ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೃದಯ ಸೋತವನ ನಾಲಗೆ ಸುಳ್ಳು ಹೇಳಬಾರದು ಎಂದ ಗಾಲಿಬ್!

Last Updated 22 ಡಿಸೆಂಬರ್ 2018, 19:45 IST
ಅಕ್ಷರ ಗಾತ್ರ

ಛೆ, ಇನ್ನ್ಯಾರಿಗೆ ದೂರುವುದಿಲ್ಲಿ
ಅದೃಷ್ಟವೂ ನನ್ನ ಕೈ ಹಿಡಿಯದಿರಲು
ಬೇಡಿಕೊಂಡಿದ್ದೊಂದೆ ಓ, ಸಾವು ದಕ್ಕಲಿ ನನಗೆ
ಆ ಆಶೀರ್ವಾದವೂ ನಿರಾಕರಿಸಲಾಯಿತು!

ಹೀಗೆ ಸಾವನ್ನೂ ಒಂದು ಆಶೀರ್ವಾದದಂತೆ ಬೇಡಿಕೊಂಡವನು ಅಸಾಮಾನ್ಯ ಕವಿ ಗಾಲಿಬ್. ಆತನ ಪೂರ್ತಿ ಹೆಸರು ಮಿರ್ಝ ಅಸದುಲ್ಲಹಾ ಬೇಗ್‌ಖಾನ್‌ ಆದರೂ ಕಾವ್ಯನಾಮ ಮಾತ್ರ ಗಾಲಿಬ್ ಅಸದ್ ಆಗಿ ಬಳಸುತ್ತಿದ್ದ. ಡಿಸೆಂಬರ್ 27, 1797ರಲ್ಲಿ ಆಗ್ರಾದಲ್ಲಿ ಹುಟ್ಟಿದ ಗಾಲಿಬ್, ತನ್ನ ಐದನೆಯ ವಯಸ್ಸಿಗೆ ಅಪ್ಪನನ್ನು ಕಳೆದುಕೊಂಡ. ಇನ್ನು ಬಾಲಕ ಗಾಲಿಬ್ ಮತ್ತು ಆತನ ತಮ್ಮ ಮಿರ್ಝ ಯೂಸುಫ್‌ಖಾನ್‌ನನ್ನು ತಬ್ಬಲಿಗಳನ್ನಾಗಿ ನೋಡಲಾರದ ಆತನ ಚಿಕ್ಕಪ್ಪ ಮಿರ್ಝ ನಸ್ರುಲ್ಲಹಾ ಬೇಗ್‌ಖಾನ್‌ ಅವರನ್ನು ತನ್ನ ಮಡಿಲಿಗೆ ಹಾಕಿಕೊಂಡ. ಆದರೆ ಅವು ಮೊಘಲ್ ಆಳ್ವಿಕೆಯ ಕೊನೆಯ ದಿನಗಳು. ಬ್ರಿಟಿಷರು ತಮ್ಮ ಪ್ರಾಬಲ್ಯ ಹೆಚ್ಚಿಸಿಕೊಳ್ಳುತ್ತಿದ್ದ ದಿನಗಳು. ಕಾನ್ಪುರ್, ಆಗ್ರಾ, ದೆಹಲಿ ಮತ್ತು ಲಖ್ನೋದಂತಹ ಶಹರುಗಳಲ್ಲಿ ಆಗಾಗ ದಂಗೆ, ರಾಜಕೀಯ ಪ್ರಕ್ಷೋಭೆ ಸಾಮಾನ್ಯವಾಗಿತ್ತು. ಅಂತಹ ದಿನಗಳಲ್ಲಿಯೆ ಗಾಲಿಬ್, 13 ವರುಷದವನಾಗಿ ಮೇಲ್ವರ್ಗದ ಸಮುದಾಯದ ರೀತಿ ರಿವಾಜಿನಂತೆ ಉಮ್ರಾವ್ ಬೇಗಂರನ್ನುಮದುವೆಯೂ ಆದ. ಮದುವೆಯ ನಂತರ ತನ್ನ ತಮ್ಮ ಯೂಸುಫ್ ಮತ್ತು ತನ್ನ ಹೆಂಡತಿಯೊಂದಿಗೆ ದೆಹಲಿಗೆ ಬಂದ. ಆದರೆ, ಸದಾ ಪರದೇಶಿತನದಿಂದ ಬಳಲುತ್ತಿದ್ದ ಗಾಲಿಬ್‌ನ ತಮ್ಮ ಯೂಸುಫ್‌ಖಾನ್‌ ಮಾನಸಿಕ ರೋಗಕ್ಕೆ ತುತ್ತಾಗಿ ತೀರಿಕೊಂಡ. ಒಂದೆಡೆ ಹುಟ್ಟಿದ ಐದು ಮಕ್ಕಳಲ್ಲಿ ಒಂದೂ ಜೀವಂತ ಉಳಿಯದಾಗಿ, ಮತ್ತೊಂದೆಡೆ ತಮ್ಮನನ್ನು ಕಳೆದುಕೊಂಡ ದುಃಖ ಗಾಲಿಬ್‌ನನ್ನು ಜರ್ಝರಿತಗೊಳಿಸಿದವು. ದತ್ತು ಪಡೆದ ಆರನೆಯ ಮಗುವೂ ತಮಗೆ ದಕ್ಕದಾದಾಗ ಅಕ್ಷರಶಃ ಆತ ನಾನೊಬ್ಬ ನಸೀಬುವಂತನೇ ಸರಿ; ಆದರೆ ಅದ್ಯಾಕೊ ನನ್ನ ಹಣೆ ಬರಹವೇ ಸರಿಯಿಲ್ಲ ಎಂದುಕೊಂಡ.

ಆ ಕಾಲದ ವಾರಸುದಾರರಂತೆ ಬದುಕಲು ಬೇಕಾದ ಎಲ್ಲಾ ಐಷಾರಾಮಿತನಗಳನ್ನು, ವಿಲಾಸಿತನವನ್ನು ಮೈಗೂಡಿಸಿಕೊಂಡಿದ್ದ ಗಾಲಿಬ್, ಮೈ ಬಗ್ಗಿಸಿ ದುಡಿಯುವುದನ್ನು ಮಾತ್ರ ಮೈಗೂಡಿಸಿಕೊಂಡಿದ್ದಿಲ್ಲ. ಬದಲಾಗಿ ತನ್ನ ಅಜ್ಜನಿಂದಾಗಿ ಬರುತ್ತಿದ್ದ ಅಷ್ಟಿಷ್ಟು ಹಣದ ಮೂಲ, ಮನೆಯ ಸೌದಾ, ಇಲ್ಲ ಉದ್ರಿಗಳನ್ನು ಭರಿಸಲು ಸಾಕಾಗುತಿತ್ತು. ಆದರೆ, ಅಜ್ಜನ ಸಾವಿನ ನಂತರದ ದಿನಗಳಲ್ಲಿ ಎದುರಾದ ಆರ್ಥಿಕ ಸಂಕಷ್ಟಗಳು ಅವನನ್ನು ದೈಹಿಕವಾಗಿ ಮಾತ್ರ ಕುಗ್ಗಿಸಿದವು. ಯಾಕೆಂದರೆ, ಅವು ದುಡಿದು ಮನೆ ನಿಭಾಯಿಸುತ್ತಿದ್ದ ತನ್ನ ವಾರಿಗೆಯ ಎಲ್ಲರಿಗೂ ಇವೆ ಎಂಬ ವಿಚಿತ್ರ ಸಮಜಾಯಿಸಿ ತನಗೆ ತಾನೆ ಕೊಟ್ಟುಕೊಳ್ಳುತ್ತಿದ್ದ. ಲೌಕಿಕ ಕಷ್ಟಗಳು ತನ್ನ ಆತ್ಮಕ್ಕೆ ಸಂಬಂಧಿಸಿದವು ಅಲ್ಲ ಎಂದೇ ಬದುಕಿದ ಗಾಲಿಬ್, ಎಂದೂ ಅವುಗಳನ್ನು ನೆತ್ತಿಯ ಮೇಲೆ ಹೊತ್ತು ಅಲೆಯಲಿಲ್ಲ.

ಈ ಹಿಂದೆ ಮೊಘಲರ ಆಸ್ಥಾನದಿಂದ ಸಿಗುತ್ತಿದ್ದ ಸವಲತ್ತುಗಳಿಂದ ವಂಚಿತರಾದ ಸರದಾರರು, ಗೌರವಾನ್ವಿತರು ತಾವು ಕಳೆದುಕೊಂಡ ಆ ಅನುಕೂಲಗಳನ್ನು ಹೇಗಾದರೂ ಮಾಡಿ ಮುಂದುವರೆಸಲು ಬ್ರಿಟಿಷ್ ಅಧಿಕಾರಿಗಳ ಮುಂದೆ ಹಲ್ಲುಗಿಂಜಿದರು. ಪರಮ ಸ್ವಾರ್ಥಿಗಳಾದರು. ಒಬ್ಬರ ಮೇಲೆ ಮತ್ತೊಬ್ಬರು ದೂರು ಕೊಡುವ, ನಗರದ ಒಳ ಸಂಚುಗಳನ್ನು ತಂದು ಫಿರಿಯಾದು ಮಾಡಿ, ಅಧಿಕಾರಿಗಳ ಮನ ಗೆಲ್ಲುವ ಸಣ್ಣತನಕ್ಕೆ ಇಳಿದರು. ರಾಯಲ್ಟಿಯೆ ತಮ್ಮ ಬದುಕಿನಾಸರೆ ಆದ ಅವರಿಗೆ, ಐಷಾರಾಮಿತನವೆಂಬುದು ಚರ್ಮಕ್ಕೆ ಅಂಟಿಕೊಂಡಿತ್ತು. ಹಾಗಾಗಿ ನಗರದಲ್ಲಿ ನಡೆಯುತ್ತಿದ್ದ ಮುಷೈರಾಗಳಲ್ಲಿ, ಸಂಜೆ ಕೂಟಗಳಲ್ಲಿ ವ್ಯಯಿಸಬೇಕಾದ ಖರ್ಚುಗಳನ್ನು ಹೊಂದಿಸಿಕೊಂಡು ತಮ್ಮ ಸ್ಥಿತಿವಂತಿಕೆ ತೋರಬೇಕಿತ್ತು. ಆದರೆ, ಇಷ್ಟೆಲ್ಲ ಖಯಾಲಿ ಅಲ್ಲದಿದ್ದರೂ ಒಂದು ವರ್ಗದ ಜೀವನ ಶೈಲಿಗೆ ಒಗ್ಗಿಕೊಂಡಿದ್ದ ಗಾಲಿಬ್‌ಗೆ, ತನ್ನ ತಾತನ ಗೌರವಧನಕ್ಕಾಗಿ ಕಲ್ಕತ್ತೆಗೂ ಹೋಗುವ ಸಂದರ್ಭ ಬರುತ್ತದೆ. ಆದರೆ, ತನ್ನ ಆತ್ಮಗೌರವಕ್ಕೆ ಚ್ಯುತಿ ಬರುವುದಾದರೆ, ಎಂತಹ ಪದವಿಗಳನ್ನು, ಐಶ್ವರ‍್ಯಗಳನ್ನು ತಿರಸ್ಕರಿಸಬಲ್ಲವನಾಗಿದ್ದ ಗಾಲಿಬ್, ತನ್ನ ವಾರಿಗೆಯ ಯಾರ ಹತ್ತಿರವೂ ಕೈಯೊಡ್ಡಿ ಬೇಡಲಿಲ್ಲ. ಬರೀ ಕುಹಕಿಗಳು, ಸ್ವಾರ್ಥಿಗಳು, ತಮ್ಮ ಸ್ವಾರ್ಥಕ್ಕಾಗಿ ಏನು ಮಾಡಲೂ ಸಿದ್ಧರಿದ್ದ ಜನರ ನಡುವೆ ಗಾಲಿಬ್ ಥೇಟು ಒಬ್ಬ ಹುಚ್ಚನಂತೆ ಬದುಕಹತ್ತಿದ.

ದೆಹಲಿ ಕೆಂಪುಕೋಟೆಯ ಎದುರಿನ ಆ ಬಲ್ಲಿಮಾರನ್‌ಗಲ್ಲಿಯ ಖಾಲಿ ನಡು ಬೀದಿಯಲ್ಲಿ ಫಕೀರನಂತೆ ಹಾಡು ಗುನುಗುತ್ತಾ ನಡೆದು ಹೋಗುತ್ತಿದ್ದ ಗಾಲಿಬ್, ನಾನು ಸತ್ತರೆ ದಯವಿಟ್ಟು ನನ್ನ ಆ ಬೀದಿಯಲ್ಲಿ ಹೂಳಬೇಡಿ, ದಾರಿ ಹೋಕರಿಗೆ ಯಾಕೆ ತಿಳಿಯಬೇಕು, ಆ ಬೀದಿಯಲಿ ಅವಳ ಮನೆ ಇರುವ ಸುದ್ದಿ ಎಂದ. ಮೋಹಕ್ಕೆ ಬಂದ ಹೆಂಡತಿಯಿಂದ ಪ್ರೀತಿ ದಕ್ಕದಾದಾಗ, ಮೆಹಫಿಲ್‌ಗಳತ್ತ ಮುಖ ಮಾಡಿ ಹೊರಡುತ್ತಿದ್ದ. ಅಲ್ಲಿ ಕಳಪೆ ಗಜಲ್‌ಗಳ ಕೇಳಿ ರೋಸಿ ಹೋಗುತ್ತಿದ್ದ. ಆಗಾಗ ಮತ್ತಿನಲ್ಲಿ ಜಗಳಗಳೂ ಆಗುತ್ತಿದ್ದವು. ಆದರೆ, ತನ್ನ ಬದುಕನ್ನು ಅಟಕಾಯಿಸಿಕೊಂಡ ದುಃಖದ ಝಳ ಎಂದೂ ಆತ್ಮಕ್ಕೆ ತಾಕದಂತೆ ನೋಡಿಕೊಂಡ.

ಋತುಗಳುರುಳಿದಂತೆ
ಜಾರುತಿದೆ ನನ್ನ ಬದುಕು
ಎಲೆಯುದುರೊ ಕಾಲ, ಚಳಿಗಾಲ, ವಸಂತ ಬೇಸಿಗೆಯಲಿ
ಆದರೂ ನಾನು ನಿಶ್ಚಲ
ಒಂದು ಬಂಧಿತ ಹಕ್ಕಿಯಂತೆ
ದುಃಖಿಸುತ್ತಾ ಕಳೆದುಕೊಂಡ ರೆಕ್ಕೆಗೆ!

ತನ್ನ ಐವತ್ತನೆಯ ವಯಸ್ಸಿನಲ್ಲಿ ಎರಡು ಸಲ ಜೈಲಿಗೆ ಹೋಗಿ ಬಂದ ಗಾಲಿಬ್‌ಗೆ ಬನ್ಸಿಧರ್‌ ಅನ್ನೊ ಒಬ್ಬ ಬಾಲ್ಯ ಸ್ನೇಹಿತನಿದ್ದ. ಆಗ್ರಾದ ದಿನಗಳಿಂದಲೂ ಅವರ ನಡುವೆ ಒಡನಾಟ ಇತ್ತು. ಅವನು ಚರ್ಮದ ಬೂಟು, ಚಪ್ಪಲಿ, ಬ್ಯಾಗು ಇತರೆ ವಸ್ತುಗಳ ವ್ಯಾಪಾರಿ. ಆಗ್ರಾದಿಂದ ದೆಹಲಿಗೆ ಬಂದಾಗಲೆಲ್ಲ ಗಾಲಿಬ್‌ನನ್ನು ಕಾಣುತ್ತಿದ್ದ. ದೆಹಲಿಯಲ್ಲಿ ಆಗ್ರಾದ ಚಪ್ಪಲಿ ಭಾಳ ನಡಿತದ ಎಂದ ಗೆಳೆಯನ ಮಾತಿಗೆ, ಹೌದೌದು, ದೆಹಲಿಯಲ್ಲಿ ಬರಿ ಚಪ್ಪಲಿ ಭಾಳ ನಡಿತಾವ ಎನ್ನುತ್ತಿದ್ದ ಗಾಲಿಬ್. ಒಮ್ಮೆ ಗಾಲಿಬ್ ಜೈಲಿಗೆ ಹೋಗಿ ಬಂದ ವಿಷಯ ತಿಳಿದು ಆತನ ಗೆಳೆಯ ಮನೆಗೆ ಬಂದ. ತನ್ನ ಜೈಲಿನ ಅನುಭವ ಕೇಳಿದ ಗೆಳೆಯನಿಗೆ ಗಾಲಿಬ್ ಹೇಳಿದ ತಾನು ದಿನಾಲು ಐದು ಛಡಿ ಏಟು ತಿನ್ನಬೇಕಿತ್ತು ಎಂದು. ಹೌದಾ? ಎಂದ ಗೆಳೆಯನ ಆಶ್ಚರ್ಯಕ್ಕೆ ಉತ್ತರವಾಗಿ ನಿಜ ಬಾಯಿಬಿಟ್ಟ. ತಾನು ದಿನಾಲು ಕವಿಯಾಗಬಯಸಿದ್ದ ಹವಾಲ್ದಾರ್‌ ಒಬ್ಬನ ಐದು ದ್ವಿಪದಿಗಳನ್ನು ಕೇಳಬೇಕಿತ್ತು ಎಂದು!

ಬದುಕಿನ ಕಡು ವ್ಯಾಮೋಹಿಯಾಗಿದ್ದ ಗಾಲಿಬ್, ತನ್ನ ರಚನೆಗಳಲ್ಲಿ ಬರಿ ವ್ಯಕ್ತಿತ್ವವನ್ನು ಹಿಡಿಯಲಿಲ್ಲ, ಬದಲಿಗೆ ಲೋಕ ರೂಢಿಗಳನ್ನು. ಹಸ್ತರೇಖೆಗಳ ಎಣಿಸಿ ಅಳಿಯಬೇಡ ಗಾಲಿಬ್, ಅದೃಷ್ಟ ಅವರಿಗೂ ಇರುತ್ತದೆ ಕೈಯಿಗಳೆ ಇಲ್ಲದವರಿಗೂ ಎಂದು ವ್ಯಂಗ್ಯ ಮಾಡಿದ. ಪಿಂಚಣಿಗಾಗಿ ಓಡಾಡಿ ಅಧಿಕಾರಿಗಳೊಂದಿಗೆ ಗುದ್ದಾಡಿ ಕೊನೆಗೆ ಅದರ ಆಸೆಯನ್ನೇ ಬಿಟ್ಟ ಗಾಲಿಬ್, ಆತ್ಮವಿನೋದವನ್ನು ಬೆಳೆಸಿಕೊಂಡ. ತನ್ನ ಸ್ಥಿತಿಗೆ ಮರುಗದೆ, ಸದಾ ಗುಟುರು ಹಾಕುವ ಪಾರಿವಾಳದಂತೆ ಎಗರಲು ಹಂಬಲಿಸುತ್ತಿದ್ದ. ಒಂದು ಮೊಹಲ್ಲದಿಂದ ಗಲ್ಲಿಗೆ, ಒಂದು ದುಃಖದಿಂದ ಆನಂದಕ್ಕೆ. ತನ್ನ ಛಾಳದ ಮೆಟ್ಟಿಲುಗಳ ಮೇಲೆ ಹೆಜ್ಜೆಗಳನ್ನಿಟ್ಟು ಆಕಾಶದ ನಕ್ಷತ್ರ ಹೂವುಗಳನ್ನು ಚುಂಬಿಸುವ ತನ್ನ ವಾಂಛೆಗೆ ತನ್ನ ಹಸಿವು ಅಡ್ಡಿಯಾಗದಂತೆ ನೋಡಿಕೊಂಡ. ಕಲುಕಲಾಗದ ಸಂಜೆ ಹೊತ್ತಿನ ಒಂದು ಮಧುರವಾದ ಸಂಗೀತಕ್ಕಾಗಿ, ವ್ಹಾ...ವ್ಹಾ...ಕ್ಯಾ ಬಾತ್ ಹೈ! ಎಂಬ ಒಂದು ಮೆಚ್ಚುಗೆಗಾಗಿ, ಒಂದು ಬಟ್ಟಲು ಮದಿರೆಗಾಗಿ, ಆದರೆ ತಾನು ಜನಿಸಿದ್ದೇ ಕಾವ್ಯಾರ್ಚನೆಗಾಗಿ ಎಂಬಂತೆ ತನ್ಮಯತೆಯಿಂದ ಮುಷೈರಾಗಳಲ್ಲಿ ಕಳೆದುಹೋಗುತ್ತಿದ್ದ.

ಓ ನನ್ನ ಹೃದಯವೆ
ನಡೆಇನ್ನು ಬದುಕಲು
ಮೈದಾನವೊಂದಕ್ಕೆ, ಯಾರೊಬ್ಬರ ಸುಳಿವಿಲ್ಲದೆಡೆಗೆ
ಮಾತನಾಡಲು ಯಾರಿಲ್ಲದೆಡೆಗೆ
ನಿನ್ನ ನುಡಿ ಅರಿಯದ ಹಾಳು ಕೊಂಪೆಗೆ
ಓ ನನ್ನ ಹೃದಯವೆ
ಕಟ್ಟು ಗುಡಿಸಲೊಂದನು
ಆದರೆ ಗೋಡೆಗಳಿರದಿರಲಿ ಅದಕೆ
ಬಾಗಿಲುಗಳಿರದ, ನೆರೆಯವರು; ಕಾವಲುಗಾರನಿಲ್ಲದ
ಬರುವುದರ ಸುದ್ದಿ ತರದವರ ಜಾಗಕ್ಕೆ
ಹಾಗೊಮ್ಮೆ ಜಡ್ಡು ಬಿದ್ದರೆ ನೀನು
ಯಾರೂ ಇರದಿರಲಿ ಇಲಾಜಿಗಾಗಿ
ಒಂದು ವೇಳೆ ಸತ್ತರೆ ನೀನು
ಅಲ್ಲಿ ದುಃಖಿಸಲು ಯಾರೂ ಇಲ್ಲದೆಡೆಗೆ!

ಆತನ ಬಲ ಮತ್ತು ಬಲಹೀನತೆ ಆತ ಬರೆದ ಪ್ರತೀ ಸಾಲಿನಲ್ಲೂ ಕಾಣಬಹುದು. ಬಲಹೀನತೆಗಳ್ಯಾವವೂ ಮನುಷ್ಯಾತೀತವಾದ ಗುಣಗಳಲ್ಲ. ಆದರೆ, ಆತನೊಳಗಿದ್ದ ಒಬ್ಬ ಕಾವ್ಯ ವ್ಯಾಮೋಹಿ ಆತನೆಲ್ಲಾ ಬಲಹೀನತೆಗಳನ್ನು ಮರೆಸಬಲ್ಲವನಾಗಿದ್ದ. ಇದು ಒಬ್ಬ ಫ್ರಾನ್ಸಿನ ಬಾದಿಲೇರ್‌ಗೆ, ತೆಲುಗಿನ ಒಬ್ಬ ಚಲಂಗೆ ದಕ್ಕಬಹುದಾದ ರಚನೆಯ ತಾಕತ್ತು. ಹಾಗಾಗಿಯೆ ಆತನ ತೀವ್ರ ಜೀವನಪ್ರೀತಿ, ಅದಮ್ಯ ಕಲ್ಪನಾ ಶಕ್ತಿ ಮೆಹಫಿಲ್‌ಗಳಲ್ಲಿ ಆಕರ್ಷಣೀಯ ವ್ಯಕ್ತಿಯನ್ನಾಗಿಸಿತ್ತು. ತನ್ನೆಲ್ಲಾ ದುಃಖವನ್ನು ಕಾವ್ಯಕ್ಕೆ ಮೀಸಲಿಟ್ಟವನಂತೆ ಬದುಕಿದ ಗಾಲಿಬ್, ಹಲವು ವ್ಯಕ್ತಿತ್ವಗಳ ವ್ಯಕ್ತಿತ್ವದಂತಿದ್ದ. ಉರ್ದು, ಫಾರಸಿ ಭಾಷೆಗಳಲ್ಲಿ ಎಷ್ಟು ಸುಲಭವಾಗಿ ಬರೆಯಬಲ್ಲವನಾಗಿದ್ದನೊ, ಅಷ್ಟೇ ಹಿಂದುಸ್ತಾನಿ ಬಲ್ಲವನಾಗಿದ್ದ. ಗಝಲ್, ನಜ್ಮೆ, ಶಾಯರಿ ಒಂದಷ್ಟು ಲೇಖನ ಬರೆದ ಗಾಲಿಬ್‌ಗೆ, ಜನಪ್ರಿಯತೆ ತಂದುಕೊಟ್ಟ ಕೃತಿ ದಿವಾನ್-ಇ-ಗಾಲಿಬ್. ಎದೆಗೆ ನಾಟುವ ಚೂಪುತನ, ಹೃದಯಕ್ಕೆ ಇಳಿಯಬಲ್ಲ ಮೆಲುತನ, ಗುಂಡಿಗೆ ಹೊಕ್ಕಬಲ್ಲ ಗಡಸುತನ, ಛಿದ್ರಗೊಳಿಸಬಲ್ಲ ವ್ಯಂಗ್ಯ ಆತನ ಕಲಂಗೆ ದಕ್ಕಿತ್ತು. ಕಳೆದ ವರ್ಷ ದೆಹಲಿಯ ಕಾವ್ಯಾಸಕ್ತರು, ಗಾಲಿಬ್‌ನ ಓದುಗರು, ಆಭಿಮಾನಿಗಳು ಆತನ 220ನೆಯ ಜನ್ಮ ಶತಮಾನೋತ್ಸವದ ಅಂಗವಾಗಿ ನಗರದ ಹಲವೆಡೆ ಅನೇಕ ಸಾಹಿತ್ಯಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ, ತುಂಬ ಆರ್ಥಪೂರ್ಣವಾಗಿ ಆಚರಿಸಿದರು. ಈಗ ಗಾಲಿಬ್‌ನ ಹವೇಲಿ ಎಂದು ಕರೆಯಲ್ಪಡುವ ದೆಹಲಿಯ ಜನದಟ್ಟಣೆಯ ಚಾಂದಿನಿ ಚೌಕ್ ಮಾರುಕಟ್ಟೆಯ ಬಲ್ಲಿಮಾರನ್‌ಗಲ್ಲಿಯೊಂದರ ಪಡಸಾಲೆಯಲ್ಲಿ ಫೆ.15, 1869ರಲ್ಲಿ ಆತ ಕಾಲವಾದ. ಆದರೆ ಆತನ ರಚನೆಗಳು ಆತನ ಬದುಕಿಗೆ ಹಿಡಿದ ಕೈಗನ್ನಡಿಯಂತೆ ನಮ್ಮೊಂದಿಗೆ ಉಳಿದಿವೆ.

***

ಎಂಥ ಶೋಚನೀಯ ದುಃಖ, ನಾನು ಮರಳಬೇಕಿದೆ
ತೃಷೆಯಿಂದ ಅವರೆಲ್ಲ ಖಾಲಿ ಮಾಡುತ್ತಿರಲು ತುಂಬು ಬಟ್ಟಲುಗಳನು
ಮದಿರೆ ಮುಟ್ಟದಿರಲು ನಾನು ಶಪಥ ಮಾಡಿರಬಹುದು,
ಆದರೆ, ಯಾಕೆ ಮರೆಯಬೇಕು ಸಾಕಿ
ತನ್ನ ಬಟ್ಟಲು ತುಂಬುವ ತನ್ಮಯ ಸೇವೆಯ!

***

ನನ್ನ ಸಾವಿಗಾಗಿ ಜನರೇಕೆ ದುಃಖಿಸುತ್ತಿದ್ದಾರೆ?
ಸಹಚರರ ಕಣ್ಣೀರಿನ ಮೇಲೆ ನನ್ನದೆಲ್ಲಿಯ ಹಿಡಿತ
ಯಾವ ಋಣವ ಲೆಕ್ಕಿಸಲಿ ಅಥವಾ ದುಃಖಕ್ಕೆ ಕಾರಣವ
ಅದೆಂದೋ ನಿಂತಿರಲು ನನ್ನ ಎದೆ ಬಡಿತ!

***

ಇದು ಬರಿ ಹೃದಯವಷ್ಟೆ, ಇಟ್ಟಿಗೆಯಲ್ಲ ಅಥವಾ ಕಲ್ಲು
ಇನ್ನು ದುಃಖದಿಂದ ತುಂಬದಿರಲು ಅದ್ಹೇಗೆ ಸಾಧ್ಯ?
ನೋಯಿಸದಿರಿ ಹಾಗಾದರೆ ಯಾರೂ ಈ ಹೃದಯವನು,
ಅಥವಾ ಅಳುವ ನನ್ನನು ಮತ್ತೆ ಅಳಲು!

***

ಕೇಳದಿರಿ ನಾನೇಕೆ ದುಃಖಿತನೆಂದು ನನ್ನ
ಅದ್ಯಾವ ನೋವು ಎದೆ ಹಿಂಡಿ ಹಿಂಸಿಸುತಿದೆ ಎಂದು ನನ್ನ
ನನ್ನ ಹೃದಯವೇ ನನಗೊಂದು ಜೈಲುಖಾನೆಯ ಕಟ್ಟಿಸಿದೆ
ಮತ್ತು ನಿಜದ ಬುರುಜುಗಳನ್ನು ಎಬ್ಬಿಸಿದೆ
ಚಿಗುರಲು ಒಲವು ಮತ್ತು ದ್ವೇಷಗಳು!
ನನ್ನ ಯೋಚನೆಯ ಆಗಸದಲ್ಲದು ಮುಚ್ಚಿಕೊಳ್ಳುತ್ತದೆ
ಮತ್ತು ಬಯಕೆಯ ನನ್ನ ರೆಕ್ಕೆಗಳನ್ನು ಮುದುಡಿಬಿಡುತ್ತದೆ!

***

ನೋಡಬಹುದಾದುದೆಲ್ಲವು
ಬೇರೇನೂ ಅಲ್ಲ; ಒಂದು ಕನಸು,
ಇದ ಯೋಚಿಸುವಾಗಲೂ
ಎಚ್ಚೆತ್ತ ನಾವು
ಕೇವಲ ಎಚ್ಚೆತ್ತುಕೊಂಡಂತೆ
ಬರಿ ಒಂದು ಕನಸಿನಲಿ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT