ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಿಗೆ ರೋಡಿನ ತಂಪೂ..ಸ್ಯಾಂಕಿ ಕೆರೆಯ ಚಳಿಯೂ

Chaligala-guddi
Last Updated 29 ನವೆಂಬರ್ 2018, 19:45 IST
ಅಕ್ಷರ ಗಾತ್ರ

ಪ್ರೇಮ ಕವಿಗೂ ಸಂಜೆಯ ಚಳಿಗೂ ಬಿಡದ ನಂಟು. ಚಳಿಯ ದೆಸೆಯಿಂದಾಗಿಯೇ ಕವಿ ರೂಪುಗೊಳ್ಳುತ್ತಾನೋ ಏನೋ!

ಹೇಳಿ ಕೇಳಿ ನವೆಂಬರ್‌–ಡಿಸೆಂಬರ್‌ ಇಡೀ ದೇಶದಾದ್ಯಂತ ಚಳಿಗಾಲಕ್ಕೆ ಮುನ್ನುಡಿ ಬರೆಯುವ ಮಾಸಗಳು. ಜಮ್ಮು–ಕಾಶ್ಮೀರದಲ್ಲಿ ಬಿದ್ದ ಹಿಮದಿಂದಾಗಿ ರೈತ ಬೆಳೆದ ಸೇಬಿನ ಮರಗಳು ಹಿಮದಡಿ ಸಿಲುಕಿಕೊಂಡ ಚಿತ್ರ ಇತ್ತೀಚೆಗೆ ವೈರಲ್‌ ಆಗಿತ್ತು. ರಷ್ಯಾ, ಸೈಬೀರಿಯಾದಂತಹ ಅತಿ ಚಳಿ ಪೀಡಿತ ಪ್ರದೇಶಗಳಲ್ಲಿ ಜನರು ಹಿಮದ ಚಾದರ ಹೊದ್ದ ನೆಲದಲ್ಲೇ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಓಡಾಡಬೇಕು.

ವಿದೇಶದ ಉಸಾಬರಿಯನ್ನು ಪಕ್ಕಕ್ಕಿರಿಸಿ ನಮ್ಮ ಬೆಂಗಳೂರಿನ ಚಳಿಯನ್ನೂ ಕೊಂಚ ಆಸ್ವಾದಿಸೋಣ.

ಬೆಂಗಳೂರು ಅಭಿವೃದ್ಧಿಯ ಶಬ್ದಕ್ಕೆ ಪ್ರಾಮುಖ್ಯತೆ ಕೊಟ್ಟಿದ್ದರಿಂದ ಸಾವಿರಾರು ರಸ್ತೆಗಳು ನೆಲಕ್ಕುರುಳಿದವು. ನಾವು ಅದಕ್ಕಿಂತ ಮುಂಚಿನ ಬೆಂಗಳೂರು ದಿನಗಳನ್ನು ನೆನಪಿಸಿಕೊಳ್ಳೋಣ. ಕಾಡುಮಲ್ಲೇಶ್ವರ, ಸಂಪಿಗೆ ರಸ್ತೆ, ಜಯನಗರ, ಬಸವನಗುಡಿ, ಲಾಲ್‌ಬಾಗ್‌, ಕಬ್ಬನ್‌ ಪಾರ್ಕ್‌ಗಳು ಎಷ್ಟೊಂದು ಜನರ ವಿಹಾರಕ್ಕೆ ಇಂಬು ಕೊಟ್ಟಿಲ್ಲ?

ನನ್ನ ನೆನನಪುಗಳು ಮಲ್ಲೇಶ್ವರದ ಸಂಪಿಗೆ ರಸ್ತೆ, ಸ್ಯಾಂಕಿ ಕೆರೆಯ ತಂಪನೆಯ ಹವಾದೊಂದಿಗೆ ಬೆಸೆದುಕೊಂಡಿವೆ. ಮೂರನೇ ಕ್ರಾಸಿನಲ್ಲಿರುವ ಹಳ್ಳಿ ಮನೆಯ ಬಿಸಿ ಬಿಸಿ ಕಾಫಿ ಹೀರಿ ಸಂಪಿಗೆ ರಸ್ತೆಯ ಗತಕಾಲದ ಇತಿಹಾಸ ನೆನೆಸಿಕೊಳ್ಳುತ್ತಾ ಹೊರಟರೆ ಆಹಾ... ಸ್ವರ್ಗ ಮೂರೇ ಇಂಚು!

ಸಂಜೆಯ ಚಳಿಗೆ ಅಷ್ಟೇನೂ ಟ್ರಾಫಿಕ್ ಇಲ್ಲದ ಈ ರಸ್ತೆಯಲ್ಲಿ ಲಾಂಗ್‌ ಡ್ರೈವ್‌ನಂತೆ ಲಾಂಗ್‌ ವಾಕ್ ಹೊರಟು ಹಾಗೇ ಅರಣ್ಯ ಭವನದ ಒಳಗೊಮ್ಮೆ ಇಣುಕಿ ಸ್ಯಾಂಕಿ ಕೆರೆಯ ಅಂಚಿನ ಬೆಂಚಿಗೆ ಬಂದು ಕುಳಿತರೆ ಮುಗಿಯಿತು. ಸಂಜೆ 6ಕ್ಕೆ ಆರಂಭವಾದ ಹರಟೆ ರಾತ್ರಿ ಒಂಬತ್ತಾದರೂ ಮುಗಿಯಲೊಲ್ಲದು. ಆಗೆಲ್ಲ ಮಗ್ಗುಲಲ್ಲಿ ಜೀವದ ಗೆಳತಿ ಇರಬಾರದಿತ್ತೆ ಎನಿಸಿದ್ದಿದೆ. ಇದ್ದಿದ್ದರಂತೂ ಮುಗಿದೇ ಹೋಯಿತು.

ಸ್ಯಾಂಕಿ ಕೆರೆಯೇ ನಯಾಗರ ಜಲಪಾತವಾಗಿ, ಲಡಾಕಿನ ಹಿಮಾಚ್ಛಾದಿತ ಚೆರ್ರಿ ಮರದ ಅಡಿ ಕುಳಿತ ಅನುಭವವಾಗಿಬಿಡುತ್ತಿತ್ತು.

ಹರಟೆ ಸಾಕೆನಿಸಿ ಮತ್ತೆ ಫುಟ್‌ಪಾತಿನ ಮೇಲೆ ಹೆಜ್ಜೆ ಹಾಕುತ್ತಾ ಮಲ್ಲೇಶ್ವರದ ಅಂದದ ಆ್ಯಂಟಿಕ್‌ ಪೀಸುಗಳಂತಿರುವ ಮನೆಗಳ ಕಡೆ ದೃಷ್ಟಿ ಹಾಯಿಸುತ್ತಾ ಮಲ್ಲೇಶ್ವರ ಗ್ರೌಂಡ್‌ ಒಳಗೊಂದು ಸುತ್ತು ಹಾಕಿ ಕೆ.ಸಿ. ಜನರಲ್‌ ಆಸ್ಪತ್ರೆಯ ಪಕ್ಕದ ಪುಟ್ಟ ಅಂಗಡಿಯಲ್ಲಿ ದೊಡ್ಡ ಗ್ಲಾಸಿನಲ್ಲಿ ಸಿಗುವ ನಿಂಬೆ ಚಹಾ ಕುಡಿಯುತ್ತಿದ್ದಂತೆಯೇ ನಡೆದಾಡಿದ ದಣಿವೆಲ್ಲ ಮಾಯ. ಕೆಂಪು ಸ್ವೆಟರ್‌ ಒಳಗೆ ಹಾಯ್ದು ದೇಹಕ್ಕೆ ಕಚಗುಳಿಯಿಡುವ ಚಳಿಗೆ ಬೆಚ್ಚನೆಯ ಸ್ಪರ್ಶ.

ಬೆಂಗಳೂರು ಬದಲಾಗಿದೆ. ಬದಲಾಗುತ್ತಲೇ ಇರುವುದು ಅದರ ಸಹಜ ಗುಣಧರ್ಮ. ನಿತ್ಯ ನೂರಾರು ರೈಲುಗಳು, ಸಾವಿರಾರು ಬಸ್ಸುಗಳ ಮೂಲಕ ಬೆಂಗಳೂರಿನಲ್ಲಿ ಉದ್ಯೋಗ ಹುಡುಕಿಕೊಂಡು ಬರುವವರ ವಾಸ್ತವ್ಯಕ್ಕೆ ಮನೆಗಳು, ಅಪಾರ್ಟ್‌ಮೆಂಟುಗಳು ನಿರ್ಮಾಣವಾಗುವುದು ಸರ್ವೆ ಸಾಮಾನ್ಯ. ಒಮ್ಮೊಮ್ಮೆ ಈ ನಿರ್ಮಾಣ ಕಾರ್ಯ ಉಸಿರು ಕಟ್ಟಿಸಿದಂತೆಯೂ ಆಗುತ್ತದೆ.

ಇದೆಲ್ಲದರ ಮಧ್ಯೆಯೂ ಪರಿಸರ ಪ್ರೇಮಿಗಳ ಒತ್ತಾಸೆಯ ಮೇಲೆ ನಿರ್ಮಾಣವಾದ ಪಾರ್ಕುಗಳು ಜನರನ್ನು ಕೆಲ ಹೊತ್ತು ಚಳಿಯನ್ನು ಅನುಭವಿಸಲು ಅವಕಾಶ ನೀಡುವ ಯಕ್ಷಿಣಿಯರಿದ್ದಂತೆ. ಈ ಯಕ್ಷಿಣಿಯರನ್ನು ಕಣ್ಣಲ್ಲಿ ಕಾಪಿಟ್ಟು ಕಾಯೋಣ.

ಈ ಚಳಿ ಮನದನ್ನೆಯ ತೋಳಿನೊಂದಿಗೆ ನಮ್ಮ ತೋಳು ಇನ್ನಷ್ಟು ಬಿಗಿಯಾಗಿಸಲು ನೆಪವಾಗಲಿ. ಆ ನೆಪ ಭವಿಷ್ಯದ ಪ್ರೇಮ ಪಯಣದ ನಾವಿಕನೂ ಆಗಲಿ. ಆ ನಾವಿಕ ಜತನದಿಂದ ದೂರದ ತೀರವನ್ನು ನಮ್ಮನ್ನು ತಲುಪಿಸಲಿ.

ಇಷ್ಟೆಲ್ಲ ಹೇಳಿದ ಮೇಲೆ ಅಮರ್‌ ಪ್ರೇಮ್‌ ಸಿನಿಮಾದಲ್ಲಿ ಹೂಗ್ಲಿ ನದಿಯ ರಾತ್ರಿಯ ಬೆಳಕಲ್ಲಿ ದೋಣಿಯಲ್ಲಿ ಸಾಗುವ ರಾಜೇಶ್‌ ಖನ್ನಾ– ಶರ್ಮಿಳಾರ‘ಚಿಂಗಾರಿ ಕೋಯಿ ಭಡಕೆ...’ ಹಾಡು ನೆನಪಾಗದಿದ್ದರೆ ಕೇಳಿ.

ಹಾಡು ನೆನಪಿಗೆ ಬಂತೆ? ಇನ್ನೇಕೆ ತಡ, ಹೈ ವಾಲ್ಯೂಂ ಕೊಟ್ಟುಕೊಂಡು ಹೆಡ್‌ ಫೋನ್‌ ಹಾಕಿಕೊಂಡು ಕಿಶೋರ್‌ಕುಮಾರ್‌ ಉಲಿದ ಈ ಹಾಡು ಕೇಳುತ್ತಾ ಸಂಪಿಗೆ ರಸ್ತೆಯಲ್ಲೊಮ್ಮೆ ಜೋಡಿ ಹೆಜ್ಜೆ ಹಾಕಿ ಬನ್ನಿ.

ಎಲ್ಲರಿಗೂ ಹ್ಯಾಪಿ ಚಳಿಗಾಲ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT