ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಆನಂದಮಯ ಕಥಾಸಮಯ!

Last Updated 17 ಸೆಪ್ಟೆಂಬರ್ 2020, 6:17 IST
ಅಕ್ಷರ ಗಾತ್ರ
ADVERTISEMENT
""

‘ಅಮ್ಮಾ,... ಈ ಕೊರೊನಾ ಯಾವಾಗ ಮುಗೀತದ?’

‘ಗೊತ್ತಿಲ್ಲ, ಬಂಗಾರ’

‘ನಾನು ನೆನ್ನೆ ಆ ಸೂರ್ಯ ದೇವರಿಗೆ ಪ್ರಾರ್ಥನೆ ಮಾಡಿದೆ, ದೊಡ್ಡ ಸೂರ್ಯ ಬರ್ತಾನಮ್ಮ... ಅದು ಆ ವೈರಸ್‌ ಐತೆಲ್ಲ, ಅದಕ್ಕ ಬಿಸಿಲಂದ್ರ, ಬಿಸಿಯಂದ್ರ ಆಗೂದಿಲ್ಲ. ಒಂದು ಹೊಸ ಟೆಕ್ನಿಕ್‌ ಮಾಡಿ, ದೊಡ್ಡ ಸೂರ್ಯನ ಕಿರಣಗಳು ಸ್ಟ್ರಾಂಗ್‌ ಆಗಿರ್ತಾವ. ಮತ್ತು ಸ್ಮಾರ್ಟ್‌ ಆಗಿರ್ತಾವ. ನಮಗ ಸುಡದೇ, ವೈರಸ್‌ ಮ್ಯಾಲೆ ಮಾತ್ರ ಅಟ್ಯಾಕ್‌ ಮಾಡ್ತಾವ. ಆಮೇಲೆ ಸಣ್ಣ ಸೂರ್ಯ ತನ್ನ ಫ್ರೆಂಡ್ಸ್‌ ಜೊತಿಗೆ ಪಾರ್ಟಿ ಮಾಡ್ತಾನಮ್ಮ... ಹೌದಮ್ಮ.. ಖರೇಲು. ಹಿಂಗೆ ಆಗ್ತದ’

‘ಯಾರು ಹೇಳಿದ್ರು ನಿಂಗಿದೆಲ್ಲ..’

‘ಅಮ್ಮಾ... ನಂಗ ನೀ ಭಾಳ ನೆನಪಾಗ್ತಿ. ನಾವೆಲ್ಲ ಮತ್ತ ಒಟ್ಗೆ ಇರಬೇಕಂದ್ರ ಈ ಕೊರೊನಾ ಮುಗೀಬೇಕು. ಇದನ್ನ ಮುಗಿಸಬೇಕಂದ್ರ ಹೆಂಗಂತ ವಿಚಾರ ಮಾಡ್ತಿದ್ದೆ. ಅವಾಗ ಹೊಳೀತು ನೋಡು...’

ಇದೊಂದು ಸಣ್ಣ ಕತೆ, ದೂರದಲ್ಲಿರುವ ಅಮ್ಮ ಮಗಳ ನಡುವೆ ನಡೆದಿದ್ದು. ತನ್ನ ಒಂಟಿತನ ಹೋಗಲಾಡಿಸಲು ಈ ಮಗು ಹುಡುಕಿಕೊಂಡ ಮಾರ್ಗ ಚಿತ್ರ ಬರೆಯುವುದು. ಆ ಚಿತ್ರಗಳಲ್ಲಿ ತನ್ನ ಒಂಟಿತನ ಕಳೆದುಕೊಳ್ಳುವುದು, ಅದಕ್ಕಾಗಿ ಪರಿಹಾರವನ್ನು ಸೂಚಿಸುವುದು. ಆ ಮೂಲಕ ಆಶಾಭಾವನೆಯೊಂದನ್ನು ಒಡಮೂಡಿಸಿಕೊಳ್ಳುವುದು. ಈ ಇಡೀ ಪ್ರಕ್ರಿಯೆಯಲ್ಲಿ ಆ ಮಗು ಅಷ್ಟು ಹೊತ್ತೂ ಫೋನ್‌ನಿಂದಲೂ ದೂರವಿತ್ತು.

ಕತೆ ಹೇಳುವುದು ಮತ್ತು ಕೇಳುವುದು ಯಾವತ್ತಿಗೂ ಒಂದು ಮಾನಸೋಲ್ಲಾಸದ ಪ್ರಕ್ರಿಯೆ. ಕತೆ ಕೇಳುವಾಗ ನಮ್ಮ ಕಾಲ್ಪನಿಕ ಶಕ್ತಿ ಗರಿಗೆದರುತ್ತದೆ. ಜೊತೆಗೆ ಪಾತ್ರಗಳೊಟ್ಟಿಗೆ ನಮ್ಮನ್ನು ಗುರುತಿಸಿಕೊಳ್ಳಲಾರಂಭಿಸುತ್ತೇವೆ. ಕತೆಯೊಳಗೆ ಒಂದಷ್ಟು ಪರಿಹಾರಗಳೂ ಸಿಗುತ್ತವೆ. ಸವಾಲುಗಳು ಎದುರಾದಾಗ ಹೇಗಿರಬೇಕು, ಹೇಗೆ ಸ್ವೀಕರಿಸಬೇಕು ಎಂಬ ಮನೋಸ್ಥೈರ್ಯ ಮೂಡುತ್ತದೆ.

ಹಾಗಾಗಿಯೇ ಮಕ್ಕಳ ಶಿಕ್ಷಣ ತಜ್ಞೆ ಹಾಗೂ ವೂಟ್‌ ಕಿಡ್ಸ್‌ ಕಾರ್ಯಕ್ರಮ ವಿನ್ಯಾಸಗೊಳಿಸಿರುವಡಾ.ಸ್ವಾತಿ ಪೋಪಟ್‌ ವತ್ಸ್ ಸಹ ಕಥಾ ಸಮಯಕ್ಕೆ ಹೆಚ್ಚು ಒತ್ತು ನೀಡುತ್ತಾರೆ.

ಕತೆ ಹೇಳುವುದು ಹೇಗೆ: ಸಾಧ್ಯವಾದಷ್ಟು ಕತೆ ಹೇಳುವಾಗ ಧ್ವನಿ ಏರಿಳಿತಗಳತ್ತ ಗಮನವಿರಲಿ. ಧ್ವನಿ ಬದಲಿಸುವ ಬಗ್ಗೆಯೂ ಸಾಧ್ಯತೆಗಳಿದ್ದೇ ಇರುತ್ತವೆ ಪ್ರಯತ್ನಿಸಿ.

ಕಥೆ ಹೇಳುವಾಗಲೇ ನಡುನಡುವೆ ಬೇರೆ ಸಾಧ್ಯತೆಗಳನ್ನು ಕೇಳಿ. ರಾಕ್ಷಸನ ಕತೆ ಹೇಳುವಾಗ ರಾಕ್ಷಸ ನೋಡಲು ಹೇಗಿದ್ದಿರಬಹುದು ಎಂದು ಕೇಳಿ. ಅವರ ಕಲ್ಪನಾಶಕ್ತಿ ಗರಿಗೆದರುತ್ತದೆ. ಅದಕ್ಕೆ ಒಂದು ಹೆಸರಿಡಲು ಕೇಳಿ. ಕತೆ ಹೇಳುವುದು ಬರಿಯ ಹೂಂಗುಡಲು ಸೀಮಿತವಾಗಿರಕೂಡದು.

ಕತೆ ಅಂತ್ಯ ಮಾಡಿಸುವುದು ಅವರವರ ಆಯ್ಕೆಗೆ ಬಿಡಲೂಬಹುದು. ಈ ಕಥಾ ಸಮಯ ಇಬ್ಬರ ಮನಸನ್ನೂ ಅರಳಿಸುತ್ತದೆ. ಹೇಳುವವರ ಮತ್ತು ಕೇಳುವವರ ಮನಸನ್ನು ಅರಳಿಸುತ್ತದೆ.

ಲಾಕ್‌ಡೌನ್‌ ಆರಂಭವಾದಾಗಿನಿಂದಲೂ ಕಥಾ ಕಣಜ ಆಚೆ ಬಂದಾಗಿದೆ. ರಾಮಾಯಣ ಮತ್ತು ಮಹಾಭಾರತ, ಕೃಷ್ಣನ ಕುರಿತಾದ ಹಲವಾರು ಧಾರಾವಾಹಿಗಳು ಮಕ್ಕಳ ಕಲ್ಪನೆಗೆ ಹಲವಾರು ಮೂರ್ತ ರೂಪ ನೀಡಿವೆ. ಅವರಲ್ಲಿ ಪ್ರಶ್ನೆಗಳನ್ನೂ ಹುಟ್ಟಿಸಿವೆ. ಆ ಪ್ರಶ್ನೆಗಳಿಗೆ ಮರುಕತೆ ಹೆಣೆಯುವತ್ತ ಗಮನವಹಿಸಿದರೆ ಕಥಾ ಸಮಯವು ವ್ಯಕ್ತಿತ್ವವಿಕಸನದ ಸಮಯವೂ ಆಗಿ ಬದಲಾಗುತ್ತದೆ.

ಆನ್‌ಲೈನ್‌ ಕ್ಲಾಸು ಹಾಗೂ ಆನ್‌ಲೈನ್‌ ಮನರಂಜನೆಯಲ್ಲಿ ಕಣ್ಣು ನೆಟ್ಟು, ಕೈ ಬೆರಳುಗಳನ್ನಾಡಿಸುವ ಮಕ್ಕಳ ಮಿದುಳಿನಲ್ಲಿ ಆನಂದದ ಅಲೆಗಳು ಹೊಮ್ಮುವುದು ಕಡಿಮೆಯಾಗುತ್ತದೆ. ಪ್ರತಿಯೊಂದರಲ್ಲಿಯೂ ತಾನು ಗೆಲ್ಲಬೇಕು, ತಾನೇ ಗೆಲ್ಲಬೇಕು ಎಂಬ ಒತ್ತಡವೂ ಹೆಚ್ಚಾಗಿರುತ್ತದೆ. ಇಂಥ ಸಂದರ್ಭಗಳಲ್ಲಿ ಮಕ್ಕಳು ಬೇಗ ಹತಾಶರಾಗುತ್ತಾರೆ. ಹಟಮಾರಿಗಳಾಗುತ್ತಾರೆ. ಸೋಲು ಸಹಜ ಎಂಬುದನ್ನು ಒಪ್ಪುವುದಿಲ್ಲ. ಆಟದಲ್ಲಿ ಎಕ್ಸಲೆಂಟ್‌, ಗ್ರೇಟ್‌, ಸೂಪರ್ಬ್‌ ಇಂಥ ಹೊಗಳುವಿಕೆಯನ್ನು ಸ್ವೀಕರಿಸುವ ಮಕ್ಕಳು, ಟ್ರೈ ನೆಕ್ಸ್ಟ್‌ ಟೈಮ್‌ ಅನ್ನೂ ಅಷ್ಟೇ ಸಹಜವಾಗಿ ಸ್ವೀಕರಿಸುವುದಿಲ್ಲ.

ಆನ್‌ಲೈನ್‌ ಆಟಗಳು ಅವುಗಳಿಗೆ ಅರಿವಿಲ್ಲದೆಯೇ ಒಂದು ಒತ್ತಡ ಸ್ವೀಕರಿಸುತ್ತವೆ. ಕಣ್ಣಾಲಿಗಳನ್ನು ಅಲುಗಾಡಿಸದೆ, ಪಾಪೆಯನ್ನು ಹಿಗ್ಗಲಿಸಿ ನೋಡುತ್ತ, ಕೈ ಬೆರಳುಗಳಿಂದಲ ಗೆಲುವಿಗಾಗಿ ಹಂಬಲಿಸುವ ಈ ಪುಟ್ಟ ಜೀವ ಉಸಿರಾಟವನ್ನೂ ಮರೆತಂತೆ ಸಣ್ಣ ಸಣ್ಣ ಉಚ್ವಾಸ, ನಿಶ್ವಾಸಗಳನ್ನು ತೆಗೆದುಕೊಳ್ಳುತ್ತಿರುತ್ತದೆ.

ಹೀಗೆ ಇಂಥ ಬದಲಾವಣೆಗಳನ್ನು ಗಮನಿಸಿದಾಗ ಮಕ್ಕಳು ಸ್ಕ್ರೀನ್‌ ಆಟದ ದಾಸರಾಗಿದ್ದಾರೆ ಎಂಬುದನ್ನು ಪತ್ತೆ ಮಾಡಬಹುದು. ಮತ್ತು ಇದಕ್ಕೆ ಪರಿಹಾರವಾಗಿ ಕಥಾ ಸಮಯವನ್ನು ಬಳಸಿಕೊಳ್ಳಬಹುದು.

ಕಥೆ ಮಕ್ಕಳಿಗೆ ಮಾತ್ರ ಸೀಮಿತವಾಗಿರಬೇಕಾಗಿಲ್ಲ ಎಂಬುದು ಟೊರೊಂಟೊ ಮೂಲದ ಒಮರ್ ಬಜ್ಜಾ ಎಂಬ ಮನಃಶಾಸ್ತ್ರಜ್ಞ ಖಾತ್ರಿ ಪಡಿಸಿದ್ದಾರೆ. ಕೋವಿಡ್‌ನ ಐಸೋಲೇಷನ್‌ ಮತ್ತು ಪ್ರತ್ಯೇಕತೆ ಹಿರಿಯರಲ್ಲಿ ಒಂಟಿತನದ ಭಾವ ಮೂಡಿಸಿದೆ. ಈ ಒಂಟಿತನದಲ್ಲಿ ಸಾಮಾನ್ಯವಾಗಿ ಖಿನ್ನತೆ ಜಾರುತ್ತಿದ್ದಾರೆ. ಒಂಟಿಯಾಗಿ ಕಣ್ಣೀರು ಹಾಕುವುದು, ಒಂಟಿಯಾಗಿ ಸುಮ್ಮನೆ ಮಲಗುವುದು, (ನಿದ್ದೆ ಮಾಡುವುದಲ್ಲ.. ಮೈಚಾಚಿಕೊಳ್ಳುವುದು ಅಷ್ಟೆ) ಇವೆಲ್ಲವು ನಮ್ಮನ್ನು ಕೊನೆಯಿರದ ಸುರಂಗಕ್ಕೆ ತಳ್ಳುತ್ತವೆ. ಅಲ್ಲಿ ಖಿನ್ನತೆ ಮತ್ತು ನಿರಾಶಾವಾದಗಳು ಮನೆಮಾಡತೊಡಗುತ್ತವೆ.

ಕೆಲವೊಮ್ಮೆಇಂಥ ಏಕಾಕಿತನದಿಂದಾಚೆ ಬರಲು ಕತೆಗಳ ಓದು, ಬರವಣಿಗೆ, ನೋಡುವುದು ಎಲ್ಲವೂ ಸಹಾಯ ಮಾಡುತ್ತವೆ. ಧಾವಂತದ ಬದುಕಿನಿಂದ ಇದ್ದಕ್ಕಿದ್ದಂತೆ ಖಾಲಿ ಇರುವುದು, ಖಾಲಿಯಾಗುವುದು, ನಮ್ಮೊಳಗಿನ ನೆನಪಿನ ಲೋಕ, ಭಾವನಾಲೋಕದಿಂದ ಒಂದಷ್ಟು ಕಹಿಗಳನ್ನು ಖಾಲಿ ಮಾಡುವುದೇ ಆಗಿದೆ. ಹೀಗೆ ಖಾಲಿ ಮಾಡುವ ಪ್ರಕ್ರಿಯೆಯಲ್ಲಿ ಕಹಿಯುಳಿಯದಂತೆ ನೋಡಿಕೊಳ್ಳಬೇಕು.

ಹಾಗಾಗಿ ನಮ್ಮ ಸಂದರ್ಭಗಳನ್ನೂ ಸ್ನೇಹಿತರೊಂದಿಗೆ, ಹಿತೈಶಿಗಳೊಂದಿಗೆ ಹಂಚಿಕೊಳ್ಳಬೇಕು. ಯಾರನ್ನೂ ದೂರದೇ, ದೂಷಿಸದೆ ಕತೆಯಾಗಿಸಿಕೊಂಡರೆ ನಾವೂ ಹಗುರವಾಗುತ್ತೇವೆ. ಹೊಸ ಕತೆಗಳಿಗೆ ಸಜ್ಜಾಗುತ್ತವೆ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT