ಡಾ.ಶಿವರಾಮ ಕಾರಂತರು ಯಕ್ಷಗಾನ ಬ್ಯಾಲೆಗಳನ್ನು ವಿಶ್ವದಾದ್ಯಂತ ಪ್ರದರ್ಶಿಸಿ ಸುಮಾರು ಐದು ದಶಕಗಳ ಹಿಂದೆಯೇ ಯಕ್ಷಗಾನಕ್ಕೆ ವಿಶೇಷ ಮನ್ನಣೆ ತಂದಿದ್ದರು. ಶ್ರೀಧರ ಹಂದೆ - ಶ್ರೀನಿವಾಸ ಉಡುಪರ ನೇತೃತ್ವದಲ್ಲಿ ಆರಂಭಗೊಂಡಿದ್ದ ಸಾಲಿಗ್ರಾಮ ಮಕ್ಕಳ ಮೇಳ ಕೂಡಾ 70ರ ದಶಕದಲ್ಲೇ ಸೀಮೋಲ್ಲಂಘನ ಮಾಡಿ ಇತಿಹಾಸ ಸೃಷ್ಟಿಸಿತ್ತು. ತೆಂಕು ತಿಟ್ಟು ಹಾಗೂ ಬಡಗು ತಿಟ್ಟಿನ ಅನೇಕ ವೃತ್ತಿಪರ ಕಲಾವಿದರು, ಕಲಾ ತಂಡಗಳು ನಿರಂತರವಾಗಿ ವಿದೇಶ ಪ್ರವಾಸ ಮಾಡಿ ಯಕ್ಷಗಾನ ಪ್ರದರ್ಶನ ನೀಡುತ್ತಲೇ ಬಂದಿರುವುದರಿಂದ ವಿದೇಶದಲ್ಲಿ ಯಕ್ಷಗಾನ ಪ್ರದರ್ಶನ ಸರ್ವೇ ಸಾಮಾನ್ಯ ಎನಿಸತೊಡಗಿದೆ. ಇದಕ್ಕೆ ಕಾರಣ ಯಕ್ಷಗಾನದ ಆ ಸೆಳೆತ.

ಡಾ. ರಾಧಾಕೃಷ್ಣ ಉರಾಳ ನಿರ್ದೇಶನದಲ್ಲಿ ಬೆಂಗಳೂರಿನ ಕಲಾಕದಂಬ ಆರ್ಟ್ ಸೆಂಟರ್ ಕೂಡಾ ಇತ್ತೀಚೆಗೆ ಅಮೆರಿಕ ಪ್ರವಾಸ ಮಾಡಿ ಯಕ್ಷಗಾನದ ಹೊಸ ಮೈಲಿಗಲ್ಲಿರಿಸಿ ಬಂದಿದೆ. ಮೂಲತಃ ಕನ್ನಡಿಗರಾದ, ಅಮೆರಿಕದ ಫಿಲಿಡೆಲ್ಫಿಯಾದಲ್ಲಿದ್ದು ತ್ರೀಅಕ್ಷ ನೃತ್ಯ ತಂಡವನ್ನು 2003ರಲ್ಲಿ ಹುಟ್ಟು ಹಾಕಿ ಅಲ್ಲಿನ ಮಕ್ಕಳಿಗೆ ಭರತ ನಾಟ್ಯ ಕಲಿಸುತ್ತಿರುವ ವಿಜಿ ರಾವ್ ಎರಡು ದಶಕಗಳಿಂದ ನೃತ್ಯ ರೂಪಕಗಳನ್ನು ನಿರ್ಮಿಸಿ ಗಮನ ಸೆಳೆದವರು. ಕೆಲವು ವರ್ಷಗಳಿಂದ ನ್ಯೂಯಾರ್ಕ್ನ 'ಕಾರ್ನಿಗೆ' ಸಭಾಂಗಣದಲ್ಲಿ ಆಲ್ ಇಂಡಿಯಾ ಡ್ಯಾನ್ಸ್ ಫೆಸ್ಟಿವಲ್ ಏರ್ಪಡಿಸುವ ಮೂಲಕ ಭಾರತೀಯ ನೃತ್ಯ ಪ್ರಕಾರಗಳ ಪರಿಚಯವನ್ನು ಅಮೆರಿಕದ ಕಲಾಸಕ್ತರಿಗೆ ಪರಿಚಯಿಸಿದವರು. ಅದರ ಭಾಗವಾಗಿ ಈ ಬಾರಿ ಕರ್ನಾಟಕದ ಹೆಮ್ಮೆಯ ಕಲೆ ಯಕ್ಷಗಾನವನ್ನೊಳಗೊಂಡ ವಿನೂತನ ನೃತ್ಯನಾಟಕವನ್ನು ತ್ರಿಅಕ್ಷ ಆಯೋಜಿಸಿತ್ತು.

ಸಂಗೀತ ನಿರ್ದೇಶಕ ಪ್ರವೀಣ್ ಡಿ. ರಾವ್ ಅವರ ಸಂಗೀತ ಸಂಯೋಜನೆಯಲ್ಲಿ ಮಹಾಭಾರತದ ಕೆಲವು ಪಾತ್ರ, ಸನ್ನಿವೇಶಗಳನ್ನೊಳಗೊಂಡ ಸತ್ಯತ್ ನೃತ್ಯ ನಾಟಕ ರೂಪಕ ಸಿದ್ಧಗೊಂಡು ಜೂನ್ 28, 29 ರಂದು ಫಿಲಿಡೆಲ್ಫಿಯಾದ ವೆನ್ನಿಸ್ ಐಲ್ಯಾಂಡ್ ಪರ್ಫಾರ್ಮಿಂಗ್ ಅರ್ಟ್ ಸೆಂಟರ್ನಲ್ಲಿ 2 ಪ್ರದರ್ಶನಗಳನ್ನು ಏರ್ಪಡಿಸಲಾಗಿತ್ತು. ಈ ಬಾರಿಯ ವಿಶೇಷ ಎಂದರೆ ಇದೇ ಮೊದಲ ಬಾರಿಗೆ ಯಕ್ಷಗಾನವನ್ನೊಳಗೊಂಡ ನೃತ್ಯ ನಾಟಕ ಇದಾಗಿತ್ತು. ತ್ರಿಅಕ್ಷದ ವಿದ್ಯಾರ್ಥಿನಿಯರೇ ಕೇವಲ 2 ವಾರದಲ್ಲಿ ಯಕ್ಷಗಾನದ ಹೆಜ್ಜೆಗಳನ್ನು ಕಲಿತು, ವೇಷ ತೊಟ್ಟು ಕುಣಿದರು. ಇದಕ್ಕೆ ನೆರವಾಗಿದ್ದು ಬೆಂಗಳೂರಿನ ಕಲಾಕದಂಬ ಆರ್ಟ್ ಸೆಂಟರ್.

ಸುಬ್ರಾಯ ಹೆಬ್ಬಾರ್ ಹಾಗೂ ಅಜಿತ್ ಕುಮಾರ್ ಈ ರೂಪಕದ ಪೂರ್ವ ದಾಖಲಿತ ಧ್ವನಿ ಮುದ್ರಿಕೆಯ ಹಿಮ್ಮೇಳದಲ್ಲಿರುವ ಜೊತೆಗೆ ಭೀಮ, ದುರ್ಯೋಧನ, ಕೀಚಕ, ಮಹಿಷ, ದೇವೇಂದ್ರ, ಮೊದಲಾದ ಪಾತ್ರಗಳಾಗಿಯೂ ರಂಗದಲ್ಲಿ ಕಾಣಿಸಿಕೊಂಡು ಅಲ್ಲಿನ ಪ್ರೇಕ್ಷಕರಲ್ಲಿ ಅಚ್ಚರಿ ಮೂಡಿಸಿದರು. ರಾಧಾಕೃಷ್ಣ ಉರಾಳರು ಮಕ್ಕಳಿಗೆ ಯಕ್ಷಗಾನ ಹೆಜ್ಜೆಯನ್ನು ಪರಿಚಯಿಸುವುದರ ಜೊತೆಗೆ ಭರತನಾಟ್ಯ -ಯಕ್ಷಗಾನ ಜುಗಲ್ಬಂದಿ ನೃತ್ಯ, ಯುದ್ಧ ನೃತ್ಯ ಸಂಯೋಜನೆ ಮಾಡಿ, ಕೃಷ್ಣನ ಪಾತ್ರವನ್ನೂ ನಿರ್ವಹಿಸಿ ಗಮನ ಸೆಳೆದರು. ವಿಜಿ ರಾವ್ ಅರ್ಜುನ, ಶಿಖಂಡಿ ಪಾತ್ರ ನಿರ್ವಹಿಸುವುದರೊಂದಿಗೆ ಪ್ರದರ್ಶನದ ನಿರ್ದೇಶನ, ಸಂಯೋಜನೆ ಹೊಣೆ ಹೊತ್ತು, ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದರು. ವೆನ್ನಿಸ್ ಐಲ್ಯಾಂಡ್ ಪ್ರದರ್ಶನದಲ್ಲಿ ತ್ರಿಅಕ್ಷದ ಏಳರಿಂದ ಎಪ್ಪತ್ತು ವಯಸ್ಸಿನ ಹಿರಿ-ಕಿರಿಯ ಕಲಾವಿದರೆಲ್ಲರೂ ಭಾಗವಹಿಸಿದ್ದು ವಿಶೇಷವಾಗಿತ್ತು.

ಸದ್ಯ ಅಮೆರಿಕದಲ್ಲಿರುವ, ಸಾಲಿಗ್ರಾಮ ಮಕ್ಕಳ ಮೇಳದಲ್ಲಿ ಕಲಾವಿದರಾಗಿದ್ದ ಶ್ರೀನಿಧಿ ಹೊಳ್ಳರು ತಮ್ಮ ಕೆಲಸದ ಒತ್ತಡದ ನಡುವೆಯೂ ಮಗಳು ಪಯಸ್ವಿನಿಯೊಂದಿಗೆ ಬಂದು, ಪೂರ್ವತಯಾರಿಯಲ್ಲಿ ಪಾಲ್ಗೊಂಡು ನಕುಲ-ಸಹದೇವ, ದುಶ್ಯಾಸನ ಪಾತ್ರಗಳಲ್ಲಿ ಕಾಣಿಸಿಕೊಂಡರು. ಯಕ್ಷಗಾನದ ಸೆಳೆತ ಏನೆನ್ನುವುದಕ್ಕೆ ಇದೊಂದು ನಿದರ್ಶನ. ಕರ್ನಾಟಕದಲ್ಲೇ ಹುಟ್ಟಿ ಬೆಳೆದಿದ್ದರೂ ಎಷ್ಟೋ ಜನರು ಯಕ್ಷಗಾನದ ಹಾಗೂ ಕನ್ನಡ ಭಾಷೆಯ ಪರಿಚಯವೇ ಇರದಿರುವ ಹಾಗೆ ನಡೆದುಕೊಳ್ಳುವುದನ್ನು ಕಾಣುವಾಗ ಅಮೆರಿಕದಲ್ಲಿಯೇ ಇರುವ ಪಯಸ್ವಿನಿ ಸ್ಪುಟವಾಗಿ ಕನ್ನಡ ಮಾತನಾಡುತ್ತಾ ಯಕ್ಷಗಾನದ ವೇಷ ತೊಟ್ಟು ಕುಣಿದಿರುವುದು ಬೆರಗು ಮೂಡಿಸಿದ ಸಂಗತಿ. ಯಕ್ಷಗಾನ ಚಿರಸ್ಥಾಯಿಯಾಗಿ ಬೆಳೆಯುತ್ತದೆ ಎನ್ನುವುದಕ್ಕೆ ಇಂತಹ ವಿದ್ಯಮಾನಗಳು ನಿದರ್ಶನಗಳಾಗಿವೆ ಎಂಬ ಅಭಿಪ್ರಾಯ ಉರಾಳರದಾಗಿತ್ತು.

ಕನ್ನಡದ ಜನಪ್ರಿಯ ನೃತ್ಯ ಕಲಾವಿದೆ ಅನುರಾಧಾ ಕೂಡ ಅಲ್ಲಿ ಬೇಸಿಗೆ ಶಿಬಿರದಲ್ಲಿನ ವಿದ್ಯಾರ್ಥಿನಿಯರಿಗೆ ಭರತ ನೃತ್ಯ ನಿರ್ದೆಶಿಸಿ ಪ್ರದರ್ಶನಕ್ಕೆ ನೆರವಾದರು. ಸಂತೋಷ್ ಅವರ ಬೆಳಕಿನ ವಿನ್ಯಾಸ ಪ್ರದರ್ಶನದ ಪರಿಣಾಮ ಹೆಚ್ಚಿಸಿತ್ತು. ಖ್ಯಾತ ಗಾಯಕ ಅಜಯ್ ವಾರಿಯರ್, ಸ್ನೇಹಜಾ, ಅರುಂಧತಿ ವಸಿಷ್ಠ ಅವರ ಗಾಯನ, ಸಾಯಿವಂಶಿ (ತಬಲ), ಪ್ರಮುಖ್ (ಕೊಳಲು) ಅವರೂ ಸತ್ಯತ್ ಪ್ರದರ್ಶನದಲ್ಲಿ ಭಾಗಿಯಾಗುವ ಜೊತೆಗೆ ಪ್ರವೀಣ್ ಡಿ ರಾವ್ ನಿರ್ದೇಶನದಲ್ಲಿ ತಮ್ಮ ಸಂಗೀತ ವಾದ್ಯ ಮೇಳ ಪ್ರದರ್ಶನದ ಮೂಲಕ ಪ್ರೇಕ್ಷಕರ ಮನ ಮುದಗೊಳಿಸಿದರು.

ನ್ಯೂಯಾರ್ಕ್ನ ಕಾರ್ನಿಗೆ ಹಾಲ್ನಲ್ಲಿ ಯಕ್ಷಗಾನ ಕಲೆ ಇದೇ ಪ್ರಪ್ರಥಮ ಬಾರಿಗೆ ವಿಜೃಂಭಿಸಿದುದು ಅಮೆರಿಕ ಪ್ರವಾಸದ ಇನ್ನೊಂದು ಗಮನಾರ್ಹ ಸಂಗತಿ. ಸುಮಾರು 3000 ಜನ ಕುಳಿತು ನೋಡುವ ಸಭಾಂಗಣವು ಬಹುತೇಕ ತುಂಬಿತ್ತು. ಸುಮಾರು 14 ತಂಡಗಳಿಂದ 300ಕ್ಕೂ ಹೆಚ್ಚು ಕಲಾವಿದರು ಸೇರಿ ಪ್ರದರ್ಶಿಸಿದ ಇಂಡಿಯನ್ ಡ್ಯಾನ್ಸ್ ಫೆಸ್ಟಿವಲ್-2025 ಹಾಗೂ ಇದನ್ನು ಆಯೋಜಿಸಿದ್ದ ವಿಜಿ ರಾವ್ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾದರು. ಪ್ರವೀಣ್ ಡಿ. ರಾವ್ ಸಂಗೀತ ನಿರ್ದೇಶನದ ಸುಮಾರು 12 ನಿಮಿಷಗಳ ಸಂಭ್ರಮ್ ಸಂಗೀತಕ್ಕೆ ತಮ್ಮ ತಮ್ಮ ನೃತ್ಯ ಶೈಲಿಯಲ್ಲೇ ಕಥಕ್, ಭರತ ನಾಟ್ಯ, ಫ್ಲೆಮೆಂಕೋ ಹಾಗೂ ಯಕ್ಷಗಾನ ಕಲಾವಿದರು ಹೆಜ್ಜೆ ಹಾಕಿದರು. ಸುಮಾರು 70-80 ಕಲಾವಿದರೊಂದಿಗೆ ತ್ರೀಅಕ್ಷ ಪ್ರಸ್ತುತ ಪಡಿಸಿದ ನಾಲ್ಕೂ ನೃತ್ಯ ಪ್ರಕಾರಗಳ ರೋಮಾಂಚಕ ಜುಗಲ್ಬಂದಿಯು ತುಂಬಿದ ಸಭಾಂಗಣದ ಪ್ರೇಕ್ಷಕರ ಸಂತೋಷದ ಉದ್ಗಾರ ಮಾರ್ದನಿಸುವಂತೆ ಮಾಡಿತ್ತು.

ಭಾರತೀಯ ವಿವಿಧ ನೃತ್ಯ ಪ್ರಕಾರಗಳ ಜೊತೆಗೆ ಇದೇ ಮೊದಲ ಬಾರಿಗೆ ಯಕ್ಷಗಾನದ ಸೊಬಗನ್ನು ಅಂದಿನ ಪ್ರೇಕ್ಷಕರು ಆಸ್ವಾದಿಸಿದರು. ಕಿರು ಅವಧಿಯಲ್ಲೇ ಮಹಿಷ ಮರ್ದನ ಕಥಾಭಾಗದ ಯಕ್ಷಗಾನದ ವೇಷ ವೈಭವ, ವೀರಾವೇಶ, ಆರ್ಭಟ, ನೃತ್ಯ ಸೊಬಗನ್ನು ಯಕ್ಷಗಾನದ ಚೌಕಟ್ಟಿನಲ್ಲೇ ಕಲಾಕದಂಬ ಆರ್ಟ್ ಸೆಂಟರ್ ಪ್ರದರ್ಶಿಸಿತು. ಇದರಲ್ಲಿ ದೇವೆಂದ್ರನ ಪಡೆ ದೇವತೆಗಳಾಗಿ ಅಮೆರಿಕದ ಮಕ್ಕಳೂ ಯಕ್ಷಗಾನ ಕಲಿತು ಪ್ರದರ್ಶನದ ಭಾಗವಾಗಿ ಸೈ ಅನ್ನಿಸಿಕೊಂಡರು.

ಹ್ಯಾರಿಸ್ಬರ್ಗ್ ವೃದ್ಧಾಶ್ರಮದಲ್ಲಿ ಪುಣ್ಯಕೋಟಿ ಯಕ್ಷಗಾನ ನೃತ್ಯರೂಪಕವನ್ನು ಕೂಡಾ ಪ್ರದರ್ಶಿಸಲಾಯಿತು. ಈ ಪ್ರದರ್ಶನದಲ್ಲಿಯೂ ಅಲ್ಲಿನ ವಿದ್ಯಾರ್ಥಿನಿಯರನ್ನು ಯಕ್ಷಗಾನಕ್ಕೆ ಸಿದ್ಧಗೊಳಿಸಿ ಪ್ರದರ್ಶನ ನೀಡಿದ್ದು ಭಾಷಾತೀತವಾಗಿ ಎಲ್ಲರನ್ನೂ ಭಾವಾತ್ಮಕವಾಗಿ ಸೆಳೆದಿರುವುದು ಕರ್ನಾಟಕದ ಧೀಮಂತ ಯಕ್ಷ ಕಲೆಯ ನಿರೂಪಣಾ ಸಾಮರ್ಥ್ಯಕ್ಕೆ ಸಾಕ್ಷಿಯಾಗಿತ್ತು. ಅಮೆರಿಕದ ನೃತ್ಯ ತಂಡ ತ್ರೀಅಕ್ಷದೊಂದಿಗೆ ಸೇರಿ ಕಲಾಕದಂಬ ಆರ್ಟ್ ಸೆಂಟರ್ ಒಟ್ಟು ಒಂದು ತಿಂಗಳ ಪ್ರವಾಸದಲ್ಲಿ ತಾವು ಯಕ್ಷಗಾನ ಪ್ರದರ್ಶಿಸುವುದರ ಜೊತೆಗೆ ಅಮೆರಿಕದವರಿಗೆ ಯಕ್ಷಗಾನ ಪರಿಚಯಿಸುವ, ಕಲಿಸುವ, ಅವರಿಂದಲೂ ಪ್ರದರ್ಶನ ಮಾಡಿಸಿದ ಸಾಧನೆ ಮಾಡಿತು. ಅಲ್ಲಿರುವ ಯಕ್ಷಾಸಕ್ತರಿಗೆ ವೇದಿಕೆ ಒದಗಿಸುವ, ಕಾರ್ನಿಗೆಯಂತಹ ವಿಶ್ವ ಪ್ರಸಿದ್ಧ ಸಭಾಂಗಣದಲ್ಲಿಯೂ ಯಕ್ಷಗಾನ ಪ್ರದರ್ಶಿಸುವ ಮೂಲಕ ಕರ್ನಾಟಕದ ಯಕ್ಷ ಕಲೆಯ ಕೀರ್ತಿ ಪಸರಿಸಿರುವುದು ಕೇವಲ ಭಾಗವಹಿಸಿದ ಕಲಾವಿದರಿಗೆ ಕಲಾ ತಂಡಕ್ಕೆ ಮಾತ್ರವಲ್ಲದೆ ಸಮಸ್ತ ಕನ್ನಡಿಗರಿಗೆ ಹಾಗೂ ದೇಶಕ್ಕೆ ಹೆಮ್ಮೆಯ ಸಂಗತಿ.

ಲೇಖನ: ಮುರಳೀಧರ ನಾವಡ, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.