ಸೀರೆ ವಿತರಣೆಯ ಅವ್ಯವಸ್ಥೆ: ನೀರೆಯರಿಗೆ ನಿರಾಸೆ

ದಾವಣಗೆರೆ: ಗೌರಿ ಹಬ್ಬದ ಪ್ರಯುಕ್ತ ಸರ್ಕಾರ ರಿಯಾಯಿತಿ ದರದಲ್ಲಿ ರೇಷ್ಮೆ ಸೀರೆ ವಿತರಿಸುವ ಯೋಜನೆ ನಗರದಲ್ಲಿ ಗದ್ದಲಕ್ಕೆ ಕಾರಣವಾಗಿದೆ. ಕೂಪನ್‌ ಇದ್ದೂ ಸೀರೆ ಸಿಗದೇ ಹಲವರು ವಾಪಸ್ಸಾದರೆ, ನೂರಾರು ಮಂದಿ ಕೂಪನ್‌ ಇಲ್ಲದೇ ನಿರಾಶರಾದರು.

ಕರ್ನಾಟಕ ರೇಷ್ಮೆ ಅಭಿವೃದ್ಧಿ ನಿಗಮದ ಸಹಾಯಕ ವ್ಯವಸ್ಥಾಪಕ ರಘುರಾಮ್‌ ಮಂಗಳವಾರ ದಾವಣಗೆರೆಗೆ ಬಂದಿದ್ದು, ಇಲ್ಲಿನ ರೋಟರಿ ಬಾಲಭವನದಲ್ಲಿ ಮಧ್ಯಾಹ್ನ 12ರಿಂದ ಮಧ್ಯಾಹ್ನ 3 ಗಂಟೆಯ ಒಳಗೆ ಕೂಪನ್‌ ವಿತರಣೆ ಮಾಡಿದ್ದಾರೆ. ಈ ಅವಧಿಯಲ್ಲಿ 252 ಕೂಪನ್‌ಗಳನ್ನು ನೀಡಲಾಗಿದೆ. ಸಂಜೆಯ ವರೆಗೆ 152 ಮಂದಿಗೆ ಸೀರೆ ವಿತರಿಸಲಾಗಿದೆ. ಉಳಿದ ನೂರು ಮಂದಿಯನ್ನು ಬುಧವಾರ ಬಂದು ಸೀರೆ ಒಯ್ಯುವಂತೆ ತಿಳಿಸಿದ್ದಾರೆ.

ಮಂಗಳವಾರ ನೂರಾರು ಮಹಿಳೆಯರಿಗೆ ಕೂಪನ್‌ ಸಿಕ್ಕಿರಲಿಲ್ಲ. ಆದರೂ ಕೂಪನ್ ಸಿಗಲಿದೆ ಎಂಬ ಆಸೆಯಿಂದ ಸಂಜೆಯವರೆಗೆ ಕಾದು ಕುಳಿತು ಮನೆಗೆ ವಾಪಸ್ಸಾಗಿದ್ದರು. ಬುಧವಾರ ಆ ಮಹಿಳೆಯರು ಮತ್ತು ಹೊಸತಾಗಿ ಒಂದಷ್ಟು ಮಂದಿ ಬಂದು ಕೂಪನ್‌ ನೀಡುವಂತೆ ಆಗ್ರಹಿಸತೊಡಗಿದರು. ನಿಗಮದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳತೊಡಗಿದರು. ಇದರಿಂದಾಗಿ ಕೂಪನ್‌ ಇದ್ದವರಿಗೂ ಸೀರೆ ವಿತರಣೆ ಮಾಡಲು ಸಾಧ್ಯವಾಗಲಿಲ್ಲ. ವಿತರಣೆಯನ್ನು ರದ್ದುಗೊಳಿಸಿ ಪೊಲೀಸರ ಬಿಗಿ ಬಂದೋಬಸ್ತ್‌ನಲ್ಲಿ ಸೀರೆಗಳಿದ್ದ ರಟ್ಟಿನ ಬಾಕ್ಸ್‌ಗಳ ಜತೆಗೆ ಅಧಿಕಾರಿಗಳು ಜಾಗ ಖಾಲಿ ಮಾಡಿದರು.

ಮೇಯರ್‌ಗೂ ನಿರಾಸೆ: ರಿಯಾಯಿತಿ ದರದಲ್ಲಿ ರೇಷ್ಮೆ ಸೀರೆ ಸಿಗಲಿದೆ ಎಂಬ ಮಾಹಿತಿ ಪಡೆದ ಮೇಯರ್‌ ಶೋಭಾ ಪಲ್ಲಾಗಟ್ಟೆ ಅವರು ಮಾಜಿ ಉಪಮೇಯರ್‌ ನಾಗರತ್ನ ಜತೆಗೆ ಬುಧವಾರ ಬಂದಿದ್ದಾರೆ. ಕೂಪನ್‌ ನೀಡುತ್ತಿಲ್ಲ ಎಂದು ತಿಳಿದು ಅವರೂ ನಿರಾಸೆಗೊಂಡರು.

‘ಸೀರೆ ವಿತರಣೆ ಬಗ್ಗೆ ನಮಗೂ ಯಾವುದೇ ಮಾಹಿತಿ ನೀಡಿಲ್ಲ. ನಾಗರತ್ನ ಅವರಿಗೆ ಯಾರೋ ಹೇಳಿದ್ದರಿಂದ ಅವರು ನನಗೆ ತಿಳಿಸಿದರು. ಹಾಗಾಗಿ ಆಧಾರ್‌ ಕಾರ್ಡ್‌ನ ಪ್ರತಿ ಹಿಡಿದುಕೊಂಡು ಬಂದಿದ್ದೇವೆ. ಆದರೆ ಕೂಪನ್‌ ನಿನ್ನೆಯೇ ನೀಡಲಾಗಿದೆಯಂತೆ. ಕೂಪನ್‌ ಇದ್ದವರಿಗೆ ಮಾತ್ರ ಸೀರೆ ನೀಡುವುದಂತೆ’ ಎಂದು ಸುದ್ದಿಗಾರರ ಜತೆಗೆ ತನ್ನ ನಿರಾಸೆಯನ್ನು ಹೇಳಿಕೊಂಡ‌ರು.

‘ನಮಲ್ಲಿ ಕೂಪನ್‌ ಇದ್ದರೂ ಸೀರೆ ನೀಡುತ್ತಿಲ್ಲ’ ಎಂದು ಎಂಸಿಸಿ ಎ ಬ್ಲಾಕ್‌ನ ಸುಶೀಲಮ್ಮ, ಬೂದಾಳ್‌ ರಸ್ತೆಯ ಪುಷ್ಪಾವತಿ, ಆಂಜನೇಯ ಬಡಾವಣೆಯ ಸ್ವರೂಪಾ ಆಕ್ರೋಶ ವ್ಯಕ್ತಪಡಿಸಿದರು.

‘ನಾವು ನಿನ್ನೆ ರಾತ್ರಿವರೆಗೆ ಕಾದಿದ್ದೇವೆ. ಇವತ್ತು ಮತ್ತೆ ಬಂದಿದ್ದೇವೆ. ಆದರೂ ಕೂಪನ್‌ ನೀಡುತ್ತಿಲ್ಲ’ ಎಂದು ಕೆಇಬಿ ಎಕ್ಸ್‌ಟೆನ್ಸನ್‌ನ ಶ್ವೇತಾ, ಆಂಜನೇಯ ಬಡಾವಣೆಯ ಲಲಿತಮ್ಮ ಮತ್ತಿತರ ಮಹಿಳೆಯರು ನೋವು ತೋಡಿಕೊಂಡರು.

ಕೂಪನ್‌ ಇದ್ದವರಿಗೆ ವಿತರಣೆಯ ಭರವಸೆ:

‘ಇವತ್ತು ಕೂಡ ಕೂಪನ್‌ ನೀಡುವಂತೆ ಮಹಿಳೆಯರು ಗಲಾಟೆ ಮಾಡಿದ್ದರಿಂದ ಸಮಸ್ಯೆ ಉಂಟಾಗಿದೆ. ಮಂಗಳವಾರ 3 ಗಂಟೆಯ ನಂತರ ಕೂಪನ್‌ ವಿತರಣೆ ಮಾಡಲು ಅವಕಾಶ ಇಲ್ಲ. ಗಲಾಟೆ ಹೆಚ್ಚಾಗಿದ್ದರಿಂದ ನಾವು ಪೊಲೀಸರ ಸಹಾಯದಿಂದ ಗಂಟುಮೂಟೆ ಕಟ್ಟಿಕೊಂಡು ಹೊರಟೆವು. ಆದರೆ ಕೂಪನ್‌ ಪಡೆದೂ ಸೀರೆ ಸಿಗದವರಿಗೆ ವಿತರಣೆಯ ವ್ಯವಸ್ಥೆ ಮಾಡಲಾಗುವುದು’ ಎಂದು ರೇಷ್ಮೆ ಅಭಿವೃದ್ಧಿ ನಿಗಮದ ಸಹಾಯಕ ವ್ಯವಸ್ಥಾಪಕ ರಘುರಾಮ್‌ ‘ಪ್ರಜಾವಾಣಿ’ಗೆ ತಿಳಿಸಿದರು

ದಾವಣಗೆರೆಯಲ್ಲಿರುವ ನಮ್ಮ ಷೋರೂಂನವರಿಗೆ ಕೂಪನ್‌ ಪಡೆದವರ ವಿವರ ನೀಡುತ್ತೇವೆ. ಬೆಂಗಳೂರಿನಲ್ಲಿ ಮೇಲಧಿಕಾರಿಗಳಿಂದ ಅನುಮತಿ ಪಡೆದ ಮೇಲೆ ಮಾಹಿತಿ ನೀಡುತ್ತೇವೆ. ಕೂಪನ್‌ ಹೊಂದಿರುವ ಮಹಿಳೆಯರು ಆಧಾರ್‌ ಕಾರ್ಡ್‌ ಮತ್ತು ಕೂಪನ್‌ ಕೊಂಡೋಗಿ ಆ ಸೀರೆಗಳನ್ನು ಒಯ್ಯಬಹುದು ಎಂದು ತಿಳಿಸಿದರು.

₹ 4,725ಕ್ಕೆ ₹ 15 ಸಾವಿರದ ಸೀರೆ

ಶೇ 65ರಷ್ಟು ಬೆಳ್ಳಿ, ಶೇ 0.65ರಷ್ಟು ಚಿನ್ನ ಹೊಂದಿರುವ ಜರಿಯ ರೇಷ್ಮೇ ಸೀರೆಯ ಮೌಲ್ಯ ₹ 15 ಸಾವಿರ ಆಗಿದ್ದು, ₹ 4,500 ಮತ್ತು ಜಿಎಸ್‌ಟಿ ₹ 225 ಸೇರಿ ₹ 4,725ಕ್ಕೆ ನೀಡಲಾಗುತ್ತದೆ. ಕರ್ನಾಟಕ ರೇಷ್ಮೆ ಅಭಿವೃದ್ಧಿ ನಿಗಮ ಈ ರಿಯಾಯಿತಿಯನ್ನು ನಿಗದಿಪಡಿಸಿದೆ. ಆಧಾರ್‌ ಕಾರ್ಡ್‌ ಇರುವ ಮಹಿಳೆಯರಿಗೆ ಒಬ್ಬರಿಗೆ ಒಂದೇ ಸೀರೆ ಎಂದು ನಿರ್ಧರಿಸಲಾಗಿತ್ತು. ಮಂಗಳವಾರ ಮಧ್ಯಾಹ್ನ 3 ಗಂಟೆಯ ಒಳಗೆ ಎಷ್ಟು ಕೂಪನ್‌ಗಳನ್ನು ನೀಡಲು ಸಾಧ್ಯವೋ ಅಷ್ಟು ಸೀರೆಗಳು ಮಾತ್ರ ವಿತರಣೆಯಾಗುತ್ತದೆ. ಬೆಂಗಳೂರು, ಮೈಸೂರು, ರಾಮನಗರ, ಬೆಳಗಾವಿ ಮತ್ತು ದಾವಣಗೆರೆ ಕೆಎಸ್‌ಐಸಿ ಕೇಂದ್ರಗಳಲ್ಲಿ ಮಾತ್ರ ಈ ರಿಯಾಯಿತಿ ಸೌಲಭ್ಯ ಕಲ್ಪಿಸಲಾಗಿದೆ.

ಪ್ರಮುಖ ಸುದ್ದಿಗಳು