ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೊಮ್ಮನಹಳ್ಳಿಯ ಮಣ್ಣಿನ ದಾರಿ

Published 19 ಮೇ 2024, 0:10 IST
Last Updated 19 ಮೇ 2024, 0:10 IST
ಅಕ್ಷರ ಗಾತ್ರ

ವಿದ್ಯಾಭ್ಯಾಸಕ್ಕಾಗಿ ಕುಮಟಾ, ಧಾರವಾಡ ಮತ್ತು ಉದ್ಯೋಗ ನಿಮಿತ್ತ ಮುಂಬೈ ವಲಸೆ ಇತ್ಯಾದಿಗಳಿಂದಾಗಿ ಇತ್ತ ಹಾಯದ ನನ್ನ ಮಂಚಿಕೇರಿ ಪ್ರವಾಸದ ಎರಡನೇ ಹಂತ ಒದಗಿ ಬಂದಿದ್ದು ಸೀದಾ 25 ವರ್ಷಗಳ ನಂತರ 1992ರಲ್ಲಿ! ಆಗ ಮಂಚಿಕೇರಿ ಹೈಸ್ಕೂಲಿನಲ್ಲಿ ಆಯೋಜಿತವಾಗಿದ್ದ ನೀನಾಸಂ ಸಾಹಿತ್ಯ ರಸಗ್ರಹಣ ಕಲಾಪವೊಂದಕ್ಕೆ ನಾನು ಬಂದಿದ್ದೆ. ಬಾಲ್ಯದ ಎಳೆಯ ಕಂಗಳಿಗೆ ಕಂಡಿದ್ದ ಮಂಚಿಕೇರಿ ಎಂಬ ಆವರಣಕ್ಕೆ ಒಂದು ಅದ್ಭುತವಾದ ಚಿಂತನಶೀಲ ತನ್ಮಯತೆಯ ಆಯಾಮ ಬಂದಿದ್ದು ಈ ಮರುಭೇಟಿಯಲ್ಲಿ. ಮೊದಲು ಬರೆ ಮಂಚಿಕೇರಿ-ಹಾಸಣಗಿ ಆಗಿದ್ದ ನಕ್ಷೆಯಲ್ಲಿ ಈಗ ಬೊಮ್ಮನಹಳ್ಳಿ ಎಂಬ ಹೊಸ ಆವರಣ ಸೇರಿಕೊಂಡಿತು. ಮುಂಬೈಗೆ ಹೋಗಿ ಅದಾಗಲೇ 16 ವರ್ಷಗಳಾಗಿದ್ದ ನನಗೆ ನನ್ನ ಜಿಲ್ಲೆಯ ಹೊಸ ಬರಹಗಾರರ ಜೊತೆಗೆ ನಾಡಿನ ಮುಖ್ಯ ಮನಸ್ಸುಗಳಾದ ಟಿ.ಪಿ.ಅಶೋಕ, ವಿಜಯಶಂಕರ, ಕೆ.ವಿ.ಅಕ್ಷರ ಮತ್ತು ಸು.ರಂ.ಎಕ್ಕುಂಡಿ ಇವರ ಪ್ರತ್ಯಕ್ಷ ಒಡನಾಟ ಸಿಕ್ಕಿತು. ಅಲ್ಲಿ ಉಸ್ತುವಾರಿ ನಿರ್ದೇಶಕ ಮತ್ತು ಕಾಲಾಳು ಎರಡು ಒಂದೇ ಆದ ನೀಳಕಾಯದ ವ್ಯಕ್ತಿ ಒಬ್ಬರು ಹುರುಪು ಹಂಚುತ್ತ ಓಡಾಡಿಕೊಂಡಿದ್ದರು. ಅವರೇ ಬೊಮ್ಮನಹಳ್ಳಿಯ ಜಿ.ಟಿ.ಭಟ್, ಗಣಿತ ಮತ್ತು ವಿಜ್ಞಾನದ ಮಾಸ್ತರರಾದ ಅವರು ಕನ್ನಡ, ನಾಟಕ, ಯಕ್ಷಗಾನ, ಆಧುನಿಕ ರಂಗಭೂಮಿ, ಸಂಗೀತ ಈ ಎಲ್ಲ ವಿಷಯಗಳಲ್ಲಿ ‘ಗತಿ’ ಹೊಂದಿದವರಾಗಿದ್ದರು. ಆದಾಗಲೇ ನೀನಾಸಂನ ‘ಆಷಾಢದ ಒಂದು ದಿನ’ದಲ್ಲಿ ಪಾತ್ರ ವಹಿಸಿದವರಾಗಿದ್ದರು. ‘ನನ್ನ ತಂಗಿಗೊಂದು ಗಂಡು ಕೊಡಿ’, ‘ಜೋಕುಮಾರಸ್ವಾಮಿ’, ‘ಸಾಯೋ ಆಟ’ ನಾಟಕಗಳನ್ನು ನಿರ್ದೇಶಕರಾಗಿ ಆಡಿಸಿದ್ದರು. ನೇಪಥ್ಯವೇ ರಂಗದ ಮೇಲೆ ಬಂದಂತೆ ಅವರ ನಿಲುವು ಕಾಣುತ್ತಿತ್ತು. ಚಂದ್ರಕಾಂತ ಪೋಕಳೆ, ಕಮಲಾಕರ ಕಡವೆ, ಜೈರಾಮ ಹೆಗಡೆ, ಶೈಲಜಾ ಗೋರನಮನೆ ರಮಾನಂದ ಬನಕ್ಕೆ, ನಾಸು ಭರತನಹಳ್ಳಿ, ವಿಡಂಬಾರಿ, ಸುಬ್ರಾಯ ಮತ್ತಿಹಳ್ಳಿ, ನನ್ನ ಕಾಲೇಜು ದಿನಗಳ ದೋಸ್ತ್ ಯಲ್ಲಾಪುರದ ಪ್ರಮೋದ ಹೆಗಡೆ ಹೀಗೆ ಸಾಹಿತ್ಯಕ ಸಾಂಸ್ಕೃತಿಕ ಚಡಪಡಿಕೆಯ ಒಂದು ‘ಗೋಲೆ’ಯೇ ಅಲ್ಲಿತ್ತು. ಕಮಲಾಕರನಂತೂ ಪೂನಾದಿಂದಲೋ ಮೈಸೂರಿನಿಂದಲೋ ಬಂದಿದ್ದ ದುಂಡಿ ಭಟ್ಟರನ್ನು ಅಲ್ಲೇ ಕಂಡೆ. ಆ ವರುಷದ ತಿರುಗಾಟದ ನಾಟಕಗಳ ಜೊತೆಗೆ, ಪಂಡಿತ್ ಭೀಮಸೇನ್‌ ಜೋಶಿ ಮತ್ತು ಪಂಡಿತ್ ಹಾಸಣಗಿ ಗಣಪತಿ ಭಟ್ಟರ ಸಂಗೀತ ಕಛೇರಿಯೂ ಇತ್ತು.

ಜಿ.ಟಿ.ಭಟ್ ಮತ್ತು ನನ್ನ ಸಂಬಂಧಿ ಪದ್ಮಾಕರ್ ಫಾಯದೆ ಕೇವಲ ಸಹೋದ್ಯೋಗಿ ಅಷ್ಟೇ ಅಲ್ಲ, ಆತ್ಮೀಯ ಮಿತ್ರರು ಎಂಬುದು ಗೊತ್ತಾಯಿತು. ಜಿ.ಟಿ.ಭಟ್ ಮತ್ತು ಚಿದಂಬರರಾವ್ ಜಂಬೆ ಅವರ ದೋಸ್ತಿ ಮತ್ತು ಅವರಿಬ್ಬರೂ ಕಾಡಿನ ಕತ್ತಲೆಯಲ್ಲಿದ್ದ ಸಿದ್ದಿ ಜನಾಂಗದ ಪ್ರತಿಭಾವಂತರನ್ನು ರಂಗಭೂಮಿಯ ಸ್ಪಾಟ್ ಲೈಟಿಗೆ ತಂದ ಮಹತ್ವದ ಸಂಗತಿಯೂ ತಿಳಿಯಿತು. ಭಟ್ಟರ ಆ ಸಪೂರ ನೀಳ ನಿಲುವಿನಲ್ಲಿ ಅದೆಂಥ ಚೈತನ್ಯ, ಯಾವುದೇ ವಿಷಯದ ಚರ್ಚೆ ನಡೆಯುತ್ತಿದ್ದರೂ ಪಕ್ಕದಲ್ಲಿ ಹಾಯುತ್ತಿದ್ದ ಜಿ.ಟಿ.ಭಟ್ಟರು ಒಂದು ನಿಮಿಷ ನಿಂತು, ಆಲಿಸಿ ‘‘ಈಗ ಪುರುಸೊತ್ತಿಲ್ಲ. ಇಲ್ಲದಿದ್ದರೆ ನಿಮ್ಮ ಈ ಚರ್ಚೆಯಲ್ಲಿ ನಿಮಗಿಂತ ಚಲೋ ವಿಷಯ ಹೇಳಿದ್ದೆ’’ ಎನ್ನುವ ನಮುನೆಯ ಮುಖಭಾವ ಮಾಡಿ, ಕಣ್ಣು ಬೇಳೆ ಹಿಗ್ಗಿಸಿ ಮಾಯವಾಗುತ್ತಿದ್ದರು. ಕಷಾಯದ ಲೋಟ ಹಂಚುವುದರಿಂದ ಹಿಡಿದು ಕೈ ಮೇಲೆ ಮಾಡಿ ಚಪ್ಪಾಳೆ ಹೊಡೆಯುವ ತನಕದ ವಿವಿಧ ಚಟುವಟಿಕೆಗಳಲ್ಲಿ ಪಾಲ್ಗೊಂಡ ಎಳೆಯರಲ್ಲಿ ಜಿ.ಟಿ.ಭಟ್ಟರ ಚುರುಕಾದ ಮಕ್ಕಳೂ ಇದ್ದರು. ಆ ವಾತಾವರಣ ಬೊಮ್ಮನಹಳ್ಳಿಯ ಕುಟುಂಬದ ವಿಸ್ತರಣೆಯಂತೆಯೇ ಭಾಸವಾಗುತ್ತಿತ್ತು.

ಸಾಹಿತ್ಯ, ಕಾವ್ಯ, ಸಂಗೀತ, ನಾಟಕಗಳ ಸಂಯುಕ್ತ ನಶೆಯ ಈ ಆಪ್ತ ನಾಲೈದು ದಿನಗಳ ಸಹಯೋಗದ ಅವಿಸ್ಮರಣೀಯ ಭಾಗವೆಂದರೆ, ಒಂದು ರಾತ್ರಿಯ ಸಂಗೀತ ಬೈಠಕ್‌ನ ನಂತರ ನಡುರಾತ್ರಿಯಲ್ಲಿ ನಾವು ಕೆಲವು ಉಮೇದಿಯವರು ಜಿ.ಟಿ.ಭಟ್ಟರ ಆತ್ಮೀಯ ಆಹ್ವಾನದ ಮೇರೆಗೆ ಮಲಗಲು ಅವರ ಮನೆಗೆ ಬೆಳದಿಂಗಳಲ್ಲಿ ಆ ಮಣ್ಣಿನ ದಾರಿಯಲ್ಲಿ ನಡೆದುಕೊಂಡು ಹೋಗಿದ್ದು, ಕಾಡಿನ ರಸ್ತೆಯುದ್ದಕ್ಕೂ ಹರಟೆ, ನಗೆ ಚಾಟಿಕೆ. ಅಕ್ಷರಶಃ ಕಾಡುಹರಟೆ. ನಡುನಡುವೆ ಹಠಾತ್ ಕಾಡಿನ ಮೌನ. ‘ಇನ್ನೇನು ಬಂತ್ರಾ’ ಎಂಬ ಆಶ್ವಾಸನೆ. ಮನೆಗೆ ಹೋದ ತಕ್ಷಣ ಎಲ್ಲರೂ ಕೈಕಾಲು ತೊಳೆದುಕೊಂಡು ಅವರ ಅಟ್ಟಕ್ಕೆ ಹೋದೆವು. ಮಲೆನಾಡಿನ ಮದುವೆ ಮನೆಯಲ್ಲಿ ಬೀಗರಿಗೆಂದು ವ್ಯವಸ್ಥೆ ಮಾಡಿದಂತೆ ಸಾಲಾಗಿ 50 ಹಾಸಿಗಳನ್ನು ಕಂಬಳಿ ದಿಂಬುಗಳೊಂದಿಗೆ ಹಾಸಲಾಗಿತ್ತು. ಅಲ್ಲೂ ನಮ್ಮ ಕಾಡುಹರಟೆ ಮುಂದುವರೆಯಿತು. ಅಲ್ಲೊಂದು ಹಾರ್ಮೋನಿಯಂ(ಪಿಯಾನ್) ಪೆಟ್ಟಿಗೆ ಇತ್ತು. ಅದನ್ನೂ ಜಿ.ಟಿ.ಭಟ್ರೆ ನುಡಿಸಿದರು. ಜಿ.ಟಿ.ಭಟ್ಟರ ಪತ್ನಿ ಪಾರ್ವತಕ್ಕನೂ ಹುರುಪಿನಿಂದ ಹಾಡಿದರು. ರಂಗಗೀತೆ, ಗಝಲ್‌ಗಳು ಎಲ್ಲರಿಂದ ಹೊಮ್ಮಿದವು. ನಂತರ ಜಿ.ಟಿ.ಭಟ್ರೆ ‘‘ನಾಳೆ ಬೇಗ ಏಳುದದೆ ಮಲಗಿ ಮಲಗಿ’’ ಎಂದು ಹೇಳಿದರು. ಮಲಗಿದ ನಂತರವೂ ಕತ್ತಲಲ್ಲೇ ಹರಟೆ ಮುಂದುವರೆಯಿತು. ಹಿಂದಿನ ದಿನ ನೋಡಿದ್ದ ಬಿ.ವಿ.ಕಾರಂತರ ನಿರ್ದೇಶನದ ತಿರುಗಾಟದ ನಾಟಕ ಪುತಿನ ಅವರ ‘ಗೋಕುಲ ನಿರ್ಗಮನ’ದ ಬಗ್ಗೆ ಮಾತು ಬಂತು. ಅದರಲ್ಲಿ ಪೂರ್ತಿ ಕತ್ತಲಾವರಿಸಿದ ಒಂದು ದೃಶ್ಯದಲ್ಲಿ ಗೋಪಿಕೆಯರು ಊದಿನಕಡ್ಡಿಗಳನ್ನು ಕೈಲಿ ಹಿಡಿದು ಚಕ್ರಾಕಾರವಾಗಿ ತಿರುಗಿಸುತ್ತಾ ಕತ್ತಲಲ್ಲಿ ನಾನಾ ವಿನ್ಯಾಸಗಳನ್ನು ಮೂಡಿಸಿದ್ದರು. ನನಗೇಕೋ ಅದು ನಾಟಕದ ರಂಗರೂಪದ ಒಕ್ಕಣೆಗೆ ಹೊಂದದ ‘ಗಿಮಿಕ್‌’ನಂತೆ ಅನಿಸಿತ್ತು. ಅಳುಕಿನಿಂದಲೇ ಅದನ್ನು ಹೇಳಿದೆ. ಆಗ “ಕುರ್ತಕೋಟಿಯವರ ಪ್ರಕಾರ ಬಿ.ವಿ.ಕಾರಂತರಿಗೆ ಕತ್ತಲನ್ನು ತೋರಿಸುವುದಿತ್ತು. ಕತ್ತಲಲ್ಲಿ ಕತ್ತಲು ಕಾಣುವುದಿಲ್ಲ. ಬೆಳಕಲ್ಲಿ ಕತ್ತಲು ಇರುವುದಿಲ್ಲ. ಹೀಗಾಗಿ ಕಿಡಿ ರೇಖೆಗಳ ಮೂಲಕ ಕತ್ತಲು ಸ್ಪುಟವಾಗಿ ತೋರುತ್ತದೆ’’ ಎಂದು ಟಿ.ಪಿ.ಅಶೋಕ ಹೇಳಿದ್ದು ಅಷ್ಟೇ ಉಜ್ವಲವಾಗಿ ಮನಸ್ಸಲ್ಲಿ ಉಳಿದಿದೆ.

ಪೂವಾರ್ಧದ ಎಳೆಯ ದಿನಗಳ ಮುಗ್ಧ ಅಮಾಯಕ ಮಂಚಿಕೇರಿ ಮತ್ತು ಕಲೆ, ಸಾಹಿತ್ಯ, ಸಂಗೀತ, ಯಕ್ಷಗಾನಗಳ ಕಿಟಕಿಗಳ ಮೂಲಕ ಹೊಸ ವ್ಯಕ್ತಿತ್ವ ಪಡೆದ 25 ವರ್ಷಗಳ ನಂತರದ ಮಂಚಿಕೇರಿ -ಇವೆರಡೂ ನನ್ನ ಸಂವೇದನೆಯನ್ನು ಹಿಗ್ಗಿಸಿವೆ. ಪಠ್ಯ ಮತ್ತು ಪಠ್ಯೇತರಗಳ ಹದವಾದ ಎರಕದಂತಿರುವ ಜಿ.ಟಿ.ಭಟ್ಟರ ಜೀವನ ಪ್ರೇಮ ಮತ್ತು ಸಮಾಜಶೀಲತೆ ಈ ಆವರಣವನ್ನು ಪೋಷಿಸುತ್ತ ಬಂದಿದೆ. ಸಿದ್ದಿ ಪ್ರತಿಭೆಗಳನ್ನು ರಂಗಭೂಮಿಗೆ ತಂದಷ್ಟೇ ಅವರ ಇನ್ನೊಂದು ಮಹತ್ವದ ಪ್ರಯತ್ನ ಚತುರ್-ಚತುರೆಯರಾದ ತಮ್ಮ ಮಕ್ಕಳನ್ನೇ ತರಬೇತುಗೊಳಿಸಿ ಮಹಿಳಾ ಯಕ್ಷಗಾನವನ್ನು ಆ ಕಾಲದಲ್ಲಿ ರೂಪಿಸಿದ್ದು, ಹಾಲಿನ ಡೈರಿ ರೂಪುಗೊಳ್ಳಲು ಸಹ ಅವರು ಹೆಣಗಿದ್ದಾರೆ. ಶಿಕ್ಷಕನೊಬ್ಬ ಶಾಲೆಯ ಗೋಡೆಗಳಾಚೆಯೂ ಹೀಗೆ ಸಮಾಜಕ್ಕೆ, ಊರಿಗೆ ಸಲ್ಲುವುದೇ ನಿಜವಾದ ಅಧ್ಯಾತ್ಮ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT