ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆ ಚುನಾವಣೆ | ಮೊದಲ ಹಂತದ ಕಣ ಕೌತುಕ; ಯಾರಿಗೆ ಸವಾಲು, ಯಾರಿಗೆ ಪ್ರತಿಷ್ಠೆ?

Published 25 ಏಪ್ರಿಲ್ 2024, 21:24 IST
Last Updated 25 ಏಪ್ರಿಲ್ 2024, 21:24 IST
ಅಕ್ಷರ ಗಾತ್ರ
ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದ ಮೊದಲ ಹಂತದ ಮತದಾನಕ್ಕೆ ಅಖಾಡ ಸಿದ್ಧವಾಗಿದ್ದು, ಮೂರು ರಾಜಕೀಯ ಪಕ್ಷಗಳ ನಾಯಕರಿಗೆ ತಮ್ಮ ನೆಲೆ–ಬೆಲೆ ಏನೆಂದು ಗೊತ್ತುಪಡಿಸಿಕೊಳ್ಳುವ ಅಗ್ನಿಪರೀಕ್ಷೆಯೂ ಇದಾಗಿದೆ. 28 ಕ್ಷೇತ್ರಗಳ ಪೈಕಿ ಮೊದಲ ಹಂತದಲ್ಲಿ ನಡೆಯುತ್ತಿರುವ 14 ಕ್ಷೇತ್ರಗಳ ಮತದಾನ ಪೈಕಿ 2019ರಲ್ಲಿ ನಡೆದ ಚುನಾವಣೆಯಲ್ಲಿ ತಲಾ ಒಂದು ಸ್ಥಾನಗಳನ್ನಷ್ಟೇ ಕಾಂಗ್ರೆಸ್, ಜೆಡಿಎಸ್ ಗೆದ್ದುಕೊಂಡಿದ್ದವು. ಒಂದು ಕ್ಷೇತ್ರ ಪಕ್ಷೇತರರ ಪಾಲಾಗಿತ್ತು. ಉಳಿದ 11ರಲ್ಲಿ ಬಿಜೆಪಿಯೇ ಗೆದ್ದಿತ್ತು. ಈ ಚುನಾವಣೆ ಯಾರಿಗೆ ಸವಾಲು–ಯಾರಿಗೆಲ್ಲ ಪ್ರತಿಷ್ಠೆ ಎನ್ನುವ ಮಾಹಿತಿ ಇಲ್ಲಿಯ ಹೂರಣವಾಗಿದೆ...

ಮಂಡ್ಯ

ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಎಚ್‌.ಡಿ. ಕುಮಾರಸ್ವಾಮಿ ಅವರ ಸ್ಪರ್ಧೆಯಿಂದ ಮಂಡ್ಯ ಜಿದ್ದಾಜಿದ್ದಿಯ ಕಣವಾಗಿ ಮಾರ್ಪಟ್ಟಿದೆ. ಅವರು ಜೆಡಿಎಸ್‌ ರಾಜ್ಯ ಘಟಕದ ಹಾಲಿ ಅಧ್ಯಕ್ಷ, ಶಾಸಕಾಂಗ ಪಕ್ಷದ ನಾಯಕ ಕೂಡ. 2019ರ ಚುನಾವಣೆಯಲ್ಲಿ ಮಗ ನಿಖಿಲ್‌ ಕುಮಾರಸ್ವಾಮಿ ಸೋತ ಕ್ಷೇತ್ರದಲ್ಲಿ ಈ ಬಾರಿ ಅಪ್ಪನೇ ಅಭ್ಯರ್ಥಿ. ಕಾಂಗ್ರೆಸ್‌ ಅಭ್ಯರ್ಥಿಯಾಗಿರುವ ಉದ್ಯಮಿ ವೆಂಕಟರಮಣೇಗೌಡ (ಸ್ಟಾರ್‌ ಚಂದ್ರು) ಪ್ರಬಲ ಎದುರಾಳಿಯಾಗಿದ್ದಾರೆ. ಮಂಡ್ಯ ಜಿಲ್ಲೆಯ ಮೇಲೆ ಜೆಡಿಎಸ್ ಬಲವಾದ ಹಿಡಿತ ಹೊಂದಿತ್ತು. 2023ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ ಅಲ್ಲಿ ತೀವ್ರ ಹಿನ್ನಡೆ ಅನುಭವಿಸಿದೆ. ಈಗ ಬಿಜೆಪಿ ಜತೆಗಿನ ಮೈತ್ರಿಯ ಬಲದಲ್ಲಿ ಗೆದ್ದು ಮಂಡ್ಯದಲ್ಲಿ ಮತ್ತೆ ಹಿಡಿತ ಸಾಧಿಸುವ ಪ್ರಯತ್ನದಲ್ಲಿದ್ದಾರೆ. ಸ್ಟಾರ್‌ ಚಂದ್ರು ಅವರನ್ನು ಗೆಲ್ಲಿಸಿ ಮಂಡ್ಯ ಜಿಲ್ಲೆಯ ಮೇಲಿನ ಹಿಡಿತವನ್ನು ಮತ್ತಷ್ಟು ಗಟ್ಟಿಗೊಳಿಸುವ ಉಮೇದಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಇದ್ದಾರೆ.

ಬೆಂಗಳೂರು ಗ್ರಾಮಾಂತರ

ಮೂರು ಬಾರಿ ಈ ಕ್ಷೇತ್ರದಿಂದ ಆಯ್ಕೆಯಾಗಿರುವ ಕಾಂಗ್ರೆಸ್‌ನ ಡಿ.ಕೆ. ಸುರೇಶ್‌ ಅವರಿಗೆ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರ ಅಳಿಯ, ಹೃದ್ರೋಗ ತಜ್ಞ ಡಾ.ಸಿ.ಎನ್‌. ಮಂಜುನಾಥ್‌ ಪ್ರತಿಸ್ಪರ್ಧಿ. ಒಂದು ಕಾಲದಲ್ಲಿ ದೇವೇಗೌಡರ ಕುಟುಂಬದ ಭದ್ರಕೋಟೆಯಾಗಿದ್ದ ಬೆಂಗಳೂರು ಗ್ರಾಮಾಂತರ ಈಗ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಕುಟುಂಬದ ಹಿಡಿತದಲ್ಲಿದೆ. ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಅಳಿಯನ ಮೂಲಕ ಮತ್ತೆ ಹಿಡಿತ ಸಾಧಿಸಲು ಗೌಡರ ಕುಟುಂಬ ಪ್ರಯತ್ನಿಸುತ್ತಿದೆ. ತನ್ನ ತಮ್ಮನನ್ನು ಗೆಲ್ಲಿಸಿಕೊಂಡು ಕ್ಷೇತ್ರ ಉಳಿಸಿಕೊಳ್ಳುವುದು ಶಿವಕುಮಾರ್‌ಗೆ ಪ್ರತಿಷ್ಠೆಯಾಗಿದ್ದರೆ, ಕ್ಷೇತ್ರವನ್ನು ಕಿತ್ತುಕೊಂಡು ಬಿಜೆಪಿಗೆ ಕೊಡುವ ಮೂಲಕ ಜೆಡಿಎಸ್‌ಗೆ ಇನ್ನೂ ಹಿಡಿತವಿದೆ ಎಂದು ತೋರಿಸುವುದು ಗೌಡರು ಮತ್ತು ಕುಮಾರಸ್ವಾಮಿ ಅವರಿಗೆ ಸವಾಲಾಗಿದೆ.

ಕೋಲಾರ

ಕಳೆದ ಬಾರಿ ತಾನು ಗೆದ್ದಿದ್ದ ಕೋಲಾರ (ಎಸ್‌ಸಿ) ಕ್ಷೇತ್ರವನ್ನೇ ‘ಮೈತ್ರಿ’ಯ ಕಾರಣಕ್ಕಾಗಿ ಜೆಡಿಎಸ್‌ಗೆ ಬಿಜೆಪಿ ತ್ಯಾಗ ಮಾಡಿದೆ. ಹೀಗಾಗಿ, ಎಂ. ಮಲ್ಲೇಶ್‌ ಬಾಬು ಅವರಿಗೆ ಟಿಕೆಟ್‌ ‘ಅದೃಷ್ಟ’ ಒಲಿದಿದೆ. ಸಚಿವ ಕೆ.ಎಚ್‌. ಮುನಿಯಪ್ಪ ಮತ್ತು ಕೆ.ಆರ್‌. ರಮೇಶ್‌ಕುಮಾರ್‌ ಬಣದ ತಿಕ್ಕಾಟದ ಪರಿಣಾಮ ಅಚ್ಚರಿಯ ಅಭ್ಯರ್ಥಿಯಾದವರು ಕಾಂಗ್ರೆಸ್‌ನ ಕೆ.ವಿ ಗೌತಮ್‌. ಜೆಡಿಎಸ್‌ ಗೆದ್ದರೆ ತಮ್ಮ ಹಿಡಿತ ತಪ್ಪಬಹುದೆಂಬ ಆತಂಕ ಬಿಜೆಪಿಗರದ್ದು.  ಏಳು ಬಾರಿ ಗೆದ್ದ ಕ್ಷೇತ್ರದಲ್ಲಿ ತನ್ನ ಮಾತು ನಡೆದಿಲ್ಲ ಎಂಬ ಮುನಿಯಪ‍್ಪ ಅವರ ಒಳ ಬೇಗುದಿ, ಬಣ ಹಟದ ಕಾರಣಕ್ಕೆ ಈ ಕ್ಷೇತ್ರ ಗಮನಸೆಳೆದಿದೆ. ರಮೇಶ್ ಕುಮಾರ್, ಸಚಿವ ಎಂ.ಸಿ. ಸುಧಾಕರ್, ಶಾಸಕ ಕೊತ್ತೂರು ಮಂಜುನಾಥ್‌, ನಜೀರ್ ಅಹಮದ್ ಬಣ ಹಾಗೂ ಮುನಿಯಪ್ಪ ಬಣದ ಮಧ್ಯೆ ಪೈಪೋಟಿ ಇದ್ದು, ಯಾರ ಬಣ ಮೇಲುಗೈ ಸಾಧಿಸಲಿದೆ ಎಂಬ ಕಾರಣಕ್ಕೆ ಕ್ಷೇತ್ರದತ್ತ ಎಲ್ಲರ ಚಿತ್ತ ಇದೆ.

ಉಡುಪಿ–ಚಿಕ್ಕಮಗಳೂರು

ಸತತ ಎರಡು ಬಾರಿ ಇಲ್ಲಿ ಗೆದ್ದು, ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ ವಿರುದ್ಧ ಬಿಜೆಪಿಗರೇ ‘ಗೋ ಬ್ಯಾಕ್‌’ ಹೇಳಿದ್ದಾರೆ. ಶೋಭಾ ವಿರುದ್ಧ ಆಡಳಿತ ವಿರೋಧಿ ಅಲೆ ಇದ್ದ ಕಾರಣಕ್ಕೆ, ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿಗೆ ಬಿಜೆಪಿ ಟಿಕೆಟ್‌ ಒಲಿದಿದೆ. ಬಿಜೆಪಿಯ ಈ ದಾಳಕ್ಕೆ ಪ್ರತಿ ದಾಳ ಪ್ರಯೋಗಿಸಿರುವ ಕಾಂಗ್ರೆಸ್‌, ಬಿಜೆಪಿಯಲ್ಲಿದ್ದ ಕೆ. ಜಯಪ್ರಕಾಶ್ ಹೆಗ್ಡೆ ಅವರನ್ನು ಸೆಳೆದು ಟಿಕೆಟ್‌ ನೀಡಿದೆ. ಉಪಚುನಾವಣೆಯಲ್ಲಿ ಒಮ್ಮೆ ಸಂಸದರಾಗಿ ಇದೇ ಕ್ಷೇತ್ರದಿಂದ ಆಯ್ಕೆಯಾದವರು ಹೆಗ್ಡೆ. ಹಿಂದುತ್ವ ಮತಗಳನ್ನೇ ನೆಚ್ಚಿಕೊಂಡ ಕೋಟ ಅವರಿಗೆ ಮತದಾರರ ಮನ ಗೆಲ್ಲುವ ಉಮೇದು. ಕಾಂಗ್ರೆಸ್‌ನ ಸಾಂಪ್ರದಾಯಿಕ ಮತಗಳ ಜತೆಗೆ, ಬಂಟ ಮತ್ತು ಒಕ್ಕಲಿಗ ಮತಗಳನ್ನು ಸೆಳೆದು ಆಯ್ಕೆಯಾಗುವ ಸವಾಲು ಹೆಗ್ಡೆಯವರದ್ದು. 

ಬೆಂಗಳೂರು ಉತ್ತರ

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸ್ಪರ್ಧಿಸಿರುವ ಕಾರಣಕ್ಕೆ ಕ್ಷೇತ್ರ ಗಮನ ಸೆಳೆದಿದೆ. ಈಗ ಪ್ರತಿನಿಧಿಸುತ್ತಿರುವ ಉಡುಪಿ– ಚಿಕ್ಕಮಗಳೂರು ಕ್ಷೇತ್ರದಲ್ಲಿ ‘ಗೋ–ಬ್ಯಾಕ್‌’ ಎದುರಿಸಿದ ಶೋಭಾ, ಇಲ್ಲಿಗೆ ವಲಸೆ ಬಂದಿದ್ದಾರೆ. ಇಲ್ಲಿಯೂ ‘ಗೋ–ಬ್ಯಾಕ್‌’ ಕೂಗೆದ್ದಿತ್ತು. ಈ ಕ್ಷೇತ್ರದಲ್ಲಿ ಎರಡು ಬಾರಿ ವಿಜೇತರಾಗಿದ್ದ ಡಿ.ವಿ. ಸದಾನಂದಗೌಡ, ಎರಡೂ ಬಾರಿಯೂ ಕೇಂದ್ರ ಸಚಿವರಾಗಿದ್ದರು. ಶೋಭಾಗೂ ಕ್ಷೇತ್ರ ಹೊಸದಲ್ಲ. ಇದೇ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಯಶವಂತಪುರ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿ ಯಡಿಯೂರಪ್ಪ ಸಂಪುಟದಲ್ಲಿ ಸಚಿವರಾಗಿದ್ದವರು. ಬಿಜೆಪಿ ನಿರಂತರ ಗೆಲುವು ಈ ಬಾರಿಯೂ ವರವಾಗಲಿದೆ ಎಂಬ ನಿರೀಕ್ಷೆ ಶೋಭಾ ಅವರದ್ದು. ಇವರಿಗೆ ಕಾಂಗ್ರೆಸ್‌ನಿಂದ ಪ್ರೊ.ಎಂ.ವಿ. ರಾಜೀವ್‌ಗೌಡ ಅವರು ಪೈಪೋಟಿ ನೀಡುತ್ತಿದ್ದಾರೆ. ಯಶವಂತಪುರ ಕ್ಷೇತ್ರದ ಬಿಜೆಪಿ ಶಾಸಕ ಎಸ್.ಟಿ. ಸೋಮಶೇಖರ್, ಕಾಂಗ್ರೆಸ್‌ ಪರ ದುಡಿಯುತ್ತಿದ್ದಾರೆ. ಸ್ಥಳೀಯ ಮೂಲದ ಒಕ್ಕಲಿಗ ಎಂಬ ‘ಕಾರ್ಡ್‌’ ಬಿಟ್ಟಿರುವ ರಾಜೀವ್‌ಗೌಡರ ಹಿಂದೆ ಕಾಂಗ್ರೆಸ್ ದಂಡೇ ನಿಂತಿದೆ. 

ಬೆಂಗಳೂರು ದಕ್ಷಿಣ

ಸಂಸದ ಹಾಗೂ ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ಅವರು ಎರಡನೇ ಬಾರಿ ಆಯ್ಕೆ ಬಯಸಿ ಕಣದಲ್ಲಿದ್ದಾರೆ. ತೇಜಸ್ವಿ ಸೂರ್ಯ ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕ ಸುದ್ದಿಯಲ್ಲಿದ್ದವರು. ಬಿಜೆಪಿ ಭದ್ರಕೋಟೆ ಉಳಿಸಿಕೊಂಡು, ಪಕ್ಷದ ಮಾನ ಕಾಪಾಡುವುದು ತೇಜಸ್ವಿಗೆ ಇರುವ ಸವಾಲು. ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಮಾಜಿ ಶಾಸಕಿ ಸೌಮ್ಯಾ ರೆಡ್ಡಿ ಪ್ರಬಲ ಪೈಪೋಟಿ ಒಡ್ಡಿದ್ದಾರೆ. ಇವರಿಗೆ ತಂದೆ ರಾಮಲಿಂಗಾರೆಡ್ಡಿಯೇ ಪ್ರಮುಖ ಆಸರೆ. ಮಗಳ ಗೆಲುವಿಗಾಗಿ ರಾಮಲಿಂಗಾರೆಡ್ಡಿ ಶ್ರಮ ಹಾಕುತ್ತಿದ್ದಾರೆ. ತಮ್ಮದೇ ಆದ ರಾಜಕೀಯ ಪಟ್ಟುಗಳನ್ನು ಬಳಸುತ್ತಿದ್ದು, ನಿರ್ಣಾಯಕವಾಗಿರುವ ರೆಡ್ಡಿ ಹಾಗೂ ಒಕ್ಕಲಿಗ ಸಮುದಾಯಗಳ ಮತಗಳ ಮೇಲೆ ತಮ್ಮ ಗಮನ ಕೇಂದ್ರೀಕರಿಸಿದ್ದಾರೆ. ಸಚಿವರಾಗಿರುವ ಕಾರಣಕ್ಕೆ, ಮಗಳನ್ನು ಗೆಲ್ಲಿಸಿಕೊಳ್ಳುವ ಅನಿವಾರ್ಯವೂ ಅವರಿಗೆ ಎದುರಾಗಿದೆ. 

ಮೈಸೂರು

ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಸ್ಪರ್ಧೆಯಿಂದ ಮೈಸೂರು–ಕೊಡಗು ಲೋಕಸಭಾ ಕ್ಷೇತ್ರ ಗಮನ ಸೆಳೆದಿದೆ. ಹಾಲಿ ಸಂಸದ ಪ್ರತಾಪ ಸಿಂಹ ಕ್ಷೇತ್ರವನ್ನು ಎರಡು ಬಾರಿ ಪ್ರತಿನಿಧಿಸಿದ್ದರೂ, ಅವರಿಗೆ ಬಿಜೆಪಿ ಟಿಕೆಟ್‌ ತಪ್ಪಿಸಿ ಒಡೆಯರ್‌ ಅವರಿಗೆ ಮಣೆ ಹಾಕಿದೆ. ರಾಜವಂಶದ ಬಗೆಗಿನ ಜನರ ಭಾವನೆಯನ್ನು ಮತವಾಗಿ ಪರಿವರ್ತಿಸಲು  ಅವರನ್ನು ಕಣಕ್ಕೆ ಇಳಿಸಲಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಅವರ ತಂದೆ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಹಿಂದೆ ನಾಲ್ಕು ಬಾರಿ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಕಾಂಗ್ರೆಸ್‌ ತನ್ನ ಸಾಮಾನ್ಯ ಕಾರ್ಯಕರ್ತ ಎಂ. ಲಕ್ಷ್ಮಣ್‌ ಅವರನ್ನು ಒಡೆಯರ್ ವಿರುದ್ಧ ಕಣಕ್ಕೆ ಇಳಿಸಿದೆ. ಇಲ್ಲಿ ಲಕ್ಷ್ಮಣ ಉತ್ಸವಮೂರ್ತಿಯಾದರೆ, ಅಸಲಿಗೆ ಈ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಸಾಮರ್ಥ್ಯವನ್ನು ಪಣಕ್ಕಿಟ್ಟಿದ್ದಾರೆ. ಮುಖ್ಯಮಂತ್ರಿಯಾಗಿ ಮುಂದುವರಿಯಬೇಕಾದರೆ, ಕ್ಷೇತ್ರ ಗೆಲ್ಲಿಸಿಕೊಡಿ ಎಂದು ಭಾವನಾತ್ಮಕ ಅಸ್ತ್ರವನ್ನೂ ಪ್ರಯೋಗಿಸಿದ್ದಾರೆ.  ಮೋದಿ ಮತ್ತು ಸಿದ್ದರಾಮಯ್ಯನವರ ಜನಪ್ರಿಯತೆಗಳೇ ಚುನಾವಣೆ ಫಲಿತಾಂಶವನ್ನು ನಿರ್ಣಯಿಸುವ ಅಂಶಗಳಾಗಿವೆ.

ಹಾಸನ 

ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ. ದೇವೇಗೌಡ ಅವರು ತಾವು ಪ್ರತಿನಿಧಿಸುತ್ತಿದ್ದ ಹಾಸನ ಕ್ಷೇತ್ರವನ್ನು 2019ರ ಚುನಾವಣೆಯಲ್ಲಿ ಮೊಮ್ಮಗ ಪ್ರಜ್ವಲ್‌ಗೆ ಬಿಟ್ಟುಕೊಟ್ಟಿದ್ದರು. ಮೊದಲ ಪ್ರಯತ್ನದಲ್ಲೇ ಸಂಸತ್‌ ಪ್ರವೇಶಿಸಿದ್ದ ಪ್ರಜ್ವಲ್‌ ಈ ಬಾರಿಯೂ ಜೆಡಿಎಸ್‌ ಅಭ್ಯರ್ಥಿಯಾಗಿ ಮತ್ತೆ ಕಣಕ್ಕೆ ಇಳಿದಿದ್ದಾರೆ. ಕಳೆದ ಬಾರಿ ಅವರ ವಿರುದ್ಧ ಬಿಜೆಪಿಯಿಂದ ಸ್ಪರ್ಧಿಸಿದ್ದ ಎ.ಮಂಜು, ಬಳಿಕ ಜೆಡಿಎಸ್ ಸೇರಿ ಶಾಸಕರಾಗಿದ್ದಾರೆ. ಗೌಡರು ಮತ್ತು ಅವರ ಮಗ, ಶಾಸಕ ಎಚ್.ಡಿ. ರೇವಣ್ಣ ಅವರಿಗೆ ಕ್ಷೇತ್ರ ಉಳಿಸಿಕೊಳ್ಳುವುದು ಪ್ರತಿಷ್ಠೆಯಾಗಿದೆ. ವಿಧಾನಸಭೆ ಚುನಾವಣೆಯಲ್ಲಿ ಕಡಿಮೆ ಅಂತರದಿಂದ ಎಚ್.ಡಿ. ರೇವಣ್ಣ ವಿರುದ್ಧ ಹೊಳೆನರಸೀಪುರದಲ್ಲಿ ಸೋತಿದ್ದ ಶ್ರೇಯಸ್ ಪಟೇಲ್‌ ಅವರನ್ನು ಕಾಂಗ್ರೆಸ್ ಕಣಕ್ಕೆ ಇಳಿಸಿದೆ. ಕ್ಷೇತ್ರವನ್ನು ಜೆಡಿಎಸ್‌ನಿಂದ ಕಿತ್ತುಕೊಳ್ಳುವುದು ಸಿದ್ದರಾಮಯ್ಯ ಹಾಗೂ ಒಕ್ಕಲಿಗ ನಾಯಕ ಎಂದು ಬಿಂಬಿಸಿಕೊಳ್ಳುತ್ತಿರುವ ಡಿ.ಕೆ. ಶಿವಕುಮಾರ್‌ ಅವರಿಗೆ ಸವಾಲು. ಕ್ಷೇತ್ರ ಬಿಟ್ಟುಕೊಡುವುದರ ವಿರುದ್ಧ ಇದ್ದ ಮಾಜಿ ಶಾಸಕ ಬಿಜೆಪಿ ಪ್ರೀತಂ ಗೌಡ, ರೊಚ್ಚಿಗೆದ್ದಿದ್ದಾರೆ. ಮೇಲ್ನೋಟಕ್ಕೆ ಮೈತ್ರಿ ಇದ್ದರೂ ಗೌಡರು ಮತ್ತು ಕಾಂಗ್ರೆಸ್ ಮಧ್ಯೆ ಪೈಪೋಟಿ.

ಗಣ್ಯರಿಗೆಲ್ಲ ಗೆಲುವು ಏಕೆ ಮುಖ್ಯ?

ಸಿದ್ದರಾಮಯ್ಯ

ಆಡಳಿತ ಸೂತ್ರ ಹಿಡಿದ 10 ತಿಂಗಳ ಒಳಗೆ ಎದುರಾಗಿರುವ ಲೋಕಸಭೆ ಚುನಾವಣೆಯಲ್ಲಿ ‘ಕೈ’ ಮತ್ತಷ್ಟು ಬಲಪಡಿಸಿಕೊಳ್ಳಬೇಕಾದ ತುರ್ತು ಅನಿವಾರ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗಿದೆ. ಮತದಾರನಿಂದ ಪಂಚ ‘ಗ್ಯಾರಂಟಿ’ಗಳಿಗೆ ‘ಮತ’ ಪಡೆಯುವ ಜೊತೆಗೆ, ಕೇಂದ್ರದ ವಿರುದ್ಧ ಸಮರ ಸಾರುತ್ತಲೇ ಪ್ರಧಾನಿಗೆ ಸಡ್ಡು ಹೊಡೆದ ಕಾರ್ಯವೈಖರಿಯಿಂದ ‘ಫಲ’ ಪಡೆಯುವ, ಆ ಮೂಲಕ, ಬಿಜೆಪಿಯ ಭದ್ರಕೋಟೆಗಳಲ್ಲೂ ಬಿರುಕು ಮೂಡಿಸುವ ಸವಾಲಿದೆ. ಮುಖ್ಯವಾಗಿ, ತವರು ಕ್ಷೇತ್ರ ವರುಣವನ್ನು ಒಳಗೊಂಡ ಚಾಮರಾಜನಗರ ಮತ್ತು ಮೈಸೂರು– ಕೊಡಗು ಕ್ಷೇತ್ರವನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ಇದೆ.

ಡಿ.ಕೆ. ಶಿವಕುಮಾರ್

‘ಒಕ್ಕಲಿಗ ನಾಯಕ’ ಸಮುದಾಯದ ನಾಯಕರಾಗುವ ಉಮೇದಿರುವ ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರಿಗೆ ಹಳೆ ಮೈಸೂರು ಭಾಗ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲೇಬೇಕಾದ ಒತ್ತಡವಿದೆ. ಬೆಂಗಳೂರು ಗ್ರಾಮಾಂತರದಲ್ಲಿ ಸಹೋದರ ಡಿ.ಕೆ. ಸುರೇಶ್‌ ಬೆನ್ನಿಗೆ ನಿಂತಿರುವ ಶಿವಕುಮಾರ್‌‌, ಎಚ್‌.ಡಿ. ಕುಮಾರಸ್ವಾಮಿ ಕಣದಲ್ಲಿರುವ ಮಂಡ್ಯವನ್ನು ಗೆದ್ದೇ ಗೆಲ್ಲುವ ಶಪಥ ತೊಟ್ಟಿದ್ದಾರೆ. ಇನ್ನು ಒಕ್ಕಲಿಗರ ಪ್ರಾಬಲ್ಯದ ಹಾಸನ, ಕೋಲಾರ, ಚಿಕ್ಕಬಳ್ಳಾಪುರದ ಜತೆಗೆ, ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿ ಮೂರು ಕ್ಷೇತ್ರಗಳನ್ನು ಗೆಲ್ಲಿಸುವುದು ಪ್ರತಿಷ್ಠೆಯಾಗಿದೆ.

ಡಾ.ಎಚ್‌.ಸಿ. ಮಹದೇವಪ್ಪ

ಚಾಮರಾಜನಗರ (ಎಸ್‌ಸಿ) ಕ್ಷೇತ್ರದಿಂದ ‘ನೀವೇ ಅಖಾಡಕ್ಕಿಳಿಯಬೇಕು’ ಎಂದು ವರಿಷ್ಠರು ಪಟ್ಟು ಹಿಡಿದರೂ, ಅದನ್ನು ಮೀರಿ ಮಗ ಸುನಿಲ್‌ ಬೋಸ್‌ಗೆ ಟಿಕೆಟ್‌ ಕೊಡಿಸುವಲ್ಲಿ ಯಶಸ್ವಿಯಾದವರು ಸಚಿವ ಎಚ್.ಸಿ. ಮಹದೇವಪ್ಪ. ‘ಪುತ್ರನಿಗೆ ಟಿಕೆಟ್‌ ಕೊಟ್ಟರೆ ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ನನ್ನದು’ ಎಂದು ಪಕ್ಷದ ನಾಯಕರಿಗೆ ವಾಗ್ದಾನ ನೀಡಿರುವ ಮಹದೇವಪ್ಪ, ಕ್ಷೇತ್ರದಲ್ಲಿ ಬೆವರು ಸುರಿಸುತ್ತಿದ್ದಾರೆ. ಪುತ್ರನನ್ನು ಗೆಲ್ಲಿಸಲೇಬೇಕಾದ ಪ್ರತಿಷ್ಠೆಯ ಜೊತೆಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆಗಿನ ವಿಶ್ವಾಸ ಉಳಿಸಿಕೊಳ್ಳಬೇಕು, ಸಚಿವ ಸ್ಥಾನವನ್ನು ಇನ್ನಷ್ಟು ಭದ್ರಪಡಿಸಿಕೊಳ್ಳಬೇಕು ಎಂಬ ಒತ್ತಡವೂ ಇದೆ. 

ಬಿ.ಎಸ್. ಯಡಿಯೂರಪ್ಪ, ವಿಜಯೇಂದ್ರ

ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋತ ಬಳಿಕ ಬಿ.ವೈ.ವಿಜಯೇಂದ್ರ ಅವರಿಗೆ ಅಧ್ಯಕ್ಷ ಪಟ್ಟ ಕಟ್ಟಲಾಗಿದೆ. ಈಗ ಬಿಜೆಪಿ ಪ್ರತಿನಿಧಿಸುತ್ತಿರುವ 25 ಕ್ಷೇತ್ರಗಳಲ್ಲೂ ಗೆಲ್ಲಬೇಕೆಂಬ ಗುರಿಯನ್ನು ಪಕ್ಷದ ವರಿಷ್ಠರು ನೀಡಿದ್ದಾರೆ. ಮೊದಲ ಹಂತದಲ್ಲಿ 10ಕ್ಕಿಂತ ಹೆಚ್ಚು ಸ್ಥಾನ ಗೆಲ್ಲಿಸಿಕೊಂಡರಷ್ಟೇ ಅಧ್ಯಕ್ಷಗಾದಿ ಉಳಿದೀತು ಎಂಬ ಸ್ಥಿತಿ ಇದೆ. ಕಡಿಮೆ ಸ್ಥಾನ ಗೆದ್ದರೆ, ಅಧ್ಯಕ್ಷ ಸ್ಥಾನಕ್ಕೆ ಕುತ್ತಾಗಬಹುದು. ಇದು ಬಿ.ಎಸ್‌. ಯಡಿಯೂರಪ್ಪ ಅವರಿಗೂ ಈ  ಚುನಾವಣೆ ಸವಾಲಾಗಿದೆ. ರಾಜ್ಯದಲ್ಲಿ ಗೆಲುವಿನ ಹೊಣೆಯನ್ನು ವಹಿಸಿಕೊಂಡಿರುವ ಯಡಿಯೂರಪ್ಪ, ತಮ್ಮ ಪಕ್ಷದ ಅಭ್ಯರ್ಥಿಗಳಷ್ಟೇ ಅಲ್ಲದೇ, ಜೆಡಿಎಸ್ ಅಭ್ಯರ್ಥಿಗಳನ್ನೂ ದಡ ಸೇರಿಸಬೇಕಾಗಿದೆ. ಯಶಸ್ವಿಯಾದರಷ್ಟೇ ತಮ್ಮ ಮಗನ ಸ್ಥಾನ ಭದ್ರವಾದೀತು.

ಎಚ್‌.ಡಿ. ದೇವೇಗೌಡ

ಜಾತ್ಯತೀತ ಪಕ್ಷಗಳ ಸಖ್ಯ ತೊರೆದು ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿರುವುದರಿಂದ ಗೆಲುವು ಅನಿವಾರ್ಯ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಒಕ್ಕಲಿಗ ಪ್ರಾಬಲ್ಯದ ಕ್ಷೇತ್ರಗಳ ಮೇಲಿನ ಹಿಡಿತವನ್ನು ಕಳೆದುಕೊಂಡಿದ್ದ ಜೆಡಿಎಸ್ 19 ಸ್ಥಾನಗಳನ್ನು ಮಾತ್ರ ಗೆದ್ದಿತ್ತು. ಹಾಸನ, ಮಂಡ್ಯ, ಕೋಲಾರದಲ್ಲಿ ಅಭ್ಯರ್ಥಿ ಗೆಲ್ಲಿಸಿ ಜೆಡಿಎಸ್‌ಗೆ ನೆಲೆ ಇದೆ ಎಂದು ತೋರಿಸಬೇಕಿದೆ. ಬೆಂಗಳೂರು ಗ್ರಾಮಾಂತರ, ತುಮಕೂರು, ಮೈಸೂರಿನಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಸಂಕಟವೂ ಹೆಗಲೇರಿದೆ.

ಎಚ್‌.ಡಿ. ಕುಮಾರಸ್ವಾಮಿ

ಎರಡು ಬಾರಿ ಮುಖ್ಯಮಂತ್ರಿ ಹುದ್ದೆಗೇರಿದ್ದರೂ, ಪಕ್ಷ ಶಾಸಕರನ್ನು ಹಿಡಿದಿಟ್ಟುಕೊಳ್ಳಲಾಗದ ಪರಿಸ್ಥಿತಿ ಇದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ ಪ್ರಾಬಲ್ಯದ ಕ್ಷೇತ್ರಗಳು ಬಹುತೇಕ ಕಾಂಗ್ರೆಸ್‌ ತೆಕ್ಕೆಗೆ ಜಾರಿವೆ. ಲೋಕಸಭಾ ಚುನಾವಣೆಯಲ್ಲಿ ಗೆದ್ದರಷ್ಟೇ ಮತ್ತೆ ಚಿಗುರಲು ಸಾಧ್ಯ. ತಾವು ಗೆಲ್ಲುವ ಜತೆಗೆ, ಉಳಿದ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವಿಗೆ ಹೆಗಲುಕೊಡಬೇಕಾದ ಒತ್ತಡ ಅವರ ಮೇಲಿದೆ.

ರಾಮಲಿಂಗಾ ರೆಡ್ಡಿ

ಹೈಕಮಾಂಡ್‌ ನಾಯಕರ ಒತ್ತಡಕ್ಕೆ ಮಣಿದು, ಒಲ್ಲದ ಮನಸ್ಸಿನಿಂದ ಮಗಳು ಸೌಮ್ಯಾ ರೆಡ್ಡಿ ಅವರನ್ನು ಬೆಂಗಳೂರು ದಕ್ಷಿಣಕ್ಕೆ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಮಾಡಿರುವ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರಿಗೆ, ಪುತ್ರಿಯನ್ನು ದಡ ಸೇರಿಸುವ ಹೊಣೆಯಿದೆ. 

ವಿ. ಸೋಮಣ್ಣ

ಕಳೆದ ವಿಧಾನಸಭಾ ಚುನಾವಣೆಯಲ್ಲಿ ವರುಣ ಮತ್ತು ಚಾಮರಾಜನಗರ ಕ್ಷೇತ್ರಗಳಲ್ಲಿ ಸೋಲು ಅನುಭವಿಸಿದ ಬೆನ್ನಲ್ಲೇ ತುಮಕೂರು ಲೋಕಸಭಾ ಕ್ಷೇತ್ರದ ಟಿಕೆಟ್‌ಗೆ ವರಿಷ್ಠರ ಬಳಿ ದುಂಬಾಲು ಬಿದ್ದಿದ್ದರು. ವರಿಷ್ಠರು ಟಿಕೆಟ್‌ ನೀಡಿದ್ದಾರೆ. ತುಮಕೂರು ಕ್ಷೇತ್ರವನ್ನು ಗೆದ್ದುಕೊಳ್ಳುವ ಸವಾಲು ಇದೆ. ಯಡಿಯೂರಪ್ಪ, ಎಚ್‌.ಡಿ.ದೇವೇಗೌಡ ಅವರು ಸೋಮಣ್ಣ ಪರ ಪ್ರಚಾರ ಮಾಡಿದ್ದಾರೆ. ಇಲ್ಲಿ ಗೆದ್ದರಷ್ಟೇ ಅವರಿಗೆ ರಾಜಕೀಯ ಪುನರ್‌ಜನ್ಮ ಸಿಗಲಿದೆ.

ಆರ್‌.ಅಶೋಕ

ವಿರೋಧ ಪಕ್ಷದ ನಾಯಕ ಆರ್.ಅಶೋಕ ಅವರಿಗೆ ಬೆಂಗಳೂರಿನ ಮೂರು ಕ್ಷೇತ್ರಗಳು, ಬೆಂಗಳೂರು ಗ್ರಾಮಾಂತರ ಕ್ಷೇತ್ರ ಮತ್ತು ಹಳೇ ಮೈಸೂರು ಪ್ರದೇಶದ ಕ್ಷೇತ್ರಗಳನ್ನು ಗೆದ್ದುಕೊಳ್ಳುವ ಸವಾಲು ಎದುರಾಗಿದೆ. ಈ ಮೂಲಕ ತಾವೊಬ್ಬ ಪ್ರಬಲ ಒಕ್ಕಲಿಗ ರಾಜಕೀಯ ನಾಯಕ ಎಂಬುದನ್ನು ಸಾಬೀತುಪಡಿಸಬೇಕಾಗಿದೆ. ಜೆಡಿಎಸ್‌ ಜತೆ ಮೈತ್ರಿ ಮಾಡಿಕೊಂಡಿರುವುದು ಅಶೋಕ ಅವರ ಪಾಲಿಗೆ ವರವಾಗಿದೆ. ಜೆಡಿಎಸ್‌ ಮತ್ತು ಬಿಜೆಪಿ ಜಂಟಿ ಪ್ರಯತ್ನದಿಂದ ಹೆಚ್ಚಿನ ಸ್ಥಾನಗಳನ್ನು ಜೋಳಿಗೆಗೆ ಹಾಕಿಕೊಳ್ಳಬಹುದು ಎಂಬುದು ಅವರ ನಿರೀಕ್ಷೆ.

ಕಣದಿಂದ ಹೊರಗುಳಿದ ಸಂಸದರ ನಡೆ ಏನು?

* ಡಿ.ವಿ. ಸದಾನಂದಗೌಡ– ಟಿಕೆಟ್ ನಿರಾಕರಿಸಿದ್ದರಿಂದ ಮೊದಲು ಅಸಮಾಧಾನ, ನಂತರ ಪಕ್ಷದ ಚಟುವಟಿಕೆಗಳಲ್ಲಿ ಭಾಗಿ. ಆದರೂ ಕ್ಷೇತ್ರದಲ್ಲಿ ಹೆಚ್ಚು ಸುತ್ತಾಡಲಿಲ್ಲ

* ಶ್ರೀನಿವಾಸ ಪ್ರಸಾದ್– ಸ್ವಯಂ ನಿವೃತ್ತಿ, ಕಾಂಗ್ರೆಸ್‌ನತ್ತ ಒಲವು

* ಬಿ.ಎನ್‌. ಬಚ್ಚೇಗೌಡ–ನಿವೃತ್ತಿ ಮತ್ತು ಕಾಂಗ್ರೆಸ್‌ಗೆ ಬೆಂಬಲ

* ಪ್ರತಾಪ ಸಿಂಹ– ಯದುವೀರ್ ಸ್ಪರ್ಧೆಗೆ ಮೊದಲು ವಿರೋಧ, ನಂತರ ಬೆಂಬಲ

* ನಳಿನ್‌ ಕುಮಾರ್‌ ಕಟೀಲ್– ಟಿಕೆಟ್‌ ನಿರಾಕರಿಸಿದ ಬಳಿಕ ಸಭೆ, ಸಮಾರಂಭಗಳಿಗೆ ಸೀಮಿತ

* ನಾರಾಯಣಸ್ವಾಮಿ– ನಿರಾಸಕ್ತಿ ಮತ್ತು ಕ್ಷೇತ್ರದ ಕಡೆಗೆ ಮುಖ ಹಾಕಿಲ್ಲ

* ಸುಮಲತಾ ಅಂಬರೀಷ್– ಬಿಜೆಪಿಗೆ ಬೆಂಬಲ ಸೂಚಿಸಿದ್ದರೂ ಎಚ್‌.ಡಿ. ಕುಮಾರಸ್ವಾಮಿ ಪರ ಪ್ರಚಾರದಿಂದ ದೂರ

* ಜಿ.ಎಸ್. ಬಸವರಾಜ– ವಯಸ್ಸಿನ ಕಾರಣದಿಂದ ನಿವೃತ್ತಿ. ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣ ಪರ ಸಕ್ರಿಯ ಪ್ರಚಾರ.

* ಎಸ್‌. ಮುನಿಸ್ವಾಮಿ– ಜೆಡಿಎಸ್‌ಗೆ ಕ್ಷೇತ್ರ ಹಂಚಿಕೆ, ಜೆಡಿಎಸ್‌ ಅಭ್ಯರ್ಥಿ ಎಂ. ಮಲ್ಲೇಶ್‌ ಬಾಬು ಪರ ಸಕ್ರಿಯ ಪ್ರಚಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT