ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಪದ: ಮೂಡಣದ ಹೆಜ್ಜೆಗಳ ಪುನರುತ್ಥಾನಕ್ಕೆ ಟೊಂಕ..

‘ಆದಿಚುಂಚನಗಿರಿ ಮೂಡಲಪಾಯ ಯಕ್ಷಗಾನ ಕಲಿಕಾ ಕೇಂದ್ರ’ದ ಬಗ್ಗೆ ಲೇಖನ
Published 28 ಮೇ 2023, 0:03 IST
Last Updated 28 ಮೇ 2023, 0:03 IST
ಅಕ್ಷರ ಗಾತ್ರ
ಮೂಡಲಪಾಯ ಮರಣಶಯ್ಯೆಯಲ್ಲಿರುವ ಕಲೆ. ಇಂತಹ ಸಂದರ್ಭದಲ್ಲಿ ಮಂಡ್ಯ ಕರ್ನಾಟಕ ಸಂಘದ ಆವರಣದಲ್ಲಿ ‘ಆದಿಚುಂಚನಗಿರಿ ಮೂಡಲಪಾಯ ಯಕ್ಷಗಾನ ಕಲಿಕಾ ಕೇಂದ್ರ’ ತಲೆ ಎತ್ತಿದ್ದು, ಅಲ್ಲಿ 40ಕ್ಕೂ ಹೆಚ್ಚು ಶಾಲಾ ಮಕ್ಕಳು ಹೆಜ್ಜೆ ಕಲಿಯುತ್ತಿರುವುದು ಈ ಕಲೆಗೆ ದೊರೆತ ಜೀವಾನಿಲ. ಇದರ ಮುಂದುವರಿದ ಭಾಗವಾಗಿ ‘ಮೂಡಲಪಾಯ ಯಕ್ಷಗಾನ ಪರಿಷತ್ತು’ ಸ್ಥಾಪನೆಯಾಗಿದ್ದು, ಅದರ ಕೆಲಸಗಳು ಭವಿತವ್ಯದ ಕುರಿತು ಭರವಸೆ ಮೂಡಿಸಿವೆ.

ಲೇಖನ–ಎಂ.ಎನ್‌.ಯೋಗೇಶ್‌

ಅರ್ಧ ಅಡಿ ಉದ್ದದ ಪುಟಾಣಿ ವಾದ್ಯ ಮುಖವೀಣೆ ನುಡಿಸುವವರು ನಮ್ಮ ನಾಡಿನಲ್ಲಿ ಎಷ್ಟಿರಬಹುದು? ಅಬ್ಬಬ್ಬಾ ಅಂದರೆ ಮೂರ್ನಾಲ್ಕು ಮಂದಿ ಸಿಗಬಹುದಷ್ಟೆ. ಮೂಡಲಪಾಯ ಯಕ್ಷಗಾನ ಮರಣಶಯ್ಯೆಯಲ್ಲಿದೆ ಎನ್ನಲು ಇದಕ್ಕಿಂತ ಉದಾಹರಣೆ ಬೇಕಿಲ್ಲ.

ಸಾಹಿತ್ಯ, ಸಂಗೀತ, ನೃತ್ಯದೊಂದಿಗೆ ಸಂಯೋಜಿತಗೊಂಡಿರುವ ವಿಶಿಷ್ಟ ಜನಪದ ಕಲೆ ಮೂಡಲಪಾಯ ಯಕ್ಷಗಾನ ಇಂದು ವಿನಾಶದ ಅಂಚು ತಲುಪಿದೆ. ಮೂಡಲಪಾಯಕ್ಕೆ ಅವಿಭಾಜ್ಯ ಅಂಗವಾಗಿದ್ದ ಮುಖವೀಣೆ, ಮದ್ದಳೆ, ಭಾಗವತಿಕೆ ಈಗ ಪಳೆಯುಳಿಕೆ ಸ್ಥಿತಿಯಲ್ಲಿವೆ.

ಮಂಡ್ಯ, ಮೈಸೂರು, ಚಾಮರಾಜನಗರ, ಹಾಸನ, ತುಮಕೂರು ಜಿಲ್ಲೆಗಳಲ್ಲಿ ಜೀವಂತವಾಗಿದ್ದ ಕಲೆ ಇನ್ನಿಲ್ಲವಾಗುತ್ತಿದೆ. ಹುಡುಕಾಡಿದರೂ 10 ಮಂದಿ ಭಾಗವತರು ಸಿಗುವುದಿಲ್ಲ. ಮುಖವೀಣೆ ನುಡಿಸಾಣಿಕೆಯಲ್ಲೇ ಬದುಕು ಕಂಡವರು ಇಲ್ಲವೇ ಇಲ್ಲ. ಮದ್ದಳೆ ಕಲಾವಿದರೂ ಸಿಗುವುದಿಲ್ಲ. ಕಲಾ ತಂಡಗಳು ಜೀವ ಕಳೆದುಕೊಂಡಿವೆ. ಕುಣಿಯುವ ಕಾಲುಗಳು ಇಲ್ಲವಾಗಿವೆ. ಖ್ಯಾತನಾಮ ಭಾಗವತರ, ವಾದ್ಯಗಾರರ ಹೆಸರು ಅರಸಿ ಹೊರಟರೆ ಅವರು ಮೃತಪಟ್ಟು ಹಲವು ವರ್ಷಗಳೇ ಕಳೆದಿವೆ. ಅವರ ಮಕ್ಕಳು, ಮೊಮ್ಮಕಳಿಗೆ ಮೂಡಲಪಾಯದ ಮೇಲೆ ಮೂಡ್‌ ಇಲ್ಲ, ಅವರ ಮನೆಯಲ್ಲಿದ್ದ ಅಪರೂಪದ ವಾದ್ಯಗಳು ಶ್ರುತಿ ಕಳಚಿ ಅಟ್ಟ ಸೇರಿಕೊಂಡಿವೆ. ಆದರೆ, ಪಡುವಲಪಾಯ ಯಕ್ಷಗಾನಕ್ಕೆ ಈ ಪರಿಸ್ಥಿತಿ ಇಲ್ಲ. ಇದು ಕರಾವಳಿ, ಮಲೆನಾಡಿನ ಜನಸಂಸ್ಕೃತಿಯ ಭಾಗವಾಗಿದ್ದು ಉತ್ತುಂಗ ಸ್ಥಿತಿಯಲ್ಲಿದೆ.

ವೃತ್ತಿಪರ ಯಕ್ಷಗಾನ ಮೇಳ, ಪಾತ್ರಧಾರಿಗಳು, ಭಾಗವತರು, ಹಿಮ್ಮೇಳ ಕಲಾವಿದರು ಪಡುವಲಪಾಯ ಪ್ರಕಾರವನ್ನು ಪೊರೆಯುತ್ತಿದ್ದಾರೆ. ಪಡುವಲಪಾಯಕ್ಕೆ ವಿದ್ಯಾವಂತರು ಪ್ರವೇಶಿಸುತ್ತಿರುವ ಕಾರಣ ಅದು ಆ ಭಾಗದ ಅಸ್ಮಿತೆಯ ರೂಪ ಪಡೆದುಕೊಂಡಿದೆ. ಪಡುವಲಪಾಯದಷ್ಟೇ ಪ್ರಾಚೀನ, ಪೌರಾಣಿಕ ಹಿನ್ನೆಲೆ ಹೊಂದಿರುವ ಮೂಡಲಪಾಯ ಯಕ್ಷಗಾನಕ್ಕೆ ವಿದ್ಯಾವಂತರು ಪದಾರ್ಪಣೆ ಮಾಡುತ್ತಿಲ್ಲ. ಹೀಗಾಗಿ ಅದು ಅಳಿಯುತ್ತಿದೆ.

ಮೂಡಲಪಾಯದ ಬೇರುಗಳು ಹಾಸನ ಜಿಲ್ಲೆಯ ಅರಕಲಗೂಡಿನಿಂದ ಆರಂಭವಾದರೆ ಚನ್ನರಾಯಪಟ್ಟಣ, ಮಂಡ್ಯ ಜಿಲ್ಲೆಯ ನಾಗಮಂಗಲ, ಬೆಳ್ಳೂರು, ತುಮಕೂರು ಜಿಲ್ಲೆಯ ತಿಪಟೂರು, ತುರುವೇಕೆರೆ, ಶಿರಾ, ಮಧುಗಿರಿ ಮೂಲಕ ದಾವಣಗೆರೆ, ಹಿರಿಯೂರುವರೆಗೂ ಸಾಗುತ್ತವೆ.

ತ್ರಿಮೂರ್ತಿಗಳು ಎಂದೇ ಪ್ರಸಿದ್ಧಿ ಪಡೆದಿದ್ದ ಜಿ.ನಂಜುಂಡಪ್ಪ, ಪಟೇಲ್‌ ನಾರಸಪ್ಪ, ಜೀ.ಶಂ.ಪರಮಶಿವಯ್ಯ (ಜೀಶಂಪ) ಅವರು ತುಮಕೂರು ಜಿಲ್ಲೆಯ ಕೊನೇಹಳ್ಳಿ ಗ್ರಾಮದಲ್ಲಿ ‘ಮೂಡಲಪಾಯ ಯಕ್ಷಗಾನ ಕಲಾಕೇಂದ್ರ’ ಸ್ಥಾಪಿಸಿ ಕಲೆಗೆ ಹೊಸ ರೂಪ ನೀಡಿದ್ದರು. ಹೊಸ ತಲೆಮಾರಿನ ಮನಸ್ಸುಗಳನ್ನು ಸೆಳೆಯುವತ್ತ ಪ್ರಮುಖ ಹೆಜ್ಜೆ ಇಟ್ಟಿದ್ದರು. ಹೊಸ ರಂಗ ಮಂದಿರವೂ ನಿರ್ಮಾಣಗೊಂಡಿತ್ತು. ಆದರೆ, ತ್ರಿಮೂರ್ತಿಗಳು ತೀರಿಹೋದ ನಂತರ ಕೊನೇಹಳ್ಳಿಯ ಕಲಾಯಾತ್ರೆಯೂ ನೇಪಥ್ಯಕ್ಕೆ ಸರಿಯಿತು.

ಇಷ್ಟೆಲ್ಲಾ ಇಲ್ಲಗಳ ನಡುವೆಯೂ ಮೂಡಲಪಾಯ ಯಕ್ಷಗಾನಕ್ಕೆ ಜೀವ ತುಂಬುವ ಕಾರ್ಯವೊಂದು ಕಳೆದೆರಡು ವರ್ಷಗಳಿಂದ ಸದ್ದಿಲ್ಲದೇ ನಡೆಯುತ್ತಿದೆ. ಮಂಡ್ಯ ಕರ್ನಾಟಕ ಸಂಘ, ಅದರ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ಅವರ ಪ್ರಯತ್ನದಿಂದಾಗಿ ಶಾಲಾ ಮಕ್ಕಳು ಮೂಡಲಪಾಯ ಯಕ್ಷಗಾನಕ್ಕೆ ಗೆಜ್ಜೆ ಕಟ್ಟಿದ್ದಾರೆ. ಜಯಪ್ರಕಾಶಗೌಡರ ಪ್ರಯತ್ನಕ್ಕೆ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಒತ್ತಾಸೆಯಾಗಿ ನಿಂತಿದ್ದಾರೆ.

ಮಂಡ್ಯ ಕರ್ನಾಟಕ ಸಂಘದ ಆವರಣದಲ್ಲಿ ‘ಆದಿಚುಂಚನಗಿರಿ ಮೂಡಲಪಾಯ ಯಕ್ಷಗಾನ ಕಲಿಕಾ ಕೇಂದ್ರ’ ತಲೆ ಎತ್ತಿದ್ದು, ಅಲ್ಲಿ 40ಕ್ಕೂ ಹೆಚ್ಚು ಶಾಲಾ ಮಕ್ಕಳು ಹೆಜ್ಜೆ ಕಲಿಯುತ್ತಿದ್ದಾರೆ. ಇದರ ಮುಂದುವರಿದ ಭಾಗವಾಗಿ ‘ಮೂಡಲಪಾಯ ಯಕ್ಷಗಾನ ಪರಿಷತ್ತು’ ಸ್ಥಾಪನೆಯಾಯಿತು. ಇದಕ್ಕೆ ಹಿರಿಯ ಐಎಎಸ್‌ ಅಧಿಕಾರಿ, ಸಾಹಿತಿ ಜಯರಾಂ ರಾಯಪುರ ಅವರು ಗೌರವಾಧ್ಯಕ್ಷರಾಗಿದ್ದಾರೆ. ಆ ಮೂಲಕ ರಾಜ್ಯ ಮಟ್ಟದಲ್ಲೂ ಪ್ರಾಚೀನ ಯಕ್ಷಕಲೆಯ ಪುನರುತ್ಥಾನಕ್ಕಾಗಿ ಹಲವು ಪ್ರಯತ್ನಗಳು ನಡೆಯುತ್ತಿವೆ.

ಕಲಿಕಾ ಕೇಂದ್ರದ ವತಿಯಿಂದ ಮೂಡಲಪಾಯ ಹೆಜ್ಜೆಗಳ ತರಬೇತಿ, ಭಾಗವತಿಕೆ, ವಾದ್ಯ ಕಲಿಕಾ ಶಿಬಿರಗಳು ನಡೆಯುತ್ತಿವೆ. ಮಂಡ್ಯ ತಾಲ್ಲೂಕು ಬೇಲೂರು ಸರ್ಕಾರಿ ಪ್ರೌಢಶಾಲೆ ಮಕ್ಕಳು ಪ್ರದರ್ಶಿಸಿದ ‘ಕರ್ಣಾವಸಾನ’ ಯಕ್ಷಗಾನ ಪ್ರಸಂಗ 10ಕ್ಕೂ ಹೆಚ್ಚು ಪ್ರದರ್ಶನ ಕಂಡಿದೆ. ಮಂಡ್ಯದ ಸದ್ವಿದ್ಯಾ ಶಾಲೆ ವಿದ್ಯಾರ್ಥಿಗಳು ಪ್ರದರ್ಶಿಸಿದ ‘ತ್ರಿಪುರ ದಹನ’, ಹನಕೆರೆಯ ವಿವೇಕಾ ವಿದ್ಯಾಸಂಸ್ಥೆ ಮಕ್ಕಳು ಅಭಿನಯಿಸಿದ ‘ದೇವಿ ಮಹಾತ್ಮೆ’ ಪ್ರಸಂಗಗಳು ಜನರ ಹೃದಯ ಗೆದ್ದಿವೆ. ಮಕ್ಕಳ ಪುಟ್ಟ ಪುಟ್ಟ ಹೆಜ್ಜೆಗಳು, ಸಾಮರ್ಥ್ಯ, ಅತ್ಯುತ್ಸಾಹ, ಆಸಕ್ತಿ ಮೂಡಲಪಾಯ ಯಕ್ಷಗಾನಕ್ಕೆ ಹೊಸ ರೂಪ ನೀಡುವ ಭರವಸೆಯನ್ನು ಅಭಿವ್ಯಕ್ತಿಗೊಳಿಸಿವೆ.

ಆರಂಭಿಕವಾಗಿ ನೀಡಿರುವ ಪ್ರಸಂಗಳು ಯಶಸ್ವಿಯಾಗಿದ್ದು ಸರ್ಕಾರಿ ಶಾಲೆಗಳನ್ನೇ ಗುರಿಯಾಗಿಸಿಕೊಂಡು ತರಬೇತಿ ನೀಡಲು ಉದ್ದೇಶಿಸಲಾಗಿದೆ. ಮಂಡ್ಯ ಜಿಲ್ಲೆಯ ಆರೇಳು ಮೊರಾರ್ಜಿ ದೇಸಾಯಿ ವಸತಿಶಾಲೆಗಳು ತರಬೇತಿ ಶಿಬಿರ ಆಯೋಜಿಸಲು ಒಪ್ಪಿಗೆ ನೀಡಿವೆ. ಆದಿಚುಂಚನಗಿರಿಯ ಬಿಜಿಎಸ್‌ ಶಾಲೆಯಲ್ಲೂ ಮೂಡಲಪಾಯ ಯಕ್ಷಗಾನದ ತಾಲೀಮು ನಡೆಯುತ್ತಿದೆ. ಮುಂದೆ ಹೊರಜಿಲ್ಲೆಗಳಲ್ಲೂ ಶಿಬಿರ ನಡೆಸುವ ಗುರಿ ಇದೆ. ಕರಿಭಂಟ ಕಾಳಗ, ಗದಾಯುದ್ಧ, ಬೊಮ್ಮನಹಳ್ಳಿ ಕಿಂದರಿಜೋಗಿ ಪ್ರಸಂಗಗಳು ಸಿದ್ಧಗೊಳ್ಳುತ್ತಿವೆ.

ದಕ್ಷಿಣ ಕರ್ನಾಟಕದಲ್ಲಿ ಮೂಡಲಪಾಯದ ಹೆಸರು ಹೇಳಲು ಉಳಿದಿರುವ ಹಿರಿಯ ಭಾಗವತರನ್ನು ಮಂಡ್ಯಕ್ಕೆ ಕರೆದು ತರಲಾಗಿದೆ. ತಲಕಾಡಿನ ಹಿರಿಯ ಭಾಗವತ, ಮದ್ದಳೆವಾದಕ ರವೀಂದ್ರ, ಟಿ.ನರಸೀಪುರ ತಾಲ್ಲೂಕು, ಹೆಮ್ಮಿಗೆ ಗ್ರಾಮದ ಮುಖವೀಣೆ ವಾದಕ ನಾರಾಯಣಸ್ವಾಮಿ, ನಾಗಮಂಗಲ ತಾಲ್ಲೂಕು ನೆಲ್ಲಿಗೆರೆ ಮೂರ್ತಾಚಾರ್‌, ತಿಪಟೂರು ತಾಲ್ಲೂಕು ಅರಳಕುಪ್ಪೆಯ ನಂಜಪ್ಪ (ಕೇಂದ್ರ ಸಂಗೀತ ಮತ್ತು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ), ಅವರ ಶಿಷ್ಯ ಪುಟ್ಟಸ್ವಾಮಿ ಮುಂತಾದ ಭಾಗವತರಿಂದ ಮಕ್ಕಳಿಗೆ ತರಬೇತಿ ಕೊಡಿಸಲಾಗುತ್ತಿದೆ.

ಮೂಡಲಪಾಯ ಯಕ್ಷಗಾನದ ಒರಟು ಹೆಜ್ಜೆಗಳನ್ನು ಮಕ್ಕಳಿಗೆ ಕಲಿಸುವುದು ಅಷ್ಟು ಸುಲಭದ ಮಾತಲ್ಲ. ಹೀಗಾಗಿ ಮೂಡಲಪಾಯದ ಮೂಲಕ್ಕೆ ಧಕ್ಕೆಯಾಗದಂತೆ ಹೆಜ್ಜೆಗಳ ಪರಿಷ್ಕರಣೆ ಮಾಡಲಾಗಿದ್ದು, ಅದಕ್ಕೆ ಆಧುನಿಕ ರಂಗಭೂಮಿ ನಿರ್ದೇಶಕರ ಸಹಾಯ ಪಡೆಯಲಾಗಿದೆ. ಸಿ.ಬಸವಲಿಂಗಯ್ಯ, ಪ್ರಮೋದ್‌ ಶಿಗ್ಗಾಂವ್‌, ಮಂಜುನಾಥ ಬಡಿಗೇರ, ಅಜಯ್‌ ನೀನಾಸಂ ಮುಂತಾದವರು ಹೆಜ್ಜೆಗಳನ್ನು ಪರಿಷ್ಕರಣೆ ಮಾಡಿದ್ದಾರೆ.

ಪಡುವಲಪಾಯದಲ್ಲಿರುವ ತೆಂಕತಿಟ್ಟು, ಬಡಗತಿಟ್ಟು ಪ್ರಕಾರದಂತೆ ಮೂಡಲಪಾಯದಲ್ಲಿ ಎಚ್‌.ಡಿ.ಕೋಟೆ ಭಾಗದ ಘಟ್ಟದಕೋರೆ, ಕೋಲಾರ ಭಾಗದ ಕೇಳಿಕೆ ಪ್ರಭೇದಗಳಿವೆ. ಆಯಾ ಭಾಗದಲ್ಲಿರುವ ಕಲಾವಿದರನ್ನೂ ಒಂದೆಡೆ ಸೇರಿಸುವ ಪ್ರಯತ್ನ ಮಾಡಲಾಗಿದೆ. ಅಳಿದುಳಿದ ಭಾಗವರತನ್ನು ಒಂದೆಡೆ ಸೇರಿಸಿ ಮೂಡಲಪಾಯ ಯಕ್ಷಗಾನ ಪರಿಷತ್‌ ವತಿಯಿಂದ ಭಾಗವತರ ಸಮಾವೇಶವನ್ನೂ ಮಾಡಲಾಗಿದೆ. ಜಯರಾಂ ರಾಯಪುರ ಅವರ ಬೆಂಗಳೂರು ನಿವಾಸವೇ ಪರಿಷತ್‌ ವಿಳಾಸವಾಗಿದೆ. ಸಂಸ್ಕೃತಿ ಚಿಂತಕರಾದ ಜಯರಾಂ ರಾಯಪುರ ಮೂಡಲಪಾಯ ಯಕ್ಷಗಾನದ ಪುನಶ್ಚೇತನಕ್ಕಾಗಿ ಅಪಾರ ಶ್ರಮ ಹಾಕುತ್ತಿದ್ದಾರೆ.

ಹಗುರ ವಸ್ತ್ರವಿನ್ಯಾಸ: ಉದ್ದಂಡ ಕಿರೀಟ, ಭುಜಕೀರ್ತಿ, ಮುಖವರ್ಣಿಕೆ, ಗೆಜ್ಜೆ, ಕಾಲು ಕಡಗ, ಪೇಟ, ಮುಂದಲೆ ವಸ್ತ್ರ, ವೀರಗಾಸೆ ಕಟ್ಟು, ತೋಳ್‌ ಬಾಪುರಿ, ಹೆಗಲು ವಲ್ಲಿ, ವಡ್ಯಾಣ, ಎದೆಹಾರ ಮುಂತಾದ ದೈತ್ಯ ವಸ್ತ್ರಗಳನ್ನು ಹೊರುವುದು ಮಕ್ಕಳಿಗೆ ಬಲು ಕಷ್ಟ. ಹೀಗಾಗಿ ವಸ್ತ್ರವಿನ್ಯಾಸವನ್ನೂ ಬದಲಾಯಿಸಲಾಗಿದೆ. ಅದಕ್ಕಾಗಿ ರಂಗಪರಿಕರ ತಜ್ಞ ಗುರುಮೂರ್ತಿ ವರದಾಮೂಲ, ವಸ್ತ್ರವಿನ್ಯಾಸಕರಾಗಿಯೂ ಗುರುತಿಸಿಕೊಂಡಿರುವ ಪ್ರಮೋದ್‌ ಶಿಗ್ಗಾಂವ್‌ ಅವರ ಸಹಕಾರ ಪಡೆಯಲಾಗಿದೆ.

ಮಕ್ಕಳಿಗಾಗಿ ಬಣ್ಣಬಣ್ಣದ ಹೊಸ ವಸ್ತ್ರಗಳು ಕರ್ನಾಟಕದ ಸಂಘದ ಆವರಣದಲ್ಲೇ ಸಿದ್ಧಗೊಂಡಿವೆ. ಮಕ್ಕಳಿಗೆ ಹಗುರಾಗಿರುವ ಫೈಬರ್‌, ಫೋಮ್‌, ಥರ್ಮಕೋಲ್‌ ಬಳಸಿ ವಸ್ತ್ರ ರೂಪಿಸಲಾಗಿದೆ. ಅದಕ್ಕಾಗಿ ಕರ್ನಾಟಕ ಸಂಘ ಲಕ್ಷಾಂತರ ರೂಪಾಯಿ ಬಂಡವಾಳವನ್ನೂ ತೊಡಗಿಸಿದೆ.

‘ನನ್ನಂಥ ಭಾಗವತರಿಗೆ ವಯಸ್ಸಾಗಿದೆ, ಅನಾರೋಗ್ಯ ಕಾಡುತ್ತಿದೆ. ಈ ವಯಸ್ಸಿನಲ್ಲಿ ಮಕ್ಕಳಿಗೆ ಮೂಡಲಪಾಯ ಯಕ್ಷಗಾನದ ಪಾಠ ಹೇಳಿಕೊಡುವ ಅವಕಾಶ ಸಿಕ್ಕಿರುವುದು ಸುಯೋಗವೇ ಸರಿ. ಕರ್ನಾಟಕ ಸಂಘ, ಜಯಪ್ರಕಾಶಗೌಡರ ಪ್ರಯತ್ನದಿಂದಾಗಿ ಮಕ್ಕಳ ಕಾಲಿಗೆ ಮೂಡಲಪಾಯದ ಹೆಜ್ಜೆಗಳು ದಕ್ಕುತ್ತಿವೆ’ ಎಂದು ಹಿರಿಯ ಭಾಗವತ ತಲಕಾಡು ರವೀಂದ್ರ ಹೇಳಿದರು.

ಪ್ರತ್ಯೇಕ ಅಕಾಡೆಮಿ ಸ್ಥಾಪನೆಯಾಗಲಿ

‘ಯಾವುದೇ ಕಲೆ ಉಳಿಯಬೇಕಾದರೆ ಮೊದಲು ಕಲಾವಿದ ಉಳಿಯಬೇಕು. ಕಲಾವಿದರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸಬೇಕು. ಸರ್ಕಾರದ ಸಹಾಯ ಇಲ್ಲದೆ ಕಲೆಗಳನ್ನು ಉಳಿಸುವುದು ಅಸಾಧ್ಯ. ಮೂಡಲಪಾಯ ಯಕ್ಷಗಾನದ ಸಮಗ್ರ ಅಧ್ಯಯನ, ಸಂವರ್ಧನೆ, ಸಂರಕ್ಷಣೆಗಾಗಿ ಪ್ರತ್ಯೇಕ ಅಕಾಡೆಮಿ ಸ್ಥಾಪನೆಯಾಗುವುದು ಅತ್ಯವಶ್ಯ’ ಎಂದು ಕರ್ನಾಟಕ ಸಂಘ, ಮೂಡಲಪಾಯ ಯಕ್ಷಗಾನ ಪರಿಷತ್‌ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ಹೇಳಿದರು.

‘ಕರಾವಳಿ ಭಾಗದ ಪಡುವಲಪಾಯದ ಸಂರಕ್ಷಣೆಗಾಗಿ ಯಕ್ಷಗಾನ ಅಕಾಡೆಮಿ ಇದೆ. ಉತ್ತರ ಕರ್ನಾಟದ ಜನಪದ ಕಲೆಗಳ ಉಳಿವಿಗಾಗಿ ಬಯಲಾಟ ಅಕಾಡೆಮಿ ಇದೆ. ಅದರಂತೆ ದಕ್ಷಿಣ ಕರ್ನಾಟಕ ಭಾಗದ ಮೂಡಲಪಾಯ ಯಕ್ಷಗಾನದ ರಕ್ಷಣೆಗಾಗಿ ಪ್ರತ್ಯೇಕ ಅಕಾಡೆಮಿ ಸ್ಥಾಪನೆಯಾಗಬೇಕು. ಈ ಕುರಿತು ಸರ್ಕಾರಕ್ಕೆ ಮನವಿಯನ್ನೂ ಸಲ್ಲಿಸಲಾಗಿದೆ’ ಎಂದು ಅವರು ತಿಳಿಸಿದರು. (ಜಯಪ್ರಕಾಶಗೌಡರ ಸಂಪರ್ಕ ಸಂಖ್ಯೆ; 9448194456)

ಯಕ್ಷಕವಿ ಹುಟ್ಟೂರಿನ ಅಭಿವೃದ್ಧಿ

ಡಾ.ಶಿವರಾಮ ಕಾರಂತರು ಯಕ್ಷಗಾನದ ಪ್ರಾಚೀನತೆಯನ್ನು 18ನೇ ಶತಮಾನಕ್ಕೆ ಕೊಂಡೊಯ್ಯುತ್ತಾರೆ. ಹೊಸ್ತೋಟ ಮಂಜುನಾಥ ಭಾಗವತರು ಯಕ್ಷಗಾನದ ಪರಂಪರೆಯನ್ನು 17 ಶತಮಾನದಲ್ಲೇ ಗುರುತಿಸುತ್ತಾರೆ. ಆದರೆ 15ನೇ ಶತಮಾನದಲ್ಲಿ ಜೀವಿಸಿದ್ದ ‘ಯಕ್ಷಕವಿ ಕೆಂಪಣ್ಣಗೌಡ’ನೇ ಯಕ್ಷಗಾನ ಪರಂಪರೆಗೆ ಮೂಲ ಎಂಬುದನ್ನು ಹಲವು ಸಂಶೋಧನೆಗಳು ತಿಳಿಸಿವೆ.

ಇದಕ್ಕೆ ಸಾಕ್ಷಿ ಎಂಬಂತೆ ಜನಪದ ವಿದ್ವಾಂಸ ಹ.ಕ.ರಾಜೇಗೌಡ ‘ಕೆಂಪಣ್ಣಗೌಡರ ಯಕ್ಷಗಾನ ಸಂಪುಟ’ ಕೃತಿ ಹೊರತಂದಿದ್ದಾರೆ. ಸಂಶೋಧಕ ನರಹಳ್ಳಿ ಬಾಲಸುಬ್ರಹ್ಮಣ್ಯ ‘ಯಕ್ಷಕವಿ ಕೆಂಪಣ್ಣಗೌಡ– ಸಮಗ್ರ ಸಾಹಿತ್ಯ ಶೋಧ’ ಕೃತಿ ರಚಿಸಿದ್ದಾರೆ. ಆ ಮೂಲಕ ಕನ್ನಡ ಸಾಹಿತ್ಯ ಲೋಕದಲ್ಲಿ ಅಜ್ಞಾತವಾಗಿ ಉಳಿದಿರುವ ಯಕ್ಷಕವಿಯನ್ನು ಮುನ್ನೆಲೆಗೆ ತರುವ ಪ್ರಯತ್ನ ಮಾಡಿದ್ದಾರೆ. ಇಲ್ಲಿ ನರಹಳ್ಳಿಯವರು ಕೆಂಪಣ್ಣಗೌಡ ರಚಿಸಿರುವ ಕರಿರಾಯ ಚರಿತ್ರೆ, ನಳಚರಿತ್ರೆ, ಶನಿಮಹಾತ್ಮೆ ಯಕ್ಷ ಕಾವ್ಯಗಳ ಸಮಗ್ರ ವಿವರ ನೀಡಿದ್ದಾರೆ.

ಕೆಂಪಣ್ಣಗೌಡ ಒಕ್ಕಲಿಗ ಸಂಸ್ಕೃತಿಯ ಮೊದಲ ಕವಿ. ಈತ ಹುಟ್ಟಿದ್ದು ನಾಗಮಂಗಲ ತಾಲ್ಲೂಕು ಹಂದೇನಹಳ್ಳಿ. ಹಲವು ಪ್ರಭೇದಗಳುಳ್ಳ ಯಕ್ಷಗಾನ ಪರಂಪರೆಗೆ ಮಂಡ್ಯ ಜಿಲ್ಲೆಯೇ ಮೂಲ ಎಂಬುದು ಮೂಡಲಪಾಯ ಯಕ್ಷಗಾನ ಪರಿಷತ್‌ ವಾದ. ಈ ಹಿನ್ನೆಲೆಯಲ್ಲಿ ಹಂದೇನಹಳ್ಳಿ ಗ್ರಾಮವನ್ನು ‘ಯಕ್ಷಗಾನ ಹಳ್ಳಿ’ಯನ್ನಾಗಿ ಪರಿವರ್ತಿಸಲು ಪರಿಷತ್‌ ಪಣ ತೊಟ್ಟಿದೆ. ಈಗಲಾಗಲೇ ಸ್ಥಳೀಯ ಗ್ರಾಮ ಪಂಚಾಯಿತಿ, ಜಿಲ್ಲಾಡಳಿತದ ಸಹಯೋಗದಲ್ಲಿ ಬಯಲು ರಂಗಮಂದಿರ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದೆ.

‘ದೇವಿ ಮಹಾತ್ಮೆ’ ಮೂಡಲಪಾಯ ಯಕ್ಷಗಾನ ಪ್ರಸಂಗ
‘ದೇವಿ ಮಹಾತ್ಮೆ’ ಮೂಡಲಪಾಯ ಯಕ್ಷಗಾನ ಪ್ರಸಂಗ
ದೇವಿ ಮಹಾತ್ಮೆ
ದೇವಿ ಮಹಾತ್ಮೆ
‘ತ್ರಿಪುರ ದಹನ’ ಪ್ರಸಂಗ
‘ತ್ರಿಪುರ ದಹನ’ ಪ್ರಸಂಗ
ತ್ರಿಪುರ ದಹನ ಪ್ರಸಂಗ
ತ್ರಿಪುರ ದಹನ ಪ್ರಸಂಗ
ತ್ರಿಪುರ ದಹನ
ತ್ರಿಪುರ ದಹನ
ಮೂಡಲಪಾಯ
ಮೂಡಲಪಾಯ
ಮೂಡಲಪಾಯ ಯಕ್ಷಗಾನ
ಮೂಡಲಪಾಯ ಯಕ್ಷಗಾನ
ಮೂಡಲಪಾಯ ಯಕ್ಷಗಾನ
ಮೂಡಲಪಾಯ ಯಕ್ಷಗಾನ
ಮೂಡಲಪಾಯ ಯಕ್ಷಗಾನ
ಮೂಡಲಪಾಯ ಯಕ್ಷಗಾನ
ಮೂಡಲಪಾಯ
ಮೂಡಲಪಾಯ
ಮೂಡಲಪಾಯ ಯಕ್ಷಗಾನ
ಮೂಡಲಪಾಯ ಯಕ್ಷಗಾನ
ಮೂಡಲಪಾಯ ಯಕ್ಷಗಾನ
ಮೂಡಲಪಾಯ ಯಕ್ಷಗಾನ
ಮೂಡಲಪಾಯ ಯಕ್ಷಗಾನ
ಮೂಡಲಪಾಯ ಯಕ್ಷಗಾನ
ಪ್ರೊ.ಬಿ.ಜಯಪ್ರಕಾಶಗೌಡ
ಪ್ರೊ.ಬಿ.ಜಯಪ್ರಕಾಶಗೌಡ
ಮಂಡ್ಯ ಕರ್ನಾಟಕ ಸಂಘದಲ್ಲಿ ಮೂಡಲಪಾಯ ವಸ್ತ್ರಗಳು ಸಿದ್ಧಗೊಳ್ಳುತ್ತಿರುವುದು
ಮಂಡ್ಯ ಕರ್ನಾಟಕ ಸಂಘದಲ್ಲಿ ಮೂಡಲಪಾಯ ವಸ್ತ್ರಗಳು ಸಿದ್ಧಗೊಳ್ಳುತ್ತಿರುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT