ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಬರಿಮಲೆಗೆ ಭೇಟಿ ನೀಡುವ ಬಯಕೆ: ಪರವಾನಗಿ ಹಿಂದಿರುಗಿಸಿದ ಚರ್ಚ್‌ ಪಾದ್ರಿ

Published : 10 ಸೆಪ್ಟೆಂಬರ್ 2023, 10:43 IST
Last Updated : 10 ಸೆಪ್ಟೆಂಬರ್ 2023, 10:43 IST
ಫಾಲೋ ಮಾಡಿ
Comments

ತಿರುವನಂತಪುರ : ಸ್ವಾಮಿ ಅಯ್ಯಪ್ಪನ ದರ್ಶನ ಪಡೆಯುವ ಹೆಬ್ಬಯಕೆಯಿಂದಾಗಿ ಕೇರಳದ ಚರ್ಚ್‌ವೊಂದರ ಪಾದ್ರಿಯೊಬ್ಬರು ತಮ್ಮ ಚರ್ಚ್ ಸೇವಾ ನಿರ್ವಹಣೆಯ ಪದವಿಯನ್ನು ಹಿಂದಿರುಗಿಸಿದ್ದಾರೆ.

ಆಂಗ್ಲಿಕನ್‌ ಚರ್ಚ್‌ ಆಫ್‌ ಇಂಡಿಯಾದ ರೆವರೆಂಡ್‌ ಮನೋಜ್‌ ಕೆ.ಜಿ. ಪರವಾನಗಿ ಹಿಂದಿರುಗಿಸಿದ ಪಾದ್ರಿ. ಅಯ್ಯಪ್ಪನ ಭಕ್ತರು 41 ದಿನಗಳ ವ್ರತ ಆಚರಿಸುವುದನ್ನು ಗಮನಿಸಿದ ಬಳಿಕ, ಮನೋಜ್‌ ಅವರಿಗೆ ಶಬರಿಮಲೆಗೆ ಭೇಟಿ ನೀಡಿವ ಬಯಕೆಯಾಗಿದೆ. ಈ ತಿಂಗಳ ಕೊನೆಯಲ್ಲಿ ಅವರು ಶಬರಿಮಲೆಗೆ ತೆರಳಲಿದ್ದು, ಪ್ರಸ್ತುತ 41 ದಿನಗಳ ವ್ರತವನ್ನು ಆಚರಿಸುತ್ತಿದ್ದಾರೆ.

‘ವ್ರತದ ಕುರಿತು ತಿಳಿದಾಗ, ಯಾವ ಕಾರಣಕ್ಕಾಗಿ ಚರ್ಚ್‌ನ ಸಿದ್ಧಾಂತಗಳನ್ನು ಮತ್ತು ನಿಯಮಗಳನ್ನು ಉಲ್ಲಂಘಿಸುತ್ತಿದ್ದೇನೆ ಎಂಬುದಾಗಿ ವಿವರಣೆ ನೀಡಬೇಕೆಂದು  ಚರ್ಚ್‌ನ ಆಡಳಿತ ಮಂಡಳಿ ನನಗೆ ಕೇಳಿತ್ತು. ಆದರೆ, ವಿವರಣೆ ನೀಡುವ ಬದಲು ಈ ಚರ್ಚ್‌ಗೆ ಪಾದ್ರಿಯಾಗಿ ಬಂದಾಗ ನನಗೆ ನೀಡಲಾಗಿದ್ದ ಗುರುತಿನ ಚೀಟಿ ಹಾಗೂ ಪರವಾನಗಿಯನ್ನು ಹಿಂದಿರುಗಿಸಿದ್ದೇನೆ. ನಾನು ವ್ರತ ಆಚರಿಸುತ್ತಿರುವುದು ಸಹ ನಿಯಮಗಳಿಗೆ ವಿರುದ್ಧವಾಗಿಯೇ ಇದೆ ಎಂದು ಒಪ್ಪಿಕೊಳ್ಳುತ್ತೇನೆ’ ಎಂದು ಮನೋಜ್‌ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.

ಮನೋಜ್‌ ಅವರ ಈ ನಿರ್ಧಾರವನ್ನು ಅನೇಕರು ಕಟುವಾಗಿ ಟೀಕಿಸಿದ್ದಾರೆ.

ನಾನು ದೇವರ ಸಿದ್ಧಾಂತ ಪಾಲಿಸುತ್ತಿದ್ದೇನೆ: ತಮ್ಮ ನಿರ್ಧಾರವನ್ನು ಟೀಕಿಸಿದವರಿಗೆ ಫೇಸ್‌ಬುಕ್‌ ವಿಡಿಯೊ ಮೂಲಕ ದಿಟ್ಟ ಪ್ರತಿಕ್ರಿಯೆ ನೀಡಿರುವ ಮನೋಜ್‌ ಅವರು, ‘ನನ್ನ ಕೆಲಸ ಚರ್ಚ್‌ನ ಸಿದ್ದಾಂತಗಳನ್ನು ಆಧರಿಸಿಲ್ಲ. ಬದಲಾಗಿ ದೇವರ ಸಿದ್ಧಾಂತಗಳನ್ನು ಆಧರಿಸಿದೆ. ಜಾತಿ, ಮತ, ಧರ್ಮ ಹಾಗೂ ನಂಬಿಕೆಗಳನ್ನು ಪರಿಗಣಿಸದೇ ಎಲ್ಲರನ್ನೂ ಪ್ರೀತಿಸು ಎಂದು ದೇವರು ಹೇಳಿದ್ದಾನೆ. ಇತರರನ್ನು ಪ್ರೀತಿಸುವುದು ಎಂದರೆ ಅವರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದೂ ಆಗಿರುತ್ತದೆ. ಆದ್ದರಿಂದ ಚರ್ಚ್‌ನ ಸಿದ್ಧಾಂತಗಳನ್ನು ಪಾಲಿಸಬೇಕೋ ಅಥವಾ ದೇವರ ಸಿದ್ಧಾಂತಗಳನ್ನು ಪಾಲಿಸಬೇಕೋ ಎಂದು ನೀವೇ ನಿರ್ಧರಿಸಬೇಕು’ ಎಂದಿದ್ದಾರೆ.

‘ಚರ್ಚ್‌ ಎಂದರೆ ಸಾಂಪ್ರದಾಯಿಕ, ನಿರ್ಮಿತ ಪದ್ಧತಿಗಳು’ ಎಂದೂ ಅವರು ಹೇಳಿದ್ದಾರೆ.

‘ಚರ್ಚ್‌ನ ಆಡಳಿತ ಮಂಡಳಿಯವರಿಗೆ ಯಾವುದೇ ತೊಂದರೆ ನೀಡಲು ನಾನು ಇಷ್ಟಪಡುವುದಿಲ್ಲ. ಆದ್ದರಿಂದಲೇ ಈ ನಿರ್ಧಾರ ಕೈಗೊಂಡಿದ್ದೇನೆ. ಅವರ ಪರಿಸ್ಥಿತಿಯನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ. ನನಗೆ ನೀಡಲಾಗಿದ್ದ ಸೇವಾ ನಿರ್ವಹಣೆಯ ಜವಾಬ್ದಾರಿಯಿಂದ ಹಿಂದಕ್ಕೆ ಸರಿದಿರುವೆ. ಹಿಂದಿರುಗಿಸಿದ್ದರೂ, ನಂತರದ ದಿನಗಳಲ್ಲಿ ಅದೇ ಚರ್ಚ್‌ನಲ್ಲಿ ಪಾದ್ರಿಯಾಗಿ ಮುಂದುವರಿಯುತ್ತೇನೆ’ ಎಂದು ವಿವರಿಸಿದ್ದಾರೆ.

‘ಇಷ್ಟೆಲ್ಲ ವಿವಾದವಾದರೂ, ಅಯ್ಯಪ್ಪನ ದರ್ಶನ ಮಾಡುವ ಯೋಜನೆಯಲ್ಲಿ ಯಾವುದೇ ಬದಲಾವಣೆಯಿಲ್ಲ. ಇದೇ 20ರಂದು ಶಬರಿಮಲೆಗೆ ತೆರಳುತ್ತಿದ್ದೇನೆ. ಯಾವುದೇ ತಪ್ಪು ಮಾಡಿಲ್ಲವೆಂಬ ಬಲವಾದ ನಂಬಿಕೆ ನನಗಿದೆ. ಹಿಂದೂ ಆಚರಣೆಗಳ ಹೊರತಾಗಿಯೂ ಆ ಧರ್ಮವನ್ನು ಅರಿಯುವುದು ನನ್ನ ಉದ್ದೇಶವಾಗಿದೆ’ ಎಂದು ಮಾಹಿತಿ ನೀಡಿದರು.

ಮನೋಜ್‌ ಅವರ ನಡೆ ಕುರಿತು ಹೇಳಿಕೆ ನೀಡಲು ಚರ್ಚ್‌ನ ಆಡಳಿತ ಮಂಡಳಿಯ ಅಧಿಕಾರಿಗಳು ಸಂಪರ್ಕಕ್ಕೆ ಲಭ್ಯರಾಗಲಿಲ್ಲ.

ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದ ಮನೋಜ್‌

ಪಾದ್ರಿ ಸ್ಥಾನ ಸ್ವೀಕರಿಸುವುದಕ್ಕೂ ಮುನ್ನ ಮನೋಜ್‌ ಅವರು ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿ ಕೆಲಸ ಮಾಡುತ್ತಿದ್ದರು.

‘ನನ್ನ ಆಧ್ಯಾತ್ಮಿಕ ಬೋಧನೆಗಳಿಗೆ ಅಧಿಕೃತತೆ ನೀಡುವ ಉದ್ದೇಶದಿಂದ ಪಾದ್ರಿ ಸ್ಥಾನ ಸ್ವೀಕರಿಸಿದೆ’ ಎಂದು ಮನೋಜ್‌ ಹೇಳಿದ್ದಾರೆ.

‘ವ್ರತದ ಸುದ್ದಿ ಹೊರಬಿದ್ದಾಗ, ನನ್ನ ಸಮುದಾಯದ ಕೆಲವರು ಟೀಕಿಸಿದರು. ಚರ್ಚ್‌ನ ಆಡಳಿತ ಮಂಡಳಿ ನನ್ನ ಮುಂದಿನ ಯೋಜನೆಗಳ ಬಗ್ಗೆ ಕೇಳಿತು. ನನ್ನ ಧಾರ್ಮಿಕ ಪಂಥಕ್ಕೆ ಅದರದೇ ಆದ ನಿಯಮ, ನಿಬಂಧನೆ ಹಾಗೂ ರೂಢಿಗತ ಸಂಪ್ರದಾಯಗಳಿವೆ. ನನ್ನ ನಿರ್ಧಾರಕ್ಕೆ ಅವರು ಸಹಮತ ವ್ಯಕ್ತಪಡಿಸುವುದಿಲ್ಲ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT