ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪ್ಪಾಸಾಹೇಬ ಪೂಜಾರಿಯ ಕಣ್ಣೀರಿನ ಅಕ್ಷರಗಳು: ಸುಧೀಂದ್ರ ಕುಲಕರ್ಣಿ ಅವರ ಲೇಖನ

ಪ್ರಾಚಾರ್ಯ ಅಪ್ಪಾಸಾಹೇಬ ಪೂಜಾರಿ ಅವರ ಮರಾಠಿ ಆತ್ಮಕಥನದ ಕುರಿತು ಸುಧೀಂದ್ರ ಕುಲಕರ್ಣಿ ಅವರ ಲೇಖನ.
Published 13 ಏಪ್ರಿಲ್ 2024, 20:51 IST
Last Updated 13 ಏಪ್ರಿಲ್ 2024, 20:51 IST
ಅಕ್ಷರ ಗಾತ್ರ

ಶಿಕ್ಷಣದ ನಿಜವಾದ ಅರ್ಥ ಏನು? ಮನುಷ್ಯತ್ವವನ್ನು ಮರೆತು ಸಮೃದ್ಧಿ ಸಾಧ್ಯವೇ? ಈ ಪ್ರಶ್ನೆಗಳನ್ನು ವಿವೇಚಿಸುತ್ತಾ ಕನ್ನಡ ಮೂಲದ ತಮ್ಮ ಶಾಲೆಯ ಸಹಪಾಠಿ ಪ್ರಾಚಾರ್ಯ ಅಪ್ಪಾಸಾಹೇಬ ಪೂಜಾರಿ ಅವರ ಮರಾಠಿ ಆತ್ಮಕಥನದ ಕುರಿತು ಸುಧೀಂದ್ರ ಕುಲಕರ್ಣಿ ಅವರ ಲೇಖನ.

––––––––

ಜೀವನ ಕಹಿ-ಸಿಹಿಯ, ಕತ್ತಲೆ-ಬೆಳಕಿನ ಪ್ರವಾಸ. ಈ ಪ್ರವಾಸದ ಆರಂಭವನ್ನು ನಾವು ನಿರ್ಧರಿಸಲಿಕ್ಕೆ ಸಾಧ್ಯವಿಲ್ಲ. ಆರಂಭದಲ್ಲಿ ಎಷ್ಟು ಕಹಿ, ಎಷ್ಟು ಕತ್ತಲು ಇದನ್ನು ನಾವು ಸುನಿಶ್ಚಿತಗೊಳಿಸಲು ಆಗದು. ನನ್ನ ಹುಟ್ಟು ಎಲ್ಲಿ, ನನ್ನ ತಂದೆ-ತಾಯಿಯರು ಯಾರು, ಅವರ ಸಾಮಾಜಿಕ-ಆರ್ಥಿಕ ಪರಿಸ್ಥಿತಿ ಏನು ಮುಂತಾದ ವಿಷಯಗಳನ್ನು ನಾನು ನಿಯಂತ್ರಿಸಲಾರೆ. ಆದರೆ ಬಾಳಿನ ನಂತರದ ಹಣೆಬರಹವನ್ನು ಸಾಕಷ್ಟು ಮಟ್ಟಿಗೆ ನಾವೇ ಬರೆಯಬಹುದು. ಬಾಲ್ಯ ಎಷ್ಟೇ ಕಗ್ಗತ್ತಲೆಯಲ್ಲಿ ಕಳೆಯಬೇಕಾಗಿ ಬಂದರೂ ಕೂಡ ಆನಂತರ ಎಲ್ಲ ಸಂಕಟಗಳನ್ನು ಸಾಹಸದಿಂದ, ದೃಢ ನಿರ್ಧಾರ ದಿಂದ, ಸ್ವಪರಿಶ್ರಮದಿಂದ ಎದುರಿಸಿದರೆ ಜೀವನವನ್ನು ಸಾರ್ಥಕಗೊಳಿಸಬಹುದು ಎಂಬುದಕ್ಕೆ ಸಮಾಜದಲ್ಲಿ ಅನೇಕ ಉದಾಹರಣೆಗಳು ಕಾಣಿಸುತ್ತವೆ. ಅಂಥವರ ಜೀವನ ವೃತ್ತಾ೦ತ ಇತರರಿಗೆ ಪ್ರೇರಣೆ, ಬೆಳಕು ಕೊಡುವ ದಾರಿದೀಪವಾಗುತ್ತದೆ.

ಇಂಥ ಒಬ್ಬ ಆದರ್ಶ ವ್ಯಕ್ತಿಯ ಕಿರುಚಿತ್ರವಿದು.

ಸುಮಾರು 45 ವರ್ಷಗಳ ದೀರ್ಘಕಾಲದ ನಂತರ ಒಬ್ಬ ಹಳೆಯ ಗೆಳೆಯ ಮತ್ತು ಸಹಪಾಠಿಯನ್ನು ಕಾಣುವ ಸುಪ್ರಸಂಗ ಕೆಲ ದಿನಗಳ ಹಿಂದೆ ಬಂತು. ಅದೂ ಒಂದು ವಿಶೇಷ ಪ್ರಸಂಗವೇ- ತನ್ನ ಆತ್ಮಕಥನದ ಮೊದಲನೇ ಭಾಗದ ಬಿಡುಗಡೆ ಮಾಡಲು ಅವನು ನನ್ನನ್ನು ಆಮಂತ್ರಿಸಿದ್ದ. ಸಮಾರಂಭ ನಡೆದದ್ದು ಮಹಾರಾಷ್ಟ್ರದ ಸಾಂಸ್ಕೃತಿಕ ರಾಜಧಾನಿಯಾದ ಪುಣೆಯ ಐತಿಹಾಸಿಕ ಗಾಂಧಿ ಭವನದಲ್ಲಿ.

ಲೇಖಕನ ಹೆಸರು ಪ್ರಾಚಾರ್ಯ ಡಾ. ಅಪ್ಪಾಸಾಹೇಬ ಪೂಜಾರಿ. ಮರಾಠಿಯಲ್ಲಿ ಬರೆದ ಅವನ ಆತ್ಮಕಥನದ ಶೀರ್ಷಿಕೆ ‘ಅಕ್ಷರೇ ಅಶ್ರೂ೦ಚಿ’. ಕನ್ನಡದಲ್ಲಿ ಹೇಳುವುದಾದರೆ ‘ಕಣ್ಣೀರಿನ ಅಕ್ಷರಗಳು’. ನಾನು ಮತ್ತು ನನ್ನ ಪತ್ನಿ ಕಾಮಾಕ್ಷಿ ಸಣ್ಣವರಿದ್ದಾಗ, ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಜಾಧವಜಿ ಆನಂದಜಿ ಹೈಸ್ಕೂಲಿನಲ್ಲಿ ಓದುತ್ತಿದ್ದಾಗ, ಅಪ್ಪಾಸಾಹೇಬ ನಮ್ಮ ಶಾಲೆಯ ಸಹಪಾಠಿಯಲ್ಲದೇ ನಮ್ಮ ಗುರುಗಳಾಗಿದ್ದ ಫಡಕೆ ಅವರ ‘ಶಿಕೋಣಿ’ಯ ಸಹಪಾಠಿ ಕೂಡ.

‘ಶಿಕೋಣಿ’ ಅಂದ ಕೂಡಲೇ ನಮ್ಮ ಊರಿನ ಭೌಗೋಳಿಕ ಹಾಗೂ ಸಾಂಸ್ಕೃತಿಕ ಪರಿಚಯ ಕೊಡಬೇಕಾಗುತ್ತದೆ. ನಮ್ಮೂರು ಅಥಣಿ ಕರ್ನಾಟಕ-ಮಹಾರಾಷ್ಟ್ರ ರಾಜ್ಯಗಳ ಗಡಿ ಪ್ರದೇಶದಲ್ಲಿರುವ (ಆ ಕಾಲದಲ್ಲಿ) ಒಂದು ಸಣ್ಣ ಊರು. ಮರಾಠಿ ಮಾತನಾಡುವ ಜನ ಸಾಕಷ್ಟು. ನನ್ನ ತಾಯಿ ಮಹಾರಾಷ್ಟ್ರದವಳೇ. ಪೂಜಾರಿಯ ಮನೆಯ ಭಾಷೆ -- ಅಲ್ಲದೇ ಫಡಕೆ ಸರ್ ಅವರ ಮನೆಯ ಭಾಷೆ -- ಮರಾಠಿಯೇ. ಗಡಿ ಭಾಗದಲ್ಲಿ ನಾವು ಮಾತನಾಡುವ ಕನ್ನಡದಲ್ಲಿ ಮರಾಠಿ ಹಾಗೂ ಮರಾಠಿಯಿಂದ ಪ್ರಭಾವಿತವಾದ ಶಬ್ದಗಳು ಅನೇಕಾನೇಕ. ಅವುಗಳಲ್ಲಿ ‘ಶಿಕೋಣಿ’ ಒಂದು. ‘ಶಿಕವಣೆ’ (ಕಲಿಸುವಿಕೆ) ಈ ಮರಾಠಿ ಶಬ್ದದ ಅಪಭ್ರ೦ಶ. ಸ್ವಲ್ಪದರಲ್ಲಿ ‘ಶಿಕೋಣಿ’ ಅಂದರೆ ಟ್ಯೂಷನ್ ಕ್ಲಾಸ್.

ಆದರೆ ಫಡಕೆ ಸರ್ ಅವರ ಟ್ಯೂಷನ್ ಇಂದಿನ ಟ್ಯೂಷನ್ ಕ್ಲಾಸುಗಳಂತೆ ಇರಲಿಲ್ಲ. ಅವರ ಮನೆಯೆಂದರೆ ಅದು ನಮಗೂ ಕೂಡ ಮನೆಯಂತೆಯೇ ಇತ್ತು. ಅದನ್ನು ಗುರುಕುಲ ಎಂದು ವರ್ಣಿಸಿದರೆ ಹೆಚ್ಚು ಸಮರ್ಪಕವಾದೀತು. ಪ್ರೀತಿ-ವಾತ್ಸಲ್ಯಗಳ ಸ್ವಚ್ಚಂದ ವಾತಾವರಣದಲ್ಲಿ ಶಾಲೆಯ ಪಠ್ಯಕ್ರಮದ ಜೊತೆಗೆ ಹೊರಗಿನ ಅನೇಕ ವಿಷಯಗಳನ್ನು ಸಾಮೂಹಿಕ ಹಾಗೂ ಸಹಜ ಪದ್ಧತಿಯಿಂದ ಕಲಿಯಲು ಸಾಧ್ಯಗೊಳಿಸುವ ತಾಣ ಅದಾಗಿತ್ತು.

ಅಪ್ಪಾಸಾಹೇಬ ಕಲ್ಪನೆ ಮಾಡಲೂ ಅಸಾಧ್ಯವೆಂಬಂಥ ಕಡುಬಡತನದಲ್ಲಿ ಬೆಳೆದವನು. ಅವನ ತಂದೆ ಒಂದು ಸಣ್ಣದಾದ ಅಂಬಾಬಾಯಿ ದೇವಿ ಗುಡಿಯ ಪೂಜಾರಿ. ನನ್ನ ಅಕ್ಕ ಮದುವೆಯಾದ ನಂತರ ಹೋದ ಅತ್ತೆಯ ಮನೆಯ ಎದುರಿಗೇ ಈ ಗುಡಿ ಇದ್ದುದರಿಂದ ನಾನು ಆಗೀಗ ಅಲ್ಲಿ ಹೋಗುತ್ತಿದ್ದೆ. ನನ್ನ ಗೆಳೆಯ ಚಿಕ್ಕವನಿದ್ದಾಗಲೇ ತಂದೆಯನ್ನು ಕಳೆದುಕೊಂಡ. ಸಂಸಾರ ನಡೆಸುವ ಮತ್ತು ಮೂರು ಮಕ್ಕಳನ್ನು ಬೆಳೆಸುವ ಜವಾಬ್ದಾರಿಯನ್ನು ತಾಯಿಯೇ ಹೊರಬೇಕಾಯಿತು. ನಾಲ್ಕಾರು ಮನೆಗಳಲ್ಲಿ ಪಾತ್ರೆಗಳನ್ನು ತಿಕ್ಕಿ, ಬಿಡುವಿದ್ದಾಗ ಒಂದೆರಡು ಹೊಟೇಲುಗಳಲ್ಲಿ ಕಾಳು ಹಸನು ಮಾಡುವ ಕೆಲಸ ಹಿಡಿದು ಅವನ ಈ ಮಹಾತಾಯಿ ಮಕ್ಕಳ ಹಸಿವು ನೀಗಿಸಿದಳು.

ಮನೆ ಕೆಲಸ ಮಾಡಿದವರ ಪರಿವಾರದವರು ಕೊಟ್ಟ ತಿಂದುಳಿದ ಪದಾರ್ಥಗಳೇ ಅನೇಕ ಬಾರಿ ಇವರಿಗೆ ಮುಖ್ಯ ಊಟ. ಮನೆಯ ದಾರಿದ್ರ‍್ಯ ಎಷ್ಟು ಕ್ರೂರವಾಗಿತ್ತೆಂದರೆ ಅಪ್ಪಾಸಾಹೇಬನಿಗೆ ಅವನ ತಾಯಿ ‘ನೀನೂ ಏನಾದರೂ ಕೆಲಸ ಮಾಡು, ಶಾಲೆಗೆ ಹೋಗದೇ ನಾಲ್ಕಾಣೆ ಗಳಿಸು.’ ಎಂದು ತಾಕೀತು ಮಾಡುತ್ತಿದ್ದಳು. ಆದರೆ ಇತರ ಮಕ್ಕಳಂತೆ ತಾನೂ ಕಲಿಯಬೇಕು ಎಂಬ ತೀವ್ರ ಇಚ್ಛೆಯಿಂದ ಅವನು ಅವಳ ಕಣ್ಣು ತಪ್ಪಿಸಿ ಶಾಲೆಗೆ ಹೋದರೆ ಅವನಿಗೆ ಖಂಡಿತವಾಗಿ ಆ ದಿನ ತಾಯಿಯ ಬಡಿತ ತಿನ್ನಬೇಕಾಗುತ್ತಿತ್ತು.

ಪರಿಸ್ಥಿತಿಯ ಗಾಂಭಿರ್ಯವನ್ನು ಅರಿತುಕೊಂಡು ಮನೆ ನಡೆಸುವ ಭಾರವನ್ನು ಅವನಣ್ಣ ಜ್ಯೋತಿಬಾ ವಹಿಸಿಕೊಂಡ. ಚಿಕ್ಕವನಿದ್ದಾಗಲೇ ಒಬ್ಬ ಬಡಿಗನ ಕೈಕೆಳಗೆ ಕೆಲಸಕ್ಕೆ ಸೇರಿದ. ಅವನ ವೇತನ ದಿನಕ್ಕೆ ಎಂಟಾಣೆ. ತನಗಾಗಿ ಏನೂ ಇಟ್ಟುಕೊಳ್ಳದೇ ಅದೆಲ್ಲವನ್ನೂ ತಾಯಿಗೆ ಒಪ್ಪಿಸುತ್ತಿದ್ದ. ಅದೇ ಅವರ ಪರಿವಾರದ ಆದಾಯ.

ಬಡತನ ಕೇವಲ ಹೊಟ್ಟೆಯ ಹಸಿವಿನ ಬೆಂಕಿಯನ್ನಷ್ಟೇ ಹಚ್ಚುವುದಿಲ್ಲ. ಅಪಮಾನದ ಅಸಹ್ಯ ಪೀಡೆಯನ್ನೂ ತರುತ್ತಾ ಇರುತ್ತದೆ. ಈ ಘಟನೆಯನ್ನೇ ನೋಡಿ. ಅಥಣಿಯಲ್ಲಿ, ಉಳ್ಳವರೇ ವಾಸವಾಗಿರುವ ಒಂದು ಬಡಾವಣೆಯಲ್ಲಿ, ರಾಘವೇಂದ್ರಸ್ವಾಮಿ ಮಠ ಇದೆ. ಅಲ್ಲಿ ಪ್ರತಿ ವರ್ಷ ಆರಾಧನೆ ನಡೆಯುತ್ತದೆ. ಬ್ರಾಹ್ಮಣರ ಮಠವಾಗಿದ್ದರಿಂದ ಆರಾಧನೆಯ ಊಟ ಹೋಳಿಗೆ, ಉಂಡಿ ಮುಂತಾದ ಪಕ್ವಾನ್ನಗಳಿಂದ ರುಚಿಕರವಾಗಿರುತ್ತದೆ ಎಂಬದನ್ನು ಶಾಲೆಯ ಇತರ ಮಕ್ಕಳಿಂದ ಅಪ್ಪಾಸಾಹೇಬ ಕೇಳಿದ್ದ. ಆದ್ದರಿಂದ ಒಂದು ಸಲ ಆರಾಧನೆಯ ದಿನ ಅವನು ಮಠಕ್ಕೆ ಹೋಗಿ ಊಟದ ಸಾಲಿನಲ್ಲಿ ಕುಳಿತ. ಎಲೆ ಬಡಿಸಿಯಾಗಿತ್ತು. ಇನ್ನೇನು ತುತ್ತು ಬಾಯಲ್ಲಿ ಹಾಕುವಷ್ಟರಲ್ಲಿ ಇವನು ಬ್ರಾಹ್ಮಣನಲ್ಲ, ಹೊರಗಿನ ಒಬ್ಬ ಬಡ ಹುಡುಗ ಎಂದು ಮಠದ ಹಿರಿಯರೊಬ್ಬರು ಗುರುತಿಸಿದರು.

‘ಹೇಳು, ನೀನ್ಯಾಕೆ ಇಲ್ಲಿ ಬಂದೀದಿ? ನಿನ್ನ ಎಲೆಯಲ್ಲಿರುವುದನ್ನೆಲ್ಲ ಎತ್ತಿಕೊಂಡು ಮಠದ ಹೊರಗೆ ಹೋಗಿ ತಿನ್ನು’ ಎಂದು ಬೆದರಿಸಿದರು. ಅವಹೇಳನೆಯ ಪೆಟ್ಟು ತಿಂದ ಅಪ್ಪಾಸಾಹೇಬ ಆಗ ತನ್ನೊಳಗೆ ತಾನೇ ಪ್ರಶ್ನಿಸುತ್ತಾನೆ -- ‘ನಾನೂ ಕೂಡ ಒಂದು ಗುಡಿಯ ಪೂಜಾರಿಯ ಕುಟುಂಬದವನು. ರಾಘವೇಂದ್ರ ಸ್ವಾಮಿಗಳ ಮಠವೂ ಒಂದು ಗುಡಿಯೇ. ಹಾಗಿದ್ದಾಗ ಈ ಭೇದಭಾವವೇಕೆ?’

ಇಂಥ ಅನೇಕ ದುಃಖದ ಅಶ್ರುಗಳಿಂದಲೇ ಅಪ್ಪಾಸಾಹೇಬನ ಬಾಲ್ಯ ತುಂಬಿಕೊಂಡಿತ್ತು. ಈ ಎಲ್ಲ ದುಃಖದ ಅಶ್ರುಗಳ ನೆನಪುಗಳನ್ನು ಅವನು ಯಾವುದೇ ಕಹಿತನವಿಲ್ಲದೇ ಈ ಪುಸ್ತಕದಲ್ಲಿ ಹಿಡಿದಿಟ್ಟಿದ್ದಾನೆ.

ಅಪ್ಪಾ ಸಾಹೇಬನ ಜೀವನದಲ್ಲಿ ಹುರುಪಿನ ಹೊಸ ಬೆಳಕಿನ ಕಿರಣ ಪ್ರವೇಶವಾದದ್ದು ಫಡಕೆ ಸರ್ ಅವರ ಮನೆಯಲ್ಲಿ ಅವನು ಕಾಲಿಟ್ಟಾಗ. ಆ ಘಟನೆಯ ಪ್ರಸಂಗವನ್ನು ಅವನು ತನ್ನ ಆತ್ಮಕಥನದಲ್ಲಿ ಚಲನಚಿತ್ರದಲ್ಲಿಯ ಮರೆಯಲಾಗದ ದೃಶ್ಯದಂತೆ ಚಿತ್ರಿಸಿದ್ದಾನೆ. ಫಡಕೆ ಸರ್ ಅವರ ಶಿಕೋಣಿಗೆ ಅವನು ಇನ್ನೂ ಸೇರಿರಲಿಲ್ಲ. ತನ್ನದು ಹರಕು ಬಟ್ಟೆಗಳ ಜೀವನವಾಗಿದ್ದರಿಂದ, ಹಾಗೂ ತಾಯಿಯ ತಾಕೀತಿನಿಂದಾಗಿ ಶಾಲೆ ತಪ್ಪಿಸುತ್ತಿದ್ದರಿಂದ ಅವನು ಅಸಹಾಯಕನಾಗಿದ್ದ. ಆದ್ದರಿಂದ ಜ್ಞಾನತಪಸ್ವಿಯಾದ ಫಡಕೆ ಸರ್ ಅವರ ಸಹವಾಸ ಅವನಿಗೆ ಬೇಗನೆ ಲಭಿಸಲಿಲ್ಲ.

ಆದರೆ ಒಂದು ದಿನ ಏನು ಹೊಳೆಯಿತೋ ಏನೋ, ಅಂಬಾಬಾಯಿ ಗುಡಿಯಲ್ಲಿ ಭಕ್ತರು ಕೊಟ್ಟ ಪ್ರಸಾದದ ತೆಂಗಿನಕಾಯಿಯ ಕೆಲವು ಬಟ್ಟಲುಗಳನ್ನು ಸರ್ ಅವರಿಗೆ ಕೊಡಬೇಕೆಂದು ಅವರ ಮನೆಗೆ ಹೋದ. ಯಾವ ರೀತಿಯ ಸ್ವಾಗತ ತನಗೆ ಸಿಗುತ್ತದೋ ಎಂಬ ಭೀತಿ ಮನಸ್ಸಿನಲ್ಲಿತ್ತು. ಸರ್ ಅವರು ಇವನನ್ನು ಗುರುತಿಸಿ ಅತ್ಯಂತ ಪ್ರೀತಿಯಿಂದ ಒಳಗೆ ಕರೆದರು. ಇವನು ಒಂದಿಷ್ಟು ನಡಗುತ್ತಲೇ ಗುರುಗಳು ಕುಳಿತಿರುವ ಕುರ್ಚಿಯ ಎದುರು ನೆಲದ ಮೇಲೆ ಕುಳಿತುಕೊಳ್ಳುವ ಪ್ರಯತ್ನದಲ್ಲಿದ್ದಾಗ ಸರ್ ಅವರು ಅವನಿಗೆ ಹೇಳಿದ ಮಾತು ಅವರ ಆದರ್ಶ ವ್ಯಕ್ತಿತ್ವಕ್ಕೆ ಕನ್ನಡಿಯೇ ಹೌದು. ‘ಪೂಜಾರಿ, ನಿನಗೆ ನಮ್ಮ ಮನೆಯ ನಿಯಮಗಳು ಗೊತ್ತಿಲ್ಲ. ಏಕೆಂದರೆ ನೀನು ಮೊದಲ ಬಾರಿ ಇಲ್ಲಿ ಬಂದಿರುವಿ. ಈ ಮನೆಯಲ್ಲಿ ಶ್ರೇಷ್ಟಕನಿಷ್ಟ ಎಂಬ ಆಚರಣೆ ಇಲ್ಲ. ಈ ಮನೆಗೆ ಬಂದವರು ಎಲ್ಲರೂ ಸಮಾನರೇ. ಇಲ್ಲಿ ಬಂದವರು ಕುರ್ಚಿ ಮತ್ತು ಪಲ೦ಗಿನ ಕೂಡಬೇಕು. ಅಲ್ಲಿ ಜಾಗ ಇಲ್ಲವಾದರೆ ಮಾತ್ರ ನಂತರ ಬಂದವರು ಚಾಪೆಯ ಮೇಲೆ ಕೂಡಬೇಕು’ ಎಂದು ಹೇಳಿದವರೇ ಅಪ್ಪಾ ಸಾಹೇಬನನ್ನು ತಮ್ಮ ಜೊತೆಯಲ್ಲಿ ಕುರ್ಚಿಯ ಮೇಲೆ ಆಸೀನಗೊಳಿಸಿದರು. ಜೀವನದಲ್ಲಿ ಮೊಟ್ಟ ಮೊದಲನೇ ಸಲ ಕುರ್ಚಿಯ ಮೇಲೆ ಕೂಡುವ ಭಾಗ್ಯ ಅವನಿಗೆ ಲಭಿಸಿತು.

ಮರು ಕ್ಷಣವೇ ಸರ್ ಅವರು ತಮ್ಮ ಪತ್ನಿಯನ್ನು ಕರೆದು ‘ಇದು ನೋಡು, ನಮ್ಮ ಶಿಷ್ಯ ತೆಂಗಿನಕಾಯಿಯ ಬಟ್ಟಲುಗಳನ್ನು ತಂದಿದ್ದಾನೆ. ನಾಳೆ ಇದರ ಕೊಬ್ಬರಿಯ ವಡೆ ಮಾಡಿ ಇವನಿಗೂ ಕೊಡು’ ಎಂದರು. ಇದೆಲ್ಲವೂ ಅಪ್ಪಾಸಾಹೇಬನಿಗೆ ನಂಬಲಾಗದ ಅನುಭವವೇ. ತಾನೆಲ್ಲಿದ್ದೇನೆ, ತನಗೇನಾಗುತ್ತಿದೆ ಎಂಬ ಯೋಚನೆಯಲ್ಲಿದ್ದಾಗಲೇ ಸರ್ ಕೇಳಿದರು -- ‘ಏನೋ, ನೀನು ಶಿಕೋಣಿಗೆ ಬರುವುದಿಲ್ಲ?’ ಒಂದು ಸುಧೀರ್ಘ ಮೌನ ಮುದ್ರೆಯ ನಂತರ ಅಪ್ಪಾಸಾಹೇಬ ಉತ್ತರಿಸಿದ -- ‘ಸರ್, ಫೀ ಕೊಡಲು ನನ್ನ ತಾಯಿಯ ಬಳಿ ಹಣವಿಲ್ಲ.’ ಆಗ ಸರ್ ಹೇಳಿದರು, ‘ನೀನು ಫೀ ಕೊಡುವ ಅವಶ್ಯಕತೆ ಇಲ್ಲ. ನಾಳೆಯಿಂದಲೇ ಇಲ್ಲಿ ಕಲಿಯಲಿಕ್ಕೆ ಬಾ.’

ಇದನ್ನು ಕೇಳಿ ಅಪ್ಪಾಸಾಹೇಬನ ಆನಂದಕ್ಕೆ ಎಲ್ಲೆಯಿಲ್ಲವಾಯಿತು. ಮನೆಗೆ ಓಡಿ ಹೋಗಿ ತಾಯಿಗೆ ಈ ಮಾತನ್ನು ಹೇಳಿದಾಗ ಆನಂದದ ಕಣ್ಣೀರು ಸುರಿಸಿದ ಅವಳು ಮಗನನ್ನು ಅಪ್ಪಿಕೊಂಡಳು. ಆಗ ಅವಳ ಬಾಯಿಯಿಂದ ಹೊರಬಂದ ಶಬ್ದಗಳೆಂದರೆ -- ‘ಬಂಗಾರದ ನನ್ನ ಮಗುವೇ! ಇನ್ನು ಮೇಲೆ ನೀನು ಶಾಲೆ ತಪ್ಪಿಸಬೇಡ. ಗುರುಗಳು ಹೇಳಿದಂತೆಯೇ ಇರು. ನಿನ್ನ ಅಭ್ಯುದಯದ ಬಾಗಿಲನ್ನು ತೆರೆದವರು ಅವರೇ.’ ಗುರು-ಶಿಷ್ಯರ ಅನ್ಯೋನ್ಯ ಸಂಬಂಧದಲ್ಲಿ ಅವನು ಸ್ವಲ್ಪೇ ಸಮಯದಲ್ಲಿ ಫಡಕೆ ಸರ್ ಅವರ ಪಟ್ಟ ಶಿಷ್ಯನೂ ಆದ ಹಾಗೂ ಅವರ ಮನೆಯಲ್ಲೇ ಇದ್ದುಕೊಂಡು ಅವರ ಮತ್ತು ಅವರ ಪತ್ನಿಯವರ ಮಾನಸ ಪುತ್ರನಾದ.

ಅಪ್ಪಾಸಾಹೇಬನ ಈ ಪುಸ್ತಕ ನನ್ನ ಮಟ್ಟಿಗೆ ಅತೀವ ವಿಶೇಷವಾಗಿದೆ ಏಕೆಂದರೆ, ಇದರ ಮೂಲಕ ನನ್ನ ಗುರುಗಳೊಂದಿಗೆ ನಾನು ಕಳೆದ ಬಂಗಾರದ ದಿನಗಳು ಮತ್ತೆ ಜೀವಂತಗೊಂಡಿವೆ. ಉತ್ತಮ ಶಿಕ್ಷಕ ಒಬ್ಬ ಉತ್ತಮ ಶಿಲ್ಪಕಾರನಾಗಿರುತ್ತಾನೆ. ಫಡಕೆ ಸರ್ ನಮ್ಮೆಲ್ಲರ ಬಾಲ್ಯದ ಮೂರ್ತಿಕಾರರೇ ಸರಿ. ಅವರು ಕ್ಲಾಸ್ ರೂಮಿನಲ್ಲಿ ಎಷ್ಟು ಕಲಿಸುತ್ತಿದ್ದರೋ ಅದಕ್ಕಿಂತ ಎಷ್ಟೋ ಪಟ್ಟು ಹೆಚ್ಚು, ಹಾಗೂ ಹೆಚ್ಚು ಮನದಟ್ಟಾಗುವಂತೆ, ನಾನಾ ವಿಧ ವಿಷಯಗಳನ್ನು ಹೈಸ್ಕೂಲಿನ ಆವಾರದಲ್ಲಿದ್ದ ಗಿಡಗಳ ಕೆಳಗೆ ಮಕ್ಕಳನ್ನು ಕೂಡಿಸಿ ಮಾತನಾಡುವಾಗ, ಆಟದ ಮೈದಾನಿನಲ್ಲಿ ಆಟ ಕಲಿಸುವಾಗ, ಹಾಗೂ ಹುಣ್ಣಿಮೆಯ ರಾತ್ರಿ ದೂರದ ಗುಡ್ಡದ ಮೇಲೇರಿ ಬೆಳದಿಂಗಳಿನ ಸಾಮೂಹಿಕ ಊಟಕ್ಕೆ ಕರೆದುಕೊಂಡು ಹೋದಾಗ ಕಲಿಸುತ್ತಿದ್ದರು.

ಫಡಕೆ ಸರ್ ಅವರ ಮನೆಯಲ್ಲಿಯೇ ಕಾಮಾಕ್ಷಿ ಮತ್ತು ನನ್ನ ನಡುವೆ ಪ್ರೇಮ ಅಂಕುರಿಸಿತು. ಚಿಕ್ಕ ವಯಸ್ಸಿನಲ್ಲಿಯೇ ಅವರು ಅಪ್ಪಾಸಾಹೇಬ, ಕಾಮಾಕ್ಷಿ, ನಾನು ಅಲ್ಲದೆ ಅನೇಕ ಮಕ್ಕಳಲ್ಲಿ ಸಮಾಜ ಸೇವೆಯ, ಸ್ವಯಂಸೇವಕತ್ವದ ಬೀಜ ಬಿತ್ತಿದರು. ತಾವೇ ಕೈಯಲ್ಲಿ ಸನಿಕೆ-ಗುದ್ದಲಿ ಹಿಡಿದು ನಮ್ಮೆಲ್ಲರಿಗೆ ತಾಸುಗಟ್ಟಲೆ ಹರ್ಷೋತ್ಸಾಹದಿಂದ ಶ್ರಮದಾನ ಮಾಡಲು ಕಲಿಸಿದರು. ಸ್ವತಂತ್ರ ಹಾಗೂ ನಿರ್ಭಯ ರೀತಿಯಲ್ಲಿ ವಿಚಾರಮಾಡಲು ಪ್ರೇರೇಪಿಸದರು. ಉತ್ತಮ ಪುಸ್ತಕಗಳನ್ನು ಓದುವ ಹುಚ್ಚುತನವನ್ನು ನಮ್ಮಲ್ಲಿ ಮೂಡಿಸಿದರು.

ಅವರು ಹುರಿದುಂಬಿಸಿದ್ದರಿಂದಲೇ ಅಪ್ಪಾಸಾಹೇಬ, ನಾನು ಮತ್ತು ಕೆಲವು ಸಹಪಾಠಿಗಳು ಅಥಣಿಯ ಶಿವಯೋಗಿ ಮೊಫತ್ (ಅಂದರೆ ಉಚಿತ) ವಾಚನಾಲಯದಲ್ಲಿ ಸ್ವಯಂಸೇವಕರಾಗಿ ಕೆಲಸ ಮಾಡಲು ಶುರು ಮಾಡಿದೆವು. ಶಾಲೆ ಮುಗಿದ ನಂತರ ವಾರದಲ್ಲಿ ಎರಡು ದಿನ ಸಂಜೆ ವಾಚನಾಲಯದ ಸದಸ್ಯರಿಗೆ ಪುಸ್ತಕಗಳನ್ನು ಕೊಡುವುದು, ತಿರುಗಿ ಬಂಡ ಪುಸ್ತಕಗಳನ್ನು ಸರಿಯಾಗಿ ಇಡುವುದು, ಪುಸ್ತಕದ ಕಪಾಟುಗಳನ್ನು ಸ್ವಚ್ಛವಾಗಿಡುವುದು ಮುಂತಾದ ಎಲ್ಲ ಕೆಲಸಗಳನ್ನೂ ಸಂತೋಷದಿಂದ ಮಾಡತೊಡಗಿದೆವು. ಇದರಿಂದ ನಮ್ಮಲ್ಲಿ ಪುಸ್ತಕ ಪ್ರೇಮವೂ ಬೆಳೆಯಿತು. ಅಪ್ಪಾಸಾಹೇಬ ಮತ್ತು ನಾನು ಶಿವರಾಮ ಕಾರಂತ, ಕುವೆಂಪು, ಬೇಂದ್ರೆ, ಗೋಪಾಲಕೃಷ್ಣ ಅಡಿಗ, ಅನಂತಮೂರ್ತಿ ಹಾಗೂ ಕನ್ನಡದ ಸುಮಾರು ಎಲ್ಲ ಶ್ರೇಷ್ಠ ಸಾಹಿತಿಗಳ ಗ್ರಂಥಗಳಲ್ಲಿ ಮುಳುಗಿ ಹೋದೆವು.

ಅಪ್ಪಾಸಾಹೇಬನ ಆತ್ಮಕಥನದ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡುವಾಗ ನಾನು ಒಂದು ಮಾತು ಹೇಳಿದೆ. ‘ಶಿಕ್ಷಣ ಅಂದರೆ ಏನು? ಇದರ ಅರ್ಥವನ್ನು ಒಬ್ಬ ತಜ್ಞರು ಅತ್ಯಂತ ಸರಳವಾಗಿ ಹೇಳಿದ್ದಾರೆ. ‘ಶಾಲೆ-ಕಾಲೇಜಿನ ಕ್ಲಾಸ್ ರೂಮಿನ ನಾಲ್ಕು ಗೋಡೆಗಳ ಮಧ್ಯೆ ಕಲಿತದ್ದರಲ್ಲಿ ಅದೆಷ್ಟೋ ಮರೆತುಹೋದ ನಂತರ ಜೀವನದುದ್ದಕ್ಕೂ ಏನು ಉಳಿಯುತ್ತದೆಯೋ ಅದೇ ನಿಜವಾದ ಶಿಕ್ಷಣ.’ ಫಡಕೆ ಸರ್ ಆಗಲಿ ಅಥವಾ ಅಥಣಿಯ ಶಿವಯೋಗಿ ಮುರುಘೇ೦ದ್ರ ಸ್ವಾಮಿ ಕಾಲೇಜಿನಲ್ಲಿ ಕಲಿಯುವಾಗ ಅಪ್ಪಾಸಾಹೇಬ ಮತ್ತು ನಮಗೆ ಕಲಿಸಿದ ಮತ್ತೊಬ್ಬ ಆದರ್ಶ ಗುರುಗಳಾದ ದುಷ್ಯಂತ ನಾಡಗೌಡ ಸರ್ ಆಗಲಿ ಅವರು ನಮಗೆ ನೀಡಿದ ಶಿಕ್ಷಣ ಈ ತರಹದ್ದಾಗಿತ್ತು.

ಅಥಣಿಯಲ್ಲಿ ಪಿಯುಸಿ ಮುಗಿಸಿ ನಾನು ಎಂಜಿನಿಯರಿಂಗ್‌ ಕಲಿಯುವುದಕ್ಕಾಗಿ ಐಐಟಿ ಮುಂಬಯಿಗೆ ಹೋದೆ. ಅಪ್ಪಾಸಾಹೇಬ ಬಿ.ಎ. ಮುಗಿಸಿದ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಯಾವುದೇ ಕಾರಣಕ್ಕಾಗಿ ಪ್ರವೇಶ ಸಿಗಲಿಲ್ಲ. ಅದಕ್ಕಾಗಿ ಅವನು ಮಹಾರಾಷ್ಟ್ರದಲ್ಲಿಯ ಕೊಲ್ಹಾಪುರಕ್ಕೆ ಹೋಗಿ ಎಂ.ಎ. ಮಾಡಿದ. ಕಡುಬಡತನವಂತೂ ಆಗಲೂ ಬೆನ್ನು ಬಿಟ್ಟಿರಲಿಲ್ಲ. ಆದರೆ ಬಡತನದಲ್ಲಿಯೇ ಕಷ್ಟಪಟ್ಟು ಜೀವನ ನಡೆಸುತ್ತಿದ್ದ ಅಥಣಿಯ ಶಂಕರ ಜಾಧವ ಎಂಬ ದಯಾಳು ಸಹಪಾಠಿಯೊಬ್ಬ ಅಪ್ಪಾಸಾಹೇಬನ ಸಹಾಯಕ್ಕಾಗಿ ದೇವದೂತನಾಗಿ ಮುಂದೆ ಬಂದ. ಎಂ.ಎ. ಶಿಕ್ಷಣದ ಎರಡು ವರ್ಷಗಳ ಕಾಲಾವಧಿಯಲ್ಲಿ ಅವನ ಎಲ್ಲ ಅಗತ್ಯಗಳನ್ನೂ ಶಂಕರನೇ ತೀರಿಸಿದ. ಸುದೈವದಿಂದ ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯಲ್ಲಿ ಮಂಗಳವೇಢಾ ಎಂಬ ಊರಿನ ಕಾಲೇಜಿನಲ್ಲಿ ಅಪ್ಪಾಸಾಹೇಬನಿಗೆ ಪ್ರಾಧ್ಯಾಪಕನ ನೌಕರಿ ಸಿಕ್ಕಿತು. ಬಾಳಿಗೆ ಒಂದಿಷ್ಟು ಆರ್ಥಿಕ ಸ್ಥೈರ್ಯ ಬಂತು. ಅಧ್ಯಯನಶೀಲತೆ ಅವನ ರಕ್ತದ ಗುಣವಾಗಿದ್ದರಿಂದ ಅರ್ಥಶಾಸ್ತ್ರದಲ್ಲಿ ಪಿಎಚ್.ಡಿ. ಪದವಿ ದೊರಕಿಸಿಕೊಂಡ. ಕೆಲವೇ ವರ್ಷಗಳಲ್ಲಿ ಮರಾಠಿ ಭಾಷೆಯಲ್ಲಿ ಪ್ರಸಿದ್ಧ ಗ್ರಂಥಗಳನ್ನು ಬರೆದು ಹೆಸರು ಗಳಿಸಿದ.

ಆದರೆ ಅಪ್ಪಾಸಾಹೇಬನಿಗೆ ಇನ್ನೂ ಹೆಚ್ಚು ಕೀರ್ತಿ ತಂದ ಕಾರಣವೆಂದರೆ ಮರಾಠಿ ಸಂತ ಸಾಹಿತ್ಯದಲ್ಲಿ ಅವನು ಮಾಡಿದ ಬಹುಮೂಲ್ಯ ಶೋಧಕಾರ್ಯ. ಕರ್ನಾಟಕದ ಸಾಂಸ್ಕೃತಿಕ ಇತಿಹಾಸದಲ್ಲಿ ವಚನ ಸಾಹಿತ್ಯಕ್ಕೆ ಇರುವ ಮಹತ್ವವೇ ಮಹಾರಾಷ್ಟ್ರದಲ್ಲಿ ಸಂತ ಸಾಹಿತ್ಯಕ್ಕೆ ಇದೆ. ಜ್ಞಾನೇಶ್ವರ, ತುಕಾರಾಮ, ನಾಮದೇವ ಮುಂತಾದ ಮಹಾನ್‌ ಸಂತ ಶಿರೋಮಣಿಗಳು ಹಿಂದೂ ಧರ್ಮದ ಚಿರಂತನ ಆಧ್ಯಾತ್ಮಿಕ ಸಾರವನ್ನು, ಸಾಮಾಜಿಕ ಸಮಾನತೆಯ ಪಾಠವನ್ನು ಜನಸಾಮಾನ್ಯರ ಭಾಷೆಯಲ್ಲಿ ಕಾವ್ಯಮಯ ಶೈಲಿಯಲ್ಲಿ ಬಿತ್ತರಿಸಿದರು. ಭೀಮಾ ನದಿಯ ಸುರಮ್ಯ ತೀರದಲ್ಲಿರುವ ಮಂಗಳವೇಢಾ ಇದು ಅನೇಕ ಸಂತರ ಜನ್ಮಭೂಮಿ, ತಪೋಭೂಮಿ. ಮಹಾನ್ ಸಂತ-ಕವಿಗಳಾದ ಚೋಖಾಮೇಳಾ ಮತ್ತು ಕಾನ್ಹೋಪಾತ್ರಾ ಇಲ್ಲಿಯವರೇ. ಅಪ್ಪಾಸಾಹೇಬನು ಈ ಸಂತರ ಇತಿಹಾಸದ ಅನ್ವೇಷಣೆ ಮಾಡಿ ಬರೆದ ಗ್ರಂಥಕ್ಕೆ ಮಹಾರಾಷ್ಟ್ರದಲ್ಲಿ ತುಂಬಾ ಮನ್ನಣೆ ಸಿಕ್ಕಿತು. ಇವೆಲ್ಲವುಗಳ ವಿವರಣೆ ಎಂದರೆ ಸುಖಕರವಾದ ಕಣ್ಣೀರಿನ ಅಕ್ಷರಗಳ ಸುರಿಮಳೆಯೇ ಸರಿ. ಇಷ್ಟಾದರೂ ಕೂಡ ಇಲ್ಲಿ ಯಾವುದೇ ದರ್ಪೋಕ್ತಿ ಇಲ್ಲ.

ಕನ್ನಡದಲ್ಲಿ ಕಲಿತು-ಓದಿದವನೊಬ್ಬನು ಮರಾಠಿ ಸಾಹಿತ್ಯದಲ್ಲಿಇಷ್ಟು ಗೌರವ ಗಳಿಸಿದ್ದನ್ನು ಕೇಳಿ  ನನಗಾದ ಅಭಿಮಾನದ ಜೊತೆಗೇನೆ ನಾವೇಕೆ ಕನ್ನಡ-ಮರಾಠಿ ಜಗಳದಲ್ಲಿ ಸಿಲುಕಿಕೊಂಡಿದ್ದೇವೆ ಎಂಬ ಚಿಂತೆಯೂ ಮೂಡಿತು. ಶಾಲೆಯಲ್ಲಿ ಕಲಿಯುತ್ತಿದ್ದಾಗ ಅಥಣಿಯಲ್ಲಿ ಭಯಾನಕವಾದ ಭಾಷಾ ಗಲಭೆಯಾಗಿ ಒಬ್ಬ ಯುವಕನನ್ನು ಜೀವಂತ ಸುಟ್ಟುಹಾಕಿದ ದುರಂತವನ್ನು ನಾನು ಇನ್ನೂ ಮರೆತಿಲ್ಲ. ಆದ್ದರಿಂದ ಅಪ್ಪಾಸಾಹೇಬನ ಪುಸ್ತಕ ಓದುವಾಗ ನನಗೆ ಶಿವರಾಮ ಕಾರಂತರು ಹೇಳಿದ ಒಂದು ಮಾತು ನೆನಪಾಯಿತು. ಒಮ್ಮೆ ಮುಂಬಯಿಯಲ್ಲಿ ಜರುಗಿದ ಕೊ೦ಕಣಿ-ಕನ್ನಡ-ಮರಾಠಿ ಸಾಹಿತ್ಯ ಸಮ್ಮೇಳನಕ್ಕೆ ಅವರನ್ನು ಮುಖ್ಯ ಅತಿಥಿಯಾಗಿ ಕರೆದಿದ್ದರು. ಆಗ ತಮ್ಮ ಭಾಷಣದಲ್ಲಿ ಅವರು ಹೇಳಿದರು -- ‘ಕೊ೦ಕಣಿ-ಕನ್ನಡ-ಮರಾಠಿ ಭಾಷೆಗಳ ನಡುವಿನ ಸಂಬಂಧ ಕೋಕಮ್ ತರ ಸುಮಧುರವಾಗಿರಬೇಕು.’ (ಕೋಕಮ್ ಇದು ಭಾರತದ ಪಶ್ಚಿಮ ಕರಾವಳಿಯ ಭಾಗಗಳಲ್ಲಿ ಸಿಗುವ, ಔಷಧೀಯ ಗುಣಗಳಿಂದ ಸಮೃದ್ಧವಾದ, ನೇರಳೆಬಣ್ಣದ ರುಚಿಕರವಾದ ಪೇಯ.)

ಕೊನೆಯಲ್ಲಿ ಒಂದು ಮಾತು. ಈ ಪುಸ್ತಕ ಓದುವಾಗ ಒಂದು ಪ್ರಶ್ನೆ ಮತ್ತೆ ಮತ್ತೆ ನನ್ನನ್ನು ಕಾಡಿತು. ಬಡತನ ಅಂದರೆ ಎಂದು? ದಾರಿದ್ರ‍್ಯವೆಂದರೆ ಕೇವಲ ಆರ್ಥಿಕ ದಾರಿದ್ರ‍್ಯವೇ? ಹಣವಿಲ್ಲದವರು ಬಡವರು, ಹಣವಿದ್ದವರೆಲ್ಲ ಶ್ರೀಮಂತರು ಈ ಸಮೀಕರಣ ಸರಿಯೇ? ಹಾಗಾದರೆ ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ ಕಷ್ಟಪಟ್ಟು ಮಕ್ಕಳನ್ನು ಬೆಳೆಸಿದ ಅಪ್ಪಾಸಾಹೇಬನ ತಾಯಿಯ -- ಹಾಗೂ ಅವಳಂಥ ಕೋಟ್ಯವಧಿ ಮಾತೆಯರ -- ಮಮತ್ವದ ಹೃದಯಗಳು ಶ್ರೀಮಂತವಲ್ಲವೇ? ತನ್ನ ತಾಯಿಯ ಕಷ್ಟ ಕಂಡು ಅವಳ ಭಾರ ಒಂದಿಷ್ಟಾದರೂ ಕಡಿಮೆಯಾಗಲಿ ಎಂದು ಚಿಕ್ಕ ವಯಸ್ಸಿನಲ್ಲಿಯೇ ಬಡಿಗರ ಕೈಯಲ್ಲಿ ದುಡಿಯಲು ಹೋದ, ಅಷ್ಟೇ ಅಲ್ಲ ತಾನು ಗಳಿಸಿದ ದಿನದ ಸಂಬಳ ಎಂಟಾಣೆಯನ್ನು ತನಗಾಗಿ ಒಂದು ಪೈಸಾ ಕೂಡ ಇಟ್ಟುಕೊಳ್ಳದೇ, ತಾಯಿಯ ಕೈಯಲ್ಲಿಡುತ್ತಿದ್ದ ಅಪ್ಪಾಸಾಹೇಬನ ಅಣ್ಣ ಜ್ಯೋತಿಬಾ ಮನಸ್ಸಿನಿಂದ-ಹೃದಯದಿಂದ ಬಡವನೇ? ತನ್ನ ಸಂಸಾರ ನಡೆಸಲು ಕಷ್ಟವಾಗುತ್ತಿದ್ದಾಗಲೂ ಕೂಡ ಎಂ.ಎ. ಕಲಿಯಲು ಧಡಪಡಿಸುತ್ತಿದ್ದ ಅಪ್ಪಾಸಾಹೇಬನಿಗೆ ನೆರವಿನ ಕೈ ಚಾಚಿದ ಅವನ ಗೆಳೆಯ ಶಂಕರ ಜಾಧವ ಮನುಷ್ಯತ್ವದ ತಕ್ಕಡಿಯಲ್ಲಿ ಬಡವನೇ ಅಥವಾ ಶ್ರೀಮಂತನೇ? ಫಡಕೆ ಸರ್ ಅವರೂ ‘ಆರ್ಥಿಕವಾಗಿ ಉಳ್ಳವರಾಗಿರಲಿಲ್ಲ. ಆದರೆ ತಮ್ಮೆಲ್ಲ ವಿದ್ಯಾರ್ಥಿಗಳ ಭವಿಷ್ಯ ಸುಖಮಯವಾಗಬೇಕು ಎಂಬುದಕ್ಕಾಗಿ ಜೀವನದುದ್ದಕ್ಕೂ ಪರಿಶ್ರಮಿಸಿದ ಅವರು ಬಡವರೇ ಇಲ್ಲವೇ ಶ್ರೀಮಂತರೇ? ನಮ್ಮ ಸಮಾಜದಲ್ಲಿ ಇಂಥ ಅಸಂಖ್ಯ ಪುಣ್ಯಾತ್ಮರು ಇದ್ದಾರೆ. ಅವರು ಧನಾಢ್ಯರಲ್ಲ. ಆದರೆ ಮನುಷತ್ವದ ಸಂಪತ್ತು ಎಷ್ಟೋ ಧನಾಢ್ಯರಿಗಿಂತ ಅವರಲ್ಲಿ ಧಾರಾಳವಾಗಿದೆ ಎಂಬುದಕ್ಕೆ ಅನೇಕ ನಿದರ್ಶನಗಳು ನಮಗೆ ಕಾಣುತ್ತವೆ.

ಇದರ್ಥ ಆರ್ಥಿಕ ಬಡತನವನ್ನು ನಾನು ಹೊಗಳುತ್ತಿದ್ದೇನೆ ಎಂದಲ್ಲ. ಅದನ್ನು ನಮ್ಮ ದೇಶದಿಂದ, ಇಡೀ ಜಗತ್ತಿನಿಂದ, ನಿರ್ಮೂಲನೆ ಮಾಡಲೇಬೇಕು. ಆದರೆ ಇಂದು ‘ವಿಕಸಿತ ಭಾರತ’, ‘ನಮ್ಮ ದೇಶ ಬೇಗನೆ ವಿಶ್ವದ ಮೂರನೇ ದೊಡ್ಡ ಆರ್ಥಿಕ ಶಕ್ತಿಯಾಗಲಿದೆ’, ‘ನಮ್ಮ ಜಿಡಿಪಿ 8 ಪ್ರತಿಶತದಷ್ಟು ವೇಗದಿಂದ ಬೆಳೆಯುತ್ತಿದೆ’ ಈ ಮುಂತಾದ ದೊಡ್ಡ ದೊಡ್ಡ ಮಾತುಗಳೇ ರಾಷ್ಟ್ರೀಯ ಚರ್ಚೆಯ ಮುಖ್ಯ ವಿಷಯಗಳಾಗಿದ್ದಾಗ ನಿಜವಾದ ‘ವಿಕಾಸ’, ‘ಅಭಿವೃದ್ಧಿ’, ‘ಸಮೃದ್ಧಿ’ ಎಂದರೆ ಏನು, ನಿಜವಾದ ಶಿಕ್ಷಣ ಎಂದರೆ ಏನು, ಎಂಬುಂದನ್ನು ನಾವು ಮರೆತು ಹೋದರೆ ನಮ್ಮ ಸಮಾಜದ ಭವಿಷ್ಯ ಉಜ್ವಲವಾಗಲು ಸಾಧ್ಯವಿಲ್ಲ. ನಮ್ಮ ದೇಶದ ಸಂಸ್ಕೃತಿ, ಸಂಸ್ಕಾರ, ಮಾನವೀಯ ಮೌಲ್ಯಗಳನ್ನು ದುರ್ಲಕ್ಷಿಸಿ, ಪಾಶ್ಚಿಮಾತ್ಯ ಸಮಾಜಗಳ ವ್ಯಕ್ತಿ-ಕೇಂದ್ರಿತ ಪ್ರಗತಿಯ ಅಂಧಾನುಕರಣೆ ಮಾಡಿ, ಕೇವಲ ಹಣದ ಶ್ರೀಮಂತಿಕೆಯ ಬೆನ್ನು ಹತ್ತಿದರೆ ಕಲ್ಯಾಣವಾಗಲಿಕ್ಕಿಲ್ಲ.

ಗೆಳೆಯ ಅಪ್ಪಾಸಾಹೇಬನ ಈ ಉದ್ಬೋಧಕ ಆತ್ಮಕಥನ ಕನ್ನಡಲ್ಲಿಯೂ ಬೇಗನೆ ಬರಬೇಕು ಎಂಬುದು ನಮ್ಮಿಬ್ಬರ ಇಚ್ಛೆ. ಹಾಗೂ ಈ ಬಯಕೆಯನ್ನು ಸಾಕಾರಗೊಳಿಸುವ ನನ್ನ ಸಂಕಲ್ಪದೊಂದಿಗೆ ಅವನ ಆತ್ಮಕಥನದ ಎರಡನೆಯ ಭಾಗ ಬೇಗನೆ ಹೊರಬರಲೆಂದು ಹಾರೈಸುವೆ.

*****

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT