ತಡರಾತ್ರಿ 2.30

ಅರೆಬರೆ ನಿದ್ದೆ, ಮೈ ಪೂರ್ತಿ ಆವರಿಸಿಕೊಂಡಿದ್ದ ಚಳಿಯನ್ನು ಒದ್ದು ಮೂರು ಬೈಕ್ಗಳಲ್ಲಿ ನಾವು ಆರು ಮಂದಿ ಹೊರಟು ನಿಂತಾಗ ಗಂಟೆ ಮೂರಾಗಿತ್ತು. ಚಂದಿರ ಪ್ರಕಾಶಮಾನವಾಗಿದ್ದ. ಬೆಂಗಳೂರಿನ ರಸ್ತೆಗಳಲ್ಲಿ ವಾಹನ ಸಂಚಾರ ವಿರಳವಾಗಿತ್ತು. ಸಿಗ್ನಲ್ ಲೈಟ್ಗಳು ವಿಶ್ರಾಂತಿಯಲ್ಲಿದ್ದವು. ಬೈಕರ್ಗಳ ಗುಂಪೊಂದು ಮೆರವಣಿಗೆ ಹೊರಟಿತ್ತು. ಟೋಲ್ಗೇಟ್ ಬಳಿ ಸೈಕಲ್ನವ ಕೊಟ್ಟ ಫ್ಲಾಸ್ಕಿನಲ್ಲಿ ತುಂಬಿಸಿದ್ದ ‘ಗರಂ ಚಾಯ್’ ಜೊತೆಗೆ ಖಡಕ್ ಚಕ್ಕುಲಿ ದೇಹದ ಒಳಹೊಕ್ಕಾಗ ಏನೋ ಸಂಚಾರವಾದಂತಾಗಿ ಹೊಸ ಚೈತನ್ಯ ಮೂಡಿತು.

ಈ ಹೊತ್ತಿಗಾಗಲೇ ನಾಲ್ಕು ಗಂಟೆಗೆ ಇನ್ನೂ ಹತ್ತು ನಿಮಿಷ ಬಾಕಿ ಇತ್ತು.

ಅಲ್ಲಿ ಭಾರಿ ಜನ ದಟ್ಟಣೆ. ವಾಹನಗಳ ದಂಡೇ ರಸ್ತೆಯ ಇಕ್ಕೆಲಗಳಲ್ಲಿ ಸಾಲುಗಟ್ಟಿದ್ದವು. ಗುಂಪು ಗುಂಪಾಗಿ ನಿಂತಿದ್ದ ಜನ ಅದರ ನಿರೀಕ್ಷೆಯಲ್ಲಿದ್ದರು. ದೇವರ ದರ್ಶನಕ್ಕಿದ್ದಂತೆ ಉದ್ದನೆಯ ಸಾಲೂ ಇತ್ತು. ಭಕ್ತರಂತೆ ತಾಳ್ಮೆಯೂ ಇತ್ತು. ಆದರೆ ವಿಐಪಿ ಸಾಲು ಇರಲಿಲ್ಲ ಎನ್ನುವುದೇ ಸಮಾಧಾನ. ಚಳಿಯಿಂದ ಮೈನಡುಗುತ್ತಿದ್ದರೂ ಅಲ್ಲಿದ್ದವರ ಉತ್ಸಾಹ ಕಡಿಮೆಯಾಗಿರಲಿಲ್ಲ. ಪೇಲವ ಮೋರೆ ಹೊತ್ತುಕೊಂಡು, ನಿಂತಲ್ಲೇ ನಿದ್ದೆ ಮಾಡುತ್ತಿದ್ದವರು, ಉಮೇದಿನಿಂದ ಗಡಿಬಿಡಿ ಮಾಡುತ್ತಿದ್ದವರೂ ಇದ್ದರು. ಒಟ್ಟಿನಲ್ಲಿ ಹಳ್ಳಿಯ ಜಾತ್ರೆಯ ವಾತಾವರಣ ಅಲ್ಲಿತ್ತು. ಇದಕ್ಕಿದ್ದಂತೆಯೇ ಮಸಾಲೆಯಲ್ಲಿ ಬೆಂದ ಮಾಂಸದ ಹಾಗೂ ತುಪ್ಪದ ಪರಿಮಳ ಗಾಳಿಯಲ್ಲಿ ತೇಲಿ ಬಂದು ಅಲ್ಲಿದ್ದವರ ಮೂಗು ಅರಳಿಸಿತು. ಕಣ್ಣುಮುಚ್ಚಿ ಆ ಪರಿಮಳವನ್ನು ಆಸ್ವಾದಿಸಬೇಕು ಅನ್ನುವಷ್ಟರಲ್ಲಿ ಏನೋ ಗಲಿಬಿಲಿ, ತರಾತುರಿ.

ಇದು ಪ್ರತಿ ಭಾನುವಾರ ಮುಂಜಾನೆ ಬೆಂಗಳೂರಿನ ಹೊರವಲಯದ ಹೊಸಕೋಟೆಯಲ್ಲಿ ಕಂಡು ಬರುವ ಸಾಮಾನ್ಯ ದೃಶ್ಯಗಳು. ‘ಹೊಸಕೋಟೆ ದಮ್ ಬಿರಿಯಾನಿ’ ಅಂಗಡಿಗಳ ಮುಂದೆ ಆ ದಿನ ಇಂಥ ವಾತಾವರಣ ಇರುತ್ತದೆ. ಬಿರಿಯಾನಿ ಪ್ರಿಯರು ಮುಂಜಾನೆಯೇ ‘ಬಾಡು’ ಸವಿಯಲು ದೂರದ ಊರುಗಳಿಂದ ಬರುತ್ತಾರೆ. ಗಂಟೆಗಟ್ಟಲೆ ಕಾದು, ಉದ್ದದ ಸರತಿಯಲ್ಲಿ ನಿಂತು, ಜಾಗ ಸಿಕ್ಕಿದಲ್ಲೇ ನಿಂತೋ, ಕುಳಿತೋ ಬಿರಿಯಾನಿ ಸವಿಯುತ್ತಾರೆ. ಸೂರ್ಯ ಕಣ್ಣು ಬಿಡುವ ಮೊದಲೇ ಬಿರಿಯಾನಿಗಾಗಿ ಕಾದು ಕೂರುವ ವ್ಯಾಮೋಹ ‘ಪೀಕ್ ಬೆಂಗಳೂರು’ ಮೊಮೆಂಟ್ಗಳಲ್ಲಿ ಒಂದು. ಸಾಮಾಜಿಕ ಜಾಲತಾಣಗಳಲ್ಲಿ ‘ಬೆಂಗಳೂರೂಸ್ ಫೇಮಸ್ ಫೋರ್ ಎಎಂ ಬಿರಿಯಾನಿ’ ಎಂದೇ ಜನಜನಿತ.

ಹೊಸಕೋಟೆಯಿಂದ ಕೋಲಾರಕ್ಕೆ ಹೋಗುವ ರಸ್ತೆಯ ಎಡಬದಿಯಲ್ಲಿರುವ ‘ಮಣಿ ದಮ್ ಬಿರಿಯಾನಿ’ಯಲ್ಲಿ ಮುಂಜಾನೆ ಬಿರಿಯಾನಿ ತಿನ್ನಬೇಕೆನ್ನುವ ಹಲವು ದಿನಗಳ ಪ್ಲಾನ್ ಸಾಕಾರಗೊಂಡಿತ್ತು. ನಾಲ್ಕೈದು ದೊಡ್ಡ ಹಂಡೆಗಳಲ್ಲಿ ಬಿರಿಯಾನಿ ತಯಾರಿಸಿ ಇಡಲಾಗಿತ್ತು. ತೆರೆದಿದ್ದ ಒಂದು ಹಂಡೆಯಿಂದ ಬರುತ್ತಿದ್ದ ಹಬೆ ಅದರ ತಾಜಾತನವನ್ನು ಸೂಚಿಸುತ್ತಿತ್ತು. ಅದರ ಸುವಾಸನೆಯನ್ನು ಆಘ್ರಾಣಿಸುತ್ತಲೇ, ಸವಿಯಲು ನಾ ಮುಂದು ತಾ ಮುಂದು ಎಂದು ಮುಂದಡಿ ಇಡುತ್ತಿದ್ದರು. ಕಬಾಬ್ಗಾಗಿ ಬೇರೆಯದೇ ಸರತಿ ಪಕ್ಕದಲ್ಲಿ ಇತ್ತು.

ಹಂಡೆಯ ಸುತ್ತಲೂ ನಿಂತಿದ್ದ ಏಳೆಂಟು ಮಂದಿ ತಟ್ಟೆಗೆ ಬಡಿಸುವುದರಲ್ಲಿ, ಪಾರ್ಸೆಲ್ ಕಟ್ಟುವುದರಲ್ಲಿ ಬಿಡುವಿಲ್ಲದೆ ತೊಡಗಿಕೊಂಡಿದ್ದರು. ಟೋಕನ್ ಹಾಗೂ ವಿತರಣಾ ಕೌಂಟರ್ಗಳಲ್ಲಿ ಜನ ತಮ್ಮ ಸರತಿಗಾಗಿ ಉತ್ಸಾಹದಿಂದ ಕಾಯುತ್ತಿದ್ದರು. ತಕ್ಕ ಮಟ್ಟಿಗೆ ಶಿಸ್ತು ಪಾಲಿಸಿದ್ದರಿಂದ ಅಲ್ಲಿದ್ದ ಬೌನ್ಸರ್ಗಳಿಗೆ ಹೆಚ್ಚಿನ ಕೆಲಸ ಇರಲಿಲ್ಲ. ಜನರು ಸರತಿ ತಪ್ಪದಂತೆ ಅವರು ಹದ್ದಿನ ಕಣ್ಣಿಟ್ಟಿದ್ದರು. ತಟ್ಟೆ ತುಂಬಾ ಸಾಕಷ್ಟು ಮಾಂಸದ ತುಂಡುಗಳು ಹಾಗೂ ಬಿರಿಯಾನಿ ಸಿಕ್ಕವರ ಮುಖದಲ್ಲಿ ಹಬ್ಬದ ಕಳೆ, ತಿನ್ನುತ್ತಿದ್ದವರದ್ದೋ ಬೇರೆಯದೇ ಭಾವ. ಸ್ನೇಹಿತರೊಂದಿಗೆ, ಕುಟುಂಬದೊಂದಿಗೆ, ಸಂಗಾತಿಯೊಂದಿಗೆ ಬಂದಿದ್ದವರು ತಮ್ಮದೇ ಲೋಕ ಸೃಷ್ಟಿಸಿಕೊಂಡಿದ್ದರು.

‘ಬೆಳಿಗ್ಗೆ 3.30ಕ್ಕೆ ಮನೆಯಿಂದ ಹೊರಟೆವು. ಮಲಗುವಾಗಲೇ ಗಂಟೆ ಹನ್ನೆರಡು ಕಳೆದಿತ್ತು. ರಾತ್ರಿಯ ಊಟವೇ ಜೀರ್ಣವಾಗಿಲ್ಲ. ಇನ್ಸ್ಟಾಗ್ರಾಮ್ನಲ್ಲಿ ನೋಡಿ, ಇಲ್ಲಿಗೆ ಬಂದೆವು. ಇಪ್ಪತ್ತು ನಿಮಿಷ ಕಾದ ಬಳಿಕ ಟೋಕನ್ ಸಿಕ್ಕಿತು. ಬಿರಿಯಾನಿಗಾಗಿ ಹತ್ತು ನಿಮಿಷ ಕಾದೆವು. ನಮ್ಮಲ್ಲೊಬ್ಬ ಕಬಾಬ್ಗಾಗಿ ಇನ್ನೊಂದು ‘ಕ್ಯೂ’ನಲ್ಲಿ ಇಪ್ಪತ್ತು ನಿಮಿಷ ಕಾದಿದ್ದ. ಕುಳಿತುಕೊಳ್ಳಲೂ ಆಗದಷ್ಟು ಜನ ತುಂಬಿದ್ದಾರೆ. ನಿಂತುಕೊಂಡೇ ತಿನ್ನುತ್ತಿದ್ದೇವೆ. ಬಿಸಿಬಿಸಿ ಬಿರಿಯಾನಿ ಮುಂದೆ ಚಳಿ
ಲೆಕ್ಕಕ್ಕೇ ಇಲ್ಲ’ ಎಂದು ಬಾಣಸವಾಡಿಯ ನಿತಿನ್ ಹೇಳುವಾಗ ಐದುಗಂಟೆ ಇಪ್ಪತ್ತು ನಿಮಿಷವಾಗಿತ್ತು.

ಅಲ್ಲಿ ಇಟ್ಟಿರುವ ಮೇಜು, ಕುರ್ಚಿಗಳೆಲ್ಲ ತುಂಬಿದ್ದವು. ತಮ್ಮ ಗುಂಪಿನೊಂದಿಗೆ ‘ಬಿರಿಯಾನಿ ಗೋಷ್ಠಿ’ ನಡೆಸುತ್ತಿದ್ದವರು, ಬರುತ್ತೇನೆಂದು ಕೊನೆ ಕ್ಷಣದಲ್ಲಿ ಕೈಕೊಟ್ಟವರಿಗೆ ವಿಡಿಯೊ ಕಾಲ್ ಮಾಡುತ್ತಿದ್ದ ಗೆಳೆಯರು, ಫೋಟೊಗಳಿಗಾಗಿ ಬಿರಿಯಾನಿ ಪ್ಲೇಟುಗಳನ್ನು ಚೆಂದವಾಗಿ ಜೋಡಿಸಿ ಬೇರೆಯವರ ತಾಳ್ಮೆ ಪರೀಕ್ಷೆ ಮಾಡುತ್ತಿದ್ದವರು, ವಿವಿಧ ಭಂಗಿಗಳಲ್ಲಿ ಚಿತ್ರೀಕರಣ ಮಾಡುತ್ತಿದ್ದ ರೀಲ್ಸ್ ಪ್ರಿಯರು, ಜೋರಾಗಿ ಮಾತನಾಡುತ್ತ, ಜೋಕುಗಳನ್ನು ಸಿಡಿಸಿ ಬಿರಿಯಾನಿ ಸವಿಯುತ್ತಿದ್ದವರು, ಗುಂಪಿನಿಂದ ತುಸು ದೂರ ನಿಂತಿದ್ದ ‘ನಾನು ಓನ್ಲಿ ವೆಜ್’ ಗೆಳೆಯರು, ಮಟನ್ ಇಷ್ಟವಿಲ್ಲದೆ ‘ಕುಷ್ಕ’ ಮಾತ್ರ ತಿನ್ನುತ್ತಿದ್ದವರೂ ಇದ್ದರು. ಅಲ್ಲಿ ಚೇತೋಹಾರಿ ವಾತಾವರಣವಿತ್ತು.

‘ನಾವು ಎಂಟು ಮಂದಿ ನಿನ್ನೆ ಸಂಜೆಯೇ ಚಿಕ್ಕಬಳ್ಳಾಪುರಕ್ಕೆ ಬಂದು ಸ್ನೇಹಿತನ ಮನೆಯಲ್ಲಿ ಉಳಿದುಕೊಂಡಿದ್ದೆವು. ಬೆಳಿಗ್ಗೆ 3 ಗಂಟೆಗೆ ಎದ್ದು 50 ಕಿಲೊಮೀಟರ್ ದಾರಿ ಕ್ರಮಿಸಿ ಇಲ್ಲಿಗೆ ಬಂದೆವು. ಇಲ್ಲಿನ ಜನಸಂದಣಿ ಅಚ್ಚರಿಯುಂಟು ಮಾಡಿತು. ಆಂಧ್ರ ಬಿರಿಯಾನಿಯಷ್ಟು ಖಾರ ಇರದಿದ್ದರೂ, ರುಚಿ ಬೇರೆ ಇದೆ. ಬಾಸ್ಮತಿ ಅಕ್ಕಿ ಇದ್ದರೆ ಚೆನ್ನಾಗಿರುತ್ತಿತ್ತು. ಮಾಂಸದ ಪ್ರಮಾಣ, ಬೇಯಿಸಿರುವ ಹದ ಎಲ್ಲವೂ ಅಚ್ಚುಕಟ್ಟು. ಒಂದು ಪ್ಲೇಟಿನಲ್ಲಿ ಇಬ್ಬರು ತಿನ್ನುವಷ್ಟು ಪ್ರಮಾಣ ಇದೆ. ಬೆಳ್ಳಂಬೆಳಗ್ಗೆ ಸ್ನೇಹಿತರೊಂದಿಗೆ ಬರುವುದು, ಬೆಂಗಳೂರಿನ ವಾತಾವರಣವನ್ನು ಆಸ್ವಾದಿಸುವುದು ಖುಷಿ’ ಎಂದು ಆಂಧ್ರಪ್ರದೇಶದ ಅನಂತಪುರದ ದಿನೇಶ್ ಹೇಳಿದರು.

ಸೂರ್ಯ ಮೂಡುವ ಹೊತ್ತಿಗೆ 300–500 ಮಂದಿ ಬಿರಿಯಾನಿ ಸವಿದು ಜಾಗ ಖಾಲಿ ಮಾಡಿದ್ದರು.

ಮುಂಜಾನೆಯ ಬಿರಿಯಾನಿ ತಿನ್ನಲು ಬರುವವರ ಪೈಕಿ ಬಹುಪಾಲು ಮಂದಿ ಬೆಂಗಳೂರು ಹಾಗೂ ಅಕ್ಕಪಕ್ಕದ ಜಿಲ್ಲೆಯವರು. ಹೊರಗಿನವರಲ್ಲಿ ಬಹುಪಾಲು ಮಂದಿ ತೆಲುಗು ಮಾತನಾಡುವವರು. ಕೇರಳ ಹಾಗೂ ತಮಿಳುನಾಡಿನಿಂದ ಬಂದವರೂ ಮಾತಿಗೆ ಸಿಕ್ಕರು. ಐಟಿ ಉದ್ಯೋಗಿಗಳು, ರಾತ್ರಿ ಪಾಳಿ ಮುಗಿಸಿ ಬಂದ ಕೆಲಸಗಾರರು, ಡ್ರೈವರ್ಗಳು, ನೈಟ್ ಔಟಿಂಗ್ ತೆರಳಿದವರು, ಬೇರೆ ಊರುಗಳಿಗೆ ತೆರಳುವವರು, ಎಲ್ಲಿಂದಲೋ ನಗರದಲ್ಲಿ ಕೆಲಸಕ್ಕೆಂದು ಬರುವವರು, ಕ್ರಿಕೆಟ್ ಅಭ್ಯಾಸಕ್ಕೆಂದು ಕಿಟ್ ಹೊತ್ತುಕೊಂಡೇ ಬಂದವರು, ಹೊಸ ಉತ್ಪನ್ನಗಳ ಮಾರಾಟಕ್ಕೆಂದು ಬಂದವರು, ಏರ್ಪೋರ್ಟ್ನಿಂದ ಮನೆಗೆ ಹೋಗುವ ದಾರಿ ಮಧ್ಯೆ ಬಿರಿಯಾನಿಗಾಗಿಯೇ ಬಂದವರು… ಹೀಗೆ ಹಲವು ಮಂದಿ ‘ಬಿರಿಯಾನಿ ಪ್ರಿಯರು’ ಒಟ್ಟು ಸೇರಿದ್ದರು. ಕೇವಲ ಮಣಿ ದಮ್ ಬಿರಿಯಾನಿಯಲ್ಲಿ ಮಾತ್ರವಲ್ಲ, ಹೊಸಕೋಟೆಯ ಆನಂದ್, ಅಕ್ಷಯ್, ರಾಜ್, ಹರಿ ಹೀಗೆ ಹಲವು ಬಿರಿಯಾನಿ ಪಾಯಿಂಟ್ಗಳಲ್ಲಿ ಬಿರಿಯಾನಿ ಪ್ರಿಯರ ದಂಡೇ ಇತ್ತು.

ಮಣಿ ಹಾಗೂ ಆನಂದ್ ಹೊಸಕೋಟೆಯ ಪ್ರಮುಖ ಬಿರಿಯಾನಿಯ ಹೋಟೆಲ್ಗಳು. ಈ ಎರಡೂ ಹೋಟೆಲ್ಗಳು ಸುಮಾರು 25–30 ವರ್ಷ ಹಳೆಯವು. ಮೊದಲಿಗೆ ಸಸ್ಯಾಹಾರ ಕ್ಯಾಂಟಿನ್ ಆಗಿದ್ದ ಇವುಗಳಿಗೆ ಲಾರಿ, ಟ್ಯಾಂಕರ್ ಚಾಲಕರೇ ನಿತ್ಯದ ಗ್ರಾಹಕರಾಗಿದ್ದರು. ಅವರ ವಿನಂತಿಯ ಮೇರೆಗೆ ಆರಂಭವಾದ ಮಾಂಸಹಾರ ಈಗ ‘ಅರ್ಲಿ ಮಾರ್ನಿಂಗ್ ಬಿರಿಯಾನಿ’ ಸ್ಪಾಟ್ ಆಗಿ ಮಾರ್ಪಟ್ಟಿದೆ. ಕೋವಿಡ್ ಬಳಿಕ ಸಾಮಾಜಿಕ ಜಾಲತಾಣಗಳ ಅಬ್ಬರ ಶುರುವಾದಾಗಿನಿಂದ ‘ಮುಂಜಾನೆ ಬಿರಿಯಾನಿ’ ಶುರುವಾಯಿತು ಎಂದು ಹೇಳಿದರು ಆನಂದ್ ದಮ್ ಬಿರಿಯಾನಿ ಮಾಲೀಕರಾದ ಆನಂದ್.

ಎರಡೂ ಹೋಟೆಲ್ಗಳಲ್ಲಿ ಬಳಸುವ ಮಸಾಲೆ, ಅಕ್ಕಿ, ತಯಾರಿ ವಿಧಾನ ಬೇರೆಯಾಗಿದ್ದರಿಂದ ರುಚಿ, ಬಣ್ಣ ವಿಭಿನ್ನವಾಗಿದೆ. ಬೇಯಿಸಲು ಹೊಂಗೆಮರದ ಸೌದೆಗೆ ಆದ್ಯತೆ. ಮಾಂಸಕ್ಕೆ ಕುರಿಗಳ ಆಯ್ಕೆಯಲ್ಲಿ ವಿಶೇಷ ಕಾಳಜಿ, ವಸ್ತುಗಳ ಆಯ್ಕೆ, ಮಸಾಲೆ ಮಿಶ್ರಣದಲ್ಲಿ ಮುತುವರ್ಜಿ ವಹಿಸುತ್ತಾರೆ. ನಂದಿನಿ ತುಪ್ಪ, ಸೂರ್ಯಕಾಂತಿ ಎಣ್ಣೆ ಬಳಸುತ್ತಾರೆ. ಭಾನುವಾರದಂದು ಸುಮಾರು 900 ಕೆ.ಜಿ. ಕುರಿ ಮಾಂಸದ ಬಿರಿಯಾನಿ ಬಿಕರಿಯಾಗುತ್ತವೆ. 600 ಕೆ.ಜಿ ಅಕ್ಕಿ ಬೇಯಿಸುತ್ತಾರೆ.

ಸೋಮವಾರ, ಗುರುವಾರ ಹಾಗೂ ಶನಿವಾರದಂದು ಮಾಂಸ ತ್ಯಜಿಸುವವರು ಇರುವುದರಿಂದ ಆ ದಿನ ಈ ಹೋಟೆಲ್ಗಳಿಗೆ ರಜೆ. ಮಂಗಳವಾರ, ಶುಕ್ರವಾರ ಮುಂಜಾನೆ 4.30ಕ್ಕೆ ಶುರುವಾದರೆ ಭಾನುವಾರ ಮುಂಜಾನೆ 3.30ರಿಂದಲೇ ಜನಸಂದಣಿ ಇರುತ್ತದೆ. ಬೆಳಿಗ್ಗೆ 9 ಗಂಟೆಗೆ ಖಾಲಿ ಖಾಲಿ. ಕಾರ್ತಿಕ, ಶ್ರಾವಣ ಮಾಸದಲ್ಲಿ, ಲಾಂಗ್ ವೀಕೆಂಡ್ನಲ್ಲಿ ಗ್ರಾಹಕರ ಸಂಖ್ಯೆ ಕಡಿಮೆ.

ಹೊಸಕೋಟೆಯಲ್ಲಿ ಎಲ್ಲೆಲ್ಲಿ ಬಿರಿಯಾನಿ

ಹೊಸಕೋಟೆಯ ಮಾಲೂರು ರಸ್ತೆಯಲ್ಲಿರುವ ಮಣಿ ದಮ್ ಬಿರಿಯಾನಿ, ಟೋಲ್ಗೇಟ್ ಬಳಿ ಇರುವ ಆನಂದ್ ದಮ್ ಬಿರಿಯಾನಿ, ಕೆ.ಎಚ್.ಬಿ. ಕಾಲೋನಿಯಲ್ಲಿರುವ ರಾಜ್ ದಮ್ ಬಿರಿಯಾನಿ, ಹರಿ ದಮ್ ಬಿರಿಯಾನಿ, ಆರ್.ವಿ ದಮ್ ಬಿರಿಯಾನಿ ಸೇರಿ ಹಲವು ಬಿರಿಯಾನಿ ಸೆಂಟರ್ಗಳು ಇವೆ. ಬಹುತೇಕ ಕಡೆ ಭಾನುವಾರ, ಮಂಗಳವಾರ ಹಾಗೂ ಶುಕ್ರವಾರ ಮಾತ್ರ ತೆರೆದಿರುತ್ತವೆ. ಕೆಲವು ಹೋಟೆಲ್ಗಳು ವಾರದ ಎಲ್ಲ ದಿನಗಳಲ್ಲಿಯೂ ತೆರೆದಿರುತ್ತವೆ. ಹೊಸಕೋಟೆ ದಮ್ ಬಿರಿಯಾನಿ ಬ್ರ್ಯಾಂಡ್ನಂತಾಗಿದೆ. ಬೇರೆ ಕಡೆಗಳಲ್ಲೂ ಹೊಸಕೋಟೆ ದಮ್ ಬಿರಿಯಾನಿ ಹೋಟೆಲ್ಗಳಿವೆ. ಅಷ್ಟರ ಮಟ್ಟಿಗೆ ಹೊಸಕೋಟೆ ಬಿರಿಯಾನಿ ಘಮಲು ಹರಡಿದೆ.

ಎಲ್ಲೆಲ್ಲಿ ಇಂಥ ಟ್ರೆಂಡ್?

ಹೊಸಕೋಟೆ ಮಾತ್ರವಲ್ಲದೆ ರಾಜ್ಯದ ಬೇರೆಡೆ ಕೂಡ ಈಗ ‘ಅರ್ಲಿ ಮಾರ್ನಿಂಗ್ ಬಿರಿಯಾನಿ’ ಟ್ರೆಂಡ್ ಆರಂಭವಾಗಿದೆ. ತುಮಕೂರು ಜಿಲ್ಲೆಯ ಹುಳಿಯಾರಿನಲ್ಲಿ ತಡರಾತ್ರಿ 2 ಗಂಟೆಯವರೆಗೂ ಬಿರಿಯಾನಿ ಸಿಗುತ್ತದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ವಿಜಯಪುರಕ್ಕೆ ಭಾನುವಾರ, ಮಂಗಳವಾರ, ಶುಕ್ರವಾರ ಬೆಳಗ್ಗೆ 5 ಗಂಟೆಯಿಂದ ಬಿರಿಯಾನಿ ಹಾಗೂ ಕಾಲು ಸೂಪ್ ಸವಿಯಲು ಬೇರೆ ಬೇರೆ ಕಡೆಗಳಿಂದ ಗ್ರಾಹಕರು ಬರುತ್ತಾರೆ. ಹಾಸನದ ಚನ್ನರಾಯಪಟ್ಟಣದಲ್ಲಿ ಸಂಜೆಯಿಂದ ಬೆಳಗ್ಗೆವರೆಗೂ ಬಿರಿಯಾನಿಗಾಗಿ ಜನ ಕಾಯುತ್ತಾರೆ. ಬಳ್ಳಾರಿಯ ಕೌಲ್ ಬಜಾರ್ನಲ್ಲಿ ಅಜೀಮ್ ಬಿರಿಯಾನಿಗೆ ದೊಡ್ಡ ಅಭಿಮಾನಿ ಬಳಗವೇ ಇದೆ. ಬೆಂಗಳೂರು ನಗರದ ಹಲವೆಡೆ ಕೂಡ ಇಂತಹ ಬಿರಿಯಾನಿ ಪಾಯಿಂಟ್ಗಳಿವೆ. ತಡರಾತ್ರಿವರೆಗೂ ಸಿಗುವ ಅರೆಬಿಯನ್ ಶೈಲಿಯ ‘ಮಂದಿ ಬಿರಿಯಾನಿ’ ಬೆಂಗಳೂರು ಹಾಗೂ ಮಂಗಳೂರಿನಲ್ಲಿ ಜನಜನಿತವಾಗಿದೆ. ಮೈಸೂರಿನ ಮಟನ್ ಪಲಾವ್, ದೊನ್ನೆ ಬಿರಿಯಾನಿ ಹೋಟೆಲ್ಗಳು ಆಹಾರ ಪ್ರಿಯರ ನೆಚ್ಚಿನ ತಾಣ. ಚೆನ್ನೈ, ಹೈದರಾಬಾದ್ನಲ್ಲೂ ಮುಂಜಾನೆ ಬಿರಿಯಾನಿ ಆರಂಭವಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.