ವಿಜಯನಗರ ಜಿಲ್ಲೆಯ ಕೂಡ್ಲಿಗೆ ತಾಲ್ಲೂಕಿನಲ್ಲಿ 20 ಸಾವಿರಕ್ಕೂ ಹೆಚ್ಚು ಹುಣಸೆಮರಗಳಿವೆ. ಇದರಿಂದಾಗಿ ಬೇಸಿಗೆಯಲ್ಲಿನ ಹುಣಸೆ ಸುಗ್ಗಿ ರೈತರು, ಗುತ್ತಿಗೆದಾರರು, ಕೂಲಿಕಾರ್ಮಿಕರು, ವ್ಯಾಪಾರಿಗಳಿಗೆ ಸಂಭ್ರಮ ತಂದುಕೊಡುತ್ತದೆ. ಒಂದಿಡೀ ತಾಲ್ಲೂಕು ರೊಕ್ಕ ಎಣಿಸುತ್ತಾ ಕೊಡುಕೊಳ್ಳುತ್ತಾ ಖುಷಿಪಡುತ್ತದೆ.

ಕರ್ನಾಟಕದ ಬಯಲುಸೀಮೆಯ ಜಿಲ್ಲೆಗಳ ಪೈಕಿ ಕೂಡ್ಲಿಗಿ ತಾಲ್ಲೂಕಿನಲ್ಲಿ ಅತಿ ಹೆಚ್ಚು ಹುಣಸೆಮರಗಳಿವೆ. ಹೀಗಾಗಿ ಕೂಡ್ಲಿಗಿ ತಾಲ್ಲೂಕನ್ನು ‘ಹುಣಸೆ ನಾಡು’ ಎಂದೇ ಕರೆಯಲಾಗುತ್ತದೆ. ಏಕೆಂದರೆ ಇಲ್ಲಿನ ಹುಣಸೆಮರಗಳಲ್ಲಿ ಹೆಚ್ಚಿನ ಇಳುವರಿ ಇದ್ದು, ಗುಣಮಟ್ಟದ ಹುಣಸೆಹಣ್ಣಿಗೆ ಹೆಸರಾಗಿದೆ. ತಾಲ್ಲೂಕಿನಲ್ಲಿ ಈಗ ಹುಣಸೆಹಣ್ಣಿನ ಸುಗ್ಗಿ ಸಂಭ್ರಮ ಜೋರಾಗಿದೆ.

ಈ ತಾಲ್ಲೂಕಿನ ಪ್ರಮುಖ ಬೆಳೆ ಶೇಂಗಾ. ಶೇಂಗಾ ಕಟಾವಿಗೆ ಬಂದು ಅದರ ಸುಗ್ಗಿ ಡಿಸೆಂಬರ್ಗೆ ಮುಕ್ತಾಯವಾಗುತ್ತದೆ. ಆ ಬಳಿಕ ದುಡಿಯುವ ಕೈಗಳಿಗೆ ಮೂರ್ನಾಲ್ಕು ತಿಂಗಳು ಕೆಲಸವನ್ನು, ಗುತ್ತಿಗೆದಾರರಿಗೆ ನಾಲ್ಕಾರು ಕಾಸನ್ನು ಕೊಡುವ ಹುಣಸೆ ಸುಗ್ಗಿ ಜನವರಿಯಿಂದ ಏಪ್ರಿಲ್, ಮೇ ತಿಂಗಳವರೆಗೂ ಮುಂದುವರಿಯುತ್ತದೆ.

ತಾಲ್ಲೂಕಿನಲ್ಲಿ ಅಂದಾಜು 20 ಸಾವಿರಕ್ಕೂ ಹೆಚ್ಚು ಹುಣಸೆಮರಗಳಿವೆ. ಯಾವುದೇ ಕಾಳಜಿ, ಗೊಬ್ಬರ ಏನನ್ನು ಕೇಳದೆ ಸ್ವಾಭಾವಿಕವಾಗಿ ಬೆಳೆಯುವ ಹುಣಸೆಮರ ಇಲ್ಲಿನ ಜನರಿಗೆ ಬದುಕು ನೀಡಿದೆ. ತಾಲ್ಲೂಕಿನ ಬಹುಪಾಲು ಜನರಿಗೆ ಹುಣಸೆಮರ ಕಲ್ಪವೃಕ್ಷವಾಗಿದೆ.

ಒಂದೆರಡು ಹುಣಸೆಮರಗಳನ್ನು ಬಡಿದು, ಅದರಿಂದ ಹಣ್ಣನ್ನು ಇಳಿಸಿ, ಕುಟ್ಟಿ ಮಾರಾಟ ಮಾಡುವುದು ತ್ರಾಸದಾಯಕ ಕೆಲಸ. ಆದ್ದರಿಂದ ಬಹುತೇಕರು ಹುಣಸೆಮರಗಳನ್ನು ಗುತ್ತಿಗೆಗೆ ನೀಡುತ್ತಾರೆ. ಕೆಲ ಗುತ್ತಿಗೆದಾರರು ಪಂಚಮಿ ಸಮಯದಲ್ಲೇ ಗಿಡದಲ್ಲಿನ ಎಳೆಕಾಯಿಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ, ಅಂದಾಜು ಮಾಡಿ ಊರೂರುಗಳಿಗೆ ಹೋಗಿ ಮಾಲೀಕರಿಂದ ಮರಕ್ಕೆ ಮೂರ್ನಾಲ್ಕು ಸಾವಿರದಂತೆ ಗುತ್ತಿಗೆ ಹಿಡಿಯುತ್ತಾರೆ. ಹೀಗೆ ಗುತ್ತಿಗೆ ಹಿಡಿದ ನಾಲ್ಕು ತಿಂಗಳ ನಂತರ ಹುಣಸೆ ಸುಗ್ಗಿ ಶುರು. ಒಮ್ಮೊಮ್ಮೆ ಅಂದುಕೊಂಡದ್ದಕ್ಕಿಂತ ಹೆಚ್ಚು ಲಾಭವೂ, ಊಹಿಸಲಾಗದಷ್ಟು ನಷ್ಟವೂ ಉಂಟಾಗುತ್ತದೆ ಎನ್ನುತ್ತಾರೆ ಗುತ್ತಿಗೆದಾರರು. ಈ ಬಾರಿ ಪ್ರತಿ ವರ್ಷಕ್ಕಿಂತ ಕಡಿಮೆ ಇಳುವರಿ ಇದೆ ಎನ್ನುತ್ತಾರೆ ಗುತ್ತಿಗೆದಾರ ಗೆಣತಿಕಟ್ಟೆಯ ಗಾಳೆಪ್ಪ.

ಹುಣಸೆಹಣ್ಣು ಬಡಿಯುವ ಕಸರತ್ತು

ಹುಣಸೆಮರವನ್ನು ಹತ್ತಿ ಬಡಿಯುವುದಕ್ಕೂ ಪರಿಣತಿಬೇಕು. ಇದು ಅತ್ಯಂತ ಕಷ್ಟದ ಮತ್ತು ಸವಾಲಿನ ಕೆಲಸ. ಬಡಿಗೆಯನ್ನು ಹಿಡಿದು ಕೊಂಬೆಯಿಂದ ಕೊಂಬೆಗೆ, ಕೊಂಬೆಯ ತುದಿಗೆ, ಮರದ ಮೇಲ್ಭಾಗಕ್ಕೆ ಹೋಗಿ ಬಡಿಯಬೇಕು. ಇದನ್ನು ಕೆಲವೇ ಕೆಲವರು ಮಾಡುತ್ತಾರೆ. ಅವರನ್ನು ಹಿಡಿದಿಟ್ಟುಕೊಳ್ಳುವುದು ಗುತ್ತಿಗೆದಾರರಿಗೆ ಸವಾಲೇ ಸರಿ. ಹೀಗೆ ಹುಣಸೆಮರ ಬಡಿಯುವವರಿಗೆ ದಿನಕ್ಕೆ ₹500 ರಿಂದ ₹1,000ದವರೆಗೂ ಕೂಲಿ ನೀಡಲಾಗುತ್ತದೆ. ಮೇಲೆ ಹುಣಸೆಮರವನ್ನು ಬಡಿಯುತ್ತಿರುವಾಗಲೇ ಕೆಳಗೆ ಬೀಳುವ ಹುಣಸೆಹಣ್ಣನ್ನು ಆರಿಸಲು ಗಂಡಾಳು, ಹೆಣ್ಣಾಳುಗಳು ಸಿದ್ಧವಿರುತ್ತಾರೆ. ಇವರಿಗೆ ₹300 ರಿಂದ ₹400 ಕೂಲಿ ನೀಡಲಾಗುತ್ತದೆ. ಮರವನ್ನು ಪೂರ್ಣವಾಗಿ ಬಡಿದ ಮೇಲೆ ಟೆಂಪೊ, ಟ್ರ್ಯಾಕ್ಟರ್, ಬಂಡಿ ಮೊದಲಾದವುಗಳ ಮೂಲಕ ತಮ್ಮ ಊರಿನ ಕಣಕ್ಕೆ ಏರಿಕೊಂಡು ಹೋಗುತ್ತಾರೆ. ಒಟ್ಟಿನಲ್ಲಿ ಈ ಪ್ರಕ್ರಿಯೆಯನ್ನು ಮುಗಿಸುವ ಹೊತ್ತಿಗೆ ‘ಮೈ ಹುಣಸೆ ಹಣ್ಣಂತಾಗುತ್ತದೆ’ ಎನ್ನುತ್ತಾರೆ ಗುತ್ತಿಗೆದಾರ ಜಗದೀಶ್ ಎನ್.ಎಂ.

ಒಟ್ಟು ಮಾಡಿದ ಹುಣಸೆ ಬೋಟುಗಳನ್ನು ಹೊಡೆದು ತೊಳೆಯನ್ನು ಬೇರ್ಪಡಿಸುವ ಕೆಲಸವನ್ನು ಮಾಡುವ ಕೂಲಿಕಾರರದ್ದು ಒಂದು ಗುಂಪೇ ಇರುತ್ತದೆ. ಕೈಯಲ್ಲೊಂದು ಕೊಡತಿ ಹಿಡಿದು, ಅಂದಾಜು ಗಾತ್ರದ ಕಲ್ಲಿನ ಮೇಲೆ, ‘ಟಪ್.... ಟಪ್...’ ಎಂದು ಹುಣಸೆ ಬೋಟನ್ನು ಕುಟ್ಟುವ ಕೆಲಸ ಆರಂಭವಾಗುತ್ತದೆ. ಬಿಡುವಿನ ವೇಳೆ ಆದ್ದರಿಂದ ಕೈಗೊಂದಿಷ್ಟು ರೊಕ್ಕ ಸಿಗುತ್ತದೆ ಎಂದು ಬಹಳಷ್ಟು ಕೂಲಿ ಕಾರ್ಮಿಕರು ಈ ಕೆಲಸದಲ್ಲಿ ತೊಡಗುತ್ತಾರೆ. ಅಲ್ಲಿನ ಅವರ ಮಾತುಕತೆ, ನಗೆ ಚಟಾಕಿ ಕೆಲಸ ಮಾಡಿದ ದಣಿವನ್ನೆಲ್ಲ ಮರೆಸಿಬಿಡುತ್ತದೆ. ಇವರಿಗೆ ಒಂದು ಕೆ.ಜಿ ಗೆ ₹15 ರಿಂದ ₹20 ಕೂಲಿ ನೀಡಲಾಗುತ್ತದೆ.

ಚಪಾತಿ ಹಣ್ಣಿಗೆ ಬಲು ಬೇಡಿಕೆ

ಹುಣಸೆಹಣ್ಣನ್ನು ಜಜ್ಜಿ ಅಗಲವಾಗಿರುವ ತೊಳೆಗಳಿಂದ ನಾರನ್ನು, ಬೀಜವನ್ನು ಬೇರ್ಪಡಿಸಿ ಪರಿಶುದ್ಧವಾದ ಹಣ್ಣನ್ನು ದುಂಡಾಕಾರದಲ್ಲಿ ಸುಂದರವಾಗಿ ಹೊಂದಿಸುತ್ತಾರೆ. ಆಗ ಹುಣಸೆಹಣ್ಣು ಮಾರಾಟಕ್ಕೆ ಸಿದ್ಧವಾದಂತೆ. ಹೀಗೆ ಸಿದ್ಧಗೊಂಡ ಹಣ್ಣನ್ನು ಈ ಭಾಗದಲ್ಲಿ ‘ಚಪಾತಿ ಹಣ್ಣು’ ಎಂದು ಕರೆಯುತ್ತಾರೆ. ಇಂತಹ ಅಗಲವಾದ ತೊಳೆ ಹಾಗೂ ಬಂಗಾರದ ಬಣ್ಣವನ್ನು, ಹೆಚ್ಚು ಹುಳಿಯ ಅಂಶವನ್ನು ಹೊಂದಿದ ಹಣ್ಣಿಗೆ ಮಾರುಕಟ್ಟೆಯಲ್ಲಿ ಬಲು ಬೇಡಿಕೆ ಇರುತ್ತದೆ. ಇದರಲ್ಲಿ ಕೆಂಪು ಬಣ್ಣ, ಕಡಿಮೆ ಹುಳಿ, ನಾರಿರುವ ಹಣ್ಣಿಗೆ ಬೆಲೆ ತುಸು ಕಡಿಮೆ ಇರುತ್ತದೆ. ಸಿದ್ಧವಾದ ಹುಣಸೆಹಣ್ಣನ್ನು ಹೊಸಪೇಟೆಯ ಮಂಡಿಗೆ ಹೋಗಿ ಮಾರುವವರೇ ಜಾಸ್ತಿ. ಆದರೆ ಕೆಲವೊಮ್ಮೆ ಆಂಧ್ರ ಪ್ರದೇಶ, ತಮಿಳುನಾಡಿನಿಂದ ವ್ಯಾಪಾರಿಗಳು ಬಂದು ಖರೀದಿಸುತ್ತಾರೆ.

ಹುಣಸೆಹಣ್ಣಿನ ಮೇಲ್ಪದರಿನ ಸಿಪ್ಪೆ, ಒಳಗಿನ ನಾರು ಮತ್ತು ಬೀಜಕ್ಕೂ ಬೇಡಿಕೆ ಇದೆ. ಹುಣಸೆ ಗೊಳ್ಳೆಯನ್ನು ಇಟ್ಟಿಗೆ ಸುಡಲು ಒಂದು ಪುಟ್ಟಿಗೆ ₹60 ರಿಂದ ₹70ಗೆ ಖರೀದಿ ಮಾಡುತ್ತಾರೆ. ಈ ಗೊಳ್ಳೆಯು ಅಧಿಕ ಶಾಖವನ್ನು ಉತ್ಪತ್ತಿ ಮಾಡುವುದರಿಂದ ಇಟ್ಟಿಗೆ ಚೆನ್ನಾಗಿ ಸುಡುತ್ತದೆ. ಹಣ್ಣಿನ ನಾರು ಕರಕುಶಲ ವಸ್ತುಗಳ ತಯಾರಿಕೆಯಲ್ಲಿ ಬಳಕೆಯಾಗುತ್ತದೆ. ಹಾಗೆಯೇ ಹಣ್ಣಿನಿಂದ ಬೇರ್ಪಡಿಸಿದ ಹುಣಸೆಬೀಜ ಕ್ವಿಂಟಲ್ಗೆ ಅಂದಾಜು ₹1,500 ರಿಂದ ₹2,000 ಗಳಿಗೆ ಮಾರಾಟವಾಗುತ್ತದೆ. ಗುತ್ತಿಗೆದಾರನ ಖರ್ಚಿಗೆ ಕೈ ಹಿಡಿಯುತ್ತದೆ. ಈ ಬೀಜವೂ ಗೋಂದಿಗಾಗಿ ಮತ್ತು ಕಾಫಿಯ ಮಿಶ್ರಣಕ್ಕಾಗಿ ಬಳಕೆಯಾಗುತ್ತದೆ.

ಹುಣಸೆ ಚಟ್ನಿ ಇಲ್ಲದೆ ಊಟವಿಲ್ಲ

ಈ ಭಾಗದಲ್ಲಿ ಯಾವುದೇ ರೀತಿಯ ಊಟವಾದರೂ ಸರಿಯೇ, ಉಪ್ಪಿನ ಜೊತೆಯಲ್ಲಿ ಹುಣಸೆ ಚಟ್ನಿಯನ್ನು ಊಟದ ಆರಂಭದಲ್ಲಿಯೇ ಬಡಿಸಲಾಗುತ್ತದೆ. ‘ಹಿಂದೆ ಬಡತನವಿದ್ದ ಕಾಲದಲ್ಲಿ ಹುಣಸೆ ಚಟ್ನಿ, ಮುದ್ದೆ ತಿಂದು ಬದುಕಿದ್ವಿ’ ಎನ್ನುತ್ತಾರೆ ಗೆದ್ದಲಗಟ್ಟೆ ಬಸವರಾಜಣ್ಣ. ಇನ್ನು ಕೆಲವರು ಹುಣಸೆ ಚಟ್ನಿಯನ್ನು ರುಬ್ಬಿ ಮನೆ ದೇವರ ತೇರಿನ ದಿನ ತಮ್ಮ ಮನೆಗೆ ಬರುವ ಸ್ವಾಮೀಜಿಗಳಿಗೆ ಮೊದಲು ಬಡಿಸಿ, ನಂತರ ತಾವು ಬಳಸುವ ಸಂಪ್ರದಾಯವನ್ನು ಮುಂದುವರಿಸಿಕೊಂಡು ಬಂದಿದ್ದಾರೆ.

ತಮ್ಮ ಹೊಲ, ಕಣದಲ್ಲಿನ ಹುಣಸೆಮರಗಳಲ್ಲಿ ಬಿಟ್ಟಿರುವ ಹುಣಸೆಹಣ್ಣನ್ನು ಮತ್ತು ಹದವಾಗಿ ರುಬ್ಬಿದ ಬಾಯಲ್ಲಿ ನೀರೂರುವ ಹುಣಸೆ ಚಟ್ನಿಯನ್ನು ದೂರದೂರುಗಳ ಸಂಬಂಧಿಕರಿಗೆ ನೀಡುವ ಪರಿಪಾಟವೂ ಇದೆ. ಈ ಮೂಲಕ ಹುಣಸೆ ಸಂಬಂಧವನ್ನು ಬೆಸೆಯುವ ರಾಯಭಾರಿಯಾಗಿಯೂ ಕೆಲಸ ಮಾಡುತ್ತದೆ.

‘ಕೂಡ್ಲಿಗಿ ತಾಲ್ಲೂಕಿನ ಉಷ್ಣ ಹವಾಗುಣ, ಬಯಲು ಪ್ರದೇಶ ಮತ್ತು ಕಡಿಮೆ ಮಳೆಯೂ ಹುಣಸೆಮರಗಳು ಸಮೃದ್ಧವಾಗಿ ಬೆಳೆಯಲು ಕಾರಣವಾಗಿದೆ. ತಾಲ್ಲೂಕಿನಲ್ಲಿ ನೀರಾವರಿ ಸೌಲಭ್ಯ ಇದಿದ್ದರೂ, ಇಲ್ಲಿನ ಬರ ಪರಿಸ್ಥಿತಿಯನ್ನು ಎದುರಿಸಿ, ಬದುಕು ಕಟ್ಟಿಕೊಳ್ಳಲು ಇಲ್ಲಿನ ನೆಲಕ್ಕೆ ಹೊಂದಿಕೊಳ್ಳುವ ಹುಣಸೆಸಸಿಗಳನ್ನು ಹೊಲದ ಬದುಗಳಲ್ಲಿ, ಕಣಗಳಲ್ಲಿ ಮತ್ತು ಬಯಲಲ್ಲಿ ನೆಟ್ಟು ಅದರಿಂದ ಬರುವ ಆದಾಯವನ್ನು ನೆಚ್ಚಿಕೊಂಡ ಹಲವರ ಜೀವನ ಸಾಗುತ್ತಿದೆ. ಇಂತಹ ಹುಣಸೆಹಣ್ಣಿನ ಮೌಲ್ಯವರ್ಧನೆ ಮಾಡಿ ಹೆಚ್ಚಿನ ಆದಾಯ ಗಳಿಸಬಹುದು’ ಎಂದು ಹುಲಿಕೆರೆಯ ಅರಣ್ಯ ಕೃಷಿಕ ಎಚ್. ವಿ.ಸಜ್ಜನ್ ಹೇಳುತ್ತಾರೆ.

ಶಾಸಕ ಡಾ. ಶ್ರೀನಿವಾಸ ಎನ್.ಟಿ ಅವರು ತಾಲ್ಲೂಕಿಗೆ ಹುಣಸೆಹಣ್ಣಿನ ಸಂಸ್ಕರಣ ಘಟಕ ತರುವ ಪ್ರಯತ್ನ ಮಾಡುತ್ತಿದ್ದಾರೆ. ಇದಕ್ಕಾಗಿ ಈಗಾಗಲೇ ಗುಡೆಕೋಟೆ ಮತ್ತು ಕೂಡ್ಲಿಗಿ ಹೊರ ವಲಯದಲ್ಲಿ ಜಾಗವನ್ನು ಪರಿಶೀಲಿಸಲಾಗಿದೆ. ನಬಾರ್ಡ್ ನೆರವಿನ ಯೋಜನೆ ಇದಾಗಿದೆ. ಎಲ್ಲವೂ ಸುಸೂತ್ರವಾಗಿ ಸಾಗಿದರೆ ಹುಣಸೆಹಣ್ಣಿನ ಸಂಸ್ಕರಣ ಘಟಕ ಹೊಂದಿದ ಮೊದಲ ತಾಲ್ಲೂಕು ಎಂಬ ಹೆಗ್ಗಳಿಕೆಗೆ ಕೂಡ್ಲಿಗಿ ಪಾತ್ರವಾಗಲಿದೆ.

ಹುಣಸೆಹಣ್ಣಿನ ನಾಲ್ಕು ತಿಂಗಳ ಸುಗ್ಗಿಯಲ್ಲಿ ಗುತ್ತಿಗೆದಾರರಿಂದ ಹಿಡಿದು ರೈತರು, ಮಹಿಳೆಯರು, ಟ್ರ್ಯಾಕ್ಟರ್, ಟೆಂಪೊ ಮಾಲೀಕರು, ಮಧ್ಯವರ್ತಿಗಳು ಸೇರಿದಂತೆ ಸಾವಿರಾರು ಮಂದಿಗೆ ಕೆಲಸ ನೀಡುವ ಮೂಲಕ ಕೋಟ್ಯಂತರ ರೂಪಾಯಿಗಳ ವ್ಯವಹಾರ ನಡೆಯುತ್ತದೆ. ಈ ಸಮಯದಲ್ಲಿ ತಾಲ್ಲೂಕಿನಾದ್ಯಂತ ಎಲ್ಲೇ ಹೋದರೂ ರಾಶಿ ರಾಶಿ ಹುಣಸೆ ಬೋಟುಗಳನ್ನು ಜಜ್ಜುವ, ತೊಳೆ ಬಿಡಿಸುವ, ಪುಟ್ಟಿಗಳಲ್ಲಿ ಹಣ್ಣನ್ನು ಸಿದ್ಧಪಡಿಸುವ, ಮಾರಾಟ ಮಾಡುವ ದೃಶ್ಯ ಕಂಡುಬರುತ್ತದೆ. ಹಾಗೆಯೇ ರೊಕ್ಕ ಎಣಿಸುವ ದೃಶ್ಯವೂ ಕೂಡ.

ಹುಣಸೆ ಚಟ್ನಿಯೂ...

ಹುಣಸೆ ಚಟ್ನಿ ಉತ್ತಮ ಪ್ರಮಾಣದ ಮೆಗ್ನೀಷಿಯಂ, ಫೈಬರ್, ಕಬ್ಬಿಣದ ಅಂಶವನ್ನು ಹೊಂದಿದ್ದು, ಆರೋಗ್ಯಕ್ಕೆ ಅಗತ್ಯವಾದ ಪೌಷ್ಟಿಕಾಂಶಗಳನ್ನು ಒದಗಿಸುತ್ತದೆ. ಇದರಲ್ಲಿನ ಟಾರ್ಟರಿಕ್ ಆಮ್ಲ ಮಲಬದ್ಧತೆ ನಿವಾರಣೆಗೆ ಸಹಾಯ ಮಾಡುತ್ತದೆ.

ಹುಣಸೆ ಚಿಗುರನ್ನು ಬಳಸಿ ಮಾಡಿದ ಉದುಕ, ಅದಕ್ಕೆ ತಕ್ಕದಾದ ಮುದ್ದೆ ಇದ್ದರೆ ಅದರ ಸವಿಯೇ ಬೇರೆ. ಇಂತಹ ಹುಣಸೆ ಚಿಗುರು ನೈಸರ್ಗಿಕ ಆಂಟಿಬಯೋಟಿಕ್ನಂತೆ ಕೆಲಸ ಮಾಡುತ್ತದೆ. ಅಜೀರ್ಣ ಸಮಸ್ಯೆಯನ್ನು ದೂರ ಮಾಡುವ, ದೇಹದ ಕೊಬ್ಬನ್ನು ಕಡಿಮೆ ಮಾಡುವ ಗುಣವೂ ಹುಣಸೆ ಚಿಗುರಿಗಿದೆ. ಜಂತು ಸಮಸ್ಯೆಗೂ ರಾಮಬಾಣವಾಗಿದೆ.

ಹುಣಸೆ ಆಫ್ರಿಕಾ ಖಂಡದ ಪೂರ್ವಭಾಗದ್ದು. ಬಹು ಹಿಂದೆಯೇ ಭಾರತಕ್ಕೆ ಪರಿಚಯಿಸಲ್ಪಟ್ಟಿದೆ. ಫಾಬೇಸಿ ಕುಟುಂಬದಲ್ಲಿ ಕಾಸಲ್ಟೀನಿಯೆ ಉಪ ಕುಟುಂಬಕ್ಕೆ ಸೇರಿದ್ದು, ‘ಟಮರಿಂಡಸ್ ಇಂಡಿಕಾ’ ಎಂದು ಸಸ್ಯಶಾಸ್ತ್ರೀಯ ಹೆಸರನ್ನು ಹೊಂದಿದೆ.

ಕೋಟಿಗಳ ವಹಿವಾಟು

ಹುಣಸೆಮರದ ಮಾಲೀಕರಿಗೆ ಮರಕ್ಕೆ ಅಂದಾಜು ₹3,000 ದಿಂದ ₹5,000 ನೀಡಲಾಗುತ್ತದೆ. ಗುತ್ತಿಗೆದಾರರಿಗೆ ಅಂದಾಜು ಎಲ್ಲಾ ಖರ್ಚು ತೆಗೆದು ಮರಕ್ಕೆ ₹2000 ದಿಂದ ₹3000 ದವರೆಗೂ ಉಳಿತಾಯವಾಗಬಲ್ಲದು. ಈ ಬಾರಿ ಇಳುವರಿ ಕಡಿಮೆ ಇದ್ದು, ಮಾರುಕಟ್ಟೆಯಲ್ಲಿ ಹುಣಸೆಹಣ್ಣಿಗೆ ಬೇಡಿಕೆ ಜಾಸ್ತಿ ಇದೆ. ಪ್ರಸ್ತುತ ಹೂ ಹಣ್ಣಿಗೆ ಒಂದು ಕ್ವಿಂಟಲ್ಗೆ ₹ 7,000 ರಿಂದ ₹9,000 ಬೆಲೆ ಇದ್ದು, ಚಪಾತಿ ಹಣ್ಣಿಗೆ ₹18,000 ದಿಂದ ₹22,000 ದವರೆಗೂ ದರವಿದೆ. ತಾಲ್ಲೂಕಿನಲ್ಲಿ ಅಂದಾಜು ₹4 ರಿಂದ ₹5 ಕೋಟಿಗಳ ವ್ಯವಹಾರವಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.