ಅನ್ನದಾನತ ಆದಾಯ ಹೆಚ್ಚಿಸಿದ ಇ–ಮಂಡಿ

ಕೃ ಷಿ ಉತ್ಪನ್ನಗಳಿಗೆ ಯೋಗ್ಯ ಬೆಲೆಗೆ ತಂದುಕೊಡಲು ಕರ್ನಾಟಕ ಸ‌ರ್ಕಾರ ನಾಲ್ಕು ವರ್ಷಗಳ ಹಿಂದೆ ಆರಂಭಿಸಿದ ‘ಇ-ಮಂಡಿ’ ಯೋಜನೆ ಈಗ ರಾಷ್ಟ್ರದ ಗಮನ ಸೆಳೆದಿದೆ.

ರಾಜ್ಯದ 162 ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ (ಎಪಿಎಂಸಿ) ಹಂತ ಹಂತವಾಗಿ ಸ್ಥಾಪಿಸಲಾದ ಇ–ಮಂಡಿಗಳಿಂದಾಗಿ ವ್ಯವಹಾರಗಳಲ್ಲಿ ಪಾರದರ್ಶಕತೆ ಹೆಚ್ಚಿದೆ. ಕೃಷಿ ಉತ್ಪನ್ನಗಳ ಖರೀದಿಗೆ ವರ್ತಕರಲ್ಲಿ ಪೈಪೋಟಿಯೂ ಏರ್ಪಟ್ಟಿದೆ. ವರ್ತಕರ ಶೋಷಣೆ ತಪ್ಪಿಸುವಲ್ಲಿ ಯಶಸ್ವಿಯಾಗಿರುವ ರಾಜ್ಯದ ಇ-ಮಾರುಕಟ್ಟೆ ಮಾದರಿಯನ್ನು ಮೆಚ್ಚಿದ ಕೇಂದ್ರ ಸರ್ಕಾರ ಅದನ್ನು ದೇಶದಾದ್ಯಂತ ವಿಸ್ತರಿಸಿದೆ. ಪರವಾನಗಿ ಪಡೆದ ವರ್ತಕರು, ರಾಜ್ಯದ ಯಾವುದೇ ಮೂಲೆಯಲ್ಲಿ ಕುಳಿತು ಆನ್‌ಲೈನ್‌ನಲ್ಲಿ ಕೃಷಿ ಉತ್ಪನ್ನಗಳನ್ನು ಖರೀದಿಸಬಹುದು.

ಬೆಳೆಗೆ ಬೆಲೆ ತಂದ ಇ–ಮಾರುಕಟ್ಟೆ

ಆರಂಭದ ಎರಡು ವರ್ಷಗಳಲ್ಲಿ ಈ ವ್ಯವಸ್ಥೆಯಡಿ ಕೊಬ್ಬರಿ, ಉದ್ದು, ಕಡಲೆಬೇಳೆ, ತೊಗರಿಬೇಳೆ ಮಾರಾಟ ಮಾಡಿದ ರೈತರಿಗೆ ಸರಾಸರಿ ಆದಾಯ 38% ರಷ್ಟು ಹೆಚ್ಚಳವಾಗಿದೆ. ದೇಶದ ವಿವಿಧ ಸಗಟು ಮಾರುಕಟ್ಟೆ ದರಗಳಿಗೆ ಹೋಲಿಸಿದರೆ ಕರ್ನಾಟಕದ ಇ-ಮಾರುಕಟ್ಟೆಯಲ್ಲಿ ಮಾರಾಟವಾದ ಕೃಷಿ ಸರಕುಗಳ ಬೆಲೆಗಳು ಅಧಿಕವಾಗಿವೆ. ಇದರಿಂದ ಹೆಚ್ಚಿನ ರೈತರಿಗೆ ಲಾಭವಾಗಿದೆ ಎಂದು ನೀತಿ ಆಯೋಗವೂ ಪ್ರಶಂಸೆ ವ್ಯಕ್ತಪಡಿಸಿದೆ.

‘ಇದಕ್ಕೂ ಮುನ್ನ ರೈತರ ಶೇಕಡ 75ರಷ್ಟು ಆದಾಯ ಮಧ್ಯವರ್ತಿಗಳ ಪಾಲಾಗುತ್ತಿತ್ತು. ಈಗ ಇ-ಮಾರುಕಟ್ಟೆಯಲ್ಲಿ ಬೆಲೆ ನಿಗದಿಯಾಗುವ ಕಾರಣ ರೈತರಿಗೆ ಹೆಚ್ಚಿನ ಲಾಭವಾಗುತ್ತಿದೆ’ ಎನ್ನುತ್ತಾರೆ ಈ ಯೋಜನೆಯ ರೂವಾರಿ ಹಾಗೂ ರಾಷ್ಟ್ರೀಯ ಇ–ಮಾರುಕಟ್ಟೆ ವ್ಯವಸ್ಥಾಪಕ ನಿರ್ದೇಶಕ ಮನೋಜ್ ರಾಜನ್.

₹1 ಲಕ್ಷ ಕೋಟಿಗೂ ಅಧಿಕ ವಹಿವಾಟು

ರಾಜ್ಯದಲ್ಲಿ ಸದ್ಯ 162 ಇ-ಮಂಡಿಗಳಿವೆ. ಈವರೆಗೂ ಸುಮಾರು ₹1.10 ಲಕ್ಷ ಕೋಟಿಗೂ ಅಧಿಕ ವಹಿವಾಟು ನಡೆಸಿವೆ. ಈ ಮಂಡಿಗಳು ಇ-ವ್ಯಾಪಾರ, ಇ-ಪರವಾನಗಿ (ಪರ್ಮಿಟ್), ಇ-ಪಾವತಿ, ವೈಜ್ಞಾನಿಕ ಶ್ರೇಯಾಂಕ ಮತ್ತು ವಿಶ್ಲೇಷಣೆ ನೀಡುವ ವ್ಯವಸ್ಥೆ ಹೊಂದಿವೆ.

 ಮೂರು ವರ್ಷಗಳಲ್ಲಿ 29 ಜಿಲ್ಲೆಗಳ 162 ಎಪಿಎಂಸಿಗಳನ್ನು ಇದರ ವ್ಯಾಪ್ತಿಗೆ ತರಲಾಗಿದೆ. ಸುಮಾರು 34,523 ಪರವಾನಗಿ ಹೊಂದಿರುವ ವರ್ತಕರು ಇ-ಮಂಡಿ ಮೂಲಕ ವಹಿವಾಟು ನಡೆಸುತ್ತಿದ್ದಾರೆ. 49 ಲಕ್ಷ ರೈತರು ಈ ಸೇವೆ ಪಡೆಯಲು ಹೆಸರು ನೋಂದಾಯಿಸಿದ್ದಾರೆ. ಇಲ್ಲಿಯವರೆಗೆ ಸುಮಾರು 501 ಲಕ್ಷ  ಟನ್ ಸರಕು ವಹಿವಾಟು ನಡೆದಿದೆ.

ಮೊದಲ ಫಲಾನುಭವಿ

ಕೃಷಿ ಉತ್ಪನ್ನಗಳಿಗೆ ನ್ಯಾಯಯುತ ದರ ಒದಗಿಸಲು ಎಪಿಎಂಸಿ ಸ್ಥಾಪಿಸಲಾಗಿತ್ತು. ಅವುಗಳ ಉದ್ದೇಶ ಈಡೇರದ ಕಾರಣ ರೈತರಿಗೆ ಆಗುತ್ತಿದ್ದ ಅನ್ಯಾಯ ನಿವಾರಿಸಲು, ಇ-ಮಂಡಿ ಹುಟ್ಟಿಕೊಂಡವು. ಕರ್ನಾಟಕ ಸರ್ಕಾರ ಮತ್ತು ಎನ್‌ಸಿಡಿಇಎಕ್ಸ್ ಜಂಟಿ ಸಹಯೋಗದಲ್ಲಿ ಇ-ಮಂಡಿ ಸ್ಥಾಪಿಸಲಾಯಿತು.

2014ರ ಫೆಬ್ರುವರಿ 22ರಂದು ರಾಜ್ಯದಲ್ಲಿ ಮೊದಲ ಬಾರಿಗೆ ತುಮಕೂರು, ತಿಪಟೂರು ಮತ್ತು ಚಾಮರಾಜನಗರದ ಎಪಿಎಂಸಿಯಲ್ಲಿ ಆನ್‍ಲೈನ್ ಟೆಂಡರ್ ಸೇವೆಗೆ ಚಾಲನೆ ನೀಡಲಾಯಿತು. ಏಷ್ಯಾದಲ್ಲೇ ಅತ್ಯಂತ ದೊಡ್ಡ ಕೊಬ್ಬರಿ ಮಾರುಕಟ್ಟೆ ಎಂಬ ಖ್ಯಾತಿ ಪಡೆದ ತಿಪಟೂರು ಎಪಿಎಂಸಿಯಲ್ಲಿ ಆನ್‌ಲೈನ್ ಟ್ರೇಡಿಂಗ್‌ ಜಾರಿಯಾದ ನಂತರ, ಕೊಬ್ಬರಿ ಬೆಲೆಯಲ್ಲಿ ಮೂರು ಪಟ್ಟು ಏರಿಕೆಯಾಯಿತು.

ಕ್ವಿಂಟಲ್‌ ಕೊಬ್ಬರಿಗೆ ₹3 ಸಾವಿರ ಪಡೆಯುತ್ತಿದ್ದ ತೆಂಗು ಬೆಳೆಗಾರರು, ಆನ್‌ಲೈನ್‌ ಹರಾಜಿನಲ್ಲಿ ಕ್ವಿಂಟಲ್‌ಗೆ ₹ 9,106 ಎಣಿಸಿಕೊಂಡರು. ಐದಾರು ಸಾವಿರ ರೂಪಾಯಿಗಳ ಆಸುಪಾಸಿನಲ್ಲಿದ್ದ ಕ್ವಿಂಟಲ್‌ ಹುಣಸೆ ಹಣ್ಣಿನ ಬೆಲೆ ₹13 ಸಾವಿರ ಗಡಿ ದಾಟಿದೆ.

***

• 40 ಇ–ಮಂಡಿಗಳಲ್ಲಿ ಉತ್ಪನ್ನಗಳ ಗುಣ ವಿಶ್ಲೇಷಣೆಗೆ ಪ್ರಯೋಗಾಲಯ   

• ಉತ್ಪನ್ನಗಳ ಸ್ವಚ್ಛತೆ, ವರ್ಗೀಕರಣ, ಪ್ಯಾಕ್‌ಗೆ ಆಧುನಿಕ ಯಂತ್ರೋಪಕರಣ

• ಆನ್‍ಲೈನ್‌ನಲ್ಲಿಯೇ ಟೆಂಡರ್; ಉತ್ಪನ್ನಗಳ ಸಾಗಾಟಕ್ಕೆ ಇ-ಪರ್ಮಿಟ್

• ಖರೀದಿದಾರರಿಗೆ ಏಕೀಕೃತ ಲೈಸನ್ಸ್ ವಿತರಣೆ

• ಯಾವುದೇ ಮಾರುಕಟ್ಟೆಯಲ್ಲೂ ಇ-ಟೆಂಡರ್‌ನಲ್ಲಿ ಭಾಗವಹಿಸಲು ಅವಕಾಶ

• ಉತ್ಪನ್ನಗಳ ಲಭ್ಯತೆ, ಗುಣಮಟ್ಟದ ಬಗ್ಗೆ ಆನ್‍ಲೈನ್‍ನಲ್ಲೇ ಮಾಹಿತಿ

• ಬೆಳೆಗಾರರಿಗೆ ಸಕಾಲದಲ್ಲಿ ಹಣ ಪಾವತಿ

• ಉಗ್ರಾಣ ಆಧರಿತ ಉತ್ಪನ್ನಕ್ಕೆ ಬ್ಯಾಂಕ್‌ಗಳಿಂದ ಸಾಲ ಸೌಲಭ್ಯ

• ಮಾರುಕಟ್ಟೆ ಧಾರಣೆ ಬಗ್ಗೆ ರೈತರಿಗೆ ಎಸ್‍ಎಂಎಸ್

• ಮಾರುಕಟ್ಟೆ ಧಾರಣೆ ಮಾಹಿತಿಗೆ ಉಚಿತ ಸಹಾಯವಾಣಿ (1800-425-1552)

ಪ್ರಮುಖ ಸುದ್ದಿಗಳು