ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಲ್ಲಿ ಕೋಣ ಬಾಡಿಗೆಗೆ ಕೊಡ್ತಾರೆ!

Last Updated 25 ಮಾರ್ಚ್ 2019, 19:30 IST
ಅಕ್ಷರ ಗಾತ್ರ

ಕೋಣ, ಕತ್ತೆಗಳನ್ನು ಕೃಷಿ ಚಟುವಟಿಕೆಗೆ ಬಳಸುವುದು ಸಹಜ. ಆದರೆ, ಅದೇ ಕೋಣಗಳನ್ನು ಕೃಷಿ ಚಟುವಟಿಕೆಗಾಗಿ ಬಾಡಿಗೆಗೆ ಕೊಡುವ ಹಾಗೂ ಆ ಬಾಡಿಗೆ ಹಣದಿಂದಲೇ ಜೀವನ ನಿರ್ವಹಣೆ ಮಾಡುವ ಕುಟುಂಬಗಳಿರುವ ಬಗ್ಗೆ ಎಲ್ಲಾದರೂ ಕೇಳಿದ್ದೀರಾ?

ಅಂಥ ಕುಟುಂಬಗಳು ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕಿನ ಪೋತಗಾನಹಳ್ಳಿಯಲ್ಲಿವೆ. ಆ ಕುಟುಂಬಗಳಿಗೆ ಜೋಡಿ ಕೋಣಗಳು ಜೀವನಾಧಾರವಾಗಿವೆ.

ಪೋತಾಗಾನಹಳ್ಳಿಯಲ್ಲಿ 300 ಕುಟುಂಬಗಳಲ್ಲಿ, ಅಂದಾಜು 20 ಕುಟುಂಬಗಳು ಬಾಡಿಗೆಗಾಗಿ ಕೋಣಗಳನ್ನು ಸಾಕುತ್ತಿದ್ದಾರೆ. ಹಳೆಯ ಅಡಿಕೆ, ತೆಂಗಿನ ತೋಟಗಳಲ್ಲಿ (ಮರಗಳ ನಡುವಿನ ಅಂತರ ಕಡಿಮೆ ಇರುವ ತೋಟಗಳು), ಕಾಫಿ ಎಸ್ಟೇಟ್‌ಗಳಲ್ಲಿ, ಟ್ರ್ಯಾಕ್ಟ್‌ರ್‌ನಂತಹ ಯಂತ್ರಗಳನ್ನು ಓಡಾಡಿಸುವುದು ಕಷ್ಟ. ಅಂಥ ಕಡೆ ಮರ–ಗಿಡಗಳ ಬುಡಕ್ಕೆ ಮಣ್ಣು, ಗೊಬ್ಬರ ಹಾಕಿಸಲು, ತೋಟದಿಂದ ಬೆಳೆಯುಳಿಕೆಗಳನ್ನು ಹೊರ ಸಾಗಿಸಲು ಕೋಣಗಳನ್ನು ಬಳಸುತ್ತಾರಂತೆ. ಹೀಗಾಗಿ ಈ ಊರಿನ ಕೋಣಗಳಿಗೆ ಸ್ಥಳೀಯಕ್ಕಿಂತ ಅಡಿಕೆ ತೋಟಗಳೇ ಹೆಚ್ಚಾಗಿರುವ ದಾವಣ ಗೆರೆ, ಕಡೂರು, ಬೀರೂರು, ತರೀಕೆರೆ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಬೇಡಿಕೆ ಇದೆ. ನೆರೆಯ ಆಂಧ್ರ, ತಮಿಳುನಾಡಿಗೂ ಈ ಕೋಣಗಳನ್ನು ಬಾಡಿಗೆಗಾಗಿ ಹೊಡೆದುಕೊಂಡು ಹೋಗುತ್ತಾರೆ.

ಮುಂಗಾರು, ಹಿಂಗಾರಿನಲ್ಲಿ ಬೇಡಿಕೆ
ಮುಂಗಾರು ಮಳೆ ಆರಂಭದ ತಿಂಗಳಲ್ಲಿ ಇಲ್ಲಿನ ಕೋಣಗಳಿಗೆ ಬಹಳ ಬೇಡಿಕೆ ಇರುತ್ತದೆ. ‘ತೋಟದ ಹೊರಗಿನಿಂದ ಒಂದು ಚದರ ಅಡಿಯ ಮಣ್ಣು ಅಥವಾ ಗೊಬ್ಬರವನ್ನು ತೋಟದ ಅಂಗಳಕ್ಕೆ ಸಾಗಿಸಿ, ಸಮತಟ್ಟುಗೊಳಿಸಲು ₹120 ರಿಂದ ₹160 ರಷ್ಟು ಬಾಡಿಗೆ ನಿಗದಿಪಡಿಸಿದ್ದಾರೆ. ಟ್ರ್ಯಾಕ್ಟರ್‌ ಲೋಡ್ ಲೆಕ್ಕದಲ್ಲಿ ಒಂದು ಲೋಡ್ ಮಣ್ಣು ಸಾಗಿಸಲು ₹250ರಿಂದ ₹ 300 ‌ಪಡೆಯುತ್ತಾರೆ. ಪ್ರತಿ ನಿತ್ಯ ಒಂದು ಜೊತೆ ಕೋಣದೊಂದಿಗೆ ಎರಡು ಅಥವಾ ಮೂರು ಮಂದಿ ಕೆಲಸ ಮಾಡಿದರೆ, ಕನಿಷ್ಠ ₹1ಸಾವಿರದವರೆಗೂ ಸಂಪಾದಿಸುತ್ತಾರೆ.

ಕೋಣಗಳ ಜತೆಗೆ ಪುರುಷರು ಮತ್ತು ಮಹಿಳೆಯರು ಕಾರ್ಮಿಕರಾಗಿ ದುಡಿಯುತ್ತಾರೆ. ಪುರುಷರು, ಮಣ್ಣನ್ನು ಚೀಲಕ್ಕೆ ತುಂಬಿ ಕೋಣದ ಮೇಲೆ ಹೇರಿದರೆ, ಮಹಿಳೆಯರು ಆ ಮಣ್ಣನ್ನು ಇಳಿಸಿ, ತೋಟದಲ್ಲಿ ಹರಡುತ್ತಾರೆ. ಇಂಥ ಕೆಲಸದಲ್ಲಿ ಮಕ್ಕಳು, ದೊಡ್ಡವರ ಸಹಾಯಕ್ಕೆ ನಿಲ್ಲುತ್ತಾರೆ.

ಬಾಡಿಗೆ ಸ್ಥಳದಲ್ಲೇ ಬಿಡಾರ
ಯಾವ ಜಮೀನಿನಲ್ಲಿ ಕೋಣಗಳನ್ನು ಬಾಡಿಗೆಗಾಗಿ ಕರೆದೊಯ್ಯುತ್ತಾರೋ, ಆ ಜಮೀನಿನ ಸಮೀಪದಲ್ಲಿ ಗುಡಿಸಲು ಹಾಕಿಕೊಂಡು, ಇವರೂ ವಾಸ್ತವ್ಯ ಹೂಡುತ್ತಾರೆ. ಎಲ್ಲರೂ ಒಟ್ಟಾಗಿ ದುಡಿಯುತ್ತಾರೆ. ಬಿಡುವಿನ ವೇಳೆಯಲ್ಲಿ ತೋಟದಲ್ಲೂ ಕೂಲಿ ಕೆಲಸ ಮಾಡುತ್ತಾರೆ.

ತಮ್ಮ ಜೀವನಕ್ಕೆ ಆಧಾರವಾಗಿರುವ ಈ ಕೋಣಗಳ ಆರೋಗ್ಯದ ಬಗ್ಗೆ ಮಾಲೀಕರಿಗೆ ಸದಾ ಕಾಳಜಿ. ಒಂದು ರೀತಿ ಕಂಬಳದ ಕೋಣಗಳನ್ನು ತಯಾರು ಮಾಡುವಂತೆಯೂ ಇವುಗಳಿಗೂ ಪೌಷ್ಟಿಕ ಆಹಾರ ಉಣಿಸಿ ತಯಾರಿಸುತ್ತಾರೆ. ಅಷ್ಟೇ ಅಲ್ಲ, ಹೆಚ್ಚು ಶ್ರಮವಾಗದಂತೆ, ನಿತ್ಯ ಇಂತಿಷ್ಟೇ ಸಮಯ ಕೆಲಸ ಮಾಡಬೇಕೆಂಬ ನಿಯಮ ಹಾಕಿಕೊಳ್ಳುತ್ತಾರೆ. ಬಾಡಿಗೆ ಕೆಲಸಕ್ಕೆ ಹೊರಡುವ ಮುನ್ನ ಕೋಣಗಳ ಬೆನ್ನ ಮೇಲೆ ಗೋಣಿಚೀಲಗಳನ್ನು ಹೊದಿಸಿ (ಮೆತ್ತೆಯನ್ನು ಹಾಕಿ) ಬಿಗಿಗೊಳಿಸಿ ನಂತರ ಚೀಲಗಳನ್ನು ಕಟ್ಟುತ್ತಾರೆ. ಮಣ್ಣು ತುಂಬಿದಾಗ ಕೋಣಗಳಿಗೆ ಘಾಸಿಯಾಗದಿರುವಂತೆ ಈ ವ್ಯವಸ್ಥೆ.

ಗುತ್ತಿಗೆ, ಬಾಡಿಗೆ ಸೇವೆ
ಎರಡು, ಮೂರು ಕುಟುಂಬಗಳ ಸದಸ್ಯರು ಸೇರಿ ಒಂದೊಂದು ತೋಟದ ಕೆಲಸವನ್ನು ಗುತ್ತಿಗೆ ಪಡೆಯುತ್ತಾರೆ. ಆಯಾ ಜೋಡಿ ಕೋಣಗಳೊಂದಿಗೆ ನಿಗದಿತ ಸಂಖ್ಯೆಯ ಸದಸ್ಯರು ಕೆಲಸ ಮಾಡಬೇಕು – ಇದು ಅವರ ಒಗ್ಗಟ್ಟಿನೊಳಗಿನ ಷರತ್ತು. ಕೆಲವೊಮ್ಮೆ ಕೆಲಸ ಹೆಚ್ಚಿದ್ದರೆ ಐದು ಕುಟುಂಬಗಳು ಸೇರಿ ಕೆಲಸ ಪೂರೈಸಿ, ಅದರಿಂದ ಬಂದ ಹಣವನ್ನು ಸಮನಾಗಿ ಹಂಚಿಕೊಳ್ಳುತ್ತಾರೆ. ‘ಪರಸ್ಪರ ವಿಶ್ವಾಸ, ಹೊಂದಾಣಿಕೆ ಇರುವ ಕುಟುಂಬಗಳು ಮಾತ್ರ ಹೀಗೆ ಒಟ್ಟೊಟ್ಟಿಗೆ ಕೆಲಸ ಮಾಡುತ್ತವೆ’ ಎನ್ನುತ್ತಾರೆ ನಾಗರಾಜು.

ಲಗೇಜ್‌ ಕ್ಯಾರಿಯರ್‌ಗಳು...
ಈ ಕುಟುಂಬಗಳು ಊರಿಂದ ಊರಿಗೆ ಹೊರಡುವಾಗ ಕೋಣಗಳೊಂದಿಗೆ ತಾವು ನಡಿಗೆಯಲ್ಲಿ ಪ್ರಯಾಣಿಸುತ್ತಾರೆ. ಆಹಾರ ಧಾನ್ಯ, ಬಟ್ಟೆ, ಪಾತ್ರೆಗಳನ್ನು ಕೋಣಗಳ ಮೇಲೆ ಹೇರಿಕೊಂಡು ಕುಟುಂಬ ಸಹಿತ ಗ್ರಾಮ ತೊರೆಯುತ್ತಾರೆ. ಹಬ್ಬ, ಜಾತ್ರೆ, ಚುನಾವಣೆಗಳಂತಹ ವಿಶೇಷ ದಿನಗಳಿಗಾಗಿ ಮಾತ್ರ ಗ್ರಾಮಕ್ಕೆ ಹಿಂದಿರುಗುತ್ತಾರೆ. ‘ಮನೆಯಲ್ಲಿ ಹಸುಗೂಸಿದ್ದರೂ ಕೋಣನ ಹಿಂದೆ ಹೋಗಲೇ ಬೇಕು. ಕೆಲವೊಮ್ಮೆ ವರ್ಷ ಕಳೆದರೂ ಗ್ರಾಮಕ್ಕೆ ಬಾರದಿರುವ ನಿದರ್ಶನಗಳೂ ಇವೆ’ ಎನ್ನುತ್ತಾರೆ ನಾರಾಯಣಪ್ಪ.

ಜಾತ್ರೆಗಳಲ್ಲಿ ಕೋಣಗಳ ಖರೀದಿ
ಉತ್ತಮ ತಳಿಯ ಒಂದು ಕೋಣಕ್ಕೆ ₹ 30 ಸಾವಿರದಿಂದ ₹50 ಸಾವಿರ ಬೆಲೆ ಇದೆ. ಪೋತಗಾನಹಳ್ಳಿಯ ಈ ಕುಟುಂಬಗಳು ಅಜ್ಜಂಪುರ, ಶಿವಮೊಗ್ಗ ಸಮೀಪದ ಕಚ್ಚೆಗೊಲ್ರು ಸಂತೆಗೆ ಹೋಗಿ ಕೋಣಗಳನ್ನು ಖರೀದಿಸಿ ತರುತ್ತಾರೆ. ಮಜಬೂತಾಗಿರುವ, ಚೆನ್ನಾಗಿ ಕೆಲಸ ಮಾಡುವ ಕೋಣಗಳು ಬೇಕು. ಅದಕ್ಕಾಗಿ ಜಾತ್ರೆಗಳಲ್ಲೇ ನೋಡಿ ಖರೀದಿಸುತ್ತೇವೆ. ಒಮ್ಮೆ ಖರೀದಿಸಿ ತಂದ ಕೋಣಗಳನ್ನು ಕನಿಷ್ಠ ಐದು ವರ್ಷಗಳವರೆಗೆ ಬಳಸುತ್ತಾರೆ.

‘ಈಗ ಕೋಣಗಳಿಗೆ ಸಮತಟ್ಟು ಕಾರ್ಯದ ಕೆಲಸಕ್ಕೆ ಬೇಡಿಕೆ ಕಡಿಮೆಯಾಗಿದೆ. ಕೃಷಿ ಕಾರ್ಯಗಳಿಗೆ ಬೇಡಿಕೆ ಹೆಚ್ಚುತ್ತಿದೆ. ರಟ್ಟೆಯಲ್ಲಿ ಶಕ್ತಿಯಿರುವವರೆಗೆ ಕೆಲಸ ಮಾಡುತ್ತೇವೆ. ಭವಿಷ್ಯದ ಚಿಂತೆ ನಮಗಿಲ್ಲ’ ಎನ್ನುತ್ತಾರೆ ನಾರಾಯಣಪ್ಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT