ಸಂಜೆ ಖರೀದಿಸಿದ್ದ ಕಾರು ಬೆಳಿಗ್ಗೆ ಕಳವಾಯ್ತು!

ಬೆಂಗಳೂರು: ಉದ್ಯಮಿಯೊಬ್ಬರು ಶನಿವಾರವಷ್ಟೇ ₹ 20 ಲಕ್ಷ ಮೌಲ್ಯದ ‘ಹುಂಡೈ ಟಕ್ಸನ್’ ಕಾರು ಖರೀದಿಸಿದ್ದರು. ಮರುದಿನವೇ ಅವರ ಮನೆಗೆ ನುಗ್ಗಿದ ಕಳ್ಳನೊಬ್ಬ, ನಗ–ನಾಣ್ಯದ ಜತೆಗೆ ಕೀ ತೆಗೆದುಕೊಂಡು ಆ ಕಾರಿನ ಸಮೇತ ಪರಾರಿಯಾಗಿದ್ದಾನೆ.

ಈ ಸಂಬಂಧ ಎಚ್‌ಎಎಲ್ 2ನೇ ಹಂತದ ನಿವಾಸಿ ಪ್ರಭು ಕೃಷ್ಣಸ್ವಾಮಿ ಅವರು ಇಂದಿರಾನಗರ ಠಾಣೆಗೆ ದೂರು ಕೊಟ್ಟಿದ್ದಾರೆ.

ಪ್ರಭು ಹೊಸ ಕಾರಿಗೆ ಪೂಜೆ ಮಾಡಿಸಿ ಮನೆಯ ಕಾಂಪೌಂಡ್‌ನಲ್ಲಿ ನಿಲ್ಲಿಸಿದ್ದರು. ನಸುಕಿನ ವೇಳೆ (3.30) ಹಿಂಬಾಗಿಲ ಬೀಗ ಮುರಿದು ಮನೆಗೆ ನುಗ್ಗಿದ ಕಳ್ಳ, ₹ 22 ಸಾವಿರ ನಗದು, ಎರಡು ವಜ್ರದ ಉಂಗುರ ಹಾಗೂ ಕಾರಿನ ಕೀ ತೆಗೆದುಕೊಂಡು ಹೊರಬಂದಿದ್ದಾನೆ.

ನಂತರ ಗೇಟ್ ತೆಗೆದು ಕಾರನ್ನೂ ಹೊರಗೆ ತೆಗೆಯುವಾಗ ಎಚ್ಚರಗೊಂಡು ಕಿಟಕಿ ಮೂಲಕ ಹೊರಗೆ ನೋಡಿದ ಪ್ರಭು ಅವರ ಅತ್ತೆ ಉಷಾ, ಅಳಿಯನೇ ಕಾರು ತೆಗೆಯುತ್ತಿರಬೇಕು ಎಂದು ಭಾವಿಸಿ ಪುನಃ ನಿದ್ರೆಗೆ ಜಾರಿದ್ದಾರೆ.

ಬೆಳಿಗ್ಗೆ ಎಚ್ಚರಗೊಂಡು ಪ್ರಭು ಅವರಿಗೆ ಕರೆ ಮಾಡಿದ ಉಷಾ, ‘ಅಷ್ಟೊತ್ತಿಗೇ ಎಲ್ಲಿಗೆ ಹೋದೆ? ಮನೆಗೆ ಯಾವಾಗ ಬರುತ್ತೀಯಾ’ ಎಂದು ಕೇಳಿದ್ದಾರೆ. ಅದಕ್ಕೆ ಅವರು, ‘ನಾನು ಮೊದಲ ಮಹಡಿಯ ಕೊಠಡಿಯಲ್ಲೇ ಮಲಗಿದ್ದೇನೆ’ ಎಂದಿದ್ದಾರೆ.

ನಂತರ ಆಘಾತಕ್ಕೆ ಒಳಗಾದ ಮನೆಯವರು ಪರಿಶೀಲಿಸಿದಾಗ, ಹಿಂಬಾಗಿಲ ಬೀಗ ಮುರಿದಿದ್ದುದು, ಹಣ, ಉಂಗುರದ ಜತೆಗೆ ಕಾರಿನ ಕೀ ಕೂಡ ಕಳವಾಗಿದ್ದುದು ತಿಳಿದುಬಂದಿದೆ.

ಪ್ರಮುಖ ಸುದ್ದಿಗಳು