ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಲದ ನಂಟು.. ಒಣಮೀನು ಗಂಟು

Published 8 ಜೂನ್ 2024, 23:49 IST
Last Updated 8 ಜೂನ್ 2024, 23:49 IST
ಅಕ್ಷರ ಗಾತ್ರ

ಮೇ ತಿಂಗಳು ಬಂತೆಂದರೆ ಸಾಕು, ಕಾರವಾರದ ಬಹುತೇಕ ಮನೆಗಳಲ್ಲಿ ಸಂಭ್ರಮದ ವಾತಾವರಣ. ವರ್ಷದ ಬಹುತೇಕ ದಿನಗಳಲ್ಲಿ ಖಾಲಿ ಹೊಡೆಯುವ ಇಲ್ಲಿನ ಮನೆಗಳಲ್ಲಿ ಜನರ ಓಡಾಟ, ಮಕ್ಕಳ ಕೇಕೆ ಕಾಣಸಿಗುತ್ತದೆ. ಅಷ್ಟೇ ಅಲ್ಲ, ವರ್ಷಪೂರ್ತಿ ಮಕ್ಕಳನ್ನು ಕಾಣದ ವಯೋವೃದ್ಧ ತಂದೆ–ತಾಯಿಯ ಮುಖದಲ್ಲಿ ಮಂದಹಾಸ ಚಿಮ್ಮುತ್ತಿರುತ್ತದೆ.

ಇದಕ್ಕೆ ಕಾರಣ ಹಬ್ಬ ಹರಿದಿನ ಅಲ್ಲ. ವಿಶೇಷ ಆಚರಣೆಯಂತೂ ಅಲ್ಲವೇ ಅಲ್ಲ. ಜೀವನ ಕಟ್ಟಿಕೊಳ್ಳುವ ಸಲುವಾಗಿ ಊರು ತೊರೆದು ಮಹಾನಗರಗಳಲ್ಲಿ ನೆಲೆನಿಂತವರನ್ನು ಹೀಗೆ ಬರಸೆಳೆದು ಸಡಗರದ ವಾತಾವರಣ ಸೃಷ್ಟಿಸುವುದು ಒಣಮೀನು!

ಕಾರವಾರದ ಜನರಿಗೂ ಒಣಮೀನಿನ ಘಮಲಿಗೂ ಬಿಡಿಸಲಾರದ ನಂಟು. ಕರಾವಳಿ ಭಾಗದ ಜನರ ಜನಪ್ರಿಯ ಖಾದ್ಯಗಳಲ್ಲಿ ಒಂದೆನಿಸಿದ ಒಣಮೀನು ಇಲ್ಲಿನ ಜನರ ಭಾವ–ಬಂಧ ಗಟ್ಟಿಗೊಳಿಸುವುದನ್ನು ಕಾಣಬಹುದು. ದೇಶದ ಯಾವ ಭಾಗದಲ್ಲೇ ಇದ್ದರೂ ಕಾರವಾರಿಗರು ಬೇಸಿಗೆ ರಜೆಯಲ್ಲಿ ಊರಿಗೆ ಮರಳುತ್ತಾರೆ. ಹೀಗೆ ಬಂದಾಗ ಕುಟುಂಬದ ಒಟ್ಟಿಗೆ ವಾರಗಟ್ಟಲೆ, ಕೆಲವರು ತಿಂಗಳುಗಟ್ಟಲೆ ಕಾಲ ಕಳೆಯುತ್ತಾರೆ. ಹೊರ ರಾಜ್ಯದಲ್ಲಿ, ರಾಜ್ಯದ ಮಹಾನಗರಗಳಲ್ಲಿ ಹುಟ್ಟಿ ಬೆಳೆದ ತಮ್ಮ ಕುಡಿಗಳಿಗೆ ಇಲ್ಲಿನ ಆಚಾರ–ವಿಚಾರ, ಸಂಸ್ಕೃತಿಯನ್ನು ಪರಿಚಯಿಸಿಕೊಡಲು ಅವರಿಗೆ ಇದು ಸಕಾಲವೂ ಹೌದು.

‘ಒಣಮೀನು ನಮ್ಮ ಪಾಲಿಗೆ ಕೇವಲ ಆಹಾರದ ವಸ್ತುವಲ್ಲ, ಅದು ನಮ್ಮೊಂದಿಗೆ ತವರು ನೆಲದ ನಂಟು ಬೆಸೆಯುವ ಪದಾರ್ಥ’–ಹೀಗೆ ಮಾತಿಗೆ ಇಳಿದದ್ದು ಮಹಾರಾಷ್ಟ್ರದ ಪುಣೆಯಲ್ಲಿ ನೆಲೆಸಿರುವ ಸಾಯಿನಾಥ ಫಳ ದೇಸಾಯಿ. ಸಂತೆಯಲ್ಲಿ ಕೆ.ಜಿ.ಗಟ್ಟಲೆ ಒಣಮೀನು ಖರೀದಿಸುತ್ತಿದ್ದ ಅವರೊಟ್ಟಿಗೆ ಪತ್ನಿ, ಇಬ್ಬರು ಮಕ್ಕಳು ಇದ್ದರು. ಅವರಿಗೆ ಒಣಮೀನಿನ ಕುರಿತು ವಿವರಿಸುವ ಜತೆ ಜತೆಗೆ ಕಾರವಾರದ ಸಾಂಪ್ರದಾಯಿಕ ಆಚರಣೆಗಳಾದ ಬಂಡಿಹಬ್ಬ, ಮಾಘ ಹುಣ್ಣಿಮೆ ಕುರಿತು ತಿಳಿಸುತ್ತಿದ್ದರು.

ಇದೇ ಮಾರುಕಟ್ಟೆಯ ಇನ್ನೊಂದು ಬದಿಯಲ್ಲಿ ಗೋವಾದ ಮಾಪುಸಾದಿಂದ ಬಂದಿದ್ದ 14 ಜನರ ತಂಡವೊಂದು ಚೀಲಗಟ್ಟಲೆ ಒಣಮೀನು ಖರೀದಿಯಲ್ಲಿ ತೊಡಗಿತ್ತು. ‘ಹ್ಯಾ ಪಟ್ಟಿ ತಾಜಾ ಮಾಶ್ಲಿ ಜಾಸ್ತಿ ಮೆಳ್‍ನಾ ತಶಾಕಿ ಸುಕೇಲಿ ಮಾಶ್ಲಿ ಖಾವ್‍ಚೆ’ (ಈ ಬಾರಿ ತಾಜಾ ಹಸಿ ಮೀನಂತೂ ನಮಗೆ ಸಿಕ್ಕಿಲ್ಲ, ಒಣಮೀನನ್ನಾದರೂ ತಿನ್ನೋಣ) ಎಂದು ಅವರು ಕೊಂಕಣಿ ಭಾಷೆಯಲ್ಲಿ ಮಾತನಾಡಿಕೊಳ್ಳುತ್ತಿದ್ದರು.ಅವರಲ್ಲಿ ಬಹುತೇಕ ಮಂದಿ ಕಾರವಾರ ಮೂಲದವರು.

ಸೋರಾ ಮೀನು ವ್ಯಾಪಾರ ನಿರತ ಮಹಿಳೆ
ಸೋರಾ ಮೀನು ವ್ಯಾಪಾರ ನಿರತ ಮಹಿಳೆ

ಮೇ ತಿಂಗಳ ಕೊನೆಯ ಎರಡು ಭಾನುವಾರ ಕಾರವಾರದ ಒಣಮೀನು ಮಾರುಕಟ್ಟೆ ಭಾವನಾತ್ಮಕ ಸನ್ನಿವೇಶಕ್ಕೆ ಸಾಕ್ಷಿಯಾಗುತ್ತದೆ. ವರ್ಷಗಟ್ಟಲೆ ತವರು ನೆಲದಿಂದ ದೂರ ಇರುವ ಕುಟುಂಬಗಳ ಸದಸ್ಯರು ಒಟ್ಟಾಗಿ ಸೇರಲು ಈ ಮಾರುಕಟ್ಟೆ ವೇದಿಕೆ ಆಗುತ್ತದೆ. ವೃದ್ಧರಿಂದ ಹಿಡಿದು ಪುಟಾಣಿ ಮಕ್ಕಳವರೆಗೆ ಒಣಮೀನು ಮಾರುಕಟ್ಟೆಗೆ ಒಟ್ಟಾಗಿ ಬಂದು ಖರೀದಿಯಲ್ಲಿ ತೊಡಗುತ್ತಾರೆ.

‘ಕಾರವಾರದ ನೆನಪು ತಂದುಕೊಡುವಲ್ಲಿ ಒಣಮೀನಿಗೆ ಅಗ್ರಸ್ಥಾನವಿದೆ. ದೇಶದ ಯಾವ ಭಾಗದಲ್ಲಿ ನೆಲೆಸಿದ್ದರೂ ನಮ್ಮೂರಿನಲ್ಲಿ ಸಿದ್ಧವಾಗುವ ಒಣಮೀನಿನ ಖಾದ್ಯ ಬೇರೆಲ್ಲೂ ಸಿಗಲಾರದು. ಮಳೆಗಾಲಕ್ಕೆ ದಾಸ್ತಾನು ಮಾಡಿಡಬಹುದಾದ ಒಣಮೀನನ್ನು ಖರೀದಿಸುವ ನೆಪಕ್ಕಾದರೂ ವರ್ಷಕ್ಕೊಮ್ಮೆ ಊರಿಗೆ ಬರುವ ಪರಿಪಾಟ ಬೆಳೆಸಿಕೊಂಡಿದ್ದೇವೆ. ನಮ್ಮ ಮಕ್ಕಳಿಗೂ ಊರಿನ ಪರಿಚಯ, ಬಂಧುಗಳೊಂದಿಗೆ ಒಡನಾಡಲು ಇದು ಸೂಕ್ತ ಸಮಯ’ ಎಂದು ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ನೆಲೆಸಿದ, ಸುಂಕೇರಿ ಮೂಲದ ರಜತ ಅಣ್ವೇಕರ ಹೇಳುತ್ತಾರೆ.

ಕರಾವಳಿ ಭಾಗದ ಜನರ ಪಾಲಿಗೆ ಅವಶ್ಯ ಖಾದ್ಯವಾಗಿರುವ ಮೀನು ಮಳೆಗಾಲದಲ್ಲಿ ಸಿಗುವುದು ವಿರಳ. ಜೂನ್, ಜುಲೈ ತಿಂಗಳಿನಲ್ಲಿ ಯಾಂತ್ರೀಕೃತ ಮೀನುಗಾರಿಕೆ ನಿಷೇಧವಿರುವ ಕಾರಣ ಈ ಅವಧಿಯಲ್ಲಿ ಒಣಮೀನು ಸಂಗ್ರಹಿಸಿಟ್ಟು ಸೇವಿಸುವುದು ವಾಡಿಕೆ. ಈ ಕಾರಣಕ್ಕಾಗಿಯೇ ಮೇ ತಿಂಗಳಿನಲ್ಲಿ ನಡೆಯುವ ಪ್ರತಿ ವಾರದ ಸಂತೆಯಲ್ಲಿ ಒಣಮೀನು ವಹಿವಾಟು ನಡೆಯುವುದು ಹೆಚ್ಚು.

‘ಗೋವಾ, ಮಹಾರಾಷ್ಟ್ರದಲ್ಲಿ ಒಣಮೀನು ಲಭಿಸಿದರೂ ಕಾರವಾರದ ಒಣಮೀನಿನ ರುಚಿ ತಂದುಕೊಡಲಾರದು. ಕಾರವಾರದ ಮೀನುಗಾರ ಮಹಿಳೆಯರು ಮೀನು ಒಣಗಿಸುವ ಶೈಲಿ ಅದ್ಭುತ. ಅಲ್ಲದೆ ಇಲ್ಲಿನ ಒಣಮೀನು ಕೆಡದಂತೆ ನಾಲ್ಕು ತಿಂಗಳವರೆಗೂ ಇಟ್ಟುಕೊಳ್ಳಬಹುದು. ಇದೇ ಕಾರಣಕ್ಕಾಗಿ ಒಣಮೀನು ಖರೀದಿಗೆ ಕಾರವಾರಕ್ಕೆ ಬರುತ್ತೇವೆ’ ಎಂದು ಗೋವಾದಲ್ಲಿ ನೆಲೆಕಂಡುಕೊಂಡ, ಕಾಜುಬಾಗದ ಸ್ಟೆಫಿ ಫರ್ನಾಂಡಿಸ್ ಹೇಳುತ್ತಾರೆ.

ಪ್ರತಿ ಭಾನುವಾರ ನಡೆಯುವ ಸಂತೆಯಲ್ಲಿ ಬಂಗುಡೆ, ಸೋರಾ, ಬಣಗು, ಬೊಂಬಿಲ್, ಸಿಗಡಿ, ತೊರ್ಕೆ ಸೇರಿದಂತೆ ಹಲವು ಬಗೆಯ ಒಣಮೀನುಗಳ ಮಾರಾಟ ನಡೆಯುತ್ತದೆ. ಬಂಗುಡೆ, ಬಣಗು ಮೀನುಗಳನ್ನು ಪ್ರತಿ ಮೀನಿನ ಲೆಕ್ಕದಲ್ಲಿ ಮಾರಾಟ ಮಾಡಿದರೆ, ದುಬಾರಿ ಸೋರಾ ಮೀನನ್ನು ತುಂಡಿನ ಲೆಕ್ಕದಲ್ಲಿ ಮಾರಾಟ ಮಾಡಲಾಗುತ್ತದೆ. ಸಿಗಡಿ, ಸಣ್ಣ ಸಿಗಡಿ (ಸುಂಗಟ್) ಮುಂತಾದ ಸಣ್ಣಗಾತ್ರದ ಮೀನುಗಳನ್ನು ಸೇರಿನ ಲೆಕ್ಕದಲ್ಲಿ ಅಳೆದು ಮಾರಾಟ ಮಾಡುತ್ತಾರೆ.

ಕೆ.ಜಿ.ಗಟ್ಟಲೆ ಮೀನನ್ನು ಖರೀದಿಸಿ ದೂರದ ಊರುಗಳಿಗೆ ಒಯ್ಯುವ ಕಾರವಾರಿಗರು ಒಣಮೀನುಗಳ ಜತೆಗೆ ಈ ನೆಲದ ನೆನಪನ್ನೂ ಹೊತ್ತೊಯ್ಯುತ್ತಾರೆ. 

ಸಣ್ಣಗಾತ್ರದ ಒಣ ಸಿಗಡಿ (ಸುಂಗಟ್) ಮೀನನ್ನು ಸೇರಿನಲ್ಲಿ ಮೊಗೆಯುತ್ತಿರುವ ಮೀನು ವ್ಯಾಪಾರಿ.
ಸಣ್ಣಗಾತ್ರದ ಒಣ ಸಿಗಡಿ (ಸುಂಗಟ್) ಮೀನನ್ನು ಸೇರಿನಲ್ಲಿ ಮೊಗೆಯುತ್ತಿರುವ ಮೀನು ವ್ಯಾಪಾರಿ.

ಒಣಮೀನು ಸಿದ್ಧಪಡಿಸುವುದು ಹೀಗೆ

ಜನವರಿ ತಿಂಗಳಿನಿಂದಲೇ ಒಣಮೀನು ತಯಾರಿ ಚುರುಕುಗೊಳ್ಳುತ್ತದೆ. ದೋಣಿಗಳಿಗೆ ಹೆಚ್ಚು ಮೀನು ಸಿಕ್ಕಾಗ, ಸಣ್ಣಗಾತ್ರದ ಮೀನುಗಳು ಬಲೆಗೆ ಬಿದ್ದಾಗ ಅವುಗಳನ್ನು ಮಾರುವ ಬದಲು ಒಣಮೀನು ಸಿದ್ಧಪಡಿಸಲು ಖರೀದಿಸಲಾಗುತ್ತದೆ. ಹಸಿಮೀನಿಗೆ ಸಾಣಿಕಟ್ಟಾದ ಹರಳುಉಪ್ಪು ಸವರಿ ಒಂದಿಡೀ ದಿನ ನೆನೆಸಿಡಲಾಗುತ್ತದೆ. ಬಳಿಕ ಸಮುದ್ರದ ನೀರಿನಲ್ಲಿ ತೊಳೆದು ವಾರಗಟ್ಟಲೆ ಒಣಗಿಸಲಾಗುತ್ತದೆ. ಚೆನ್ನಾಗಿ ಒಣಗಿದ ಮೀನನ್ನು ಗಾಳಿ ಆಡದ ಪೆಟ್ಟಿಗೆ ಅಥವಾ ಬುಟ್ಟಿಯಲ್ಲಿ ಮುಚ್ಚಿಟ್ಟರೆ ಐದಾರು ತಿಂಗಳವರೆಗೆ ಕೆಡುವುದಿಲ್ಲ. ಇಷ್ಟೊಂದು ವ್ಯವಸ್ಥಿತ ರೀತಿಯಲ್ಲಿ ಒಣಮೀನು ಸಿದ್ಧಪಡಿಸುವುದು ಕಾರವಾರ, ಮಾಜಾಳಿ, ಬೇಲೆಕೇರಿ ಭಾಗದಲ್ಲಿ ಹೆಚ್ಚು. ಇದೇ ಕಾರಣಕ್ಕೆ ಇಲ್ಲಿನ ಒಣಮೀನಿಗೆ ಬೇಡಿಕೆಯೂ ಹೆಚ್ಚು.

ಕಾರವಾರದ ಸಂತೆಯಲ್ಲಿ ಮಾರಾಟಕ್ಕೆ ಇಡಲಾಗಿದ್ದ ಒಣಗಿಸಿದ ಬಂಗುಡೆ ಮೀನು.
ಕಾರವಾರದ ಸಂತೆಯಲ್ಲಿ ಮಾರಾಟಕ್ಕೆ ಇಡಲಾಗಿದ್ದ ಒಣಗಿಸಿದ ಬಂಗುಡೆ ಮೀನು.
ಮಾರಾಟಕ್ಕೆ ಕುಳಿತ ಜಾಗದಲ್ಲೇ ಮೀನುಗಳನ್ನು ಒಣಗಿಸಿಟ್ಟಿರುವ ವ್ಯಾಪಾರಿಗಳು.
ಮಾರಾಟಕ್ಕೆ ಕುಳಿತ ಜಾಗದಲ್ಲೇ ಮೀನುಗಳನ್ನು ಒಣಗಿಸಿಟ್ಟಿರುವ ವ್ಯಾಪಾರಿಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT