ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನವರಿ 4 ಲೂಯಿ ಬ್ರೈಲ್‌ ಜನ್ಮ ದಿನ: ಅಂಧರಿಗೆ ಎಂದೆಂದಿಗೂ ಬೇಕಾಗುವ ಬ್ರೈಲ್‌!

Last Updated 3 ಜನವರಿ 2021, 6:13 IST
ಅಕ್ಷರ ಗಾತ್ರ

ಲೋಯಿ ಬ್ರೈಲ್‌. ಈ ಹೆಸರು ಕೇಳಿದರೆ ಅಂಧರ ಲೋಕದ ಮೈನವಿರೇಳುತ್ತದೆ. ಕತ್ತಲ ಕಣ್ಣುಗಳಲ್ಲಿ ಬೆಳಕು ಹೊಳೆಯುತ್ತದೆ.

ಸುಮಾರು 200 ವರ್ಷಗಳ ಹಿಂದೆ, ಮೂರನೇ ವಯಸ್ಸಿನಲ್ಲಿ ಕಣ್ಣು ಕಳೆದುಕೊಂಡ ಬಾಲಕ ಓದಲೇಬೇಕೆಂಬ ಉಮ್ಮೇದಿನಲ್ಲಿ ಬೆಳೆದು ಕಂಡು ಹಿಡಿದ ಅಂಧರ ಲಿಪಿ ಲಕ್ಷಾಂತರ ಅಂಧರ ಸಾಕ್ಷರತೆಗೆ, ಬದುಕಿಗೆ ದಾರಿ ಮಾಡಿದ್ದು ದೊಡ್ಡ ಇತಿಹಾಸ.

ಅಂಧರ ಮತ್ತು ಅಂಧರಲ್ಲದವರ ನಡುವಿನ ಸಾಕ್ಷರತೆ, ಶಿಕ್ಷಣ, ಉದ್ಯೋಗ ಮತ್ತು ಸ್ವಾತಂತ್ರ್ಯದ ಅಸಮಾನತೆಯನ್ನು ದೊಡ್ಡಮಟ್ಟದಲ್ಲೇ ಬದಲಾಯಿಸಿದ ಕೀರ್ತಿವಂತ ಬ್ರೈಲ್‌. ಆತ ಸೃಷ್ಟಿಸಿಕೊಟ್ಟ ಲಿಪಿಯು ಅತ್ಯಾಧುನಿಕ ತಂತ್ರಜ್ಞಾನದ ಕಲಿಕೆಯ ಸಾಧನಗಳ ನಡುವೆ ಈಗ ಮಹತ್ವವನ್ನು ಕಳೆದುಕೊಂಡಿದೆ ಎಂಬ ವಾದವೂ ಪ್ರತಿ ವರ್ಷ ಆತನ ಜನ್ಮದಿನಾಚರಣೆಯ ಸಂದರ್ಭದಲ್ಲಿ ಏಳುತ್ತದೆ. ಅದನ್ನು ಸಂಪೂರ್ಣವಾಗಿ ತಳ್ಳಿಹಾಕಲು ಸಾಧ್ಯವಿಲ್ಲ. ಆದರೆ ಹಾಗೆಂದ ಬಳಿಕವೂ ಬ್ರೈಲ್‌ ಲಿಪಿ ಎಂದೆಂದಿಗೂ ಬೇಕಾಗುತ್ತದೆ ಎಂಬ ಸತ್ಯವೂ ಹೊಳೆಯುತ್ತಲೇ ಇದೆ.

ಬ್ರೈಲ್‌ಲಿಪಿ ಮೂಲಮಾತೃಕೆಯಂತೆ. ಅದರ ಮೇಲೆಯೇ ಹೊಸತಾದ ಇನ್ನೊಂದು ಮಾದರಿ, ರೂಪಾಂತರಗೊಂಡ ಮಾದರಿ ನಿಲ್ಲಬೇಕು. ಅಕ್ಷರಗಳು, ಸಂಖ್ಯೆಗಳು ಮತ್ತು ಸಂಕೇತಗಳಿಂದ ಕೂಡಿದ ಲಿಪಿಗೆ ಬದಲಾಗಿ ಆಧುನಿಕ ಕಾಲಘಟ್ಟದಲ್ಲಿ ಕೇಳು ಪುಸ್ತಕಗಳು (audio books)ಬಂದಿವೆ. ಸ್ಪೀಕಿಂಗ್‌ ಲ್ಯಾಪ್‌ಟಾಪ್‌ಗಳಿವೆ. ಹೀಗಾಗಿ ಬ್ರೈಲ್‌ಲಿಪಿ ಇನ್ನೇಕೆ ಬೇಕು ಎಂದು ಯಾರಾದರೂ ಸುಲಭವಾಗಿ ಕೇಳಬಹುದು.

ಆದರೆ ಇಂದು ಆಧುನಿಕ ನಗರಗಳಲ್ಲಿ ಸಾರ್ವಜನಿಕ ಶೌಚಾಲಯಗಳ ಮುಂದೆ ಪುರುಷರು–ಮಹಿಳೆಯರು ಎಂಬ ಫಲಕಗಳೂ ಬ್ರೈಲ್‌ಲಿಪಿಯಲ್ಲಿವೆ. ಕೆಲವು ಕಂಪನಿಗಳು ತಮ್ಮ ಉತ್ಪನ್ನಗಳ ಮೇಲೆ ಬ್ರೈಲ್ ಲಿಪಿಯಲ್ಲೇ ಪ್ರಮುಖ ಮಾಹಿತಿಗಳನ್ನು ನೀಡುತ್ತಿವೆ. ಎಲಿವೇಟರ್‌ಗಳಲ್ಲಿ, ಬಸ್‌ ನಿಲ್ದಾಣ, ಎಟಿಎಂ, ಹೋಟೆಲ್‌ಗಳಲ್ಲೂ ಇದೇ ಲಿಪಿ ಬಳಸಲಾಗುತ್ತಿದೆ. ಅಂಧರು ಇರುವ ಕಡೆ ಬ್ರೈಲ್‌ ಎಲ್ಲಿ ಇಲ್ಲ ಎಂದು ಕೇಳಬೇಕಷ್ಟೇ.

ಓದಲು ಮತ್ತು ಬರೆಯಲು ಬಳಸಲಾಗುವ ಬ್ರೈಲ್‌ಲಿಪಿಯ ದೊಡ್ಡ ಗಾತ್ರದ ಪುಸ್ತಕಗಳ ಬದಲಿಗೆ ಈಗ ಲಿಪಿಯನ್ನು ಎಲೆಕ್ಟ್ರಾನಿಕ್‌ ಮಾಧ್ಯಮಗಳಿಗೆ ಅಳವಡಿಸಿ ಕಂಪ್ಯೂಟರ್, ಟ್ಯಾಬ್‌ ಹಾಗೂ ಸ್ಮಾರ್ಟ್‌ ಫೋನ್‌ಗಳ ಮೂಲಕವೂ ಬಳಸಬಹುದು. ಇದು ಬ್ರೈಲ್‌ ಲಿಪಿಯ ಆಧುನಿಕ ರೂಪಾಂತರ.

ಈ ರೂಪಾಂತರಕ್ಕೆ ಕರ್ನಾಟಕ, ಅದರಲ್ಲೂ ಗ್ರಾಮೀಣ ಪ್ರದೇಶಗಳು ಇನ್ನೂ ಒಗ್ಗಿಲ್ಲ ಎಂಬುದೇ ವಿಪರ್ಯಾಸ. ತಂತ್ರಜ್ಞಾನದ ಲಭ್ಯತೆಯ ಕೊರತೆಯ ನಡುವೆ ಇನ್ನೂ ಭಾರದ ಪುಸ್ತಕಗಳ ಅವಲಂಬನೆಯೇ ಮುಂದುವರಿದಿದೆ. ರಾಜ್ಯದಲ್ಲಿ 1ರಿಂದ 9ನೇ ತರಗತಿವರೆಗಿನ ಅಂಧ ಮಕ್ಕಳ ಶಿಕ್ಷಣದಲ್ಲಿ ನಿರಂತರ ಬಳಕೆಯಾಗುವ ಬ್ರೈಲ್‌ ಲಿಪಿ ನಂತರದಲ್ಲಿ ಬಳಕೆಯಾಗುವುದು ಅತಿ ಕಡಿಮೆ.

ಆನಂದಕುಮಾರ
ಆನಂದಕುಮಾರ

‘ಉನ್ನತ ಶಿಕ್ಷಣದಲ್ಲಿ ಬ್ರೈಲ್‌ ಪುಸ್ತಕಗಳ ಕೊರತೆ ದೊಡ್ಡಮಟ್ಟದಲ್ಲಿದೆ. ಸಿಕ್ಕಿದರೂ ಅದರ ಭಾರೀ ತೂಕದಿಂದಾಗಿ ಓದುವವರೂ ಕಡಿಮೆ. ಹಾಗೆಂದು ಇತ್ತೀಚಿನ ಆಡಿಯೋ ಪುಸ್ತಕಗಳನ್ನು ಕೊಟ್ಟು ಕಲಿಸುವ ಪದ್ಧತಿಯಿಂದ ಅಂಧ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ದೊರಕಿದಂತಾಗುವುದಿಲ್ಲ’ ಎನ್ನುತ್ತಾರೆ ತುಮಕೂರು ಜಿಲ್ಲಾ ಪಂಚಾಯ್ತಿಯಲ್ಲಿ ಎಫ್‌ಡಿಎ ಆಗಿರುವ ಟಿ.ಎಂ.ಆನಂದಕುಮಾರ.

‘ಬ್ರೈಲ್‌ ಲಿಪಿಯಲ್ಲೇ ಓದಿ ಎಂ.ಎ ಪದವಿ ಓದಿರುವ ಅವರು ಬ್ರೈಲ್‌ ವಿಶೇಷ ಮಕ್ಕಳ ಶಾಲೆಗಳಲ್ಲೂ ಬ್ರೈಲ್‌ ಲಿಪಿಯ ಬಗ್ಗೆ ಹೆಚ್ಚು ಗಮನ ಹರಿಸುತ್ತಿಲ್ಲ. ಕೇಳಿಸಿಕೊಂಡು ಕಲಿಯಲಿ ಎಂದು ಸುಮ್ಮನೇ ಸಿ.ಡಿ.ಗಳನ್ನು ಕೊಡುವ ಪದ್ಧತಿ ಇದೆ’ ಎನ್ನುತ್ತಾರೆ.

‘ತಾವೇ ಪದವೊಂದನ್ನು ಕೈಯಾರೆ ಬರೆಯುವುದಕ್ಕೂ, ಕೇಳಿಸಿಕೊಂಡು ತಿಳಿದುಕೊಳ್ಳುವುದಕ್ಕೂ ವ್ಯತ್ಯಾಸ ಇರುತ್ತದೆ. ಅಕ್ಷರಗಳ ಖಚಿತ ಪರಿಚಯ, ಅರಿವು ಬರಬೇಕೆಂದರೆ ಬ್ರೈಲ್‌ ಲಿಪಿ ಕಲಿಯಲೇಬೇಕು. ಆದರೆ ಡಿಜಿಟಲೀಕರಣದ ಪರಿಣಾಮವಾಗಿ ಕಲಿಯುವುದರಲ್ಲೂ ಆಸಕ್ತಿ ಕಡಿಮೆಯಾಗಿದೆ. ಕಲಿಕೆಯನ್ನು ಉತ್ತೇಜಿಸಬೇಕಾದವರಲ್ಲೂ ಆಸಕ್ತಿ ಕಡಿಮೆ ಆಗಿದೆ’ ಎಂದು ಅಭಿಪ್ರಾಯಪಡುತ್ತಾರೆ.

‘ಆಧುನಿಕ ತಂತ್ರಜ್ಞಾನ ಬಂದಿರುವುದರಿಂದ ಬ್ರೈಲ್‌ ಲಿಪಿಯ ಹಗುರವಾದ ಪುಸ್ತಕಗಳನ್ನು ಕಡಿಮೆ ಸಮಯದಲ್ಲೇ ಮುದ್ರಿಸಬಹುದು. ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಬ್ರೈಲ್‌ ಲಿಪಿಯ ಪುಸ್ತಕಗಳು ಲಭ್ಯವಿಲ್ಲ. ಬೆಂಗಳೂರು, ಮೈಸೂರು, ಹುಬ್ಬಳ್ಳಿಯಲ್ಲಷ್ಟೇ ಲಭ್ಯ. 1ರಿಂದ 7ನೇ ತರಗತಿವರೆಗೂ ಸರ್ಕಾರವೇ ಕೊಡುತ್ತದೆ. 8ರಿಂದ ಎಸ್‌ಎಸ್‌ಎಲ್‌ಸಿವರೆಗೂ ಪುಸ್ತಕಗಳು ಸಿಗುತ್ತವೆ. ನಂತರ ಉನ್ನತ ಶಿಕ್ಷಣದ ವಿಚಾರಕ್ಕೆ ಬಂದರೆ ಬ್ರೈಲ್‌ ಪುಸ್ತಕಗಳು ಇಲ್ಲ’ ಎಂದು ಅವರುವಿಷಾದಿಸುತ್ತಾರೆ

‘ಖಾಸಗಿ ಸಂಸ್ಥೆಗಳ ಮೂಲಕವೇ ಪುಸ್ತಕಗಳನ್ನು ಪಡೆದುಕೊಳ್ಳಬೇಕು. ಕೆಲವೆಡೆ ಉಚಿತವಾಗಿ, ರಿಯಾಯಿತಿ ದರದಲ್ಲಿ ಸಿಗುತ್ತದೆ. ಹುಡುಕಾಡದಿದ್ದರೆ ಅದೂ ಸಿಗುವುದಿಲ್ಲ. ಹುಡುಕಾಟ ನಡೆಸುವುದು ಅಷ್ಟು ಸುಲಭವೂ ಅಲ್ಲ’ ಎಂದು ಗಮನ ಸೆಳೆಯುತ್ತಾರೆ.

ಲಿಪಿಯನ್ನು ಆಧುನಿಕ ತಂತ್ರಜ್ಞಾನಗಳ ಮೂಲಕ ಇನ್ನಷ್ಟು ಅಂಧರಸ್ನೇಹಿಯನ್ನಾಗಿಸುವ ಸಾಧ್ಯತೆ ಕಡೆಗೆ ಗಮನ ಹರಿಸುವುದು ಸದ್ಯದ ತುರ್ತು. ಏಕೆಂದರೆ ಅಂಧತ್ವ ಇರುವವರೆಗೂ ಬ್ರೈಲ್‌ ಲಿಪಿಯೂ ಬೇಕಾಗುತ್ತಲೇ ಇರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT