ಶುಕ್ರವಾರ, ಸೆಪ್ಟೆಂಬರ್ 17, 2021
30 °C

ಧುಮ್ಮಿಕ್ಕುವ ಜಲಧಾರೆಯ ಸುತ್ತಾ...

ಅಜಯ್ ಗಾಯತೊಂಡೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ ಜಿಲ್ಲೆ ಹೊನ್ನಾವರ ಬಸ್ ನಿಲ್ದಾಣದಿಂದ ಹೆದ್ದಾರಿಯಲ್ಲಿ 7 ಕಿ.ಮೀ ಸಾಗಿದರೆ ಕಾಸರಕೋಡ ಸಿಗುತ್ತದೆ. ಅಲ್ಲಿಂದ 2 ಕಿ.ಮೀ ಕಚ್ಚಾ ರಸ್ತೆಯಲ್ಲಿ ಮುಂದುವರಿದರೆ ಅರಬ್ಬೀ ಸಮುದ್ರ ಸಿಗುತ್ತದೆ. ಅಲ್ಲಿಂದ 500 ಮೀಟರ್ ಪೂರ್ವಕ್ಕೆ ಕ್ರಮಿಸಿದರೆ, ಸುಮಾರು 50 ಅಡಿಯಿಂದ ಸಣ್ಣದಾದ ಮನಮೋಹಕ ಜಲಪಾತವೊಂದು ಧುಮ್ಮಿಕ್ಕುತ್ತದೆ. ಅದೇ ಅಪ್ಸರಕೊಂಡ. ಪುರಾತನ ಕಾಲದಲ್ಲಿ ಅಪ್ಸರೆಯರು ಈ ಹೊಂಡದಲ್ಲಿ ಮೀಯುತ್ತಿದ್ದರು. ಆ ಕಾರಣಕ್ಕೆ ಇದಕ್ಕೆ ‘ಅಪ್ಸರಕೊಂಡ’ ಎಂದು ಹೆಸರು ಬಂತು ಎಂಬುದು ಪ್ರತೀತಿ.

ಜಲಪಾತದ ಮೇಲ್ಭಾಗದಲ್ಲಿ ಉಗ್ರನರಸಿಂಹ ದೇವಾಲಯವಿದೆ. ಅದರ ಹಿಂಬದಿಯಿಂದ ಸಾಗಿ ಮೆಟ್ಟಿಲುಗಳನ್ನು ಇಳಿದರೆ ಅಪ್ಸರಕೊಂಡ ಜಲಪಾತ ಕಾಣುತ್ತದೆ. ಚಿಕ್ಕದಾಗಿ ಒಂದೇ ದಾಟಿಯಲ್ಲಿ ಧುಮ್ಮಿಕ್ಕುವ ಜಲಧಾರೆಯನ್ನು ನೋಡುವುದೇ ಒಂದು ಸೊಗಸು. ಈ ಜಲಪಾತವು ಬೀಳುವ ಸ್ಥಳದಲ್ಲಿ ಚಿಕ್ಕದಾದ ಕೊಳ ನಿರ್ಮಾಣವಾಗಿದೆ. ಸಮೀಪದಲ್ಲಿ ನೈಸರ್ಗಿಕವಾಗಿ ರೂಪುಗೊಂಡಿರುವ ಗುಹೆ ಇದೆ. ಜಲಪಾತದಿಂದ ನಿರ್ಮಾಣವಾಗಿರುವ ಕೊಳವೂ ಅಪ್ಸರಕೊಂಡ ಎಂಬ ಹೆಸರು ಬರಲು ಕಾರಣವಂತೆ.

ಮಳೆಗಾಲದಿಂದ ಧುಮ್ಮಿಕ್ಕಲು ಆರಂಭವಾಗುವ ಈ ಜಲಪಾತ ಫೆಬ್ರುವರಿ ಆರಂಭದವರೆಗೆ ‌ಮುಂದುವರಿಯುತ್ತದೆ. ಜಲಪಾತದಿಂದ ಮೇಲಕ್ಕೆ ಸಾಗಿದರೆ ಎತ್ತರದ ಗುಡ್ಡವೊಂದು ಸಿಗುತ್ತದೆ. ಗುಡ್ಡದ ಸಾಲಿನಲ್ಲಿ ಅಲ್ಲಲ್ಲಿ ಹಳೆಯ ಕಾಲದ ಗುಹೆಗಳಿವೆ. ಹಿಂದೆ ಋಷಿಮುನಿಗಳು ಇಲ್ಲಿ ತಪ್ಪಸ್ಸು ಮಾಡುತ್ತಿದ್ದರು ಎಂಬ ನಂಬಿಕೆಯಿದೆ. ಇಲ್ಲಿರುವ ಗುಹೆಗಳಿಗೆ ‘ಪಾಂಡವರ ಗುಹೆ’ ಎಂದು ಕರೆಯುತ್ತಾರೆ. ಪಾಂಡವರು ವನವಾಸ ಮಾಡಿದ ಸಂದರ್ಭದಲ್ಲಿ ಈ ಗುಹೆಯಲ್ಲಿ ವಾಸವಿದ್ದರು ಎನ್ನಲಾಗುತ್ತದೆ‌. ಅಲ್ಲಿಂದ ಉದ್ಯಾನವನಕ್ಕೆ ತೆರಳಲು ಮೆಟ್ಟಿಲುಗಳಿವೆ‌.

ಪ್ರತಿಕೃತಿಗಳ ಉದ್ಯಾನ

ಅಪ್ಸರಕೊಂಡದ ಸಮೀಪದಲ್ಲೇ ರಾಕ್‌ಗಾರ್ಡ್‌ನ್ ಇದೆ. ಅದರಲ್ಲಿ ಸಿಮೆಂಟ್‌ನಿಂದ ವಿವಿಧ ಕಾಡು ಪ್ರಾಣಿಗಳ ಪ್ರತಿಕೃತಿಗಳನ್ನು ತಯಾರಿಸಿ ಇಡಲಾಗಿದೆ. ಉದ್ಯಾನದ ವೀಕ್ಷಣೆಗೆ ಪ್ರವೇಶ ಶುಲ್ಕವಿದೆ. ಮಕ್ಕಳಿಗೆ ಖುಷಿ ನೀಡಲು ನಾನಾ ನಮೂನೆಯ ಜೋಕಾಲಿಗಳು, ಜಾರುಬಂಡಿಗಳಿವೆ.

ಉದ್ಯಾನವನದಲ್ಲಿ ವೈವಿಧ್ಯಮಯ ಗಿಡಗಳಿವೆ. ಇದು ಬೆಟ್ಟದ ತುದಿಯಲ್ಲಿರುವುದರಿಂದ ಸೂರ್ಯಾಸ್ತ ಮತ್ತು ಸೂರ್ಯೋದಯ ಆನಂದಿಸಬಹುದು. ಸೂರ್ಯಾಸ್ತ, ಸೂರ್ಯೋದಯ ವೀಕ್ಷಣೆಗೆ ಸೂಕ್ತ ಸಮಯ ಮಾರ್ಚ್‌ ಮತ್ತು ಆಗಸ್ಟ್‌ ತಿಂಗಳು. 

ಗುಡ್ಡ ಹತ್ತಿ ಇಳಿದು ಆಯಾಸವಾಗಿದ್ದರೆ, ವಿರಮಿಸಿಕೊಳ್ಳಲು ಸಿಮೆಂಟ್ ಮತ್ತು ಕಪ್ಪೆಚಿಪ್ಪುಗಳಿಂದ ತಯಾರಿಸಿರುವ ಕಲ್ಲುಬೆಂಚುಗಳಿವೆ. ಅವುಗಳ ಮೇಲೆ ಕುಳಿತು ಆಯಾಸ ಪರಿಹರಿಸಿಕೊಳ್ಳಬಹುದು. ಹಸಿವಾಗಿದ್ದರೆ, ಸಮೀಪದಲ್ಲೇ ಉಪಹಾರ ಮಂದಿರಗಳಿವೆ. ಉಪಹಾರ ಮುಗಿಸಿ, ಪಕ್ಕದಲ್ಲಿರುವ ಮೆಟ್ಟಿಲುಗಳನ್ನು ಇಳಿಯುತ್ತಾ ಹೊರಟರೆ, ನೇರವಾಗಿ ಕಡಲ ತೀರಕ್ಕೆ ಹೋಗುತ್ತೀರಿ.

ಅಪ್ಸರಕೊಂಡ ಎಂಬ ತಾಣಕ್ಕೆ ಭೇಟಿ ನೀಡಿದರೆ, ಒಂದು ಕಡೆ ಜಲಪಾತ, ದೇವಸ್ಥಾನ, ಸುಂದರ ಉದ್ಯಾನದ ಜತೆಗೆ, ಕಡಲ ತಡಿಯಲ್ಲಿ ಹೆಜ್ಜೆ ಹಾಕುತ್ತಾ, ಬೆಳಿಗ್ಗೆಯಿಂದ ಸಂಜೆವರೆಗೂ ಚಾರಣ ಮಾಡುತ್ತ ಆ ಕಾಲ ಕಳೆಯಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು