ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಲಚಕ್ರದಲ್ಲಿ ವೃದ್ಧ ದಂಪತಿಯ ಯಾನ

Published 15 ಜೂನ್ 2024, 23:30 IST
Last Updated 15 ಜೂನ್ 2024, 23:30 IST
ಅಕ್ಷರ ಗಾತ್ರ

ಕಾಲಚಕ್ರ ಎಂಬ ಮರಾಠಿ ಮೂಲ (ಜಯವಂತ ದಳ್ವಿ) ನಾಟಕದ ಕನ್ನಡದ ಅನುವಾದವನ್ನು (ಎಚ್.ಪಿ.ಕರ್ಕೇರಾ) ರಂಗ ಸಮೂಹ ಮಂಚಿಕೇರಿ ಜೂನ್‌ 9 ರಂದು ಬೆಂಗಳೂರಿನ ಚೌಡಯ್ಯ ಸ್ಮಾರಕ ಭವನದಲ್ಲಿ ಪ್ರದರ್ಶಿಸಿತು. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲ್ಲೂಕಿನ ಗ್ರಾಮೀಣ ಪ್ರದೇಶ ಮಂಚಿಕೇರಿಯ ರಂಗ ಸಮೂಹ ಹವ್ಯಾಸಿ ಕಲಾವಿದರು ಮೂರು ವರ್ಷಗಳ ಹಿಂದೆ ಹುಲುಗಪ್ಪ ಕಟ್ಟಿಮನಿ ಅವರ ನಿರ್ದೇಶನದಲ್ಲಿ ಮೊದಲ ಪ್ರದರ್ಶನ ನೀಡಿದರು. ಆ ಬಳಿಕ ಹಲವು ಈ ನಾಟಕ ಪ್ರದರ್ಶನಗಳಾಗಿವೆ. 

ಇಂದು ನಮ್ಮ ಸಮಾಜದಲ್ಲಿ ಹೆಚ್ಚುತ್ತಿರುವ ವೃದ್ಧ ತಂದೆ ತಾಯಿಯರ ಸಮಸ್ಯೆಗಳ ಸುತ್ತ ‘ಕಾಲಚಕ್ರ’ ತಿರುಗುತ್ತದೆ. ಇನಾಂದಾರ್-ರುಕ್ಮಿಣಿ ಬಾಯಿ ವೃದ್ಧ ದಂಪತಿಗೆ ವಿಶ್ವ, ಶರತ್‌ ಇಬ್ಬರು ಮಕ್ಕಳು.  ವಿಶ್ವನ ಓದು ಹೈಸ್ಕೂಲಿಗೆ ನಿಂತಿದೆ. ತಂದೆ ಮಗ ಗಡಿಯಾರ ಅಂಗಡಿಯಲ್ಲಿ ದುಡಿದು ಶರತ್‌ನನ್ನು ಓದಿಸಿದ್ದಾರೆ. ದೊಡ್ಡ ಕಂಪೆನಿಯಲ್ಲಿ ಕೆಲಸದಲ್ಲಿರುವ ಅವನು ಮಡದಿ ಮಕ್ಕಳೊಂದಿಗೆ ದೆಹಲಿಯಲ್ಲಿದ್ದಾನೆ. ಊರಲ್ಲಿರುವ ಹಿರಿಯ ಮಗ ಸೊಸೆ ಜೊತೆ ವೃದ್ಧ ತಂದೆ ತಾಯಿಯರಿದ್ದಾರೆ. ಆದರೆ ಸೊಸೆ ಮಗ ಇಬ್ಬರಿಗೂ ತಂದೆ ತಾಯಿ ಜೊತೆ ಸರಿಬರುತ್ತಿಲ್ಲ. ಅವರಿಗೆ ಖರ್ಚು ಮಾಡುವ ಹಣ ವ್ಯರ್ಥವೆಂದು ತೋರುತ್ತಿದೆ; ಯಾಕೆಂದರೆ ಮಗನನ್ನು ಓದಿಸಲು ಹೆಚ್ಚಿನ ಹಣಬೇಕು. ಹೆಂಡತಿಯ ನಿಷ್ಠುರ ನಡೆಗಳನ್ನಾತ ನಿಯಂತ್ರಿಸಲಾರ. ಮೊಮ್ಮಗನಿಗೆ ರೆಸಿಡೆನ್ಶಿಯಲ್ ಸ್ಕೂಲ್ ಯಾಕೆ? ಮನೆಯಿಂದಲೇ ಶಾಲೆಗೆ ಹೋಗಬಹುದಲ್ಲ ಎಂಬುದು ಅಜ್ಜ ಅಜ್ಜಿಯರ ವಿಚಾರ. ಎರಡನೇ ಮಗ ಕೆಲವು ದಿನಗಳಿಗೂ ದೆಹಲಿ ಬರುವಂತೆ ತಂದೆ-ತಾಯಿಗಳನ್ನು ಆಹ್ವಾನಿಸುವುದಿಲ್ಲ. ಅವರೆಲ್ಲಾದರೂ ಅಲ್ಲೇ ಉಳಿದರೆ ಎಂಬ ಆತಂಕವೂ ಇದೆ. ಅಣ್ಣ ತಮ್ಮಂದಿರು ಜೊತೆ ಸೇರಿ ತಂದೆ ತಾಯಿಯರನ್ನು ಉಚಿತವಾದೊಂದು ವೃದ್ಧಾಶ್ರಮಕ್ಕೆ ಸೇರಿಸುತ್ತಾರೆ.

ಈ ನಡುವೆ ವೃದ್ಧ ತಂದೆ ಪತ್ರಿಕೆಯಲ್ಲೊಂದು ಜಾಹೀರಾತು ಕೊಡುತ್ತಾರೆ. ಮಕ್ಕಳಿಲ್ಲದವರು ದತ್ತು ಮಕ್ಕಳನ್ನು ಪಡೆಯುವಂತೆ, ಮನೆಯಲ್ಲಿ ಹಿರಿಯರು ವೃದ್ಧರಿಲ್ಲದವರು ಯಾರಾದರೂ ವೃದ್ಧ ದಂಪತಿಯನ್ನು ದತ್ತು ಪಡೆಯುವುದಾದರೆ ವೃದ್ಧ ದಂಪತಿ ಸಿದ್ಧರಿದ್ದಾರೆ. ವೃದ್ಧಾಶ್ರಮದಲ್ಲಿ ಇರಲಾರದೆ ಓಡಿಬಂದ ಈ ವೃದ್ಧರನ್ನು ಜಾಹೀರಾತು ನೋಡಿದ ತತ್ವಶಾಸ್ತ್ರದ ಪ್ರೊಫೆಸರ್‌ಗಳಾದ ರಾಘವ ಕರಮ್‌ಕರ್ ಇರಾವತಿ ದಂಪತಿ ದತ್ತು ಪಡೆಯುತ್ತಾರೆ. ಕರಮ್‌ಕರ್‌ ಮನೆಗೆ ಬಂದು ಹೋಗುವ ಹಲವರ ಮೂಲಕ ಮನುಷ್ಯ ಸ್ವಭಾವದ ಉನ್ನತ-ಕ್ಷುಲ್ಲಕ ಮುಖಗಳು ಅನಾವರಣಗೊಳ್ಳುತ್ತವೆ. ವೃದ್ಧ ಇನಾಂದಾರರ ಶಾಲೆಯ ಗೆಳತಿ ಶರದಿನಿ ಬಗ್ಗೆ ಅವರಿಗೆ ಸದಾ ಹಸಿರು ನೆನಪು. ರುಕ್ಮಿಣಿಬಾಯಿ ಸಾಯುವಾಗ ಮಗನಿಗೆ ನೀವು ಶರತ್ ಎಂಬ ಹೆಸರಿಟ್ಟುದು ಶರದಿನಿಗೋಸ್ಕರವೆ? ಎಂದು ಕೇಳುತ್ತಾಳೆ. ಕೊನೆಯಲ್ಲಿ ಅವರಿಗೊಂದು ದೊಡ್ಡ ಲಾಟರಿ ಬಹುಮಾನ ಬಂದ ದಿನ ವೃದ್ಧ ಇನಾಂದಾರರೂ ತೀರಿಕೊಳ್ಳುತ್ತಾರೆ. ಕರಮ್‌ಕರ್‌ ಮನೆಗೆ ಬರುವ ಕುರುಡರು ಬಾಬುರಾವ್ ಬಾಲ್ಕನಿಯಲ್ಲಿ ಕಾಗೆಗಳಿಗೆ ಹಾಕುವ ಬ್ರೆಡ್‌ ಚೂರುಗಳು ನಮ್ಮ ಮಾನವೀಯತೆಯ ವೈರುಧ್ಯಗಳನ್ನು ಎತ್ತಿ ಕಾಣಿಸುತ್ತವೆ.

ಮಿತ ಆದಾಯದ ಮಧ್ಯಮ ವರ್ಗದ ಕೌಟುಂಬಿಕ ಸಮಸ್ಯೆಗಳಿಗೆ ಪರಿಹಾರವೇನು ಎಂಬುದನ್ನು ನಾಟಕ ಗಂಭೀರವಾಗಿ ಚಿಂತಿಸುತ್ತದೆ. ದೃಶ್ಯ ವಿವರಗಳಿಂದ ಚುರುಕಾಗಿ ಸಾಗುವ ನಾಟಕದಲ್ಲಿ ಅರ್ಥಪೂರ್ಣ ಹಳೆ ಕನ್ನಡ ಚಿತ್ರಗೀತೆಗಳನ್ನು ಬಳಸಿ (ಉದಾ ಆಡಿಸಿ ನೋಡು ಬೀಳಿಸಿ ನೋಡು, ನಾವಿಕನಾರೋ ನಡೆಸುವುದೆಲ್ಲೊ ಇತ್ಯಾದಿ) ಭಾವಪೂರ್ಣ ಕೊಂಡಿಗಳನ್ನು ಬೆಸೆಯಲಾಗಿದೆ. ಪಾತ್ರ ಪೋಷಣೆಗೆ ಪೂರಕವಾದ ಸಹಜ ಅಭಿನಯವಿರುವಂತೆ ಹುಲಗಪ್ಪ ಕಟ್ಟಿಮನಿ ನಾಟಕವನ್ನು ನಿರ್ದೇಶಿಸಿದ್ದಾರೆ. ರಂಗ ಚಲನೆ ವಾಸ್ತವತೆಗೆ ಪೂರಕವಾದ ಸರಳ ರಂಗ ಸಜ್ಜಿಕೆ. ಬೆಳಕು (ನಾಗರಾಜ್‌ ಹೆಗಡೆ ಜಾಲಿಮನೆ) ಹಾಗೂ ಸಂಗೀತ (ಕಿರಣ್‌ ಹೆಗಡೆ / ಪ್ರಕಾಶ್‌ ಭಟ್‌) ನಾಟಕದ ಭಾವ ಪ್ರಪಂಚಕ್ಕೆ ಪೂರಕವಾಗಿ ಯಶಸ್ವಿಯಾಗಿವೆ. ತಂಡದ ಅಭಿನಯ ಸಂಭಾಷಣೆಗಳು ಉನ್ನತ ಮಟ್ಟದಲ್ಲಿತ್ತು. ಮುಖ್ಯವಾಗಿ ವೃದ್ಧ ಇನಾಂದಾರ್‌ (ನಾಗರಾಜ್‌ ಹೆಗಡೆ ಜಾಲಿಮನೆ) ಬಾಬೂರಾವ್‌ (ಎಂ ಕೆ ಭಟ್‌) ವಿಶ್ವ (ಸುಬೋಧ ಹೆಗಡೆ) ರುಕ್ಮಿಣಿ ಬಾಯಿ (ನಿರ್ಮಲಾ ಹೆಗಡೆ) ಮುಂತಾದವರ ಅಭಿನಯ ಹೆಚ್ಚಿನ ಗಮನ ಸೆಳೆಯುತ್ತಿತ್ತು.

ಮರಾಠಿ ರಂಗಭೂಮಿ ವರ್ತಮಾನದ ಸಮಸ್ಯೆಗಳಿಗೆ ತೀವ್ರವಾಗಿ ಸ್ಪಂದಿಸುತ್ತದೆ. ಸಾಂಕೇತಿಕವಾಗಿ ಕೆಟ್ಟು ಹೋಗಿರುವ ಹಿರಿಯರ ಗಡಿಯಾರದ ಕಾಲ ಅಲ್ಲಿಗೆ ನಿಂತಿದೆ. ಮಗನಿಗೆ ಅದನ್ನು ಸರಿಪಡಿಸಿ ಚಲಿಸುವಂತೆ ಮಾಡಲೂ ಆಗುವುದಿಲ್ಲ. ಆದರೆ ಸಂಸಾರದಲ್ಲಿ ಕಾಲಚಕ್ರ ಚಲಿಸಲೇ ಬೇಕಾಗುತ್ತದೆ. ಬದುಕು ಕೇವಲ ವೈಚಾರಿಕ, ವ್ಯಾವಹಾರಿಕ ಪ್ರಜ್ಞೆಯಿಂದ ನಡೆಯುವುದಿಲ್ಲ. ಸಂಸಾರದ ಮೂಲ ಸತ್ವ ಬದುಕಿನ ಭಾವಸತ್ಯದಲ್ಲಿದೆ ಮತ್ತು ಮಮತೆ ಮಾನವೀಯತೆಗಳು ಅದರ ಮೂಲ ತತ್ವ ಎಂಬುದನ್ನು ನಾಟಕ ತೋರಿಸಿಕೊಡುತ್ತದೆ. ಅದನ್ನು ಕಾಣಿಸಿಕೊಡುವಲ್ಲಿ ಗ್ರಾಮೀಣ ಮಂಚಿಕೇರಿಯ ಹವ್ಯಾಸಿ ಕಲಾವಿದರು ವೃತ್ತಿನಿರತ ಕಲಾವಿದರಷ್ಟೆ ಯಶಸ್ವಿಯಾಗಿದ್ದಾರೆ. ಶಾಂತ ಮನಸ್ಸಿನಿಂದ ಪ್ರಚಲಿತ ಸಮಸ್ಯೆಯೊಂದರ ಬಗೆಗೆ ಗಂಭೀರವಾಗಿ ಚಿಂತಿಸುವಂತೆ ಮಾಡುವಲ್ಲಿ ನಾಟಕ ಯಶಸ್ವಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT