ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶಹಳ್ಳಿ ಜಿ. ನಾರಾಯಣ: ಸಾಹಿತ್ಯ ಪರಿಷತ್‌ಗೆ ಕಾಯಕಲ್ಪ ನೀಡಿದ ‘ಕರ್ಮಯೋಗಿ’

ಜನ್ಮಶತಮಾನೋತ್ಸವ
Published 10 ಜೂನ್ 2023, 19:55 IST
Last Updated 10 ಜೂನ್ 2023, 19:55 IST
ಅಕ್ಷರ ಗಾತ್ರ
ಜಿ. ನಾರಾಯಣ ಅವರ ಜನ್ಮ ಶತಮಾನೋತ್ಸವದ ವರ್ಷವಿದು. 1950ರ ದಶಕದಲ್ಲಿ ‘ವಿನೋದ’ ಪತ್ರಿಕೆಯ ಮೂಲಕ ಹಾಸ್ಯ ಬರಹಗಳಿಗೆ ಉತ್ತೇಜನ ನೀಡಿದ ಅವರು ಸಾಹಿತ್ಯ ಪರಿಚಾರಿಕೆಯಿಂದಲೇ ಹೆಸರಾದವರು. ಕಾರ್ಪೊರೇಟರ್‌, ಮೇಯರ್ ಕೂಡ ಆಗಿದ್ದ ಅವರ ಬದುಕಿನ ಪುಟಗಳು ಮೆಲುಕು ಹಾಕುವಂತಿವೆ.

ಆಗ ಸುನಿಲ್ ಗಾವಸ್ಕರ್, ಸಚಿನ್ ತೆಂಡೂಲ್ಕರ್‌ ಟೀಮ್‌ನಲ್ಲಿ ಇದಾರೆ ಅಂದರೆ ಕ್ರಿಕೆಟ್‌ ನೋಡೋಕೆ ಹೆಚ್ಚು ಅಭಿಮಾನಿಗಳು ಸೇರುತ್ತಿದ್ದರು. ಈಗಲೂ ಕೊಹ್ಲಿ, ರೋಹಿತ್‌ನಂತಹ ಸ್ಟಾರ್‌ಗಳಿದ್ದಾರೆ ಅಂದರೆ ಹೆಚ್ಚು ಜನ ಸ್ಟೇಡಿಯಂನತ್ತ ಬರುತ್ತಾರೆ. ಇದೇ ರೀತಿ, ಕನ್ನಡ ಸಾಹಿತ್ಯದತ್ತ ಜನರನ್ನು ಸೆಳೆಯಲು ‘ಹಾಸ್ಯ’ವನ್ನು ಸ್ಟಾರ್‌ನಂತೆ ಬಳಸಿಕೊಂಡವರು ಜಿ. ನಾರಾಯಣ. 

ಜನ್ಮಶತಮಾನೋತ್ಸವದ ಈ ಸಂದರ್ಭದಲ್ಲಿ ಜಿ. ನಾರಾಯಣ ಅವರ ಕೊಡುಗೆಯನ್ನು ಸ್ಮರಿಸಿಕೊಳ್ಳಬೇಕಾದುದು ನಮ್ಮೆಲ್ಲರ ಕರ್ತವ್ಯ ಎಂದೇ  ನಾನು ಭಾವಿಸುತ್ತೇನೆ. ಅವರ ಪೂರ್ತಿ ಹೆಸರು ದೇಶಹಳ್ಳಿ ಜಿ. ನಾರಾಯಣ. ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ದೇಶಹಳ್ಳಿಯವರಾದ ನಾರಾಯಣ, ರಾಜ್ಯದ ಹಳ್ಳಿ–ಹಳ್ಳಿಗೂ ಸಾಹಿತ್ಯದ ರುಚಿ ಉಣಬಡಿಸುವಲ್ಲಿ ಶ್ರಮಿಸಿದವರು. 

ಹಾಸ್ಯ ಸಾಹಿತ್ಯ ಲೋಕಕ್ಕೆ ನಾರಾಯಣ ಅವರ ಮುಖ್ಯ ಕೊಡುಗೆ ‘ವಿನೋದ’ ಪತ್ರಿಕೆ. 1951ರಲ್ಲಿ ಅವರು ಆರಂಭಿಸಿದ ಈ ಪತ್ರಿಕೆಯಲ್ಲಿ ಎಲ್ಲ ಬಗೆಯ ಸಾಹಿತ್ಯ ಲೇಖನಗಳು, ಕಥೆಗಳು ಬರುತ್ತಿದ್ದರೂ ‘ವಿನೋದ’ ಎಂಬ ಹೆಸರಿನ ಕಾರಣದಿಂದ ಇದನ್ನು ಹಾಸ್ಯ ಮಾಸಪತ್ರಿಕೆ ಎಂದೇ ಪರಿಗಣಿಸಲಾಗುತ್ತಿತ್ತು. ಅವರು ಸಂಪಾದಕರಾಗಿದ್ದಾಗ, ನಾನು ಈ ಪತ್ರಿಕೆಯ ಉಪ ಸಂಪಾದಕನಾಗಿದ್ದೆ. 

ಬರವಣಿಗೆಗಿಂತ ‘ಸಾಹಿತ್ಯ ಸಂಘಟಕ’ರಾಗಿ ಜನಮಾನಸದಲ್ಲಿ ಉಳಿದವರು ನಾರಾಯಣ. ಪ್ರಪಂಚದ ಯಾವುದೇ ವಿಷಯಗಳಲ್ಲಿಯೂ ಅಷ್ಟೇ ಆಸಕ್ತಿಯಿಂದ, ಪ್ರೌಢಿಮೆಯಿಂದ ಅವರು ಮಾತನಾಡುತ್ತಿದ್ದರು. ‘ಬ್ರಿಟಿಷರೇ ಭಾರತ ಬಿಟ್ಟು ತೊಲಗಿ’ ಚಳವಳಿಯಲ್ಲಿಯೂ ಸಕ್ರಿಯವಾಗಿ ಪಾಲ್ಗೊಂಡಿದ್ದ ಅವರು ದೇಶಪ್ರೇಮಿಯಾಗಿದ್ದರು. ದೇಶದ ಮೇಲಿರುವಷ್ಟೇ ಕಾಳಜಿ, ನಾಡು–ನುಡಿಯ ಮೇಲೂ ಅವರಿಗಿತ್ತು. ರಾಜಕೀಯದಲ್ಲೂ ಅಷ್ಟೇ ಆಸಕ್ತಿ ಹೊಂದಿದ್ದ ಅವರು 1957ರಲ್ಲಿ ಬೆಂಗಳೂರು ಕಾರ್ಪೊರೇಷನ್‌ನ ಕೌನ್ಸಿಲರ್‌ ಆಗಿದ್ದಲ್ಲದೆ, 1964ರಲ್ಲಿ ಬೆಂಗಳೂರು ಮೇಯರ್‌ ಆಗಿಯೂ ಕಾರ್ಯನಿರ್ವಹಿಸಿದ್ದರು. 

ನಾರಾಯಣ ಅವರ ಸಾಹಿತ್ಯ ಪ್ರೇಮ ಹೆಚ್ಚು ಹೊಳಪು ಪಡೆದಿದ್ದು ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದಾಗ. 1969ರಿಂದ 1978ರವರೆಗೆ ಅವರು ಪರಿಷತ್ತಿನ ಅಧ್ಯಕ್ಷರಾಗಿದ್ದರು. ನಾನು ಕಾರ್ಯದರ್ಶಿಯಾಗಿ ಅವರ ಜೊತೆ ಕೆಲಸ ಮಾಡಿದ್ದೆ. ಅತ್ಯುತ್ತಮ ಸಂವೇದನೆ ಹೊಂದಿದ್ದ ಅವರು, ಲಂಚಗುಳಿತನ, ಭ್ರಷ್ಟಾಚಾರ, ಕೆಟ್ಟ ಶಿಫಾರಸುಗಳನ್ನು ಮಾಡುವುದು, ತಮ್ಮ ಕಡೆಯವರಿಗೇ ಕೆಲಸ ಆಗಬೇಕು ಎಂಬ ಬುದ್ಧಿ ಹೊಂದಿರಲಿಲ್ಲ. 

ರಾಜ್ಯದ ಎಲ್ಲೆಡೆಯೇ ಆಗಲಿ, ಬಹುದೊಡ್ಡ ಸಾಂಸ್ಕೃತಿಕ ಕಾರ್ಯಕ್ರಮಗಳಾದರೆ ಅವುಗಳಲ್ಲಿ ಭಾಗವಹಿಸುತ್ತಿದ್ದರು. ಅದರಲ್ಲಿಯೂ, ಕನ್ನಡ ಭಾಷೆ ಬಗ್ಗೆ ಅವರಿಗೆ ಹೆಚ್ಚು ಆಸಕ್ತಿ ಇತ್ತು. ಭಾಷೆಯ ಪ್ರಗತಿ ಮತ್ತು ಪ್ರಸಾರ ಒಂದು ಪತ್ರಿಕೆ ತೆಗೆದುಕೊಳ್ಳಬೇಕಾದ ಜವಾಬ್ದಾರಿ ಮಾತ್ರವಲ್ಲ, ಸಾಂಸ್ಕೃತಿಕ ಕ್ಷೇತ್ರದಲ್ಲಿಯೂ ಅಂಥದ್ದೊಂದು ನಿಲುವು ಮತ್ತು ಪಣ ಇರಬೇಕು ಎಂದು ಅವರು ಪತ್ರಿಪಾದಿಸುತ್ತಿದ್ದರು. ಈ ನಿಟ್ಟಿನಲ್ಲಿ, ಕಾರ್ಯಕ್ರಮಗಳನ್ನು ಸಂಘಟಿಸುವುದು, ರೂಪು–ರೇಷೆಗಳನ್ನು ತಯಾರಿಸುವುದು ಮತ್ತು ಅದನ್ನು ಯೋಜನಾಬದ್ಧವಾಗಿ ನಡೆಸಿಕೊಂಡು ಹೋಗುವಂತಹ ಕಾರ್ಯವನ್ನು ಅವರು ಮಾಡುತ್ತಿದ್ದರು.

ಪುಸ್ತಕ ಮಾರಾಟ ಚಳವಳಿ ಅವರು ಕೈಗೊಂಡ ಕನ್ನಡ ಕೆಲಸಗಳಲ್ಲಿ ಪ್ರಮುಖವಾದದ್ದು. ಮನೆ–ಮನೆಗೆ ಕನ್ನಡ ಪುಸ್ತಕಗಳನ್ನು ಮುಟ್ಟಿಸುವ ಕೆಲಸವನ್ನು ಅವರು ಮಾಡಿದರು. ಅವರು ಅಧ್ಯಕ್ಷರಾಗುವುದಕ್ಕೂ ಮೊದಲು, ಪರಿಷತ್‌ನಿಂದ ವರ್ಷಕ್ಕೆ ಮೂರರಿಂದ ನಾಲ್ಕು ಪುಸ್ತಕಗಳಷ್ಟೇ ಪ್ರಕಟವಾಗುತ್ತಿದ್ದವು. ಅವರು ಅಧ್ಯಕ್ಷರಾದ ಮೇಲೆ, ವರ್ಷಕ್ಕೆ 70ರಿಂದ 100 ಪುಸ್ತಕಗಳನ್ನು ಪ್ರಕಟಿಸಲಾರಂಭಿಸಿದರು. ಸಾಹಿತಿಗಳಿಗೆ ದುಂಬಾಲು ಬಿದ್ದು ಪುಸ್ತಕಗಳನ್ನು ಬರೆಸಿ, ಪ್ರಕಟಿಸಿದರು. ಮನೆ ಮನೆಗೆ ಪುಸ್ತಕ, ಬೀದಿ ಬೀದಿಗೆ ಕನ್ನಡ ಎಂಬ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಬೆಂಗಳೂರು ಮಾತ್ರವಲ್ಲದೆ, ರಾಜ್ಯದ ಮೂಲೆ–ಮೂಲೆಯಲ್ಲಿ ಕನ್ನಡದ ಕಹಳೆ ಮೊಳಗಿಸಿದರು. ಬೀದರ್, ಕಲಬುರಗಿ ಸೇರಿದಂತೆ ಹಲವು ಜಿಲ್ಲೆಗಳ ಹಳ್ಳಿ–ಹಳ್ಳಿಗೆ ಹೋಗಿ ಪುಸ್ತಕಗಳನ್ನು ಮಾರಾಟ ಮಾಡುತ್ತಿದ್ದರು. ಶಾಲಾ–ಕಾಲೇಜುಗಳಲ್ಲಿ ಉಪನ್ಯಾಸ, ವಿಚಾರ ಸಂಕಿರಣ ಏರ್ಪಡಿಸುತ್ತಿದ್ದರು. 

ರಾಜ್ಯದೆಲ್ಲೆಡೆ ಹೆಣ್ಣುಮಕ್ಕಳೇ ನಡೆಸುವ ಸಂಸ್ಥೆಗಳ ಸಂಖ್ಯೆ ಹೆಚ್ಚಾಗಬೇಕು ಎಂಬ ಉದ್ದೇಶವೂ ಅವರದ್ದಾಗಿತ್ತು. ಅವರೇ ಶಾಲೆಗಳನ್ನು ನಡೆಸಬೇಕು, ಸಾಹಿತ್ಯ ಚಟುವಟಿಕೆ ಹಮ್ಮಿಕೊಳ್ಳಬೇಕು ಎಂದು ಹೇಳುತ್ತಿದ್ದರು. ಇದಕ್ಕೆ ಪೂರಕವಾಗಿ ಮಹಿಳಾ ಸಾಹಿತ್ಯ ಸಂಘಗಳನ್ನು ರಚಿಸಿದರು. ಅದಕ್ಕೆ ಅಧ್ಯಕ್ಷರು, ಕಾರ್ಯದರ್ಶಿಗಳನ್ನು ನೇಮಿಸಿದರು. ಇದರ ಪರಿಣಾಮ, ಕನ್ನಡದಲ್ಲೀಗ 30ಕ್ಕೂ ಹೆಚ್ಚು ಮಹಿಳಾ ಸಾಹಿತ್ಯ ಪ್ರಸಾರ ಶಾಖೆಗಳಿವೆ.  

ಮೊದಲು, ಸ್ಥಳೀಯವಾಗಿ ಅಲ್ಲಲ್ಲಿ ಸಾಹಿತ್ಯ ಸಮ್ಮೇಳನಗಳು ನಡೆಯುತ್ತಿದ್ದವು. ನಾರಾಯಣ ಅವರು, ಪ್ರತಿ ಕಂದಾಯ ಜಿಲ್ಲೆಯಲ್ಲಿ ಜಿಲ್ಲಾ ಘಟಕ ಮಾಡಿ, ಅಧ್ಯಕ್ಷರನ್ನು ನೇಮಕ ಮಾಡಿ, ನಿಯಮಿತವಾಗಿ ಜಿಲ್ಲಾ ಸಮ್ಮೇಳನಗಳು ನಡೆಯುವಂತೆ ನೋಡಿಕೊಂಡರು. ಆಗ, ಮೈಸೂರು ಸರ್ಕಾರ ಇತ್ತು. ಅಲ್ಲಿನ ಅಧಿಕಾರಿಗಳು ನಾರಾಯಣ ಅವರ ಮಾತಿಗೆ ಆದ್ಯತೆ ನೀಡುತ್ತಿದ್ದರು. ಕನ್ನಡದ ಕೆಲಸಗಳನ್ನು ಮಾಡಿಕೊಡುತ್ತಿದ್ದರು.

ಕನ್ನಡ ಸಾಹಿತ್ಯ ಪರಿಷತ್ತು ಅಂದರೆ, ಅದು ಸಾಹಿತ್ಯಕ್ಕೆ ಸಂಬಂಧಿಸಿದ್ದು ಮಾತ್ರವಲ್ಲ. ಅದು ಕನ್ನಡ ಪರಿಷತ್‌, ಸಂಸ್ಕೃತಿ ಪರಿಷತ್‌, ಕನ್ನಡ ವಿದ್ಯಾ ಪರಿಷತ್ ಮತ್ತು ಕನ್ನಡ ಭಾಷಾ ಪರಿಷತ್‌ ಎಂದು ಅವರು ಹೇಳುತ್ತಿದ್ದರು. ಕನ್ನಡ ಹೆಚ್ಚು ಪ್ರಖರಗೊಳ್ಳಬೇಕು, ಪ್ರಚಾರಗೊಳ್ಳಬೇಕು ಎಂದರೆ ಶಾಲೆಗಳಲ್ಲಿ ಗ್ರಂಥಾಲಯಗಳನ್ನು ಸ್ಥಾಪಿಸಬೇಕು. ಮಕ್ಕಳ ಮುಂದೆ ಯಾವಾಗಲೂ ಒಂದೆರಡು ಕನ್ನಡ ಪುಸ್ತಕಗಳಿರುವಂತೆ ನೋಡಿಕೊಳ್ಳಬೇಕು ಎಂದು ಅವರು ಒತ್ತಾಯಿಸುತ್ತಿದ್ದರು. ತ್ರೈವಾರ್ಷಿಕ, ಪಂಚವಾರ್ಷಿಕ ಯೋಜನೆಗಳ ಮೂಲಕ ಪರಿಷತ್‌ ಅಭಿವೃದ್ಧಿಗೆ ಶ್ರಮಿಸಿದರು.

ಸಾಹಿತ್ಯ, ಸಂಘಟನೆಯ ಜೊತೆಗೆ, ಕನ್ನಡಪರ ಹೋರಾಟಗಳಲ್ಲಿಯೂ ಅವರು ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದರು. ಹಿಂದಿ ಚಿತ್ರಗಳು ಹೆಚ್ಚು ಬಂದು ಕನ್ನಡ ಚಿತ್ರಗಳಿಗೇ ಚಿತ್ರಮಂದಿರಗಳು ಸಿಗದಿದ್ದಾಗ, ಡಬ್ಬಿಂಗ್‌ ಹಾವಳಿ ಹೆಚ್ಚಾದಾಗ ಅ.ನ.ಕೃಷ್ಣರಾಯರು ಮತ್ತು ಮ. ರಾಮಮೂರ್ತಿಯವರ ಜೊತೆ ಸೇರಿ ಪ್ರತಿಭಟನೆ ಮಾಡುತ್ತಿದ್ದರು. 

ಯಾವುದೇ ಊರಿಗೆ ಹೋದರೂ ಅಲ್ಲಿನ ಸಂಸ್ಕೃತಿ, ಪ್ರಾದೇಶಿಕ ಜ್ಞಾನ ಇದ್ದ ಹಿರಿಯರನ್ನು ತಮ್ಮೊಂದಿಗೆ ಕರೆದುಕೊಂಡು ಹೋಗುವ ಅಭ್ಯಾಸ ಅವರದ್ದಾಗಿತ್ತು. ಅವರೊಂದಿಗೆ, ನಾನು ಮತ್ತು ಹಂ.ಪ. ನಾಗರಾಜಯ್ಯ ಅವರೂ ಇರುತ್ತಿದ್ದೆವು. ಅಲ್ಲಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಸಾಹಿತ್ಯದ ಸ್ವರೂಪ, ಮಹತ್ವ ಮುಂತಾದ ವಿಚಾರಗಳ ಬಗ್ಗೆ ಅಲ್ಲಿನ ಸಾಹಿತಿಗಳಿಂದ ಭಾಷಣ ಮಾಡಿಸುತ್ತಿದ್ದರು. ಹೊಸಬರಿಗೆ, ಯುವಕರಿಗೆ ಅವಕಾಶ ಕೊಡುತ್ತಿದ್ದರು. 

ಮುಖ್ಯವಾಗಿ, ಗ್ರಾಮಮುಖಿಯಾದ ಚಿಂತನೆ ಅವರದ್ದಾಗಿತ್ತು. ಸಾಮಾನ್ಯ ಜನ ಕನ್ನಡ ಬಳಸದೇ ಇದ್ದರೆ, ಕನ್ನಡ ಬದುಕೋದೇ ಇಲ್ಲ ಎಂದು ಅವರು ಪದೇ ಪದೇ ಹೇಳುತ್ತಿದ್ದರು. 

ಸರ್ಕಾರದ ಜೊತೆ ಅವರು ಉತ್ತಮ ಸಂಬಂಧ ಹೊಂದಿದ್ದರು. ಕನ್ನಡದ ಕಾರ್ಯಗಳಿಗೆ ಸಾಕಷ್ಟು ಅನುದಾನ ತೆಗೆದುಕೊಂಡು ಬರುತ್ತಿದ್ದರು. ಆದರೆ, ಸರ್ಕಾರದ ಯಾವುದಾದರೂ ನಿರ್ಧಾರದಿಂದ ಕನ್ನಡಕ್ಕೆ ಅನ್ಯಾಯವಾಗುತ್ತಿದೆ ಎನಿಸಿದಾಗ  ಅವರು ಸಹಿಸುತ್ತಿರಲಿಲ್ಲ. ಕನ್ನಡಕ್ಕೆ ವಿರೋಧ ಎದುರಾದಾಗ ಸರ್ಕಾರದ ವಿರುದ್ಧ ಕೆರಳಿ ನಿಲ್ಲುತ್ತಿದ್ದರು. ಈ ಸಂದರ್ಭದಲ್ಲಿ, ಒಂದು ಘಟನೆ ನನಗೆ ನೆನಪಾಗುತ್ತೆ. ಮಹತ್ವದ ಕೆಲವು ಕೃತಿಗಳನ್ನು ಪರಿಷತ್‌ ವತಿಯಿಂದ ಪ್ರಕಟಿಸಬೇಕಾಗಿತ್ತು. ಇದಕ್ಕಾಗಿ ಸಂಶೋಧನೆಗೆ ಮತ್ತು ಮುದ್ರಣ ಕಾರ್ಯಕ್ಕೆ 26 ಜನ ಬೇಕಾಗಿತ್ತು. ಈ ಬಗ್ಗೆ ಸರ್ಕಾರದ ನೆರವು ಕೇಳಿದಾಗ, ಹಿರಿಯ ಅಧಿಕಾರಿಯೊಬ್ಬರು, ‘26 ಜನ ಏಕೆ ಬೇಕು, 12 ಜನ ಸಾಕಾಗುವುದಿಲ್ಲವೇ’ ಎಂದು ನಾರಾಯಣ ಅವರನ್ನು ಪ್ರಶ್ನಿಸಿದ್ದರು. ‘ನೋಡಿ, ನೀವು ಅನುದಾನ ಒಂದೆರಡು ಲಕ್ಷ ಕಡಿಮೆ ಕೊಡುತ್ತೇವೆ ಎಂದು ಬೇಕಾದರೆ ಹೇಳಿ. ಆದರೆ, ಅಷ್ಟೊಂದು ಜನರೇಕೆ, ಕಡಿಮೆ ಜನರನ್ನು ತೆಗೆದುಕೊಳ್ಳಿ ಎಂದೆಲ್ಲ ಹೇಳುವ ಅಧಿಕಾರ ನಿಮಗಿಲ್ಲ’ ಎಂದು ನೇರವಾಗಿ ಹೇಳಿ ಬಂದಿದ್ದರು. 

ಹೀಗೆ, ಅಗಾಧ ಕನ್ನಡ ಪ್ರೇಮ ಹೊಂದಿದ್ದ ಅವರು, ಕನ್ನಡಪರ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಎಂದೂ ರಾಜಿ ಮಾಡಿಕೊಳ್ಳಲಿಲ್ಲ.  ಅವರು ಅಧ್ಯಕ್ಷರಾಗಿದ್ದ ಅವಧಿಯುದ್ದಕ್ಕೂ ಹಲವು ಸಮ್ಮೇಳನಗಳನ್ನು ನಡೆಸಿದರು. ನಾಲ್ಕು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ಮೊದಲ ಬಾರಿಗೆ ದೆಹಲಿಯಲ್ಲಿ ಜಿ.ಪಿ. ರಾಜರತ್ನಂ ಅವರ ಅಧ್ಯಕ್ಷತೆಯಲ್ಲಿ 50ನೇ ಸಮ್ಮೇಳನ ಹಮ್ಮಿಕೊಂಡಿದ್ದು ಅವರ ಸಾಧನೆಗಳಲ್ಲೊಂದು. ಕನ್ನಡ ಕಾವ್ಯಗಳ ಗದ್ಯಾನುವಾದ ಸೇರಿದಂತೆ ಹಲವು ಮಹತ್ವದ ಕಾರ್ಯಗಳು ಅವರ ಅಧ್ಯಕ್ಷತೆಯಲ್ಲಿ ನಡೆದವು. ಒಟ್ಟಾರೆ, ಸಾಹಿತ್ಯ ಪರಿಷತ್‌ನ ಅಧ್ಯಕ್ಷರುಗಳ ಪೈಕಿ ಅತಿ ಪ್ರಮುಖರಲ್ಲಿ ಒಬ್ಬರಾಗಿ ಜಿ. ನಾರಾಯಣ ಅವರು ನಿಲ್ಲುತ್ತಾರೆ. 

ನಿರೂಪಣೆ: ಗುರು ಪಿ.ಎಸ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT