ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಯಿಂದ ಚೊಂಬು ಬಿಟ್ಟರೆ ಮತ್ತೇನೂ ಸಿಕ್ಕಿಲ್ಲ: ಬಳ್ಳಾರಿಯಲ್ಲಿ ರಾಹುಲ್ ಗಾಂಧಿ

ಲೋಕಸಭಾ ಚುನಾವಣೆ: ಬಳ್ಳಾರಿಯಲ್ಲಿ ಕಾಂಗ್ರೆಸ್ ಪ್ರಚಾರ ಸಮಾವೇಶ
Published 26 ಏಪ್ರಿಲ್ 2024, 13:42 IST
Last Updated 26 ಏಪ್ರಿಲ್ 2024, 13:42 IST
ಅಕ್ಷರ ಗಾತ್ರ

ಬಳ್ಳಾರಿ: ‘ಪ್ರಧಾನಿ ನರೇಂದ್ರ ಮೋದಿಯವರ ‘ಭಾರತೀಯ ಚೊಂಬು ಪಾರ್ಟಿ’ಯಿಂದ ಜನರಿಗೆ ಖಾಲಿ ಚೊಂಬು ಅಲ್ಲದೇ ಮತ್ತೇನೂ ಸಿಕ್ಕಿಲ್ಲ. ಕರ್ನಾಟಕ ರಾಜ್ಯ ಸರ್ಕಾರವು ಬರ ಪರಿಹಾರ ಕೇಳಿದಾಗಲೂ ಖಾಲಿ ಚೊಂಬು ಬಿಟ್ಟರೆ ಕೇಂದ್ರ ಸರ್ಕಾರ ಬೇರೆ ಏನೂ ಕೊಟ್ಟಿಲ್ಲ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವ್ಯಂಗ್ಯವಾಡಿದರು.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಳ್ಳಾರಿಯಲ್ಲಿ ಶುಕ್ರವಾರ ಕಾಂಗ್ರೆಸ್‌ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಅವರು, ‘ಕರ್ನಾಟಕ ರಾಜ್ಯ ಸರ್ಕಾರವು ದೇಶಕ್ಕೆ ತೆರಿಗೆ ರೂಪದಲ್ಲಿ ₹ 100 ಕೊಟ್ಟರೆ, ₹ 13 ಅಷ್ಟೇ ವಾಪಸ್ ಬರುತ್ತದೆ. ರಾಜ್ಯಕ್ಕೆ ಬೇರೆ ಬೇರೆ ಸ್ವರೂಪದಲ್ಲಿ ನಿರಂತರವಾಗಿ ಅನ್ಯಾಯವಾಗುತ್ತಿದೆ’ ಎಂದರು.

‘ಬಡವರಿಗೆ, ದುರ್ಬಲರಿಗೆ, ದಲಿತರಿಗೆ, ಅಲ್ಪಸಂಖ್ಯಾತರಿಗೆ ಸೇರಿದಂತೆ ಎಲ್ಲಾ ಸಮುದಾಯದವರಿಗೆ ಅಧಿಕಾರ ಮತ್ತು ಹಕ್ಕು ಕಲ್ಪಿಸಿರುವ ದೇಶದ ಸಂವಿಧಾನವನ್ನು ನಾಶ ಮಾಡಿಸಲು ಬಿಜೆಪಿ ಹುನ್ನಾರ ನಡೆಸಿದೆ. ಆದರೆ, ಸಂವಿಧಾನವನ್ನು ನಾಶ ಮಾಡುವಂತಹ ಶಕ್ತಿ ವಿಶ್ವದಲ್ಲಿಯೇ ಇಲ್ಲ’ ಎಂದರು.

‘ಮೋದಿಯವರು ದೇಶದ 20ಕ್ಕೂ ಹೆಚ್ಚು ಕೋಟ್ಯಾಧೀಶರ 16 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ್ದಾರೆ ಹೊರತು ರೈತರ ಸಾಲ ಮನ್ನಾ ಮಾಡಿಲ್ಲ. ನಮ್ಮ ಕಾಂಗ್ರೆಸ್‌ ಮತ್ತು ಇಂಡಿಯಾ ಮೈತ್ರಿಕೂಟವು ಅಧಿಕಾರಕ್ಕೆ ಬಂದರೆ, ನಿಶ್ಚಿತವಾಗಿ ರೈತರ ಸಾಲ ಮನ್ನಾ ಮಾಡಲಿದೆ. ಬೆಳೆಗಳಿಗೆ ವೈಜ್ಞಾನಿಕ ಕನಿಷ್ಠ ಬೆಂಬಲ ಬೆಲೆಯೂ ನಿಗದಿಪಡಿಸಲಿದೆ’ ಎಂದರು.

‘ದೇಶದಲ್ಲಿ ವ್ಯಾಪಿಸಿರುವ ನಿರುದ್ಯೋಗ ಸಮಸ್ಯೆ ಕೊನೆಗಾಣಿಸಲು ಆದ್ಯತೆ ನೀಡಲಾಗುವುದು. ಪದವಿ ಮುಗಿದ ಕೂಡಲೇ ಉದ್ಯೋಗಾವಕಾಶ ಕಲ್ಪಿಸುವುದರ ಜೊತೆಗೆ ಅಗತ್ಯ ಕೌಶಲ ತರಬೇತಿ ನೀಡುತ್ತೇವೆ. ಯುವಜನರಿಗೆ ಅಗತ್ಯ ಆರ್ಥಿಕ ನೆರವನ್ನು ಒದಗಿಸಿ, ಬದುಕು ಕಟ್ಟಿಕೊಳ್ಳಲು ಪ್ರೋತ್ಸಾಹಿಸುತ್ತೇವೆ’ ಎಂದರು.

ರಾಹುಲ್ ಗಾಂಧಿ ಅವರು ಒಟ್ಟು 20 ನಿಮಿಷ ಮಾತನಾಡಿದರು. ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ಸಿಂಗ್ ಸುರ್ಜೇವಾಲಾ, ಸಚಿವರಾದ ನಾಗೇಂದ್ರ, ಸಂತೋಷ್ ಲಾಡ್, ಜಮೀರ್ ಅಹಮದ್ ಖಾನ್ ಮತ್ತಿತರರು ಇದ್ದರು.

‘ವಿಶ್ವದ ಜೀನ್ಸ್ ರಾಜಧಾನಿ ಬಳ್ಳಾರಿ’

‘ಬಳ್ಳಾರಿಯನ್ನು ವಿಶ್ವದ ಜೀನ್ಸ್ ರಾಜಧಾನಿ ಮಾಡುವ ಉದ್ದೇಶವಿದೆ. ಇದನ್ನು ಈ ಹಿಂದೆಯು ಹೇಳಿದ್ದೆ. ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿದ್ದೇನೆ’ ಎಂದು ಕಾಂಗ್ರೆಸ್ ನಾಯಕ ರಾಹಲ್ ಗಾಂಧಿ ತಿಳಿಸಿದರು.

‘ಬಳ್ಳಾರಿಯಲ್ಲಿ ಆದಷ್ಟು ಬೇಗ ಅಪಾರೆಲ್ ಪಾರ್ಕ್ ಬರಲಿದ್ದು, ಈ ಕ್ಷೇತ್ರದ ಜನರಿಗೆ ಒಳ್ಳೆಯದಾಗಲಿದೆ. ಯಾರೂ ಸಹ ಆತಂಕಪಡುವ ಅಗತ್ಯವಿಲ್ಲ. ಎಲ್ಲರಿಗೂ ನೆಮ್ಮದಿಯ ಬದುಕು ಸಿಗಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT