕದ ಅವ್ವಮ್ಮ ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಮುಂಡೂರು-ಕುರಿಯ ವ್ಯಾಪ್ತಿಯಲ್ಲಿ ರಿಕ್ಷಾ ಬಾಡಿಗೆ ಮಾಡುತ್ತಿದ್ದ ರಿಕ್ಷಾ ಚಾಲಕ ಹಸೈನಾರ್ ಎಂಬವರು ರಿಕ್ಷಾವನ್ನು ಆ ಸ್ಥಳದಲ್ಲಿ ನಿಲ್ಲಿಸಿ ಚಕ್ರದಡಿಗೆ ಸಣ್ಣ ಕಲ್ಲೊಂದನ್ನು ತಡೆಯಾಗಿರಿಸಿದ್ದರು. ಆಗ ಇಳಿಜಾರು ರಸ್ತೆಯಲ್ಲಿ ರಿಕ್ಷಾ ಚಲಿಸಿತ್ತು.

‘ನಾನು 24 ವರ್ಷಗಳಿಂದ ರಿಕ್ಷಾ ಚಾಲಕನಾಗಿದ್ದೇನೆ.  ರಿಕ್ಷಾ ನಿಲ್ಲಿಸಿ ಚಕ್ರದಡಿಗೆ ಸಣ್ಣ ಕಲ್ಲನ್ನು ಇಟ್ಟಿದ್ದೆ. ದೊಡ್ಡ ಗಾತ್ರದ ಕಲ್ಲಿಗಾಗಿ ಹುಡುಕುತ್ತಿದ್ದಾಗಲೇ ಅದು ಚಲಿಸಿತ್ತು. ಇಷ್ಟಾದುದು ದೇವರ ಕೃಪೆ’ ಎಂದು ಹಸೈನಾರ್ ಪ್ರತಿಕ್ರಿಯಿಸಿದರು.

ಪ್ರಮುಖ ಸುದ್ದಿಗಳು