ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಲ ಎಂಬ ಮೃದ್ವಂಗಿಗಳ ಬೇಟೆಯ ಕೊನೆಯ ತಲೆಮಾರುವಿನ ಕಥೆಯಿದು: ನಿರಂಜನ ವಾನಳ್ಳಿ ಲೇಖನ

ಮೂಲ್ಕಿ ತಾಲ್ಲೂಕಿನ ಚಿತ್ರಾಪುವಿನಲ್ಲಿ ತಿನ್ನಬಹುದಾದ ಮೃದ್ವಂಗಿಗಳು ಇವೆ. ಇಲ್ಲಿನ ಶಾಂಭವಿ ನದಿಯಲ್ಲಿ ಕಲ್ಲಗಳನ್ನು ಹೆಕ್ಕಿ, ಚಿಕ್ಕಾಸು ಸಂಪಾದಿಸುವ ಮಹಿಳೆಯರದ್ದು ಸಾಹಸಗಾಥೆಯೇ ಸರಿ.
Published 9 ಜುಲೈ 2023, 0:41 IST
Last Updated 9 ಜುಲೈ 2023, 0:41 IST
ಅಕ್ಷರ ಗಾತ್ರ

ಮೂಲ್ಕಿ ತಾಲ್ಲೂಕಿನ ಚಿತ್ರಾಪುವಿನಲ್ಲಿ ತಿನ್ನಬಹುದಾದ ಮೃದ್ವಂಗಿಗಳು ಬೆಳೆಯಲು ಅನುಕೂಲಕರ ವಾತಾವರಣವಿದೆ. ಇಲ್ಲಿನ ಶಾಂಭವಿ ನದಿಯಲ್ಲಿ ಕಲ್ಲಗಳನ್ನು ಹೆಕ್ಕಿ, ಚಿಕ್ಕಾಸು ಸಂಪಾದಿಸುವ ಮಹಿಳೆಯರದ್ದು ಸಾಹಸಗಾಥೆಯೇ ಸರಿ.

ಲೇಖನ– ನಿರಂಜನ ವಾನಳ್ಳಿ

ಲೀಲಕ್ಕಳಿಗೆ ಈಗ ಎಪ್ಪತ್ತರ ಮೇಲೆ ಆಗಿದೆ. ಅವಳನ್ನು ಕೇಳಿದರೆ ಅರವತ್ತು ಎನ್ನುತ್ತಾಳೆ. ತೆಳ್ಳನೆಯ ಶರೀರ, ಶಿಸ್ತಿನ ದಿನಚರಿ, ತಣಿಯದ ಜೀವನೋತ್ಸಾಹ, ಅವಳ ವಯಸ್ಸನ್ನು ಮರೆಸುತ್ತದೆ. ಲೀಲಕ್ಕನ ವಿಶೇಷವೆಂದರೆ, ಮೂಲ್ಕಿ ತಾಲ್ಲೂಕಿನಲ್ಲಿ ನದಿಗಳು ಸಮುದ್ರ ಸೇರುವ ಅಳವೆಗಳ ಉಪ್ಪು ನೀರಲ್ಲಿ ಇಳಿದು ತಿನ್ನಬಹುದಾದ ಕಲ್ಲ ಹುಡುಕುವ ಹೆಂಗಸರ ಪೈಕಿ ಆಕೆ ಕೆಲಸದಲ್ಲೂ ಮಾತಿನಲ್ಲೂ ಎದ್ದು ಕಾಣುವ ವ್ಯಕ್ತಿ. ಈಗ ಹೀಗೆ ಕಲ್ಲ ಹುಡುಕುವ ಕಾಯಕದ ಆರು ಜನ ಹೆಂಗಸರು ಮಾತ್ರ ಉಳಿದಿದ್ದಾರೆ. ಇವರೂ ಈ ಕೆಲಸ ಕೈಬಿಟ್ಟರೆ ನದಿಯಾಳದಲ್ಲಿ ಕಪ್ಪೆಚಿಪ್ಪು ಹೆಕ್ಕುವ ಕಷ್ಟದ ಕಾಯಕ ಚರಿತ್ರೆಗೆ ಸೇರಿಹೋಗುತ್ತದೆ. ಲೀಲ, ಲಲಿತ, ವಾಸಂತಿ, ಗಿರಿಜಾ, ಕುಸುಮ, ವನಜಾ-ಈ ಆರು ಜನ ಮಹಿಳೆಯರು ಮುಲ್ಕಿ ಸಮುದ್ರ ತಟದಲ್ಲಿ ನೀರೊಳಗಿಳಿದು, ‘ಕಲ್ಲ’ ಎಂದು ಕರೆಸಿಕೊಳ್ಳುವ ಮೃದ್ವಂಗಿಗಳನ್ನು ಕಿತ್ತು, ಮಾಂಸ ಬಿಡಿಸಿ, ಪೇಟೆಗಳಲ್ಲಿ ಮಾರುವವರ ಕೊನೆಯ ತಲೆಮಾರು.

‘ಕಾಣದ ಕಡಲಿಗೇ ಹಂಬಲಿಸಿದೇ ಮನಾ, ಹೋಗಿ ಸೇರುವೆನೇ ಒಂದು ದಿನ’ ಎಂದು ಹಾಡುವ ನದಿ ಘಟ್ಟದಿಂದ ಇಳಿದಿಳಿದು ಬಂದು ಸಮುದ್ರ ಸೇರಿ ಒಂದಾಗುವಾಗ ಸಮುದ್ರದ ನೀರು ಕೂಡ ನದಿಯೊಳಕ್ಕೆ ಸೇರಿಹೋಗಿ ನದಿಯ ಸಿಹಿ ನೀರನ್ನು ಉಪ್ಪಾಗಿಸುತ್ತದೆ. ಅಗಾಧ ಮರಳಿನ ದಿನ್ನೆಗಳನ್ನು ಸೃಷ್ಟಿಸುತ್ತದೆ. ಇದನ್ನು ಅಳವೆ ಎನ್ನುತ್ತಾರೆ. ಈ ಅಳವೆಗಳಲ್ಲಿ ವಿಶಿಷ್ಟ ರೀತಿಯ ಮೃದ್ವಂಗಿಗಳು ಬೆಳೆಯುತ್ತವೆ. ಅವುಗಳನ್ನುs ‘ಕಲ್ಲ’ ಎಂದು ಸ್ಥಳೀಯವಾಗಿ ಕರೆಯುತ್ತಾರೆ. ಅಳವೆಗಳ ಆಳದಲ್ಲಿ ನೀರೊಳಗೆ ಬೆಳೆಯುವ ಈ ಕಲ್ಲಗಳು ನೆಲಕ್ಕೆ ಅಥವಾ ಕಲ್ಲುಗಳಿಗೆ ಗಟ್ಟಿಯಾಗಿ ಅಂಟಿಕೊAಡು ಬೆಳೆದಿರುವುದರಿಂದ ಇವುಗಳನ್ನು ಕೆತ್ತಿ ತೆಗೆಯುವುದು ಬಹಳ ಕಷ್ಟ. ಆಳವಿದ್ದರೆ ಮುಳುಗಿ ನದಿಯಾಳಕ್ಕೆ ಹೋಗಿ ಇವುಗಳನ್ನು ಎತ್ತಬೇಕು. ಕಲ್ಲ ತರಲು ಹೋಗಿ ಜೀವ ತೆತ್ತವರಿದ್ದಾರೆ.

ಕಲ್ಲ ಬೇಟೆಯಲ್ಲಿ ಲೀಲಕ್ಕ
ಕಲ್ಲ ಬೇಟೆಯಲ್ಲಿ ಲೀಲಕ್ಕ

ಕಲ್ಲಗಳನ್ನು ಬಾಚುವ ಕೆಲಸ ವಿಜ್ಞಾನ, ಸಂಪ್ರದಾಯ, ಸಾಮಾನ್ಯ ಜ್ಞಾನಗಳ ಸಮನ್ವಯ. ಈ ಹೆಂಗಸರು ಕಲ್ಲಬೇಟೆಗೆ ಮುಳುಗುವುದಕ್ಕೆ ಒಂದು ಕ್ರಮವಿದೆ. ಅಮಾವಾಸ್ಯೆಯಿಂದ ಆರಂಭಿಸಿ ಇವರು ನೀರಿಗೆ ಇಳಿಯುವ ಗಳಿಗೆ ನದಿಯಲ್ಲಿ ನೀರು ಇಳಿಯುವುದನ್ನೇ ಅವಲಂಬಿಸಿದೆ. ಸಮುದ್ರದಲ್ಲಿ ತೆರೆಗಳ ಅಬ್ಬರ ಹೆಚ್ಚಿದಾಗ ನದಿ ನೀರಲ್ಲಿ ಉಬ್ಬರ-ನಂತರ ಇಳಿತ. ಹೀಗೆ ನದಿಯ ನೀರು ಇಳಿಯುವುದನ್ನೇ ಕಾಯುವ ಈ ಹೆಂಗಸರು ಎದೆ ಮಟ್ಟದ ನೀರಲ್ಲಿ ಇಳಿದು ನೆಲದಲ್ಲಿ ಕಲ್ಲಗಳನ್ನು ಹುಡುಕುತ್ತಾರೆ. ಅವು ನದಿಯಾಳದ ಬಂಡೆಗೆ ಅಂಟಿಕೊಂಡು ಬೆಳೆದಿರುತ್ತವೆ. ಎಷ್ಟು ಗಟ್ಟಿಯಾಗಿ ಈ ಚಿಪ್ಪುಗಳು ಕಲ್ಲಿಗೆ ಅಂಟಿಕೊಂಡಿರುತ್ತವೆಯೆಂದರೆ, ಅವನ್ನು ಬಾಚಿ ಕೀಳಲು ಕೆಲವೊಮ್ಮೆ ಕತ್ತಿ, ಗುದ್ದಲಿ, ಪಿಕಾಸಿಗಳೇ ಬೇಕಾಗುತ್ತವೆ. ಈ ಆಯುಧಗಳನ್ನು ಹಿಡಿದು ನೀರಲ್ಲಿ ಮುಳುಗಿ ಕಪ್ಪೆ ಚಿಪ್ಪಿನ ಗುಪ್ಪೆಯನ್ನು ಹೆರೆದು ತರುವವರೆಗೂ ಉಸಿರು ಬಿಗಿಹಿಡಿದಿರಬೇಕು. ಅದಕ್ಕೇ ಇದು ಈ ಕಾಲದವರಿಗೆ ಆಗದ ಸಾಹಸ.

ಮೂಲ್ಕಿ ತಾಲೂಕಿನ ಚಿತ್ರಾಪು ಅಳವೆ, ಕಲ್ಲಗಳಿಗೆ ಬಹಳ ಕಾಲದಿಂದ ಪ್ರಸಿದ್ಧ. ತಿನ್ನಬಹುದಾದ ಮೃದ್ವಂಗಿಗಳು ಬೆಳೆಯಲು ಇಲ್ಲಿ ಅನುಕೂಲಕರ ವಾತಾವರಣವಿದೆ. ಇಲ್ಲಿ ಹರಿಯುವ ನದಿ ಶಾಂಭವಿ. ಇಲ್ಲಿ ಶಾಂಭವಿ ನದಿಯ ನೀರು ಬಹಳ ಆಳವಿಲ್ಲ. ಹೀಗಾಗಿ ಕಲ್ಲಗಳನ್ನು ಹೆಕ್ಕುವವರಿಗೂ ಈ ಜಾಗ ಪ್ರಶಸ್ತ. ಹೀಗಾಗಿ ನೂರಾರು ವರ್ಷಗಳಿಂದ ಚಿತ್ರಾಪು ಹಾಗೂ ಸುತ್ತಮುತ್ತಲ ಅಳವೆಗಳಲ್ಲಿ ಕಲ್ಲಗಳನ್ನು ಹಿಡಿಯುವ ಕಾಯಕ ನಡೆದುಬಂದಿದೆ. ವಿಶೇಷವೆಂದರೆ ಆದಿ ಕಾಲದಿಂದಲೂ ಇಲ್ಲಿ ಕಲ್ಲಗಳನ್ನು ಹಿಡಿಯುವವರು ಹೆಂಗಸರೇ. ಬೆಳಿಗ್ಗೆ ಬೇಗ ಮನೆ ಕೆಲಸ ಮುಗಿಸಿ ಈ ಹೆಂಗಸರು ನದಿ ದಡಕ್ಕೆ ಬರುತ್ತಾರೆ. ಅಲ್ಲಿ ಒಂದು ಕಡೆ ಬಟ್ಟೆ ಬದಲಿಸಿ ನೀರಿಗಿಳಿಯುವ ಬಟ್ಟೆ ತೊಡುತ್ತಾರೆ. ಕೈಕಾಲುಗಳಿಗೆ ಗವಸು ತೊಡುತ್ತಾರೆ. ಯಾಕೆಂದರೆ ಇವರು ದೋಣಿಗಳಲ್ಲಿ ಸಾಗಿ ನದಿ ಮಧ್ಯದಲ್ಲಿ ಹೊಳೆಗೆ ಇಳಿಯುತ್ತಾರೆ. ಅಲ್ಲಿ ಕಲ್ಲಗಳು ಬೆಳೆದಿದ್ದರೆ ಅವುಗಳ ಅಂಚುಗಳು ಬಹಳ ಹರಿತವಾಗಿದ್ದು, ಕೈ-ಕಾಲು ಕೊರೆಯುತ್ತವೆ. ಚಾಕುವಿನಲ್ಲಿ ಕೊಯ್ದಂತೆ ರಕ್ತ ಚಿಮ್ಮಿ, ಹುಷಾರಾಗಲು ಅನೇಕ ದಿನ ಬೇಕಾಗುತ್ತವೆ. ಮುಂಡಾಸು ಕಟ್ಟಿ, ಕೈಕಾಲುಗಳಿಗೆ ಗವಸು ಹಾಕಿ ಕಲ್ಲಗಳನ್ನು ಹಾಕಲು ಚೀಲವನ್ನು ಸೊಂಟಕ್ಕೆ ಕಟ್ಟಿಕೊಂಡು ಈ ಮಹಿಳೆಯರು ನದಿಗೆ ಇಳಿದರೆಂದರೆ ಅವತ್ತಿನ ಕೈಕಾಸು ಸಿಕ್ಕಿದಂತೆಯೇ.

ಈ ಮಹಿಳೆಯರು ಕಲ್ಲಗಳನ್ನು ಹಿಡಿದು ತಂದು ಮೂಲ್ಕಿ ಪೇಟೆಯಲ್ಲಿ ಮಾರುತ್ತಾರೆ. ಅಲ್ಲಿ ಇವಕ್ಕೆ ಈಗ ನೂರಕ್ಕೆ ಇನ್ನೂರ ಐವತ್ತು ರೂಪಾಯಿ ಸಿಗುತ್ತವೆ. ಇನ್ನೂರು ಮುನ್ನೂರು ಕಲ್ಲಗಳನ್ನು ಒಂದು ದಿನ ಬಾಚಲು ಸಾಧ್ಯವಾದರೆ ಅಂದು ಲಾಟರಿ ಹೊಡೆದಂತೆ. ಲೀಲಕ್ಕ ಹೇಳುವ ಹಾಗೆ ಆಕೆ ಕಲ್ಲ ಹೆಕ್ಕಲು ಆರಂಭಿಸಿದ ಕಾಲ ಬಹಳ ಕಷ್ಟದ್ದಾಗಿತ್ತು. ಕಲ್ಲಕ್ಕೆ ಆಗ ಸಿಗುತ್ತಿದ್ದುದು ಐದು ಪೈಸೆ ಮಾತ್ರ. ಮನೆ ಮನೆಗೆ ಹೋಗಿ ದುಂಬಾಲು ಬಿದ್ದು ಮಾರಬೇಕಿತ್ತು. ಈಗ ಹಾಗಲ್ಲ. ಕಲ್ಲಕ್ಕೆ ತುಂಬ ಬೇಡಿಕೆ. ಆದರೆ ಹೆಕ್ಕಿ ತೆಗೆಯುವವರೇ ಇಲ್ಲ. ಗಂಡಸರು ಮೀನು ಹಿಡಿಯಲು ಹೋಗುತ್ತಾರೆ, ಕಲ್ಲಕ್ಕೆ ಬರುವುದಿಲ್ಲ. ಕಲಿತ ಮಕ್ಕಳು ಇತ್ತ ತಲೆಹಾಕುವುದಿಲ್ಲ. ಹೀಗಾಗಿ ಲೀಲಕ್ಕನದು ಕಲ್ಲ ಹಿಡಿಯುವ ಕೊನೆಯ ತಲೆಮಾರು.

ಅನಾದಿ ಕಾಲದಿಂದ ಕಡು ಬಡವರ ಜೀವನೋಪಾಯವಾಗಿರುವ ಕಲ್ಲ ಬೇಟೆಗೆ ಸರ್ಕಾರ ಹೊಸ ರೂಪ ನೀಡಲು ಪ್ರಯತ್ನಿಸುತ್ತಿದೆ. ಈ ಆರು ಮಹಿಳೆಯರಿಗೆ ಉಚಿತವಾಗಿ ದೋಣಿ ಒದಗಿಸಿದೆ. ನದಿ ದಂಡೆಯಲ್ಲೇ ಚಪ್ಪರ ಕಟ್ಟಿ ಕಲ್ಲ ಬೆಳೆಸುವ ತರಬೇತಿ ನೀಡಿದೆ. ಆದರೂ ಬಿರುಮಳೆಯಿಂದ ಚಪ್ಪರವೇ ಉರುಳಿ ಬೀಳುವ ಸಾಧ್ಯತೆಯಿದೆ. ಪ್ರಾಕೃತಿಕವಾಗಿ ಬೆಳೆಯುವ ಕಲ್ಲಗಳಷ್ಟು ಚಪ್ಪರದಲ್ಲಿ ಬೆಳೆಯುವ ಕಲ್ಲಗಳು ರುಚಿಯಲ್ಲ ಎಂದು ಗ್ರಾಹಕರು ಹೇಳುತ್ತಾರೆ. ಆದರೆ ಹೀಗೆ ಪ್ರಾಕೃತಿಕವಾಗಿ ಅಳವೆಗಳಲ್ಲಿ ಬೆಳೆಯುವ ಕಲ್ಲಗಳು ಇನ್ನೆಷ್ಟು ದಿನ ಸಿಕ್ಕಾವು?-ಕಾಲವೇ ಹೇಳಬೇಕು.

ಬೇಟೆಗೆ ಸಿಕ್ಕ ಕಪ್ಪೆ ಚಿಪ್ಪು... ಅದೇ ಕಲ್ಲ
ಬೇಟೆಗೆ ಸಿಕ್ಕ ಕಪ್ಪೆ ಚಿಪ್ಪು... ಅದೇ ಕಲ್ಲ
ಕಲ್ಲ ಬೇಟೆಯ ಕೊನೆಯ ತಲೆಮಾರು
ಕಲ್ಲ ಬೇಟೆಯ ಕೊನೆಯ ತಲೆಮಾರು
ಕಪ್ಪೆಚಿಪ್ಪುಗಳೇ ಈ ಕಲ್ಲಗಳು
ಕಪ್ಪೆಚಿಪ್ಪುಗಳೇ ಈ ಕಲ್ಲಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT