ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏನಯ್ಯ ಇದೆ ಕನ್ನಡದಲ್ಲಿ?

Last Updated 5 ಜನವರಿ 2020, 4:08 IST
ಅಕ್ಷರ ಗಾತ್ರ

ಒಂದೊಂದು ಸಾರಿ, ಅಪರೂಪಕ್ಕೆ, ಬಿ.ಎಂ.ಶ್ರೀಕಂಠಯ್ಯ ಅವರು ತಮ್ಮ ಶಿಷ್ಯರೂ ಉಪಸ್ಥಿತರಿರುವ ಸಭೆಯಲ್ಲೇ, ‘ಏನಯ್ಯ ಇದೆ ನಿಮ್ಮ ಕನ್ನಡದಲ್ಲಿ? ಕೇಳು ಜನಮೇಜಯ ಧರಿತ್ರೀ ಪಾಲ ಬಿಟ್ಟರೆ’ ಎಂದು ಪ್ರಾರಂಭಿಸಿ ಕನ್ನಡದ ಮಹಾಕಾವ್ಯಗಳಲ್ಲಿನ ಅಷ್ಟಾದಶವರ್ಣನೆಯಿಂದ ಹಿಡಿದು ಎಲ್ಲವನ್ನೂ ವ್ಯಂಗ್ಯವಾಗಿ ತಮಾಷೆ ಮಾಡಿ ಮಾತನಾಡುತ್ತಿದ್ದರಂತೆ. ಶ್ರೀಯವರ ಶಿಷ್ಯರು ಏನು ಮಾಡಲೂ ತೋಚದೆ ಸಭಾ ಮರ್ಯಾದೆ ತಪ್ಪದಂತೆ ಆಚಾರ್ಯರ ಮಾತು ಕೇಳಿಸಿಕೊಂಡು ಸುಮ್ಮನಿರುತ್ತಿದ್ದರಂತೆ!

ಅಪರೂಪಕ್ಕಾದರೂ ಕನ್ನಡದ ಬಗ್ಗೆ ಹೊರಬರುತ್ತಿದ್ದ ಶ್ರೀ ಅವರ ಇಂಥ ಮುನಿಸು ತುಂಬ ಅರ್ಥಪೂರ್ಣ ಎಂದು ನನಗೆ ಅನ್ನಿಸುತ್ತದೆ: ಅವರು ಕನ್ನಡದ ಜೊತೆಯಲ್ಲೇ ಇಂಗ್ಲಿಷ್, ಗ್ರೀಕ್, ಇಟಾಲಿಯನ್, ತಮಿಳು, ಸಂಸ್ಕೃತ ಭಾಷಾ ಸಾಹಿತ್ಯವನ್ನು ಆಳವಾಗಿ ತಿಳಿದು ಕೊಂಡಿದ್ದವರು. ಅದರಲ್ಲೂ ಇಂಗ್ಲಿಷ್ ಅವರ ಜೀವ ಸಂಗಾತಿ, ಕನ್ನಡದಂತೆಯೇ. ಈ ಕಾರಣದಿಂದಲೋ ಏನೋ ಕನ್ನಡದ ಬಗ್ಗೆ ಒಂದು ಬಗೆಯ ಅತೃಪ್ತಿ. ಅದರಲ್ಲಿನ ಅಪರಿಪೂರ್ಣತೆ, ಅರೆ ಕೊರೆ ಅವರ ಒಳ ಮನಸ್ಸನ್ನು ಗಾಢವಾಗಿ ಬಾಧಿಸಿರಬೇಕು. ಈ ಒಳಬಾಧೆ ಅವರನ್ನು ಕನ್ನಡದ ಬಗ್ಗೆ ಆಗಾಗ್ಗೆ ವ್ಯಂಗ್ಯವಾಗಿ ಮಾತನಾಡುವಂತೆ ಮಾಡಿರಬೇಕು. ಶ್ರೀ ಅವರಿಗೆ ಕನ್ನಡದಲ್ಲಿ ಏನು ಕೊರೆ ಕಂಡಿರಬಹುದು? ನಮ್ಮ ಕವಿಗಳಲ್ಲಿ ಯಾವ ಬಗೆಯ ಅಪರಿಪೂರ್ಣತೆ, ಅಪಕ್ವತೆ ಕಾಣಿಸಿರಬಹುದು?

ಹತ್ತನೇ ಶತಮಾನದ, ನಮ್ಮ ಅತ್ಯುತ್ತಮ ಜೈನ ಕವಿಗಳ ಕಾವ್ಯವನ್ನೇ ನೋಡಿ: ಪಂಪ, ರನ್ನ, ಪೊನ್ನ ಎಲ್ಲರೂ ಘಟಾನುಘಟಿ ಕವಿಗಳು. ಇವರ ಕವಿತಾ ಶಕ್ತಿ, ಅಪೂರ್ವ ಪ್ರತಿಭೆ, ಭಾಷಾ ಬಳಕೆಯಲ್ಲಿನ ಪ್ರಭುತ್ವ, ಮತ್ತೆ ಈ ಎಲ್ಲವನ್ನೂ ಒಂದು ಸ್ವೀಕೃತ ಜೀವನ ಕಾಣ್ಕೆಯನ್ನು ಒಂದು ನಾಟಕವೋ ಎನ್ನುವಂತೆ ಓದುಗರ ಮುಂದೆ ಸಾದರಪಡಿಸಿರುವ ಸಂಗತಿ, ಈ ಎಲ್ಲರಲ್ಲೂ ಇರುವ ಅಸಾಧಾರಣ ಸಾಮರ್ಥ್ಯವನ್ನು ಸೊಗಸಾಗಿ ತೋರಿಸುತ್ತದೆ. ಪಂಪ, ರನ್ನರು ಅಸಾಧಾರಣ ಕವಿಗಳಷ್ಟೇ ಅಲ್ಲ, ಅಪೂರ್ವ ಧ್ವನಿಪೂರ್ಣ ಕಾವ್ಯ ಸಿದ್ಧಿಯನ್ನೂ ಪಡೆದವರು.

ಆದರೆ, ಈ ಎಲ್ಲ ಜೈನ ಕವಿಗಳ ಜೀವನದರ್ಶನ, ಕಾಣ್ಕೆ ಒಂದು ವಿಶಿಷ್ಟ ಮತೀಯ ಅಥವಾ ಧಾರ್ಮಿಕ ಚೌಕಟ್ಟಿನಲ್ಲಿ ಅರಳಿ ನಿಂತಿರುವಂಥದು. ಕವಿ ಅದರ ಚೌಕಟ್ಟಿನಾಚೆ ಹೋಗಲಾರ. ಬಹುಶಃ ಹೋಗ ಬಯಸಲೂ ಆರ. ಏಕೆಂದರೆ ಅವನ ಮಟ್ಟಿಗೆ, ಅವನ ಸಹಚರರ ಮಟ್ಟಿಗೆ ಅದು ಕೊರೆಗಳಿಲ್ಲದ, ಪರಿಪೂರ್ಣವಾದ ಜೀವನ ದೃಷ್ಟಿ. ಈ ಜೀವನ ದೃಷ್ಟಿಯ ವೈಶಾಲ್ಯ ಎಲ್ಲೋ ಕಡಿಮೆಯಾಗಿದೆ ಎಂದು ಅವನಿಗೆ ಅನ್ನಿಸಲೇ ಇಲ್ಲ. ಯಾರಾದರೂ ಇಲ್ಲಿ ಈ ಅರೆಕೊರೆ ಇದೆ ಎಂದರೆ ಅವನಿಗೆ ಅದು ಸಹನೆಸಾಲದ, ತಿಳಿವು ಕಮ್ಮಿ ಇರುವ ಜನರದ್ದು ಅನ್ನಿಸಿ ಬಿಡುತ್ತದೆ. ಇದನ್ನು ಒತ್ತಿ ಹೇಳಿದರೆ ಖಂಡನೆ, ಭರ್ತ್ಸನೆ ಪ್ರಾರಂಭವಾಗುತ್ತದೆ.

ಪ್ರಾಸಂಗಿಕ ಮಾತು ಇದು. ಒಂದು ಸಾರಿ ವಿ.ಸೀ. ಅವರು ಪೊನ್ನನ ಶಾಂತಿ ಪುರಾಣದ ಆರು ಅಶ್ವಾಸಗಳ ಕುರಿತು ಪಾಠ ಹೇಳಬೇಕಾಗಿ ಬಂದು, ಪಾಠ ಹೇಳಿದ ಮೇಲೆ, ಅವರಿಗೆ ‘ಇದಕ್ಕಿಂತ ಮಣ್ಣು ತಿನ್ನುವುದು ವಾಸಿ’, ಎನ್ನಿಸಿತಂತೆ. ಇದೇ ಮಾತನ್ನು ನಮ್ಮ ಪ್ರಾಚೀನ ಮಹಾಕವಿಗಳನೇಕರ ಕಾವ್ಯಭಾಗಗಳ ಬಗ್ಗೆ ಹೇಳಬಹುದು. ವೀರಶೈವ, ಬ್ರಾಹ್ಮಣ ಕವಿಗಳೂ ಅಷ್ಟೆ. ಅವರ ಕಾವ್ಯಶಕ್ತಿ, ಪ್ರತಿಭೆ, ಭಾಷಾ ಸಾಮರ್ಥ್ಯಗಳೂ ಅಸಾಧಾರಣ.

ಆದರೆ, ಇಲ್ಲೂ ಕವಿಯ ಜೀವನ ದೃಷ್ಟಿಯನ್ನು ಹದ್ದುಬಸ್ತಿನಲ್ಲಿ ಇರಿಸುವುದು, ಅವನ ಸ್ವೀಕೃತ ಧಾರ್ಮಿಕ, ವೈಚಾರಿಕ ಯೋಚನಾ ಕ್ರಮ. ಇದಕ್ಕೆ ವ್ಯತಿರಿಕ್ತವಾದದ್ದನ್ನು ಕಂಡರೆ ಒಂದೋ ಅದನ್ನು ಗೇಲಿ ಮಾಡುತ್ತಾರೆ; ಇಲ್ಲವೆ ರೂಕ್ಷವಾಗಿ ಖಂಡಿಸುತ್ತಾರೆ. ತಮ್ಮ ತಮ್ಮ ಮತಧರ್ಮ ಕೇಂದ್ರದಿಂದ ಅವರು ಆಚೆ ಹೋಗಲಾರರು. ತಮ್ಮದಲ್ಲದ್ದನ್ನು ಅವರು ಸ್ವೀಕರಿಸಲಾರರಷ್ಟೇ ಅಲ್ಲ; ಅದರ ಬಗ್ಗೆ ಸಹನೆಯನ್ನೂ ತೋರಲಾರರು. ಈ ಧಾರ್ಮಿಕ ಅಸಹನೆ, ಅಸಹಿಷ್ಣುತೆ ಹರಿಕಥಾಕ್ರಮ ಇಂಗ್ಲಿಷ್ ಬಲ್ಲ ಶ್ರೀಯವರಿಗೆ ಎಲ್ಲೋ ಗಾಸಿ ಮಾಡಿರಬೇಕು.

ಹಾಗೆ ನೋಡಿದರೆ ಕನ್ನಡದಲ್ಲಿ ನಿಜವಾಗಿ ಗಟ್ಟಿಯಾದ, ಮುಕ್ತ ಧ್ವನ್ಯಾರ್ಥವಿರುವ ಬರವಣಿಗೆ ಬಂದದ್ದೇ ನಮ್ಮ ನವೋದಯ ಕಾಲದಲ್ಲಿ. ಕುವೆಂಪು, ಮಾಸ್ತಿ, ಬೇಂದ್ರೆ, ಕಾರಂತರಂಥ ಲೇಖಕರು ಯಾವುದೋ ಒಂದು ಪಂಥಕ್ಕೆ, ಧಾರ್ಮಿಕ ವಿಚಾರ ಸರಣಿಗೆ ತಮ್ಮನ್ನು ತಾವು ತೆತ್ತುಕೊಳ್ಳದೆ, ಮನಸ್ಸು ಬಿಚ್ಚಿ, ಕಣ್ಣು ತೆರೆದು ತಮ್ಮ ಸುತ್ತಣ ಜೀವನವನ್ನೂ ಜೀವನದ ಬದುಕಿನ ರೀತಿಯನ್ನು ಚೆಚ್ಚರವಾಗಿ ಆದರೆ ಹನಿಗಣ್ಣಾಗಿ, ಸಹನೆ ಅನುಕಂಪಗಳಿಂದ ನೋಡಿ ಓದುಗರನ್ನು ಉದಾರಪರರಾಗಿ ಹೃದಯ ಸಂಪನ್ನರಾಗಿರುವಂತೆ ಮಾಡಿದ್ದು. ಇಂಥದ್ದು ಕನ್ನಡದಲ್ಲಿ ಮೊಟ್ಟಮೊದಲ ಸಲ ನಡೆದದ್ದು ಇಂಗ್ಲಿಷ್ ಸಾಹಿತ್ಯದ ಓದು ನಮ್ಮ ಕನ್ನಡದ ಹೃದಯ ಪ್ರಪಂಚವನ್ನು ಪ್ರವೇಶಿಸಿದ ಮೇಲೆ: ಕನ್ನಡ ಬುದ್ಧಿ ಭಾವಗಳ ಸಂಚಲನ ಪ್ರಾರಂಭವಾದದ್ದು ಈ ಒಳ ಸೆಳವಿನಿಂದ.

ಇಂಗ್ಲಿಷ್ ಸಂಜೀವಿನಿಯ ಸಂಗತವಿಲ್ಲದ ಕುವೆಂಪು, ಮಾಸ್ತಿ, ಕಾರಂತ, ಬೇಂದ್ರೆಯವರನ್ನು ಊಹಿಸುವುದು ಸಾಧ್ಯವಿಲ್ಲ. ವೈಚಾರಿಕ ಶ್ರೀಮಂತಿಕೆ, ಸ್ವೀಕೃತ ಧಾರ್ಮಿಕ ನೆಲೆಗಟ್ಟನ್ನು ಕುತೂಹಲದಿಂದ, ಆರ್ದ್ರತೆಯಿಂದ ನೋಡಿ, ಅನುಭವಿಸಿ ಇದರ ಬುನಾದಿಯ ಮೇಲೆ ಹೊಸತೊಂದು ಭಾವ ಪ್ರಪಂಚವನ್ನು ಅವರು ಕಟ್ಟಿಕೊಟ್ಟರು. ಹಾಗೆ ಮಾಡಿದ್ದರಿಂದಲೇ ಕನ್ನಡದ ಚೈತನ್ಯದೊಳಗೆ ಸ್ವೀಕೃತ ದೃಷ್ಟಿಯಾಚೆಗಿನ ಜೀವನ ಸಂಪತ್ತು ನಮ್ಮ ಜನರ ಕೈ ಸೇರಿತು.

ನವ್ಯ ಬರವಣಿಗೆಯ ಕಾಲಘಟ್ಟದಲ್ಲೂ ಇದು ಒಂದು ದೃಷ್ಟಿಯಿಂದ ಮುಂದುವರೆಯಿತು. ಆದರೆ ಈ ಬಗೆಯ ಬರವಣಿಗೆಗೆ ತೊಡಗಿದವರು ಯಾವುದೇ ಬೌದ್ಧಿಕ ಆಮಿಷದಿಂದಲೋ ಅಥವಾ ಪಶ್ಚಿಮದ ಜೀವನ ರೀತಿಯ ಆಕರ್ಷಣೆಯಿಂದಲೋ ಅಲ್ಲಿನ ಅಂದರೆ ಪಶ್ಚಿಮ ಪ್ರಪಂಚದ ಕಾಣ್ಕೆಯನ್ನು ಸಾಕಷ್ಟು ವಿಮರ್ಶೆಗೆ ಒಳಪಡಿಸದೆ, ಇಡಿಯಾಗಿ ಸ್ವೀಕರಿಸಿ ಬಿಟ್ಟರು. ಇದರಿಂದ ಅವರು ಒಂದು ಬಗೆಯ ಬೌದ್ಧಿಕ ವರ್ಗವನ್ನು ಒಂದು ಮಟ್ಟದಲ್ಲಿ ಮುಟ್ಟಿ ಅಲ್ಲೇ ನಿಂತು ಬಿಡಬೇಕಾಯಿತು. ನವೋದಯದವರಂತೆ ಇವರು ಮಾರ್ಗ ದೇಸಿಗಳನ್ನು ಒಟ್ಟುಗೂಡಿಸಲಾರದೇ ಹೋದರು.

ಷೇಕ್ಸ್‌ಪಿಯರ್, ಡಾಂಟೆ, ಸೋಪೋಕ್ಲೀಸ್‍ರನ್ನು ತಮ್ಮ ಸಾಹಿತ್ಯ ಜೀವನದ ಒಂದು ಮೌಲಿಕ ಭಾಗ ಎಂದೇ ತಿಳಿದಿದ್ದ ಶ್ರೀ ಅವರಿಗೆ ನಮ್ಮ ಪ್ರಾಚೀನ ಬರವಣಿಗೆ ಬಹುಶಃ ಸಮಾಧಾನ ತಂದಿರಲಿಲ್ಲ. ಈ ಒಳ ನಿರಾಸೆ ಅವರನ್ನು ಆಗಾಗ್ಗೆ ಕನ್ನಡದ ಗೇಲಿಗೆ ತಳ್ಳಿರಬಹುದು.

ನಮ್ಮ ಸಾಹಿತ್ಯದತ್ತ ಒಂದು ಕ್ಷಿಪ್ರ ವಿಹಂಗಮ ನೋಟ ಬೀರಿದರೆ, ಈ ಕೆಳಗೆ ಕಾಣುವ ಸಾಹಿತ್ಯ ಸತ್ಯಗಳು ಯಾರಿಗೂ ಗೋಚರವಾಗುತ್ತವೆ. ಯಾವ ಉಗ್ರ ಕನ್ನಡ ಪ್ರೇಮಿಯೂ ಕನ್ನಡದಲ್ಲಿ ಟಾಲ್‍ಸ್ಟಾಯ್‍ಗೆ ಸರಿದೂಗಬಲ್ಲ ಕಾದಂಬರಿಕಾರನಿದ್ದಾನೆ ಎನ್ನಲಾರ. ಹಾಗೇ, ಇಲ್ಲಿ ದಾಸ್ತೊವಿಸ್ಕಿ, ಟರ್ಗಿನೇವ್ ಇಲ್ಲ; ಎಸ್ಕೈಲಸ್, ಸೋಪೋಕ್ಲೀಸರು ಇಲ್ಲ; ಥಾಮಸ್ ಹಾರ್ಡಿ, ಚಾರ್ಲ್ಸ್‌ ಡಿಕೆನ್ಸ್, ಜೋಸೆಫ್ ಕಾನ್ರಾಡರು ಇಲ್ಲ; ವರ್ಡ್ಸ್‌ವರ್ಥ್‌, ಕೀಟ್ಸ್ ಇಲ್ಲ; ಇಬ್ಸನ್‌ಗೆ ಸಮನಾಗಬಲ್ಲ ನಾಟಕಕಾರವಿಲ್ಲ; ಕನ್ನಡದಲ್ಲಿ ಈ ಇಲ್ಲವುಗಳ ಪಟ್ಟಿ ಹೀಗೆ ಬೆಳೆದು, ನಿರಾಶೆ ತರುತ್ತದೆ.

ಷೇಕ್ಸ್‌ಪಿಯರ್, ಡಾಂಟೆ ತನಕ ಹೋಗುವುದು ಬೇಡ. ಮಹಿಳೆಯ ಮನಸ್ಸಿನಾಳಕ್ಕೆ ಇಳಿದು, ಆಕೆ ತಮ್ಮ ಕಾಲದ ಸಾಮಾಜಿಕ, ಧಾರ್ಮಿಕ, ಕೌಟುಂಬಿಕ ಆತಂಕಗಳಿಗೆ ಹೇಗೆ ಸ್ಪಂದಿಸಿದಳು, ಪ್ರತಿಕ್ರಿಯಿಸಿದಳು ಎನ್ನುವುದು ಜೇನ್ ಆಸ್ಟಿನ್, ಜಾರ್ಜ್ ಎಲಿಯಟ್‍ರಲ್ಲಿ ಕಾಣಬಹುದು, ನಮ್ಮಲ್ಲಿನ ಬರವಣಿಗೆಯಲ್ಲಿ ಅಲ್ಲ. ಮತ್ತೆ, ನಮ್ಮಲ್ಲಿ ಪ್ರಾದೇಶಿಕ ನಾಯಕರ, ರಾಜಮಹಾರಾಜರ ಚರಿತ್ರೆ ಹೇರಳವಾಗಿದೆ. ಆದರೆ, ಯಾವ ವಾಲ್ಟರ್ ಸ್ಕಾಟ್‍ನೂ ಇಲ್ಲಿ ಇಲ್ಲ. ಪತ್ತೇದಾರಿ ಕಾದಂಬರಿ ಕ್ಷೇತ್ರವನ್ನು ನೋಡಿ: ಕಾನನ್ ಡಾಯ್ಲ್‌ನಂಥವರನ್ನು ಹೋಲಬಲ್ಲ ಲೇಖಕ ಕೂಡ ನಮ್ಮಲ್ಲಿಲ್ಲ.

ಇಂಥದು, ಇಂಥವರು ಇಲ್ಲ ಎನ್ನುವ ಪಟ್ಟ ಬಲು ದೀರ್ಘ. ನಿಜ, ಕನ್ನಡದಲ್ಲಿ ಶೂನ್ಯ ಸಂಪಾದನೆ ಇದೆ. ಆದರೆ, ಇದರ ಬೇರೂ ವೇದೋಪನಿಷತ್ತುಗಳಲ್ಲಿ ನಿಂತಿದೆ. ವೈದಿಕತೆಯನ್ನು ಅದು ಕ್ರಮಿಸಿರಬಹುದು. ಆದರೆ ಅದನ್ನು ಉಳಿದು ಇದು ಇಲ್ಲ. ಬಹುಶಃ ಈ ಅರ್ಥದಲ್ಲೇ ಶ್ರೀಯವರು, ‘ಒಟ್ಟಿನ ಮೇಲೆ ಕನ್ನಡ ಸಾಹಿತ್ಯವೆಲ್ಲಾ ಸಂಸ್ಕೃತ ಸಾಹಿತ್ಯದ ಭಾಷಾಂತರವಲ್ಲವೇ’ ಎಂದು ಕೇಳಿರಬೇಕು.

ನಿಜ ಎಂದರೆ ನಮ್ಮ ಅನೇಕ ಕಾಣ್ಕೆಗಳ, ದರ್ಶನಗಳ ವ್ಯಾಪ್ತಿ ಪಂಗಡಗಳ ಕಾಣ್ಕೆಗಳಷ್ಟೇ, ಅವುಗಳ ದರ್ಶನಕಷ್ಟೇ ಸೀಮಿತವಾದುವು. ಅವುಗಳ ದೃಷ್ಟಿ ವೈಶಾಲ್ಯ, ಸೋಪಜ್ಞತೆ, ಸ್ವಂತ ಪ್ರತಿಭೆ ಎಲ್ಲೋ ಒಂದು ಕಡೆ ಒಂದು ಪರಿಮಿತ ಪ್ರಪಂಚ ಒಂದರಲ್ಲಿ ನಿಂತು ಹೋಗಿದೆ.

ಶ್ರೀಯವರಿಗೆ ನಮ್ಮ ಪ್ರಾಚೀನ ಸಾಹಿತ್ಯದ ಕೊರೆ ಅವರ ಒಳ ಮನಸ್ಸಿಗೆ ಘಾಸಿಯಾಗುವಷ್ಟರ ಮಟ್ಟಿಗೆ ಕಂಡಿದ್ದರೆ ಅದನ್ನು ನಾವು ಹೇಗೆ ಅಲ್ಲಗಳೆಯಬಲ್ಲೆವು? ನಾವೇ ಸತ್ಯ, ನಮ್ಮ ಭಾಷೆಯ ಕಾಣ್ಕೆಯೇ ಸತ್ಯ ಎಂದು ಕೂತರೆ ಸತ್ಯದಾಚೆಗಿರುವ ಸತ್ಯಗಳು ನಮಗೆ ಗೋಚರವಾಗಬಲ್ಲವು ಹೇಗೆ?

ಯಾವ ಭಾಷೆ, ಯಾವ ಭಾಷಾ ಸಾಹಿತ್ಯ ಪೂರ್ಣದೃಷ್ಟಿಯ ಸಾಕ್ಷಾತ್ಕಾರಕ್ಕೆ ಪ್ರಯತ್ನಿಸುತ್ತಿದೆಯೋ ಕನ್ನಡ ಅಂಥದರ ಜೊತೆ ನಡೆಯಬೇಕು. ನಮ್ಮ ‘ಇಲ್ಲ’ಗಳನ್ನು ಅರಿತು, ಆ ‘ಇಲ್ಲ’ದ ಸ್ಥಳವನ್ನು ನಮ್ಮ ಸ್ವಪ್ರಯತ್ನದಿಂದಲೇ ತುಂಬಬೇಕು. ಅನ್ಯಥಾ ಶರಣಂ ನಾಸ್ತಿ. ಕನ್ನಡದಲ್ಲಿ ಇಲ್ಲದಿರುವುಗಳ ಪಟ್ಟಿ ಮಾಡಿದ ನಂತರ ಶ್ರೀಯವರು ಆಖೈರಾಗಿ ಹೇಳಿದ ಮಾತು ಅತ್ಯಂತ ಮನನೀಯ.

‘ಒಳ್ಳೆಯದು, ತಾವು ಕೇಳಬಹುದು: ಇದೇನು ಒಳ್ಳೆಯ ಸಾಹಿತ್ಯ ನಮ್ಮಲ್ಲಿಲ್ಲವೆ? ಪುರಾತನರ ಪ್ರೌಢ ಸಾಹಿತ್ಯ, ಮಧ್ಯ ಕಾಲದವರ ಸುಲಭ ಸಾಹಿತ್ಯ, ನೂತನರ ರಂಜನ ಸಾಹಿತ್ಯ, ಇವು ನಮ್ಮ ಜ್ಞಾನಜೀವವ್ರತಕ್ಕೆ ಸಾಲದೇ? ಸಾಲದು: ಕ್ಷಮಿಸಬೇಕು; ಸಾಲದು ... ಸಂಸ್ಕೃತ ಮತ್ತು ಇಂಗ್ಲಿಷ್ ಭಾಷೆಗಳಲ್ಲಿರುವ ಮಹಾಮಹಾ ಕವಿಗಳ ಪ್ರತಿಭೆಯೂ, ಕಲ್ಪನಾಶಕ್ತಿಯೂ, ಉದಾತ್ತ ಭಾವನೆಗಳೂ, ರಸ ಪ್ರವಾಹವೂ, ಅದ್ಭುತ ಕವಿತಾ ದೃಷ್ಟಿಯೂ, ಮನುಷ್ಯ ಜಾತಿಯ ನಾನಾವಿಧವಾದ ಅನುಭವಗಳೂ ಸಂಕಟಗಳೂ... ಹೀಗೇ ಸರಿಯೆಂದು ನಿರ್ಣಯಕ್ಕೆ ಸಿಕ್ಕದ ಜೀವ ರಹಸ್ಯವೂ (ಈ) ಉತ್ತಮ ಸಾಹಿತ್ಯಗಳ ಸಮಕ್ಕೆ ತೂಗಬಲ್ಲವೇ? ನಮ್ಮ ಪೂರ್ವದ ಸಾಹಿತ್ಯದಲ್ಲಿ ಎಷ್ಟರ ಮಟ್ಟಿಗೆ ದೊರೆಯಬಹುದು (ಇಂಥದು), ನಮ್ಮ ಪೂರ್ವದ ಸಾಹಿತ್ಯದಲ್ಲಿ ಹೇರಳವಾಗಿದೆ ಎಂದು ಎಷ್ಟರ ಮಟ್ಟಿಗೆ ಧೈರ್ಯವಾಗಿ ಹೇಳಬಹುದು!’

ಧ್ವನಿಪೂರ್ವಕ ಅಲ್ಲ, ನಿಸ್ಸಂಕೋಚವಾಗಿಯೂ ಸ್ಟಷ್ಟವಾಗಿಯೂ ಶ್ರೀಯವರು ನಮ್ಮ ಕನ್ನಡದಲ್ಲಿ ಇಲ್ಲದವುಗಳನ್ನು ಸೋದಾಹರಣವಾಗಿ ಪಟ್ಟಿ ಮಾಡಿ ಭ್ರಾಂತಿನಲ್ಲಿ ‘ಬದುಕಿರುವವರನ್ನೂ ಎಚ್ಚರಗೊಳಿಸಲು ಹೊರಟವರು ನಾವು’ ಎಂದದ್ದು ನಮ್ಮ ಅರಿವಿಗೆ ಬರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT