ಶುಕ್ರವಾರ, 12 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕುವೆಂಪು ಪದ ಸೃಷ್ಟಿ | ಬಾಳ್ಗೆಳೆಯ

Published 15 ಜೂನ್ 2024, 23:30 IST
Last Updated 15 ಜೂನ್ 2024, 23:30 IST
ಅಕ್ಷರ ಗಾತ್ರ

ಬಾಳ್ಗೆಳೆಯ (ನಾ). ಬಾಳಿನುದ್ದಕ್ಕೂ ಸ್ನೇಹಿತನಾಗಿರುವವನು.

(ಬಾಳ್ + ಕೆಳೆಯ)

ಋಷ್ಯಮೂಕ ಪರ್ವತದಲ್ಲಿ ಲಕ್ಷ್ಮಣನು ಅಣ್ಣ ರಾಮನಿಗೆ ‘ಈ ಗಿರಿಯಲ್ಲಿ ದಿಟವಾಗಿ ಛಲ ಬಲಾನ್ವಿತ ಮಹಾಧ್ಯೆರ್ಯಯುತ ಸನ್ಮಿತ್ರನನ್ನು ಪಡೆಯುತ್ತೇವೆ.’ ಎಂದು ಹೇಳಿದನು. ತಮ್ಮನ ಧೈರ್ಯ ಹಾಗೂ ಶುಭದ ನುಡಿ ಕೇಳಿ ರಾಮ ನಗೆ ಬೀರಿದನು. ಮಲೆಯ ನೆತ್ತಿಯಂತೆ ತಲೆಯೆತ್ತಿ ಧ್ಯಾನಸ್ಥನಾದನು. ಸರೋವರದಿಂದ ಮೇಲೇರುತ್ತಿದ್ದ ಮಂಜನ್ನು, ಅದರಲ್ಲಿ ರವಿಕಿರಣ ಕೆತ್ತಿದ ನೀಲಿ ರಂಗೋಲಿಯನ್ನು ತದೇಕ ಚಿತ್ತದಿಂದ ನೋಡುತ್ತಿದ್ದನು. ಪ್ರಕೃತಿಯ ಪವಾಡದಲ್ಲಿ ಒಂದಾಗಿದ್ದ ಅವನು ‘ಯಾರಲ್ಲಿ ನೋಡು ಸೌಮಿತ್ರಿ?’ ಎಂದು ಹೇಳಿ ಮೇಲೆದ್ದು ಬಂಡೆ ಬಂಡೆಯೆಡೆ ನುಸುಳಿದವರಾರೆಂದು ಹುಡುಕತೊಡಗಿದನು. ‘ಎಲ್ಲಿ’ ಎಂಬ ಲಕ್ಷ್ಮಣನ ಪ್ರಶ್ನೆಗೆ ‘ಇಲ್ಲಿಯೋ, ಮತ್ತೆಲ್ಲಿಯೋ ನನಗೆ ಗೊತ್ತಿಲ್ಲ. ಕಣ್ಣಿಗೆ ಕಾಣಿಸುತ್ತಿಲ್ಲ. ನನ್ನ ಬಾಳಿನ ಗೆಳೆಯನೊಬ್ಬನು ಬರುತ್ತಾನೆಂದು ಮನಸ್ಸು ಹೇಳುತ್ತಿದೆ’ ಎಂದು ರಾಮನು ಮಾತನಾಡುತ್ತ ಭಾವವಶನಾಗಿ ಕಂಬನಿದುಂಬಿ ನಿಟ್ಟುಸಿರುಬಿಟ್ಟನು.

ಅಷ್ಟರಲ್ಲಿ ಬಂಡೆಯೆ ಮಾತಾಡಿತೆಂಬಂತೆ ಒಂದು ದನಿ ಕೇಳಿಸಿತು. ರಾಮಲಕ್ಷ್ಮಣರು ಮೂಕವಿಸ್ಮಿತರಾಗಿ ನೋಡುತ್ತಿರಲು ಋಷ್ಯಮೂಕದ ಮಹತ್ತೆ ಮೈ ತಳೆದು ಬಂದಂತೆ- ಕಾಡು ಬೆಳೆದ ನೆತ್ತಿಯ ಮೇಲೆ ಆಕಾಶದಲ್ಲಿ ಬರೆದ ಚಿತ್ರದಂತೆ ಭವ್ಯ ಪುರುಷ ಆಂಜನೇಯನು ಗೋಚರಿಸಿದನು.

ರಾಮ ಮತ್ತು ಹನುಮಂತರ ಸ್ನೇಹ ವಿಶ್ವದ ಪುರಾಣ ಕಥಾ ಸಾಹಿತ್ಯದಲ್ಲಿಯೆ ವಿಶಿಷ್ಟವಾದುದು. ಅದು ಬಾಳಿನುದ್ದಕ್ಕೂ ನಿರಂತರವಾಗಿರುವ ನೇಹ. ಅದನ್ನು ಕುವೆಂಪು ಅವರು ‘ಬಾಳ್ಗೆಳೆಯ’ ಎಂಬ ಪದ ರೂಪಿಸಿ, ನೇಹದ ಆಂತರ್ಯದ ಅರ್ಥವನ್ನು ವಿಶದ ಪಡಿಸಿದ್ದಾರೆ.

‘ಇಲ್ಲಿಯೋ

ಮೇಣೆಲ್ಲಿಯೋ ಅರಿಯೆನಾಂ, ವತ್ಸ! ಕಾಣದು ಕಣ್ಗೆ,

ಬಗೆಗೆ ಸುಳಿದಿದೆ ಬರವು ಬಾಳ್ಗೆಳೆಯನೊರ್ವನಾ!’

ಎನುತೆನುತೆ ತನ್ನ ಬೆಳ್ಪಿಗೆ ತಾನೆ ಬೆರಗಾಗಿ,

ನಿಂದನು ಅನಾಥನೊಲ್ ಸೀತಾನಾಥ ದಾಶರಥಿ,

ಕಣ್‍ತೊಯ್ದು ಸುಯ್ದ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT