ಶೀಲರಕ್ಷಣೆಯ ಉಪಾಯ

ಹಿಂದೆ ಬ್ರಹ್ಮದತ್ತ ರಾಜ್ಯವಾಳುತ್ತಿದ್ದಾಗ ಬೋಧಿಸತ್ವ ಅವನ ಪಟ್ಟ ಮಹಿಷಿಯ ಹೊಟ್ಟೆಯಲ್ಲಿ ಮಗನಾಗಿ ಹುಟ್ಟಿದ್ದ. ಅವನಿಗೆ ಬ್ರಹ್ಮದತ್ತ ಕುಮಾರ ಎಂಬ ಹೆಸರಿತ್ತು. ಅವನು ವಾರಣಾಸಿಗೆ ಹೋಗಿ ಸಕಲ ವಿದ್ಯಾಪಾರಂಗತನಾಗಿ ಮರಳಿ ಬಂದು ಯುವರಾಜನಾದ. ಆ ಕಾಲದಲ್ಲಿ ಸಾಮಾನ್ಯ ಜನ ದೈವಭಕ್ತರಾಗಿದ್ದು ಪುರೋಹಿತರ ಮಾತುಗಳನ್ನು ಕೇಳಿ ಕುರಿ, ಕೋಳಿ, ಎಮ್ಮೆ, ಹಂದಿ ಮತ್ತಿತರ ಪ್ರಾಣಿಗಳನ್ನು ಕೊಂದು ಬಲಿಕರ್ಮಗಳನ್ನು ಮಾಡುತ್ತಿದ್ದರು. ಪ್ರಾಣಿಹಿಂಸೆ ಬಲುಕ್ರೂರವಾದದ್ದೆಂಬುದನ್ನು ತಿಳಿದ ಬೋಧಿಸತ್ವ ತಾನು ರಾಜನಾದ ಮೇಲೆ ಹೇಗಾದರೂ ಉಪಾಯದಿಂದ ಇದನ್ನು ತಪ್ಪಿಸಬೇಕು ಎಂದು ಮನದಲ್ಲಿ ತೀರ್ಮಾನಿಸಿದ.

ಒಂದು ದಿನ ರಥದಲ್ಲಿ ಬರುವಾಗ ಒಂದು ಆಲದ ಮರದ ಹತ್ತಿರ ನೂರಾರು ಜನ ನೆರೆದಿದ್ದನ್ನು ಕಂಡ. ಅವರು ಆಲದ ಮರದ ದೇವತೆಯನ್ನು ಪೂಜಿಸಿ ತಮಗೆ ಬೇಕಾದ ಬಯಕೆಗಳನ್ನು ಕೇಳಿಕೊಳ್ಳುತ್ತಿದ್ದರು. ತಾನೂ ರಥದಿಂದಿಳಿದು ಗಂಧ-ಪುಷ್ಪಗಳಿಂದ ಪೂಜೆ ಮಾಡಿ ಅರಮನೆಗೆ ಬಂದ. ಅಂದಿನಿಂದ ಮೇಲಿಂದ ಮೇಲೆ ಬೋಧಿಸತ್ವ ಆ ಮರದ ಪೂಜೆಗಾಗಿ ಹೋಗತೊಡಗಿದ. ಇದು ರಾಜ್ಯದ ಎಲ್ಲರ ಗಮನಕ್ಕೂ ಬಂದಿತು. ಸ್ವಲ್ಪ ಕಾಲದ ನಂತರ ತಂದೆ ಕಾಲವಾದಾಗ ಬೋಧಿಸತ್ವನೇ ರಾಜನಾದ. ಅವನು ಅತ್ಯಂತ ಧರ್ಮಿಷ್ಠನಾಗಿ, ರಾಜಧರ್ಮಕ್ಕೆ ಅನುಗುಣವಾಗಿ ರಾಜ್ಯಭಾರ ಮಾಡುತ್ತ ಜನಪ್ರಿಯನಾದ. ಆಗ ಪೂಜೆಯಲ್ಲಿ ಹಿಂಸೆಯನ್ನು ನಿಲ್ಲಿಸುವುದಕ್ಕಾಗಿ ಆಲೋಚನೆಯೊಂದನ್ನು ಮಾಡಿದ.

ದರ್ಬಾರಿನಲ್ಲಿ ಅಮಾತ್ಯರನ್ನು, ಪುರೋಹಿತರನ್ನು ಹಾಗೂ ನಗರದ ಹಿರಿಯರನ್ನು ಕರೆಯಿಸಿ ಕೇಳಿದ, ‘ನೀವೆಲ್ಲರೂ ದೇಶಕ್ಕೆ ಒಳ್ಳೆಯದನ್ನೇ ಬಯಸುವವರು. ನನಗೆ ಈ ರಾಜಪದವಿ ಹೇಗೆ ಹಾಗೂ ಏಕೆ ದೊರಕಿತೆಂಬುದು ತಿಳಿದಿದೆಯೇ?’ ಅಮಾತ್ಯರು ಹೇಳಿದರು, ‘ತಾವು ಪ್ರಭುಗಳ ಹಿರಿಯ ಪುತ್ರರಾದ್ದರಿಂದ ಲಭಿಸಿತು’. ಬೋಧಿಸತ್ವ ನಕ್ಕು ಹೇಳಿದ, ‘ಅದಕ್ಕಲ್ಲ ನನಗೆ ರಾಜ್ಯ ದೊರೆತದ್ದು. ತಮಗೆಲ್ಲ ತಿಳಿದಿದೆ ನಾನು ಈ ನಗರ ಮಧ್ಯದಲ್ಲಿರುವ ಆಲದ ಮರವನ್ನು ಅತ್ಯಂತ ಗೌರವದಿಂದ ಪೂಜಿಸುತ್ತೇನೆ. ಅದರ ಕೃಪೆಯಿಂದ ರಾಜ್ಯ ದೊರಕಿದೆ. ನಾನೊಂದು ಹರಕೆ ಹೊತ್ತಿದ್ದೇನೆ. ಮರದ ಕೃಪೆಯಿಂದ ರಾಜನಾದರೆ ಅದಕ್ಕೆ ಬಲಿ ಕರ್ಮ ಮಾಡುತ್ತೇನೆಂಬುದು ಹರಕೆ. ಆದ್ದರಿಂದ ತಾವೆಲ್ಲ ತಡಮಾಡದೆ ಬಲಿಗೆ ಪ್ರಾಣಿಗಳನ್ನು ಸಿದ್ಧಮಾಡಿ’.

ಅಮಾತ್ಯರು, ‘ಆಯಿತು ಮಹಾರಾಜಾ, ಯಾವ ಯಾವ ಪ್ರಾಣಿಗಳನ್ನು ತರಬೇಕು?’ ಎಂದು ಕೇಳಿದರು. ರಾಜ ಹೇಳಿದ, ‘ನನ್ನ ದೇಶದಲ್ಲಿ ಯಾರು ಪ್ರಾಣಿಹಿಂಸೆ ಮಾಡುತ್ತಾರೋ, ಯಾರು ಪಂಚದುಶ್ಶೀಲ ಕರ್ಮಗಳನ್ನು ಮಾಡುತ್ತಾರೋ ಅಂತಹ ಸಾವಿರ ಜನರನ್ನು ಕೊಂದು ಅವರ ಕರುಳಿನ ಬತ್ತಿಗಳನ್ನು ಮಾಡಿ ದೀಪ ಉರಿಸಿ, ಅವರ ಹೃದಯದ ಮಾಂಸವನ್ನು ಬಲಿಕೊಡಬೇಕು. ಆದ್ದರಿಂದ ತಕ್ಷಣವೇ ಇಡೀ ದೇಶದಲ್ಲಿ ಡಂಗುರ ಸಾರಿಸಿ ಪ್ರಾಣಿಹಿಂಸೆ ಮಾಡುವವರನ್ನು ಹೆಡೆಮುರಿ ಕಟ್ಟಿ ಕರೆತನ್ನಿರಿ.’

ಅಂತೆಯೇ ಎಲ್ಲೆಡೆಗೆ ಡಂಗುರ ಸಾರಲಾಯಿತು. ಬೋಧಿಸತ್ವ ರಾಜ್ಯಭಾರ ಮಾಡುವವರೆಗೂ ಇಡೀ ದೇಶದಲ್ಲಿ ಪ್ರಾಣಿಹಿಂಸೆ ಮಾಡುವ, ಕೆಟ್ಟ ಕೆಲಸಗಳನ್ನು ಮಾಡುವ ಒಬ್ಬ ವ್ಯಕ್ತಿಯೂ ಕಾಣಲಿಲ್ಲ. ಹೀಗೆ ಯಾರಿಗೂ ಕಷ್ಟ ನೀಡದೆ, ಜನರನ್ನು ಶೀಲ ಮಾರ್ಗದಲ್ಲಿ ಹೋಗುವಂತೆ, ಪ್ರಾಣಿಹಿಂಸೆ ಮಾಡದಂತೆ ನೋಡಿಕೊಂಡು ತನ್ನ ಮನದಾಸೆಯನ್ನು ತೀರಿಸಿಕೊಂಡ.

ಇದು ಸಮರ್ಥ ಆಡಳಿತಗಾರರು ಮಾಡುವ ಕೆಲಸ. ಜನಕ್ಕೆ ಒಳ್ಳೆಯದಾಗುವುದನ್ನು ಉಪಾಯದಿಂದ ಯೋಜಿಸಿ ಕಾರ್ಯಗತ ಮಾಡುತ್ತಾರೆ. 

ಪ್ರಮುಖ ಸುದ್ದಿಗಳು