ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರ | ಹನಿ ಹನಿ ನೀರಿನ ಲೆಕ್ಕ

Published 30 ಮಾರ್ಚ್ 2024, 23:30 IST
Last Updated 30 ಮಾರ್ಚ್ 2024, 23:30 IST
ಅಕ್ಷರ ಗಾತ್ರ

ದಿನ ನಿತ್ಯ ಟ್ಯಾಂಕರ್ ನೀರು ಖರೀದಿಗೆ ಹಣ ಖರ್ಚು ಮಾಡಿಯೇ ಹೋಟೆಲ್, ವಸತಿ ಗೃಹ, ಅಪಾರ್ಟ್‌ಮೆಂಟ್‌ ನಡೆಯುತ್ತಿವೆ. ಜಲಕ್ಷಾಮದಿಂದಾಗಿ ಉದ್ಯಮಿಗಳಿಗೆ ಖರ್ಚಿನ ಹೊಸ ಬಾಪ್ತು ಶುರುವಾಗಿದೆ. ಬಹುವಾರ್ಷಿಕ ತೋಟಗಾರಿಕೆ, ಮುಖ್ಯವಾಗಿ ಅಡಿಕೆ ಬೆಳೆಗಾರರಂತೂ ಒಣಗುವ ತೋಟ ಉಳಿಸಲು ನೀರು ಖರೀದಿಯ ಮಟ್ಟಕ್ಕೆ ಇಳಿದಿದ್ದಾರೆ. ಕೃಷಿಕರ ಆದಾಯ ಕೊಳವೆಬಾವಿ, ಪೈಪ್‌ಲೈನ್‌ಗಳ ಪಾಲಾಗುತ್ತಿದೆ. ನಾವು ಕಟ್ಟಿದ ನಗರಗಳು ನಿತ್ಯ ನೀರ ನೋವಿನ ಮಾತಾಡುತ್ತಿವೆ. ಕಾಲುಬುಡದ ಕೆರೆ, ಬಾವಿಯ ವಿಕೇಂದ್ರೀಕೃತ ವ್ಯವಸ್ಥೆ ಹಾಳು ಮಾಡುತ್ತ ದೂರದ ಜಲಾಶಯ, ನದಿಗಳಿಂದ ನೀರು ಪೂರೈಸುವ ಕೇಂದ್ರೀಕೃತ ನೀರಾವರಿ ನಂಬಿದ್ದೇವೆ. ಮಳೆಗಾಲ ಮುಗಿಯುತ್ತಲೇ ಸಾರ್ವಜನಿಕ ನೀರು ಸರಬರಾಜು ಕೈ ಕೊಡುತ್ತಿದೆ. ಜನಸಂಖ್ಯೆ, ಮನೆಗಳು ಬೆಳೆದಂತೆ ಸಾವಿರಾರು ಕೋಟಿ ಖರ್ಚಿನ ಹೊಸ ಹೊಸ ಯೋಜನೆಗಳ ಕನಸು ಬಿತ್ತುವ ಕೆಲಸ ಸಾಗಿದೆ. ಗುಡ್ಡದೆತ್ತರದಲ್ಲಿ ವಿಸ್ತರಿಸಿದ ಬಡಾವಣೆಗಳು ಸಾವಿರಾರು ಅಡಿ ಆಳದ ಕೊಳವೆಬಾವಿಯ ಪೈಪೋಟಿಗೆ ಇಳಿದು ಅಳಿದುಳಿದ ತೆರೆದಬಾವಿಗಳು ಬತ್ತುತ್ತಿವೆ. ದಿನಕ್ಕೆ 800-1000 ಲೀಟರ್ ನೀರು ಬಳಸುವ ಪ್ರತಿ ಕುಟುಂಬಗಳು ಶೇ. 50ರಿಂದ 60ರಷ್ಟು ತ್ಯಾಜ್ಯನೀರನ್ನು ಚರಂಡಿಗೆ ಹರಿಯ ಬಿಟ್ಟಿವೆ. ಇವುಗಳ ಜೊತೆಗೆ ಕೈಗಾರಿಕೆ ತ್ಯಾಜ್ಯಗಳೆಲ್ಲ ಸೇರಿ ರಾಜ್ಯದ ನದಿಗಳ ನೀರು ಕಳೆದ ಆರು ವರ್ಷಗಳ ಹಿಂದೆಯೇ ಕುಡಿಯಲು ಅಯೋಗ್ಯವೆಂದು ವರದಿಗಳು ಎಚ್ಚರಿಸಿವೆ.

ಜಲ ಸತ್ಯ ಅರಿಯದ ಯೋಜನೆಗಳು

ಸಿಲಿಕಾನ್ ಸಿಟಿ, ಉದ್ಯಾನ ನಗರಿ, ಭತ್ತದ ಕಣಜ, ಸಕ್ಕರೆ ನಗರ, ಉಕ್ಕಿನ ನಗರ, ಕುಂದಾ ನಗರಿ, ಬೆಣ್ಣೆ ನಗರಿಯಷ್ಟೇ ಅಲ್ಲ, ನದಿ ನಾಡಿನ ಕರಾವಳಿಯೂ ಜಲಕ್ಷಾಮಕ್ಕೆ ತುತ್ತಾಗುತ್ತಿದೆ. ಶೈಕ್ಷಣಿಕ, ಸಾಂಸ್ಕೃತಿಕ, ಕೃಷಿ ಸೇರಿದಂತೆ ಎಲ್ಲ ಸಾಧನೆಗಳ ಹಿಂದೆ ನೀರಿನ ಕೊಡುಗೆಯಿದೆ. ಹನಿ ನೀರಿನ ನಡೆ ಮರೆತು ಮೆರೆದಿದ್ದೇವೆ. ಅಣೆಕಟ್ಟು ಕಟ್ಟುವ ವಿಸ್ತೃತ ಯೋಜನೆ ಮಾಡುವಾಗ ನೀರಿನ ಮೂಲ, ಲಭ್ಯತೆ, ಬೇಡಿಕೆಯ ಲೆಕ್ಕ ನಡೆಯುತ್ತದೆ. ಎಂಜಿನಿಯರ್‌ಗಳು ಸೋತರೋ? ಚುನಾವಣೆ ತಂತ್ರದ ರಾಜಕೀಯದವರ ಆಟಕ್ಕೆ ತಲೆ ಕೊಟ್ಟರೋ ಗೊತ್ತಿಲ್ಲ. ಎತ್ತಿನಹೊಳೆಯ ಖಾಲಿ ಪೈಪ್ ಯೋಜನೆಯಂತೆ ಜಿಲ್ಲೆ ಜಿಲ್ಲೆಗಳಲ್ಲಿ, ಹೋಬಳಿ ಮಟ್ಟದಲ್ಲೂ ಇದೇ ಮಾದರಿಯ ವಿಫಲತೆಯ ಪ್ರಹಸನಕ್ಕೆ ಹಣ ನೀರಾಗಿದೆ. ಸರ್ಕಾರದ ಹಣ ವಿನಿಯೋಗಿಸಿ ಕೆರೆ ತುಂಬಿಸುವ ಕಾರ್ಯಕ್ರಮ, ಏತ ನೀರಾವರಿ, ಕಿಂಡಿ ತಡೆ ಅಣೆಕಟ್ಟುಗಳ ನಾಲ್ಕು ದಶಕಗಳ ಯೋಜನೆಗಳ ಸರಿ–ತಪ್ಪುಗಳ ಮೌಲ್ಯಮಾಪನ ನಡೆದಿದ್ದರೆ ಪಾಠ ಕಲಿಯಬಹುದಿತ್ತು. ಸಾವಿರಾರು ಕೋಟಿ ವಿನಿಯೋಗಿಸುವ ಸರ್ಕಾರಕ್ಕೆ ಸೂಕ್ತ ಜಲ ಯೋಜಕರಿಲ್ಲದ ಸಂಕಟ ಕಾಡುತ್ತದೆ. ಜನಕ್ಕೆ ಜಲಸತ್ಯ ಹೇಳುವ ಧೈರ್ಯವಿಲ್ಲದ ನೇತಾರರಿಂದ ಶಾಶ್ವತ ನೀರಾವರಿಯೆಂಬ ಕಾಂಕ್ರೀಟ್ ಸ್ಮಾರಕಗಳ ಅನಾವರಣವಾಗಿ ಯೋಜನೆಗಳು ಹಳ್ಳ ಹಿಡಿದಿವೆ. ನೀರಿಲ್ಲದ ಹಳ್ಳಕ್ಕೆ ಒಡ್ಡು ಹಾಕುವುದು, ಕೆರೆ ತುಂಬಿಸುವ ಭಾಷಣ ಬಿಗಿದು ಭೂಮಿಗೆ ಪೈಪ್ ಹೂಳುವ ನಾಟಕಗಳಲ್ಲಿ ರಾಜ್ಯದ ಸರ್ವಪಕ್ಷಗಳ ಕೊಡುಗೆ ದೊಡ್ಡದಿದೆ. ಇದರಿಂದ ಜಲ ದುಃಖ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದೆ.

ಹವಾಮಾನ ಬದಲಾಗಿದೆ, ಮಳೆ ವ್ಯತ್ಯಾಸವಾಗಿದೆ. ಒಂದು ಚದರ ಮೀಟರ್ ಜಾಗದಲ್ಲಿ ಒಂದು ಮಿಲಿ ಮೀಟರ್ ಮಳೆಯಾದರೆ ಒಂದು ಲೀಟರ್ ನೀರು ಸುರಿಯುತ್ತದೆ. ಕನಿಷ್ಟ 300 ಮಿಲಿ ಮೀಟರ್‌ನಿಂದ 6,000 ಮಿಲಿ ಮೀಟರ್ ಮಳೆ ಸುರಿಯುವ ನಮ್ಮ ರಾಜ್ಯದಲ್ಲಿ ವಿವಿಧ ವಲಯಗಳಲ್ಲಿ ಪರಿಸರಕ್ಕೆ ತಕ್ಕುದಾದ ಪಾರಂಪರಿಕ ವ್ಯವಸ್ಥೆಗಳಿವೆ. ಇವನ್ನು ನಂಬಿ ಶತಮಾನಗಳಿಂದ ಬದುಕು ಸಾಗಿದೆ. ವಾರ್ಷಿಕವಾಗಿ ಪ್ರತಿ ಎಕರೆಯಲ್ಲಿ ಸುರಿಯಬಹುದಾದ 15 ರಿಂದ 80 ಲಕ್ಷ ಲೀಟರ್ ನೀರಿನಲ್ಲಿ ಶೇಕಡ 15-20 ರಷ್ಟನ್ನಾದರೂ ಹಿಡಿಯಬಹುದಿತ್ತು. ಅಕಾಲಿಕ ಮಳೆಯನ್ನು ನೀರಿನ ಲಾಭವಾಗಿಸುವ ಅವಕಾಶವಿದೆ. ಸಂರಕ್ಷಣೆಯ ಸಣ್ಣ ಸಣ್ಣ ಮಾದರಿಗಳು ಮುಖ್ಯ. ಆದರೆ ಬಣ್ಣ ಹಚ್ಚಿದ ಭಾರೀ ಯೋಜನೆಗಳ ಹಿಂದೆ ಜಲ ಜಗದ ಓಟ ಸಾಗುತ್ತ ಪರಿಸ್ಥಿತಿ ಇಲ್ಲಿಗೆ ಬಂದಿದೆ.

ಕೆರೆ ಕಾಯಕ ಯಶಸ್ಸಿನ ಪಾಠ

ಎರೆಭೂಮಿಯಲ್ಲಿ ಹೂಳು ತಡೆಗೆ ಸೂಕ್ತ ತಂತ್ರ ಅಳವಡಿಸಿ ಕೆರೆ ನಿರ್ಮಿಸಬಹುದು. ಒಮ್ಮೆ ಈ ಕೆರೆ ಭರ್ತಿಯಾದರೆ ಮೂರು ವರ್ಷಗಳ ಕಾಲ ನೀರಿರುವ ಸಾಕ್ಷಿಗಳು ಗದಗ, ಕೊಪ್ಪಳ, ರಾಯಚೂರು ಮುಂತಾದೆಡೆಗಳಲ್ಲಿವೆ. ಹಾಸನದಿಂದ ಹಾವೇರಿಯ ಶಿಗ್ಗಾವಿ ತನಕದ ಅರೆಮಲೆನಾಡಿನ ಸೆರಗಿನಲ್ಲಿ ಆಗಸ್ಟ್ ಮಳೆಯಲ್ಲಿ ಕೆರೆ ತುಂಬಿ ವರ್ಷದ ಅನ್ನವಾಗುವ ಸೋಜಿಗವಿದೆ. ಕೃಷಿ ಹೊಂಡದಲ್ಲಿ ಗೆದ್ದ ರಾಯಚೂರಿನ ಸಿಂಗಡದಿನ್ನಿಯಂಥ ಹಳ್ಳಿಗಳಿವೆ. ತೆರೆದಬಾವಿಯಲ್ಲಿ ಕೃಷಿ ಗೆಲ್ಲಿಸಿದ ಬೀದರ್‌ ಜಿಲ್ಲೆಯ ಬಸವಕಲ್ಯಾಣ, ಹುಮನಾಬಾದ್ ಪ್ರದೇಶಗಳಿವೆ. ಮಲೆನಾಡಿನ ಗುಡ್ಡದಲ್ಲಿ ನೀರಿಂಗಿಸಿ ನೀರ ನೆಮ್ಮದಿ ಹುಡುಕಿದ ಮಾರ್ಗವಿದೆ. ಹೊಲಕ್ಕೆ ಬದು ನಿರ್ಮಿಸಿ, ಮರ ಬೆಳೆಸಿ ಬಿಸಿಗಾಳಿಯ ಹೊಡೆತ ತಪ್ಪಿಸಿ ಮಣ್ಣಿನ ತೇವ ಉಳಿಸಿದ್ದಕ್ಕೆ ಕಾರೆಕಂಟಿ ಬೆಳೆಯುವ ಹೊಲದಲ್ಲಿ ತೋಟ ಗೆದ್ದ ನಿದರ್ಶನ ತಿಪಟೂರಿನಲ್ಲಿದೆ. ಸಮುದಾಯ ಜಾಗೃತಿಯಲ್ಲಿ ಕೆರೆ ಹೂಳು ತೆಗೆದು ಅಂತರ್ಜಲ ಹೆಚ್ಚಿಸಿದ ಸಂಘ ಸಂಸ್ಥೆಗಳು, ವ್ಯಕ್ತಿಗಳು, ಮಠಮಾನ್ಯರು, ಜನಪ್ರತಿನಿಧಿಗಳು, ರೈತರ ಯಶೋಗಾಥೆಗಳಿವೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ಕಳೆದ ಎಂಟು ವರ್ಷಗಳಲ್ಲಿ ವಿವಿಧ ಭಾಗದಲ್ಲಿ 730 ಕೆರೆಗಳ ಹೂಳು ತೆಗೆಸಿದೆ. ಇವುಗಳಲ್ಲಿ 351 ಕೆರೆಗಳಲ್ಲಿ ಈ ಬರದಲ್ಲಿಯೂ ನೀರಿದೆ! ಸರ್ಕಾರಕ್ಕೆ ನೀರಿನ ಸಮಸ್ಯೆ ಪರಿಹರಿಸುವ ಕಳಕಳಿಯಿದ್ದರೆ ಇಷ್ಟು ಸಾಕಲ್ಲವೇ?

ರಾಜ್ಯದಲ್ಲಿ 39,173 ಕೆರೆಗಳಿವೆ. ನಿಶ್ಚಿತ ಜಲನಿಧಿಗಳಾದ ಇವುಗಳ ಬಗ್ಗೆ ಗಮನ ಏನೇನೂ ಸಾಲದು. ಕೆಂಪೇಗೌಡರ ಕೆರೆಗಳ ನಗರ ಬೆಂಗಳೂರಲ್ಲಿ ಕೆರೆ ಕಳೆಯುವ ಆಟ ಊರಿಗೇ ಮಾದರಿ! ಇಲ್ಲಿ ಸುರಿದ 40-50 ಟಿ.ಎಂ.ಸಿ ಮಳೆ ನೀರು ಛಾವಣಿ, ಗಟಾರ, ರಾಜಕಾಲುವೆ, ಹೆದ್ದಾರಿ ಹಿಡಿದು ಜಲಪ್ರಳಯವೆಂಬ ಟೀಕೆ ಹೊತ್ತು ಮಾಯವಾಗುತ್ತಿದೆ. 1973 ರಲ್ಲಿ ಬೆಂಗಳೂರಿನ ಒಟ್ಟೂ ಭೂಮಿಯ ಶೇಕಡ 8 ರಷ್ಟು ಜಾಗದಲ್ಲಿ ಮಾತ್ರ ಮನೆಗಳಿದ್ದವು. ಈಗ ಶೇಕಡ 77 ಭಾಗ ಮನೆ ಭರ್ತಿಯಾಗಿ ಕಾಂಕ್ರೀಟ್ ಮಯವಾಗಿ ನೀರು ಇಂಗುತ್ತಿಲ್ಲ. 40 ವರ್ಷಗಳ ಹಿಂದೆ 5 ಸಾವಿರ ಕೊಳವೆಬಾವಿಗಳ ಈ ಪ್ರದೇಶ ಈಗ 5 ಲಕ್ಷ ಬಾವಿಗಳಾಗಿ ಭೂಗತ ಪೊಳ್ಳಾಗಿದೆ. ಮುಂದಿನ ಹತ್ತು ವರ್ಷಕ್ಕೆ 3 ಕೋಟಿ ಜನ ಈ ನಗರದಲ್ಲಿರಬೇಕಂತೆ! ಈಗಲೇ ನೀರಿಲ್ಲ. ಲಭ್ಯ ಮಾಹಿತಿಯಂತೆ ರಾಜ್ಯದಲ್ಲಿ 45 ಲಕ್ಷಕ್ಕೂ ಹೆಚ್ಚು ಕೊಳವೆಬಾವಿಗಳಿವೆಯಂತೆ! ದಶಕದೀಚೆಗೆ ಇಡೀ ರಾಜ್ಯವೆ ಕೊಳವೆಬಾವಿಗೆ ಬಿದ್ದಿದೆ. ನೀರಿನ ಕುರಿತ ನೀತಿ ಸಂಹಿತೆ ಏನಾದರೂ ಜನ ಮನದಲ್ಲಿ ಇದೆಯೇ? ಕೆರೆಯಲ್ಲಿ ನೀರು ನಿಂತರೆ ಸುತ್ತಲಿನ ಬಾವಿ, ಕೊಳವೆಬಾವಿಗಳಲ್ಲಿ ನೀರು ದೊರೆಯುತ್ತದೆ. ದನ–ಕರು ವನ್ಯ ಸಂಕುಲಕ್ಕೆ ಅನುಕೂಲವಾಗುತ್ತದೆ. ಕೆರೆ ಹೂಳು ತೆಗೆಯಲು ಎಷ್ಟು ಹಣ ಬೇಕೆಂದು ಕಾಯಕ ಮಾಡಿದ ನಮಗೆ ಗೊತ್ತಿದೆ. ಹೂಳು ತೆಗೆಯುವ ಪ್ರದರ್ಶನಕ್ಕೆ ಕೋಟಿ ಕೋಟಿ ಹಣ ಹೊಡೆಯುವ ಸರ್ಕಾರದ ವರ್ತನೆ ನಿಲ್ಲುವುದು ಯಾವಾಗೆಂಬ ಪ್ರಶ್ನೆ.

ಮಾತು ಸೋತಿದೆ, ಕಾಯಕ ಬೇಕಿದೆ

ರಾಜ್ಯದ ಪ್ರಮುಖ ಏಳು ನದಿಗಳಲ್ಲಿ 3472.5 ಟಿ.ಎಂ.ಸಿ ನೀರಿದೆ. ಇವುಗಳಲ್ಲಿ ಶೇಕಡ 50 ರಷ್ಟು ಈಗಾಗಲೇ ಬಳಕೆಯಾಗುತ್ತಿದೆ. ರಾಜ್ಯದ ಭೂಮಿಯ 70ರಷ್ಟು ಪ್ರದೇಶ 750 ಮಿಲಿ ಮೀಟರ್‌ಗಿಂತ ಕಡಿಮೆ ಮಳೆ ಸುರಿಯುವ ನೆಲೆಯಾಗಿದೆ. ಎಷ್ಟೇ ಪ್ರಯತ್ನ ಮಾಡಿದರೂ ಕೃಷಿಭೂಮಿಯ 60 ಭಾಗವನ್ನು ನೀರಾವರಿಗೆ ಒಳಪಡಿಸಲು ಸಾಧ್ಯವಿಲ್ಲ. ಸತ್ಯ ಗೊತ್ತಿದ್ದರೂ ಸರ್ಕಾರ ಮಾತಾಡುವುದಿಲ್ಲ. 2050ರ ಹೊತ್ತಿಗೆ ನೀರಿನ ಬೇಡಿಕೆ ಇಂದಿಗಿಂತ ಶೇಕಡ 55 ರಷ್ಟು ಏರಿಕೆಯಾಗುವ ನಿರೀಕ್ಷೆಯಿದೆ. ಇನ್ನೊಂದೆಡೆ ಪಶ್ಚಿಮಘಟ್ಟ ಪ್ರದೇಶದಲ್ಲಿ ಈಗಾಗಲೇ 2 ಲಕ್ಷ ಹೆಕ್ಟೇರಿಗೂ ಅಧಿಕ ಅರಣ್ಯ ಅತಿಕ್ರಮಣಕ್ಕೆ ಒಳಗಾಗಿದೆ. 

ಗುಡ್ಡ ಬೆಟ್ಟ ಅಗೆತ, ಅರಣ್ಯ ನಾಶ, ಭೂಕುಸಿತದ ಪರಿಣಾಮಗಳಿಂದ ಅಣೆಕಟ್ಟುಗಳಿಗೆ ಹೂಳು ಭರ್ತಿಯಾಗುತ್ತ ನೀರು ಸಂಗ್ರಹಣಾ ಸಾಮರ್ಥ್ಯ ಕುಸಿಯುತ್ತಿದೆ. ಹೊಸ ನಿರ್ಮಾಣ ಅಸಾಧ್ಯ. ಆಲಮಟ್ಟಿಯ ಅಣೆಕಟ್ಟಿನಲ್ಲಿ ರಾಜ್ಯದ ಪಾಲಿನ ನೀರು ಸಂಗ್ರಹಕ್ಕೆ ನ್ಯಾಯಾಲಯದ ತೀರ್ಪಿದೆ, ಪ್ರಸ್ತುತ 509 ರಿಂದ 519 ಮೀಟರ್‌ಗೆ ನೀರು ಸಂಗ್ರಹಿಸಲು ಸಮ್ಮತಿಯಿದ್ದರೂ 20 ವರ್ಷವಾದರೂ ಏಕೆ ಸಾಧ್ಯವಾಗಿಲ್ಲ! ಮಳೆ ಬಂದರೆ ಪ್ರವಾಹ ಪರಿಹಾರ, ಬೇಸಿಗೆ ಶುರುವಿನಲ್ಲಿ ಬರ ಘೋಷಣೆ ಮಾಡುತ್ತ ಅವರಿವರ ಟೀಕಿಸುವ ಮಾತಿನಿಂದ ನಾಡಿಗೆ ನೀರಾಗುವುದಿಲ್ಲ. ಜನಪ್ರತಿನಿಧಿಗಳು ಜಲಪ್ರತಿಧಿಗಳಾಗುವುದು ಕಾಲದ ಅಗತ್ಯ. ಬರ, ನದಿ, ಕಾಡು, ಕೆರೆ, ಕೃಷಿ ಕುರಿತ ಇವರೆಲ್ಲರ ಅಜ್ಞಾನ ಭವಿಷ್ಯದ ಇನ್ನಷ್ಟು ಜಲಕ್ಷಾಮಕ್ಕೆ ಆಹ್ವಾನ ನೀಡುತ್ತಿದೆ.

ವಿಚಿತ್ರವೆಂದರೆ ಕೃಷಿ ನೀರಾವರಿ, ಆಹಾರ ಧಾನ್ಯ ಉತ್ಪಾದನೆ ಕನಸಿನೊಂದಿಗೆ ಶುರುವಾದ ಬೃಹತ್ ನೀರಾವರಿ ಯೋಜನೆಗಳು ಅಧಿಕ ನೀರು ಬಳಸುವ ಕಬ್ಬು, ಭತ್ತ, ಅಡಿಕೆ ಬೆಳೆ ವಿಸ್ತರಣೆಯ ಸಾಧ್ಯತೆಯಾಗಿವೆ. ಮಲಪ್ರಭಾ,ಘಟಪ್ರಭಾ ನದಿ ಸೇರಿದಂತೆ ಇಡೀ ಕೃಷ್ಣಾ ಕಣಿವೆ ಒಣಗುತ್ತಿದೆ. ಬೀದರಿನ ಮಾಂಜ್ರಾ, ಬಳ್ಳಾರಿಯ ಹಗರಿ ಹಳ್ಳ ಸೇರಿದಂತೆ ಬಹುತೇಕ ನದಿಗಳು ಮರಳು ಅಗೆತಕ್ಕೆ ಸೋತಿವೆ. ಕಾವೇರಿ ಹರಿವು ನಿಲ್ಲಿಸಿದೆ. ಕೃಷಿಗೆ ನೀರು ಕೊಡುವುದಕ್ಕಿಂತ ಕುಡಿಯುವ ನೀರಿನ ಅಗತ್ಯ ಪೂರೈಸುವುದು ನಾರಾಯಣಪುರ, ಆಲಮಟ್ಟಿ, ತುಂಗಭದ್ರಾ, ಕೃಷ್ಣರಾಜ ಸಾಗರ ಅಣೆಕಟ್ಟುಗಳ ಮುಖ್ಯ ಕಾರ್ಯವಾಗಿದೆ. ಭದ್ರಾ ಕಾಲುವೆಗೆ ನೀರು ಹರಿಸಿದರೆ ಸಾಲು ಸಾಲು ಟ್ಯಾಂಕರ್‌ಗಳು ನೀರು ಒಯ್ಯುವ ಚಿತ್ರಗಳು ನಾಳಿನ ಪರಿಸ್ಥಿತಿಯ ದಿಕ್ಸೂಚಿ.

ಕಳಕೊಂಡಿದ್ದನ್ನು ಎಲ್ಲಿ ಹುಡುಕಬೇಕು? ಎಲ್ಲಿ ಕಳೆದಿದೆಯೋ ಮೊದಲು ಅಲ್ಲಿ ಹುಡುಕೋಣ.  2001 ರಿಂದ ಪ್ರೌಢಶಾಲಾ ಮಕ್ಕಳಿಗೆ ನಿಸರ್ಗ ವಿಸ್ಮಯ ಪರಿಸರ ಶಿಕ್ಷಣ ಕಾರ್ಯಕ್ರಮ ಮಾಡುವಾಗ ರಾಜ್ಯದ ನದಿ, ಕುಡಿಯುವ ನೀರಿನ ಕುರಿತ ಪ್ರಶ್ನೆ ಕೇಳಲು ಶುರು ಮಾಡಿದೆ. 24 ವರ್ಷಗಳಲ್ಲಿ ಸುಮಾರು ಒಂದೂವರೆ ಲಕ್ಷ ಮಕ್ಕಳು ಶಿಬಿರಕ್ಕೆ ಬಂದು ಉತ್ತರಿಸಿದ್ದಾರೆ. ರಾಜ್ಯದ ನದಿಯ ಹೆಸರು ಕೇಳಿದರೆ ‘ನೈಲ್’ ನದಿಯ ಹೆಸರು ಬರೆದ ಮಕ್ಕಳ ಸಂಖ್ಯೆ ಜಾಸ್ತಿಯಿದೆ! ಊರಿನ ಕಾಡು, ಕೃಷಿ, ನದಿ, ನೀರಿನ ಬಳಕೆ, ಸಂರಕ್ಷಣೆಯ ಪ್ರಾಯೋಗಿಕ ಶಿಕ್ಷಣವಿಲ್ಲ. ವಾರ್ಷಿಕ ಎಷ್ಟು ಮಳೆ ಸುರಿಯಿತು? ಸರಾಸರಿ ಮಳೆ ಎಷ್ಟು? ಕುಡಿಯುವ ನೀರಿನ ಮೂಲ ಯಾವುದು? ಎಂಬುದು ಪ್ರಶ್ನೆಯಲ್ಲ. ಸುರಿದ ಮಳೆ ಹನಿ ಸಂರಕ್ಷಣೆಗೆ ಕಾಡು, ಕೃಷಿ, ಕೆರೆ, ಬಾವಿಗಳನ್ನು ಸಂರಕ್ಷಿಸಿ ಸಕಾಲಕ್ಕೆ ಸಜ್ಜುಗೊಳಿಸುವ ನೀರ ನ್ಯಾಯದ ನಾಗರಿಕ ಕಾಳಜಿ ಮುಖ್ಯ.

ಕಲೆ: ಯೋಗಾನಂದ ಎಲ್‌.
ಕಲೆ: ಯೋಗಾನಂದ ಎಲ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT