ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬನಶಂಕರಿ ನಾಟ್ಕದ ಜಾತ್ರಿ ಜೋರೈತಿ

Published 18 ಫೆಬ್ರುವರಿ 2024, 0:22 IST
Last Updated 18 ಫೆಬ್ರುವರಿ 2024, 0:22 IST
ಅಕ್ಷರ ಗಾತ್ರ

‘ಐವತ್ತ ವರ್ಸಗಳಿಂದ ಜಾತ್ರಿಗಿ ಬರತೀವಿ. ದೇವಿ ದರ್ಸನ ಮಾಡಿಕೊಂಡ ಮ್ಯಾಲ ನಾಟಕ ನೋಡಾಕಬೇಕ. ಇಲ್ಲದಿದ್ರ ಜಾತ್ರಿಗಿ ಬಂದಿವಿ ಅಂತ ಅನಸದೇ ಇಲ್ಲ. ವರ್ಸಕ್ಕೊಮ್ಮೆ ಮನೆಯವರೆಲ್ಲ ಸೇರಾಕ ಇದೊಂದ ನೆಪ ಅಗೈತಿ ನೋಡ್ರಿ. ನಾಟಕದ ಕತಿ ಬದಲಾಗ್ಯಾವ, ಆದ್ರ ನಾಟಕದ ಗತ್ತ ಬದಲಾಗಿಲ್ಲ’–ಹೀಗೆ ಮಾತನಾಡುತ್ತಲೇ ಇದ್ದರು ನರಗುಂದ ತಾಲ್ಲೂಕು ಹದ್ಲಿ ಗ್ರಾಮದ ಹನಮಂತಗೌಡ ಕುದರಿ.

ಬಾಗಲಕೋಟೆ ಜಿಲ್ಲೆ ಬಾದಾಮಿಯ ಬನಶಂಕರಿ ಜಾತ್ರೆಯಲ್ಲಿ ನಾಟಕಗಳದ್ದೇ ವಿಶೇಷ ಆಕರ್ಷಣೆ . ಹೀಗಾಗಿ ಹಳ್ಳಿಗರು ಇದನ್ನು ‘ನಾಟಕದ ಜಾತ್ರಿ’ ಅಂಥ ಪ್ರೀತಿಯಿಂದ ಕರೆಯುತ್ತಾರೆ. ಅಷ್ಟರ ಮಟ್ಟಿಗೆ ಇಲ್ಲಿನ ಜನರಿಗೆ ನಾಟಕ ನೋಡುವ ಖಯಾಲಿ.

‘ಗೆಳೇರೆಲ್ಲ ಮುಂಜಾನಿ ಇಲ್ಲ ಸಂಜಿಕೆ ಸೇರಿದಾಗ ದೇವಿ ಜಾತ್ರಿಗಿ ಹೋಗಾದು ಅಂತಾ ನಿರ್ಧಾರ ಮಾಡ್ತಿವಿ. ಕೆಲವರಿಗೆ ಫೋನ್ ನ್ಯಾಗ ಜಾತ್ರಿಗಿ ಬರ್ರೆಲೇ ಅಂತ ಹೇಳ್ತಿವಿ. ಎಲ್ಲರ್ರೂ ಸೇರಿ ಗಾಡ್ಯಾಗಾ ರಾತ್ರಿ ಎಂಟಕ್ಕ ಹ್ವಾದರ ನಾಟಕ ನೋಡಿಕೊಂಡ ಬೆಳಿಗ್ಗೇನ ಬರಾದ. ಜಾತ್ರಿ ಮುಗ್ಯದರಾಗ ಮೂರ್ನಾಲ್ಕ ಸಲ ಹೋಗ್ತಿವಿ. ಹೋದಾಗೊಮ್ಮೆ ಒಂದೆರಡ ನಾಟ್ಕ ನೋಡಿಕೊಂಡ ಬರ್ತಿವಿ’ ಎನ್ನುತ್ತಾರೆ ಬಾದಾಮಿ ತಾಲ್ಲೂಕಿನ ಕೆರೂರಿನ ಗುಂಡಪ್ಪ ಬೋರಣ್ಣವರ. 

ಇವರು ಚಿಕ್ಕಂದಿನಿಂದಲೂ ಜಾತ್ರೆಗೆ ಹೋಗುತ್ತಿದ್ದಾರೆ. ಮೊದಲು ಎತ್ತಿನಬಂಡಿಗಳಲ್ಲಿ ಕುಟುಂಬ ಸಮೇತ ಹೋಗುತ್ತಿದ್ದರು. ಆಗ ಬಂಡಿಗಳೂ ಸಾಕಷ್ಟಿದ್ದವು. ಓಣ್ಯಾಗಿನ ಜನರೆಲ್ಲ ಸೇರಿ ನಾಲ್ಕಾರು ಬಂಡಿಗಳಲ್ಲಿ ಹೋಗುತ್ತಿದ್ದರು. ಈಗ ಬಂಡಿಗಳು ಕಡಿಮೆಯಾಗಿರುವುದರಿಂದ ವಾಹನದಲ್ಲಿಯೇ ಹೋಗಿ ಬರುತ್ತಾರೆ.

ನಾಟಕ ನೋಡಲು ಜನ ತುದಿಗಾಲಲ್ಲಿ ನಿಂತಿದ್ದರೆ, ಇತ್ತ ನಾಟಕ ವೀಕ್ಷಣೆಗೆ ಆಹ್ವಾನಿಸುವ ಕೆಲಸವನ್ನು ನಾಟಕ ಕಂಪನಿಗಳು ಹದಿನೈದು ದಿನಗಳ ಮುಂಚಿನಿಂದಲೇ ಆರಂಭಿಸುತ್ತವೆ. ಅದರ ಝಲಕ್‌ ಹೀಗಿದೆ:

‘ಕನ್ನಡ ಕಲಾಪ್ರೇಮಿಗಳೇ, ಕಲಾರಸಿಕರೇ.. ಇದು ಫುಲ್‌ ಕಾಮಿಡಿ ನಾಟಕ.. ನೋಡಿ ನಕ್ಕು ನಲಿಯಿರಿ.. ಪ್ರತಿನಿತ್ಯ ನಾಲ್ಕು ಪ್ರದರ್ಶನಗಳು... ಮುಖ್ಯಪಾತ್ರದಲ್ಲಿ ಕಾಮಿಡಿ ಕಿಂಗ್‌ ನಟಿಸಿದ್ದಾರೆ.. ತಪ್ಪದೇ ನೋಡಿ.. ನೋಡಲು ಮರೆಯದಿರಿ... ಮರೆತು ನಿರಾಶರಾಗದಿರಿ... ಬನಶಂಕರಿ ಜಾತ್ರೆಯಲ್ಲಿ ಭರ್ಜರಿ ಪ್ರದರ್ಶನ.. ಬನ್ನಿ...ಬನ್ನಿ...ತಪ್ಪದೇ ಬನ್ನಿ... ’ ಎಂದು ಆಟೊ, ಕಾರುಗಳಿಗೆ ಪೋಸ್ಟರ್‌ ಹಚ್ಚಿಕೊಂಡು, ಕರಪತ್ರಗಳನ್ನು ಹಳ್ಳಿ ಹಳ್ಳಿಗಳಲ್ಲಿ ಎಸೆಯುತ್ತಾ, ಮೈಕ್‌ನಲ್ಲಿ ಕೂಗಿ, ಕೂಗಿ ಕರೆಯುತ್ತಾರೆ. ಗೋಡೆ, ಅಂಗಡಿ, ಸಾರ್ವಜನಿಕ ಸ್ಥಳಗಳಲ್ಲಿ ಪೋಸ್ಟರ್‌ಗಳನ್ನು ಅಂಟಿಸುತ್ತಾರೆ. ನಾಟಕಗಳ ಟೆಂಟ್‌ ಮುಂದೆ ನಟ, ನಟಿಯರ ಕಟೌಟ್‌ಗಳ ರಂಗು. 

ಈ ಜಾತ್ರೆ ವೃತ್ತಿ ನಾಟಕ ಕಂಪನಿಗಳಿಗೆ ಆಕ್ಸಿಜನ್‌ ಇದ್ದ ಹಾಗೆ. ನಷ್ಟದ ಅಂಚಿನಲ್ಲಿರುವ ಕಂಪನಿಗಳು ಇಲ್ಲಿ ಮರುಜೀವ ಪಡೆಯುತ್ತವೆ. ಜಾತ್ರೆಯಿಂದ ನೂರಾರು ಕಲಾವಿದರ ಬದುಕಿನ ಬಂಡಿ ಸಾಗುತ್ತದೆ.

ಇಪ್ಪತ್ತು ವರ್ಷಗಳ ಹಿಂದೆ ಜಾತ್ರೆಗೆ ಐದು ಸಿನಿಮಾ ಟೆಂಟ್‌ಗಳು ಹಾಗೂ ಎರಡು ನಾಟಕ ಕಂಪನಿಗಳು ಬರುತ್ತಿದ್ದವು. ವರ್ಷಗಳು ಕಳೆದಂತೆ ಜನರು ಸಿನಿಮಾ ಟೆಂಟ್‌ಗಳತ್ತ ಹೋಗದೆ ನಾಟಕಗಳತ್ತ ಮುಖ ಮಾಡಿದರು. ವರ್ಷದಿಂದ ವರ್ಷಕ್ಕೆ ನಾಟಕದ ಕಂಪನಿಗಳ ಸಂಖ್ಯೆ ಹೆಚ್ಚಾಯಿತು. ಈ ವರ್ಷ ಒಂದು ಸಿನಿಮಾ ಟೆಂಟ್‌, ಹತ್ತು ನಾಟಕ ಕಂಪನಿಗಳು ಬಂದಿವೆ.  ಮಧ್ಯಾಹ್ನ 2.45 ಶುರುವಾದ ಪ್ರದರ್ಶನಗಳು ಬೆಳಗಿನ ಜಾವ 5ಕ್ಕೆ ಕೊನೆಗೊಳ್ಳುತ್ತವೆ.

ರಾಜ್ಯದ ಉಳಿದ ಜಾತ್ರೆಗಳಲ್ಲಿ ಎರಡರಿಂದ ನಾಲ್ಕು ನಾಟಕ ಕಂಪನಿಗಳಿದ್ದರೆ ಹೆಚ್ಚು. ಇಲ್ಲಿ ಅವುಗಳ ಸಂಖ್ಯೆ ಎರಡಂಕಿ ತಲುಪಿರುತ್ತದೆ. ಇದಕ್ಕೆ ಕಾರಣ ಪ್ರೇಕ್ಷಕರ ನಾಟಕ ಪ್ರೀತಿ. ಜಾತ್ರೆಗೆ ಬರುವ ಬಹುತೇಕರು ನಾಟಕ ನೋಡುವ ಹವ್ಯಾಸ ಬೆಳೆಸಿಕೊಂಡಿದ್ದಾರೆ. ಹೀಗಾಗಿ ಕಂಪನಿಗಳು ಇಲ್ಲಿ ಟೆಂಟ್‌ ಹಾಕುತ್ತವೆ. ನಾಟಕಗಳ ಪ್ರದರ್ಶನದಲ್ಲಿ ಬನಶಂಕರಿ ಜಾತ್ರೆಗೇ ಅಗ್ರಸ್ಥಾನ.

ಆರು ತಿಂಗಳು ತಯಾರಿ

ಈ ಜಾತ್ರೆ ನಾಟಕಗಳ ಪ್ರದರ್ಶನ ತಯಾರಿ ಆರು ತಿಂಗಳ ಮೊದಲೇ ಆರಂಭವಾಗುತ್ತದೆ ಎನ್ನುವುದು ಬಹಳ ಜನರಿಗೆ ಗೊತ್ತಿಲ್ಲ. ಜಾತ್ರೆಗೆಂದೇ ಹೊಸ ನಾಟಕಗಳನ್ನು ಬರೆಯಲಾಗುತ್ತದೆ. ಪಾತ್ರಗಳಿಗೆ ತಕ್ಕ ಕಲಾವಿದರ ಆಯ್ಕೆ ನಡೆಯುತ್ತದೆ. ತಿಂಗಳುಗಳ ಮೊದಲೇ ಸಿನಿಮಾ, ಸೀರಿಯಲ್‌ಗಳ ನಟ, ನಟಿಯರು, ಕಾಮಿಡಿ ಷೋಗಳ ಕಲಾವಿದರನ್ನು ಪಾತ್ರಕ್ಕಾಗಿ ಬುಕ್‌ ಮಾಡಲಾಗುತ್ತದೆ. ತಿಂಗಳುಗಟ್ಟಲೇ ಅದರ ತಾಲೀಮು ನಡೆಯುತ್ತದೆ. ಸಣ್ಣ ಜಾತ್ರೆ ಅಥವಾ ಯಾವುದಾದರೊಂದು ಊರಲ್ಲಿ ಮೊದಲು ಪ್ರದರ್ಶಿಸಲಾಗುತ್ತದೆ. ಅಲ್ಲಿ ಪ್ರೇಕ್ಷಕರ ಪ್ರತಿಕ್ರಿಯೆ ನೋಡಿ ಅಗತ್ಯ ಬದಲಾವಣೆ ಮಾಡಿಕೊಂಡು ಪೂರ್ಣ ಸಿದ್ಧತೆಯೊಂದಿಗೆ ರಂಗಕ್ಕಿಳಿಯುತ್ತವೆ ನಾಟಕ ಕಂಪನಿಗಳು.

ದಶಕದ ಹಿಂದೆ ಪೌರಾಣಿಕ, ಐತಿಹಾಸಿಕ, ಭಕ್ತಿ ಹಾಗೂ ಸಾಮಾಜಿಕ ನಾಟಕಗಳ ಪ್ರದರ್ಶನ ಹೆಚ್ಚಿತ್ತು. ಇತ್ತೀಚಿನ ವರ್ಷಗಳಲ್ಲಿ ಸಾಮಾಜಿಕ ಅದರಲ್ಲೂ ಹಾಸ್ಯ ಪ್ರಧಾನ ನಾಟಕಗಳದೇ ದರ್ಬಾರು. ಹಾಸ್ಯ ನಾಟಕದಲ್ಲಿ ಪಂಚ್‌ ಡೈಲಾಗ್‌ಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ನಾಯಕ, ಖಳನಾಯಕ, ನಾಯಕಿ, ಹಾಸ್ಯ ಪಾತ್ರಧಾರಿಗಳ ವೇದಿಕೆ ಪ್ರವೇಶಕ್ಕೆ ತಕ್ಕಂತೆ ಸಂಗೀತ ನೀಡಲಾಗುತ್ತದೆ. ಇದಕ್ಕೆ ಪ್ರೇಕ್ಷಕರ ಪ್ರತಿಕ್ರಿಯೆಯೂ ಭರ್ಜರಿಯಾಗಿರುತ್ತದೆ.

‘ಚಿಂದೋಡಿ ವೀರಪ್ಪನವರಿಂದ ಹಿಡಿದು ಚಿಂದೋಡಿ ವೀರೇಶ, ವರುಣ, ಮಯೂರರವರೆಗೆ ಐದು ತಲೆಮಾರುಗಳು ನಾಟಕದಲ್ಲೇ ಕಳೆದಿವೆ. ಪೊಲೀಸನ ಮಗಳು ನಾಟಕ 4,500 ಪ್ರದರ್ಶನಗಳನ್ನು ಕಂಡು ದಾಖಲೆ ಬರೆದಿದೆ. ಎಷ್ಟು ನಗತಿ ನಗು, ಗೋವಾದಲ್ಲಿ ಗೌಡ್ರು, ಹೆಂಡತಿ ಕೇಳಿ ಮದುವೆಯಾಗು, ನಿದ್ದಿಗೆಡಿಸ್ಯಾಳ ಬಸಲಿಂಗಿ... ಹೀಗೆ ಹತ್ತಾರು ಜನಪ್ರಿಯ ನಾಟಕಗಳನ್ನು ಪ್ರದರ್ಶಿಸಿದ್ದೇವೆ’ ಎಂದು ಹೆಮ್ಮೆಯಿಂದ ಹೇಳುತ್ತಾರೆ ಕೆ.ಬಿ.ಆರ್. ಡ್ರಾಮಾ ಕಂಪನಿಯ ಚಿಂದೋಡಿ ಶ್ರೀಕಂಠೇಶ. 

‘ಏಳುಬೀಳುಗಳ ನಡುವೆ ನಾಟಕ ಕಂಪನಿಗಳು ನಡೆದಿವೆ. ಕಷ್ಟಗಳು ಬಹಳ ಇವೆ. ಪ್ರತಿ ದಿನ ₹20 ಸಾವಿರ ಖರ್ಚಿದೆ. ನೂರಾರು ಸಂಖ್ಯೆಯಲ್ಲಿದ್ದ ನಾಟಕ ಕಂಪನಿಗಳ ಸಂಖ್ಯೆ ಈಗ ಇಪ್ಪತ್ತರ ಆಸುಪಾಸಿನಲ್ಲಿದೆ. ಟಿವಿ, ಮೊಬೈಲ್‌ಗಳಿಂದಾಗಿ ಜನರು ನಾಟಕಗಳಿಂದ ದೂರ ಸರಿದಿದ್ದಾರೆ. ಜತೆಗೆ ಸಿನಿಮಾ ನಟ, ನಟಿಯರನ್ನು ಕರೆಯಿಸುವುದು, ಐಟಂ ಸಾಂಗ್‌, ಅಶ್ಲೀಲ ಸಂಭಾಷಣೆಯಿಂದ ನಾಟಕ ಒಂದು ವರ್ಗಕ್ಕೆ ಸೀಮಿತವಾಗಿತ್ತು. ಈಗ ಅಶ್ಲೀಲ ಸಂಭಾಷಣೆ, ಐಟಂ ಸಾಂಗ್‌ಗಳಿಲ್ಲದ ಹಾಸ್ಯ ನಾಟಕಗಳ ಪ್ರದರ್ಶನ ಶುರುವಾದ ಮೇಲೆ ಮತ್ತೆ ಕುಟುಂಬ ಸಮೇತರಾಗಿ ಜನರು ಬರಲಾರಂಭಿಸಿದ್ದಾರೆ. ಇದು ನಾಟಕ ಕಂಪನಿಗಳಿಗೆ ಶುಭ ಸೂಚಕ’ ಎಂದು ನಾಟಕಕಾರ ರಾಜಣ್ಣ ಜೇವರ್ಗಿ ಹೇಳುತ್ತಾರೆ.

ಬನಶಂಕರಿ ಜಾತ್ರೆ ಕೈ ಹಿಡಿದರೆ, ವರ್ಷ ಪೂರ್ತಿ ಅದೇ ನಾಟಕ ಪ್ರದರ್ಶನ ಮಾಡುತ್ತಾರೆ. ಇಲ್ಲಿನ ಪ್ರೇಕ್ಷಕರು ಮೆಚ್ಚಿದರೆ ಸಾಕು, ಬಾಯಿಮಾತಿನಲ್ಲಿಯೇ ರಾಜ್ಯದಾದ್ಯಂತ ನಾಟಕದ ಪ್ರಚಾರ ತನ್ನಿಂದ ತಾನೇ ಆಗುತ್ತದೆ. ಮುಂದೆ ಕೊಟ್ಟೂರು, ಗುಡಗುಂಟಿ ಅಮರೇಶ್ವರ, ಶಿರಸಿ ಮಾರಿಕಾಂಬಾ ಸೇರಿದಂತೆ ಹಲವು ಜಾತ್ರೆಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತವೆ ಎಂಬುದು ನಾಟಕ ಕಂಪನಿಗಳ ಮಾಲೀಕರ ಅನುಭವದ ಮಾತು. ವಿಶಿಷ್ಟ ಸಂಸ್ಕೃತಿಯೊಂದನ್ನು ಹಲವು ದಶಕಗಳಿಂದ ಪೋಷಿಸಿಕೊಂಡು ಬರುತ್ತಿರುವ ಬನಶಂಕರಿ ಜಾತ್ರೆ, ಕಂಪನಿ ನಾಟಕಗಳ ಪಾಲಿಗೆ ಸಂಭ್ರಮ, ಸಡಗರ ಮತ್ತು ಭರವಸೆ...

ರಾಜ್‌ಕುಮಾರ್‌, ವಜ್ರಮುನಿ, ನರಸಿಂಹರಾಜು...

ಮೇರು ನಟ ರಾಜ್‌ಕುಮಾರ್‌ ಅವರಿಂದ ಹಿಡಿದು ಬಹುತೇಕ ಪ್ರಸಿದ್ಧ ನಟ, ನಟಿಯರು ಇಲ್ಲಿ ನಾಟಕಗಳ ಪ್ರದರ್ಶನ ನೀಡಿದ್ದಾರೆ. ನಾಟಕದ ಹಿನ್ನೆಲೆಯಿಂದ ಬಂದಿದ್ದು ಒಂದು ಕಾರಣವಾದರೆ, ಚಲನಚಿತ್ರಕ್ಕಿಂತ ಹೆಚ್ಚಿನ ಸಂಭಾವನೆ ಇಲ್ಲಿ ದೊರೆಯುತ್ತಿತ್ತು, ಜತೆಗೆ ಜನಪ್ರಿಯತೆಯೂ ಹೆಚ್ಚುತ್ತಿತ್ತು ಎನ್ನುವುದು ಮತ್ತೊಂದು ಕಾರಣ.

ನರಸಿಂಹರಾಜು, ಬಾಲಕೃಷ್ಣ, ಕಲ್ಯಾಣಕುಮಾರ್‌ ಉದಯಕುಮಾರ್‌, ವಜ್ರಮುನಿ, ಸುದರ್ಶನ್‌, ಸುಧೀರ್‌, ಸುಂದರಕೃಷ್ಣ ಅರಸ್, ಪಂಡರಿಬಾಯಿ, ಬಿ.ಸರೋಜಾದೇವಿ, ಮೈನಾವತಿ, ಬಿ.ವಿ.ರಾಧಾ, ರಾಜಶ್ರೀ, ರಮಾದೇವಿ, ಕಲ್ಪನಾ, ಭವ್ಯಾ ಸೇರಿದಂತೆ ಹಲವರು ಜಾತ್ರೆ ನಾಟಕಗಳಲ್ಲಿ ನಟಿಸಿರುವುದು ಇತಿಹಾಸ ಪುಟಗಳಲ್ಲಿ ದಾಖಲಾಗಿದೆ. ಕಳೆದ ವರ್ಷ ಮಾಲಾಶ್ರೀ, ಈ ವರ್ಷ ಶ್ರುತಿ ಹೊಸ ಸೇರ್ಪಡೆ. 

ಸಂಭಾವನೆ ಹೆಚ್ಚಿರುವ ಕಾರಣಕ್ಕೆ ಈಗಿನ ಜನಪ್ರಿಯ ನಟ, ನಟಿಯರನ್ನು ಕಂಪನಿಗಳು ಕರೆಯುತ್ತಿಲ್ಲ. ಆದರೆ, ಈಗಲೂ ಟಿವಿ ಷೋಗಳಲ್ಲಿ ಬರುವವರು ನಾಟಕಗಳಲ್ಲಿ ಅಭಿನಯಿಸುತ್ತಿದ್ದಾರೆ. ನಾಟಕಗಳ ಮೂಲಕ ಮನೆಮಾತಾದ ನಟ ರಾಜು ತಾಳಿಕೋಟಿ, ಕಾಮಿಡಿ ಕಿಲಾಡಿಗಳು ಷೋದಲ್ಲಿ ನಟಿಸಿರುವ ‘ರಾಗಿಣಿ’ ಖ್ಯಾತಿಯ ರಾಘು, ಶುಭಲಕ್ಷ್ಮಿ ಯಲ್ಲಾಪುರ, ಹರೀಶ ಹಿರಿಯೂರು, ದಯಾನಂದ ಬೀಳಗಿ, ಶ್ವೇತಾ ಬೀಳಗಿ, ಜೂನಿಯರ್‌ ಪ್ರಭಾಕರ್‌ ಸೇರಿದಂತೆ ಹಲವರು ನಟಿಸುತ್ತಿದ್ದಾರೆ. 

ಜಾತ್ರೆಯ ವೈಶಿಷ್ಟ್ಯ

ಆರಂಭ ಜ.23
ಮುಕ್ತಾಯ ಫೆ. 24

ನಿತ್ಯ 3–4 ಪ್ರದರ್ಶನ

400 ರಿಂದ ಸಾವಿರ ಕುರ್ಚಿಗಳು

ಟಿಕೆಟ್‌ ದರ ₹100, ₹120, ₹150

900ಕ್ಕೂ ಹೆಚ್ಚು ಪ್ರದರ್ಶನಗಳು

₹2 ಕೋಟಿಗೂ ಹೆಚ್ಚು ಕಲೆಕ್ಷನ್‌

 ಬನಶಂಕರಿಯಲ್ಲಿ ಗುಬ್ಬಿ ಬಿಎಸ್‌ಆರ್ ನಾಟಕ ಕಂಪನಿಯ ಕಲಾವಿದರು ಪ್ರದರ್ಶಿಸಿದ ‘ಗಂಗಿ ಮನ್ಯಾಗ ಗೌರಿ ಹೊಲದಾಗ’ ನಾಟಕದ ದೃಶ್ಯ ಚಿತ್ರ: ಇಂದ್ರಕುಮಾರ ದಸ್ತೇನವರ
 ಬನಶಂಕರಿಯಲ್ಲಿ ಗುಬ್ಬಿ ಬಿಎಸ್‌ಆರ್ ನಾಟಕ ಕಂಪನಿಯ ಕಲಾವಿದರು ಪ್ರದರ್ಶಿಸಿದ ‘ಗಂಗಿ ಮನ್ಯಾಗ ಗೌರಿ ಹೊಲದಾಗ’ ನಾಟಕದ ದೃಶ್ಯ ಚಿತ್ರ: ಇಂದ್ರಕುಮಾರ ದಸ್ತೇನವರ
ಬನಶಂಕರಿ ಜಾತ್ರೆಯಲ್ಲಿ ನಾಟಕ ಕಂಪನಿಗಳ ಮುಂದೆ ನಟ ನಟಿಯರ ಕಟೌಟ್‌ಗಳು ಚಿತ್ರ: ಇಂದ್ರಕುಮಾರ ದಸ್ತೇನವರ
ಬನಶಂಕರಿ ಜಾತ್ರೆಯಲ್ಲಿ ನಾಟಕ ಕಂಪನಿಗಳ ಮುಂದೆ ನಟ ನಟಿಯರ ಕಟೌಟ್‌ಗಳು ಚಿತ್ರ: ಇಂದ್ರಕುಮಾರ ದಸ್ತೇನವರ
ನಾಟಕ ಕಂಪನಿಯೊಂದರ ಪ್ರಚಾರ ವೈಖರಿ ಚಿತ್ರ: ಇಂದ್ರಕುಮಾರ ದಸ್ತೇನವರ
ನಾಟಕ ಕಂಪನಿಯೊಂದರ ಪ್ರಚಾರ ವೈಖರಿ ಚಿತ್ರ: ಇಂದ್ರಕುಮಾರ ದಸ್ತೇನವರ
ನಾಟಕಗಳ ಪೋಸ್ಟರ್‌ಗಳು ಚಿತ್ರ: ಇಂದ್ರಕುಮಾರ ದಸ್ತೇನವರ
ನಾಟಕಗಳ ಪೋಸ್ಟರ್‌ಗಳು ಚಿತ್ರ: ಇಂದ್ರಕುಮಾರ ದಸ್ತೇನವರ
ಬನಶಂಕರಿ ಜಾತ್ರೆಯಲ್ಲಿ ನಾಟಕ ವೀಕ್ಷಿಸುತ್ತಿರುವ ಜನತೆ ಚಿತ್ರ: ಇಂದ್ರಕುಮಾರ ದಸ್ತೇನವರ
ಬನಶಂಕರಿ ಜಾತ್ರೆಯಲ್ಲಿ ನಾಟಕ ವೀಕ್ಷಿಸುತ್ತಿರುವ ಜನತೆ ಚಿತ್ರ: ಇಂದ್ರಕುಮಾರ ದಸ್ತೇನವರ

ರಾಜ್‌ಕುಮಾರ್‌ ವಜ್ರಮುನಿ ನರಸಿಂಹರಾಜು...

ಮೇರು ನಟ ರಾಜ್‌ಕುಮಾರ್‌ ಅವರಿಂದ ಹಿಡಿದು ಬಹುತೇಕ ಪ್ರಸಿದ್ಧ ನಟ ನಟಿಯರು ಇಲ್ಲಿ ನಾಟಕಗಳ ಪ್ರದರ್ಶನ ನೀಡಿದ್ದಾರೆ. ನಾಟಕದ ಹಿನ್ನೆಲೆಯಿಂದ ಬಂದಿದ್ದು ಒಂದು ಕಾರಣವಾದರೆ ಚಲನಚಿತ್ರಕ್ಕಿಂತ ಹೆಚ್ಚಿನ ಸಂಭಾವನೆ ಇಲ್ಲಿ ದೊರೆಯುತ್ತಿತ್ತು ಜತೆಗೆ ಜನಪ್ರಿಯತೆಯೂ ಹೆಚ್ಚುತ್ತಿತ್ತು ಎನ್ನುವುದು ಮತ್ತೊಂದು ಕಾರಣ.

ನರಸಿಂಹರಾಜು ಬಾಲಕೃಷ್ಣ ಕಲ್ಯಾಣಕುಮಾರ್‌ ಉದಯಕುಮಾರ್‌ ವಜ್ರಮುನಿ ಸುದರ್ಶನ್‌ ಸುಧೀರ್‌ ಸುಂದರಕೃಷ್ಣ ಅರಸ್ ಪಂಡರಿಬಾಯಿ ಬಿ.ಸರೋಜಾದೇವಿ ಮೈನಾವತಿ ಬಿ.ವಿ.ರಾಧಾ ರಾಜಶ್ರೀ ರಮಾದೇವಿ ಕಲ್ಪನಾ ಭವ್ಯಾ ಸೇರಿದಂತೆ ಹಲವರು ಜಾತ್ರೆ ನಾಟಕಗಳಲ್ಲಿ ನಟಿಸಿರುವುದು ಇತಿಹಾಸ ಪುಟಗಳಲ್ಲಿ ದಾಖಲಾಗಿದೆ. ಕಳೆದ ವರ್ಷ ಮಾಲಾಶ್ರೀ ಈ ವರ್ಷ ಶ್ರುತಿ ಹೊಸ ಸೇರ್ಪಡೆ.

ಸಂಭಾವನೆ ಹೆಚ್ಚಿರುವ ಕಾರಣಕ್ಕೆ ಈಗಿನ ಜನಪ್ರಿಯ ನಟ ನಟಿಯರನ್ನು ಕಂಪನಿಗಳು ಕರೆಯುತ್ತಿಲ್ಲ. ಆದರೆ ಈಗಲೂ ಟಿವಿ ಷೋಗಳಲ್ಲಿ ಬರುವವರು ನಾಟಕಗಳಲ್ಲಿ ಅಭಿನಯಿಸುತ್ತಿದ್ದಾರೆ. ನಾಟಕಗಳ ಮೂಲಕ ಮನೆಮಾತಾದ ನಟ ರಾಜು ತಾಳಿಕೋಟಿ ಕಾಮಿಡಿ ಕಿಲಾಡಿಗಳು ಷೋದಲ್ಲಿ ನಟಿಸಿರುವ ‘ರಾಗಿಣಿ’ ಖ್ಯಾತಿಯ ರಾಘು ಶುಭಲಕ್ಷ್ಮಿ ಯಲ್ಲಾಪುರ ಹರೀಶ ಹಿರಿಯೂರು ದಯಾನಂದ ಬೀಳಗಿ ಶ್ವೇತಾ ಬೀಳಗಿ ಜೂನಿಯರ್‌ ಪ್ರಭಾಕರ್‌ ಸೇರಿದಂತೆ ಹಲವರು ನಟಿಸುತ್ತಿದ್ದಾರೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT