ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರ–ಲೇಖನ: ಮಹೂವಾ... ವ್ಹಾರೆ ವ್ಹಾ...

Published 26 ಆಗಸ್ಟ್ 2023, 23:30 IST
Last Updated 26 ಆಗಸ್ಟ್ 2023, 23:30 IST
ಅಕ್ಷರ ಗಾತ್ರ

ಗುಜರಾತಿನ ತೇಜಗಢದಲ್ಲಿ ಸ್ಥಾಪಿಸಿರುವ ಆದಿವಾಸಿ ಅಕಾಡೆಮಿಗೆ ಹೋದಾಗ ಮಹೂವಾ ಮರ ಕಣ್ಣಿಗೆ ಬಿತ್ತು. ಈ ಮರದ ಸಾಂಸ್ಕೃತಿಕ ಬೇರುಗಳನ್ನು ಕಾಣಿಸುತ್ತಾ ಲೇಖಕರು ಅಪರೂಪದ ಸಂಗತಿಗಳನ್ನು ಇಲ್ಲಿ ಬರೆದಿದ್ದಾರೆ...

***

ಇತ್ತೀಚೆಗೆ ಭಾರತದ ಭಾಷಾವಿಜ್ಞಾನಿಗಳಲ್ಲಿ ಒಬ್ಬರಾದ ಗಣೇಶ್ ದೇವಿಯವರು, ಗುಜರಾತಿನ ತೇಜಗಢದಲ್ಲಿ ಸ್ಥಾಪಿಸಿರುವ ಆದಿವಾಸಿ ಅಕಾಡೆಮಿಗೆ ಆಹ್ವಾನಿಸಿದ್ದರು. ಇದು ರಾಥವಾ ಆದಿವಾಸಿಗಳ ಕಾಡಿನೊಳಗಿದೆ. ಇಲ್ಲಿ ಆದಿವಾಸಿ ಮ್ಯೂಸಿಯಂ ಇದೆ. ವಸತಿಶಾಲೆಯಿದೆ. ಕರಕುಶಲ ಉದ್ಯಮವಿದೆ. ಗ್ರಂಥಾಲಯವಿದೆ. ಭಾಷಾವನವಿದೆ. ಇದನ್ನು ಆದಿವಾಸಿಗಳೇ ನಡೆಸಿಕೊಂಡು ಹೋಗುವರು. ಭಾಷಾವನದ ಉದ್ದೇಶ ಅಳಿಯುತ್ತಿರುವ ಆದಿವಾಸಿಗಳ ಭಾಷೆಗಳ ಬಗ್ಗೆ ಎಚ್ಚರ ಹುಟ್ಟಿಸುವುದು. ಇಲ್ಲಿ ಭಾಷೆ ಎಂದರೆ ಜನರಾಡುವ ಮಾತು, ಹೇಳುವ ಕತೆ, ಹಾಡುವ ಹಾಡು ಮಾತ್ರವಲ್ಲ. ಅವರ ಬದುಕಿನ ಸರ್ವಸ್ವವೂ ಆಗಿರುವ ಕಾಡು. ಕಾಡಿನೊಳಗಿನ ಜೀವನಕ್ರಮ, ಸಂಸ್ಕೃತಿ ಕೂಡ. ಭಾಷಾವನವು ಒಂದು ಆಧುನಿಕ ಹಾಡಿ. ಇಲ್ಲಿ ಭಾರತದ ಜನಭಾಷೆಗಳ ಉಯಿಲುಗಳಿವೆ. ನಾನು ಕನ್ನಡದ ಉಯಿಲನ್ನು ಬಿಚ್ಚಿನೋಡಿದೆ.

ಹಾಡಿಯಲ್ಲಿ ಮಹೂವಾ ಮರಗಳಿವೆ. ಆದಿವಾಸಿ ಬದುಕಿನಲ್ಲಿ ಮಹತ್ವದ ಸ್ಥಾನ ಪಡೆದಿರುವ ವೃಕ್ಷವಿದು. ಒಂದು ಮಹೂವ ಮರದ ಬುಡದಲ್ಲಿ ಜ್ಞಾನಪೀಠ ಪ್ರಶಸ್ತಿ ಪಡೆದ ಬಂಗಾಳಿ ಲೇಖಕಿ ಮಹಾಶ್ವೇತಾ ದೇವಿಯವರ ಅಸ್ಥಿಗಳನ್ನು ಹೂಳಲಾಗಿದೆ. ಅದು ಅವರ ಬಾಳಿನ ಅಂತಿಮ ಅಪೇಕ್ಷೆಯಾಗಿತ್ತು. ಅವರ ಸ್ಮಾರಕದ ಮೇಲೆ ‘ಎಲ್ಲ ಕನಸುಗಳಿಗೂ ಬದುಕುವ ಅಧಿಕಾರವಿದೆ’ ಎಂಬ ಅವರದೇ ಮಾತನ್ನು ಕೆತ್ತಲಾಗಿದೆ. ಮಹಾಶ್ವೇತಾ, ಆದಿವಾಸಿಗಳ ಕಾಡು ಮತ್ತು ನೆಲದ ಹಕ್ಕುಗಳಿಗಾಗಿ ದುಡಿದವರು. ಅವರ ಕನಸುಗಳನ್ನು ನನಸಾಗಿಸಲು ಯತ್ನಿಸಿದವರು. ಮಹಾಶ್ವೇತಾದೇವಿ ಸ್ಮಾರಕ ಉಪನ್ಯಾಸಕ್ಕೆಂದು ಭಾರತದ ಬೇರೆಬೇರೆ ಭಾಗಗಳಿಂದ ಬಂದಿದ್ದ ಲೇಖಕರು, ಕಲಾವಿದರಾದ ನಾವು ತೇಜಗಢಕ್ಕೆ ಹೋದಾಗ, ಮಹೂವಾ (ಹಿಪ್ಪೆಯ) ಹೂವಿನ ಕಾಲ ಮುಗಿದು ಹಣ್ಣು ಬಿಟ್ಟಿದ್ದವು. ಬಾವಲಿಗಳು ಹಣ್ಣಿನ ತಿರುಳನ್ನು ತಿಂದು ಬೀಜವನ್ನು ಉಗಿದಿದ್ದವು. ಕೆಲವು ಬೀಜಗಳನ್ನು ಆರಿಸಿ ಅಂಗೈಯಲ್ಲಿ ಇರಿಸಿಕೊಂಡೆ. ಕಪ್ಪುವಜ್ರಗಳಂತೆ ಫಳಫಳಿಸುತ್ತಿದ್ದವು. ಕೂಡಲೇ ಈ ಮರಗಳ ಅಡಿಯಲ್ಲಿಯೇ ನನ್ನ ಬಾಲ್ಯ ತಾರುಣ್ಯ ಕಳೆದ ದಿನಗಳು ನೆನಪಾದವು.

ಬೆಂಗಳೂರು-ಹೊನ್ನಾವರ ಹೆದ್ದಾರಿ ತರೀಕೆರೆ ಪಟ್ಟಣದೊಳಗಿಂದ ಹಾಯುವ ಎರಡೂ ಬದಿಗಳಲ್ಲಿ, ನಾವು ಮೋಹೆ ಎಂದು ಕರೆಯುತ್ತಿದ್ದ ಈ ಮರಗಳಿದ್ದವು. ಏಕೀಕರಣದ ಪೂರ್ವದಲ್ಲಿ ಮೈಸೂರು ಸಂಸ್ಥಾನದ ಲೋಕೋಪಯೋಗಿ ವಿಭಾಗ ನೆಟ್ಟು ಬೆಳೆಸಿದ ಇವು ಬೃಹದಾಕಾರವಾಗಿದ್ದವು. ಇವುಗಳ ಬದಿ ಓಡಾಡುವಾಗ ಮಾದಕ ಪರಿಮಳ ಹೊಮ್ಮುತ್ತಿತ್ತು. ಮಕರಂದಕ್ಕಾಗಿ ಮುತ್ತಿಕೊಂಡ ದುಂಬಿಗಳಿಂದ ಮರವೇ ಸಂಗೀತ ಗೋಷ್ಠಿ ಆಗುತ್ತಿತ್ತು. ಮರದಡಿ ತುಸುಹೊತ್ತು ಕುಳಿತರೆ ನಶೆ ಏರುತ್ತಿತ್ತು. ನಾವು ನಸುಕು ಹರಿವ ಮುನ್ನವೇ ಹೋಗಿ ಮಳೆಯಿಂದ ಒದ್ದೆಯಾದ ಹುಲ್ಲು ಬೆಳೆದ ನೆಲದಲ್ಲಿ ಬಾವಲಿ ತಿಂದುಗಿದ ಬೀಜಗಳನ್ನು ಹೆಕ್ಕುತ್ತಿದ್ದೆವು. ಬೀಜದ ಕವಚಗಳನ್ನು ಬೆರಳಿಗೆ ಹಾಕಿ ಹುಲಿಯುಗುರು ಮಾಡಿಕೊಂಡು ಆಡುತ್ತಿದ್ದೆವು. ಅಂಗಡಿ ರಜಾಕನು ಬೀಜಗಳನ್ನು ಸೇರಿಗೆ 20 ಪೈಸೆಯಂತೆ ಕೊಳ್ಳುತ್ತಿದ್ದನು. ಇದರ ಎಣ್ಣೆಯಿಂದ ಸೋಪು ತಯಾರಿಸುತ್ತಾರೆ ಎನ್ನಲಾಗುತ್ತಿತ್ತು.

ಕನ್ನಡದಲ್ಲಿ ಮಹೂವಾ ಕುರಿತು ಎರಡು ಕವನಗಳಿವೆ. ಮೊದಲನೆಯದು- ಸತ್ಯನಾರಾಯಣ ಅಣತಿಯವರ ‘ಹಿಪ್ಪೆಮರ’. ಎರಡನೆಯದು- ಬಂಜಗೆರೆ ಜಯಪ್ರಕಾಶರ ‘ಮಹೂವಾ’. ನಮ್ಮ ಪರಿಸರದಲ್ಲಿ ಸಾಮಾನ್ಯ ವೃಕ್ಷವಾಗಿದ್ದ ಹಿಪ್ಪೆ ಅರ್ಥಾತ್ ಮಹೂವಾದ ಹೂವು ಮತ್ತು ಬೀಜಗಳು, ಆದಿವಾಸಿಗಳ ಹೂವಿನಿಂದ ತಿನ್ನುವ ರೊಟ್ಟಿ, ಕುಡಿವ ಮದ್ಯ, ಪೂಸುವ ಗಂಧ, ಬಳಸುವ ಮದ್ದುಗಳಾಗುತ್ತವೆ ಎಂದು ತಿಳಿದಿರಲಿಲ್ಲ. ಮಹೂವಾ ಹೂವನ್ನು ಸಂಗ್ರಹಿಸದಂತೆ ಸರ್ಕಾರಗಳು ನಿಷೇಧ ಹೇರಿದಾಗ, ಕಾಡುತ್ಪನ್ನಗಳ ಹಕ್ಕಿಗಾಗಿ ಆದಿವಾಸಿಗಳು ಹೋರಾಟ ಆರಂಭಿಸಿದರು. ಅದು ಕಾಡಿನ ಸ್ವಾಯತತ್ತೆ ಉಳಿಸಿಕೊಳ್ಳುವ ಪ್ರಜ್ಞೆಯಾಗಿ ಬದಲಾಯಿತು. ಬಂಜಗೆರೆಯವರ ಕವನ ಮಹೂವವನ್ನು ಬುಡಕಟ್ಟು ಹೋರಾಟಗಳ ಪ್ರತೀಕವಾಗಿ ಚಿತ್ರಿಸುತ್ತದೆ.

ಮಹೂವಾ ಸಪೋಟ ಕುಟುಂಬಕ್ಕೆ ಸೇರಿದ ಸಸ್ಯ. ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶ, ಜಾರ್ಖಂಡ್, ಛತ್ತೀಸಘಡ ಒಡಿಶಾ ಹಾಗೂ ಬಂಗಾಳದ ಕಾಡುಗಳಲ್ಲಿ ಬೆಳೆಯುತ್ತದೆ. ಇದು ಮಧ್ಯಭಾರತದ ಆದಿವಾಸಿಗಳ ಕಾರಿಡಾರ್ ಕೂಡ. ಆದಿವಾಸಿಗಳು, ಮಹೂವಾ ಹೂವನ್ನು ಒಣಗಿಸಿ ಮಾರುವರು. ಇದರ ಬೀಜದ ಎಣ್ಣೆಯನ್ನು ಅಡುಗೆಗೆ ಬಳಸುವರು. ಇದರ ಕಟ್ಟಿಗೆಯಲ್ಲಿ ತಮ್ಮ ದೈವಗಳನ್ನು ಕೆತ್ತುವರು. ಅವರ ಕತೆ ಹಾಡು ಚಿತ್ರಗಳಲ್ಲಿ ಈ ಮರ ಮತ್ತೆಮತ್ತೆ ಕಾಣಿಸುತ್ತದೆ.

ಗುಜರಾತಿನ ರಾಠವಾ ಆದಿವಾಸಿಗಳು ನೃತ್ಯ, ಹಾಡಿಕೆ, ಕತೆ, ಚಿತ್ರಗಳಿಗೆ ಹೆಸರಾದವರು. ಇಲ್ಲಿ ಪ್ರತಿಯೊಬ್ಬ ಪುರುಷರೂ ಕೊಳಲು ವಾದಕರೇ. ಒಬ್ಬ ಗಾಯಕ ಕೊಳಲು ನುಡಿಸುವಾಗ, ಆದಿವಾಸಿ ಶಾಲೆಯ ಮಕ್ಕಳು ಒಬ್ಬರ ಹೆಗಲಿಗೆ ಮತ್ತೊಬ್ಬರು ಕೈಯಿಟ್ಟು ಸರಪಳಿಯಾಗಿಸಿ ಹಿಂದಕ್ಕೂ ಮುಂದಕ್ಕೂ ಲಯಬದ್ಧವಾಗಿ ಚಲಿಸುವ ನರ್ತನ ಮಾಡಿದರು. ಈ ದೇಹದ ಸರಪಳಿ ಆದಿವಾಸಿಗಳ ಸಾಮುದಾಯಿಕ ಬದುಕಿನ ಸಂಕೇತವಾಗಿತ್ತು. ರಾಠವಾಗಳ ನೃತ್ಯ ಕುಣಿತ ಹಾಡಿಕೆ ಕೇಳಬೇಕಾದರೆ ಹೋಳಿ ಇಲ್ಲವೇ ದೀಪಾವಳಿಗೆ ಹೋಗಬೇಕು. ಅವರ ಪಿಥೋರಿ ಚಿತ್ರಕಲೆ ಜಗತ್‌ಪ್ರಸಿದ್ಧ. ಅವರು ಗೋಡೆಗಳ ಮೇಲೆ ಬಿಡಿಸುವ ಚಿತ್ರಗಳಲ್ಲಿ ಮಹೂವಾ ಮದ್ಯದ ಭಟ್ಟಿ ಇಳಿಸುವ ಸನ್ನಿವೇಶವೂ ಇದೆ. ಒಂದು ಚಿತ್ರದಲ್ಲಿ ನೇತುಬಿದ್ದ ಬಾವಲಿಗಳು ಮಹೂವಾ ಹಣ್ಣನ್ನು ತಿನ್ನುತ್ತಿವೆ. ಪಿಥೋರಿ ಚಿತ್ರವನ್ನು ಮಹೂವಾ ಮದ್ಯವನ್ನು ಸೇವಿಸುತ್ತಲೆ ರಚಿಸುವರಂತೆ. ಬಹುಶಃ ಕಲಾವಿದ ಪಾನೀಯವನ್ನು ಸ್ವಲ್ಪ ಹೆಚ್ಚಾಗಿ ಸೇವಿಸಿರಬೇಕು. ಕೆಲವು ಕಡೆ ಜನರ ಮುಖ ಕೋತಿಯದಾಗಿತ್ತು. ತೇಜಗಢದ ಅಕಾಡೆಮಿಯ ವಸ್ತುಸಂಗ್ರಹಾಲಯದಲ್ಲಿ ಭಟ್ಟಿಯಿಳಿಸುವ ಮಡಕೆ ಒಲೆಗಳನ್ನು ಇಡಲಾಗಿದೆ.

ಆದಿವಾಸಿ ಆಹಾರ ಪದ್ಧತಿ ಪಾನೀಯ ಪದ್ಧತಿಗಳು ಅನಾಗರಿಕವೆಂದೂ, ಅವನ್ನು ಅವರಿಂದ ಬಿಡಿಸಬೇಕೆಂದು ಕೆಲವು ಸಂಘಟನೆಗಳು ಯತ್ನಿಸುತ್ತಿವೆ. ಆದರೆ ಮಾಂಸ ಮತ್ತು ಮಹೂವಾ ಮದ್ಯ ಸೇವನೆಗಳು, ಅವರ ಕುಣಿತ, ಹಾಡಿಕೆ ಚಿತ್ರಕಲೆಯಷ್ಟೆ ಬದುಕಿನ, ಆರೋಗ್ಯದ ಮತ್ತು ಸಾಂಸ್ಕೃತಿಕ ಆಚರಣೆಗಳ ಭಾಗವಾಗಿವೆ. ನಾಗರಿಕ ಸಮಾಜಗಳ ಅಹಮಿಕೆಯೆಂದರೆ, ತಮ್ಮ ಜೀವನದೃಷ್ಟಿಯೇ ಶ್ರೇಷ್ಠವೆಂದು ಭಾವಿಸುವುದು. ಅದರ ಮೂಲಕ ಆದಿವಾಸಿಗಳ ಜೀವನಕ್ರಮವನ್ನು ಬೆಲೆಗಟ್ಟುವುದು. ತಿದ್ದಲು ಹವಣಿಸುವುದು. ಆದಿವಾಸಿಗಳ ಜೀವನಕ್ರಮ ಎಂದೂ ಬದಲಾಗದ ಸ್ಥಗಿತ ಚಿತ್ರವಲ್ಲ. ಪರಿವರ್ತನೆ ಹೊರಗಿನ ಹೇರಿಕೆಯಾಗಬಾರದು. ಅವರ ಒಳಗಿಂದಲೇ ಸಹಜವಾಗಿ ಸಂಭವಿಸಬೇಕು. ಒಳಗಿನ ಪ್ರಜ್ಞಾವಂತರು, ಹೊರಗಿನ ಪ್ರಭಾವಗಳಲ್ಲಿ ತಮಗೆ ಬೇಕಾದ್ದನ್ನು ಸ್ವೀಕರಿಸುತ್ತ, ತಮ್ಮೊಳಗಿನ ಬೇಡವಾದ್ದನ್ನು ಕೈಬಿಡುತ್ತ, ತಮ್ಮ ಭಾಷೆ ಸಂಸ್ಕೃತಿ ಕಾಡನ್ನು ಉಳಿಸಿಕೊಳ್ಳುವುದಕ್ಕೆ ಸೆಣಸುತ್ತ ಬಂದಿದ್ದಾರೆ. ಇಂತಹ ಸೆಣಸಾಟಕ್ಕೆ ಪ್ರೇರಣೆ ಕೊಟ್ಟ ಸಂಗತಿಗಳಲ್ಲಿ ಮಹೂವ ಕೂಡ ಒಂದು. ಇದರ ಹೂವು, ಬೀಜಗಳ ಉಪಯುಕ್ತತೆ, ಅವನ್ನು ತಿನ್ನಲು ಬರುವ ಪಶುಪಕ್ಷಿಗಳು ಇದನ್ನು ದೈವೀಕರಿಸಿದೆ. ಮಹೂವಾ- ಆದಿವಾಸಿಗಳ ಪಾಲಿಗೆ ಬೌದ್ಧರ ಬೋಧಿವೃಕ್ಷದಂತೆ, ಸೋಲಿಗರ ದೊಡ್ಡಸಂಪಿಗೆ ಮರದಂತೆ.

ನಮ್ಮ ತಂಡದಲ್ಲಿದ್ದ ಒಬ್ಬರು ಮಹಾಶ್ವೇತಾದೇವಿ ಅಸ್ಥಿಯಿರುವ ಕಡೆ ಮಹೂವಾ ಸಸಿ ನೆಟ್ಟರು. ನಾನು ಗುದ್ದಲಿಯಿಂದ ಮಣ್ಣನ್ನೆಳೆದು ಪಾತಿ ಮಾಡಿದೆ. ಅಲ್ಲಿದ್ದ ಆದಿವಾಸಿಗಳಿಗೆ ಕೇಳಿದೆ:
‘ಇದು ಹೂಹಣ್ಣು ಬಿಡಲು ಎಷ್ಟುವರ್ಷ ಬೇಕು?’
‘ಇಪ್ಪತ್ತು ವರ್ಷ’
‘ಇಪ್ಪತ್ತು ವರ್ಷ ಬಿಟ್ಟು ಬರುತ್ತೇನೆ. ನನಗೆ ಇದರ ಹೂವಿನಿಂದ ತಯಾರಿಸಿದ ಮಧುರಸವನ್ನು ಕೊಡಬೇಕು’
ಅವರು ಒಪ್ಪಿದರು. ನನಗೆ ನಮ್ಮೂರಿನ ಮಹೂವಾ ಮರಗಳೆಲ್ಲ ರಸ್ತೆ ವಿಸ್ತರಣೆಯಲ್ಲಿ ಕಣ್ಮರೆಯಾಗಿದ್ದು ನೆನಪಾಯಿತು. ಅವುಗಳ ಹಣ್ಣಿಗಾಗಿ ಬರುತ್ತಿದ್ದ ಬಾವಲಿಗಳು ಎಲ್ಲಿ ಹೋದವೊ? ಹೀಗೆ ಮರೆಯಾದ ವೃಕ್ಷವು ದೂರದ ಗುಜರಾತಿನ ಕಾಡುಗಳಲ್ಲಿ ದರ್ಶನ ಕೊಟ್ಟಿದ್ದು, ಕಳೆದುಹೋದ ಬಂಧುವನ್ನು ಭೇಟಿಯಾದಂತೆ ಖುಶಿ ಕೊಟ್ಟಿತು. ನಾನು ಆರಿಸಿಕೊಂಡಿದ್ದ ಮಹೂವಾ ಬೀಜಗಳನ್ನು ಭದ್ರವಾಗಿ ಇಟ್ಟುಕೊಂಡು ಹಂಪಿಗೆ ಮರಳಿದೆ.
ಹೋಳಿ ಹಬ್ಬಕ್ಕೆ ತೇಜಗಢಕ್ಕೆ ಹೋಗಬೇಕು.

ಮಹೂವಾ ಮದ್ಯವನ್ನು ಭಟ್ಟಿ ಇಳಿಸುವ ಒಲೆ–ಪಾತ್ರೆ
ಮಹೂವಾ ಮದ್ಯವನ್ನು ಭಟ್ಟಿ ಇಳಿಸುವ ಒಲೆ–ಪಾತ್ರೆ
ರಾಠವಾ ಕಲಾವಿದರು
ರಾಠವಾ ಕಲಾವಿದರು
ಮಹೂವಾ ಮರ
ಮಹೂವಾ ಮರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT