ಹಣಕಾಸು ಸಚಿವರನ್ನು ಅಧಿಕೃತ ಭೇಟಿ ಮಾಡಿಲ್ಲ ಎಂದ ವಿಜಯ್ ಮಲ್ಯ

ಲಂಡನ್: ಭಾರತ ಬಿಟ್ಟು ವಿದೇಶಕ್ಕೆ ತೆರಳುವುದಕ್ಕೂ ಮುನ್ನ ಹಣಕಾಸು ಸಚಿವರನ್ನು ಭೇಟಿ ಮಾಡಿದ್ದೆ ಎಂದು ಹೇಳಿದ್ದ ಉದ್ಯಮಿ ವಿಜಯ್ ಮಲ್ಯ ನಂತರ ವಿಭಿನ್ನ ಹೇಳಿಕೆ ನೀಡಿದ್ದಾರೆ.

‘ಹಣಕಾಸು ಸಚಿವರನ್ನು ಅಧಿಕೃತವಾಗಿ ಭೇಟಿ ಮಾಡಿಲ್ಲ. ಮಾಧ್ಯಮದ ನನ್ನ ಸ್ನೇಹಿತರು ಸೃಷ್ಟಿಸಿರುವ ಈ ವಿವಾದದಿಂದ ಭೀತಿಗೊಳಗಾಗಿದ್ದೇನೆ. ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸುವ ವೇಳೆ, ಸಂಸತ್ತಿನಲ್ಲಿ ಜೇಟ್ಲಿಯವರನ್ನು ಭೇಟಿ ಮಾಡಲು ತೆರಳಿದ್ದಾಗ ಲಂಡನ್‌ಗೆ ತೆರಳುತ್ತಿರುವುದಾಗಿಯೂ ಸಾಲದ ಮೊತ್ತವನ್ನು ಬ್ಯಾಂಕ್‌ಗಳಿಗೆ ಪಾವತಿಸಲು ಬಯಸಿದ್ದಾಗಿಯೂ ಹೇಳಿದ್ದೆ. ಆದರೆ, ಅಧಿಕೃತವಾಗಿ ಸಚಿವರನ್ನು ಭೇಟಿ ಮಾಡಿರಲಿಲ್ಲ’ ಎಂಬ ಮಲ್ಯ ಹೇಳಿಕೆಯನ್ನು ರಿಪಬ್ಲಿಕ್ ವರ್ಲ್ಡ್ ಜಾಲತಾಣ ವರದಿ ಮಾಡಿದೆ.

ಬ್ಯಾಂಕ್‌ಗಳಿಗೆ ಸಾವಿರಾರು ಕೋಟಿ ರೂಪಾಯಿ ವಂಚನೆ ಆರೋಪದ ಅಡಿ ಮಲ್ಯರನ್ನು ಭಾರತಕ್ಕೆ ಗಡೀಪಾರು ಮಾಡುವ ಪ್ರಕರಣದ ವಿಚಾರಣೆ ಲಂಡನ್‌ನ ವೆಸ್ಟ್ ಮಿನಿಸ್ಟರ್ ಮ್ಯಾಜಿಸ್ಟ್ರೇಟ್‌ ಕೋರ್ಟ್‌ನಲ್ಲಿ ಬುಧವಾರ ನಡೆದಿದೆ. ವಿಚಾರಣೆಗೆ ಹಾಜರಾಗಿದ್ದ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಮಲ್ಯ, ಭಾರತದಿಂದ ಹೊರಡುವುದಕ್ಕೂ ಮುನ್ನ ಸಾಲದ ವಿಚಾರ ಇತ್ಯರ್ಥಗೊಳಿಸುವ ಪ್ರಸ್ತಾವನೆಯೊಂದಿಗೆ ವಿತ್ತ ಸಚಿವರನ್ನು ಭೇಟಿ ಮಾಡಿದ್ದೆ ಎಂದು ಹೇಳಿದ್ದರು. ಮಲ್ಯ 2016ರಲ್ಲಿ ಭಾರತದಿಂದ ಪರಾರಿಯಾಗುವ ವೇಳೆ ಅರುಣ್‌ ಜೇಟ್ಲಿ ವಿತ್ತ ಸಚಿವರಾಗಿದ್ದರು.

ಇದನ್ನೂ ಓದಿ: ದೇಶ ಬಿಡುವ ಮುನ್ನ ವಿತ್ತ ಸಚಿವರ ಭೇಟಿಯಾಗಿದ್ದೆ– ಮಲ್ಯ; ಎಲ್ಲ ಸುಳ್ಳು– ಜೇಟ್ಲಿ

ಮಲ್ಯ ಮಾಧ್ಯಮಗಳಿಗೆ ನೀಡಿರುವ ಹೇಳಿಕೆ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟಣೆ ಬಿಡುಗಡೆ ಮಾಡಿದ್ದ ಅರುಣ್‌ ಜೇಟ್ಲಿ, ಮಲ್ಯ ಹೇಳಿಕೆ ಸುಳ್ಳು ಎಂದು ಹೇಳಿದ್ದರು. ‘ನಾನು ಒಮ್ಮೆ ನನ್ನ ಕಚೇರಿ ಕೊಠಡಿ ಕಡೆಗೆ ನಡೆದು ಹೋಗುತ್ತಿದ್ದ ಸಮಯದಲ್ಲಿ ಮಲ್ಯ ದಿಢೀರನೆ ಎದುರಾಗಿ ಮಾತಿಗಿಳಿದರು. ’ಇತ್ಯರ್ಥಗೊಳಿಸುವ ಇರಾದೆ ಇದೆ..’ ಎಂದರು. ಅವರು ಕೈನಲ್ಲಿ ಹಿಡಿದಿದ್ದ ಪತ್ರಗಳನ್ನೂ ಸಹ ನಾನು ಸ್ವೀಕರಿಸದೆ, ’ನಿಮ್ಮ ಇತ್ಯರ್ಥಗಳೇನೇ ಇದ್ದರೂ ಅದು ಬ್ಯಾಂಕರ್‌ಗಳೊಂದಿಗೆ ಮಾಡಿ’ ಎಂದು ಹೇಳಿ ತೆರಳಿದ್ದೆ ಎಂಬುದಾಗಿ ಪ್ರಕಟಣೆಯಲ್ಲಿ ಜೇಟ್ಲಿ ತಿಳಿಸಿದ್ದಾರೆ. ಇದರ ಬೆನ್ನಲ್ಲೇ ಮಲ್ಯ ಯೂಟರ್ನ್‌ ಹೊಡೆದಿದ್ದಾರೆ. 

ಪ್ರಮುಖ ಸುದ್ದಿಗಳು