ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗದ್ದಲ ಇಲ್ಲದ ಸಂತೋಷ

Last Updated 26 ಜನವರಿ 2019, 9:51 IST
ಅಕ್ಷರ ಗಾತ್ರ

ಸಂಸ್ಕೃತಿ. ಈ ಪದ ಇಂದು ನಮ್ಮ ನಿತ್ಯದ ಬಳಕೆಯಲ್ಲಿರುವ ಪದ. ಈ ಶಬ್ದಕ್ಕೆ ಇರುವ ವಿಶಾಲವಾದ ಅರ್ಥವನ್ನು ಡಿವಿಜಿಯವರು ಸೊಗಸಾಗಿ ವಿವರಿಸಿದ್ದಾರೆ, ‘ಸಂಸ್ಕೃತಿ’ ಎನ್ನುವ ಅವರ ಕೃತಿಯಲ್ಲಿ:

‘ಸಂಸ್ಕಾರದಿಂದ ಸಂಸ್ಕೃತಿ. ‘‘ಸಂಸ್ಕಾರ’’ ಅಥವಾ ‘‘ಸಂಸ್ಕರಣ’’ ಎಂದರೆ ಸಮ್ಯಕ್‌–ಕರಣ, – ಸಮ್ಯಕ್‌–ಕೃತಿ, – ಸಂಸ್ಕೃತಿ. ಹಾಗೆಂದರೆ ಚೆನ್ನಾಗುವಂತೆ ಮಾಡುವುದು, ಒಳ್ಳೆಯದನ್ನಾಗಿಸುವುದು, ಶುದ್ಧಿಮಾಡಿ ಉತ್ತಮಪಡಿಸುವುದು ಎಂದರ್ಥ. ‘ಒಳ್ಳೆಯದು’ ಎಂದರೆ ಒಂದಾನೊಂದು ಪದಾರ್ಥವು ಅಥವಾ ಸಂಗತಿಯು ಹೇಗಿರಬೇಕೋ ಹಾಗಿರುವುದು. ಒಂದು ವಸ್ತು ಅಥವಾ ಒಂದು ವರ್ತನೆ ಹೇಗಿದ್ದರೆ ನಮ್ಮ ಜೀವಿತದ ಪರಮೋದ್ದೇಶ ಸಿದ್ಧಿಯು ನಮಗೆ ಹತ್ತಿರ ಹತ್ತಿರವಾದೀತೋ ಅದೇ ‘‘ಒಳ್ಳೆಯದು’’; ಅದೇ ಹಿತ, ಅದೇ ಔಚಿತ್ಯ, ಅದೇ ಸಾಧುತೆ. ಆ ಒಳ್ಳೆಯದನ್ನು ಕಂಡುಕೊಳ್ಳುವ ಪ್ರಯತ್ನವೇ, – ಆ ಹಿತವನ್ನು ಹುಡುಕುವುದೇ, – ಸಂಸ್ಕೃತಿ. ನಮ್ಮ ಜೀವನವನ್ನು ಸಾಧುವನ್ನಾಗಿ ಮಾಡಿಕೊಳ್ಳುವ ವಿಧಾನವೇ ಸಂಸ್ಕೃತಿ.’

ಯಾರಲ್ಲಿ ‘ಸಂಸ್ಕೃತಿ’ ಇರುವುದೋ ಅವನು ‘ಸಂಸ್ಕೃತ’; ಇಂಗ್ಲಿಷಿನಲ್ಲಿ ಅವನನ್ನೇ ‘ಜೆಂಟಲ್‌ಮನ್‌’ ಎನ್ನುವುದು. ಸುಸಂಸ್ಕೃತನಾದವನು ಜೀವನದಲ್ಲಿ ಸದಾ ಉಲ್ಲಾಸದಿಂದ ಉತ್ಸಾಹದಿಂದಲೂ ಸಂತೋಷದಲ್ಲೂ ಸಂಭ್ರಮದಲ್ಲೂ ಇರುತ್ತಾನೆ. ಅವನ ಈ ಗುಣಕ್ಕೆ ಕಾರಣವೇ ಅವನಲ್ಲಿರುವ ಸರಸತೆ, ಅದೇ ರಸಿಕತೆ. ಅದರ ಲಕ್ಷಣವನ್ನು ಡಿವಿಜಿಯವರು ವಿವರಿಸಿರುವ ವಿಧಾನವೂ ಸೊಗಸಾಗಿದೆ:

‘ನಮ್ಮ ಕಣ್ಣಿಗೆ ಪ್ರತಿದಿನವೂ ಕಾಣಬರುವುದರಲ್ಲೆಲ್ಲಾ ದೋಷಭಾಗವೇ ಹೆಚ್ಚಾಗಿರುತ್ತದೆ. ಸುಸಂಸ್ಕೃತನಾದವನು ಹಾಗೆ ಎದ್ದುಕಾಣುವ ವಿಕಾರಗಳ ನಡುವೆ ಸೊಗಸೆಲ್ಲಿರಬಹುದೆಂದು ಕುತೂಹಲದಿಂದ ಹುಡುಕುತ್ತಾನೆ. ಕಹಿಯಾದ ಸಂದರ್ಭಗಳಲ್ಲಿ ಸವಿ ಎಲ್ಲಿರಬಹುದೆಂದು ನೋಡುತ್ತಾನೆ. ಅದೃಷ್ಟ ತನ್ನನ್ನು ಮರಳ್ಗಾಡಿನಲ್ಲಿಳಿಸಿದಾಗ ಎದೆ ಕುಗ್ಗಿ ಬೆಪ್ಪಾಗಿ ನಿಲ್ಲದೆ, ‘‘ಒಯಸಿಸ್‌’’ (Oasis) ತಂಪು ತಾವಿಗಾಗಿ ಹುಡುಕುವ ಸ್ವಭಾವ ಅವನದು... ಜಗತ್ತಿನಲ್ಲಿ ಹಳಸಲಿನ ನಡುವೆ ಹೊಸದೂ ಒಣಕಲಿನ ಹಿಂದೆ ಹಸಿರೂ, ಎಲ್ಲೆಲ್ಲಿಯೂ ಎಂದೂ ಇರುತ್ತವೆಂಬುದು ಅವನ ನಂಬಿಕೆ. ಎಂಥ ಸನ್ನಿವೇಶದಲ್ಲಿಯೂ ಅವನ ಮನಸ್ಸು ಸ್ವಾರಸ್ಯವನ್ನು ಅನ್ವೇಷಿಸುತ್ತದೆ. ಅವನು ಸಹೃದಯ. ಅವನ ಮನಸ್ಸು ಯಾವಾಗಲೂ ಮಾನವಪ್ರೀತಿಯ ರಸ, – ಸಹಾನುಭೂತಿಯ ರಸ, – ಸ್ನೇಹದ ರಸ – ಉಕ್ಕುತ್ತಿರುತ್ತದೆ. ಆ ರಸದ ಮಹಿಮೆಯಿಂದ ಅವನ ಎಲ್ಲ ಮಾತುಕಥೆ ನಡತೆ ನೀತಿಗಳೂ ಜನಕ್ಕೆ ಹಿತವೆನ್ನಿಸುತ್ತವೆ. ಮನುಷ್ಯಜೀವನಕ್ಕೆ ಒಂದು ಸೊಬಗನ್ನು ಕೊಟ್ಟು ಅದನ್ನು ಆಕರ್ಷಕವನ್ನಾಗಿ ಮಾಡುವುದು ಆ ರಸಿಕತೆ, – ಆ ಸೌಹಾರ್ದ. ಅದೇ ಸಂಸ್ಕೃತಿಯ ಒಳತಿರುಳು.

‘ಸಂಸ್ಕೃತನಾದ ಸರಸಿ ಸಭ್ಯತೆಯ ನಿಯಮವನ್ನೂ ಮೀರದವನು. ಸಂತೋಷವೂ ಸಂಕಟವೂ ಇತರರಿಗಿರುವಂತೆ ಅವನಿಗೂ ಇರುತ್ತವೆ. ಆದರೆ ಅವನು ತನ್ನ ಅನುಭವಗಳ ಆಳ–ಅಗಲಗಳನ್ನು ಎಲ್ಲರಿಗೂ ಪ್ರದರ್ಶನ ಮಾಡಿಸುವವನಲ್ಲ... ಅವನ ನಗುವಿನಲ್ಲಿ ಅಟ್ಟಹಾಸವಿರದು, ಅವನ ಹೆಮ್ಮೆಯಲ್ಲಿ ಜಂಬವಿರದು. ಏಕೆಂದರೆ ಯಾರಿಗಾದರೂ ಅದರಿಂದ ಮನೋವಿಕಾರವಾದೀತೇನೋ ಎಂದು ಅವನಿಗೆ ಶಂಕೆ. ಅಂಥ ಉದ್ರೇಕವರ್ಜನೆ, – ಅಂಥ ಆತ್ಮಸಂಯಮ, – ಸಂಸ್ಕೃತಿಯ ಹೆಗ್ಗುರುತು. ಅದು ಪ್ರಸಿದ್ಧಿ ಬೇಡದ ಸೌಜನ್ಯ, ಗದ್ದಲವೆಬ್ಬಿಸದ ಸಂತೋಷ.’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT