ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪರಂಪರೆ ಮತ್ತು ಸಂಪ್ರದಾಯಗಳ ವೈಭವಪೂರ್ಣ ಪುನರ್‌ ದರ್ಶನ

Published : 13 ಸೆಪ್ಟೆಂಬರ್ 2024, 7:33 IST
Last Updated : 13 ಸೆಪ್ಟೆಂಬರ್ 2024, 7:33 IST
ಫಾಲೋ ಮಾಡಿ
Comments

ಹಿರಿಯ ನೃತ್ಯ-ಗುರು ಹಾಗೂ ಕ್ರಿಯಾಶೀಲ ಪ್ರದರ್ಶಕಿ ಶ್ರೀ ಮಾತೃಕಾ ಕಲ್ಚರಲ್‌ ಟ್ರಸ್ಟ್‌ನ ಗುರು ವಿದ್ಯಾ ರವಿಶಂಕರ್‌ ತಾವು ಕರಗತಗೊಳಿಸಿಕೊಂಡು ಈಗಲೂ ಕರಾರುವಾಕ್ಕಾಗಿ ಅನುಸರಿಸಿಕೊಂಡು ಬಂದಿರುವ ಆಸ್ಥಾನ ಸಂಪ್ರದಾಯ ಮೈಸೂರು ಶೈಲಿ ಭರತನಾಟ್ಯದ ತತ್ವ-ಸತ್ವಗಳನ್ನು ಸಂರಕ್ಷಿಸುವುದಷ್ಟೇ ಅಲ್ಲದೆ ಆ ಪರಂಪರಾನುಗತ ಶೈಲಿಯನ್ನು ಸೊಂಪಾಗಿ, ಶಾಖೋಪಶಾಖೆಯಾಗಿ ಬೆಳೆಸಿಕೊಂಡು ಬರುತ್ತಿರುವುದು ಶ್ಲಾಘನೀಯ.

ಮೈಸೂರು ಶೈಲಿಯ ಅಧಿಕೃತ ಪ್ರತಿನಿಧಿಯಾಗಿದ್ದ ಗುರು ಡಾ. ಕೆ. ವೆಂಕಟಲಕ್ಷಮ್ಮನವರಿಂದ ಧಾರೆಯೆರಿಸಿಕೊಂಡು ಅದೇ ಪರಂಪರೆಯ ಗುರು ಶಕುಂತಲ ಅವರ ಮಾರ್ಗದರ್ಶನದಲ್ಲಿ ಮುಂದುವರೆದು ತಮ್ಮದೇ ಆದ ಕೊಡುಗೆಯನ್ನು ನೀಡುತ್ತಿರುವ ವಿದ್ಯಾ ರವಿಶಂಕರ್‌ ಮೇಲಿನ ಅಂಶಗಳನ್ನು ದೃಢೀಕರಿಸುವಂತೆ ಮತ್ತೊಮ್ಮೆ ಮೆರೆದರು. ಬೆಂಗಳೂರು ಗಾಯನ ಸಮಾಜದಲ್ಲಿ ಶನಿವಾರದಂದು ತಮ್ಮ ಬಹುಮಾನಿತ ಶಿಷ್ಯೆ ಸಿಂಧು ವಿ. ಆಚಾರ್ಯ ಅವರ ಚೊಚ್ಚಲ ಕಾರ್ಯಕ್ರಮದ ನೇತೃತ್ವವನ್ನು ವಹಿಸಿ ಶ್ರೀಮಂತ ಪರಂಪರೆಯ ದಿವ್ಯ ದರ್ಶನವನ್ನು ಮಾಡಿಸಿದರು.

ಪರಂಪರೆಯಂತೆ ಕಾರ್ಯಕ್ರಮದ ಪೂರ್ವಭಾಗ ಪೂರ್ವ ರಂಗವಿಧಿಯೊಂದಿಗೆ ತುಂಬಿ ಬಂತು. ಮೃದಂಗ ವಾದನದಲ್ಲಿ ಉಗ್ಗಡಿಸುವಿಕೆಯ ಅನುರಣನದೊಂದಿಗೆ ಆರಂಭ ಕೇಳುಗರಿಗೆ ಮತ್ತು ನೋಡುಗರಲ್ಲಿ ಸಕ್ರಿಯ ಸಂಚಲನೆಯನ್ನುಂಟು ಮಾಡಿತು. ನರ್ತಕಿ ಸಿಂಧು ಆಚಾರ್ಯ ಸಂಪೂರ್ಣ ಆತ್ಮ ವಿಶ್ವಾಸದೊಂದಿಗೆ ಸ್ಪಂದಿಸುತ್ತಾ ದೇವತಾ ವಂದನಾದಿಗಳನ್ನು ಪುಷ್ಪಾಂಜಲಿ(ಅಮೃತವರ್ಷಿಣಿ)ಯ ಮೂಲಕ ನೆರವೇರಸಿದರು. ವಿಶಿಷ್ಟ ಪರಂಪರೆಯ ನೂತನ ಪ್ರತಿನಿಧಿಯಾಗಿ ಸಿಂಧು ತೋರಿದ ಬದ್ಧತೆ ಹಾಗೂ ಶುದ್ಧತೆ ಗಮನಾರ್ಹ. ನಂದಿಕೇಶ್ವರನ ಅಭಿನಯ ದರ್ಪಣದ ಶ್ಲೋಕದ (ಕಲ್ಯಾಣಿ) ಆಶಯದಂತೆ ವಿದ್ವತ್‌ ಸಭಾ ವರ್ಣನೆಯನ್ನು ಸಾವಯವ ಅಖಂಡವಾಗಿ ಪರಿಭಾವಿಸಲಾಯಿತು. ಅಂತಯೇ ಮುಂದಿನ ದೇವಗಾಂಧಾರಿ ರಾಗದ ಚೂರ್ಣಿಕೆಯನ್ನು ಆಧರಿಸಿ ನೆರವೇರಿದ ರಂಗಾಧಿದೇವತೆಯ ಚಿತ್ರಣ ಸಿಂಧು ಅವರ ಶ್ರೇಷ್ಠ ಅಭಿನಯದಲ್ಲಿ ಧ್ವನಿತವಾಯಿತು. ವಿನಾಯಕ ಸ್ತುತಿ ಮತ್ತು ಜತಿಗಳ ಸುಲಲಿತ ನಿರೂಪಣೆಯೊಂದಿಗೆ ಸಿಂಧು ತಮ್ಮ ಮೈಸೂರು ಶೈಲಿ ಭರತನಾಟ್ಯ ಕಾರ್ಯಕ್ರಮದ ಪೂರ್ವಾರ್ಧವನ್ನು ಸಮಾಪ್ತಗೊಳಿಸಿದರು.

ಅಸ್ಖಲಿತ ಚೈತನ್ಯ, ಲವವಲವಿಕೆ, ಕಾಂತಿ ಮತ್ತು ಕಮನೀಯತೆಗಳಿಂದ ಅಪರೂಪದ ನಾಗಸ್ವರಾವಳಿ ರಾಗದ ಕನ್ನಡ ವರ್ಣ(ಆನಂದ ನಟನವ ಆಡಿದ) ಸಿಂಧು ಅವರ ನೃತ್ತ, ನೃತ್ಯ ಮತ್ತು ಅಭಿನಯ ಪ್ರಭುತ್ವವನ್ನು ಸಾರಿ ಹೇಳುವಂತಾಯಿತು. ಮುಗ್ಧ ನಾಯಕಿ ಚಿತ್ರಣ ಪ್ರಶಂಸೆಗೆ ಪಾತ್ರವಾಗುತ್ತದೆ. ಅದರಲ್ಲಿ ಮೂಡಿ ಬಂದ ಜತಿಗಳು, ಸ್ವರಗಳು, ರಸ ವೈವಿಧ್ಯ ಅಭಿನಂದನಾರ್ಹ. ಫರಜ್ ಜಾವಳಿ, ಕೃಷ್ಣ-ರಾಧೆಯರ ತವಕದ ಅಷ್ಟಪದಿ(ಯಮನ್‌ಕಲ್ಯಾಣಿ, ರತಿಸುಖಸಾರೆ)ಯ ಅಭಿನಯ, ಲ್ಲಿ ಪರಂಪರಾನುಗತ ವಿಶೇಷ ಅಡುವು ವಿನ್ಯಾಸ ಸಿಂಧು ಅವರ ಲಯ ಮತ್ತು ಭಾವ ಪ್ರಕಟಣಾ ಹಿಡಿತವನ್ನು ತೋರಿತು. ಗುರು ವಿದ್ಯಾ ರವಿಶಂಕರ್‌(ನಟುವಾಂಗ), ಭಾರತೀ ವೇಣುಗೋಪಾಲ್‌(ಗಾಯನ) ಅವರ ನೇತೃತ್ವದ ಸಂಗೀತ ಸಹಕಾರದಲ್ಲಿ ಕಾರ್ಯಕ್ರಮದ ಒಟ್ಟಂದವನ್ನು ಹೆಚ್ಚಿಸುವ ಸತ್ವವಿತ್ತು.

ಭವ್ಯ ಭರತನಾಟ್ಯ

ಹೆಸರಾಂತ ನೃತ್ಯ-ದಂಪತಿಗಳಾದ ನಿರುಪಮಾ ಮತ್ತು ರಾಜೇಂದ್ರ ಗುರುಗಳಾಗಿಯೂ ಯಶಗಾಣುತ್ತಿರುವುದು ಸಂತಸದ ವಿಷಯ. ತಮ್ಮ ಮಾಧ್ಯಮದ ವ್ಯಾಕರಣ, ಸಂರಚನೆ, ಶುದ್ಛತೆ ಮತ್ತು ಭವ್ಯತೆಗಳ ಬಗ್ಗೆ ಎಂದೂ ರಾಜಿ ಮಾಡಿಕೊಳ್ಳದೆ ಅವರ ಸಂಪ್ರದಾಯ ಬದ್ಧತೆ ಮೆಚ್ಚುವಂತಹುದು. ಕೋರಮಂಗಲದ ಕಲಾ ದ್ವಾರಕಾ ಸಭಾಂಗಣದಲ್ಲಿ ನಡೆದ ಅವರ ಶಿಷ್ಯೆ ಮಿಹಿಕಾ ಸಂಕುರಾತ್ರಿ ಅವರ ರಂಗಪ್ರವೇಶ ಪರಿವಿಡಿಯ ಭಿನ್ನತೆಯಲ್ಲೂ ಪ್ರಕಾಶಿಸಿತು. ನಾನು ವೀಕ್ಷಿಸಿದ ಸರಸ್ವತಿ ರಾಗದ ಸರಸ್ವತಿಯನ್ನು ಕುರಿತಾದ ರಚನೆಯಲ್ಲಿ ವಿದ್ಯಾಧಿ ದೇವತೆ ಪ್ರತ್ಯಕ್ಷಗೊಂಡಳು. ನವರಸಗಳು, ವಿವಿಧ ರೇಚಿತಗಳು, ಪತಾಕಾದಿ ಹಸ್ತ ವಿನ್ಯಾಸಗಳು ಮಿಹಿಕಾರ ಅಭಿನಯದಲ್ಲಿ ತಿಳಿಯಾದ ಹದಗೊಂಡ ಗಂಭೀರ ಶೈಲಿ ಸಿದ್ಧಿಸಿದೆ. ಪಾಪನಾಶಂ ಶಿವನ್‌ವಿರಚಿತ ನಟರಾಜನನ್ನು ಕುರಿತಾದ ‘ಸ್ವಾಮಿ ನಾನ್‌ ಉಂದನ್‌’ (ನಾಟಿಕುರಂಜಿ) ವರ್ಣ ಗುರು ಮತ್ತು ಶಿಷ್ಯೆಯ ಪರಿಶ್ರಮ ಮತ್ತು ಪರಿಣತಿಗಳ ಪ್ರತಿಬಿಂಬವಾಯಿತು. ವಿವಿಧ ಲಯ ಮಾದರಿಗಳು, ʼನಾಮಾಮೃತ ಪಾನಮೇʼ ಪಂಕ್ತಿಯ ವಿಸ್ತರಣೆ, ಭಕ್ತ ಮಾರ್ಕಂಡೇಯ ಪ್ರಸಂಗಾಭಿನಯ ಮುಂತಾದವುಗಳು ಮೂವತ್ತು ನಿಮಿಷಗಳ ರಸದೌತಣದಲ್ಲಿ ಮೈತುಂಬಿದವು. ರಾಧಾ-ಕೃಷ್ಣರ ಶೃಂಗಾರ ವರ್ಣನೆಯ ‘ಚಲೀಯೆ ಕುಂಜ’ (ಬೃಂದಾವನಸಾರಂಗ) ಮತ್ತು ಸಂಗೀತದ ಮಹತ್ವವನ್ನು ಸಾರುವ ಕಡೆಯ ‘ತಂಬೂರಿ ಮೀಟಿದವ’ (ಸಿಂಧುಭೈರವಿ) ಭಾವಕ್ಕೆ ಮತ್ತು ಕವನದ ರೂಪಕ್ಕೆ ಅನುಗುಣವಾದ ಅನುರೂಪತೆಗಳಿಂದ ಕಣ್ಮನಗಳನ್ನು ತುಂಬಿದವು. ಗುರು ನಿರುಪಮಾ ಅವರ ನಟುವಾಂಗ, ನಿರೂಪಣೆ ಮತ್ತು ನೇತೃತ್ವ ಕಳೆ ಕಟ್ಟಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT